ವಾರ್ಧಕ

ಈ ರೀತಿಯಿಂದ ಸ್ವಯಂಪ್ರಭಾನಗರವಂ
ಮೀರಿ ಬಳಿಕಲ್ಲಿಂದ ನಡೆತಂದರಂದು ಕಾ
ವೇರಿಯಮ್ಮನ ತೀರ ಬಳಿವಿಡಿದು ಬಂದಾ ಮೃಕಂಡುಮುನಿಗಭಿವಂದಿಸಿ |
ಸಾರಿದರು ತೆಂಕಮುಖವಾಗಿ ಬಳಿಕಲ್ಲಿರುವ
ವೀರಮುನಿ ಕಣ್ವನಾಶ್ರಮಕೆ ನಡೆತಂದಡವ
ನಾರು ನೀವೆಲ್ಲಿಗೈಯ್ದುವರೆಂದು ಕೇಳೆ ಜಾಂಬವನವನೊಳಿಂತೆಂದನು || ||೫೮||

ರಾಗ ಭೈರವಿ ಝಂಪೆತಾಳ

ದಶರಥನ ಸುತನರಸಿ | ಸೀತಾಂಗನಾಮಣಿಯ |
ದಶಕಂಠನೆಂಬುಸುರ | ಕದ್ದೊಯ್ದನಂತೆ ||
ಬಿಸಜಸಖಸುತನಾದ | ಸುಗ್ರೀವನೆಮ್ಮೊಡನೆ |
ಬೆಸಸಿ ಕಳುಹಿದನವಳ | ಹುಡುಕಬೇಕಂತೆ || ||೫೯||

ದೇಶ ದೇಶವ ತೊಳಲಿ | ದಣಿದೆವಲ್ಲದೆ ನಮಗೆ |
ಆ ಸೀತೆ ಕಣ್ಗೆ ಗೋ | ಚರಿಸಲಿಲ್ಲಯ್ಯ ||
ಮಾಸವೊಂದರೊಳೆಮಗೆ | ಹೋಗದಿದ್ದರೆ ಕಡೆಗೆ |
ಘಾಸಿಮಾಡುವ ನಮ್ಮ | ಭಾನುತನುಜಾತ || ||೬೦||

ಎತ್ತ ಪೋಗುವದೆಂದು | ಎಮಗೆ ತಿಳಿಯದೆ ನಿಮ್ಮ |
ಹತ್ತಿರಕೆ ಬಂದೆವಾವ್ | ಕಡುತವಕದಿಂದ ||
ಚಿತ್ತದಲಿ ತಿಳಿದು ದಯ | ವಿತ್ತು ನಮ್ಮುಳಿವಿಗೊಂ |
ದುತ್ತರವ ಕೊಡಬೇಕು | ಉತ್ತಮ ಮುನೀಂದ್ರ || ||೬೧||

ಇವರ ನುಡಿ ಕೇಳ್ದು ಮುನಿ | ಈ ದಾರಿಯಲಿ ಪೋಗಿ |
ಶಿವನು ದಯೆ ಮಾಡುವನು | ಶೀಘ್ರದಿಂ ನಿಮಗೆ ||
ಅವನಿಜೆಯ ದರುಶನವು | ಆಗುವುದು ನಿಮಗೆಂದು |
ಬಹುಮಾನದಲಿ ಹರಸಿ | ಕಳುಹಿಸಿದನವರ || ||೬೨||

ರಾಗ ಮಾರವಿ ಏಕತಾಳ

ಮುಂದೆ ನಡೆದು ಮಲಯಾಚಲದೆಡೆಗ | ಯ್ತಂದರು ಕಪಿವರರು ||
ಒಂದೇ ಬುದ್ಧಿಯೊಳಗೆ ಯೋಚಿಸಿದರು | ಮುಂದೇನ್ ಗತಿಯೆನುತ || ||೬೩||

ಇಂದಿಗೆ ದಿನ ಮೂರುಳಿದುವು ಭಾಸ್ಕರ | ನಂದನನಪ್ಪಣೆಗೆ ||
ಮಂದಗಮನೆಯನು ಕಾಣದೆ ಪೋದರೆ | ಕೊಂದಲ್ಲದೆ ಬಿಡನು || ||೬೪||

ವಚನ || ಇಂತೆಂದು ಒಬ್ಬೊಬ್ಬರು ಪ್ರಸಂಗಿಸಲಾಗಿ ಆಗಲಾ ಅಂಗದನು ಏನೆಂದನು ಎಂದರೆ –

ರಾಗ ತೋಡಿ (ಸಾಂಗತ್ಯ ) ರೂಪಕತಾಳ

ಹಿಂದೆ ನಮ್ಮಯ್ಯಗೂ ಭಾನುನಂದನನಿಗೂ |
ಒಂದಲ್ಲ ಮನಸು ತಮ್ಮೊಳಗೆ ||
ಅಂದಿನ ಹಗೆ ಬಿಡದೀಗ ಸೀತೆಯ ಕಂಡು |
ದಿಲ್ಲೆಂದರೇನ ಮಾಡುವನೊ || ||೬೫||

