ವಾರ್ಧಕ
ಕೇಳುತಾಕ್ಷಣ ಕಣ್ಣೊಳಶ್ರುಗಳು ಜಾರಿದವು
ಹೂಳಿದಂತಸ್ತಾಪ ಶೋಕಜಲಮಯ ಶರಧಿ
ಗಾಳಿಗೊಡ್ಡಿದ ದೀಪದಿಂದ ತಲ್ಲಣಿಸಿ ರೋಮಾಳಿ ನೆಟ್ಟಗೆ ನಿಂತುದು |
ಬೀಳುಗೊಂಡುದು ಮನದ ಸಂಶಯವದರ್ಧ, ಬಲ
ಗಾಲ ತೊಡೆಯಲಿ ಮಚ್ಚೆವುಂಟಂತೆನಲ್ ನಾಲ್ಕು
ಪಾಲೊಳೊಂದುಳಿಯೆ ಚಂಚಲ ಕುರುಹುಗಳ ಬಳಿಕ ನೀಲಕುಂತಳೆಗೆಂದನು || ||೨೨೧||
ರಾಗ ಘೂರ್ಜರ ಅಷ್ಟತಾಳ
ಚಿತ್ರಕೂಟದಲ್ಲಿ ನೀವು ಜಲಕ್ರೀಡೆಯಾಡುವಾಗ |
ಎತ್ತಿ ಮುಂಗಯ್ಯಲಿ ನಿಮ್ಮ | ಬೀಸಾಡಲು |
ಅತ್ತದ್ದು ಸರಿಯೇನಮ್ಮ | ||೨೨೨||
ಮತ್ತೊಂದು ಗುರುತ ಕೇಳತ್ರಿಮುನೀಂದ್ರನ |
ಪತ್ನಿಯಾದನಸೂಯಾದೇವಿ | ಭೂಷಣವ ತಂ |
ದಿತ್ತುದು ಸರಿಯೇನಮ್ಮ || ||೨೨೩||
ಇನ್ನೊಂದು ಕುರುಹ ಕೇಳು ದಂಡಕವೆನಿಸುವಾ |
ರಣ್ಯದೊಳಗಸ್ತ್ಯಮುನಿ | ಚಾಪವನಿತ್ತು |
ಮನ್ನಿಸಿದ್ದಹುದೇನಮ್ಮ || ||೨೨೪||
ಅಂಗನೆ ಕೇಳೀ ಮಾತೆಲ್ಲ ಸುಳ್ಳಾದರೆ |
ಮಂಗಳಮಹಿಮ ರಾಮ | ಕಿರಿಬೆರಳಿಗಿ |
ಟ್ಟುಂಗುರವಹುದೇನಮ್ಮ || ||೨೨೫||
ಶಾರ್ದೂಲವಿಕ್ರೀಡಿತ
ಶ್ರೀರಾಮಂ ಕರಕಂಜದಂಗುಲಿಯೊಳಾಗಿಟ್ಟಿರ್ದ ಮುದ್ರಾಂಕಮಂ
ನಾರೀ ಜಾನಕಿ ಕಂಡು ವಿಸ್ಮಿತದೊಳಂ ಕಂಗಳ್ಗದನ್ನೊತ್ತುತ |
ಹೇರಾಳಾ ಸ್ರುತಶೋಕಬಿಂದುಜಲದಿಂ ಸರ್ವಾಂಗಮುಂ ತೋಯಲು
ಕಾರುಣ್ಯಾಂಬುಧಿ ರಾಮ ರಾಮ ಯೆನುತಂ ಸದ್ಭಾವದಿಂತೆಂದಳು || ||೨೨೬||
ರಾಗ ನೀಲಾಂಬರಿ (ಧ್ರುವ) ತ್ರಿವುಡೆತಾಳ
ಹರಿಣಾಂಕನಿಭಾನನ ಪೂರ್ಣ |
ಹರಿಶೋಭಿತ ಹರಿರಿಪುಗಮನ ||
ಹರಿವಂಶಜ ಕೀರ್ತಿವಿಶಾಲ |
ಹರಿ ಮಂಜುಳಕಾಯ ಮತ್ಪ್ರಿಯ || ||೨೨೭||
ಪರಮೇಶ್ವರ ಪಂಕಜಲೋಚನ |
ಪರಮಾನಂದ ಪರಮ ಪಾವನ |
ಸುರಸೇವ್ಯ ಭೂಸುರ ಭಾವಿತ |
ನಿರತಾಸುರಕುಲಸಂಹರಣ || ||೨೨೮||
ರಘುಕುಲಪುಂಗವ ರಾಜೇಶ್ವರ |
ಜಗದಾತ್ಮಕ ಜಗದಭಿರಾಮ |
ಸುಗುಣಾಬ್ಧಿ ಸುರಮುನಿ ಸೇವಿತ |
ಅಗಜಾಪತಿ ಪ್ರಿಯಸೋದರ್ಯ || ||೨೨೯||
ಶಾರ್ದೂಲವಿಕ್ರೀಡಿತ
ಎಂದಾ ರಾಮನ ಮುದ್ರೆಯುಂಗುರವ ತನ್ನಂಗಯ್ಯೊಳಿಟ್ಟೀಕ್ಷಿಸಿ
ಸೌಂದರ್ಯಾತ್ಮನ ದಿವ್ಯಮೂರ್ತಿಯದರೊಳ್ ಕಂಡಂತೆ ಕೊಂಡಾಡುತ |
ಕಂದಿರ್ಪಾನನಪಂಕಜಕ್ಕೆ ರವಿ ತಾ ಬಂದಂತೆ ಸಂತೋಷದಿಂ
ಮುಂದಾ ರಾಮನ ಕ್ಷೇಮವಾರ್ತೆಗಳನುಂ ಕೇಳುತ್ತ ನಿಂತಿರ್ದಳು || ||೨೩೦||
