ದ್ವಿಪದಿ

ಬಲುದೋಷಕೊಳಗಾದ ಪಾಪಿದಶಕಂಠ
ಮಲಗಿದಾತನು, ಇವಳು ವೈದೇಹಿ ತಾನೆ || ||೧೩೮||

ಕಲೆಯಾಯ್ತು ರಾಘವಗೆ ಕಾಂತೆಯಿವಳಿಂದ
ಗೆಲವಿಲ್ಲ ಮುಂದೆಮಗೆ ದಣಿವುದಿದು ವ್ಯರ್ಥ || ||೧೩೯||

ವರಪತಿವ್ರತೆಯೆಂಬ ಬಿರುದ ನೆರೆ ತೊರೆದು
ಮರುಳಾದಳೀತನಿಗೆ ತನ್ನವರ ಮರೆದು || ||೧೪೦||

ಇವಳಿಗೋಸುಗ ವಾಲಿ ಸಂಹಾರವಾದ
ಇವಳ ದೆಸೆಯಿಂ ಜಟಾಯುವು ಮೋಕ್ಷಕಾದ || ||೧೪೧||

ದಾನವನ ಸಂಹರಿಸಿ ದಾಟಿದರೆ ಮುಂದೆ
ಏನೆಂದು ಹೇಳುವನೊ ಎನ್ನೊಡೆಯ ರಾಮ || ||೧೪೨||

ತರಹರಿಸಿ ಮನದೊಳಗೆ ತನ್ನೊಡೆಯ ರಾಮ
ಕುರುಹುಗಳ ಪೇಳ್ದೆಡೆಯ ಕಂಡನಾ ಹನುಮ || ||೧೪೩||

ಪದುಮರೇಖೆಗಳಿಲ್ಲ ಪಾದದಲಿ ಮುಂದೆ
ವಿಧವತ್ವ ತೋರುತಿದೆ ಹೆಡತಲೆಯ ಹಿಂದೆ || ||೧೪೪||

ಮತ್ಸ್ಯಲಾಂಛನ ನೋಡೆ ಬಲ ತೊಡೆಯೊಳಿಲ್ಲ |
ಅಚ್ಯುತನ ಸತಿಯಿವಳು ಸರ್ವಥಾ ಅಲ್ಲ || ||೧೪೫||

ಇವಳು ಜಾನಕಿಯಲ್ಲವೆಂದು ನಿಶ್ಚಯ್ಸಿ
ತವಕದಲಿ ಹೊರವಂಟ ಭೂಸುತೆಯನರಸಿ || ||೧೪೬||

ನವರತ್ನಭಿತ್ತಿಗಳ ಕನಕನಿರ್ಮಿತದ
ಭವನಗಳ ಒಳಪೊಕ್ಕು ನೋಡಿ ಸನ್ಮತದ || ||೧೪೭||

ಸುಳಿ ಸುಳಿದು ನೆರೆದಣಿದು ಪಟ್ಟಣವನೆಲ್ಲ
ನಳಿನಲೋಚನೆ ಸೀತೆಯನು ಕಂಡುದಿಲ್ಲ || ||೧೪೮||

ಮನೆಮನೆಯ ದಾಟಿ ತಾ ಮತ್ತಲ್ಲಿ ಬಂದ
ದನುಜನುಜನುಪ್ಪರಿಗೆಯಾ ಮೇಲೇರಿ ನಿಂದ || ||೧೪೯||

ಅರಸಿಕೊಳಲಿದರೊಳಗೆ ಶ್ರೀರಾಮನೆಂದೇ
ಪುರವನೇ ಕಿತ್ತಿರಿಸುವೆನು ಕಣ್ಣ ಮುಂದೆ || ||೧೫೦||

ಹೀಗೆಂದು ಮನದೊಳಗೆ ಹನುಮ ನಿಶ್ಚೈಸೆ
ಹಾಗೆ ತ್ರ್ರಿಕುಟಾಚಲಕೆ ಬಾಲವನು ಬಳಸಿ || || ೧೫೧||

ಆ ಸಮಯದಲಿ ಗಗನ ವಾಕ್ಯವನೆ ಕೇಳ್ದು
ಬೀಸುತಿಹ ಮಾರುತನ ವಾಸನೆಯ ತಾಳ್ದು ||೧೫೨||

ವನವದೊಂದಿರುವುದೆಂದಾರಯ್ಸಿ ನುಡಿಯ
ಅನುಸರಿಸಿ ನೋಡುವೆನು ಎನುತಲಾ ಕಡೆಯ ||೧೫೩||

ಹಾರಿದಬ್ಬರಕೆ ನೆಲವದಿರಿತುರವಣೆಗೆ
ಜಾರಿದುವು ಮಣಿಖಚಿತ ಭವನದುಪ್ಪರಿಗೆ ||೧೫೪||

ಮೆಲ್ಲನುದ್ಯಾನಕ್ಕೆ ಮಗುಳೆ ನಡೆತಂದ
ಫುಲ್ಲನೇತ್ರೆಯಶೋಕವನದೊಳಿರಲಂದಾ ||೧೫೫||

ಶಿಂಶುಪದ ಮರನಡಿಯ ಕುಳಿತು ರಾಘವನ
ಚಿಂತಿಸುವ ಜಾನಕಿಯ ಕಂಡನಾ ಹನುಮ ||೧೫೬||

ರಾಗ ಎರುಕಲಕಾಂಭೋಜಿ ಅಷ್ಟತಾಳ

ಜಯ ಜಯ ತ್ರೈಲೋಕ್ಯ ಮಾತೆ ವಿಖ್ಯಾತೆ |
ಜಯ ಜಯ ಸೀತೆ ಭೂಜಾತೆ || ಪಲ್ಲವಿ ||

ಜಯ ಜಯ ಶಕ್ತಿಸ್ವರೂಪೆ ಕೀರ್ತಿಕಲಾಪೆ |
ಜಯ ಜಯ ಪುಣ್ಯಶರಣ್ಯೆ || ಅನುಪಲ್ಲವಿ ||

ಇವಳೀಗ ರಾಮನ ಕಾಂತೆ ಸದ್ಗುಣವಂತೆ |
ಇವಳು ಸಜ್ಜನಪಾಲೆ ಶೀಲೆ ||
ಇವಳು ಬ್ರಹ್ಮಾದಿ ಸುರೌಘವಂದಿತೆ ಮಾತೆ |
ಇವಳು ರಾಮನ ಪ್ರೀತೆ ಸೀತೆ ||೧೫೭||

