ಲಂಬಾಣಿಗರಲ್ಲಿ ಹಿಂದಿನ ಮತ್ತು ಮುಂದಿನ ಪೀಳಿಗೆಗೆ ಸೇತುವೆಯಂತಿರುವ ಢಾಡಿಯರು ಜನಪದ ವೃತ್ತಿಗಾಯಕರು. ಹಿಂದೂ-ಮುಸ್ಲಿಂ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಅವರ ಬದುಕು ಇಂದು ಡೋಲಾಯಮಾನ ಸ್ಥಿತಿಯಲ್ಲಿದೆ. ಕಾರಣ ಅವರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನದ ವಿಶಿಷ್ಟ ಅಂಶಗಳನ್ನು ಉಳಿಸಿ, ರಕ್ಷಿಸುವ ಕೆಲಸ ಇಂದು ಅವಶ್ಯಕವಾಗಿ ಆಗಬೇಕಿದೆ.

“ಅಗಣಿತ ಸಂಸ್ಕೃತಿಗಳ ತವರಾಗಿರುವ ಭಾರತದ ಜಾನಪದ ಅಧ್ಯಯನ ಇಂದು ತೀವ್ರ ಗತಿಯಲ್ಲಿ ಮತ್ತು ವಿವಿಧ ನೆಲೆಗಳಲ್ಲಿ ನಡೆಯುತ್ತಿರುವುದು ವರ್ತಮಾನದ ತುರ್ತು ಅಗತ್ಯ. ಈ ಮಾತು ಕರ್ನಾಟಕಕ್ಕೂ ಸಹಜವಾಗಿ ಅನ್ವಯಗೊಳ್ಳುತ್ತದೆ…….

………ವೈಜ್ಞಾನಿಕ ಆವಿಷ್ಕಾರಗಳ ಫಲವಾಗಿ ರಭಸದ ಪರಿವರ್ತನೆಗೆ ಈಡಾಗಿ ತಮ್ಮ ಸಹಜ ಮೂಲ ಸಂಸ್ಕೃತಿಯ ನೆಲೆಗಳನ್ನು ಕಳೆದುಕೊಂಡಿರುವ ಅನ್ಯದೇಶೀಯರಿಗೆ ಜಾನಪದ ಒಂದು ಜೀವಂತ ಪಳೆಯುಳಿಕೆ.”

[1]

ಈ ಹಿನ್ನೆಲೆಯಲ್ಲಿ ಜಾನಪದ ಕ್ಷೇತ್ರದ ವ್ಯಾಪಕ ಸಂಶೋಧನೆ ಎಷ್ಟು ನಡೆದರೂ ಕಡಿಮೆಯೇ. ಕರ್ನಾಟಕದಲ್ಲಿ ವೃತ್ತಿ ಗಾಯಕರ ಅಧ್ಯಯನ ಇತ್ತೀಚೆಗೆ ಜಾನಪದ ಕ್ಷೇತ್ರಕ್ಕೆ ಒಂದು ಹೊಸ ಆಯಾಮವನ್ನು ನೀಡಿದೆ. “ಈ ವೃತ್ತಿಗಾಯಕರ ಮಹಾಪರಂಪರೆ ೧೯೬೦ರ ಹಿಂದೆ ಅಜ್ಞಾತವಾಗಿಯೇ ಉಳಿದು ಹೋಗಿತ್ತು. ನಾಡಿನಾದ್ಯಂತ ಹರಡಿಕೊಂಡಿದ್ದ ಈ ಗಾಯಕ  ವರ್ಗವನ್ನು ಯಾವ ಸಂಗ್ರಹಕರೂ ಗುರುತಿಸದಿದ್ದುದು ಆಶ್ಚರ್ಯದ ವಿಷಯವಾಗಿದೆ. ಅಲ್ಲಲ್ಲಿ ಕೆಲವರು ಈ ಕಲಾವಿದರನ್ನು ಕಂಡು ಅವರ ಹಾಡಿನ ತುಣುಕುಗಳನ್ನು ಬರೆದುಕೊಂಡಿದ್ದರೂ, ಆ ದೊಡ್ಡ ಸಂಪ್ರದಾಯದ ಕಲ್ಪನೆ ಅವರಿಗೆ ಬಂದಂತೆ ತೋರುವುದಿಲ್ಲ.”[2]

ಮೌಖಿಕ ಪರಂಪರೆಯಲ್ಲಿ ವಂಶಪಾರಂಪರ್ಯವಾಗಿ ನಮ್ಮ ಜನಪದ ಕಾವ್ಯಗಳು, ಲಾವಣಿಗಳು ಕಥನಗೀತೆಗಳು ಉಳಿದು ಬಂದಿರುವುದು ಈ ವೃತ್ತಿಗಾಯಕರ ಮೂಲಕ ಎಂಬುದನ್ನು ನಾವು ಮರೆಯುವಂತಿಲ್ಲ. ಈ ಗಾಯಕ ವರ್ಗದವರ ಮೌಲಿಕ ಜನಪದ ಕಾವ್ಯ ಸಂಪ್ರದಾಯ ಹಾಗೂ ಪರಂಪರೆಯನ್ನು ಶೋಧಿಸುವುದರೊಂದಿಗೆ ಅವರ ಬಗ್ಗೆ ಶಾಸ್ತ್ರೀಯ ಅಧ್ಯಯನವನ್ನು ಕೈಗೊಳ್ಳುವುದು ತುಂಬಾ ಅಗತ್ಯವಾಗಿದೆ. ಏಕೆಂದರೆ ಈ ಗಾಯಕ ವರ್ಗಗಳ ಸಮಗ್ರ ಅಧ್ಯಯನ ನಮ್ಮಲ್ಲಿ ನಡೆದಿರುವುದಿಲ್ಲ.”[3] ಕರ್ನಾಟಕದಲ್ಲಿ ಈಗಾಗಲೇ ಇಪ್ಪತ್ತಕ್ಕೂ ಹೆಚ್ಚು ವೃತ್ತಿಗಾಯಕರಲ್ಲಿ ಕಂಸಾಳೆ, ನೀಲಗಾರರು, ಚೌಡಿಕೆಯವರು, ಗೊರವರು, ಗಣಿಯವರು ಮುಂತಾದ ಗಾಯಕ ವರ್ಗದ ಗುಂಪಿಗೆ ಇನ್ನು ಹೊಸದಾಗಿ ಲಂಬಾಣಿ ಜನಪದ ವೃತ್ತಿಗಾಯಕ “ಢಾಡಿ”ಯನ್ನು ಸೇರಿಸಬಹುದಾಗಿದೆ.”[4]