ಅಲ್ಲಿ ಆತನ ಕಯ್ಯ ಕೊಲಿಸಿಕೊಂಬುದಕಿಂತ |
ಇಲ್ಲಿಯೇ ಉಪವಾಸ ಬಿದ್ದು ||
ಇಲ್ಲ ಈ ಪ್ರಾಣವೆಂದೆನಿಪುದೇ ಲೇಸೆಂದು |
ಎಲ್ಲರ ಮುಂದೆ ಪೇಳಿದನು || ||೬೬||

ಅಂಗದನಿಂತೆಂದ ಮಾತ ಕೇಳುತ ಕಪಿ |
ಪುಂಗವ ಪರಮೇಷ್ಠಿಸುತನು ||
ಮಂಗಳ ಮಹಿಮ ಶ್ರೀ ರಾಮಚಂದ್ರನು ನಮ್ಮ |
ಭಂಗಿಸುವುದಕೊಪ್ಪುಗೊಡನು || ||೬೭||

ಕೊಂದರೂ ಕೊಲಲಿ ಕಾಯ್ದರೆ ಕಾಯಲಾ ರಾಮ |
ಚಂದ್ರನ ಪಾದದ ಬಳಿಯ ||
ಹಿಂದೆ ಜಟಾಯು ಪ್ರಾಣವ ಬಿಟ್ಟು ಸುರಪನ |
ಮಂದಿರ ಸೇರ್ದುದನರಿಯಾ || ||೬೮||

ಈ ತೆರದೊಳು ತಮ್ಮೊಳೊಂದೊಂದಾಲೋಚನೆ |
ಮಾತಾಡುತ್ತಿರುವ ವೇಳೆಯೊಳು ||
ಆತ ಜಟಾಯುವಿನಣ್ಣನೆಂದೆನಿಪ ಸಂ |
ಪಾತಿ ಬಂದಿವರ ಕೇಳಿದನು || ||೬೯||

ರಾಗ ತೋಡಿ ಅಷ್ಟತಾಳ

ಯಾರಯ್ಯ | ನೀವು | ಯಾರಯ್ಯ || ಪಲ್ಲವಿ ||

ಯಾರಯ್ಯ ನೀವೆಲ್ಲರೊಟ್ಟಾಗಿ ಸೇರಿ ಈ |
ಘೋರ ಕಾನನದೊಳು ಸುಮ್ಮನೆ ಕುಳಿತಿರ್ಪು | ದಾರಯ್ಯಾ || ಅನುಪಲ್ಲವಿ ||

ದಶರಥಸುತ ರಾಮನೆಂಬಾತನಾರು |
ಪುಸಿಯಲ್ಲ ಭಾನುನಂದನನೆಂದರೆಲ್ಲಿ ||
ದಶಕಂಠ ಜನಕನಂದನೆ ಸುದ್ದಿಯೇನು |
ವಶವಿಲ್ಲದಿನಿತು ಚಿಂತಿಸುವುದಿನ್ನೇನು || ||೭೦||

ತಮ್ಮ ತಾನೆನಗೆ ಜಟಾಯುವೆಂಬಾತ |
ನಿರ್ಮಲದಲಿ ಸತ್ತನೆಂದೆಂಬ ಮಾತ ||
ನಿಮ್ಮೊಳೆಂದವರಾರು ಅದ ಕೇಳ್ದುದೆಲ್ಲ |
ಒಮ್ಮೆಗೆನ್ನೊಡನೆ ವಿಸ್ತರಿಸಬೇಕಲ್ಲ || ||೭೧||

ವಸುಧೆಗುತ್ತಮವಾದಯೋಧ್ಯಾಪಟ್ಟಣದಿ |
ದಶರಥನೃಪನೆಂಬ ಧರಣಿಪಾಲಕಗೆ ||
ಕುಸುಮಗಂಧಿಯರು ಮೂವರು ಹೆಂಡಿರೊಳಗೆ |
ಅಸಮಸಾಹಸರು ನಾಲ್ವರು ಮಕ್ಕಳವಗೆ || ||೭೨||

ಪಿತನ ವಾಕ್ಯವ ಕೇಳಿ ಶ್ರೀರಾಮಚಂದ್ರ |
ಸತಿ ಸಹಿತಲೆ ಪಂಚವಟಿಯೊಳಿರೆ ಮುನ್ನ ||
ಕಪಟದಿ ದಶಕಂಠ ಕದ್ದೊಯ್ದ ಸತಿಯ |
ಚಪಲನೇತ್ರೆಯು ಕೂಗುತಿರಲು ದುಸ್ಥಿತಿಯ || ||೭೩||

ಮಡದಿಯ ಧ್ವನಿ ಕೇಳಿ ಮತ್ತಾ ಜಟಾಯು |
ತಡೆದು ಮಾರ್ಗದಿ ಹೋಗಗೊಡದೆ ಶುಭಕಾಯ ||
ಹೊಡೆದಾಡುತಿರೆ ಬಹು ಕಾಲಪರ್ಯಂತ |
ಕಡೆಗೆ ಮೋಸದೊಳವನ ಕೊಂದ ದಶಕಂಠ || ||೭೪||