ರಾಗ ವೃಂದಾವನಸಾರಂಗ ಅಷ್ಟತಾಳ
ಕ್ಷೇಮವೇ ಹನುಮ | ನಮ್ಮವರಿಗೆ | ಕ್ಷೇಮವೇ ಹನುಮ || ಪಲ್ಲವಿ ||
ರಾಮ ಲಕ್ಷ್ಮಣರು ರಾಜ್ಯದಲಿ ಸುಸ್ಥಿರವಾಗಿ || ಅನುಪಲ್ಲವಿ ||
ಮದನನಂಗವ ಪೋಲ್ವ ರಾಮ | ತಮ್ಮ |
ಚದುರ ಲಕ್ಷ್ಮಣನು ನಿಸ್ಸೀಮ ||
ಮೊದಲಿನಂಗದ ಕಾಂತಿ ಕಳವಳಿಸುತ ಮತ್ತೆ |
ಹದಗುಂದಲಿಲ್ಲವಲ್ಲ | ಎನ್ನೊಳು ಮೋಹ |
ವದು ಕಂದಲಿಲ್ಲವಲ್ಲ | ನೀ ಬರುವ ದಿ |
ನದೊಳಗೆಂತಿರ್ದರೆಲ್ಲ | ನಮ್ಮವರಿಗೆ || ಕ್ಷೇಮ || ||೨೩೧||
ದಶಕಂಠ ಕಳವಿನೊಳ್ತಂದ | ಯಾರಿ |
ಗುಸುರುವೆನಧಿಕ ನಿರ್ಬಂಧ ||
ಪಶುಪತಿಯೊಬ್ಬನೆ ಬಲ್ಲನಲ್ಲದೆ ಬೇರಿ |
ನ್ನುಸುರುವೆನಾರ್ಗೆ ನಾನು | ಇನ್ನೊಮ್ಮೆ ಜೀ |
ವಿಸುವಂಗ ಕಾಣೆನಿನ್ನು | ನೋಡಿದೆಯಾ ರಾ |
ಕ್ಷಸ ಮಾಳ್ಪ ಬಗೆಗಳನ್ನು | ನಮ್ಮವರಿಗೆ || ಕ್ಷೇಮವೇ || ||೨೩೨||
ಭೂತಳದೊಳಗೆ ಯೆನ್ನಂಥ | ಕಡು |
ಪಾತಕರುಂಟೆ ಹನುಮಂತ ||
ಮಾತಾ ಪಿತರ ಬಂಧುಬಳಗವೆಲ್ಲವ ಬಿಟ್ಟು |
ಈ ತೆರನಾದೆನಲ್ಲ | ರಾಕ್ಷಸರ ವಿ |
ಘಾತಿಯ ಕಂಡೆಯಲ್ಲ | ಯೆನ್ನಯ ಪ್ರಾಣ |
ನಾಥನನಗಲ್ದೆನಲ್ಲಾ | ನಮ್ಮವರಿಗೆ || ಕ್ಷೇಮವೇ || ||೨೩೩||
ವಚನ || ಇಂತೆಂದು ಜಾನಕಿ ನುಡಿಯಲಾಗಿ ರಾಮಸೇವಕನಾದ ಹನುಮಂತ ತಾನೇನೆಂದನು ಎಂದರೆ –
ರಾಗ ಸಾರಂಗ ಅಷ್ಟತಾಳ
ಮನಸನೇನೆಂಬೆನಮ್ಮ | ಯಾವಾಗಲೂ |
ನೆನಸುವ ಗುಣದಿ ನಿಮ್ಮ ||
ಕನಸು ಮನಸಿನಲ್ಲಿ ಹಗಲಿರುಳೆನ್ನದೆ |
ಘನಚಿಂತೆಯಿಂದಿರ್ಪುದ | ಪೇಳುವೆನದ || ||೨೩೪||
ಅನ್ನಾಹಾರವನೊಲ್ಲನು | ಯಾರೊಡನೆಯೂ |
ಮನ್ನಿಸಿ ಮಾತನಾಡನು ||
ಕಣ್ಣಿಗೆ ನಿದ್ರೆ ಬಾರದೆ ಕಂಡ ಕಡೆಯಲ್ಲಿ |
ಬನ್ನ ಬಟ್ಟಡವಿಯೊಳಲೆದಿರ್ಪುದಲ್ಲದೆ || ||೨೩೫||
ಅನುಜ ಲಕ್ಷ್ಮಣನು ತಾನು | ಅಂತರಂಗದಿ |
ಕನಲಿ ಕಂಗೆಡುವುದನು ||
ಮನಕೆ ಮನವೆ ಸಾಕ್ಷಿಯಲ್ಲದೆ ಬೇರಿನ್ನು |
ಘನತೆಯ ನೀವ್ಯಾವ ಗುಣವ ವರ್ಣಿಸುವುದು || ||೨೩೬||
ತರಣೀನಂದನನೂ ತಾನೂ | ಏಕಾಂತದಿ |
ಕರೆದು ಈ ಗುರುತವನು ||
ಒರೆದು ರಾಘವ ಕಯ್ಯೊಳಿತ್ತ ಮುದ್ರಿಕೆಯನ್ನು |
ಬರುವ ದಿನದ ಸುದ್ದಿ ಇದು ಮತ್ತೆ ಬೇರೇನು || ||೨೩೭||
ತಿಂಗಳ ದಿವಸದಲಿ | ಸುದ್ದಿಯ ತಹು |
ದೆಂಬ ತಹಂಗಳಲಿ ||
ಉಂಗುರ ಕೈಗಿತ್ತು ಕಳುಹಿದ ಮೇಲೆ ಕೇ |
