‘ಸಂಗೊಳ್ಳಿ ರಾಯಣ್ಣ ಬಿನ್‌ರಾಯಣ್ಣ ರೋಗಣ್ಣವರ, ಎಂದು ಬ್ರಿಟೀಶ ಅಧಿಕಾರಿಗಳು ಮತ್ತು ಬ್ರಿಟೀಶ ಎಜಂಟರಾಗಿ ಕೆಲಸ ಮಾಡಿದ ನಮ್ಮ ನೆಲದಲ್ಲಿ ಜನಿಸಿದ ಜನರು ಸಂಗೊಳ್ಳಿ ರಾಯಣ್ಣನ ಹೋರಾಟವನ್ನು ತಿಳಿದುಕೊಳ್ಳಲಿಲ್ಲ. ಅವನು ಜೀವಂತವಾಗಿರುವಾಗ ಹಾಡು ಕಟ್ಟಿ ಹಾಡಿದರು. ಅವು ಸಾರ್ವತ್ರಿಕವಾಗಿ ಜನಮನ ಮುಟ್ಟಿ ಮಮತೆ ಬರುವಂತೆ ಮಾಡಿದರು. ರಾಯಣ್ಣನ ಸಮಕಾಲೀನ ಸಂಗೊಳ್ಳಿ (ಸಂಗವಳ್ಳಿ) ಊರವನೇ ಆದ ಮೋದಿನ ಸಾಬ ‘ಕುಲದೀಪ ಸಂಗೊಳ್ಳಿ ರಾಯಣ್ಣ’ ಹತ್ತೊಂಭತ್ತು ಚೌಕಿನ ಲಾವಣಿಯನ್ನು ಬರೆದು ತಾನೇ ಸ್ವತಃ ಬೆಳಗಾವಿ-ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಾಡುತ್ತಿದ್ದನು. ಇವನನ್ನು ಹಿಡಿಯುವ ಸಂದೇಶ ತಿಳಿದಾಗ ತನ್ನ ಲಾವಣಿಯನ್ನು ಬೇರೆಯವರ ಮುಖದಿಂದ ತನ್ನ ಮುದ್ರಿಕೆ ಇಲ್ಲದೆ ಹಾಡಿಸುತ್ತಿದ್ದನು.

ಹೇಗಾದರೂ ಮಾಡಿ ರಾಯಣ್ಣನನ್ನು ಜೀವಂತ ಹಿಡಿಯಬೇಕೆಂದು ಆಂಗ್ಲರು ಹಂಚಿಕೆ ಹಾಕಿ ಇತರರಿಗೆ ಆಶೆಗಳನ್ನು ತೋರಿಸತೊಡಗಿದರು. ರಾಣಿ ಚೆನ್ನಮ್ಮನು ಈ ಎಲ್ಲ ವಿಷಯಗಳನ್ನು ತಿಳಿಯುತ್ತ ಚಿಂತೆಗೊಂಡಳು. ಸವಾಯಿ ಮಲ್ಲಸರ್ಜನನ್ನು ಬ್ರಿಟೀಶರು ಶೋಧಿಸಲು ಸುರು ಮಾಡಿದ್ದರು. ಆತನನ್ನು ಗೌಪ್ಯವಾಗಿ ರಾಯಣ್ಣನು ಹಂಡಿ ಬಡಗನಾಥದಲ್ಲಿ ಶಾಂತಾನಂದ ಗುರುಗಳ ಆಶ್ರಯದಲ್ಲಿರಿಸಿದನು. ಅರಮನೆಯ ವಿಷಯಗಳ  ಕಡೆಗೆ ಬಹು ಜನ ತಲೆಕೆಡಿಸಿಕೊಳ್ಳದೆ, ರಾಯಣ್ಣ ಹಾಗೂ ಅವನ ದಾಳಿಗಳ ಬಗ್ಗೆ ಆಲೋಚಿಸುತ್ತಿದ್ದರು. ಆಮಟೂರ ಬಾಳಪ್ಪ, ಬಿಚ್ಚಗತ್ತಿ ಚೆನ್ನಬಸಪ್ಪ, ಗಜವೀರ(ಗಜಬಾ) ಮುಂತಾದ ವೀರಾಧಿವೀರರು ರಾಯಣ್ಣ ಮತ್ತು ತಾವು ಹೋರಾಡುವ ಹೋರಾಟಗಳಿಗೆಲ್ಲ ಲಡಾಯಿ ಎಂದೇ ಹೇಳುತ್ತಿದ್ದರು. ಇದಕ್ಕೆ ಜನಪದರ ಒಂದು ಹೋಳಿ ಹಾಡು ವಿವರ ನೀಡುತ್ತದೆ.