ಕಾಮಿನಿ ವರವಿತ್ತ ಬಗೆಯಿಂದ ಶರಣ |
ರಾಮನ ಚರಣದೆಡೆಯೊಳಾಯ್ತು ಮರಣ ||
ಆಮೇಲೆ ನಮ್ಮರಸಿನ ಸ್ನೇಹ ಬಳಸಿ |
ಕಾಮಸನ್ನಿಭ ಇಂದ್ರಸುತನ ಸಂಹರಿಸಿ || ||೭೫||

ಸೇನಾಧಿಪತ್ಯವ ಸುಗ್ರೀವಂಗಿತ್ತು |
ಜಾನಕಿಯರಸಲೆಮಗೆ ವೀಳ್ಯವಿತ್ತು ||
ನಾನಾರಾಜ್ಯದೊಳೆಲ್ಲಿ ಹುಡುಕಿದರಿಲ್ಲ |
ಏನ ಮಾಡುವುದೆಂದೆಮಗೆ ಕಾಂಬುದಿಲ್ಲ || ||೭೬||

ವಾರ್ಧಕ

ಸಿರಿರಾಮಚಾರಿತ್ರಮಂ ಕೇಳ್ದು ಹಿಂದೆ ರವಿ
ಕಿರಣದುರಿಯಲಿ ಬೆಂದ ಗರಿ ಮತ್ತೆ ಮೂಡಿದವು
ಎರಡು ಪಕ್ಕದೊಳಿವರನೆಲ್ಲರಂ ಕುಳ್ಳಿರಿಸಿ ಶರಧಿತಡಿಯೊಳಗಿಳುಹುತ |
ಬೆರಳ ಸನ್ನೆಯಲಿ ತೋರಿಸಿದು ಲಂಕಾದ್ವೀಪ
ಪುರವದಲ್ಲಿಹುದೆಂದು ತೆರಳೆ ಸಂಪಾತಿ ಭೋ
ರ್ಗರೆವ ಶರಧಿಯ ಕಂಡು ಕಪಿನಾಯಕರಿಗೆ ವಾನರ ಶ್ರೇಷ್ಠನಿಂತೆಂದನು || ||೭೭||

ರಾಗ ದ್ವಿಜಾವಂತಿ ಏಕತಾಳ

ಕಂಡಿರೇ | ನೀವು | ಕಂಡಿರೇ ||
ಕಂಡಿರೇ ಸಮುದ್ರರಾಜ |
ಕೆಂಡದಂತುಬ್ಬಳಿಸುವುದ || ಪಲ್ಲವಿ ||

ಧರೆಯ ಪುಣ್ಯನದಿಗಳನ್ನು |
ಕರೆಸಿ ಬೆರಸಿಕೊಂಡುಬ್ಬಿಕೊಬ್ಬಿ |
ಮೊರೆವುದ | ಭೋ | ರ್ಗರೆವುದ || ||೭೮||

ಅಂಬರಕ್ಕೆ ಹಾರಿ ಮಗುಚಿ |
ಲಂಘಿಸುವುದಬ್ಬರ ಹೆಚ್ಚಿ |
ತೆರೆಗಳ | ಬಹು | ನೊರೆಗಳ || ||೭೯||

ಅಗಣಿತ ಪರ್ವತಂಗಳ |
ಮಿಗುವರಿವಂಥ ಮೀನ್ಗಳ |
ಹೊಳೆವುದ | ಬಾಯ | ಕಳೆವುದ || ||೮೦||

ಹೇಗೆ ದಾಂಟುವದೆಲ್ಲ |
ನಾಗಶಯನ ಬಲ್ಲ |
ತಿಳಿಯದು | ಪ್ರಾಣ | ಉಳಿಯದು || ||೮೧||

ವಚನ || ಇಂತೆಂದು ಜಾಂಬವನ ವಚನಮಂ ಕೇಳ್ದು ಹನುಮಂತನು ಏನೆಂದನು ಎಂದರೆ –

ರಾಗ ಕೇತಾರಗೌಳ ಝಂಪೆತಾಳ

ಇದಕೆ ಚಿಂತೆಗಳೇಕೆ ನಿಮಗೆ | ಸ್ವಾಮಿ |
ಪದುಮನಾಭನ ಕರುಣವಿಲ್ಲವೇ ನಮಗೆ || ಪಲ್ಲವಿ ||

ಜಾಂಬವನ ನುಡಿಕೇಳಿ ಬೆದರದುಬ್ಬೇರಿದನು |
ಜಂಭಾರಿಸುತತನಯ ನುಡಿದನೀ ಪಾಡೇನು |
ಕುಂಭಿನಿಯ ಕಿತ್ತು ಕಡೆಗಿರಿಸಹೇಳಿದರು ರವಿ |
ಬಿಂಬವನೆ ತುಡುಕಹೇಳಿದರೂ | ಸಮರ |
ಡೊಂಬಿಯಲಿ ಕಾಲಭೈರವನ ಕೆಡಹುವೆವು || ||೮೨||

ಹಾರುವೆವು ಶರಧಿಯನು ಅರೆನಿಮಿಷದೊಳಗೆ ಎದೆ |
ಹೋರುವೆವು ರಾವಣನ ಹತ್ತು ಶಿರಗಳ ದೆಸೆಗೆ |
ಬೀರುವೆವು ಶಾಕಿನೀ ಡಾಕಿನಿಯರ್ಗೌತಣವ |
ತೋರುವೆವು ರಕ್ತದೋಕುಳಿಯ | ಹಿಂದೆ |
ಸಾರುವೆವು ಕಂಡು ಕೈಮುಗಿದು ಜಾನಕಿಯ || ||೮೩||