ಳಂಗನೆ ನಾನಿತ್ತ ಬಂದ ಪರಿಗಳನು || ||೨೩೮||
ರಾಗ ಘಂಟಾರವ ಝಂಪೆತಾಳ
ನಾಳೆ ಸಂಜೆಗೆ ಪೋಗಿ | ಪೇಳದಿದ್ದರೆ ಸುದ್ದಿ |
ನಾಲಿಗೆಯ ಕೊಯ್ಸುವದೆ | ನಮ್ಮೊಡೆಯನಾಜ್ಞೆ || ||೨೩೯||
ಗುರುತವನು ಕೇಳಿದರೆ | ಏನೆಂಬೆ ರಾಘವಗೆ |
ಅರಿತು ಯೆನ್ನೊಳು ಪೇಳು | ಅಂತರಂಗದಲಿ || ||೨೪೦||
ಕಂದ
ಹನುಮನ ಕಯ್ಯಲಿ ಚೂಡಾ
ಮಣಿಯಂ ತಾನೀವುತ್ತಲೆ ಭರವಸದಿಂದಂ |
ಮನಸಿನೊಳಿದ್ದುದನೆಲ್ಲವ
ನೆನಸುತಲಾ ಕಾಂತೆ ಪೇಳ್ದಳಂಜನೆಸುತಗಂ || ||೨೪೧||
ರಾಗ ಆನಂದಭೈರವಿ ಅಷ್ಟತಾಳ
ಏಸುದಿನ ಬೇಕೆನ್ನ ಪ್ರಾ | ಣೇಶನ ಕಾಂಬುದಕಿನ್ನು |
ಬೇಸರಿಕೆಯೆಂಬುದೇನ | ಹೇಳಲಿ | ಎಂತು | ತಾಳಲಿ || ||೨೪೨||
ಬೇಟೆಗಾರನಿಟ್ಟ ಬಲೆಯ | ಕೋಟಲೆಗೆ ಸಿಕ್ಕಿದ ಹುಲ್ಲೆ |
ಯಾಟದಂತೆ ಕಣ್ಣು ಕಣ್ಣು | ಬಿಡುವೆನು | ಎಂತು | ತಡೆವೆನು || ||೨೪೩||
ಬೆಕ್ಕಿಗಂಜಿ ಪಂಜರದಿ | ಸಿಕ್ಕಿದರಗಿಣಿಯಂತೆ |
ರಕ್ಕಸನಟ್ಟುಳಿಗಾಗಿ | ಬೆಂದೆನು | ಕಡು | ನೊಂದೆನು || ||೨೪೪||
ಗರುಡನ ಬಾಯೊಳಗೆ ಸಿಕ್ಕಿ | ದುರಗನಾಯಾಸದಿ ಸುಕ್ಕಿ |
ಸುರುಟಿದ ಹಾಗಾಯಿತೆನ್ನ | ಬಾಳುವೆ | ಏನ | ಹೇಳುವೆ || ||೨೪೫||
ಕಾಗೆಹಿಂಡಿನೊಳಗೆ ಸಿಕ್ಕಿ | ಕೋಗಿಲೆ ಬಾಯ್ ಬಿಡುವತೆರದೊ |
ಳೀಗ ಪಾಪಿ ಬಾಧೆಯಿಂದ | ನಿಲ್ಲೆನು | ತನುವ | ನೊಲ್ಲೆನು || ||೨೪೬||
ರಾಗ ಸೌರಾಷ್ಟ್ರ ತ್ರಿವುಡೆತಾಳ
ದೇವಿ ಚಿಂತಿಸಬೇಡ ರಾಘವ |
ದೇವನನು ಕರಕೊಂಡು ಬಂದೀ |
ರಾವಣನ ಸಂಹರಿಸದಿದ್ದರೆ | ಸೇವಿಯಲ್ಲ || ||೨೪೭||
ಎಂಟು ದಿವಸದಿ ನೋಡಿರೀ ದಶ |
ಕಂಠನಿಗೆ ಮದ್ದರೆಯದಿರೆ ವೈ |
ಕುಂಠವಲ್ಲಭ ರಾಮಚಂದ್ರನ | ಬಂಟನಲ್ಲ || ||೨೪೮||
ಚಿಂತೆ ಯೇತಕೆ ನಿಮಗು ರಾಮಗು |
ಅಂತರಂಗೊಂದೆನಿಸದಿದ್ದರೆ |
ಪಂಥ ಕೇಳಿದು ಮುಂದೆ ನಾ ಹನು | ಮಂತನಲ್ಲ || ||೨೪೯||
ಕಂದ
ಪಂಥದಿ ಬಲು ಧೈರ್ಯಂಗಳ
ನಂತರಿಸದೆ ಪೇಳ್ದು ದೇವಿಯಪ್ಪಣೆಯೆನಲಾ |
ಚಿಂತೆಯ ತಾಳುತ್ತತಿಹನು
ಮಂತನ ಬಿಡಲಾರದೊರೆದಳಂಬುಜನಯನೆ || ||೨೫೦||
ರಾಗ ದೇಶಿ ಅಷ್ಟತಾಳ
ದಿಟವೇನೋ ನೀನು ಕಡೆಗೆಂದ ಮಾತು |
ಸಟೆಯಾಗದಲ್ಲ ರಾಘವನಿಲ್ಲಿ ಬರುವುದು || ಪಲ್ಲವಿ ||
ಹಂಬಲಿಸುತ ಹಗಲಿರುಳು ನಾ ಬಲು ಚಿಂತೆ |
ಯೆಂಬ ಕತ್ತಲೆಯೊಳಗಿರೆ ನಿನ್ನ ನುಡಿ ರವಿ |
