ಓಲೆ ಹೂಯ್ಯ ಹೋಹಯ್ಯ (ಸಾಲು ಪಲ್ಲವಿ)
ಓವಯ್ಯ ಓಹೋ ವಯ್ಯ
ಓ ಹೊಯ್ಯ ಅಂತ ಹೇಳುವ ಓವಯ್ಯ
ಓ ದೇವರೆ ಹೊಯ್ಯ ಓವಯ್ಯ
ಓ ಒಯ್ಯ ಹಾಡುವ ಓವಯ್ಯ
ಒಯ್ಯ ಹಾಡು ಹಾಡುವಾಗ ಓವಯ್ಯ
ಯಾವುದದು ಮೊದಲ ಭಾಗ ಓವಯ್ಯ
ಏನು ಯಾವ ರೀತಿ ಒಡೆಯನೆ ? ಓವಯ್ಯ
ಈ ಮಾಲೆ ಮಾಲೆ ಕೊಡಗೊಳು ಓವಯ್ಯ
ಒಡೆಯ ನೊಕ್ಕಲು ಮಕ್ಕಳು ಓವಯ್ಯ
ಒಯ್ಯ ಹಾಡು ಹಾಡುವಾಗ ಓವಯ್ಯ
ಕೇಳಲೆಲ್ಲ ಮೋಹಕವು ಓವಯ್ಯ
ಕೇಳಲೆಲ್ಲ ಸಂತಸವು ಓವಯ್ಯ
ಸಾವ್ರ ಬಟ್ಟಿ ಜಮ್ಮಾ ಭೂಮಿ ಓವಯ್ಯ
ಅದುವೆ ಜನ್ಮದ್ಹಕ್ಕು ಭೂಮಿ ಓವಯ್ಯ
ಒಡೆಯನವನ ಪಾಲ್ಗೆ ಇರಲು ಓವಯ್ಯ
ಉತ್ತಿ ಬಿರಾ ಮಾಡ್ವರಲ್ಲ ಓವಯ್ಯ
ಉತ್ತಿ ಸಾಗು ಮಾಡ್ವರಲ್ಲ ಓವಯ್ಯ
ಭೂಮಿ ಗೊಪ್ಪುವೆತ್ತು ಬೇಕು ಓವಯ್ಯ
ಭೂಮಿ ಗೊಪ್ಪು ಎತ್ತಿಗಾಗಿ ಓವಯ್ಯ
ಎತ್ತ ನರಸಿಕೊಳ್ಳಲೆಂದು ಓವಯ್ಯ
ಎತ್ತ ನರಸಿಕೊಂಡು ಹೋಗೆ ಓವಯ್ಯ
ಒಕ್ಕದೊಡೆಯ ಮನುಜರವ ಓವಯ್ಯ
ಒಕ್ಕದೊಡೆಯ ಕೊಡವ ಅವರು ಓವಯ್ಯ
ಏಳು ಕೋಣೆಯೊಳಗೆ ಇರುವ ಓವಯ್ಯ
ಸಂದೂಕದ ಹೊನ್ನು ಹಣ ಓವಯ್ಯ
ಸಂದೂಕದ ಥೈಲಿ ಹಣ ಓವಯ್ಯ
ಲೆಕ್ಕ ಮಾಡಿ ತೆಗೆದುಕೊಂಡು ಓವಯ್ಯ
ಪೆಟ್ಟಿಲಿಟ್ಟಿ ಚಿನ್ನ ಹಿತ್ತಾಳೆ ಓವಯ್ಯ
ತಂತಿಕಟ್ಟಿ ಭದ್ರಪಡಿಸಿ ಓವಯ್ಯ
ಶಾಂತಿಯಿಂದ ಮೆಲ್ಲ ಹೋಗೆ ಓವಯ್ಯ
ಚಿಂತೆ ಒಂದು ಮೆಲ್ಲ ಸಾರ್ದರು ಓವಯ್ಯ