ಧರಣಿನಂದನೆಯೊಳು ದೋಷವನೆಣಿಸಿದೆ |
ದುರುಳ ರಾವಣನ ಕಂಡಲ್ಲಿ ||
ಕರವೆರಡಲಿ ಬಾಯ ಹೊಯ್ದು ತಪ್ಪಾಯ್ತೆಂದು |
ಶಿರವ ಬಾಗಿದ ರಾಮಾಯೆಂದು ||೧೫೮||

ವಚನ || ಇಂತೆಂದು ಅಶೋಕವನದಲ್ಲಿ ಏಕೋಭಾವದಿಂದ ಚಿಂತಿಸುತ್ತಾ ರಾಮಧ್ಯಾನದಲ್ಲಿರುವಂಥ ಸೀತಾದೇವಿಯನ್ನು ಕಂಡು ಹನುಮಂತನು ಅನೇಕ ಸ್ತೋತ್ರವಂ ಮಾಡಿ ಆ ವೃಕ್ಷವೊಂದನ್ನೇರಿ ಸುಮ್ಮನೇ ಕುಳಿತಿರಲು, ಮರುದಿವಸ ಅಸ್ತಮಾನವಾಗಲು, ಅತ್ತಲಾ ರಾವಣನು ಸರ್ವಾಭರಣಾಲಂಕಾರಯುಕ್ತನಾಗಿ ಬೊಂಬಾಳ ದೀವಿಗೆಯೊಡನೆ ಆ ವನಾಂತರಕಂ ಬಂದು ಆಕೆಯ ಸಮೀಪದಲ್ಲಿರುವಂಥ ಸರಮೆತ್ರಿಜಟಿಯರ ಕೂಡೆ ಜಾನಕಿಯ ಅಂತರ್ಭಾವವೇನೆಂದು ಕೇಳಲು ಅವರು ಏನೆಂದರು ಎಂದರೆ –

ರಾಗ ಸೌರಾಷ್ಟ್ರ ತ್ರಿವುಡೆತಾಳ

ಧರಣಿಸುತೆಗಾ ರಾಮಚಂದ್ರನ |
ಸ್ಮರಣೆಯೇ ಹೊರತಾಗಿ ಮನದಲಿ |
ಬರಿದೆ ಮತ್ತೊಂದಿಲ್ಲ ಯೋಚನೆ | ಇರುಳುಹಗಲು ||೧೫೯||

ಬೆಕ್ಕುಗಳಿಗೂ ಕೋಡು ಬಂದರು |
ಸಕ್ಕರೆಯು ಕಹಿಯಾಗಿ ಸಂದರು |
ಮಿಕ್ಕುಮಾತಿದು ನಿನಗೆ ಜಾನಕಿ | ಸಿಕ್ಕಳಯ್ಯ ||೧೬೦||

ಪರ್ವತವ ನೊಣ ನುಂಗಿತಾದರು |
ಇರುವೆ ಶರಧಿಯ ಕುಡಿದುಹೋದರು
ಸರ್ವಥಾ ಜಾನಕಿಯನೊಲಿಸಲು | ಸಾಧ್ಯವಿಲ್ಲ || ||೧೬೧||

ಕಾಗೆ ತಾ ಬಿಳುಪಾಗಿ ಹೋದರು |
ನಾಗರನ ಹಲ್ಲಮೃತವಾದರು |
ಆ ಗರುವೆ ಮಾಯಕದ ನುಡಿಗೊಳ | ಗಾಗಳಯ್ಯ || ||೧೬೨||

ಕಲ್ಲೊಳಂಬುಜವರಳಿತಾದರು |
ಮಲ್ಲಿಗೆಯು ದುರ್ಗಂಧವಾದರು |
ಎಳ್ಳನಿತು ಬೇಡಾಸೆ ನಿನಗಹ | ಳಲ್ಲ ಸೀತೆ || ||೧೬೩||

ಚಂದನವು ಉಷ್ಣಕರವಾದರು |
ಚಂದಿರನು ಬಿಸಿಲಾಗಿ ಕಾದರು |
ಎಂದಿಗಾದರು ನಿನಗವಳು ಮನ | ಹೊಂದಳಯ್ಯ || ||೧೬೪||

ಗಿಳಿಗೆ ಲವಣವೆ ಪಥ್ಯವಾದರು |
ಅಳಿಗೆ ತಾವರೆ ಸೇರದ್ಹೋದರು |
ನಳಿನಲೋಚನೆ ಸೀತೆ ನಿನಗಹ | ಒಲವ ಕಾಣೆ || ||೧೬೫||

ದಕ್ಷಿಣದಿ ರವಿಯುದಿಸಿ ನಿಂದರು |
ವೃಕ್ಷಗಳು ಸಂಚರಿಸಿ ಬಂದರು |
ಲಕ್ಷ್ಮಣಾಗ್ರಜ ಸತಿಯನೊಲಿಸಲು | ಶಕ್ಯವಲ್ಲ || ||೧೬೬||

ಗೋವು ವ್ಯಾಘ್ರನ ಮುರಿದು ತಿಂದರು |
ಹಾವು ಗರುಡನ ಹಾರಿ ಕೊಂದರು |
ದೇವಿ ಜಾನಕಿ ಸಿಕ್ಕಳೆಂದೇ | ಭಾವವಿರಲಿ || ||೧೬೭||