ಢಾಡಿಯರು ಲಂಬಾಣಿಗರಲ್ಲಿ ಧಾರ್ಮಿಕ ವೃತ್ತಿಗಾಯಕರು. ಲಂಬಾಣಿಗರನ್ನು ಬಿಟ್ಟು ಬೇರೆಯವರ ಹತ್ತಿರ ವೃತ್ತಿಗೆ ಹೋಗುವುದಿಲ್ಲ. ಢಾಡಿಯರು ಕರ್ನಾಟಕದ ಕೆಲವು ತಾಂಡಾಗಳಲ್ಲಿ ಕಂಡುಬರುತ್ತಾರೆ. ಉದಾಹರಣೆಗೆ ಗುಲಬರ್ಗಾ ಜಿಲ್ಲೆಯ ಖಣದಾಳ ತಾಂಡಾ, ಶ್ರೀನಿವಾಸ ಸೆರಡಗಿ ಮೋಕ ತಾಂಡಾ, ಪಾಂಚಿಲಗಿ ತಾಂಡಾ, ಶಹಾಬಾದ ತಾಂಡಗಳಲ್ಲಿ ಢಾಡಿಯರ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಚಿನ್ನ ಸಮುದ್ರ[5] ಮುಂತಾದ ಕಡೆಗಳಲ್ಲಿ ಬೆರಳೆಣಿಕೆಯಷ್ಟು ಈ ಜನ ಕಂಡುಬರುತ್ತಾರೆ. ಮಹಾರಾಷ್ಟ್ರದ ಹೊಟಗಿ, ಗಂಗಾಖೇಡ, ಮಲೇವಾಡಿ, ಪೊಹರಾಗಡ, ಫೂಲ ಉಮರಿ[6] ಪರಭಣಿ, ಪೇನಗಂಗಾ, ಲಸಣವಾಡಿ ನಾಂದೇಡ,” ದರಾಟ್ಟಿ, ಉಮರಖೇಡ, ಪುಸದ, ಯವತಮಾಳ, ಲೋಹಾ ಮುಂತಾದ ಕಡೆಗಳಲ್ಲಿದ್ದಾರೆ. ಮಹಾರಾಷ್ಟ್ರದ ಢಾಡಿಯರು ಕರ್ನಾಟಕ ಲಂಬಾಣಿ ತಾಂಡಾಗಳಿಗೆ ಭೆಟ್ಟಿ ಕೊಟ್ಟು ತಿಂಗಳುಗಟ್ಟಲೇ ಇದ್ದು ತಮ್ಮ ಧಾರ್ಮಿಕ ವೃತ್ತಿಯನ್ನು ಪೂರೈಸಿ ಹೋಗುತ್ತಾರೆ. ಇವರನ್ನು ಒಗಟಿನ ರೂಪದಲ್ಲಿ “ಖಾತೋಜಾವ ಪಿತೋಜಾವ ಓರೇ ಗೋಣ್ಣಿ ಸಾರು ಲೇಯಿಜಾವ” (ತಿನ್ನುತ್ತಿದ್ದ, ಕುಡಿಯುತ್ತಿದ್ದ ತನ್ನ ಹೆಂಡತಿಗಾಗಿ ತೆಗೆದುಕೊಂಡು ಹೋದ) ಎಂಬ ಲಂಬಾಣಿಗರು ಢಾಡಿಯರನ್ನು ಕುರಿತು ಹೇಳುತ್ತಾರೆ.

ಢಾಡಿಯರು ವೃತ್ತಿಗೆ ಹೊರಡುವಾಗ “ಸಾರಂಗಿ ವಾದ್ಯ”, ಬಟ್ಟೆ-ಚಾದರ ಇವುಗಳಿಂದ ಸಜ್ಜಾದ ಕೈಚೀಲ ಬೆನ್ನ ಹಿಂದೆ ಅಥವಾ ಹೆಗಲಿಗೆ ಹಾಕಿಕೊಂಡು ಮೊದಲಿಗೆ ನಾಯಕನ ಮನೆಗೆ ಹೋಗುವುದು ರೂಢಿ-ಸಂಪ್ರದಾಯ. ತಾಂಡಾದ ನಾಯಕನು, ಢಾಡಿಗೆ ಬರಮಾಡಿಕೊಂಡು, ಉಟೋಪಚಾರ ಮತ್ತು ಇರುವ ವ್ಯವಸ್ಥೆ ನೋಡಿಕೊಳ್ಳುತ್ತಾನೆ. ಲಂಬಾಣಿ ಸಮಾಜದಲ್ಲಿ ಢಾಡಿಯರನ್ನು ಗೌರವದಿಂದ ಕಾಣುವುದನ್ನು ಇಲ್ಲಿ ಸ್ಮರಿಸಬಹುದು. ಸಂಜೆ ಊಟ ಮುಗಿದ ಬಳಿಕ ಜನರು ತಾಂಡಾದ ನಾಯಕನ ಮನೆಯ ಮುಂದೆ ಸೇರುತ್ತಾರೆ. ಕಿಕ್ಕಿರಿದ ಶ್ರೋತೃಗಳ ಮಧ್ಯದಲ್ಲಿ ಢಾಡಿ ಮೆಲ್ಲನೆ ಹಾಡು ಆರಂಭಿಸುತ್ತಾನೆ. ಸಾರಂಗಿ ವಾದ್ಯದ ಇಂಪಾದ ಶ್ರುತಿ ತೆಗೆದು ಧ್ವನಿಗೂಡಿಸಿ ಲಂಬಾಣಿ ಹಂಗಳೆಯರನ್ನು ಮೋಡಿ ಮಾಡುವ ಢಾಡಿ “ನಿಂತ ನಿಂತಲ್ಲಿಯೇ ಶೃಂಗಾರ ಕಥಾನಕಗಳನ್ನು ಹಣೆದು, ಸಲೀಸಾಗಿ ಹಾಡಿ ಕುತೂಹಲಗೊಳಿಸುತ್ತಾನೆ. ಹಾಡಿನ ಮಧ್ಯೆ ಮಧ್ಯೆ ವಿವರಣೆ ಹಾಸ್ಯ ನುಡಿಗಳನ್ನು ಹೇಳುತ್ತ ಶೋತೃಗಳಿಗೆ ಮನರಂಜನೆ ಒದಗಿಸುವ ಢಾಡಿ ಚೈತನ್ಯದ ಚಿಲುಮೆ ಎಂದರೆ ತಪ್ಪಾಗದು.

ಇವರು ಹಾಡುವ ಪ್ರಮುಖ ಕಥಾನಕಗಳೆಂದರೆ, ಲಂಬಾಣಿ ಮೂಲಪುರುಷರ ಪರಂಪರೆ, ಲಂಬಾಣಿ ಜನಪದ ಲಾವಣಿ, ಮಹಾಸತಿಯರ ಗೀತೆ, ಬಾಲಾಜಿಗುರು, ಹಾತಿರಾಂ ಬಾವಾ, ಲೋಕಾಮಸಂದ, ಲಿಂಗಾಮಸಂದ, ಸೇವಾಭಾಯಾ, ಸಾಮಾಕಿಮತಾ, ರಾಮರಾವ್ ಮಹಾರಾಜ, ದಾಮಾಜಿಪಂತ, ಶ್ರೀಕೃಷ್ಣನನ್ನು ಕುರಿತು ಹಾಡುವುದರ ಜೊತೆಗೆ, ಲಂಬಾಣಿ ಹೆಣ್ಣು ಮಕ್ಕಳು ಅಳುವ ಸಂಪ್ರದಾಯದ “ಹವೇಲಿಗೀತೆ”ಯನ್ನು ಸಾರಂಗಿ ವಾದ್ಯದ ಮುಖಾಂತರ ನುಡಿಸಿ ಜನಮನವನ್ನೇ ಸೆಳೆಯುತ್ತಾರೆ.

ಲಂಬಾಣಿ ವೃತ್ತಿಗಾಯಕ ಢಾಡಿಯರು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ, ಪಂಜಾಬ, ರಾಜಸ್ಥಾನ”[7] ಮಧ್ಯಪ್ರದೇಶ ಹೀಗೆ ವಿವಿಧ ರಾಜ್ಯಗಳಲ್ಲಿ ಕಂಡುಬರುತ್ತಾರೆ. “ಸಾರಂಗಿ” ಎಂಬ ವಿಶಿಷ್ಟ ಸ್ವರೂಪದ ವಾದ್ಯ ಇವರನ್ನು ಗುರುತಿಸುವ ಮುಖ್ಯ ಸಾಧನ.

ಢಾಡಿಯರು ಯಾರು?

ಬಂಜಾರ ಜನಪದ ವೃತ್ತಿಗಾಯಕ ಢಾಡಿಯರು ಪಂಜಾಬ ಭಾಟ್-ಮೀರಾಸಿ “ಧಾದಿ”ಗಳನ್ನು ಹೋಲುತ್ತಾರೆ.”[8] ಇವರು ಪಂಜಾಬದವರು ಎಂಬುದರಲ್ಲಿ ಸಂದೇಹವಿಲ್ಲ. ಈ ಜನಪದ ಗಾಯಕರು ತಮ್ಮ ವೃತ್ತಿ ವೇಳೆಯಲ್ಲಿ ಬಳಸುವ ವಾದ್ಯದ ಹೆಸರು ಧಾದ್ (ಸಾರಂಗಿ) ಆದುದರಿಂದ “ಢಾಡಿ” ಎನ್ನುವ ಪದವು ವಾದ್ಯದಿಂದಲೇ ಬಂದಿದೆ ಎಂಬುದು ಸ್ಪಷ್ಟ. ಈ ಪದವು ಧಾ‌ದ್ > ಧಾದ > ಧಾದಿ > ಧಾಡಿ = ಢಾಡಿ ಎಂದಾಗಿದೆ. ಈ ಜನಪದ ವೃತ್ತಿಗಾಯಕರು ಲಂಬಾಣಿಗಳಲ್ಲಿ ಇವತ್ತಿಗೂ “ಢಾಡಿ” ಎಂಬ ಹೆಸರಿನಿಂದಲೇ ಚಿರಪರಿಚಿತರಾಗಿದ್ದಾರೆ.