ಪರಸಂಗ ಹೇಳತೀನ ಕೇಳ
ರಾಯಣ್ಣನ ಕಥೆಯ ಹೇಳತೀನ
ಅಮಟೂರ ಬಾಳಪ್ಪ ಮೊದಲ-
ಗೊಂಡ ಮಾಡ್ಯಾರ ಕಿತ್ತೂರ ಜ್ವಾಕಿ
ಇದ್ದರವರು ನೂರಾರು ಸರದಾರರಾs
ಅದರಾಗ ಗಜಬಾ ಎಂಬುವ ಮಹಾಸೂರಾ
ಯಾರ ಇವನು ವಿವರಿಸಿ ಹೇಳ? ||
ಕೂಡಿಸಿದರವರು ಸಾವಿರಾರ ದಂಡಿನವರಾ

ಕೂಡಿಕೊಂಡಾರ ಐದಾರು ಸಾವಿರ
ಮತ್ತ ಕುದುರೆಯ ಸರದಾರರಾs
ಕಿತ್ತೂರ ರಾಜ ಉಳಿಸುವದಕಾs
ಲಡಾಯಿ ಮಾಡ್ಯಾರ ಇಂಗ್ರೇಜಿಯವರ ಕೂಡಾ ಹತ್ತ-ಹನ್ನೆರಡಾs
ಕಡದ ಚಲ್ಲ್ಯಾರ ವಿಪರೀತ ಪಿರಂಗ್ಯಾರನಾs
ಗುಂಡ ಹೊಡದಾರೋ ಬಲ್ಲಾಂಗ ವಿಪರೀತಾs ||
ಲೆಕ್ಕಾ ಹೇಳ ತಮ್ಮಾ ನೀನಾ
s
ರಾಯಣ್ಣನ ಶೂರರದಾs ಮತ್ತ ವೀರರದಾs
ಕೊಡತೀನಿ ನಿನಗೆ ಹಣದ ಬಹುಮಾನ
ಒಡದ ಹೇಳೋ ಸತ್ಯುಳ್ಳ ಮಾನವಾs
ತಿಳಿಯದಿದ್ದರ ತಿರುಗಿ ಕೇಳೋ
ಹಾಡಿ ಹೇಳತೀನ ರಾಯಣ್ಣನ ಕಥೆಯಾs
ಮತ್ತs ಕಿತ್ತೂರ ಶೂರರ ಮಜಕೂರಾs ||

ಕಿತ್ತೂರ ಲಡಾಯಿ, ಚೆನ್ನಮ್ಮಾಜಿಯ ಚರಿತ್ರೆ, ರಾಯಣ್ಣ ಮತ್ತು ಅವನ ದಂಡಿನ ವೀರರನ್ನು ಇತಿಹಾಸ ಎಂದೂ ಮರೆಯುವುದಿಲ್ಲ. ತಮ್ಮ-ನಮ್ಮ ಸ್ವಾತಂತ್ಯ್ರದ ಬಗೆಗೆ ಪರಕೀಯರ ಕೂಡ ಹೋರಾಡಿ ಮಡಿದವರನ್ನು ಅದೆಂತು ಮರೆಯುವದು. ಅವರನ್ನು ನೆರೆದರೆ, ನಮ್ಮ ಇತಿಹಾಸ ಪರಂಪರೆ, ನಮ್ಮನ್ನು ಕಾಯುವುದು. ಇದಕ್ಕಾಗಿ ಅವರ ವೀರ ಕಾರ್ಯಗಳನ್ನು ಜನಪದರು ತಮ್ಮ ಹೃದಯವನ್ನು ಹಾಡು-ಕಥೆ-ಹೇಳಿಕೆಗಳ ಮೂಲಕ ತೆರೆದಿಟ್ಟಿದ್ದಾರೆ. ಇತಿಹಾಸಕ್ಕೆ ಬಲಿಷ್ಠ ಸಾಕ್ಷಿಯಾಗಿದ್ದಾರೆ.