ಶಿವನ ಕೈಲಾಸದಿಂದೋಡಿಸಲ್ ಪೇಳ್ ಕಮಲ |
ಭವನ ಪಟ್ಟವ ಕಿತ್ತು ಬದಲೊಬ್ಬಗಿರಿಸುವೆವು |
ದಿವಿಜಾಧಿಪತಿಯ ಇಂದ್ರತ್ವವನ್ನು ಕಳೆಯೆನ್ನು |
ಜವನ ಹೆಡ ಮುಡಿಕಟ್ಟಲೆನ್ನು | ಮಹಾ |
ರ್ಣವವ ದಾಟುವದಾವ ಗಣನೆ ನಮಗಿನ್ನು || ||೮೪||

ವಚನ || ಇಂತೆಂಬ ಅಂಗದಾದಿ ಪುಂಡಕಪಿಗಳೊಬ್ಬೊಬ್ಬರ ಪರಾಕ್ರಮವಂ ಕೇಳ್ದಾ
ಜಾಂಬವರು ಹನುಮಂತನೊಡನೆ ಏನೆಂದರು ಎಂದರೆ –

ರಾಗ ಮಧ್ಯಮಾವತಿ ಅಷ್ಟತಾಳ

ನೀನೆ ಕಲಿ ಹನುಮ | ನಮ್ಮವರೊಳು |
ನೀನೇ ಕಲಿ ಹನುಮ || ಪಲ್ಲವಿ ||

ನೀನೇ ಕಲಿಯು ನಮ್ಮ ವಾನರರೊಳಗೆಲ್ಲ |
ಸಾನಂದದಿಂದ ಸಾಗರವ ದಾಟುವುದಕ್ಕೆ || ||೮೫||

ಬಣಗುರಕ್ಕಸ ರಾ | ವಣನ ಪಟ್ಟಣವೆಲ್ಲ |
ಅಣುರೂಪಿನಲಿ ಮನೆ | ಮನೆಯ ಹುಡುಕಲಿಕ್ಕೆ || ||೮೬||

ಕೊಂಕದೆ ಕೊನರದೆ | ಲಂಕೆಯೊಳ್ಸಿಲುಕದೆ |
ಪಂಕಜಮುಖಿ ಸೀತೆ | ಯಂ ಕಂಡುಬರಲಿಕ್ಕೆ || ||೮೭||

ಕೆಟ್ಟರಕ್ಕಸರಡ್ಡ | ಗಟ್ಟಿ ಬಂದವರನ್ನು |
ಕುಟ್ಟಿ ಲಂಕಾಪಟ್ಣ | ಸುಟ್ಟು ಬರುವುದಕ್ಕೆ || ||೮೮||

ವಾರ್ಧಕ

ಎಂದ ಜಾಂಬವರ ನುಡಿಕೇಳ್ದು ಬೊಬ್ಬಿರಿದು ಅಜ
ನಂದನಗೆ ಕೈ ಮುಗಿಯುತಾಕ್ಷಣವೆ ಚಿಗಿದಾ ಮ
ಹೇಂದ್ರಪರ್ವತವೇರಿ ನಾಲ್ದೆಸೆಯ ನೋಡಿದಂ ಸಿಂಧು ಭೋರ್ಗುಡಿಸುತಿಹುದ |
ಇಂದುಶೇಖರ ಕಮಲಬಂಧುವಿಂದ್ರಾದಿ ಸುರ
ವೃಂದ ಶಾರದೆ ಗೌರಿ ಗಣಪ ಮೊದಲಾಗಿ ರಘು
ನಂದನನ ಧ್ಯಾನಿಸುತ ಪುಟನೆಗೆದು ಹಾರಿದಂ ಮೂಲೋಕ ತಲ್ಲಣಿಸಲು || ||೮೯||

ಒದೆದು ಗಗನಾಂಗಣಕೆ ಲಂಘಿಸುವ ಭರಕಾಗ
ಹದಿನಾಲ್ಕು ಲೋಕವಲ್ಲಾಡಿದುದು ನೆಲವದಿರಿ
ತುದಧಿ ಕಂಪಿಸಿತಷ್ಟಗಜ ಕೂರ್ಮ ಫಣಿರಾಜ ಮೊದಲಾದರೆದೆಗೆಟ್ಟರು |
ಬೆದರಿದರು ಸುರರು, ಮಾಯಕದಿಂದ ನಿರ್ಮಿಸಿದ
ಸುದತಿ ಬಂದಡ್ಡಗಟ್ಟಿದಡವಳ ಸದೆಬಡಿದು
ಉದರದೊಳಹೊಕ್ಕು ಛಾಯೆಯ ಸೀಳಿ ಮುಂದಿರುವ ಮೈನಾಕನಂ ಮನ್ನಿಸಿ || ||೯೦||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಹಾರಿದನು ಲಂಕೆಯನು ಬಿಟ್ಟೇ |
ಳ್ನೂರು ಯೋಜನ ಮುಂದೆಯೆಡದಲಿ |
ಸಾರಿದನು ತೃಣಬಿಂದು ಮುನಿಪನ | ಶಾಲೆಯೆಡೆಗೆ || ||೯೧||