ವಚನ || ಇಂತೆಂದು ಸರಮೆ ತ್ರಿಜಟೆಯರು ಪೇಳಲಾಗಿ ರಾವಣನು ತನ್ನ ಅನುಕೂಲಕ್ಕೆ ತಕ್ಕ ವ್ಯವಹರಿಸುವಂಥ ರಾಕ್ಷಸಸ್ತ್ರೀಯರಂ ಕರೆದು ಅನೇಕ ರತ್ನಾಭರಣಗಳ ಪೆಟ್ಟಿಗೆಯಂ ಮುಂದಿರಿಸಿ, ನಾನಾ ಯತ್ನದಿಂದ ಒಡಂಬಡಿಸಿರೆಂದು ಕಳುಹಿಸಲಾಗಿ ಅವರು ಜಾನಕಿಯೆಡೆಗಂ ಬಂದು ಏನೆಂದರು ಎಂದರೆ –

ರಾಗ ಕಾಂಭೋಜಿ ಏಕತಾಳ

ದಾನವೇಂದ್ರನ ಕೊಡಲಿ | ನ್ನೇನು ಸಂದೇಹ || ಪಲ್ಲವಿ ||

ಜಾನಕಿ ಸುಮ್ಮನೆ ಅನು | ಮಾನವೇತಕಮ್ಮ ಹೇಳು || ದಾನ ||
ರಾಮನೆಂಬ ಧ್ಯಾನ ಬಿಟ್ಟು | ಬೇಗ ನಾನಾಭರಣವಿಟ್ಟು |
ರಾವಣನೊಳು ಪ್ರೇಮವಿಟ್ಟು | ಕಣ್ಣಿಗೆ ಕಾಡಿಗೆಯನಿಟ್ಟು || ದಾನ || ||೧೬೮||

ಕನ್ನಡಿಯ ನೋಡಿಕೊಳ್ಳೆ | ಕಣ್ಣಿಗೆ ಕಪ್ಪಿಟ್ಟುಕೊಳ್ಳೆ |
ಪನ್ನೀರಿಕ್ಕೊ ಗಂಧದ ಕ | ಮ್ಮೆಣ್ಣೆಯ ಲೇಪನ ಕೊಳ್ಳೆ || ||೧೬೯||

ಪಟ್ಟೆಯ ಸೀರೆಯನುಟ್ಟು | ಪಚ್ಚೆಯ ಕುಪ್ಪಸ ತೊಟ್ಟು |
ಕಟ್ಟಿ ತುಂಬಿಗುರುಳ ಮೇ | ಲಿಟ್ಟು ನಾನಾ ಪುಷ್ಪಂಗಳ || ||೧೭೦||

ವಚನ || ಇಂತೀ ಸತಿಯರು ನಾನಾ ಯತ್ನದಿಂದೊಡಂಬಡಿಸಲಾಗಿ ಆ ಸೀತಾಂಗನೆಯಾದಡೆ ಕಣ್ಣಂ ತೆರೆಯದೆ ಸುಮ್ಮನೇ ಇರಲಾಗಿ, ಅವರು ನಾಚಿಕೊಂಡು ರಾವಣಗೆ ಆ ವೃತ್ತಾಂತಮಂ ಪೇಳಲಾಗಿ ಆತನು ತಾನೇ ಮಾತನಾಡಿಸಿ ನೋಳ್ಪೆನೆಂಬ ಆಭಿಲಾಷೆಯಿಂದ ಅತಿದೈನ್ಯದಿಂದ ಸನಿಹಕ್ಕೆ ಬಂದು ಏನೆಂದನು ಎಂದರೆ –

ರಾಗ ಘಂಟಾರವ ಆದಿತಾಳ

ಮಾರನಸ್ತ್ರ ತಾಗಿ ಬಿಗು | ವೇರಿತಲ್ಲೆ ಬಾಲೆ |
ನಾರಿ ಎನ್ನ ಮೇಲೆ ದಯವ | ದೋರೆ ನೀ ದಮ್ಮಯ್ಯ || ಪಲ್ಲವಿ ||

ಇಪ್ಪತ್ತೂ ತೋಳಲ್ಲಿ ತೆಗೆ | ದಪ್ಪಿಕೊಂಬುದಕ್ಕೆ |
ಅಲ್ಪ ಮನಸಲ್ಲ ಕೇಳೆ | ಕರ್ಪೂರಸುಗಂಧಿ || ||೧೭೧||

ಚಪ್ಪರ ಮಂಚದ ಮೇಲೆ | ಚಂದದ ಉಯ್ಯಾಲೆ |
ದರ್ಪಕನಾಟದಿ ನಿನ್ನ | ದಣಿಸುವೆ ನಾ ಮುನ್ನ || ||೧೭೨||

ದೇವತೆಗಳೊಳ್ಗಂಧರ್ವ | ದೇವ ಸ್ತ್ರೀಯರೆಲ್ಲ |
ದೇವೇಂದ್ರ ಮುಂತಾಗಿ ಎನ್ನ | ಸೇವೆ ಮಾಳ್ಪರಲ್ಲ || ||೧೭೩||

ಸೃಷ್ಟಿ ಈರೇಳರೊಳೆಲ್ಲ | ಶ್ರೇಷ್ಠನಹೆ ಜಾಣೆ |
ಪಟ್ಟದ ರಾಣಿತ್ವ ನಿನಗೆ | ಕೊಟ್ಟು ಬಾಳ್ವೆ ಕಾಣೆ || ||೧೭೪||

ರಾಗ ಸಾವೇರಿ ಆದಿತಾಳ

ಮಾತಾಡಬಾರದೇನೆ | ಸುಜಾಣೆ |
ಮಾತನಾಡಬಾರದೇನೆ || ಪಲ್ಲವಿ ||

ಮಾತನಾಡಬಾರದೇನೆ | ಸೀತಾದೇವಿ ಎನ್ನೊಡನೆ |
ಪ್ರೀತಿಯಿಂದ ಸೋತು ಬಂದ | ನೀತನೆಂಬ ಕರುಣದಿಂದ  || ಅನುಪಲ್ಲವಿ ||

