ವಾರ್ಧಕ

ಕುಶನೆ ಕೇಳ್ ವಾಲಿಯಂ ಸಂಹರಿಸಿ ಕಿಷ್ಕಿಂಧ
ದೆಸೆಯಾಧಿಪತ್ಯಮಂ ಸುಗ್ರೀವನಿಂಗಿತ್ತು
ಕುಶಲದಿಂ ಶ್ರವಣಪರ್ವತಕೆ ನಡೆತಂದಲ್ಲಿ ಮಳೆಗಾಲವಂ ಕಳೆದರು |
ವಸುಧೆಪಾಲಕನೊಂದು ದಿನ ತನ್ನ ಮನದಿ ಚಿಂ
ತಿಸುತ ಜನಕಾತ್ಮಜೆಯ ನೆನೆನೆನೆದು ದುಃಖಿಸುತ
ವಿಸರಿಸುವ ಸೈರಣೆಯೊಳಂತರಂಗದಿ ಕರೆದು ಸೌಮಿತ್ರಿಗಿಂತೆಂದನು || ||೧||

ರಾಗ ಮಧ್ಯಮಾವತಿ ಏಕತಾಳ

ಪೋಗೋ ಸೌಮಿತ್ರಿ ಸುಗ್ರೀವ ಬರಲಿಲ್ಲ |
ಬೇಗದಿಂದಲೆ ಕರಕೊಂಡುಬಾರಯ್ಯ ||
ನಾಗಸನ್ನಿಭವೇಣಿಯ ರತಿ ಸುಖ |
ಭೋಗದಿಂದೆಮ್ಮನು ಮರೆತನೊ ರವಿಜಾತ || ||೨||

ತನ್ನ ಕಾರ್ಯಗಳಾಗುವ ಪರ್ಯಂತ ತಾ |
ನಿನ್ನನೆ ನೀನೆಯೆಂದೆನುತ ಮತ್ತೆ |
ಕನ್ನೆ ರಾಜ್ಯವು ತನ್ನ ತನಗೆ ಸಿಕ್ಕಿದ ಮೇಲೆ |
ಇನ್ನು ಹಂಗೇನೆಂದು ಮರೆತನೊ ರವಿಜಾತ || ||೩||

ರಾಗ ಸೌರಾಷ್ಟ್ರ ರೂಪಕತಾಳ

ಅಗ್ರಜ ವೀರ | ಅಣ್ಣ ವಾಲಿಯ |
ನಿಗ್ರಹಿಸಿದೆ | ನೀರಜಾಂಬಕ ||
ಸುಗ್ರೀವಂಗೆ ನಾ | ಸಾಲದಾಪೆನೆ |
ಉಗ್ರಮೂರುತಿ | ಕಳುಹು ಯೆನ್ನನೆ || ||೪||

ರಾಗ ಮಧ್ಯಮಾವತಿ ಏಕತಾಳ

ಕಾರ್ಯಸಂಗ್ರಹವಾಗಬೇಕವನಿಂದ |
ಶೌರ್ಯ ಬೇಡವೊ ಶಾಂತಚಿತ್ತದಿ ಪೋಗಿ ||
ಸೂರ್ಯನಂದನನೊಳು ಸೂಚನೆಯನು ಗೆಯ್ದು |
ಧೈರ್ಯಮಾನಿಯನಿಲ್ಲಿ ಕರಕೊಂಡು ಬಾ ಬೇಗ || ||೫||

ಶಾರ್ದೂಲವಿಕ್ರೀಡಿತ

ಇಂತೆಂದಗ್ರಜ ನೇಮವಂ ಕೊಡಲದಂ ಕೈಕೊಂಡು ತದ್ವಾಕ್ಯಮಂ
ಶಾಂತಾಕಾರನ ದಿವ್ಯಪಾದಯುಗಳಕ್ಕಭಿವಂದಿಸುತ್ತಾ ಕ್ಷಣಂ |
ಮಂತ್ರಾಸ್ತ್ರಂ ಘನಚಾಪ ಹಸ್ತದಿ ಬರಲ್ ಕಂಡಾಗ ತತ್ಕೋಪಮಂ |
ಕಾಂತಾರತ್ನಮೆನಿಪ್ಪ ತಾರೆ ಪೊಗುಳುತ್ತಿಂತೆಂದಳಾ ವೀರಗಂ || ||೬||