ರಾಯಣ್ಣಿನಿಗೆ ಆಘಾತ

ರಾಯಣ್ಣನು ರಾಣಿ ಚೆನ್ನಮ್ಮಾಜಿ ತೀರಿಕೊಂಡ ಸುದ್ದಿಯನ್ನು ಕೇಳಿ, ಆ ಸಂದೇಶದ ಸತ್ಯಾಸತ್ಯತೆಯನ್ನು ತಿಳಿದು ಘಾಸಿಗೊಂಡನು. ರಾಯಣ್ಣ ಹಾಗೂ ಅವರ ದಂಡಿನವರು ತಣ್ಣೀರು ಕರೆದಿದ್ದರು. ರಾಣಿ ವೀರಮ್ಮನನ್ನು ಬೈಲಹೊಂಗಲದಿಂದ ಸ್ಥಳಾಂತರಿಸಿದ್ದು ತಿಳಿದು ಮತ್ತೆ ರಾಯಣ್ಣನಿಗೂ ಚಿಂತೆ ಆವರಿಸಿತು. ರಾಯಣ್ಣ ಎಲ್ಲಿ ರಾಣಿ ವೀರಮ್ಮನನ್ನು ಭೇಟ್ಟಿಯಾಗುವನೋ ಎಂಬ ಸಂಶಯದಿಂದ (೧೨.೨.೧೮೩೦) ಎರಡು ತುಕಡಿಗಳನ್ನು ಮಾಡಿ ಸೈನ್ಯ ಕಾವಲು ಮಾಡಲು ನಿಸ್ಭತ್‌ಎಚ್ಚರವಾಗಿದ್ದನು.

ಬೈಲಹೊಂಗಲದ ಸಮೀಪ ಇರುವ ಆನಿಗೋಳದಲ್ಲಿ ರಾಯಣ್ಣ ಬರುವನೆಂದು ಸಾವಿರದಷ್ಟು ಜನರು ಕೂಡಿದ್ದರೆಂಬ ದಾಖಲೆಗಳಿವೆ.

ಚಿಂತೆ-ಪಿತೂರಿ ಮತ್ತು ರಾಯಣ್ಣನ ಬಂಧನ

ರಾಯಣ್ಣನನ್ನು ಹಿಡಿದು ಕೊಟ್ಟವರಿಗೆ ಬಹುಮಾನ, ಇನಾಂ ಕೊಡುವುದಾಗಿ ಬ್ರಿಟೀಶ ಅಧಿಕಾರಿಗಳು ಜಹೀರ ಪಡೆಯಿಸಿದರು. ಇಂಗ್ರೇಜಿಯವರು ಸತ್ಯವಂತರೆಂದೇ ಕೆಲವರು ನಂಬಿದ್ದರು. ಮೋಸಗಾರರಂತೂ ಆಶೆಗೆ ಬಲಿ ಬಿದ್ದರು.