ಎಲ್ಲಿಗೆಂದು ಅರಿಯಬೇಕ ! ಓವಯ್ಯ
ಹೊರಟರೆಲ್ಲಿ ತಿಳಿಯಬೇಕ ಓವಯ್ಯ
ಮಾಣಿಕ್ಯದ ಮಲೆಯ ನಾಡು ಓವಯ್ಯ
ರತ್ನದಂತ ಮಲೆಯನಾಡು ಓವಯ್ಯ
ಪಟ್ಟಣವು ಮೈಸೂರು ನಾಡು ಓವಯ್ಯ
ಪಟ್ಟಣವು ಮೈಸೂರು ನಾಡು ಓವಯ್ಯ
ಪಟ್ಟಣವು ಮೂಸೂರು ನಾಡು ಓವಯ್ಯ
ಮೂಡು ಸೀಮೆನಾಡು ಕಂಡರು ಓವಯ್ಯ
ಹದುಳವಾಗಿ ಮೆಲ್ಲ ಬರುತ ಓವಯ್ಯ
ಹದುಳ ಎನಲು ಮೆಲ್ಲ ತಲುಪಿ ಓವಯ್ಯ
ಮೂಡು ಸೀಮೆ ಹಟ್ಟಿಯಲ್ಲಿ ಓವಯ್ಯ
ಅಕ್ಕಮ್ಮ ಆಕೆ ಒಕ್ಕದೊಡತಿ ಓವಯ್ಯ
ಮುತ್ತುದಂತ ಶೆಟ್ಟಿ ಹೆಂಡತಿ ಓವಯ್ಯ
ತವರು ಮನೆಯ ಕಾಣುವಂತೆ ಓವಯ್ಯ
ತವರು ಮನೆಯು ಶೆಟ್ಟಿ ಹಟ್ಟಿಯು ಓವಯ್ಯ
ಅಂತ ಮನೆಯ ಹೋಗಲೆಂದು ಓವಯ್ಯ
ಅಂತ ಮನೆಗಲು ಹುಟ್ಟಿಗೆಂದು ಓವಯ್ಯ
ಅಂತ ಮನೆಯ ಬಳಿಗೆ ಬರಲು ಓವಯ್ಯ
ಮುತ್ತುದಂತ ಶೆಟ್ಟಿ ಹೆಂಡತಿ ಓವಯ್ಯ
ಅಕ್ಕಮ್ಮ ಆಕೆ ಮನೆಯ ಒಡತಿ ಓವಯ್ಯ
ಆಕೆಯನ್ನು ನೋಡಿ ಕಾಣಿ ಓವಯ್ಯ
ಹಿಡುಗಲನ್ನು ಕೈಲಿ ಹಿಡಿದು ಓವಯ್ಯ
ಹಟ್ಟಿ ಬೀಸಿ ಗುಡಿಸಿ ಬರುವಲ್ಲಿ ಓವಯ್ಯ
ಕೊಡಗು ಮನೆಯ ಮನುಜರೆಲ್ಲ ಓವಯ್ಯ
ಕಣ್ಮರೆ ಕಾಣುತ ನುಡಿದಳಿಂತು ಓವಯ್ಯ
ಏನು ಕೊಡಗಿನೊಕ್ಕದೊಡೆಯರ ಓವಯ್ಯ
ದಾರಿ ಹೋಗುವಲ್ಲಿ ಎಲ್ಲಿ ಓವಯ್ಯ
ದಾರಿ ತಪ್ಪಿ ಇತ್ತ ಬಂದಿರ ? ಓವಯ್ಯ
ಉತ್ತಪ್ಪಣ್ಣ ನೀವೆ ಬಂದಿರ ?