ಢಾಡಿಯವರ ಹಿರಿಯ ಹೇಳಿದ ಪ್ರಕಾರ ಪೂರ್ವದಲ್ಲಿ “ಧಾದಿ” ಎಂಬ ಹೆಸರಿನಿಂದಲೇ ಕರೆಯುತ್ತಿದ್ದರು. “ಧಾದಿ” ಹೆಸರಿನ ಪರ್ಯಾಯ ಪದವೆ ಢಾಡಿ”[9]

ಪೂರ್ವದಲ್ಲಿ ಢಾಡಿಯರಿಗೆ “ಗಾಜಿ-ಗಂಧಾ”[10] ಅಥವಾ ಗಾಜು-ಗೋಣಿಯಾ” ಎಂದು ಕರೆಯುತ್ತಿದ್ದರು. ಇವರಿಬ್ಬರು ಸಹೋದರರು ಲಂಬಾಣಿಗಳ ತಾಂಡಾಗಳಿಗೆ ಭೇಟಿ ಕೊಟ್ಟು ಅವರ ವಂಶ ಪರಂಪರೆ ಮತ್ತು ರಮ್ಯ-ಲಾವಣಿಗಳನ್ನು ಹಾಡಿ, ಜನಮನ ಗೆಲ್ಲುತ್ತಿದ್ದರು. ಇವರ ಹಾಡುಗಳಿಗೆ ಮನಸೋತ ಶ್ರೋತೃಗಳು ಕಾಣಿಕೆಯಾಗಿ ಕಾಳು-ಕಡಿ, ದುಡ್ಡು-ದುಗ್ಗಾಣಿಗಳನ್ನು ಕೊಟ್ಟು ಗೌರವದಿಂದ ಕಳುಹಿಸುತ್ತಿದ್ದರು.

“FOLKLORE OF TEH PUNJAB” ಈ ಕೃತಿಯಲ್ಲಿ “ಸೋಹಿಂದರ ಸಿಂಗ” ಬೇಡಿಯವರು ಢಾಡಿಯವರನ್ನು ಕುರಿತು ಹೀಗೆ ಹೇಳಿದ್ದಾರೆ:

ಪಂಜಾಬದಲ್ಲಿ ಭಟ್ಟರು ಮತ್ತು “ಧಾದಿ”ಯವರು ಜನಪ್ರಿಯ ವೃತ್ತಿಗಾಯಕರಾಗಿದ್ದಾರೆ. ಇವರು ಹಳ್ಳಿಯ ವಿಶೇಷ ಸಮಾರಂಭಗಳಲ್ಲಿ ಕಿಕ್ಕಿರಿದ ಶ್ರೋತೃಗಳ ಮಧ್ಯದಲ್ಲಿ ರಾತ್ರಿ ಎಷ್ಟೋ ಹೊತ್ತಿನವರೆಗೆ ಕಥಾನಕಗಳನ್ನು ಹೇಳಿ ಹಾಡುತ್ತಾರೆ. ಜನಪದ ವಾದ್ಯಗಳಾದ “ಅಲ್ಗೋಸ್‌”, “ಏಕತಾರ” ಮತ್ತು “ಧಾದ” (ಸಾರಂಗಿ)ನ್ನು ಹಿನ್ನೆಲೆಯಾಗಿ ಬಳಸಿಕೊಳ್ಳುತ್ತಾರೆ. ಹಳ್ಳಿಯ ಜನರೆಲ್ಲರೂ ಈ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ವೀರಕಾವ್ಯಗಳು, ರಮ್ಯ ಲಾವಣಿಗಳು ಇವರ ಸಾಹಿತ್ಯದಲ್ಲಿ ಹೆಚ್ಚಾಗಿರುತ್ತವೆ. ಹಾಡಿನ ಲಯಕ್ಕನುಗುಣವಾಗಿ ವಾದ್ಯಗಳನ್ನು ನುಡಿಸಿ ಸಮಾರಂಭಗಳಿಗೆ ಶೋಭೆಯನ್ನು ತಂದುಕೊಡುವುದರ ಜೊತೆಗೆ ಜನಮನವನ್ನೇ ಸೆಳೆಯುತ್ತಾರೆ.”[11]

“A MONOGRAPH ON THE BANJARA CLAN” ಈ ಗ್ರಂಥದಲ್ಲಿ ಮಿ. ಎನ್‌.ಎಫ್. ಕಂಬರಲೇಜ್ ಅವರು ಢಾಡಿಯರನ್ನು ಕುರಿತು ಹೀಗೆ ಉಲ್ಲೇಖಿಸಿದ್ದಾರೆ.

ಸಂಚಾರಿ ಗಾಯಕ ವೃತ್ತಿ ಗುಂಪುಗಳಿಗೆ ಸಂಬಂಧಿಸಿದಂತೆ ಹೇಳಿರುವ ನಾಲ್ಕು ಪ್ರಮುಖ ಗುಂಪುಗಳಾದ ಚಾರಣರು, ಮಾಥೂರಿಯರು, ಲಭಾನರು ಮತ್ತು ಧಾರಿಯರು” ಇವುಗಳಲ್ಲಿ ನಾಲ್ಕನೆಯ ಉಪಪಂಗಡವಾದ ಧಾರಿಯರು ಅಥವಾ ಸಂಚಾರಿ ಗಾಯಕರು ಅವರೇ ಹೇಳಿಕೊಳ್ಳುವಂತೆ ಅವರ ಪೂರ್ವಜ ಭಾಟ ಜಾತಿಯ ಸದಸ್ಯನಾಗಿದ್ದು, “ಸಿಖ್” ಧಾರ್ಮಿಕ ನಂಬಿಕೆಯ ಕಟ್ಟಾ ಶಿಷ್ಯನಾಗಿದ್ದನು. ಒಮ್ಮೆ ಗುರುನಾನಕನ ಜೊತೆಗೆ ಮೊಘಲ ಚಕ್ರವರ್ತಿ ಹುಮಾಯನನು ನೀಡಿದ ಔತಣಕೂಟಕ್ಕೆ ಹೋದಾಗ, ಅಲ್ಲಿ ಗೋಮಾಂಸ ಅಥವಾ ಎಮ್ಮೆಯ ಮಾಂಸದೂಟ ಮಾಡಿಸಿದ ಬಳಿಕ, ಮುಸ್ಲಿಂ ಧರ್ಮವನ್ನು ಸ್ವೀಕರಿಸಿದನು. ಮುಂದೆ ಸಂಗೀತಗಾರನಾಗಿ ಮೊಘಲ ಚಕ್ರವರ್ತಿಯ ಆಸ್ಥಾನದಲ್ಲಿ ನೇಮಿಸಲ್ಪಟ್ಟನು. ಅವರ ಮಕ್ಕಳು ಚಾರಣರ ಜೊತೆಗೂಡಿ ಬಂಜಾರ ಜಾತಿಯ ವೃತ್ತಿಗಾಯಕರಾದರು…………, “ಧಾರಿಯರು ಸಂಚಾರಿ ವೃತ್ತಿ ಗಾಯಕರಲ್ಲದೆ ಭಿಕ್ಷುಕರು ಆಗಿದ್ದಾರೆ. ಅವರು ತಮ್ಮ ಪೂರ್ವಜರಾದ ಚಾರಣರ ಹಿರಿಮೆ ಬಗ್ಗೆ ಹಾಗೂ ದಿಲ್ಲಿಯ ಹಳೆ ಮಹಾರಾಜರ ಗತವೈಭವಗಳನ್ನು ಕುರಿತು ಹಾಡು ಹೇಳುತ್ತ ವರ್ಷದಲ್ಲಿ ಕೆಲವೊಮ್ಮೆ ಚಾರಣರ ಹಳ್ಳಿಗಳಿಗೆ ಭೆಟ್ಟಿ ಕೊಟ್ಟು, ಅವರಿಂದ ಎಳೆಯ (ದನ) ಕರುಗಳನ್ನು ಅಥವಾ ಹಣವನ್ನು ಕಾಣಿಕೆಯಾಗಿ ಪಡೆಯು‌ತ್ತಾರೆ. “ಇವರು ಮುಸಲ್ಮಾನರಾಗಿದ್ದು, ಸರಸ್ವತಿಯನ್ನು ಪೂಜಿಸುತ್ತಾರೆ”[12] ಎಂದು ವಿವರಿಸಿದ್ದಾರೆ.