ರಾಯಣ್ಣನಿಗೆ ಎಲ್ಲಿಲ್ಲದ ಚಿಂತೆ ಚೆನ್ನಮ್ಮಾಜಿ ಹೇಗೆ ಮರಣ ಹೊಂದಿದಳು ಎಂಬುದನ್ನು ತಿಳಿಯಲು ಮತ್ತೆ ಜಂಗಮನ ವೇಷದಿಂದ ಕಿತ್ತೂರ ಮಠಕ್ಕೆ ಬಂದನು. ಅವರಿವರನ್ನು ಗೊತ್ತಾಗದೇ ಗುಟ್ಟತನದಿಂದ ಕೇಳಿದನು. ಆ ಮಹಾರಾಣಿ ಚಿಂತೆಯಿಂದ ವಜ್ರದ ಉಂಗುರವನ್ನು ನುಂಗಿದಳು ಎಂದು ತಿಳಿಯಿತು. ಜನಪದರು ಆಗಲೆ ಹಾಡುಕಟ್ಟಿ ಹಾಡಿಕೊಂಡದ್ದುಂಟು.

ಅತ್ತೆ ಸೊಸ್ತೆರ ತಂದು ಮತ್ತೆ ಹೊಂಗಲದಾಗ |
ಸುತ್ತ ಕಾವಲಿಯೊ ಹಗಲಿರುಳು

ಸುತ್ತ ಕಾವಲಿಯೋ ಹಗಲಿರುಳು | ಜನದಾಗ
ಎತ್ತ ನೋಡಿದರೂ ತಳಮಳ ||

ಹೊಂಗಲದ ಮಠದಾಗ ಲಿಂಗಪೂಜೆಯ ಮಾಡಿ
ಭಂಗಾಗುದೆಂದು ಎದೆಗುಂದಿ |
ಭಂಗಾಗುದೆಂದು ಎದೆಗುಂದಿ
| ಚೆನ್ನವ್ವ
ಉಂಗುರದ ವಜ್ರವ ನುಂಗ್ಯಾಳೋ ||

ನಿಜಾಂಶವನ್ನು ತಿಳಿಯಲು ಬೇರೆ ಬೇರೆ ಕಡೆಗೆ ರಾಯಣ್ಣನ ವೀರರಾದ ಕಡ್ಡಿ ಗುಡ್ಡ ಬಾಳಣ್ಣ, ಕಿಲ್ಲೇದಾರ ಭೀಮಣ್ಣ ಬೆಳವಡಿ, ಒಡ್ಡರ ಯಲ್ಲಣ್ಣ ಬೇರೆ ಬೇರೆ ವೇಷಗಳಲ್ಲಿ ಬೈಲಹೊಂಗಲದ ಪ್ರದೇಶವನ್ನೆಲ್ಲ ಸುತ್ತು ಹಾಕಿದರು. ಬುಡಬುಡಕಿಯ ಸೋಗು ಒಬ್ಬನಾದರೆ, ಜಂಗಮನ ಸೋಗು ಇನ್ನೊಬ್ಬನದು, ಬಹುರೂಪಿಗಳ ಸೋಗು. ಹೀಗೆ ಗುಪ್ತಚಾರಿಕೆಯನ್ನು ಮಾಡಿ ಚೆನ್ನಮ್ಮರಾಣಿಯ ಕೊನೆಯನ್ನು ತಿಳಿದರು.

ರಾಯಣ್ಣನಿಗೆ ಇವರೆಲ್ಲರೂ ಮೋಸ ಹೋಗದಂತೆ ಎಚ್ಚರಿಕೆಯನ್ನು ನೀಡಿದರು. ‘ಏನಾದರೂ ಮಾಡಿ ಕಿತ್ತೂರನ್ನು ಆಂಗ್ಲರಿಂದ ಉಳಿಸೋಣ, ಆದರೆ ನಾವು ಬದುಕಿರೋಣ. ರಾಯಣ್ಣ ನೀನಿಲ್ಲದಿದ್ದರೆ! ನಮ್ಮ ಪಾಡು ಹೇಳತೀರದು!!’ ಎಂದು ಉಸಿರುಗಳೆದರು.

ಖುದನಪೂರ, ನೇಗಿನ ಹಾಳ ಗೌಡರು ಆಂಗ್ಲರ ಬೆನ್ನು ಬಿದ್ದಿರುವುದು ತಿಳಿದು ಬಂದಿತು. ಲಿಂಗನಗೌಡ ತನ್ನದೊಂದು ಹಿಂದಿನ ಕುನಸು(ವೈರ) ಸಾಧಿಸಬೇಕಾಗಿತ್ತು.

