ವರ್ಷಕ ಹನ್ನೊಂದು ಹುಣಿವಿ ಜಾತರ್ಯಾಗತೈತಿ
ಎಲ್ಲೌಗ್ಹೋಗೋಣ ನಡೀ ನಡೀ
ಜೋಗಳಬಾಂವಿ ನೀರ ನೀ ಕುಡೀ ಕುಡೀ
ಯೋಳಕೊಳ್ಳದಾಗ ದೇವಿಗುಡೀ    ೧

ಕುಲಾ ಹದ್ನೆಂಟ ಜಾತಿ ಬಂದು ಶೀಲಾ ಮಾಡೋದಿಲ್ಲಾ
ನಾಡ್ನಾಡ ಪರಸಿ ಎಲ್ಲಾ ಲೆಕ್ಕಿಲ್ದ ಕೂಡ್ತಾರ
ಸೊಕ್ಕ ಮಾಡಿದ ಮಂದೀನೆಲ್ಲಾ ಮುರ್ದ ಮೂಲಿಗ್ಹಾಕ್ಯಾಳ
ಯಾವಂದೂ ಕಾಯಾಣಿಲ್ಲಾ ಬಿಡೇ ಬಿಡೇ      ೨

ಹಮ್ಮ ಮಾಡಿದ ಮಂದೀನೆಲ್ಲಾ ಕಮ್ಮೀಮಾಡಿ
ಮೀಸಿಬೋಳ್ಸಿ ಇಡ್ಸಿದಾಳ ಬಳಿ
ಗಂಡ ಓದು ಹೆಣ್ಣು ಮಾಡಿ ಹೆಣ್ಣು ಓದು ಗಂಡ ಮಾಡಿ
ಕೈಯಾಗ ಕೊಟ್ಟಾಳ ಹಡ್ಲಿಗಿಹಿಡಿ     ೩

ಮಾಯಕಾರ್ತಿ ಮಾಮೈ ನನ್ನವ
ಉರಿ ಉಗರ ಬೆಂಕಿ ಕಿಡಿ
ಕವಡಿ ಸರ ಭಂಡಾರ ಮುತ್ತಪೋಣ್ಸಿ
ಕೊರಳಾಗ ಕಟ್ಟಿಸಿದಾಳ    ೪

ತೇಲ್ನಾಡ ಮೇಲ್ನಾಡ ಒಳ್ನಾಡ ಮಲ್ನಾಡ
ಗಂದುಟಗಿ ಬರತಾವ ತೀಡಿ
ಬೇಡಿಕೊಂಡ ಭಕ್ತರೆಲ್ಲಾ ಆಡಿ ಆಡಿ ಹೋಗ್ತಾರ
ಕೀಲಿ ಜಡಿಸಿ ನಿಲಿಸಿದಾಳ ತಡೀ     ೫

ಎಣಿಗೊಂಡದ ನೀರಬಂದ
ಅರಿಷಿಣ ಹೊಂಡಕ ಬೀಳ್ತಾವ ಧಡಾ ಧಡಾ
ಎಲ್ಲಾ ದೇವ್ರಬೆಳಗ ರೇಣುಕಾ ಬಾಳ ಚಡಾಚಡಾ
ಎತ್ತಾಗೆಲ್ಲಾ ನೋಡಿದರ ಗೆಜ್ಜಿ ಸಪ್ಪಳಾಗತಾವ          ೬