ಎರಡನೆಯ ಇಬ್ರಾಹಿಮ್ ಆದಿಲ್ ಶಾಹನು (ಕ್ರಿ.ಶ. ೧೫೮೦-೧೬೨೬) ಬರೆದ ದಖನಿ ಭಾಷೆಯ ಗೀತಗಳ ಸಂಕಲನ “ಕಿತಾಬೆ-ನೌರಸ” ಅಥವಾ ಕಿತಾಬ-ಇ-ನವರಸ” ಈ ಗ್ರಂಥದಲ್ಲಿ ಹೀಗೆ ವರ್ಣಿಸಿದ್ದಾನೆ.

“ಅತಾಈ ಢಾಡೀ, ಗುನೀಜನ ತರಜಗ ಗುಸಾಈಂ ತ್ರಿಲೋಚನ, |
ಭಾಕಾ ನ್ಯಾರೀ ನ್ಯಾರೀ ಭಾವ ಏಕ ಕಹಾ ತುರಕ ಕಹಾ ಬರಹಾಮನ |
ಉತ್ತಮ ಭಾಗನೀಕೋ ಸೋಸೋಹೀ ಜಾ ಸರಸುತೀ ಹುಯಿ ಪ್ರಸನ್ನ |
ಇಬ್ರಾಹೀಮ ಸೊಂಸಾರ ಚಾಹೆ ವಿದ್ಯ, ಸಬದ ಗುಸೇವಾ ಜಪಕರ ಏಕಮನ |”

ಅರ್ಥ: ಈ ಉತ್ತಮ ಪ್ರಕಾರದ ಗಾಯಕರು, ಢಾಡೀ, ಒಂದು ಬಗೆಯ ಮುಸಲ್ಮಾನ ಗಾಯಕರು ಹಾಗೂ ಗುಣೀಜನರು ಮೂರು ಲೋಕದ ಒಡೆಯ ಈಶ್ವರನ ಮೂರು ಕಣ್ಣುಗಳಿದ್ದಂತೆ.”[13]

ಢಾಡಿಯರು ಪ್ರಮುಖ ವೃತ್ತಿಗಾಯಕರೆಂಬುದರಲ್ಲಿ ಎರಡು ಮಾತಿಲ್ಲ. ಇವರು ಮುಸ್ಲಿಂ ದೊರೆಗಳ ಆಸ್ಥಾನಗಳಿಗೆ ಹೋಗಿ ಸೊಗಸಾಗಿ ಗೀತೆಗಳ ಮತ್ತು ದೋಹಾಗಳನ್ನು ಹೇಳಿ ಸಂಗೀತ ನುಡಿಸುತ್ತಿದ್ದರು. ಇವರು ಒಂದು ಬಗೆಯ ಮುಸಲ್ಮಾನ ಗಾಯಕರೆಂದು ಸ್ವತಃ ಎರಡನೆಯ ಇಬ್ರಾಹಿಮ ಆದಿಲ್‌ಶಹನು ಸ್ಮರಿಸಿಕೊಂಡಿರುವುದು ಗಮನಾರ್ಹ.

ಜನಪದ ಐತಿಹ್ಯ:

ಡಮರು ಬಾರಿಸಿ ನೃತ್ಯ ಮಾಡುತ್ತಿದ್ದ ಮೋಲಾ ಕೃಷ್ಣನ ಗೋವುಗಳನ್ನು ಕಾಯುತ್ತಿದ್ದನು. ಕೃಷ್ಣನ ಮನ ಒಲಿಸಿ ರಾಧೆಯನ್ನು ಕರೆತಂದನು. ಮಂತ್ರವಾದಿ ಭವಯ್ಯನು ಮೋಲಾ-ರಾಧಿಕಾರ ಜೊತೆಗೆ ನೃತ್ಯಮಾಡುತ್ತ ಸಂಚರಿಸುತ್ತಿದ್ದನು. ಒಂದು ದಿನ ಭವಯ್ಯ ತಿಪ್ಪೆಯಲ್ಲಿ ಮೇಯುತ್ತಿದ್ದ ಕತ್ತೆಯನ್ನು ಹಿಡಿದು ತಂದು ಅದರ ಮೈಮೇಲೆ ಕೈಯಾಡಿಸಿದಾಗ ಕತ್ತೆ ಸುಂದರ ಸ್ತ್ರೀಯಾಯಿತು! ಅವಳನ್ನೆ ಮೋಲಾನ ಸಹೋದರ ಮೋಟಾನಿಗೆ ಕೊಟ್ಟು ಮದುವೆ ಮಾಡಿದರು ಎಂದು ಐತಿಹ್ಯದಲ್ಲಿ ಬರುತ್ತದೆ.

ಮೋಲಾ, ರಾಧಿಕಾ ಮತ್ತು ಭವಯ್ಯ ನೃತ್ಯ ಮಾಡುತ್ತ ರಾಹುಗಡ, ಪಾವುಗಡ ಮತ್ತು ಚಾವುಗಡ ಈ ಮೂರು ರಾಜರ ಆಸ್ಥಾನಗಳಿಗೆ ಹೋಗಿ ಅವರಿಂದ ಒಬ್ಬೊಬ್ಬ ಪುತ್ರರನ್ನು ದತ್ತು ಪಡೆದು ತಂದರು. ಇವರೆಲ್ಲರೂ ಜೊತೆಗೂಡಿ, “ಸಿಕಂದರ ಬಾದಶಹಾ”ನ ಆಸ್ಥಾನಕ್ಕೆ ಹೋಗಿ ರಾಜನ ಅಪ್ಪಣೆಯ ಮೇರೆಗೆ ನೃತ್ಯ ಮಾಡಿದರು. ಅಲ್ಲಿ ಕೋರಿ ಹುಳುಗಳು ಮನುಷ್ಯರಿಗೆ ಮುತ್ತಿ ರಕ್ತ ಹೀರಿಕೊಳ್ಳುತ್ತಿದ್ದವು. ಅವುಗಳ ಕಾಟಕ್ಕೆ ಬೇಸತ್ತ ಅಲ್ಲಿಯ ಜನ ಕಂಗಾಲಾಗಿದ್ದರು. ಆ ಸೋಜಿಗದ ಸಂಗತಿಯನ್ನರಿತ ಮಂತ್ರವಾದಿ ಭವಯ್ಯನ ಕೋರಿ ಹುಳುಗಳು ಮತ್ತೆ ಬಾರದಂತೆ ತಡೆಹಿಡಿದನು. ಇಡೀ ರಾತ್ರಿ ನೃತ್ಯ ಮಾಡಿ ಜನಮೆಚ್ಚುಗೆ ಪಡೆದನು. ಆ ಚಮತ್ಕಾರಿಕ ಘಟನೆಯನ್ನರಿತ ಬಾದಶಹ, ಹೇಗಾದರೂ ಮಾಡಿ ಭವಯ್ಯನನ್ನು ಮುಗಿಸಿಬಿಡಬೇಕು, ಇಲ್ಲವಾದರೆ ಬೆಳಗಿನ ಜಾವ ಕೋರಿ ಹುಳುಗಳನ್ನು ಮೊದಲಿನಂತೆ ಬಿಟ್ಟು ಹೋಗುತ್ತಾನೆಂದು, ಭವಯ್ಯನಿಗೆ ಅರಮನೆಯೊಳಗೆ ಕರೆದೊಯ್ದು ಕೊಲೆಗೈದನು. ಬಾದಶಹನ ದೃಷ್ಕೃತ್ಯ ಸಹಿಸದೆ ಮೋಲಾ ಮತ್ತು ರಾಧಿಕಾ ಪ್ರತಿಭಟಿಸಿದರು. ಬಾದಶಹನು ನಿಜ ಸ್ಥಿತಿ ಹೇಳಿ ಸಮಾಧಾನ ಮಾಡಿದನು. ನೀವು ದುಃಖಿಸಬೇಡಿ, ನಿಮ್ಮ ಭವಯ್ಯನ ಬದಲಿಗೆ ಆಸ್ಥಾನದಲ್ಲಿರುವ ಭಾಟ ವಂಶಕ್ಕೆ ಸೇರಿದ ಗಾಜಿ-ಗಂದ್ರಾರನ್ನು ಕೊಡುತ್ತೇನೆಂದು ಸಮಾಧಾನಪಡಿಸಿದನು. ರಾಜನ ಅಪ್ಪಣೆಯ ಮೇರೆಗೆ ಅವರಿಬ್ಬರನ್ನು ಕರೆದುಕೊಂಡು ಬಂದರು. ಅಂದಿನಿಂದ ಗಾಜು-ಗಂದ್ರಾ ಬಂಜಾರುಗಳಲ್ಲಿ ಸಂಗೀತ ವೃತ್ತಿಗಾಯಕರಾಗಿ ಬೆರೆತು ಹೋದರು.