ರಾಗ ಮಧುಮಾಧವಿ ಏಕತಾಳ

ದಶರಥಸುತ ವೀರ ಧರಣಿಪಾಲಗಂಭೀರ |
ಕುಸುಮಸಾಯಕರೂಪ ಕೀರ್ತಿಕಲಾಪ || ಪಲ್ಲವಿ ||

ಧರಣಿಯಾಳುವ ಮಹಾದೊರೆಗಳು ನೀವು |
ಮರಮರ ಚರಿಪ ವಾನರರಲೈ ನಾವು ||
ಸರಿಯೆ ನಿಮ್ಮವರಿಗೆ ಶಾಂತನಾಗಯ್ಯ |
ತರಣಿನಂದನನೊಳು ಕೋಪವೇಕಯ್ಯ || ||೭||

ಹಿಮಕರಮುಖಿ ಕೇಳು ತಾರೆ ಸುನೀತೆ |
ಕಮಲಲೋಚನೆ ಪುಣ್ಯನಾಮೆ ವಿಖ್ಯಾತೆ ||
ಅಮರಾದಿಗಳು ಮೆಚ್ಚರಾಡಿ ತಪ್ಪಿದರೆ |
ಕಮಲನೇತ್ರನ ಕೂಡೆ ಕಪಟವಾಡುವರೆ || ||೮||

ಮಳೆಗಾಲವನು ದಾಟಿ ಬರುವೆನೆಂದೆನುತ |
ಇಳೆಯ ಪಾಲಕಗೆಂದು ಬಂದವನೀತ ||
ಅಳಿವ ಕಾಯದೊಳಿಂದು ಆಡಿ ತಪ್ಪಿದರೆ |
ಉಳಿವುದೆ ಕುಲಕೀರ್ತಿ ನೀ ಕೇಳು ತಾರೆ || ||೯||

ಪರದೇಶದೊಳಗಿದ್ದ ಕಪಿಗಳನೆಲ್ಲ |
ಕರೆಸಿಕೊಂಬುದಕಿಷ್ಟು ತಡವಾಯಿತಲ್ಲ ||
ಇರಬೇಕು ದಯೆಯೆಂದು ಇನಜನ ತಂದು |
ಚರಣಕೊಪ್ಪಿಸಿದಳು ಚಪಲಾಕ್ಷಿಯಂದು || ||೧೦||

ವಾರ್ಧಕ

ಗುಣದಿಂದೊಡಂಬಡಿಸಿ ಕೋಪಮಂ ತಣಿಸಿ ಲ
ಕ್ಷ್ಮಣನ ಕಾಣಿಸಲೆಂದು ಸುಗ್ರೀವ ತನ್ನ ಕಪಿ
ಗಣಸಹಿತಲೊಡಗೂಡಿ ಶೀಘ್ರದಿಂ ಪೊರವಂಟು ನಡೆತಂದರಾಕ್ಷಣದಲಿ |
ಹನುಮ ಜಾಂಬವ ಸುಷೇಣಾಂಗದಂ ನಳ ನೀಲ
ರಣಪರಾಕ್ರಮಿ ಗವಯ ದ್ವಿವಿದ ಮೊದಲಾದ ಸಂ
ದಣಿಸಹಿತ ಬಂದು ರಾಮನ ಚರಣಕೆರಗಿ ಲಕ್ಷ್ಮಣನಣ್ಣಗಿಂತೆಂದನು || ||೧೧||

