ಓಲೇ ವಯ್ಯ….. (ಸಾಲು ಪಲ್ಲವಿ ಓವಯ್ಯ)
ಓವಯ್ಯ ಕಾರಣ್ಣ
ಹಳೆಗಾಲದ ಗದ್ದೆಯಿದು ಓವಯ್ಯ
ಹಳೆಗಾಲದ ಗದ್ದೆಯಿದು ಓವಯ್ಯ
ದೇವರಿಗೆಂದೇ ಗದ್ದೆಯಿದು ಓವಯ್ಯ
ದೇವರಿಗೆಂದೆಗದ್ದೆಯಿದು ಓವಯ್ಯ
ದೊಡ್ಡದು ಈ ಗದ್ದೆಗೆ ನಾಟಿ ಓವಯ್ಯ
ಒಟ್ಟಲು ಪೈರನು ತೆಗೆದಿಹ ಜನರೆ ಓವಯ್ಯ
ಗದ್ದೆಗೆ ಪೈರಲಿ ಬರುತಿಹ ಜನರೆ ಓವಯ್ಯ
ನೆನೆಸಿರಿ ರುಚಿಕರ ನೂಲಿನ ಹಿಟ್ಟು (ಶ್ಯಾವಿಗೆ) ಓವಯ್ಯ
ಈ ಗದ್ದೆಯ ಭತ್ತದ ಅಕ್ಕಿಯ ಹಿಟ್ಟು ಓವಯ್ಯ
ಜೊತೆಗೆ ಕೂಡಿದೆ ಗಮನದ ಸಾರು ಓವಯ್ಯ
ಈ ಊಟದ ಉಂಡಾಯ್ತೆಂದರೆ ಓವಯ್ಯ
ಈ ದೇವರೆ ಏನದು ರುಚಿಕಟ್ಟು ಓವಯ್ಯ
ಬಾಯಿಗೆ ಬೇಕಿದೆ ಅಡಕೆಲೆಕಟ್ಟು ಓವಯ್ಯ
ಇಂತೆಲ್ಲವೂ ಇಹುದೀ ಗದ್ದೆಯು ಓವಯ್ಯ
ಬದುಕಿನ ಜೊತೆ ಸಾಗುತ ಬಂದಿದೆ ಓವಯ್ಯ
ನಿಮ್ಮೆಲ್ಲಕು ಬಾಳನು ನೀಡುತ ಬಂದಿದೆ ಓವಯ್ಯ
ಬಾಯಿಗೆ, ಹೊಟ್ಟೆಗೆ ತುತ್ತನು ನೀಡಿದೆ ಓವಯ್ಯ
ನಾಟಿಯ ಪೈರದು ಈ ಎಲ್ಲಕು ಗುರುತು ಓವಯ್ಯ
ಓ ನಾಟಿಯ ಕಾರನೆ ಓವಯ್ಯ
ಬದುಕಿನೊಳೊಮ್ಮೆಯ ಯಾರೊಬ್ಬರು ಓವಯ್ಯ
ದೊಡ್ಡವರಾಗದೇ ಅಹ ಕಣ್ಣಪ್ಪನಿಹ ಓವಯ್ಯ
ಬಾಚಿರ ಮನೆಯ ಗದ್ದೆಯ ಬಯಲದು ಓವಯ್ಯ
ಹೆಜ್ಜೆಯ ಹಾಕಿದರಷ್ಟು ಉದ್ದವದು
ತಾರಣ ಮಲೆಮರೆಮಾಡಿತು ನೇಸರನ ಓವಯ್ಯ
ಮೈತುಂಬೆಲ್ಲವು ಹೊದಿಯುತ ಹುಲ್ಲು ಓವಯ್ಯ
ಅಂತೆಯೇ ನಾಟಿಯ ಹಾಕಲು ಕಾರಣದಿದೆ ಓವಯ್ಯ
ಕತ್ತಲ ಕೈ ಚಾಚುತ ನೆಲವೆ ಕಾಣದಿದೆ ಓವಯ್ಯ
ನೆಲಕಾಣದೆ ನಾಟಿಯಕಾರ ಬೀಳಲಿಹ
ಆದರು ದೇವರಗದ್ದೆಯ ಬಿಟ್ಟೇಳದಿಹ ಓವಯ್ಯ
ಮನವದು ಅವಗೆ ಗದ್ದೆಯ ಬಿಟ್ಟೇಳದಿಹ ಓವಯ್ಯ