ಕಾಮಿನಿ ನಿನ್ನನ್ನು ಕಂಡು | ಕಾಮನು ದಂಡೆತ್ತಿ ಬಂದು |
ಸಾವಧಾನದಿ ಬಿಲ್ಗೊಂಡು |
ಪ್ರೇಮದಿತೆಬ್ಬು ಸದ್ದು ಮಾಡಿದ || ಎನ್ನೆದೆಗಿಡುವ
ಸಾಮರ್ಥ್ಯದ ಗುರಿಯ ನೋಡಿದ || ತೆಬ್ಬ ಝೇಂಕರಿಸಿ
ಆ ಮಹಾಪೂಶರವ ಪೂಡಿದ || ಬಿಡಲೆನಗೆ ತಾಗಿ
ನಾ ಮೂರ್ಛಿತನಾಗಿ ಬಿದ್ದೆನಲ್ಲೆ | ವಿರಹವೆಗ್ಗಳಿಸಿ
ಕಾಮುಕನಾಗಿ ನಾ ಬಂದೆನಿಲ್ಲೆ | ಇದಕೌಷಧಿಯ
ಕೋಮಲಶರೀರೆ ನೀನೆಬಲ್ಲೆ | ನಿನ್ನನು ಬಿಡಲೊಲ್ಲೆ ||
ಭೂಮಿಯಿಳಿಹ ಬೇ | ಕಾಗುವ ವಸ್ತುವ |
ಪ್ರೇಮದಿ ತರಿಸಿ ಕೊಡಿಸುವೆ ||
ಹೇಮಾಂಬರಗಳನುಡಿಸುವೆ |
ಸೋಮಾಭರಣವ ತೊಡಿಸುವೆ |
ಈ ಮನವಿದ್ದಂ | ತಾ ಮನಸಾದರೆ |
ಪ್ರೇಮದೊಳನುದಿನ | ಕ್ಷೇಮದೊಳಿರುವೆ || ||೧೭೫||

ಕಣ್ಗೆ ನಿದ್ರೆ ಬಾರದು ಬಾ | ಯ್ಗನ್ನವು ಸೇರದು ಕಾಂತೆ
ನಿನ್ನಯ ಹಂಬಲಿನಿಂದ ||
ಎನ್ನಯ ಜೀವವುಳಿಯದೊಮ್ಮೆಗೆ || ಮಾತನಾಡಿಕೊಂಬ
ಕನ್ಯೆ ನೀ ಬೇಗೆದ್ದು ಬಾ ಸುಮ್ಮಗೆ || ಸಕಲೈಶ್ವರ್ಯ
ವೆನ್ನಲ್ಲಿ ಕೈಸೇರಿತು ಘಮ್ಮಗೆ || ತನಗೆ ಕುಂಭ
ಕರ್ಣನೆಂಭ ಶೌರ್ಯವಂತನನುಜ || ಇಂದ್ರನ ಜಯಿಸಿ
ಬನ್ನಬಡಿಸಿದಂಥವನೆನ್ನ ತನುಜ || ರಾಮನೆಂಬಾತ
ಗಣ್ಯನಲ್ಲ ನೋಡಲೊಬ್ಬ ಮನುಜ || ಸುರನರಫಣಿ ದನುಜ
ಕನ್ಯೆಯರೆಲ್ಲರು ಕಾದಿಹರನುದಿನ |
ನಿನ್ನಯ ಸೇವೆಯೊಳಿರುವರು ||
ಮನ್ನಿಸಿ ಕರೆದರೆ ಬರುವರು ||
ಕನ್ನಡಿ ಕಲಶವ ತರುವರು ||
ಹೆಣ್ಣಿಗು ಹೊನ್ನಿಗು | ಮಣ್ಣಿಗು ಬಯಸುವ |
ರೆನ್ನಲ್ಲಿಹ ಸಂ | ಪನ್ನರ ನೋಡೆ || ಮಾತ || ||೧೭೬||

ಹಗಲಿರುಳು ಕೈಯೊಳ್ ನಿನ್ನ | ಬಿಗಿಯಪ್ಪಿಕೊಂಬೆ ನಾ ಮುನ್ನ |
ಬಗೆ ಬಗೆ ಕಾಮನ ಕಲೆಯ ||
ಸೊಗಸಾಗಿ ತೋರುತ್ತ ಮುದ್ದಾಡುವೆ || ಕರ್ಪೂರ ವೀಳ್ಯ
ಜಗಿದು ಸವಿತಾಂಬೂಲವ ನೀಡುವೆ | ಹೆಚ್ಚಿನ ಮೋಹದ
ಬಗೆಯಿಂದ ಮುತ್ತ ಬೇಡುವೆ || ಕುಚಕೆ ನಾ ಚ
ಳ್ಳುಗುರನಿಟ್ಟು ಒರೆಸಿಲಲ್ಲೆಗರೆವೆ | ಮಲ್ಲಿಗೆಯರ
ಳುಗಳ ತಲೆಗೆ ಮುಡಿಸಿ ಮೋಹವೆರೆವೆ | ಎಂದೆಂದೂ ಬಿಡದೆ
ಮಿಗಿಲಾದೈಶ್ವರ‍್ಯದಿ ನೀ ಸತತ ಮೆರೆವೆ | ಅರಿತವಳಿಂಗೇನೊರೆವೆ ||
ದುಗುಡದೊಳನುದಿನ ರಾಮನೆಂಬ ಹುಲು
ಹಗುರ ಮನುಜನ ನೆನೆವುದು ||
ಅಗಣಿತ ಭಾಗ್ಯವ ತೊರೆವುದು ||
ಮಿಗಿಲೇ ಯೋಚಿಸು ನಿನಗಿದು ||
ನಗೆಮೊಗನೆಗಹುತ | ಲೊಗುಮಿಗೆ ಹರುಷದಿ
ನಗರಕೆ ಬಾರೆಲೆ | ಸುಗುಣಾನ್ವಿತೆಯೇ ||  ||೧೭೭||