ಊರ ಹೊಲಬನು ತಿಳಿಯದಲ್ಲಿ ವಿ |
ಚಾರಿಸಲು ಬೇಕೆನುತ ಮುನಿಯ ಪ |
ದಾರವಿಂದಕೆ ಕೈಯ ಮುಗಿದನು | ವೀರ ಹನುಮ || ||೯೨||

ಮಾತನಾಡಿಸಿಕೊಂಬೆನೆನುತಲಿ |
ಮತ್ತೆ ಸ್ತುತಿಸಿದ ಬಹಳ ದೈನ್ಯದಿ |
ವಾತಸಂಭವ ನುಡಿದನಾ ಮುನಿ | ನಾಥಗಂದು || ||೯೩||

ರಾಗ ಭೈರವಿ ಝಂಪೆತಾಳ

ಯಾವ ದೇಶಂಗಳಿವು | ಯಾವ ರಾಜ್ಯಾಂಗಳಿವು |
ನೀವಿಲ್ಲಿ ನೆಲೆಯಾಗಿ | ಇನ್ನೆಷ್ಟು ವರುಷ || ||೯೪||

ರಾವಣೇಶ್ವರನೆಂಬ | ರಕ್ಕಸನ ಪುರವೆಲ್ಲಿ |
ಯಾವ ದಿಕ್ಕಿನೊಳಿಹುದು | ಲಂಕಾಧಿನಗರ || ||೯೫||

ಕಾರ್ಯವುಂಟೆಮಗಲ್ಲಿ | ಕಳ್ಳರಕ್ಕಸನಲ್ಲಿ |
ತೋರಿಕೊಟ್ಟರೆ ತಿಳಿದು | ಬಹುಪುಣ್ಯಬಹುದು || ||೯೬||

ವಚನ || ಇಂತೆಂದು ಮುನಿಯ ಪಾದಕ್ಕೆ ಸಾಷ್ಟಾಂಗವಂದನೆಯಂ ಮಾಡಿ ಹೇಳಿಕೊಂಬಂಥಾ ಹನುಮಂತನ ಭಕ್ತಿಯಂ ಕಂಡು, ಈತನು ಮಹಾಸ್ವಾಮಿಕಾರ್ಯಸಂಗ್ರಹಿ, ಪರೋಪಕಾರಿ, ಅತಿಧೈರ್ಯಮಾನಿ, ಶರಣಶ್ರೇಷ್ಠನೆಂದು ತಿಳಿದು, ಈತನ ಸತ್ತ್ವವಂ ಪರೀಕ್ಷಿಸಬೇಕೆಂದು ಕಣ್ತೆರೆದು ಕಟಾಕ್ಷದಿಂ ನೋಡಿ ಹನುಮಂತನ ಕೂಡೆ ಆ ಮುನಿಶ್ರೇಷ್ಠ ಏನೆಂದನು ಎಂದರೆ –

ರಾಗ ಆನಂದನೀಲಾಂಬರಿ ರೂಪಕತಾಳ

ಕುರುಡನ ಕೈಗೆ ಕನ್ನಡಿಯೇಕೆ ಬಧಿರಗೆ |
ವರಸಂಗೀತಗಳ ಮಾತೇಕೆ ||
ಎರಡೂ ಕಾಲಿಲ್ಲದ ಹೆಳವಗೆ ಯಾತ್ರೆಯ |
ತಿರುಗಾಡುವ ಸುದ್ದಿಯೇಕೆ || ||೯೭||

ಮರಮರ ಚರಿಪ ವಾನರ ನಿನಗಾ ಲಂಕಾ |
ಪುರದರಸಿನ ಸುದ್ದಿಯೇಕೆ ||
ತಿರಿದುಂಬಾತನ ಮನ ಪಲ್ಲಕಿಯೇರುವ |
ತೆರನಂತಾಯಿತು ನಿನ್ನ ಮನಸು || ||೯೮||

ಏಳು ಸುತ್ತಿನ ಕೋಟೆ ಕಣಿವೆ ಹೆಜ್ಜರಿ ಸುತ್ತ |
ಕಾಳರಕ್ಕಸರ ಕಾಲಾಟ ||
ಮೇಲಾದ ಬ್ರಹ್ಮರಾಕ್ಷಸ ಭೂತಗಣಗಳ |
ಜಾಲವು ನುಸಿಹೋಗಗೊಡವು || ||೯೯||

ಮುನಿರಾಯ ಕೇಳಯ್ಯ ಹಿಂದು ಮುಂದಾದರೂ |
ತನುವಿದುಯೆನಗೆ ಶಾಶ್ವತವೇ |
ವನಜಸಂಭವ ಹಣೆಯೊಳು ಬರೆದಿಟ್ಟಂಥಾ |
ದ್ದನು ಮೀರಲಳವೆ ಜೀವರಿಗೆ || ||೧೦೦||