ಗಿಡದ ಹುಬ್ಬಳ್ಳಿಯ ದಾಳಿಯನ್ನು ಮುಗಿಸಿದ ಮೇಲೆ ರಕ್ತ ಸಿಂಚಿತವಾದ ಖಡ್ಗವನ್ನು ತನ್ನ ಆಶ್ರಯದ ಝರಿಯಲ್ಲಿ ತೊಳೆಯುತ್ತಿದ್ದ (೮.೪.೧೮೩೦) ಅಂದೇ ಮೋಸ ಹೋದನು ರಾಯಣ್ಣ. ಈ ಮೋಸಗಾರಿಕೆಯನ್ನು ಲಾವಣಿಕರ ಹುಲಕುಂದ ಭೀಮೇಶನ ತಿಳಿಸಿದನ್ನು ತಿಳಿಯಬೇಕು.

ರಾಯಣ್ಣನನ್ನು ಪ್ರೀತಿಯಿಂದ ವೈರಿಗಳೇ ರಾಯನಾಯಕನೆಂದು ಕರೆದಿರುವರು.

ರಾಯನಾಯಕನ ಹಿಡಿದ ನಿಮಗ ತಂದ ಕೊಡತಿವಂತ
ಬಂದಾರ ಮೂವರು ಕಾಗದ ಬರಕೊಟ್ಟಾ
ರಾಯನಾಯಕನಲ್ಲೋಗಿ ಭಾವಶುದ್ಧ ಮಾತಾಡ್ಯಾರ
ಜೀವದ ಒಳಗಿನ ಕಾಳಜಿ ಎಲ್ಲಾ ಬಿಟ್ಟಾ
ನಿನ್ನ ಕಡೆ ಇರತೀವಣ್ಣಾ ನಮನಮಾತ್ರ ಉಳಸಿಕೋ
ಆಣೆ ಮಾಡಿ ಬಂದಿದೇವೋ ಹೊಂಟಾ
|
ಉಪ್ಪು ಗೊಬ್ಬರ ಮುಟ್ಟಿ ಉರಿವ ದೀವಿಗೆ ಮುಂದ ಕುಂತಾ
ಹೇಳತಾರ ಕ್ರಿಯಾ ಕೊಟ್ಟ ಕೊಟ್ಟಾ
|
ಸಾವಿರದೇವರ ಆಣೆಕೊಟ್ಟ ಸಕಾತಾಗಿ ಇದ್ದರಣ್ಣ
ತಿಳಿಯಲಿಲ್ಲ ಮನಸಿನಾನ ಸಿಟ್ಟಾ
||
…………………………………….

ಚಾಲ:

ಮಂದಿನೆಲ್ಲಾ ಮುಂದಕಳಿವ್ಯಾರs |
ಹೊಂದಿಕಂದ ನಾಲ್ವರಾ ಮಾತಡುತಾ ಸರಳಾ
ಹಿಂದ ಹೋಗುಣಂತಾರ ಆತ ನಿವಳಾ
ಮಾತ ಕೇಳಿ ರಾಯನಾಯಕ
| ಮನಸೋತ ಆ ಕ್ಷಣಕ
ಬೆನ್ನ ಹತ್ತಿದ ಸುಳ್ಳ
ವಿಶ್ವಾಸಕ ಬಿದ್ದ ಆದ ಮರುಳಾ
ಹಳ್ಳಕ ಹೋಗಿ ಮಾಡಿ ಜಳಕಾ
ಉಣ್ಣುವ ವ್ಯಾಳೇಕ ಬಿಡುವುನಂದಾ ಸ್ಥಳಾ
ಕೇಳಿದ ರಾಯಣ್ಣ ಮಾತುಗಳು

ಏರು:

ಕತ್ತಿ ಇಟ್ಟ ಖಬರ ಬಿಟ್ಟ ತೊಟ್ಟ ಚೊಣ್ಣ ತಗಿಯಾಕ
ಕುಂತ ವತ್ತಿ ಹಿಡದಾರ ಬಂದಮಾಡಿ ಗಡಾ
ಮಂದಿಕೂಡಿ ಹೊರಸಿನ ಮ್ಯಾಲ
ತಂದ ಹಾಕಿ ಬಿಕ್ಕೊಂಡ ಹೋದ್ರಾ
|
ಅವಗ ಒದಗಿತ್ತಂಣ ಮಾಯಾ ಕಳಾ
ಕಚೇರಿ ಒಳಗ ಓದ ಇಳಿವ್ಯಾರಾ
ಸರದಾರ ನೋಡಿದಾನ ಅವನ ಕಳಾ
||
ದೀರ ಅಂಬುವ ಕೂನ ಸರದಾರ ಪೂರ ತಳದ ಇವನ
ಕೊಲಬಾರದಂತ ಮರಿಗ್ಯಾವ ಅವನ ಕರುಳಾ
|

ರಾಯಣ್ಣನಿಗೆ ‘ಖಡ್ಗವನ್ನು ಕೊಡಬ್ಯಾಡ ಬೇರೆಯವರ ಕಡೆಗೆ’ ಎಂದು ಹೇಳಿದ ಶ್ರೀ ಹಂಡಿಬಡಗನಾಥನ ಶಾಂತಾನಂದ ಗುರುವಿನ ನೆನಪಾಯಿತು. ಬಾಯಲ್ಲಿ ಖಡ್ಗವನ್ನು ಹಿಡದೇ ಸ್ನಾನ ಮಾಡುವ ರಾಯಣ್ಣನಿಗೆ ಪಟದಮ್ಮನವರ ಲಕ್ಕ್ಯಾ (ಇವನು ರಾಯಣ್ಣನ ಸಂಭಂದಿಕ) ಮೋಸದ ಮಾತು ಹೇಳಿ ತನ್ನ ಕೈಗೆ ತೆಗೆದುಕೊಂಡಿದ್ದನು. ಲಿಂಗನಗೌಡನ ಕಡೆಯವರು ಬರುತ್ತಾರೆಂದು ಲಕ್ಕ್ಯಾ ಹೇಳಿದ, ಈಸಾಡಿ ಹೊಂಡದ ದಂಡೆಗೆ ಬಂದು, ಲಕ್ಕ್ಯಾನಿಗೆ ತನ್ನ ಖಡ್ಗವನ್ನು ಕೊಡಲು ರಾಯಣ್ಣ ಕೂಗಿದ’. ಆತನು ರಾಯಣ್ಣನಿಗೆ ಖಡ್ಗ ಕೊಡಲಿಲ್ಲ.

ಅಷ್ಟರಲ್ಲಿ ಲಿಂಗನಗೌಡನ ಕೂಡ ಗುಂಪಾದ ಜನ ಬಂದು, ಬರಗೈಯಲ್ಲಿರುವ ರಾಯಣ್ಣನನ್ನು ನೋಢಿ ಸುತ್ತುಗಟ್ಟಿ, ಹಗ್ಗ ಹಾಕಿ, ಕೈಗಳನ್ನು ಕಟ್ಟಿ, ಹೊರಸ ಒಂದನ್ನು ತಂದು ಅದಕ್ಕೆ ಕಟ್ಟಿಹಾಕಿ ಇಪ್ಪತ್ತರಷ್ಟು ಜನ (ಶೇತ್ಸನದಿಗಳು) ಹೊತ್ತುಕೊಂಡು ನಡೆದರು’.

ಸಂಗೊಳ್ಳಿ ರಾಯಣ್ಣನ ಬಂಧನವಾಯಿತೆಂದು ದಂಡಿನವರು ದಂಡಿನಿಂದ ಮರೆಯಾದರು. (೪೦೦ಕ್ಕೂ) ನಾಲ್ಕನೂರಕ್ಕೂ ಮಿಕ್ಕಿದ ಜನ ಆಂಗ್ಲರಿಗೆ ಶರಣಾದರು.