ಬಿಂಬ ಕಂಡಂತಾಯಿತು | ದುಃಖಗಳ ಕ |
ದಂಬವೆಲ್ಲವು ಹೋಯಿತು | ಸಾವಿರವೆಂದು |
ನಂಬಿಕೊಂಡಿರುವೆ ಹೀಗೆಂದು ಲೇಸಾಯಿತು || ||೨೫೧||
ನೆರೆಬೆಳಗಾದರೆ ಮಲಗಿರ್ಪಖಳರು ನಿ |
ನ್ನರಿತುಕೊಂಡೊಯ್ದು ಸಾವಿರ ನಿರ್ಬಂಧವ ಮಾಡಿ |
ಸೆರೆಮನೆಯೊಳಗಿಟ್ಟಾರು || ಅಲ್ಲದಡೆ ನಿ |
ಷ್ಠುರದಿ ನಿಗಳವಿಕ್ಯಾರು | ಮತ್ತೆನ್ನನೀ |
ಸರಮೆ ತ್ರಿಜಟೆಯರೆಚ್ಚರಿಸಿ ಪೇಳಿದರು || ||೨೫೨||
ಕಂದ
ತಪ್ಪದೆ ಬಹು ಧೈರ್ಯಂಗಳ
ನೊಪ್ಪದಿ ಪೇಳುತಿರೆ ದೇವಿಯಪ್ಪಣೆ ಕೊಡಲುಂ |
ಧೊಪ್ಪನೆ ಪೊರಡುತ ರಾವಣ
ಗಿಪ್ಪ ಮಹೋದ್ಯಾನವನವ ಕಂಡನು ಹನುಮಂ || ||೨೫೩||
ದ್ವಿಪದಿ
ಅಹಹ ಈ ವನ ನೋಡದವ ಮನುಜನಲ್ಲ |
ಬಹು ರಮ್ಯತರವಾದ ವನಸಿರಿಯನೆಲ್ಲ || ||೨೫೪||
ತೋಟ ವನಕೆರೆ ಬಾವಿ ತೆಂಗು ದಾಳಿಂಬ |
ಮೀಟಾದ ಮಾವು ಪಲಸಿನ ಸಾಲ್ಕದಂಬ || ||೨೫೫||
ಜಂಬುನೇರಳೆ ಮಾದ ಕದಳಿ ದ್ರಾಕ್ಷೆಗಳ |
ನಿಂಬೆ ಕಿತ್ತಳೆ ಬಿಲ್ವ ಖರ್ಜುರಾದಿಗಳ || ||೨೫೬||
ಜಾಜಿ ಮಲ್ಲಿಗೆ ಚಂಪಕಾದಿ ಪುಷ್ಪಗಳ |
ರಾಜಿಸುವ ಪೂಗ ಪುನ್ನಾಗ ಚೇದಿಗಳ || ||೨೫೭||
ಪಾರಿಜಾತಾಂಭೋಜ ಪೊಸತು ನೆಯ್ದಿಲೆಯ |
ಭೂರಿಸೌರಮ್ಯ ಗಿಳಿ ಹಂಸ ಕೋಗಿಲೆಯ || ||೨೫೮||
ಇಂದ್ರ ಪುರದೊಳಗೆಸೆಯುತಿರುವ ನಂದನವ |
ಚಂದದಿಂ ಸರಿಮಿಗಿಲೆನಿಪ್ಪ ಭೂವನವ || ||೨೫೯||
ರಾಗ ಕುರಂಜಿ ಅಷ್ಟತಾಳ
ಸಿಕ್ಕಿದುದೆನಗೊಂದು ತೋಟ | ಕಳ್ಳ |
ರಕ್ಕಸರಿಹರೊಂದು ಕಾಟ ||
ಮುಕ್ಕುವೆನಿದರೊಳಗಿದ್ದ ಪಣ್ಗಳನೆಂದು |
ಮಿಕ್ಕಿಮೀರುವ ಭೋರಿಡುತಕಿರಿ |
ಕಿಕ್ಕಿರೀಕಿರಿಗುಟ್ಟುತ್ತ || ||೨೬೦||
ಮರದಿಂದ ಮರಕೆ ಲಂಘಿಸಿದ | ಮಲ |
ಗಿರುವ ರಾಕ್ಷಸರ ಭಂಗಿಸಿದ ||
ಪರಿಪರಿ ಬಗೆಯ ಪಣ್ಗಳ ಕೊಯ್ದು ತಿಂದು ತಾ |
ಬರಿಯ ಗೊಂಚಲ ಮರದ ಕೊಂಬನು |
ಮುರಿಮುರಿದು ಬೀಸಾಡಿದ || ||೨೬೧||
ಬಾಳೆಯ ಗಿಡವೆಲ್ಲ ಹರಿದ | ರಸ |
ದಾಳಿ ಕಬ್ಬುಗಳ ಚಪ್ಪರಿದ ||
ಹೇಳಿ ನಿಮ್ಮಪ್ಪ ರಾವಣನ ಕೂಡೆನುತಲಿ |
ಧೂಳಿಪಟಲವ ಮಾಡಿ ವನವನು |
ಹಾಳುಗೆಡವಿದ ನಿಮಿಷದಿ || ||೨೬೨||
ಹೂವಿನ ಸಸಿಯೆಲ್ಲ ಕಿತ್ತ | ಕೊಳನ |
ತಾವರೆಗಳ ಕಲಕುತ್ತ ||
ಕಾವಲು ಮಲಗಿದ್ದ ಜಂಬುಮಾಲಿಯ ಗುದ್ದಿ |
ಜೀವ ಮಾತ್ರವನುಳುಹಿ ಕಳುಹಿದ |