ಎಂದೆಲ್ಲ ಕೇಳುತಿರಲು ಓವಯ್ಯ
ಅದನು ಕೇಳ್ದ ಒಕ್ಕದೊಡೆಯ ಓವಯ್ಯ
ಅತ್ತಲಲ್ಲ ಅತ್ತಲಲ್ಲ ಓವಯ್ಯ
ಇತ್ತಲೆಂದೆ ಇತ್ತ ಬಂದೆವು ಓವಯ್ಯ
ಅಷ್ಟರಲ್ಲಿ ಮನೆಯೆ ಸಿಕ್ಕಿತು ಓವಯ್ಯ
ನಿನ್ನ ಒಡೆಯರೆಲ್ಲಿ ಇಹರು ? ಓವಯ್ಯ
ಎಂದು ಹೇಳಿ ಕೇಳುತಿರಲು ಓವಯ್ಯ
ಏಳು ಮಹಡಿ ಮೇಲೆ ಮಹಡಿ ಓವಯ್ಯ
ಏಳು ಮಹಡಿ ಮೇಲು ನೆಲೆಯ ಓವಯ್ಯ
ತೂಗುವಂತ ಮಂಚದಲ್ಲಿ ಓವಯ್ಯ
ಒಡೆಯ ಒರಗಿ ನಿದ್ದೆ ಮಾಡ್ವರೆ ? ಓವಯ್ಯ
ಎಂದು ಹೇಳಿ ಕೇಳುತಿರಲು ಓವಯ್ಯ
ಹಾಗೆ ಕೇಳಿದಂತ ದನಿಗೆ ಓವಯ್ಯ
ಜೋಂಪು ಬಿದ್ದು ಎದ್ದ ಶೆಟ್ಟಿ ಓವಯ್ಯ
ಮೇಲಿನಿಂದ ಇಳಿದು ಬಂದು ಓವಯ್ಯ
ಕೊಡವ ಕೂಟ ನೆರೆದುದನ್ನು ಓವಯ್ಯ
ಕಣ್ಣಾರೆ ಕಂಡು ನೇರ ಬಂದು ಓವಯ್ಯ
ಮುಂದೆ ಕೈಯನ್ನೆತ್ತಿ ನಮಿದು ಓವಯ್ಯ
ನುಡಿದರೀ ಮಾತುಗಳನು ಓವಯ್ಯ
ಏನು ಹದುಳವೆ ಒಡೆಯರೇ ? ಓವಯ್ಯ
ಏನು ಹದುಳವೆ ಕೊಡವರೆ ? ಓವಯ್ಯ
ಬಂದುದೆತ್ತ ಕಡೆ ಹೇಳಿರಿ ಓವಯ್ಯ
ಎನ್ನುವಲ್ಲಿ ಒಡೆಯ ಕೇಳಿ ಓವಯ್ಯ
ಅತ್ತ ಅಲ್ಲ ಇತ್ತ ಇಲ್ಲಿಗೆ ಓವಯ್ಯ
ಸಾವು ಬಟ್ಟಿ ಜಮ್ಮ ಭೂಮಿ ಓವಯ್ಯ
ಬಿತ್ತು ಹಾಕಿ ಬೆಳೆಯಲಿರಲು ಓವಯ್ಯ
ಉತ್ತು ಉಳುಮೆ ಮಾಡಲಿರಲು ಓವಯ್ಯ
ಎತ್ತುಗಳನೆಕೊಳ್ಳಲಾಯ್ದು ಓವಯ್ಯ
ಹುಡುಕಲೆಂದು ಇಲ್ಲಿ ಬಂದೆವು ಓವಯ್ಯ
ನಿಮ್ಮ ಲುಂಟೆ ಮಾರಲೆತ್ತು ? ಓವಯ್ಯ
ಎಂದು ಹೇಳಿ ಕೇಳುತಿರಲು ಓವಯ್ಯ
ಮಾರುವಂಥ ಎತ್ತನೆಲ್ಲ ಓವಯ್ಯ
ಕುಂಭ ಮಾಸದೊಳಗಿನಲ್ಲಿ ಓವಯ್ಯ
ಮಾರಿ ಹೋಗಿ ಆಯಿತಲ್ಲ ಓವಯ್ಯ
ಎಂದು ಹೇಳಿದವದನೆ ಕೇಳಿ ಓವಯ್ಯ
ದಂಥ ಕೊಡವ ಮನ್ಸರೆಲ್ಲರು ಓವಯ್ಯ