ಸ್ವಾಮಿಕಾರ್ಯದ ಮೇಲೆ ಸತ್ತರೆ ನೆನಸಿದ |
ಕಾಮಿತ ಕೈಲಾಸವಹುದು ||
ಆ ಮಾತು ನಿಮಗೇಕೆ ದಶಕಂಠನಿರುವಂಥ |
ಸೀಮೆ ತೋರಿಸಿದರೆ ಸಾಕು || ||೧೦೧||

ರಾಗ ಘಂಟಾರವ (ದೇಶಿ) ಅಷ್ಟತಾಳ

ಕಪಿವರಾ ವೀರ ಕೇಳೆನ್ನ ಮಾತ |
ಗುಪಿತದಿಂ ಬಹುಕಾಲವಾಯಿತು | ತಪವ ಮಾಡುವೆವಿಲ್ಲಿ ನಾವ್ || ||೧೦೨||

ತಲೆಯಿಂದ ಜಡೆಯಿಳಿದು ಪಾತಾಳಕ್ಕೆ |
ಬೆಳಸುಕೊಂಡಿದೆ ಬೇರುವರಿದಿದೆ | ಎಳಸಲಾರದು ಶಕ್ತಿಗೆ | ||೧೦೩||

ವೃದ್ಧರು ನಾವು ಏಳಲಾರೆವು ನಮ್ಮ |
ಉದ್ದ ನೆಗಹಲು ರಾವಣೇಶ್ವರ | ನಿದ್ದ ಠಾವನು ತೋರ್ಪೆವು || ||೧೦೪||

ಎಂಬ ಮಾತಿಗೆ ಎರಡೂ ತೋಳ್ಪಿಡಿದಿತ್ತಿ |
ಅಂಬರಕೆ ನೆಗಹಲ್ಕೆ ಕಮಲಜ | ಶಂಭು ತಾ ಬೆರಗಾಗಲು || ||೧೦೫||

ತೋರೆಲಾ ಮುನಿ ಲಂಕಾಪಟ್ಟಣವನ್ನು |
ಹಾರಿದನು ಹನುಮಂತ ಲಂಕೆಯ | ನೇರಿದನು ಮಹಾದುರ್ಗವ || ||೧೦೬||

ನಿಲ್ಲೆಲೋ ಕಪಿಯೆನುತ ಬಾಗಿಲ ಬಳಿ |
ಯಲ್ಲಿ ತಡೆವಾ ಖುಲ್ಲ ರಕ್ಕಸ | ರೆಲ್ಲರನು ಸದೆಬಡಿಯುತ || ||೧೦೭||

ಹೊಕ್ಕನಾ ಲಂಕಾ ಪಟ್ಟಣದೊಳಗುಳ್ಳ |
ರಕ್ಕಸರು ಘೋರಿಡುವ ನಿದ್ರೆಯ | ಗಕ್ಕಸದ ಭರವೀಕ್ಷಿಸಿ || ||೧೦೮||

ಅಲ್ಲಲ್ಲಿ ರಾತ್ರಿ ತಿರುಗಾಡತಿಹ ವೇಳೆ |
ಯಲ್ಲಿ ಲಂಕಿಣಿಯೆಂಬ ದಾನವಿ | ಬಲ್ಲಿದಾತನ ತಡೆದಳು || ||೧೦೯||

ರಾಗ ಮಾರವಿ ಅಷ್ಟತಾಳ ದ್ರುತ

ಮಧ್ಯರಾತ್ರಿ ಕಾಲದಲ್ಲಿ | ಮಾತನಾಡದೆ ಸುಮ್ಮನೆ |
ಎದ್ದು ತಿರುಗಾಡುವಾತ | ನಾರೆಲೋ ಕಪಿ || ||೧೧೦||

ನಿದ್ದೆಯಿಲ್ಲ ಕಾಣೆಯೆನಗೆ | ನೀನು ಭೂತಂಗಳ ಹಾಗೆ |
ಉದ್ದುರುಟುತನವದೇಕೆ | ಯಾರೆ ರಾಕ್ಷಸಿ || ||೧೧೧||

ಭದ್ರ ಎನ್ನ ಕಾವಲಿಲ್ಲಿ | ಲಂಕಿಣಿಯೆಂಬಾಕೆ ನಾನು |
ಕ್ಷುದ್ರ ಕಳ್ಳ ಎನ್ನ ಕೈಗೆ | ಸಿಕ್ಕಿದೆಯಲ್ಲ || ||೧೧೨||

ಕಳ್ಳನಲ್ಲ ಕಾಣೆ ನಾನು | ಕಾಂತೆ ರಾಕ್ಷಸಿ ಕೇಳ್ ನೀನು |
ಒಳ್ಳೆ ವಾಯು ಪುತ್ರ ಹನುಮಂ | ತೆನ್ನ ಪೆಸರದು || ||೧೧೩||

ಹನುಮಂತನಾದರೇನು | ಕಣ್ಣು ಮೂರುಂಟೇನೊ ನಿನಗೆ |
ಇನ್ನು ನಾ ಬಿಟ್ಟೇನೆ ನಿನ್ನ | ತಿನ್ನದುಳಿವೆನೆ || ||೧೧೪||