ರಾವಣೇಶ್ವರನಲ್ಲಿಗೆ || ||೨೬೩||
ಅಕ್ಷ ಕುಮಾರನ ಬಡಿದ | ಕಳ್ಳ |
ರಾಕ್ಷಸರ್ಕಳ ಮಂಡೆಯೊಡೆದ ||
ಆ ಕ್ಷಣದಲಿ ಶಕ್ರಜಿತು ಬಲು ಬೆಡಗಿಂದ |
ಲಕ್ಷಗಜರಥ ತುರಗಸಹ ಬಂ |
ದೀಕ್ಷಿಸಿದ ಹನುಮಂತನ || ||೨೬೪||
ವಾರ್ಧಕ
ಕೊಲ್ಲು ಕಡಿ ತಿವಿ ಕುಟ್ಟು ಇರಿ ಬಾಣ ತೊಡು ಕಪಿಯ
ಹಲ್ಲ ಮುರಿ ಹಾಯ್ಕು ಹೊ ಕರುಳನುಗಿ ಬಗಿ ತಿನ್ನು
ಬಿಲ್ಲಿನಲಿ ಸೆಳೆ ಖಡ್ಗ ಕುಂತ ತೋಮರ ಪರಶು ಗದೆ ಕಣೆಯ ಕಂಪನಗಳು |
ಚೆಲ್ಲಬಡಿ ಕೆಡಹು ಹಾಯ್ಕೆನುತ ಶಸ್ತ್ರಗಳ ಬಿಡ
ಲಲ್ಲಿಗಲ್ಲಿಗೆ ಮುರಿದುವಲ್ಲದೇ ಹನುಮನದ
ಹುಲ್ಲಕಡ್ಡಿಗೆ ಬಗೆಯದಿರೆ ಇಂದ್ರಜಿತು ಬಳಿಕ ಎಲ್ಲರೊಡನಿಂತೆಂದನು || ||೨೬೫||
ರಾಗ ಆಹೇರಿ (ಪಂತುವರಾಳಿ) ಅಷ್ಟತಾಳ
ಸಾಕು ಬಿಡಿ ಬಿಡಿ ಸಾಯದೀ ಕಪಿ ಸುಮ್ಮ |
ನೇಕೆ ದಣಿದುಕೊಂಬಿರಿ || ಪಲ್ಲವಿ ||
ಅಂಬು ಕೊಳ್ಳದು ಬಾಣ ತಾಗದು ಬರಿಯ ಬಾಯ್ |
ಡಂಭಕಕ್ಕಿದು ಬೆದರದು ಕಾಣಿರೊ ||
ಕುಂಭಕರ್ಣನ ವಜ್ರ ರಥದಮೇಲೇರಿಸಿ |
ಕುಂಭಿನೀಪತಿಯಲ್ಲಿ ಗೊರೆಂದನು || ||೨೬೬||
ಅತ್ತಲು ಕಪಿ ಮೆಯ್ಯನೊಲೆದ ಕಾರಣದಿಂದ |
ಹತ್ತು ಸಾವಿರ ರಾಕ್ಷಸರು ಸತ್ತರು ||
ಒತ್ತಿ ಕುಂಭಸ್ಥಳ ಒಡೆದಾನೆ ಮಡಿದಂಥ |
ವಿಸ್ತಾರಗಳ ಶಕ್ರಜಿತು ನೋಡುತ್ತ || ||೨೬೭||
ಪೆಟ್ಟಿಗಂಜುವುದಲ್ಲಾಸಾಧ್ಯವೆತ್ತುವುದಕ್ಕೆ |
ಬೆಟ್ಟದ ಹಾಗಿದು ಬೆಳಕೊಂಡಿದೆ ||
ಕಟ್ಟಿಗೆಗಳ ತಂದೊಟ್ಟಿ ಬೆಂಕಿಯನಿಟ್ಟು |
ಸುಟ್ಟು ಬೂದಿಯಮಾಡಿರೋ ಯೆಂದನು || ||೨೬೮||
ನಗರವ ದಹಿಸುವಡಿದುವೆ ಮದ್ದೆಂದು ನಾ |
ಲಗೆ ಬಿಚ್ಚಿ ಬೆದರುವಂದದಿ ಕಾಣಿಸಿ ||
ಅಗಣಿತ ರಾಕ್ಷಸರುಗಳು ಖೋಖೋ ಯೆಂದು |
ನಗುವಂತೆ ರಥದ ಮೇಲಕೆ ಬಿದ್ದನು || ||೨೬೯||
ಭಾಮಿನಿ
ಕೆಲರು ಹಿಡಿದರು ಮಿಣಿಗಳಲಿ ಕೆಲ
ಕೆಲರುಡಿವ ಸರಪಣಿಗಳಲಿ ಬಲು
ಖಳರು ಅಚ್ಚಿನ ಕೊಂಬಿನಲಿ ಕೋಲಿನಲಿ ಕೀಲಿನಲಿ |
ಕೆಲರು ಅಶ್ವಾಳಿಗಳ ಗಳದಲಿ
ಕೆಲರು ವಜ್ರದ ಭಂಡಿಯಲಿ ಗಜ
ವೆಳೆದವಾ ಸುಂಡಿಲಲಿ ಖಳ ಹೆಮ್ಮಾರು ಕೈಗಳಲಿ || ||೨೭೦||
ರಾಗ ಶಂಕರಾಭರಣ (ಕುರಂಜಿ) ಅಷ್ಟತಾಳ
ಎಳೆದರು ರಥದಿ ವಾನರನ | ಬಲು |
ಬಲವಂತ ವೃಕ್ಷಸಂಚರನ |
ಛಲದಂಕನಿಭಶುಭಾಕರನ | ಮದ |
ಖಳಕುಲ ತಿಮಿರಭಾಸ್ಕರನ | ದಾರಿ |
ಯಲಿ ಹೋಗುವ ಮಾರಿಯನು ಕಟ್ಟಿತಂದು ಊ |