ಇರುವ ಎತ್ತುಗಳಲೆ ನಮಗೆ ಓವಯ್ಯ
ಕೊಟ್ಟರಷ್ಟು ಲೇಸು ನಮಗೆ ಓವಯ್ಯ
ಎಷ್ಟು ಇದೆಯೊ ಅಷ್ಟು ಬೇಕಿದೆ ಓವಯ್ಯ
ಎಂದು ನುಡಿದು ಕೇಳುತಿರಲು ಓವಯ್ಯ
ಅದನೆ ಕೇಳ್ದ ಶೆಟ್ಟಿ ಕರಗಿ ಓವಯ್ಯ
ಮೂವತ್ತಾರು ಎತ್ತುಗಳವು ಓವಯ್ಯ
ಇದ್ದ ಕೊಟ್ಟಿಗೆಯ ಬಾಗಿಲ ಓವಯ್ಯ
ಬೆಳ್ಳಿ ಉಬ್ಬಲುಗಳನೆ ಸರಿಸಿ ಓವಯ್ಯ
ಮುಂಬಾಗಿಲನು ತೆರೆದು ಕರೆದು ಓವಯ್ಯ
ಮೂವತ್ತಾರು ಎತ್ತುಗಳನೆ ಓವಯ್ಯ
ಕಣ್ಣಾರೆ ನೋಡಿರೆಂದು ತೋರಿ ಓವಯ್ಯ
ಅಲ್ಲಿ ಬಂದ ಕೊಡವರಲ್ಲಿ ಓವಯ್ಯ
ಅಲ್ಲಿ ಕಂಡ ವರ‍್ಗದೊಡೆಯ ಓವಯ್ಯ
ಬೊಟ್ಟು ಮೇಲೆ ಬೊಟ್ಟು ದನವು ಓವಯ್ಯ
ಕಲ್ಲು ಹಟ್ಟಿ ಕಂಬಕಾಗದು ಓವಯ್ಯ
ಚುಕ್ಕೆಮಾಲೆ ಇರುವದನವು ಓವಯ್ಯ
ಚಾವುಂಡಿ ಅಮ್ಮೆಗಾಗದು ಓವಯ್ಯ
ಎಂದು ನುಡಿದ ಒಕ್ಕದೊಡೆಯ ಓವಯ್ಯ
ಅಂತೆ ಕಂಡ ಒಕ್ಕದೊಡೆಯ ಓವಯ್ಯ
ಪಂಜು ಬಣ್ಣದಂತ ಬೆಳ್ಳಿ ಓವಯ್ಯ
ಚುಕ್ಕೆ ಕೊಂಬು ಇರುವ ಮುದ್ದ ಓವಯ್ಯ
ಹೀಗೆ ಐದು ಜೋಡಿ ಎತ್ತು ಓವಯ್ಯ
ಆಯ್ದು ತೆಗೆದು ಅವುಗಳನ್ನೆ ಓವಯ್ಯ
ಅಟ್ಟಿಕೊಂಡು ಬಂದಮೇಲೆ ಓವಯ್ಯ
ಹಟ್ಟಿಕಲ್ಲು ಬೊಂಟಿ / …………………
ಕಟ್ಟಿ ಮನೆಯ ಒಳಗೆ ನಡೆದರು ಓವಯ್ಯ
ಅಂದು ಬಿಟ್ಟು ಮಾರನೆ ದಿನ ಓವಯ್ಯ
ಬೆಟ್ಟ ಕುರುಬ ಹೆಣೆದ ಒಳ್ಳೆ ಓವಯ್ಯ
ತೂರ ಬೆತ್ತ ಕುಕ್ಕೆ ಚಾಪೆ ಓವಯ್ಯ
ತುಂಬ ಸಗಣಿ ತುಂಬಿ ತಂದು ಓವಯ್ಯ
ನೀರು ಇಳಿದು ಒಣಗಿದಂತ ಓವಯ್ಯ
ನೆಲಕೆ ಹಾಕಿರೆ ಅದುವೆ ಗೊಬ್ಬರ ಓವಯ್ಯ
ಕೆಂಪು ಕಳಮೆ ಹೊಲೆಯ ಮಕ್ಕಳು ಓವಯ್ಯ
ಕೆಂಬಟ್ಟಿ ಹೊಲೆಯ ಮಕ್ಕಳ ಓವಯ್ಯ
ಆಳು ಕಳಿಸಿ ಹಟ್ಟಿಯಲ್ಲಿ ಓವಯ್ಯ