ಎನ್ನ ಪಂಥ ನೋಡು ನಿನ್ನ | ಮಣ್ಣ ಮುಕ್ಕಿಸುವೆ ಮುನ್ನ |
ಹೆಣ್ಣು ಮೂಳಿ ದಾರಿಯ ಬಿ | ಟ್ಟತ್ತ ಸಾರೆಲೇ || ||೧೧೫||

ವಾಯುಪುತ್ರ ನೋಡು ಯೆನ್ನ | ಬಾಯೊಳಿದ್ದ ಪಲ್ಗಳನ್ನು |
ನೋಯದೆ ನುಂಗುವೆ ನಿನ್ನ | ಮಾತು ಬೇರುಂಟೇ || ||೧೧೬||

ನಾಯಿಗಳ ಹಾಗೊಂದೊಂದ | ಬಾಯಿಬಗುಳಿ ಪೆಟ್ಟತಿಂದು |
ಸಾಯಬೇಡತ್ತತ್ತ ತೊಲಗೆ | ಹೇಯ ರಾಕ್ಷಸಿ || ||೧೧೭||

ಇಷ್ಟು ಪಂಥವಾದ ಮೇಲೆ | ಬಿಟ್ಟು ನಿನ್ನ ನಾ ಪೋದರೆ |
ಕಷ್ಟವೆಂದು ಕೈಯೊಳೊಂದು | ಪೆಟ್ಟನಿಟ್ಟಳು || ||೧೧೮||

ಕಟ್ಟಮೂಳಿಯೆಂದು ಹನುಮ | ಮುಷ್ಟಿಯಿಂದ ತಿವಿಯಲವಳು |
ರಟ್ಟೆ ಮುರಿದು ಬಿದ್ದಳು ಹೆ | ಬ್ಬೆಟ್ಟದಂದದಿ || ||೧೧೯||

ವಾರ್ಧಕ

ಹಲವು ಪರಿಯಲಿ ಕಾದಿ ದಣಿದು ಲಂಕಾಲಕ್ಷ್ಮಿ
ತೊಲಗಿದಳು ರಾವಣಗೆ ಬಂತು ಕೀಳ್ದೆಸೆಯೆನುತ
ಬಳಿಕ ಹನುಮಂತನಣುರೂಪಿನಿಂದಲ್ಲಲ್ಲಿ ಸುಳಿದಾಡಿ ಹುಡುಕುತಿರಲು |
ಬಲವಂತ ನಿದ್ರೆಯಲಿ ಗೋರಿಡುತ ಮೆಯ್ಮರೆದು |
ಮಲಗಿರ್ದ ಕುಂಭಕರ್ಣನ ಸುಯ್ಲೊಳಗೆ ಸಿಕ್ಕಿ
ಸುಳಿ ಸುಳಿದು ವಜ್ರಕಂಬಕೆ ಬಡಿದು ಅಲ್ಲಿಂದ ಪೊರವಂಟು ದಣಿದನಂದು || ||೧೨೦||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಹತ್ತಿ ನೋಡಿದ ಗೋಪುರಂಗಳ |
ಸುತ್ತಿ ದಣಿದನು ಕೋಟೆಕೊತ್ತಳ |
ಪೃಥ್ವಿಜಾತೆಯ ಕಾಣದಿರೆ ಬೇ | ಸತ್ತ ಹನುಮ || ||೧೨೧||

ಮಾಣದಯ್ತಂದಲ್ಲಿ ಸೆರೆಮನೆ |
ಕೋಣೆಗಳ ಬೀಯಗದ ಮುದ್ರೆಯ |
ತ್ರಾಣದಲಿ ಕಿತ್ತೊಳಗೆ ಹೊಕ್ಕನು | ಜಾಣ ಹನುಮ || ||೧೨೨||

ಲೆಕ್ಕವಿಲ್ಲದ ಠಾಣೆ ಠಾಣೆಗ |
ಳಿಕ್ಕೆ ಹುಲಿಮುಖ ಗೋಪುರಂಗಳ |
ಮಿಕ್ಕ ಮಾಳಿಗೆಗಳೊಳು ಮೆಲ್ಲನೆ | ಹೊಕ್ಕು ಕಂಡ || ||೧೨೩||

ಜೋಲು ಕೂದಲ ಕಾಲನಿಗಳದ |
ತೋಳತೆಕ್ಕೆಯೊಳಾರ್ದು ಮಲಗಿದ |
ಖೂಳ ರಕ್ಕಸರನ್ನು ಕಾಣುತ | ಗೋಳುಗುಟ್ಟಿ || ||೧೨೪||

ರಾಕ್ಷಸರ ಮನೆ ಮನೆಗಳೆಸೆವ ಗ |
ವಾಕ್ಷದೊಳಗೊಳಹೊಕ್ಕು ಬಂದನು |
ಸೂಕ್ಷ್ಮದಲಿ ಮಲಗಿರುವ ದನುಜರ | ನೀಕ್ಷಿಸುತಲೇ || ||೧೨೫||

ಮುಸುಡ ಸರಿಸಕೆ ಬಂದು ಮೋರೆಯ |
ಮುಸುಕುಗಳ ತೆಗೆತೆಗೆದು ಬೆಳಗುವ |
ಮಿಸುನಿಯುಂಗುರದಿಂದ ಕಾಂಬನು | ಕುಶಲದಿಂದ || ||೧೨೬||

