ಡಕ್ಕಲಿಗರಲ್ಲಿ ಅಜ್ಜ, ಅಜ್ಜಿ, ತಾಯಿ, ತಂದೆ, ಮಕ್ಕಳು ಕೂಡಿಕೊಂಡು ಒಂದೆಡೆಗೆ ವಾಸಿಸುತ್ತಾರೆ. ಕುಟುಂಬದ ಆಗು-ಹೋಗುಗಳನ್ನು ಕುಟುಂಬದ ಯಜಮಾನನೇ ನೋಡಿಕೊಳ್ಳುತ್ತಾನೆ. ಇವರಲ್ಲಿ ಹೆಚ್ಚಾಗಿ ಪಿತೃಪ್ರಧಾನ ಕುಟುಂಬ ರೂಢಿಯಲ್ಲಿರುವುದು ಕಂಡು ಬರುತ್ತದೆ. ವೃತ್ತಿಗಾಗಿ ಬೇರೆ ಬೇರೆ ಪ್ರದೇಶಗಳಿಗೆ ಹೋದಾಗ ಮನೆಯಲ್ಲಿ ವೃದ್ಧರನ್ನು ಬಿಟ್ಟು ಹೋಗುತ್ತಾರೆ. ಅವರು ದನ-ಕರು, ಆಡು-ಕುರಿ, ಕೋಳಿಗಳನ್ನು ನೋಡಿಕೊಳ್ಳುತ್ತಾರೆ. ಕೆಲವರಿಗೆ ತುಂಡು ಭೂಮಿಗಳಿದ್ದರೆ ಅವುಗಳನ್ನು ಇತರರಿಗೆ ಪಾಲಿನಿಂದ ಕೊಡುತ್ತಾರೆ. ಎರಡು ಎತ್ತುಗಳನ್ನು ಕಟ್ಟಿಕೊಂಡು ಒಕ್ಕಲುತನ ಮಾಡುವವರು ಬೆರಳೆಣಿಕೆಯಷ್ಟು.

ಗಂಡು ಮಕ್ಕಳು ಕುಟುಂಬದ ಸದಸ್ಯರ ಜೊತೆಗೆ ಊರೂರು ಅಲೆಯುವುದರಿಂದ ಅವರಿಗೆ ಮಾದಿಗರಿಂದ ಎತ್ತುವಳಿ ಮಾಡುವುದು ಮತ್ತು ಅವರ ಜೊತೆಗೆ ಸಂಬೋಧನೆ ಮಾಡುವುದು ಕಲಿತು ಕೊಂಡಿರುತ್ತಾರೆ. ತಮ್ಮ ಹಕ್ಕಿನ ಹಳ್ಳಿಗಳಲ್ಲಿರುವ ಕೇರಿಗಳನ್ನು ಗುರುತು ಮಾಡಿಕೊಳ್ಳುತ್ತಾರೆ. ಏಕೆಂದರೆ ನಿಗದಿತ ಹಳ್ಳಿಗಳ ಮಾದಿಗರು ಕೇರಿಯಿಂದ ಮಾತ್ರ ಎತ್ತಂಗಡಿ ಮಾಡಬೇಕೆಂಬುದು ಅವರ ನಿಯಮ.

ಕುಟುಂಬದ ಹಿರಿಯರು ಬಿಡುವಿನ ವೇಳೆಯಲ್ಲಿ ಮಕ್ಕಳ ಜೊತೆಗೆ ಬೇಟೆಗೆ ಹೋಗುತ್ತಾರೆ. ಬೇಟೆಯಾಡಿ ತಂದ ಮೊಲ, ಕವುಜಗ, ಪಾರಿವಾಳ, ಬುರಲಿ, ಮೀನು ಮುಂತಾದವುಗಳನ್ನು ಮಾರಿ ಹಣ ಪಡೆಯುತ್ತಾರೆ. ಹೆಣ್ಣು ಮಕ್ಕಳು ಕಾಡಿನಿಂದ ಹಣ್ಣು-ಕಾಯಿಗಳನ್ನು ತಂದು ಮಾರುವುದುಂಟು. ಕೆಲವು ಹೆಣ್ಣು ಮಕ್ಕಳು ಈ ಚಲುಗರಿಗಳಿಂದ ಚಾಪೆಗಳನ್ನು ಹೆಣೆದು ಮಾರುತ್ತಾರೆ.

ಕುಟುಂಬದ ಯಜಮಾನನು ಆಕಸ್ಮಾತ ನಿಧನ ಹೊಂದಿದರೆ ಆಗ ಯಜಮಾನತಿಯು ಆ ಕುಟುಂಬದ ಸಮಸ್ತ ಆಗು-ಹೋಗುಗಳಿಗೆ ಜವಾಬ್ದಾರಳಾಗುತ್ತಾಳೆ.