ರಾಗ ಕಾಂಭೋಜಿ ಏಕತಾಳ

ಅಗ್ರಜಾ ಮಹಾನುಭಾವ | ಆಲಿಸೆನ್ನ ಬಿನ್ನಪವ |
ಸುಗ್ರೀವ ನಿನ್ನೆ ನಾನಲ್ಲಿ | ಪೋಗುವಂಥ ವೇಳೆಯಲ್ಲಿ || ||೧೨||

ಅಗ್ರಗಣ್ಯರೆಲ್ಲ ಕೂಡಿ | ಕೊಂಡು ತಮ್ಮೊಳು ಮಾತಾಡಿ |
ಶೀಘ್ರದಿಂದ ಬರಬೇಕೆಂದು | ಪಯಣಕನುವಾಗಿದ್ದರೆಂದು || ||೧೩||

ತಪ್ಪುವಾತನಲ್ಲ ಮಾತ | ತಮ್ಮವರೆಲ್ಲರ ಕರೆಸಿ |
ಒಪ್ಪವಿಟ್ಟುಕೊಂಬುದಕ್ಕೆ | ಇಷ್ಟು ತಡವಾಯಿತಂತೆ || ||೧೪||

ಕಂದ

ಅನುಜನ ವಾಕ್ಯವ ಕೇಳ್ದಾ
ವನಜಾಂಬಕ ಚಿತ್ತವಿಟ್ಟು ಸಂತೋಷದೊಳುಂ |
ಜನಕನ ಮಗಳನ್ನರಸಲು
ಅನುವೆಂತುಟೊ ನೋಡಿರೆಂದ ಸುಗ್ರೀವನೊಳುಂ || ||೧೫||

ರಾಗ ಅಹೇರಿ (ಆಹರಿ) ಏಕತಾಳ

ಭೂಮಿಪಾಲಶಿಖಾಮಣಿ ರಾಮಚಂದ್ರ | ದೇವ |
ತಾಮರಸನಯನ ಸಾಧು ಸುಗುಣಸಾಂದ್ರ ||
ಭೂಮಿಜಾತೆ ನಾಲ್ಕುದಿಶೆಯಲ್ಲಿದ್ದರೂ | ನಿಮ್ಮ |
ಕೋಮಲಾಂಗಿಯ ಪಾದದೆಡೆಗೆ ತಂದು ತೋರ್ಪೆವು || ||೧೬||

ಫುಲ್ಲನೇತ್ರೆ ಬ್ರಹ್ಮಲೋಕದಲ್ಲಿದ್ದರೂ | ನಿಮ್ಮ |
ವಲ್ಲಭೆ ಕೈಲಾಸಶಿಖರದಲ್ಲಿದ್ದರೂ ||
ಬಲ್ಲಿದ ವೈಕುಂಠಭವನದಲ್ಲಿದ್ದರೂ | ಇವ |
ರೆಲ್ಲರನ್ನು ಕಳುಹಿ ಸುದ್ದಿ ತರಿಸದುಳಿಯೆನು || ||೧೭||

ವಚನ || ಇಂತೆಂದು ಶ್ರೀರಘುವರಂಗೆ ಬಿನ್ನಹವಂ ಗೆಯ್ದು ಕಪಿವೀರರಂ ಹತ್ತಿರ ಕರೆದು  ಏನೆಂದನು ಎಂದರೆ _

ರಾಗ ಕಾಂಭೋಜಿ ಏಕತಾಳ

ವಾನರರೇ ಕೇಳಿರೆಲ್ಲ ಎನ್ನ ಮಾತನು |
ಜಾನಕೀದೇವಿಯನರಸಿ | ಕಾಣಬೇಕು ನೀವೆಲ್ಲರೂ || ಪಲ್ಲವಿ ||

ಉತ್ತರದೇಶಕೆ ಪೂರ್ವ | ಪಶ್ಚಿಮ ದಕ್ಷಿಣ ನಾಲ್ಕು |
ದಿಕ್ಕಿನೊಳು ದಶಾಸ್ಯನಿಪ್ಪ | ವರ್ತಮಾನ ಪೇಳಿರಯ್ಯ || ||೧೮||