ಹರಿಗೆಯಮರಿಸಿದಂಥ ಕಂಗಳ |
ಕರಿಯ ತುಟಿಗಳ ಬಿರಿದ ಕೋರೆಯ |
ತೆರೆದ ಬಾಯ್ಗಳ ಸುರಿವ ಜೊಲ್ಲಿನ | ಹರಿಬ ಕಂಡ || ||೧೨೭||

ನರರ ತೊಗಲಿನ ಮಂಚದಲಿ ತಲೆ |
ಗಿರಿಸಿದಾನೆಯ ಹೆಗಲ್ಗಳಲಿ ಮರೆ |
ದೊರಗಿದಸುರರ ಕಂಡು ಹೇಸಿದ | ನಿರುಳು ಹನುಮ || ||೧೨೮||

ಹಟ್ಟಿಯಲಿ ನೋಡಿದನು ಕರುಗಳ |
ಕಟ್ಟುವದರೊಳಗರಸಿ ಬಚ್ಚಲು |
ಕೊಟ್ಟಿಗೆಗಳೊಳು ಸಹಿತ ಹುಡುಕಿದ | ಸೃಷ್ಟಿಸುತೆಯ || ||೧೨೯||

ತ್ರಿಣಯಸಖ ಮಧುಸೂದನಾಚ್ಯತ |
ವನಜಲೋಚನನೆಂಬ ಜಪಗಳ |
ನೆಣಿಪ ಶರಣಶ್ರೇಷ್ಠನ ವಿಭೀ | ಷಣನ ಕಂಡ || ||೧೩೦||

ಇಲ್ಲಿ ನೋಡಿದರೀತ ರಕ್ಕಸ |
ನಲ್ಲ ಗುಣವಿದೆಯೆನುತಿರಲು ಮ |
ತ್ತಲ್ಲಿ ಕಂಡನು ರಾವಣೇಂದ್ರನ | ವಲ್ಲಭೆಯನು || ||೧೩೧||

ರಾಗ ಮಧ್ಯಮಾವತಿ ಏಕತಾಳ

ಸೆಜ್ಜೆಯ ಗೃಹದಲಿ ಸಲಿಗೆಮಂಚದಲಿ |
ಪಜ್ಜಳಿಸುವ ದೀಪವೆರಡು ಥಟ್ಟಿನಲಿ |
ವಜ್ರದ ಹರಳ ಕೆತ್ತಿದ ಪರ್ಯಂಕದಲಿ |
ಸಜ್ಜುಗೊಂಡಿಹಸುಪ್ಪತ್ತಿಗೆಯ ಹಾಸಿನಲಿ || ||೧೩೨||

ದಶಕಂಠನಿರಲು ನಿದ್ರೆಯ ಭಾರದಲಿ |
ಶಶಿಮುಖಿ ಮಂಡೋದರಿಯ ಸಮೇಳದಲಿ |
ಕುಸುಮ ಗಂಧಿಯರು ಸಾವಿರದ ಸಂಖ್ಯೆಯಲಿ |
ಅಸುರನ ತೆಕ್ಕೆಯೊಳಿರೆ ಸಮ್ಮೋಹದಲಿ || ||೧೩೩||

ಹತ್ತು ತಲೆಯ ನೋಡಿದರೆ ಬೆರಗಾಗಿ |
ಹತ್ತಿರ ಬಂದಿಣುಕುತ ನಸುಬಾಗಿ |
ಸುತ್ತಲಿರುವ ಸತಿಯನು ಲೇಸಾಗಿ |
ಮತ್ತೆ ಕಾಣುತ ತಿರಿಗಿದ ತಲೆವಾಗಿ || ||೧೩೪||

ಜಾನಕೀದೇವಿಯನಿದರೊಳಗರಸಿ |
ಕಾಣಬೇಕೆನುತ ತನ್ನೊಳಗೆ ನಿಶ್ಚೈಸಿ |
ಠಾಣದೀವಿಗೆಯ ಜ್ಯೋತಿಗಳನೆ ತಣಿಸಿ |
ಮಾಣಿಕ್ಯದಂಥ ಉಂಗುರವನ್ನೆ ಹೊಳೆಸಿ || ||೧೩೫||

ಮೆಲ್ಲನೆ ಒಂದೊಂದೇ ಹೆಜ್ಜೆಯನಿಡುತ |
ಫುಲ್ಲಲೋಚನೆಯರ ಮೊಗನೋಡಿಕೊಳುತ |
ಗುಲ್ಲು ಮಾಡದೆ ಪರಾಂಬರಿಸುವೆನೆನುತ |
ಕಳ್ಳನಂದದಿ ಕಾಂತೆಯರೊಳಗರಸುತ || ||೧೩೬||

ಮುಂದೆ ಕಂಡರೆ ರಾವಣೇಂದ್ರನ ಮಡದಿ |
ಚಂದವಾಗಿರಲು ಚಿಂತಿಸಿದನು ಮನದಿ |
ಮಂದಗಮನೆ ಸೀತೆಯೆಂಬ ಕಾತರದಿ |
ಕಂದಿ ಕುಂದುತ ಭ್ರಮೆಗೊಂಡ ತತ್ ಕ್ಷಣದಿ || ||೧೩೭||