ವಾರ್ಧಕ

ಕುಶನೆ ಕೇಳ್ ರಾವಣನ ಮಾತು ಜಾನಕಿಗೆ ಕ
ರ್ಕಶವಾಗಿ ಕಿವಿಗೆ ನಾಟಿದವು ಕಣ್ಣಲಿ ಕಿಡಿಯ
ಮಸಗಿ ಕೈಯೊಳು ತೃಣವ ಮುರಿದಿಕ್ಕಿ ಬಣಗುರಕ್ಕಸಗವನಿಸುತೆ ನುಡಿದಳು |
ಪಿಸುಣರೊಳು ಬಣಗು ರಣಹೇಡಿ ಚಂಡಾಲ ದು
ರ್ವ್ಯಸನಿ ದುರಹಂಕಾರಿ ದುರ್ಜನದುರಾಚಾರಿ
ಅಸುರರೊಳಗಧಮನೇ ನೀಚ ನಾಯಿ ಗುಲಾಮ ಅತ್ತತ್ತ ನಡೆಯೆಂದಳು || ||೧೭೮||

ವಚನ || ಇಂತು ಈ ರೀತಿಯಿಂದ ದಶಾಸ್ಯನಂ ಬಯ್ದು ಸರಮೆಯೊಡನೆ ಏನೆಂದಳು ಎಂದರೆ –

ರಾಗ ಸಾವೇರಿ ಏಕತಾಳ

ಸರಮೇ ನೀ ಸಾಕ್ಷಿಯಾಗಿರು | ಈ ಮಾತಿಗೆಲ್ಲ |
ಸರಮೆ ನೀ ಸಾಕ್ಷಿಯಾಗಿರು || ಪಲ್ಲವಿ ||

ದುರುಳ ತಾನುತ್ತಮನಂತೆ | ಸುರರಿಗೆಲ್ಲ ಶ್ರೇಷ್ಠನಂತೆ |
ಧುರದೊಳಧಿಕ ಶೌರ್ಯನಂತೆ | ನಿರತ ಸರ್ವೈಶ್ವರ್ಯನಂತೆ || ||೧೭೯||

ಬಲ್ಲಿದನಾದರೆ ಶಿವನ | ಬಿಲ್ಲನೇಕೆತ್ತದೆ ಪೋದ |
ಕಲ್ಲೆದೆಯಾದರೆ ತೊಟ್ಟಿ | ಲಲ್ಲಿ ಕಟ್ಟಿಸಿಕೊಂಬನೆ || ||೧೮೦||

ಅಂದೇ ರಾಮಚಂದ್ರನ ಕಣ್ಣ | ಮುಂದೆ ತಾರದೇತಕೆನ್ನ |
ಹಂದೆಯಂತೆ ಕದ್ದುಕೊಂಡು | ಬಂದುದೇತಕಮ್ಮ ಹೇಳು || ||೧೮೧||

ಘೋರದೈತ್ಯ ಪಾಪಿ ಪರರ | ನಾರಿಯೊಳಿಂತಾದಮೇಲೆ |
ನೂರು ಜನ್ಮದಲ್ಲಿ ನರಕ | ಸೇರದಿರನು ಸುಳ್ಳಲ್ಲಮ್ಮ || ||೧೮೨||

ಕಾಣಬಹುದಿನ್ನು ಖಳನ | ಗೋಣ ಮುರಿದಿಕ್ಕಿ ಯಮನ |
ಠಾಣೆಯಕಟ್ಟಿದ ಮೇಲೆ | ರಾಣಿಯ ಮಾಳ್ಪ ಶ್ರೀರಾಮ || ||೧೮೩||

ಕೆಟ್ಟ ಮೂಳನಿವನ ತಲೆಯ | ಕುಟ್ಟಿ ಕಾಲಿಂದೊದ್ದು ಕಡೆಯೊ |
ಳಿಟ್ಟ ಮೇಲೆಯೆನ್ನ ರಾಮ | ಪಟ್ಟದ ರಾಣಿಯ ಮಾಳ್ಪ || ||೧೮೪||

ವಾರ್ಧಕ

ಕರುಳು ಕತ್ತರಿಸಿ ಜಾನಕಿಯ ವಚನಾಸ್ತ್ರದಲಿ
ದುರುಳ ರಾವಣ ಕೋಪದಿಂದ ಖಡ್ಗವ ಕೊಂಡು
ತರಳೆಯಂ ಕಡಿದು ಬಿಸುಡುವೆನೆಂದು ಬರುತಿರಲು ವರಪತಿವ್ರತೆಯಲ್ಲಿಗೆ |
ಅರಿತಳಿಂಗಿತವ ಮಂಡೋದರಿ ಜವದಿ ಬಂದು
ಕರವ ಪಿಡಿದೊಡಬಡಿಸಿ ಪತಿಯ ತನ್ನರಮನೆಗೆ
ಕರೆದೊಯ್ದಳಿತ್ತ ಜಾನಕಿ ಕ್ಲೇಶದಿಂದಳುತ ಸರಮೆಯೊಡನಿಂತೆಂದಳು || ||೧೮೫||

ರಾಗ ನೀಲಾಂಬರಿ ರೂಪಕ ತಾಳ

ಕಂಡೆಯಾ ಸರಮೆ ದಾನವ ಬಂದು ದಿನದಿನ |
ದಂಡಿಸುತಿರುವಂಥ ಪರಿಯ ||
ಭಂಡ ರಕ್ಕಸನ ಪಟ್ಟಣದಿ ಬಾಳ್ವುದರಿಂದ |
ಕೆಂಡಕೆ ಬೀಳ್ವುದೇ ಲೇಸು || ||೧೮೬||

ಇಂದು ಬರುವ ನಾಳೆ ಬರುವನು ಶ್ರೀರಾಮ |
ನೆಂದಾಸೆ ಮಾಡಿದೆ ನಾನು ||
ಇಂದಿಗೆ ದಿನವಿಷ್ಟು ಸಂದರೂ ರಘುಕುಲ |
ಚಂದ್ರನ ದರ್ಶನವಿಲ್ಲ || ||೧೮೭||