ಮೇಲಿನ ವಿವಿಧ ವಿದ್ವಾಂಸರ ಅಭಿಪ್ರಾಯಗಳನ್ನು ಹಾಗೂ ವಕ್ತೃಗಳ ಮೌಖಿಕ ಆಧಾರಗಳ ಮತ್ತು ಪ್ರಚಲಿತವಿರುವ ಜನಪದ ಐತಿಹ್ಯಗಳನ್ನು ಗಮನಿಸಿದಾಗ, ಢಾಡಿಗಳು ಜನಪದ ವೃತ್ತಿಗಾಯಕರಾಗಿದ್ದು, ಭಾಟ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಇವರು ಮುಸ್ಲಿಂ ದೊರೆಗಳ ದಬ್ಬಾಳಿಕೆಗೆ ಮಣಿದು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು.”[14] ಅವರ ಆಸ್ಥಾನದಲ್ಲಿಯೇ ಇದ್ದುಕೊಂಡು, ದಖಣಿ ಭಾಷೆಯಲ್ಲಿ ಗೀತೆ ಮತ್ತು ದೋಹಾಗಳನ್ನು ಹಾಡುವಂತೆ ಕಲಿತರು. ಸಾರಂಗಿ ವಾದ್ಯ ನುಡಿಸುತ್ತ ಶ್ರೋತೃಗಳು ತಲೆದೂಗುವಂತೆ ಮೆರೆದರು. “ಜನಪದ ಗೀತೆಗಳನ್ನು ಲಾವಣಿಗಳನ್ನು ಹಾಡುವುದರಲ್ಲಿ ಪ್ರಧಾನವಾಗಿ ಎರಡು ವರ್ಗಗಳನ್ನು ಕಾಣಬಹುದು. ೧) ಹಾಡುವುದನ್ನೇ ಪ್ರಧಾನ ವೃತ್ತಿಯನ್ನಾಗಿ ಮಾಡಿಕೊಂಡು ಅದನ್ನೇ ಅವಲಂಬಿಸಿ ಬದುಕುವವರು. ೨) ಜೀವನೋಪಾಯಕ್ಕೆ ಬೇರೊಂದು ವೃತ್ತಿಯನ್ನು ಅವಲಂಬಿಸಿ ಕೇವಲ ಸಂತೋಷಕ್ಕಾಗಿ ಹಾಡುವರು…….

……… ಮೊದಲನೆಯ ವರ್ಗ ಕೇವಲ ಕೆಲವರಿಗೆ ಮಾತ್ರ ಸೀಮಿತವಾದುದು. ಯಾವುದೋ ಒಂದು ವಿಶಿಷ್ಟ ಮತದವರೋ ಯಾವುದೋ ದೈವದ ಅರಾಧಕರೋ ಹಾಡುವುದನ್ನು, ಕಥೆ ಮಾಡುವುದನ್ನು ವೃತ್ತಿಯಾಗಿ ಸ್ವೀಕರಿಸಬಹುದು ಅಥವಾ ಯಾವ ದೈವದ ವಲಯಕ್ಕೂ ಒಳಪಡದೆ ಸ್ವತಂತ್ರವಾಗಿ ಎಲ್ಲ ದೇವರ, ಎಲ್ಲ ಬಗೆಯ ಸಾಹಿತ್ಯವನ್ನು ಹಾಡಬಹುದು. ಈ ಎರಡು ಗುಂಪುಗಳನ್ನು ವೃತ್ತಿಗಾಯಕರು ಅಥವಾ ಕಥೋಪಜೀವಿಗಳು ಎಂದು ಕರೆಯಬಹುದು.”[15]

ಡಾ. ಜೀ.ಶಂ. ಪರಮಶಿವಯ್ಯನವರು ಹೇಳಿರುವ ಅಂಶಗಳನ್ನು ಗಮನಿಸಿದಾಗ ಢಾಡಿಯರು ಮೊದಲನೆಯ ವರ್ಗಕ್ಕೆ ಸೇರುತ್ತಾರೆ. ಢಾಡಿಯರ ಪೂರ್ವಜರ ಕಾಲದಿಂದ ಬೆಳೆದುಬಂದ ವೃತ್ತಿಯು, ಇವತ್ತಿಗೂ ಸಲೀಸಾಗಿ ನಡೆಯುತ್ತಿದೆ. ಅವರ ಸಾಹಿತ್ಯವೂ ಅಷ್ಟೇ ಪ್ರಮುಖವಾದದ್ದು. ಢಾಡಿಯರ ವೃತ್ತಿಯನ್ನು ಗಮನಿಸಿದಾಗ ನಮ್ಮಲ್ಲಿಯ ವೃತ್ತಿಗಾಯಕ “ಹೆಳವರು” ನೆನಪಿಗೆ ಬರುತ್ತಾರೆ.

ಹಬ್ಬಹರಿದಿನ:

ಢಾಡಿಯರು ಹಿಂದೂಗಳಲ್ಲಿ ಆಚರಿಸುವ ದಸರಾ, ದೀಪಾವಳಿ, ಹೋಳಿ, ಯುಗಾದಿ ಮುಂತಾದ ಹಬ್ಬ-ಹರಿದಿನಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ಲಂಬಾಣಿಗರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.

ಇಮಾಮ ಹುಸೇನ, ಬಂದೇನವಾಜ, ಮಹಿಬೂಬ ಸುಬಾನಿ, ಕಾಶೀಮ್ ಧೂಲಾ, ಮೊಹರಂ, ರಂಜಾನ್, ಬಕ್ರೀದ್, ಈಸೂಬ ಬಾಬಾ, ಜಂಗಲಿ ಬಾಬಾ ಮುಂತಾದ ಮುಸ್ಲಿಂ ದೇವತೆ ಹಬ್ಬಗಳನ್ನು ಆಚರಿಸುವ ಇವರು, ಮಸೀದಿಯಿಂದ ಪೀರಸಾಹೇಬರನ್ನು ಕರೆಸುತ್ತಾ ಮದುವೆಗಳಲ್ಲಿ “ನಿಖಾ” ಪದ್ಧತಿ ಆಚರಿಸುವ ಸಂಪ್ರದಾಯವಿದೆ.

