ಎಲ್ಲವ್ವ ದೊರೆತಾಳ ಏ ಅಣ್ಣ ನಮಗ
ತಾಯವ್ವ ದೊರೆತಾಳ ಏ ಅಣ್ಣ ನಮಗ       ಪಲ್ಲ

ಧರಣಿಯೊಳೆಲ್ಲಮ್ಮ ಗಂಡನುಳ್ಳ ಗರತಿ
ನಿಜಭಕ್ತರೊಳಗಾಕಿ ಪ್ರೀತಿ
ಸರ್ಪನ ಸಿಂಬಿ ಮಾಡ್ಯಾಳ ನೀವು ಕೇಳಿ
ದಾರಿ ನೋಡುತ ನಿಂತಾಳ ಕಾಳಿ   ೧

ಜೋಗುಳಬಾವಿ ಸತ್ಯಮ್ಮಗ ನಡಿರಿ
ಅಲ್ಲಿ ಕಾಯಿ ಕರ್ಪೂರ ನೀವು ಕೊಡಿರಿ
ಬಾಗಿಲ ಭರಮಗ ಗಿಡ್ಡ ಕಾರೀಕ
ದಾರಿ ನೋಡುತ ನಿಂತಾನ ತಾರೀಪ         ೨

ಮೂರು ಮೈಲಿ ಗುಡ್ಡ ಏರಿ ಇಳಿರಿ
ಏಳು ಕೊಳ್ಳದಾಗ ಯಲ್ಲಮ್ಮನ ಗುಡಿರಿ
ದೇವಿ ಕಂಡು ಸೀಗ್ರ ದರ್ಶನ ಪಡಿರಿ
ದಾರಿ ನೋಡುತ ನಿಂತಾಳ ಮಾಮಾರಿ       ೩

ಸಣ್ಣ ಸಾಗರ ಕೊಕಟ್ನೂರ ಕಡೇರಿ
ನಟ್ಟನಡುವೆ ಎಲ್ಲಮ್ಮನ ಗುಡೀರಿ
ಕಾಶೀಬಾಯಿ ಹೇಳಿದಂತೆ ನಡಿರಿ
ದಾರಿ ನೋಡುತ ನಿಂತಾಳಸುರಾರಿ ೪