ಅಷ್ಟದಿಕ್ಪಾಲಕರಿರುವ | ಪಟ್ಟಣದೊಳಿರಲು ಸೋಹ |
ದೃಷ್ಟಿಯಿಂದ ನೋಡಿ ಬಂದು | ಸೃಷ್ಟೀಶಂಗೆ ಪೇಳಿರಿಂದು || ||೧೯||

ಅಂಗದನು ಜಾಂಬವಂತ | ವಾಯುಸುತ ಹನೂಮಂತ |
ವಿಂಗಡದಿ ದೇಶಾದಿ ದೇ | ಶಂಗಳನ್ನು ತಿರಿದು ತಿರಗಿ || ||೨೦||

ತಿಂಗಳ ದಿನದೊಳು ರಾಮ | ನಂಗನೆಯಿದ್ದ ನಿದಾನ |
ವಿಂಗಡಿಸದಿದ್ದರೆ ನಾ | ಭಂಗಿಸುವೆ ನಿಮ್ಮನೆಲ್ಲ || ||೨೧||

ಕಂದ

ಇಂತಾ ಸಮಯದಿ ರಾಘವ
ನಂತರ್ಯದಿ ಕರೆದು ಪೇಳಿ ಕಿವಿಮಾತಿನೊಳ್ಹನು |
ಮಂತನ ಕಯ್ಯೊಳಗುಂಗುರ
ಮಂ ತಾನಿರಿಸುತ್ತ ಸೀತೆಕುರುಹಂ ಪೇಳ್ದಂ || ||೨೨||

ರಾಗ ಕೇದಾರಗೌಳ ಅಷ್ಟತಾಳ

ಭಾನುನಂದನನೆಂದ ಬಹಳ ಕಟ್ಟಾಜ್ಞೆಯ |
ವಾನರೇಶ್ವರರು ಕೇಳಿ ||
ದಾನವಾಂತಕನಂಘ್ರಿಗೆರಗಿ ತಮ್ಮೊಳಗಿದ್ದ |
ಸೇನೆಯ ವಿಂಗಡಿಸಿ || ||೨೩||

ಜಾನಕಿಯಮ್ಮನವರನು ಕದ್ದೊಯ್ದ ದ |
ಶಾನನನಾರೆನ್ನುತ ||
ನಾಮುನ್ನ ತಾಮುನ್ನೆಂದೆನುತ ಪಶ್ಚಿಮಕೆ ಸು |
ಷೇಣ ಚಾಲ್ವರಿದು ಬಂದ || ||೨೪||

ನಳ ನೀಲ ಗವಯ ಗವಾಕ್ಷ ಕೇಸರಿ ಶತ |
ಬಲ ಮುಂತಾದವರೆಲ್ಲರು ||
ಇಳೆಯನಂದನೆಯನ್ನು ಬಿಡದೆ ಮೂಡಣ ದಿಕ್ಕಿ |
ನೊಳು ಹುಡುಕಾಡಿದರು || ||೨೫||

ಇಳವರ್ತ ಬದರಿಕ ಕೇತುಮಾಲಾಖ್ಯ ಭೂ |
ತಳ ನವಖಂಡದೊಳು |
ಇಳೆಯ ಪರ್ವತಗಳ ಸಂದು ಮೂಲೆಯನೆಲ್ಲ |
ಸುಳಿದಾಡುತೈತಂದರು || ||೨೬||

ವರುಣ ವಾಯವ್ಯ ಕುಬೇರ ಈಶಾನರ |
ಪುರವನೊಂದುಳಿಯದಂತೆ |
ಧರಣಿನಂದನೆಯ ಸೋವರಸುತ್ತ ಕೇದಾರ |
ಗಿರಿಯ ಮೇಲಯ್ತಂದರು || ||೨೭||