ರೊಳಗೆ ಬಿಟ್ಟಂತೆ ವೆಗ್ಗಳ ಪರಾಕ್ರಮನ || ||೨೭೧||
ಇತ್ತಡಿಯೊಳು ಮದ್ದಾನೆಗಳು | ಬಲು |
ಶಕ್ತಿಯಿಂದೆಳೆವ ಕೋಣಗಳು |
ಸುತ್ತಲು ಬಿಗಿದ ನೇಣುಗಳು | ಭೋರೆ |
ನುತ್ತ ಭೋರ್ಗರೆವ ವಾದ್ಯಗಳು | ಕೇ |
ಳುತ್ತಲಂಬರದೊಳು ನಿಂದು ನೋಡುವ ಸುರ |
ಮೊತ್ತವು ಕಂಡಂಜುವಂತೆ ಸಂಭ್ರಮದೊಳು | ಎಳೆದರು || ||೨೭೨||
ಮೇರುಪರ್ವತದ ಹಾಗಿರುವ | ಕಪಿ |
ವೀರನನೊಯ್ವ ಭೀಕರವ |
ಬಾರಿಬಾರಿಗೆ ಧ್ವನಿಗರೆವ | ಹತ್ತು |
ನೂರು ಸಾವಿರ ಭೇರಿ ಮೊರೆವ | ಮುಂದೆ |
ಕಾರಣವರಿತವರ್ನಾರೀಪುರುಷರು ಆ |
ಊರಿಂದೊಕ್ಕಲು ಬಿಟ್ಟು ಸೇರಿ ಮತ್ತೊಂದೂರ || ಎಳೆದರು || ||೨೭೩||
ಈ ವಿಭವದೊಳೆಳೆತಂದು | ಬಂದು |
ರಾವಣನಿದಿರಲಿ ನಿಂದು |
ದೇವೇಂದ್ರಜಿತು ತಂದೆಗಂದು | ಪೇಳ್ದ |
ಸೇವೆ ಇಂದಿಗೆ ಸಂದಿತೆಂದು | ಕಪಿ |
ಭಾವವ ನೋಡುತ್ತ ಠೀವಿಯ ಕಪಿಯೆಂದು |
ರಾವಣ ಕಡೆಮಂತ್ರಿ ಹನುಮನೊಳಿಂತೆಂದ || ||೨೭೪||
ರಾಗ ಪಂತುವರಾಳಿ ಏಕತಾಳ
ಯಾವ ದೇಶದಿಂದ ಬಂದೆ | ವೀರ ಕಪಿರಾಯ | ಮುಂದೆ |
ಯಾವಲ್ಲಿಗೆ ಪಯಣವಯ್ಯ | ಜಾಣ ಕಪಿರಾಯ || ಪಲ್ಲವಿ ||
ಹೆತ್ತ ತಾಯಿ ತಂದೆ ಯಾರೊ | ಇತ್ತ ಬಂದುದೇಕೆ ನೀನು |
ಕಿತ್ತು ವನವ ಕೆಡಿಸಿದಂಥ ಕಾರಣವೇನು ||
ಹತ್ತುಸಾವಿರ ರಾಕ್ಷಸರ ಅಕ್ಷಕುಮಾರರನ್ನು |
ಮೊತ್ತ ಸಹಿತ ಕೊಂದುದೇಕೆ | ಉತ್ತರವೇನಯ್ಯ || ||೨೭೫||
ಅರಮನೆ ಆಸ್ಥಾನವೆಂಬ | ಮರಿಯಾದೆಯನರಿಯದೆ ಈ |
ಪರಿಯ ಗರ್ವದಿಂದ ಕುಳ್ಳಿರುವದೇತಕೋ ||
ದೊರೆಗಳಪ್ಪಣೆಯಿಂದ ನಾ | ಇರದೆ ಕೇಳುವುದೀ ಮಾತು |
ಮರುಳುತನವ ಬಿಟ್ಟು ಎನ್ನೊಳರುಹು ಕಾರ್ಯವ || ||೨೭೬||
ರಾಗ ಮಧ್ಯಮಾವತಿ ಆದಿತಾಳ
ದಶಕಂಠನೆಂಬಾತ ನಾರು | ತೋರಬೇಕಯ್ಯ |
ಉಸುರುವೆನೆಲ್ಲ ನಿಮ್ಮೊಳು | ಕಾರ್ಯದಂತರ್ಯ || ಪಲ್ಲವಿ ||
ಜಗದೊಳು ಜನಕನ | ಮಗಳು ಸೀತೆಯ ಹತ್ತು |
ಮೊಗದಾತ ಕದ್ದು ತಂ | ದಿರುವನಂತೆ ||
ಜಗದೇಕವೀರ ರಾ | ಘವ ನೋಡಿ ಬರಲೆನ್ನ |
ಮಿಗೆ ಹರುಷದಿ ಕಳು | ಹಲು ಬಂದೆ ನಾನು || ||೨೭೭||
ಬೇಹಿನ ಚರರನ್ನು | ಬೆದರಿಸಿ ಕೊಲುವದು |
ಯಾವ ರಾಜ್ಯದ ರಾಜ | ನೀತಿಯಿದು ||
ನಾವು ಮಾಡಿರುವ ತ | ಪ್ಪೇನು ಕಟ್ಟುವುದಕ್ಕೆ |
ನೋವು ವೆಗ್ಗಳ ಮಾತು | ಬಾರದಯ್ಯ || ||೨೭೮||