ಗದ್ದೆಯ ತೆವರಿಯ ಬಾಳೇ ಅವನಾ ಬರೆಹ ಓವಯ್ಯ
ಹಳಬನ ಮನಸಿಗೆ ಓವಯ್ಯ
ಏ ತರ ದುಗುಡ ! ಓವಯ್ಯ
ಮನುಜರೆ ಇರಲಿ ಓವಯ್ಯ
ಕಲ್ಲದು ಇರಲಿ ಓವಯ್ಯ
ಎಲ್ಲರ ಬದುಕದು ಓವಯ್ಯ
ಅಡ್ಡಿಗೆ ಬಾರದು ಓವಯ್ಯ
ಹೊಟ್ಟೆಯ ಪಾತ್ರೆಗೆ ಓವಯ್ಯ
ಅನ್ನವ ನೀಡಿದ ಓವಯ್ಯ
ಒಡೆಯನೆ ಬಾಳಲಿ ಓವಯ್ಯ
ನೇಗಿಲು ಬಾಳಲಿ ಓವಯ್ಯ
ಕಾಡಿನ ಮೂಲಕ ಓವಯ್ಯ
ಹರಿದಿಹ ನೀರದು ಓವಯ್ಯ
ತೋಡೊಳು ತುಂಬಿದೆ ಓವಯ್ಯ
ಗದ್ದೆಗೆ ಮಗುಚಲು ಓವಯ್ಯ
ನೀರದು ಭಾರವು ಓವಯ್ಯ
ಎನಿಸದು ಇಲ್ಲಿಯ ಓವಯ್ಯ
ಬಾನಿನ ನೀಲಿಯು ಓವಯ್ಯ
ನೀರೊಳು ನಗೆಯು ಓವಯ್ಯ
ಓಡಾಡುವ ಗಂಡೊಳು ಓವಯ್ಯ
ಯಾರದು ಮೇಲು ಓವಯ್ಯ
ಒಕ್ಕಲು ಮಾಡುವ ಓವಯ್ಯ
ಗಂಡದು ಮೇಲು ಓವಯ್ಯ
ಹೆಣ್ಣಲ್ಲಿಯು ಮೇಲು ಓವಯ್ಯ
ಯಾರದು ಮೇಲು ಓವಯ್ಯ
ಎಲ್ಲಕು ಮೇಲು ಓವಯ್ಯ
ಓ ಯಜಮಾನರೆ ಓವಯ್ಯ
ದೊಡ್ಡಗದ್ದೆಯ ನಾಟಿಯು ಓವಯ್ಯ
ತುಂಬಿದ ಜನರ ಮೊದಲನೆ ನಾಟಿಯು ಓವಯ್ಯ
ಹತ್ತಾರಿಹ ಜನರಿಲ್ಲಿಯು ಓವಯ್ಯ
ಮನ ಒಡೆನಾಡುತ ನೆಟ್ಟಿ ಹರಿಲ್ಲಿಯು ಓವಯ್ಯ
ಓ ಯಜಮಾನರೆ ಕೇಳಿರಿ ನೀವು ಓವಯ್ಯ
ನಮ್ಮಯ ದಣಿಗಳೆ ಕೇಳಿರಿ ನೀವು ಓವಯ್ಯ
ಈ ದೊಡ್ಡಗದ್ದೆಯ ನಾಟಿಯು ಓವಯ್ಯ
ತುಂಬಿದ (ಗೌಜಿನ) ಜನರ ಮೊದಲನೆ ನಾಟಿಯು ಓವಯ್ಯ
ಹತ್ತಾರಿಹ ಜನರೆಲ್ಲಕೆ ಓವಯ್ಯ
ದಾರಿಯು ಕಾಣದು ಎನೆ ಓವಯ್ಯ
ಅಂತಹ ಉದ್ದನ ಗದ್ದೆಲಿ ಓವಯ್ಯ
ಗಮನದ ಕದಿರದು ಬರಲು ಓವಯ್ಯ
ಈ ದೊಡ್ಡ ಗದ್ದೆಯ ನಾಟಿಯು ಓವಯ್ಯ
(ಪನ್ಯದ ಗದ್ದೆಯ ನಾಟಿಯು)
ನೆಟ್ಟಿದ ಮೊದಲಿನ ನಾಟಿ ಓವಯ್ಯ