ದಿಕ್ಕು ದಿಕ್ಕಿನೊಳಿಪ್ಪ ಅರಸುಬಲ್ಲಾಳರ |
ಸೊಕ್ಕನೆ ಮುರಿದಿಕ್ಕುತ್ತ ||
ಒಕ್ಕಲೊಂದುಳಿಯದೆ ಮನೆಮನೆಯಲಿ ಕಳ್ಳ |
ರಕ್ಕಸನನು ಕೇಳುತ್ತ || ||೨೮||

ಮಕ್ಕಳು ಹಿರಿಯರು ಜವ್ವನರಾ ಹೆಣ್ಣು |
ಮಕ್ಕಳೊಳ್ಬೆಸಗೊಳುತ್ತ |
ಅಕ್ಕರಿಂದಲೆ ಕಂಡುದಿಲ್ಲೆಂದು ಆಣೆಯ |
ತೆಕ್ಕೊಂಡರವರ ಕಯ್ಯ || ||೨೯||

ಪೂರ್ವ ಪಶ್ಚಿಮ ಉತ್ತರಾದಿ ದೇಶವನಾಳ್ವ |
ಊರ್ವಿಪಾಲಕರ ಕಯ್ಯ ||
ಸರ್ವಥಾ ದಶಕಂಠನಿಲ್ಲೆಂಬ ಓಲೆಯ |
ಗರ್ವದಿ ಬರೆಸಿಕೊಂಡು || ||೩೦||

ನಿರ್ವಹಿಸಿದರು ಪಾತಾಳಲೋಕಂಗಳೋ |
ಳಿರುವರ ಬೆಸಗೊಳ್ಳುತ್ತ ||
ಉರ್ವಿಯ ರಚಿಸಿದಾತನ ಕಂಡು ಕೈಲಾಸ |
ಪರ್ವತಕಡರಿದರು || ||೩೧||

ಪಾರ್ವತೀರಮಣನ ದರುಶನಕವನೆಂದೂ |
ಬರುವನೆಂಬುದನು ಕೇಳಿ |
ಶರ್ವನ ಹಿಡಿದು ರಾವಣನ ತೋರೆನಲವ |
ರಿರ್ವರೂ ನಸುನಕ್ಕರು || ||೩೨||

ವಚನ || ಅಗಳಾ ಸದಾಶಿವನು ಬಲಿಮುಖರ ಪರಾಕ್ರಮಕ್ಕೆ ಮೆಚ್ಚಿದವನಾಗಿ ಪಾರ್ವತೀದೇವಿಯೊಡನೆ ಏನೆಂದನು ಎಂದರೆ

ರಾಗ ಸೌರಾಷ್ಟ್ರ ಅಷ್ಟತಾಳ

ಕಂಡೆಯಾ ಗಿರಿಜಾತೆ ಕಪಿಗಳ ಸಾಹಸ |
ಕಂಡೆಯೇನೆ | ವರ |
ಪುಂಡರೀಕಾಕ್ಷ ಶ್ರೀರಾಮಚಾರಿತ್ರವ |
ಕಂಡೆಯೇನೆ || ||೩೩||

ಶಿರ ಮೊಗ ಹಣೆ ಹುಬ್ಬುಗಳು ಗಂಟಿಕ್ಕಿರುವುದ |
ಕಂಡೆಯೇನೆ | ಬಲು |
ಉರುತರಕೋಪಾಟೋಪದಿ ಹಲ್ಲ ಕಿರಿವುದ |
ಕಂಡೆಯೇನೆ || ||೩೪||

ದಶಕಂಠನನು ತೋರಿಸೆಂದೆಮ್ಮ ತಡೆವುದ |
ಕಂಡೆಯೇನೆ | ಮತ್ತೆ |
ಅಸುರ ರಾವಣನೆಲ್ಲಿ ತೋರೆಂಬ ಗರ್ವವ |
ಕಂಡೆಯೇನೆ || ||೩೫||