ಕರೆಸಿ ಮಾತ ನಿಂತು ನುಡಿದರು ಓವಯ್ಯ
ಉಳುವ ಭೂಮಿಗೆ ಎತ್ತಿಗೆಂದು ಓವಯ್ಯ
ಒಪ್ಪುವಂತ ಮರ ಮುಟ್ಟನು ಓವಯ್ಯ
ಸಿದ್ಧ ಮಾಡಿರೆಂದು ಹೇಳ್ದರು ಓವಯ್ಯ
ಅಂದಲ್ಲ ಮಾರನೇ ದಿನ ಓವಯ್ಯ
ದೊಡ್ಡ ಕೆಂಪು ಬಂಡೆಕಲ್ಲ ಓವಯ್ಯ
ಬೀಸಿ ಕಡಿಯುವಂಥ ಕೊಡಲಿಯ ಓವಯ್ಯ
ತಾವೆ ಕೈಲಿ ಎತ್ತಿಕೊಂಡು ಓವಯ್ಯ
ದಟ್ಟ ಕಾಡು ಬನದ ಒಳಗೆ ಓವಯ್ಯ
ದೊಡ್ಡ ಸಂಪಿಗೆ ಹೂಮರ ಓವಯ್ಯ
ಕಡಿದು ರಾಶಿ ಬೀಳಿಸುತ್ತ ಓವಯ್ಯ
ತುಂಡು ಮಾಡಿ ತುಂಡು ಕುಯ್ದು ಓವಯ್ಯ
ಹೆಜ್ಜೆ ಅಳತೆ ಅಳತೆ ನೋಡಿ ಓವಯ್ಯ
ಗುಟ್ಟೆ ನೇಗಿಲ ಸಿದ್ಧ ಮಾಡಿ ಓವಯ್ಯ
ಕೆಂಪು ಕಾಡ ಮಧ್ಯದಲ್ಲಿ ಓವಯ್ಯ
ಹಸಿರು ಬೈನೆ ಮರವ ಕಡಿದು ಓವಯ್ಯ
ತುಂಡುಮಾಡಿ ತುಂಡು ಕುಯ್ದು ಓವಯ್ಯ
ಉದ್ದ ಕಡಿದು ಪಾಲು ಮಾಡಿ ಓವಯ್ಯ
ಉದ್ದ ಕಡಿದ ತುಂಡಿನಲ್ಲಿ ಓವಯ್ಯ
ಕೆಂಪಗಿನ ಕಳಿನೊಗವ ಮಾಡಿ ಓವಯ್ಯ
ಉಳುಮೆಗೆಂದು ಸಿದ್ಧ ಮಾಡ್ಡರು ಓವಯ್ಯ
ಚಾಟಿ ಹಗ್ಗದೊಡನೆ ಬಂದು ಓವಯ್ಯ
ಉಳಲು ನೇಗಿನೊಗವ ಎತ್ತು ಓವಯ್ಯ
ಹೆಗಲಿಗಿಟ್ಟು ಮೆಲ್ಲ ನಡೆದರು ಓವಯ್ಯ
ಸಾಸ್ರ ಭಟ್ಟಿ ಜಮ್ಮ ಭೂಮಿ ಓವಯ್ಯ
ಮೇಲುಗದ್ದೆ ತೆವರಿ ಹಾಯ್ದು ಓವಯ್ಯ
ಕೀ ಗದ್ದೆ ತೆವರಿ ತಾಗಿ ನಿಂದು ಓವಯ್ಯ
ತೇಲು ನೊಗವ ಹೆಗಲ ನಿಳಿಸಿ ಓವಯ್ಯ
ಬೆಳ್ಳಿ ನೊಗವ ಇಟ್ಟು ಮೇಲೆ ಓವಯ್ಯ
ಸಣ್ಣ ಅಕ್ಕಿ ಕೈಲಿ ಹಿಡಿದು ಓವಯ್ಯ
ಉಯಿ ನಮ್ಮ ಮಹಾತಾಯಿ ಓವಯ್ಯ
ಕಾವೇರಮ್ಮೆ ದೇವಿ ನಿನಗೆ ಓವಯ್ಯ
ಇಂದು ಮೊರೆಯ ನಿಟ್ಟು ಬೇಡುತ ಓವಯ್ಯ
ನೆಟ್ಟ ಬೆಳೆಯು ಚಂದ ಬರಲಿ ಓವಯ್ಯ
ಬಿತ್ತು ಬೆಳೆಯು ಚಂದ ಬರಲಿ ಓವಯ್ಯ