ಪೂರ್ವ ಜನ್ಮದೊಳೇಸು ಪಾಪ ಮಾಡಿದ್ದೆನೊ |
ದುರ್ವ್ಯಥೆಯೊಳು ಸಿಕ್ಕಿ ದಣಿದೆ ||
ಸರ್ವಥಾ ಇನ್ನಾಸೆ ತೀರಿತೆನಗೆ ಮುಂದೆ |
ಉರ್ವಿಯೊಳ್ಬಾಳಿರ್ಪೆನೆಂಬ || ||೧೮೮||

ಎಲ್ಲಿಯಾ ರಾಮ ಇನ್ನೆಲ್ಲಿಯಾ ಲಕ್ಷ್ಮಣ |
ಎಲ್ಲಿರ್ಪುದೀ ಲಂಕಾನಗರ ||
ಇಲ್ಲಿಗೆ ಬಂದೆನ್ನ ಸೋವನೆಂಬುದು ಸ್ವಪ್ನ |
ದಲ್ಲಿಯೂ ನಿಜವಲ್ಲ ಮಾತು || ||೧೮೯||

ಎಂತಿರ್ಪ್ಪರವರು ಹೀಗೆಂಬ ವಾರ್ತೆಗಳನ್ನು |
ಕಾಂತೆ ಪೇಳುವರಿಲ್ಲದಾಯ್ತು |
ಇಂಥ ನಿರ್ಬಂಧ ಯಾತನೆ ಯಾವ ಸತಿಗೂ ಜ |
ನ್ಮಾಂತರಕೂ ಬೇಡ ಕೇಳಮ್ಮ || ||೧೯೦||

ನಿನ್ನ ಮಾತಿನ ಮೇಲೆ ನೀರೆ ನಾಕಾದಿರ್ದೆ |
ಎನ್ನವರಡಿಯ ಮೈಸಿರಿಯ ||
ಅನ್ಯಾಯವಿದು ಮುಂದೆ ಇನ್ನೂ ಬಾಳಿರುವುದು |
ಮನ್ನಿಸಿ ಕೊಡು ಘೋರ ವಿಷವ || ||೧೯೧||

ಆರು ತಿಂಗಳು ದಿನದಾರಭ್ಯ ನೀವೆನ್ನ |
ಸೇರಿ ದಣಿದಿರೆನಗಾಗಿ ||
ಯಾರು ಹೇಳಿದರಿನ್ನು ಕೇಳೆ ಮಾತುಗಳನ್ನು |
ಸೇರಿತು ಮರಣ ಬಂದಡಸಿ || ||೧೯೨||

ಆಸೆ ನಿರಾಸೆಯಾಯಿತು ಮುಂದೆ ಬಾಳ್ವಭಿ |
ಲಾಷೆಯಿನ್ನಿಲ್ಲ ನೋಡಿದರೆ ||
ಕೇಶವಾದರು ಕೊರಳಿಗೆ ಸುತ್ತಿ ಪ್ರಾಣವ |
ಘಾಸಿ ಮಾಡುವೆನಮ್ಮ ತ್ರಿಜಟೆ || ||೧೯೩||

ಪ್ರಾಣದಾಸೆಯ ಬಿಟ್ಟಳೆಂಬುದನರಿತ ಆ |
ಕ್ಷೋಣಿನಂದನೆ ಕೈಯ ಪಿಡಿದು ||
ಏಣಾಕ್ಷಿ ತ್ರಿಜಟೆ ಪೇಳಿದಳಂತರಂಗದಿ |
ಕಾಣಿಸಿದಂದಿನ ಕನಸ || ||೧೯೪||

ರಾಗ ತೋಡಿ (ವರಾಳಿ) ಏಕತಾಳ

ಕಂಡೆನೀ ರೀತಿ ನಿದ್ರೆ | ಯೊಳ್ ಕೇಳ್ ಕಮಲಾಕ್ಷೀ  || ಪಲ್ಲವಿ ||

ಪುಂಡರೀಕನೇತ್ರನೂ ಮಾ | ರ್ತಂಡಜಾತ ಸುಗ್ರೀವನೂ |
ಹಿಂಡುಕಪಿಗಳನ್ನು ಕೂಡಿ | ಕೊಂಡು ಬಂದರೆಂಬುದನ್ನು || ಕಂಡೆ || ||೧೯೫||

ಹತ್ತು ತಲೆಯಾತ ತಾನು | ರಕ್ತವಸ್ತ್ರಗಳನುಟ್ಟು |
ಕತ್ತೆಯನೇರಿ ದಕ್ಷಿಣ | ಯಾತ್ರೆಗಾಗಿ ಪೋಪುದನ್ನು || ಕಂಡೆ || ||೧೯೬||

ಅಂಗನೆ ಮಂಡೋದರಿ ಕ | ರ್ಣಂಗಳೋಲೆ ಮೂಗುತಿಯ |
ಮಂಗಲಸೂತ್ರವ ಹರಿದು | ಕಂಗಳೊಳ್ನೀರಿಳಿಯುತಿಹುದ || ಕಂಡೆ || ||೧೯೭||

ಅಷ್ಟಭಾಗ್ಯವೆಲ್ಲ ಹೋಗಿ | ದುಷ್ಟರು ಸಂಹಾರವಾಗಿ |
ಥಟ್ಟನೆ ವಿಭೀಷಣ ಈ | ಪಟ್ಟಣವಾಳ್ವ ಸ್ವಪ್ನವ || ಕಂಡೆ || ||೧೯೮||

ಶುಂಡಾಲಗಮನೆ ನಿಮ್ಮ ಗಂಡನಾದ ರಾಮಚಂದ್ರ |
ಕೊಂಡುಪೋಗಿ ನಿಮ್ಮನು ಭೂ | ಮಂಡಲವಾಳ್ವನೆಂಬಂಥ || ಕಂಡೆ || ||೧೯೯||