ವಚನ || ಇಂತೆಂದು ಪಾರ್ವತಿಗೆ ಪೇಳ್ದು ಮತ್ತಾ ಕಪಿನಾಯಕರೊಡನೆ ಏನೆಂದನು ಎಂದರೆ _

ಸಾಂಗತ್ಯ ರಾಗ ಪಂತುವರಾಳಿ ರೂಪಕತಾಳ

ಕಪಿನಾಯಕರು ಕೇಳಿ ನಾನೆಂಬಮಾತನು |
ಗುಪಿತವಲ್ಲಿದು ವೇದ ವಚನ ||
ಚಪಲನೇತ್ರೆಯನೊಯ್ದ ಖೂಳ ರಾವಣನ ಕಂ |
ಡಪರಿಲ್ಲ ನಮ್ಮ ಪರ್ವತದಿ || ||೩೬||

ನಿಪುಣರು ನೀವು ಸುಮ್ಮನೆ ಬಳಲುವದಿನ್ನು |
ಗುಪಿತದಿ ಹನುಮಂತ ಮುಂದೆ ||
ತಪನಕುಲೇಶನ ರಾಣಿ ಜಾನಕಿಯ ಕಂ |
ಡಪನಿದು ಪುಸಿಯಲ್ಲ ಮಾತು || ||೩೭||

ಭಾಳಲೋಚನನೆಂದ ನುಡಿಯನು ಕಪಿಗಳು |
ಕೇಳುತೆಲ್ಲರು ಕಯ್ಯ ಮುಗಿದು ||
ಬೀಳುಗೊಂಡಲ್ಲಿಂದ ನಡೆತಂದು ರವಿಜಗೆ |
ಪೇಳಿದರೀ ವೃತ್ತಾಂತಗಳ || ||೩೮||

ರಾಗ ಭೈರವಿ ಝಂಪೆತಾಳ

ಪಾತಾಳದೊಳಗಿಲ್ಲ | ಬ್ರಹ್ಮಲೋಕದೊಳಿಲ್ಲ |
ಆತ ದಶಕಂಠ ಕೈ | ಲಾಸದೊಳಗಿಲ್ಲ || ||೩೯||

ನವಖಂಡ ಭೂತಳವ | ನಾವ್ ತಿರಿಗಿ ನೋಡಿದೆವು |
ಭುವನದೊಳಗಾರೂ ಕಂ | ಡವರಿಲ್ಲವಂತೆ || ||೪೦||

ಭೂಲೋಕದರಸುಗಳು | ಬರೆದ ಬಿನ್ನೊತ್ತಲೆಯ |
ಓಲೆಗಳ ಮುಂದಿರಿಸಿ ಕೈಮುಗಿದರವರು || ||೪೧||

ಓಲೆಗಳ ತೆಗೆತೆಗೆದು | ವಾಚಿಸುತ ಮನದೊಳಗೆ |
ಭಾಳ ಚಿಂತೆಯ ತಾಳ್ದು | ಭಯಗೊಳುತಲಿರ್ದ || ||೪೨||

ವಾರ್ಧಕ

ಲವನೆ ಕೇಳಿಂತು ಸೀತೆಯನರಸಲೆಯ್ದಿ ಬಂ
ದವರ ನುಡಿಕೇಳಿ ಚಿಂತಿಸುತಲಿರಲತ್ತ ಪೋ
ದವರು ಮೂವರು ವಾಲಿಸುತ ಹನುಮ ಮೊದಲಾಗಿ ಉಳಿದ ಕಪಿಸೇನೆ ಸಹಿತ |
ತವಕದಲಿ ದಕ್ಷಿಣಕೆ ಮುಖವಾಗಿ ಬಹಳ ದೇ
ಶವ ಕಳೆದು ನಡೆತಂದರಲ್ಲಲ್ಲಿ ಹುಡುಕುತ್ತ
ಭುವನದೊಳಗತಿ ಪುಣ್ಯಕ್ಷೇತ್ರ ಬ್ರಹ್ಮಾಲಯಂಗಳ ಕಂಡು ನೆರೆನಮಿಸುತ || ||೪೩||