ಬೇಡವೆಂದರೆ ಮಾತ | ಕೇಳದೆ ಎನಗಿಂಥ |
ಕೇಡುಮಾಡಿದ್ದೆನ್ನ | ಬಾಲವೈಸೆ ||
ರೂಢಿಪಾಲಕನುದ್ಯಾ | ನವನಿಂದು ನಿರ್ಮೂಲ |
ಮಾಡಿ ರಾಕ್ಷಸರನ್ನು | ಕೊಂದ ಪಾಪಿಯದು || ||೨೭೯||
ವಾರ್ಧಕ
ಮಾತಿನಲಿ ಜಾಣ ಕಪಿ ನೋಡಿದರೆ ಬಲವಂತ
ನೀತನಿಚ್ಛೆಯ ಬಾಲವಲ್ಲ ಗಡಯಿದರ ಸ
ತ್ತ್ವಾತಿಶಯವಸ್ತ್ರದಿಂ ಸುತ್ತಿ ಸುಡಬೇಕೆಂದು ದಶಕಂಠ ಕೋಪದಿಂದ |
ದೂತರಿಗೆ ನೇಮವಂ ಕೊಡಲಾಗ ಮನೆಮನೆಯ
ಪೀತಾಂಬರಾದಿಗಳ ಸಹ ತಂದು ಸುತ್ತಿದರು
ಆತುರದೊಳೆಣ್ಣೆಯೊಳಗದ್ದಿ ಕಿಚ್ಚಿಕ್ಕಿದರೆ ಜ್ಯೋತಿರ್ಮಯೋಕ್ತ ವಾಯ್ತು || ||೨೮೦||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಬಾಲತುದಿಯಲಿ ಮೊಳೆತು ರಂಜಿಸಿ |
ಮೇಲುವಾಯ್ದುದು ನಾಲ್ಕು ದೆಸೆಯಲಿ |
ಕಾಳಭೈರವ ಮುಖದ ವಹ್ನಿ | ಜ್ವಾಲೆಯಂತೆ || ||೨೮೧||
ಕೋವಿದರ ಮನೆ ಗೋಪುರಂಗಳ |
ನಾವಿಧದ ಚಾವಡಿಯ ಚೌಕಿಯ |
ರಾವಣನ ಕೊನೆ ಮೀಸೆಸಹಿತಲೆ | ಹೋಮಿಸಿದನು || ||೨೮೨||
ಹಾರಿದನು ಬಳಿಕುಪ್ಪರಿಗೆಗಳ |
ಕೇರಿಕೇರಿಯ ಜನರ ಮನೆಗಳ |
ತೋರಿದನು ಕೊಟ್ಟಗ್ನಿಗೌತಣ | ವೀರಹನುಮ || ||೨೮೩||
ಕರಗಿದವು ನವರತ್ನಖಚಿತದ |
ನೆರವಿಗಳ ಬೊಂಬೆಗಳು ಸಹಿತಲೆ |
ಪರಿಪರಿಯ ನೂತನದ ಪೀತಾಂ | ಬರಗಳೆಲ್ಲ || ||೨೮೪||
ಆ ಸುಲಂಕಾನಗರದೊಳಗೆ ವಿ |
ಭೀಷಣನ ಮನೆ ಹೊರತು ಅಗ್ನಿಯ |
ರಾಸಿಯಾದುದು ಪುರದ ರಚನೆಯ | ಮೀಸಲಳಿದು || ||೨೮೫||
ವಾರ್ಧಕ
ಕೆಡಿಸಿದಂ ನಂದನವ ನಗರವಂ ಬಾಲದಲಿ
ಸುಡಿಸಿ ಚೂಡಾಮಣಿಯ ಸಹಿತ ಹಾರಿದ ತಿರಿಗಿ
ಕಡಲೊಳದ್ದಿಯೆ ಕಿಚ್ಚ ನಂದಿಸುತ ಕಪಿಸೇನೆಯೆಡೆಗೆ ನಡೆತಂದು ಬಳಿಕ |
ನುಡಿದ ಲಂಕೆಯ ಪಾರುಪತ್ಯಮಂ ಎಲ್ಲವರು
ನಡೆದುದಿಂದಿನ ದಿವಸ ಉಳಿದೆವೆಂದೆನುತ ಜಗ
ದೊಡೆಯ ರಘುಪತಿಗೆ ಕಾಣಿಸಿಕೊಂಡು ಹನುಮಂತ ಪೊಡೆಮಟ್ಟು ಬಿನ್ನೈಸಿದ || ||೨೮೬||
ರಾಗ ರೇಗುಪ್ತಿ ಅಷ್ಟತಾಳ
ರಾಘವ ಸ್ವಾಮಿ ಲಾಲಿಸಿ ಕೇಳು ಪ್ರೇಮಿ |
ಈಗ ನಾವೆಲ್ಲ ಪೋಗಿ ದಣಿದಂಥ ಬಗೆಯನು || ಪಲ್ಲವಿ ||
ದೇಶ ವಿದೇಶವ ತೊಳಲಿ ಬಳಲಿ ಬಳಿ |
ಕಾ ಸ್ವಯಂಪ್ರಭೆಯ ಪಟ್ಟಣದಿ ಸುತ್ತಿ |
ಬೇಸತ್ತು ಕಣ್ವಮುನ್ಯಾಶ್ರಮವನು ದಾಟಿ |
ಆ ಶರಧಿಯ ತಡಿ ಯೋಚಿಸುತ್ತಿರುವಾಗ | ||೨೮೭||