ಸಮ್ಮಿಶ್ರ ಸಂಸ್ಕೃತಿ :

ಭಾಷೆ ನಡವಳಿಕೆ, ವೇಷಭೂಷಣ ಮುಂತಾದ ಧಾರ್ಮಿಕ ಆಚರಣೆಗಳಲ್ಲಿ ಅಪ್ಪಟವಾಗಿ ಲಂಬಾಣಿಗರನ್ನೇ ಹೋಲುವ ಇವರು ಮುಸ್ಲಿಂ ಸಂಸ್ಕೃತಿಯ ಹಲವಾರು ಅಂಶಗಳನ್ನು ಮೈಗೂಡಿಸಿಕೊಂಡಿರುವುದು ನಿಜಕ್ಕೂ ಕುತೂಹಲಕಾರಿ. ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ನಡೆದಿರುವ ಢಾಡಿಯರದ್ದು ಅರೆಬರೆ ಸಂಸ್ಕೃತಿ. ಈ ಹಿನ್ನೆಲೆಯಲ್ಲಿ ಇವರಿಗೆ ಹಿಂದೂಗಳೆನ್ನಬೇಕೋ ಅಥವಾ ಮುಸ್ಲಿಂರೆನ್ನಬೇಕೋ ಎನ್ನುವ ವಿಸ್ಮಯ ಉಂಟಾಗುತ್ತದೆ. ಢಾಡಿಯವರು ಒಂದು ರೀತಿಯಲ್ಲಿ ಮಿಶ್ರ ಸಂಸ್ಕೃತಿಯನ್ನು ಹೊಂದಿದ ಜನಪದ ವೃತ್ತಿಗಾಯಕರು ಎನ್ನುವುದು ಸ್ಪಷ್ಟ.

ಮುಂಜಿವೆಸುನತಿ :

ಢಾಡಿಯರಲ್ಲಿ ಸುನತಿ (ಮುಂಜಿವೆ) ಮಾಡುವ ಪದ್ಧತಿ ಇದೆ. ಈ ಸಂದರ್ಭದಲ್ಲಿ ಮುಸ್ಲಿಂ ಖಲೀಪನನ್ನು ಕರೆದು ಅವನಿಂದ ಸುನತಿ ಮಾಡಿಸುತ್ತಾರೆ. ಸುನತಿ ಮಾಡುವ ಮುಂಚೆ ನೆಲದ ಮೇಲೆ ಹೊಸಬಟ್ಟೆ ಹಾಕಿ ಅದರ ಮೇಲೆ ಗಂಡುಮಗುವಿಗೆ ಕೂಡಿಸುತ್ತಾರೆ. ಖಲೀಪನು ಅಲ್ಲಾಹನಿಗೆ ಕೈ ಮುಗಿದು ಸುನತಿ ಮಾಡುವನು. ಆ ಕಾರ್ಯ ಮುಗಿದ ಬಳಿಕ ಖಲೀಪನಿಗೆ ಕಾಳು-ಕಡಿ, ಬಟ್ಟೆ-ಬರೆ ಐವತ್ತೊಂದು ರೂಪಾಯಿ ಕಾಣಿಕೆಯಾಗಿ ಕೊಡುತ್ತಾರೆ. ಈ ಪದ್ಧತಿ ಲಂಬಾಣಿಗಳಲ್ಲಿ ಕಂಡು ಬರುವುದಿಲ್ಲ.

ಢಾಡಿಯರಲ್ಲಿ ಎರಡು ಪ್ರಮುಖ ಪಂಗಡಗಳಿವೆ. ಢಾಡಿ ಮತ್ತು ಭಾಟ. ಈ ಪ್ರಮುಖ ಪಂಗಡಗಳಲ್ಲಿಯೇ ಕೆಲವು ಉಪಪಂಗಡಗಳು ಕಂಡು ಬರುತ್ತವೆ.

ಢಾಡಿಯರ ಉಪಪಂಗಡಗಳು೧೨ : ೧) ತಾಜನಾಥ (ತಾಜವೇ), ೨) ಪೋಚಲಾ, ೩) ರತ್ನಾ, ೪) ಡುಂಗೋತ್ರ (ಡುಂಗ್ರ್ಯಾ), ೫) ಶೇವ್ಯಾ (ಶರಾ), ೬) ರೋಡಿಯಾ (ರುಧಾ), ೭) ಭಾಣಿಮಾ (ಬಾಜಿ), ೮) ಸಗ್ರಾವತ, ೯) ಭಗ್ರಾವತ, ೧೦) ರಾಮದಾಸ, ೧೧) ಭೀಮಲಾ, ೧೨) ಧೇರಾವತ (ಧೋಳಿಯಾ).

ಭಾಟರ ಉಪಪಂಗಡಗಳು : ೧) ಗಂಗ್ಯಾ, ೨) ಹರಸಿಂಗ, ೩) ಕಂಡೇಳಿಯಾ ಕಾಪಡಿ (ಗಾದಿರ ಮಾಲಕ), ೪) ಝಾಡಪೋಡ, ೫) ಸಗಣ್ಯಾ, ೬) ಝಾಪಡಿ, ೭) ಮಛರಿಯಾ, ೮) ದೇವ್ಯಾ.

ಢಾಡಿಯರ ೧೨ ಉಪಪಂಗಡಗಳಲ್ಲಿ ಕೆಲವರು ಉತ್ತರ ಭಾರತದ ಮೊಘಲರ ಆಸ್ಥಾನದಲ್ಲಿಯೇ ಉಳಿದರು. ಮತ್ತೆ ಕೆಲವರು ದಕ್ಷಿಣದ ಕಡೆಗೆ ವಲಸೆ ಬಂದರು.

ಈ ಮೇಲೆ ಹೇಳಿದ ಢಾಡಿಯರ ಉಪಪಂಗಡಗಳಲ್ಲಿ ಪೋಚಲಾ, ರತ್ನಾ, ಡುಂಗ್ರೋತ ಶೇವ್ಯಾ, ರೇಡಿಯಾ, ಭಾಣಿಯಾ ಮತ್ತು ಸಗ್ರಾವತ ಇವರುಗಳು ದಕ್ಷಿಣ ಭಾರತದ ಕಡೆಗೆ ವಲಸೆ ಬಂದರು. ಇನ್ನುಳಿದ ತಾಜನಾಥ, ಭಗ್ರಾವತ, ರಾಮದಾಸ, ಭೀಮಲಾ ಮತ್ತು ಧೇರಾವತ ಇವರುಗಳು ಮೊಘಲರ ಆಸ್ಥಾನದಲ್ಲಿಯೇ ಸೇವೆ ಮಾಡುತ್ತ ಉಳಿದರು.

ಹೆಣ್ಣು-ಗಂಡಿನ ಸಂಬಂಧ ಮಾಡಬೇಕಾದರೆ ರತ್ನಾ, ಡುಂಗ್ರೋತ, ಶೇವ್ಯಾ ರೋಡಿಯಾ ಮತ್ತು ಭಾಣಿಯಾ ಈ ಪಂಗಡದವರ ನಡುವೆ ಹೆಣ್ಣು-ಗುಂಡಿನ ಸಂಬಂಧ ನಿರ್ಬಂಧವಿದೆ. ಏಕೆಂದರೆ ಈ ಪಂಗಡದವರು ಸಹೋದರ ಸಮಾನ; ತಾಜನಾಥ ಪೋಚಲಾ ಇನ್ನುಳಿದ ಪಂಗಡದವರ ಜೊತೆ ಸಂಬಂಧ ಮಾಡಲು ಬರುತ್ತದೆ.