ರಾಗ ತುಜಾವಂತು ಅಷ್ಟತಾಳ

ಬಂದರು | ನಡೆ | ತಂದರು || ರಾಮ |
ಚಂದ್ರನ ಕಾಂತೆಯ ಕುರುಹ | ನೊಂದೊಂದನೆ ಬೆಸಗೊಳ್ಳುತ್ತ || ಪಲ್ಲವಿ ||

ಬಲು ಬಲು ದೇಶಗಳ ದಾಟಿ | ಬಳಲಿ ಬಂದರವರೀ ಪಾಟಿ |
ಹಲವು ಪರ್ವತಂಗಳ ಕಾ | ನನಗಳನೆ ಹುಡುಕಾಡುತ್ತ ||
ತೆಲುಗರಣ್ಯ ಪಾಂಡ್ಯರಾಜ್ಯ | ಮಲೆಯಾಳ ತುಳುವರ ಸೀಮೆ ||
ಗಳಲಿ ದಶಕಂಠ ಸೀತಾ | ಲಲನೆಯರ ಬೆಸಗೊಳ್ಳುತ್ತ || ||೪೪||

ಈ ತೆರದಲಿ ಬ್ರಹ್ಮ ಕ್ಷತ್ರ | ನೀತಿವಂತ ವೈಶ್ಯಶೂದ್ರ |
ನೂತನ ಪಂಚಾಲ ನಾನಾ | ಜಾತಿಯವರ ಮನೆಗಳಲ್ಲಿ ||
ರೀತಿಯರಿತುಕೊಂಡು ಬಹಳ | ನೀತಿಯಿಂದ ನುಡಿಸುತ ಪ್ರ |
ಖ್ಯಾತರು ನಡೆತಂದರವನೀ | ಜಾತೆಯನ್ನು ಬೆಸಗೊಳುತ್ತ || ||೪೫||

ರಾಗ ಕಾಂಭೋಜಿ ಝಂಪೆತಾಳ

ಈ ಕಡೆಯ ತಿರಿತಿರಿಗಿ ಅಲ್ಲಿ ಕಂಡರು ಕಪಟ |
ದಾಕೃತಿಯೊಳೆಸೆವ ಸರಸಿಯನು ||
ತಾವ್ಕುಡಿವೆವೆಂದು ಜಲದಾಸೆಯಿಂದಿಳಿಯೆ ಮಯ |
ಲೋಕವದು ಕಣ್ಗೆ ರಂಜಿಸಿತು || ||೪೬||

ಯಾರ ಪಟ್ಟಣಗಳಿವು ನೋಡಿದರೆ ಕಣ್ಗೆ ವಿ |
ಸ್ತಾರವಾಗಿದೆ ಚೆಲ್ವ ನಗರ ||
ಶ್ರೀರಾಮನರಸಿ ಜಾನಕಿಯ ಕದ್ದೊಯ್ದಸುರ |
ಚೋರನನು ಹುಡುಕಬೇಕಿಲ್ಲಿ || ||೪೭||

ಬಾಗಿಲನು ದಾಟಿಯೊಳ ಬಂದು ನೋಡಿದರೆ ಸೊಗ |
ಸಾಗಿರುವ ರಾಜಬೀದಿಗಳ ||
ನಾಗಸುರ ನರಲೋಕದಿಂದಲತಿಶಯವಿದನು |
ಹೇಗೆ ನಿರ್ಮಿಸಿದ ಮಯ ರಾಮಾ || ||೪೮||

ಉಪ್ಪರಿಗೆಕೋಣೆ ನಡುಮನೆ ಚೌಕಿ ಮಾಳಿಗೆಯ |
ಚಪ್ಪರದ ಚಾವಡಿಯ ಬೆಳಕ ||
ಇಪ್ಪತ್ತನಾಲ್ಕು ಕಂಭದ ನಡುವೆ ಮಂಟಪಗ |
ಳೊಪ್ಪುತಿದೆ ನೋಡಲಾಶ್ಚರ್ಯ || ||೪೯||