ಶರಣ ಸಂಪಾತಿ ಲಂಕಾಪುರ ವೀಥಿಯ |
ಬೆರಳ ಸನ್ನೆಯಲಿ ತೋರಿಸಿದ ಮೇಲೆ |
ಶರಧಿಯ ದಾಂಟಿ ಲಂಕಾಪುರ ದ್ವಾರದಿ |
ಇರುಳು ಲಂಕಿಣಿಯ ಸಂಹರಿಸಿದ ಬಗೆಯನು || ||೨೮೮||
ಕುಂಭಕರ್ಣನ ಶ್ವಾಸದೊಳು ಸಿಕ್ಕಿಕೊಂಡೊಜ್ರ |
ಕಂಭಕ್ಕೆ ಬಡಿದು ಪೇಚಾಡಿ ಮತ್ತೆ |
ಹಂಬಲಿಸುತ ಹಗಲಿರುಳಶೋಕಾವನದಿ |
ಕುಂಭಿನೀತನುಜೆಯ ಕಂಡು ಕೈಮುಗಿದೆನು || ||೨೮೯||
ಅರಿತು ನಿಮ್ಮಪ್ಪಣೆ ಗುರುತವೆಲ್ಲವ ಪೇಳಿ |
ಕರತಲದೊಳಗೆ ಉಂಗುರವ ಕೊಟ್ಟೆ ||
ಬರುವೆನೆಂಟೇದಿನಕ್ಕೆ ಕರಕೊಂಡು ನಿಮ್ಮನೆಂ |
ದುರುತರದೊಳಗೆ ಭಾಷೆ ಕೊಟ್ಟು ಬಂದೆನು ಸ್ವಾಮಿ || ||೨೯೦||
ಬಳಿಕುದ್ಯಾನದಿ ಫಲಾಹಾರವ ಮಾಳ್ಪಾಗ |
ಖಳರೆನ್ನ ಹೆಡಗೈಯ ಬಿಗಿದರಯ್ಯ |
ಹಲವು ಶಸ್ತ್ರವ ಬಿಟ್ಟು ಕನಲಿ ಬಾಲವ ಸುಟ್ಟು |
ಉಳಿದು ಜೀವ ಮಾತ್ರ ಬಳಲಿ ಬಂದೆನು ದೇವ || ||೨೯೧||
ಭಾಮಿನಿ
ಅಣಿಯರಿತು ಬಿನ್ನೈಸಿ ಶೌರ್ಯಾ
ಗ್ರಣಿಯ ಪಾದಕೆ ನಮಿಸಿ ಚೂಡಾ
ಮಣಿಯ ಕೈಯಲ್ಲಿ ಕೊಡಲು ಜಯ ಜಯವೆಂದಿತಮರಗಣ |
ತ್ರಿಣಯಸಖ ಬೆರಗಾಗೆ ಕಪಿಸಂ
ದಣಿಯ ಮಧ್ಯದೊಳೆಸೆಯುತಿಹ ದಿನ
ಮಣಿಯಸುತ ಮೊದಲಾಗಿ ಸ್ತುತಿಸಿದರಂದು ರಾಘವನ || ||೨೯೨||
ರಾಗ ಢವಳಾರ ಏಕತಾಳ
ಜಯ ಜಯ ರಘುಕುಲನಂದನ |
ಭಯನಿವಾರಣ ಸುರವಂದನ || ಪಲ್ಲವಿ ||
ಅಂಬುಜಲೋಚನ ಅಘಕುಲನಾಶನ |
ಕಂಬುಕಂಧರ ಕಮನೀಯಕರ |
ತುಂಬುರುನಾರದ ಗೀತವಿನೋದ ತ್ರಿ |
ಯಂಬಕಸಖ ಹರಿ ನಮೋ ನಮೋ || ||೨೯೩||
ಭಾಸುರಭೂಷಣ ಬಹುಮುನಿ ಪೋಷಣ |
ದೂಷಣಖಳಕುಲ ನಾಶ ವಿಭೋ |
ಶ್ರೀಶ ಪರಮಗರುಡಾಸನ ಸರ್ವಲೋ |
ಕೇಶ ಜಾನಕೀಪತಿ ನಮೋ ನಮೋ || ||೨೯೪||
ಭಕ್ತವತ್ಸಲ ಭವರೋಗ ಸಂಹಾರಣ |
ಮುಕ್ತಿದಾಯಕ ಮಂಗಲಮಹಿಮ |
ಉತ್ತಮಪುರುಷ ಸಾಕೇತಪಟ್ಟಣವಾಸ |
ಪೃಥ್ವೀಪಾಲಕ ರಾಮ ನಮೋ ನಮೋ || ||೨೯೫||
ವಾರ್ಧಕ
ಅರಸುಮಕ್ಕಳು ಕೇಳಿ, ಆಗ ಚೂಡಾಮಣಿಯ
ಮರುತಸುತ ರಾಮಚಂದ್ರನ ಕೈಯ ಕೊಟ್ಟಲ್ಲಿ
ಭರಿತವಾಯಿತು ಸಂಧಿಯೆಂದು ವಾಲ್ಮೀಕಿಮುನಿವರನುಸುರ್ದ ಪುಣ್ಯಕಥೆಯ |
ಅರಿತು ಹೇಳುವ ಕೇಳ್ವ ಪುಣ್ಯವಂತರಿಗೆ ಬಹ
ದುರಿತಗಳ ಪರಿಹರಿಸಿ ಸಂತೋಷದಲಿ ಕಣ್ವ
ಪುರದೊಡೆಯ ಶ್ರೀಕೃಷ್ಣ ಸಕಲಭಾಗ್ಯವನಿತ್ತು ಪೊರೆವನನುಗಾಲ ಬಿಡದೆ || ||೨೯೬||
|| ಉಂಗುರಸಂಧಿ ಪ್ರಸಂಗ ಮುಗಿದುದು ||
Leave A Comment