ಧಾದ್‌ಸಾರಂಗಿ ವಾದ್ಯ :

ಢಾಡಿಯರು ಬಳಸುವ ವಾದ್ಯದ ಹೆಸರು ಸಾರಂಗಿ. ಇದು ವೀಣೆ ಮಾದರಿಯದ್ದು. ಒಂದೂವರೆ ಅಥವಾ ಎರಡು ಅಡಿ ಎತ್ತರ ಇರುತ್ತದೆ. ಸಾರಂಗಿಗೆ ತೇಗದ ಅಥವಾ ಮಾವಿನ ಮರದ ತುಂಡನ್ನು ಪೊಳ್ಳಾಗುವಂತೆ ಕೊರೆದು, ಮೇಕೆಯ ಚರ್ಮವನ್ನು ಅಂಟಿಸಿ ಬಿಗಿಗೊಳಿಸುತ್ತಾರೆ. ಸಾರಂಗಿಗೆ ಹನ್ನೆರಡು ಉಕ್ಕಿನ ತಂತಿಗಳು ಮತ್ತು ಮೂರು ಅಥವಾ ನಾಲ್ಕು ಮೇಕೆಯ ಕರುಳಿನಿಂದ ತಯಾರಿಸಿರುವ ತಂತಿಯನ್ನು ಹುರಿ ಮಾಡಿ ಒಣಗಿಸಿ ಹಾಕಿರುತ್ತಾರೆ. ತಂತಿಯಿಂದ ಬಂಧಿಸಿರುವ ಹಿಡಿಗೆ “ಮೊಣ್ಣಾ” ಎಂದು ಕರೆಯುತ್ತಾರೆ. ಸಾರಂಗಿಗೆ ಮೂರು ಬೆಳ್ಳಿಯ ಹಿಡಿಗಳು ಮತ್ತು ಹತ್ತು ತೇಗದ ಕಟ್ಟಿಗೆಯ ಸಣ್ಣ ಹಿಡಿಗಳಿರುತ್ತವೆ. ಇವುಗಳಿಗೆ ತಂತಿಯನ್ನು ಸುತ್ತಿರುತ್ತಾರೆ. ಹಾಡಿನ ಲಯಕ್ಕನುಗುಣವಾಗಿ ತಂತಿಗಳನ್ನು ಸಡಿಲು ಬಿಗಿಯಾಗಿ ಮಾಡಿಕೊಳ್ಳುತ್ತಾರೆ. ಸಾರಂಗಿಯನ್ನು ನುಡಿಸಲಿಕ್ಕೆ ಕಮಾನನ್ನು ಉಪಯೋಗಿಸುತ್ತಾರೆ. ಕಮಾನಿನ ಮಧ್ಯದಲ್ಲಿ ಕುದರೆಯ ಜವೆಯಿಂದ ಪೋಣಿಸಿ ಎರಡೂ ಬದಿಗೆ ಬಟ್ಟೆಯನ್ನು ಸುತ್ತಿರುತ್ತಾರೆ.

ಸಂಚಾರಿನಿಘಂಟುಗಳು :

ಬಂಜಾರಗಳ ಧಾರ್ಮಿಕ ಕಾರ್ಯಗಳು ಢಾಡಿಯರಿಲ್ಲದೆ ನೆರವೇರುತ್ತಿರಲಿಲ್ಲ. ಅಷ್ಟೊಂದು ಮಹತ್ವದ ಸ್ಥಾನ ಢಾಡಿಯರಿಗೆ ಇತ್ತು. ಬಂಜಾರ ಸಮಾಜವನ್ನು ಜಾಗೃತಿಗೊಳಿಸುವ ಕಾಯಕ ಢಾಡಿಯರದಾಗಿತ್ತು. ಢಾಡಿಯರು ಲಂಬಾಣಿ ತಂಡಗಳ ಮಧ್ಯೆ ಇಡೀ ರಾತ್ರಿ ಕಥೆ, ಹಾಡು, ಧಾರ್ಮಿಕ ಕಥಾನಕಗಳನ್ನು ಹಾಡುತ್ತ ಗುಂಪಿನ ಜನರಿಗೆ ಮನರಂಜನೆ ಒದಗಿಸುತ್ತಿದ್ದರು. ಆಯಾ ತಂಡಗಳ ಮಧ್ಯೆ ಹೆಣ್ಣು ಗಂಡಿನ ಸಂಬಂಧವನ್ನು ಬೆಸೆಯುವಲ್ಲಿ ಢಾಡಿಯರದು ಮಹತ್ವದ ಪಾತ್ರವಿತ್ತು. ಅವರು ಅಂತಹ ಸಂಚಾರಿ ನಿಘಂಟುಗಳಾಗಿದ್ದರು. ಒಂದು ತಂಡದ ಸುಖ ಸಂತೋಷ, ನೋವು-ನಲಿವುಗಳು ಮತ್ತೊಂದು ತಂಡಕ್ಕೆ, ಮತ್ತೊಂದು ತಂಡದ ವಿಷಯ ಮಗದೊಂದು ತಂಡಕ್ಕೆ ಹೀಗೆ ತಂಡದಿಂದ ತಂಡಕ್ಕೆ ಸುದ್ದಿ ತಲುಪಿಸುವ ಕಾರ್ಯ ಇವರದಾಗಿತ್ತು.

ದ್ವಿಮುಖ ಧರ್ಮದ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವ ಢಾಡಿಯರ ಬದುಕು ಇಂದು ಡೋಲಾಯಮಾನ ಸ್ಥಿತಿಯಲ್ಲಿದೆ. ಮೊದಲಿನಂತೆ ಜನರಲ್ಲಿ ಹಾಡುಗಳು ಕೇಳಬೇಕೆಂಬ ಅಭಿರುಚಿ ಉಳಿದಿರುವುದಿಲ್ಲ. ಕಾಳು-ಕಡಿ, ದುಡ್ಡು-ದುಗ್ಗಾಣಿಗಳನ್ನು ಕೊಡುವುದಂತು ದೂರವೇ ಉಳಿಯಿತು. ಈ ದಿಸೆಯಲ್ಲಿ ಢಾಡಿಯರ ಬದುಕಿನ ವಿಭಿನ್ನ ಅಂಶಗಳನ್ನು ಪಳೆಯುಳಿಕೆಯ ರೂಪದಲ್ಲಾದರೂ ಹಿಡಿದಿಡುವ ಕಾರ್ಯ ಆಗಬೇಕಿದೆ. ಅಂತಹ ಒಂದು ಮಹತ್ವದ ಕ್ಷಣಕ್ಕಾಗಿ ಈ ಜನಪದ ವೃತ್ತಿ ಗಾಯಕರು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಈ ಕಾರ್ಯ ಆದಷ್ಟು ಬೇಗನೆ ಕಾರ್ಯರೂಪಕ್ಕೆ ಬರಲಿ ಎಂದು ಆಶಿಸೋಣ.

* * *


*     ಅಖಿಲ ಭಾರತ ೬೬ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಮಂಗಳೂರಿನಲ್ಲಿ ಜರುಗಿದ “ಹೊಸ ಶೋಧಗಳು” ಗೋಷ್ಠಿಯಲ್ಲಿ ದಿನಾಂಕ : ೧೪-೧೨-೧೯೯೭ರಂದು ಮಂಡಿಸಿದ ಪ್ರಬಂಧ (ಕರ್ನಾಟಕ ಭಾರತಿ) (ಸಂಯುಕ್ತ ಸಂಚಿಕೆ) ಜನವರಿ ಹಾಗೂ ಆಗಸ್ಟ್ ೧೯೯೮, ಸಂಪುಟ ೩೦, ಸಂಚಿಕೆ: ೧-೨ರಲ್ಲಿ ಪ್ರಕಟವಾದ ಲೇಖನದ ಪರಿಷ್ಕೃತ ರೂಪ – ಸಂಪಾದಕರು ಡಾ. ಎಂ.ಬಿ. ನೇಗಿನಹಾಳ, ಡಾ.ಎ. ಮುರಿಗೆಪ್ಪ

[1]     “ಲಂಬಾಣಿಗರಲ್ಲಿ ಹೋಳಿಹಬ್ಬ” : ಡಾ. ಹರಿಲಾಲ ಪವಾರ (ಡಾ. ದೇವೇಂದ್ರಕುಮಾರ ಹಕಾರಿ ಅವರ “ಮೆಚ್ಚುಗೆಯ ನುಡಿ”ಗಳಿಂದ ಆಯ್ದ ಭಾಗ)

[2]     “ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು” (ಮಹಾಪ್ರಬಂಧ) ಡಾ. ಜೀ.ಶಂ. ಪರಮಶಿವಯ್ಯ, ೧೯೭೯, ಪುಟ-ix

[3]     ಕರ್ನಾಟಕದಲ್ಲಿ ಜನಪದ ಕಾವ್ಯಗಳನ್ನು ಹಾಡುವ ಈ ವೃತ್ತಿಗಾಯಕರನ್ನು ಮೊಟ್ಟಮೊದಲ ಬಾರಿಗೆ ಗುರುತಿಸಿ, ಅವರ ಸಮಗ್ರ ಅಧ್ಯಯನವನ್ನು ಕೈಗೊಂಡ   ಕೀರ್ತಿ ಖ್ಯಾತ ಜಾನಪದ ವಿದ್ವಾಂಸರಾದ ಡಾ. ಜೀ.ಶಂ. ಪರಮಶಿವಯ್ಯನವರಿಗೆ ಸಲ್ಲುತ್ತದೆ. ಅವರ “ದಕ್ಷಿಣ ಕರ್ನಾಟಕ ಜನಪದ ಕಾವ್ಯ ಪ್ರಕಾರಗಳು” ಎಂಬ     ಮಹಾಪ್ರಬಂಧವು ಈ ವೃತ್ತಿಗಾಯಕ ಪರಂಪರೆಯನ್ನು ಕುರಿತಾದ ಒಂದು ಮೌಲಿಕ ಗ್ರಂಥವಾಗಿದೆ.