ಕಟ್ಟಾಣಿ ಮುತ್ತುಗಳ ಕೆತ್ತಿಸಿದ ಕಂಭಗಳ |
ಮುಟ್ಟಿದರೆ ಹೊವ ಬೊಂಬೆಗಳ ||
ಕಟ್ಟಿರುವ ವಜ್ರವೈಡೂರ್ಯ ಗೋಮೇದಿಕದ |
ಕಟ್ಟೆಗಳ ಜಗಲಿ ಗೋಡೆಗಳ || ||೫೦||

ಯಾರ ಮನೆಯೊಳಗೆ ನೋಡಿದರೆ ನವರತ್ನಗಳ |
ತೋರಣದ ಮೇಲುಗಟ್ಟುಗಳಾ ||
ಊರೂರು ಮನೆಮನೆಯ ಕೇರಿಕೇರಿಯೊಳೆಲ್ಲ |
ನಾರಿ ಜಾನಕಿಯ ಹುಡುಕಿದರು || ||೫೧||

ಎಲ್ಲಿ ನೋಡಿದರು ಜಾನಕಿಯ ಕಂಡಿಹೆನೆಂಬ |
ರಿಲ್ಲದಾಯ್ತಾ ಗುಹಾಂತರದಿ ||
ಬಲ್ಲಿದ ಕಪೀಶ್ವರರು ಬಂದ ದಾರಿಯ ತಪ್ಪಿ |
ಅಲ್ಲಲ್ಲಿ ತೊಳಲಾಡಿ ತಿರಿದು || ||೫೨||

ಮೋಸವಾಯಿತು ಹೊಲಬ ತಪ್ಪಿದೆವು ಮಯನಿರ್ಮಿ |
ತಾಸರೋವರದೆಡೆಗೆ ಬಂದು ||
ಈಸು ದಿನ ದಣಿದೆವೆಂದೆನುತ ಬಳಿಕಲ್ಲಿ ಕಂ |
ಡಾ ಸ್ವಯಂಪ್ರಭೆಯ ನುಡಿಸಿದರು || ||೫೩||

ರಾಗ ಕೇತಾರಗೌಳ ಅಷ್ಟತಾಳ

ನಳಿನಾಯತಾಂಬಕಿ ನಿಲ್ಲೊಂದು ನಿಮಿಷವೆ |
ನ್ನೊಳು ಮಾತನಾಡಬಲೆ ||
ಇಳೆಗೆ ಪೋಗುವ ದಾರಿ ಯಾವುದೆಂದರಿಯದೆ |
ಹೊಲಬದಪ್ಪಿರುವೆವಲ್ಲೆ || ||೫೪||

ಬಲುದಿನವಾಯಿತು ಬಂದಿಲ್ಲಿ ನಾವೀಗ |
ಹೊಳಲ ಸಂಚರಿಸುವಲ್ಲಿ ||
ಹೊಲಬದಪ್ಪಿದೆವೊಬ್ಬ ದೂತನ ಕೊಟ್ಟೆಮ್ಮ |
ಇಳೆಯತ್ತ ಕಳುಹು ಬಾಲೆ || ||೫೫||

ಜಾಂಬವಂತನ ನುಡಿ ಕೇಳಿ ಸ್ವಯಂಪ್ರಭೆ |
ಸಂಭ್ರಮದಲಿ ನಗುತ ||
ಡಂಭಕತನದಲಿ ಹಾಸ್ಯವ ಮಾಡಿದ |
ಳಂಬುಜದಳನಯನೆ || ||೫೬||

ತರುಣಿಯ ನುಡಿಗೆ ಕೋಪಿಸಿ ಹನುಮಂತ ಭೀ |
ಕರರೂಪನಾಗೆ ಕಂಡು ||
ಶರಣೆಂದು ಪೊಗಳಿ ಕಾಣಿಕೆಯಿತ್ತು ತಾ ಬಂದು |
ಧರಣಿಯ ತೋರ್ದಳಂದು || ||೫೭||