ವಾರ್ಧಕ

ಮನಸಿನಲಿ ಕಡುನೊಂದು ಚಿಂತಿಸುವ ಜಾನಕಿಗೆ
ಕನಸಿನೊಳವಂ ಪೇಳ್ದೊಡಂಬಡಿಸೆ ತ್ರಿಜಟೆ, ಮರ
ಗೊನೆಯೊಳಿದ್ದೆಲ್ಲವಂ ಕೇಳ್ದು ಹನುಮಂತ ಶ್ರೀರಾಮರಾಮಾ ಎನ್ನುತ |
ಇನಕುಲದ ಸೌಭಾಗ್ಯಚಿಂತಾಮಣಿಗೆ ತಕ್ಕ
ವನಿತೆಯಹುದೆಂದು ಕೊಂಡಾಡಿ ಜನಕಾತ್ಮಜೆಯ
ಮನದೊಳಗೆ ತಾನೆ ತನ್ನೊಳು ಮಾತನಾಡಿದನು ಜಾನಕಿಯು ಕೇಳುವಂತೆ || ||೨೦೦||

ರಾಗ ಕೇದಾರಗೌಳ ಅಷ್ಟತಾಳ

ನಳಿನಲೋಚನೆ ಕೇಳು ರಾಮಚಂದ್ರನು ಎನ್ನ |
ಕಳುಹಲಿಲ್ಲಿಗೆ ಬಂದೆನು |
ಗೆಲವಿನಿಂದಿಹ ತಮ್ಮ ಲಕ್ಷ್ಮಣ ಸಹ ನಿಮ್ಮ |
ಬಳಿ ಪೋಗಿ ಬಾರೆನುತ || ||೨೦೧||

ಕುವಲಯಾಂಬಕ ರಾಮ ಸುಗ್ರೀವ ಸಹಿತ ಪ್ರ |
ಸ್ರವಣ ಪರ್ವತದೊಳಿಹ |
ಎವೆಮಾತ್ರದಲಿ ನಿಮ್ಮ ಸ್ಮರಣೆಯಲ್ಲದೆ ಬೇರೆ |
ವಿವರ ಕಾಣಿಸದೆನಗೆ || ||೨೦೨||

ಕಂದ

ಮರಗೊಂಬಿನೊಳಿಂತೆಂದಾ
ಸಿರಿವಾಕ್ಯವಕೇಳ್ದು ಸೀತೆ ಮೊಗ ನೆಗಹುತ್ತಂ |
ದುರುಳರ ಮಾಯಕವೆಂದೇ
ತಿರುಹಲು, ಹನುಮಂತನಿಳಿದು ನಮಿಸುತ್ತೆಂದಂ || ||೨೦೩||

ರಾಗ ಸೌರಾಷ್ಟ್ರ ಅಷ್ಟತಾಳ

ಮಂಗಲಮಹಿಮ ರಾಮನ ಪಾದದೆಡೆಯಿಂದ |
ಬಂದೆನಮ್ಮ | ಕೋಮ |
ಲಾಂಗ ಲಕ್ಷ್ಮಣದೇವ ಕಳುಹಿಸಿದ ಬಗೆಯಿಂದ |
ಬಂದೆನಮ್ಮ || ||೨೦೪||

ವಾತಸಂಭವ ಎನ್ನ ಮಾತೆ ಅಂಜನೆ ದೇವಿ |
ಬಂದೆನಮ್ಮ | ಭಾನು |
ಜಾತ ಎನ್ನೊಡೆಯ ಸಂಪ್ರೀತಿಯಿಂ ಕಳುಹಲು |
ಬಂದೆನಮ್ಮ || ||೨೦೫||

ಬಲುಬಲು ದೇಶವ ಕಳೆದೆಲ್ಲ ಹುಡುಕುತ್ತ |
ಬಂದೆನಮ್ಮ | ಇನ್ನು |
ಹಲವು ಮಾತೇಕೆ ಸಾಗರವ ಲಂಘಿಸುತಿತ್ತ |
ಬಂದೆನಮ್ಮ || ||೨೦೬||

ಕಂದ

ಎಂದಾ ಹನುಮನ ಮಾತಿಗೆ
ಚಂದ್ರಾನನೆ ಕಪಟವೆಂದು ಸುಮ್ಮನೆಯಿರಲಾ |
ಹಿಂದಾಗಿದ್ದುದನರುಹಿದ
ಡಿಂದರಿವಳೊ ಎಂಬ ಭ್ರಮೆಗೆ ಮತ್ತಿಂತೆಂದಂ || ||೨೦೭||

ರಾಗ ಕಾಂಭೋಜಿ (ಶಂಕರಾಭರಣ) ಏಕತಾಳ

ಚಿತ್ತಯಿಸಿ ದೇವಿ ನಿಮ್ಮ | ವರ್ತಮಾನವೆಲ್ಲ ಪೇಳ್ವೆ |
ಸತ್ಯವೊ ಅಸತ್ಯವೊ | ನೀವೇ ಬಲ್ಲಿರಿ || ಪಲ್ಲವಿ ||

ಧಾತ್ರಿಯೊಳಯೋಧ್ಯೆಯಲ್ಲಿ | ಪೃಥ್ವಿಪಾಲ ದಶರಥಂಗೆ |
ಸ್ವಸ್ತ್ರೀಯರು ಮೂವರು ಪ | ತ್ನಿಯರಹುದೆ ||
ಸತ್ವದಲ್ಲಿ ನಿಮ್ಮನು ಬಿ | ಲ್ಲೆತ್ತಿ ಜ್ಯೇಷ್ಠನಾದ ರಾಮ |
ಅರ್ತಿಲಿ ತಾ ಮಿಥಿಲೆಯಿಂದ | ತಂದುದಹುದೆ || ||೨೦೮||