ನಾಟಿ ಬಗೆಯೊಳು ಮೇಲು ಯಾವುದದು ? ಓವಯ್ಯ
ಧಾರೆ ನಾಟಿಯು ಬಗೆಯದು ಓವಯ್ಯ
ಹಾಲು ನಾಟಿಯ ನಗೆಯದು ಓವಯ್ಯ
ಎಲ್ಲಕು ಮೇಲು ಓವಯ್ಯ
ಪೈರೊಳು ಮೇಲು ಯಾವುದು ? ಓವಯ್ಯ
ಸಣ್ಣಕ್ಕಿ ಭತ್ತದ ಪೈರದು ಮೇಲು ಓವಯ್ಯ
ಓ ಯಜಮಾನರೆ ಓವಯ್ಯ
ನೇಗಲು ನೊಗದ ಕಜ್ಜುಗ ಮಾಡಿ ಓವಯ್ಯ
ಭಾರಿ ಪನ್ಯದ ಗದ್ದೆಯ ಉತ್ತು ಓವಯ್ಯ
ಸೈ ಗೆಲ್ಲುತ ಇಹರಿಲ್ಲಿಯ ಆಳು ಓವಯ್ಯ
ಈ ಮನೆ ಈ ಮನೆ ಮಕ್ಕಳು ಓವಯ್ಯ
ಬಾಯಲಿ ಮೆಲ್ಲುತ ತಂಬುಲವ ಓವಯ್ಯ
ಪನ್ಯದ ಗದ್ದೆಯ ನಾಟಿ ಮಾಡಿ ಓವಯ್ಯ
ಎಲ್ಲರು ಕೂಡುತ ಒಂದಾಗಿ ಮಾಡಿ ಓವಯ್ಯ
ಜನ ನೆರೆದಿಹ ಈ ನೆಲೆಯಲಿ ಓವಯ್ಯ
ದಾರಿಯು ಕಾಣದು ಓವಯ್ಯ
ಆ ಕಡೆ ಈ ಕಡೆ ಓವಯ್ಯ
ಎಲ್ಲೆಡೆ ನೆಟ್ಟಿದೆ ಓವಯ್ಯ
ಮಜಭೂತಿನ ನಾಟಿ ಓವಯ್ಯ
ಮೊದಲನೆ ನಾಟಿ ಓವಯ್ಯ
ಮೊಳೆಯುವ ನಾಟಿ ಓವಯ್ಯ
ಓ ಯಜಮಾನರೆ ಓವಯ್ಯ
ಶುದ್ಧ ಮನಸಿನ ಒಡೆಯರೆ ಓವಯ್ಯ
ಹಾಡಿ ಹಾಕುವ ನಾಟಿ ಬೇಕೆಂದು ಓವಯ್ಯ
ಹಾಡಿ ಹಾಕುವ ನಾಟಿ ನಮ್ಮದು ಓವಯ್ಯ
ಓ ನಾಟಿಕಾರರೆ ವಯ್ಯ ಹೇಳಿರಿ ಓವಯ್ಯ
ಓ ನಾಟಿಕಾರರೆ ಏನು ಹೇಳರಿ ಓವಯ್ಯ
ಬಾಯಿ ತುಂಬ ಕೂಗಿ ಹೇಳಿರಿ ಓವಯ್ಯ
ಈ ಕಾವೇರಿ ತಾಯಿ ಓವಯ್ಯ
ಈ ನರ್ಮದಾ ತಾಯಿ ಓವಯ್ಯ
ಈ ಧರ್ಮದಾ ತಾಯಿ ಓವಯ್ಯ
ಈ ದೊಡ್ಡ ಗದ್ದೆಯ ನಾಟಿ ಓವಯ್ಯ
ಹತ್ತಾರು ಜನರೆಲ್ಲ ಕೂಡಿ ಓವಯ್ಯ
ಮಾಡಿದ ತುಂಬಿದ ನಾಟಿ ಓವಯ್ಯ
ಅಂದದಿ ಗದ್ದೆಯ ಮಧ್ಯದಿ ಓವಯ್ಯ
ನಾಟಿಯು ನೆಟ್ಟು ಸಾಗಿದೆ ಓವಯ್ಯ
ನಾಟಿಯು ನೆಟ್ಟು ಮುಗಿದಿದೆ ಓವಯ್ಯ
ವಯ್ಯ ಹಾಡೋಳು ಮುಗಿದಿದೆ ಓವಯ್ಯ
ಇದೊ ಇದೋ ಕ್ಞೂ……ಓ…….ಓ ಓವಯ್ಯ