ಒಳ್ಳೆ ಮಾತು ಹರಸು ತಾಯೆ ಓವಯ್ಯ
ಎಂದು ಅಕಿ ಸೇಸೆ ಇಟ್ಟರು ಓವಯ್ಯ
ಅಂತೆ ನುಡಿದು ನಮಿಸಿ ನಡೆದು ಓವಯ್ಯ
ಭೂಮಿಗೆತ್ತು ಕಟ್ಟಿಗದ್ದೆ ಓವಯ್ಯ
ಉಳುಮೆ ಆರು ಸಾಲು ಉತ್ತರು ಓವಯ್ಯ
ಚಿನ್ನದಂತ ಬೀಜ ಬಿತ್ತಿ ಓವಯ್ಯ
ಚಿನ್ನದಂತ ಬೀಜ ಹರಡಿ ಓವಯ್ಯ
ಚಿಕ್ಕ ಪೈರು ಏಳುವಾಗ ಓವಯ್ಯ
(ಭತ್ತ ಸಸಿಯೆ ಏಳುವಾಗ) ಓವಯ್ಯ
ಚಿಕ್ಕಪೈರು ಎದ್ದಲ್ಲಿ ಓವಯ್ಯ
ಮೊಲ್ಲೆ ಹೂವಿನಂತೆ ಹೆಣ್ಣು ಓವಯ್ಯ
ಅಂದಲ್ಲ ಮಾರನೆ ದಿನ ಓವಯ್ಯ
ಸ್ನಾನ ಮಾಡಿ ಶುದ್ಧಗೊಂಡು ಓವಯ್ಯ
ಒಳ್ಳೆ ಪೈರು ಸಸಿಯ ತೆಗೆದು ಓವಯ್ಯ
ತಾನು ಕೈಯಲ್ಹಿಡಿದುಕೊಂಡು ಓವಯ್ಯ
ಬಿತ್ತ ಬೆಳೆಯು ಚಂದ ಬರಲಿ ಓವಯ್ಯ
ಎಂದು ಸೂರ್ಯನತ್ತ ನಮಿದು ಓವಯ್ಯ
ಸಣ್ಣ ಅಕ್ಕಿ ಸೇಸೆ ಎಸೆದಳು ಓವಯ್ಯ
ಮೂರು ಹಿಡಿಯ ಪೈರುಗಳನು ಓವಯ್ಯ
ಆಗ ಹೆಣ್ಣು ಆಳ್ಗಳೆಲ್ಲ ಓವಯ್ಯ
ಕಿತ್ತು ಗುಡ್ಡೆ ಮಾಡ್ದರಲ್ಲಿ ಓವಯ್ಯ
ಗುಡ್ಡೆ ಸಸಿಯ ಪೇರಿಸಿರೆ ಓವಯ್ಯ
ಉತ್ತು ಉಳುಮೆ ಆಯಿತಲ್ಲ ಓವಯ್ಯ
ದೊಡ್ಡ ಗದ್ದೆ ಎಲ್ಲ ಕಡೆಯು ಓವಯ್ಯ
ಪೈರು ಸಸಿಯ ಬಿತ್ತುವಲ್ಲಿ ಓವಯ್ಯ
ಮೂವತ್ತು ಆರು ತರುಣರೆಲ್ಲ ಓವಯ್ಯ
ನಾಟಿ ನೆಟ್ಟು ಇಟ್ಟು ಬರುತಿರೆ ಓವಯ್ಯ
ನಾಟಿ ನೆಟ್ಟುಕೊಂಡು ಇರುವಲಿ ಓವಯ್ಯ
ನೆಟ್ಟ ನಾಟಿ ನೆಲಕೆ ಕೂಡಲು ಓವಯ್ಯ
ಒಯ್ಯಹಾಡು ಹಾಡಿ ಹಾಡುವ ಓವಯ್ಯ
ಒಯ್ಯ ಹಾಡು ಚಂದ ಹಾಡುವ ಓವಯ್ಯ
ಉದ್ದವಾಗಿ ಹಾಡುತಿರಲು ಓವಯ್ಯ
ಕಾಲ ಸಮಯ ಸಾಲದಾಗ ಓವಯ್ಯ
ಕಾವೇರಮ್ಮೆ ದೇವಿ ಒಯ್ಯ ಓವಯ್ಯ
ಭೂಮಿ ತಾಯಿ ನಿನಗೆ ಒಯ್ಯ ಓವಯ್ಯ
ಓಲೆ ಹೂಯ್ಯ, ಹೊವಯ್ಯ ಓವಯ್ಯ