ಜನಕನ ಮಾತಿಂಗೋಸುಗ | ದಿನಕರವಂಶಾಬ್ದಿಚಂದ್ರ |
ಘನತರವಾಗಿರುವ ಘೋರ | ವನಕೆ ಬರುವಾಗ ||
ಮನಸು ಸೊರಗಿ ನೀವು ಲ | ಕ್ಷ್ಮಣನು ಸಹಿತ ಮೂವರು |
ನೆಲಸಿದಂಥ ಪಂಚವಟೀ | ವನಸಮೀಪದಿ || ||೨೦೯||

ತರಿದು ಮೂಗ ರಕ್ಕಸಿಯ | ಖರದೂಷಣಾದ್ಯರ ಶಿರವ |
ಮರೆಸಿ ಬಂದ ಮೃಗವ ಕಂಡ | ಚ್ಚರಿಯದಿ ನೀವು ||
ತರಬೇಕೆಂದು ಪೇಳೆ ರಾಮ | ತೆರಳಿದಾಗಲಾ ರಾವಣ |
ಭರದಿಂದೆತ್ತಿ ನಿಮ್ಮನು ಅಂ | ಬರದ ಮಾರ್ಗದಿ || ||೨೧೦||

ಕರಗಿ ಸೊರಗಿ ಭಯದಿ ನೀವು | ಮರುಗುವಂಥ ಧ್ವನಿಯ ಕೇಳಿ |
ತ್ವರಿತದಿ ಬಂದಾ ಜಟಾಯು | ಭರಿತ ಶೌರ್ಯದಿ ||
ದುರಳಗಡ್ಡಗಟ್ಟಲಾಯ್ತು | ಸ್ಥಿರವನಿತ್ತ ಮೇಲಾಗಿಹ |
ಪರಿಯನೊರೆವೆ ಲಾಲಿಸಮ್ಮ | ಕರುಣವನಿಟ್ಟು || ||೨೧೧||

ರಾಗ ಕೇದಾರಗೌಳ ಅಷ್ಟತಾಳ

ಕುಂಜರಗಮನೆ ಕೇಳಾಮೇಲೆ ಶ್ರೀರಾಮ |
ಕಂಜದಳಾಯತಾಕ್ಷ ||
ಮಂಜುಳಕಾಯ ಲಕ್ಷ್ಮಣ ಸಹ ಖಗಕುಲ |
ಸಂಜೀವನನು ಕಂಡರು || ||೨೧೨||

ಅಂಜದೆ ನಿಮ್ಮ ರಾವಣ ಕೊಂಡು ಬಂದುದ |
ಮಂಜುಳಾಂಗರು ಕೇಳುತ್ತ ||
ನಂಜಾಯಿತಮೃತವೆಂದೆನುತಲೆ ಮರುದಿನ |
ಮುಂಜಾನೆ ಹೊರವಂಟರು || ||೨೧೩||

ಚಂದ್ರಗೆ ರಾಹು ಸೋಂಕಿದ ಹಾಗೆ ಶ್ರೀರಾಮ |
ಚಂದ್ರ ಲಕ್ಷ್ಮಣರಿರ್ವರು ||
ಒಂದೊಂದು ಕಡೆ ನಿಮ್ಮನರಸುತ್ತ ಬಂದು ಕ |
ಬಂಧನ ಪರಿಹರಿಸಿ || ||೨೧೪||

ಮುಂದೆಯ್ದಿ ಶಬರಿಗೆ ವರವಿತ್ತು ಸುಗ್ರೀವ |
ವೃಂದವ ಸಂತಯಿಸಿ ||
ಇಂದ್ರಜ ವಾಲಿಯ ಭಯದಿಂದ ಸುಗ್ರೀವ |
ನೊಂದುಕೊಂಡಿರ್ಪಾಗಲು || ||೨೧೫||

ಶರವೇದಮೂರ್ತಿಗಳವರು ಪಂಪಾಸರೋ |
ವರದೆಡೆಗೆಯ್ತರಲು ||
ತರಣಿನಂದನ ಕಂಡು ಕರೆಸಲವರು ಋಷ್ಯ |
ಗಿರಿಯ ಮೇಲಕೆ ಬಂದರು || ||೨೧೬||

ತಾಳೆಯ ಮರನೇಳ ತರಿದು ದುಂದುಭಿಯಟ್ಟೆ |
ಕಾಲಿಂದೊದ್ದೆಸೆದ ಮೇಲೆ ||
ವಾಲಿಯ ಕೊಂದು ಸುಗ್ರೀವಗೆ ಪಟ್ಟವ |
ಪಾಲಿಸಿ ನಮ್ಮೊಡನೆ || ||೨೧೭||

ಕಾಲವೇಳೆಯಲಿ ನಿಮ್ಮರಸಬೇಕೆನುತ ಭೂ |
ಪಾಲನಪ್ಪಣೆಯ ಕೊಟ್ಟ ||
ಏಳು ಮತ್ತೆಪ್ಪತ್ತು ಕೋಟಿ ನಾಯಕರು ಈ |
ರೇಳು ಲೋಕವ ತೊಳಲಿ || ||೨೧೮||

ಲೋಲಲೋಚನೆ ಸ್ವಯಂಪ್ರಭೆಯ ಪಟ್ಟಣದಿಂದ |
ಮೇಲೆ ಬಂದಲ್ಲಿ ಮತ್ತೆ ||
ಕೇಳಿ ಸಂಪಾತಿ ತೋರಿಸಿದ ಕಾರಣದಿಂದ |
ಬಾಲೆ ಇಲ್ಲಿಗೆ ಬಂದೆನು || ||೨೧೯||

ಮೇಲಾದ ಕಪಿಗಳು ಶರಧಿಯ ತಡಿಯಲ್ಲಿ |
ಬಾಳ ಚಿಂತಿಸುತಿಪ್ಪರು ||
ಜಾಲಮಾತಲ್ಲ ಜಾನಕಿ ಕೇಳೆಂದೆನುತಲೆ |
ಕಾಲಮೇಲಕೆ ಬಿದ್ದನು || ||೨೨೦||