[4]     “ಲಂಬಾಣಿ ಸಂಸ್ಕೃತಿ” : ಡಾ. ಪಿ.ಕೆ. ಖಂಡೋಬಾ, ೧೯೮೮, ಪುಟ-೭೬

[5]     “ಚಿನ್ನ ಸಮುದ್ರ” ಈಗಿನ ದಾವಣಗೆರೆ ಜಿಲ್ಲೆಯ ಒಂದು ಕುಗ್ರಾಮ. ಢಾಡಿ ರಾಮಾನಾಯಕರು ಸಾರಂಗಿ ಮೇಳಕ್ಕಾಗಿ ೧೯೮೧ರಲ್ಲಿ “ಕರ್ನಾಟಕ ಜಾನಪದ ಮತ್ತು       ಯಕ್ಷಗಾನ ಅಕಾಡೆಮಿ”ಯಿಂದ ಪ್ರಶಸ್ತಿಯನ್ನು ಪಡೆದರು. ಇವರು ನುಡಿಸುವ “ಸಾರಂಗಿ” ವಾದ್ಯ ಕೆಲವರ ಬಾಯಲ್ಲಿ “ತಂಬೂರಿ”ಯಾಗಿ “ತಂಬೂರಿ     ರಾಮಾನಾಯಕ” ಎಂಬ ಖ್ಯಾತಿಯನ್ನೂ ಇವರಿಗೆ ತಂದಿತ್ತು.

ರಾಮಾನಾಯಕರ ಪರಿಚಯ ಲೇಖನಗಳನ್ನು ಕನ್ನಡಪ್ರಭ (೧೯೮೨)ರಲ್ಲಿ ಬೆನಕನಹಳ್ಳಿ ಜಿ.ನಾಯಕ ಮತ್ತು ಜಿ.ಎನ್. ಮೋಹನ್, ಸುಧಾ (೧೯೮೫)ದಲ್ಲಿ ಪ್ರಕಟಿಸುತ್ತಾ ಇವರನ್ನು ಆತ್ಮೀಯವಾಗಿ “ಸಾರಂಗಿ ರಾಮ” ಎಂದು ಕರೆದಿದ್ದಾರೆ. ಇವರ ಬದುಕು ಒಬ್ಬ ಕಲಾವಿದನ ಉಜ್ವಲತೆ-ದುರಂತಗಳಿಗೆ ಸಾಕ್ಷಿಯಾಗಿದೆ. ಕಲೆಗೆ ಸಾವಿಲ್ಲ, ಅದು ಚಿರಂತನ ಎಂಬುದಕ್ಕೆ ಸಾಕ್ಷಿಯಾಗಿ ರಾಮಾನಾಯಕರ ಮರಣಾನಂತರ ಮೂಲೆಗುಂಪಾದ ಕಲೆ ಅವರ ಮಗ ಉಮ್ಮಾ ನಾಯಕನಿಂದ ಮರುಹುಟ್ಟು ಪಡೆದಿರುವುದನ್ನು ಕಾಣಬಹುದು (ವಿವರಣೆಗೆ ನೋಡಿ: ಪ್ರಶಸ್ತಿ ಪಡೆದ ಮಹನೀಯರು ೧೯೮೦-೧೯೮೬)

[6]     ಶ್ರೀ ರಮಸಿಂಗ ಭಾನಾಮತ ಇವರು ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದು; ಬಂಜಾರಾ ಜನಾಂಗಕ್ಕೆ ಸಂಬಂಧಿಸಿ ಹಲವಾರು ಮಹತ್     ಕಾರ್ಯಗಳನ್ನು ಕೈಗೊಂಡು, ದೇಶ ವಿದೇಶ ಪರ್ಯಟನ ಮಾಡಿದವರಾಗಿದ್ದಾರೆ. ಇವರು ಢಾಡಿ ಬಂಜಾರಾ ಬುಡಕಟ್ಟಿನವರಾಗಿದ್ದು, ಶ್ರೀಯುತರು ೧೦-೦೬-        ೨೦೦೨ರಂದು ಸ್ವರ್ಗಸ್ಥರಾಗಿದ್ದಾರೆ. ಅವರ ಅಗಲಿಕೆಯಿಂದ ಬಂಜಾರಾ ಸಮುದಾಯಕ್ಕೆ ಅಪಾರ ಹಾನಿಯುಂಟಾಗಿದೆ.

[7]     “ಢಾಡಿ”ಯರು ಪಾರಂಪರಿಕ ಹಾಡುಗಾರರು. ಅವರು ವೃತ್ತಿ ಹಾಡುಗಾರರೂ ಹೌದು. ಕೆಳವರ್ಗದವರಾದ ಇವರಿಗೆ ಈ ಹಿಂದೆ ಮಿರಾಶಿಗಳೆಂದು ಕರೆಯುತ್ತಿದ್ದರು. ಸಮಾಜದಲ್ಲಿ ಅವರನ್ನು ಕೀಳಾಗಿ ಕಾಣಲಾಗುತ್ತಿತ್ತು. ಅವರಲ್ಲಿ ಡ್ರಮ್ಮು ಬಾರಿಸುವವರ ಗುಂಪು ಹಾಗೂ “ಸಾರಂಗಿ” ಬಾರಿಸುವವರ ಮತ್ತೊಂದು ಗುಂಪು ಇದೆ. ಅವರ ಹಾಡುಗಾರಿಕೆಯಲ್ಲಿ ಸಾಕಷ್ಟು ಸ್ವಾತಂತ್ರ್ಯವಿರುವುದನ್ನು ಕಾಣುತ್ತೇವೆ. ಈ “ಢಾಡಿ”ಗಳ ಕುರಿತಾದ ವಿವರಗಳು ಮೊಗಲರ ಇತಿಹಾಸ ಪುಸ್ತಕದಲ್ಲಿವೆ. (Joep Bor, 1987) ಜೋಪ ಬೋರ ಹೇಳುವಂತೆ (Fawuirullah 1665-66) ಫಕೀರುಲ್ಲಾದಲ್ಲಿ ಹಾಗೂ ವೇನಿಸಿನ ಪ್ರವಾಸ ಕಥನಗಳಲ್ಲಿ ಈ ಢಾಡಿಗಳ ಬಗ್ಗೆ ಮಾಹಿತಿ ಇದೆ. ಆದ್ದರಿಂದ ಈ ಸಂಗೀತ ಪರಂಪರೆ ಮೂಲತಃ ರಾಜಸ್ಥಾನಿಯರದು ಎನ್ನಲಾಗುತ್ತಿದೆ.

ಫಕೀರುಲ್ಲಾದ ಪ್ರಕಾರ ಢಾಡಿಗಳು ರಾಜಸ್ಥಾನದವರಾಗಿದ್ದು, ಅವರ ಕಲೆ ಬಹಳ ಹಳೆಯದು. ಅವರು ೪ರಿಂದ ೮ ಸಾಲಿನ ಕಕರಾವನ್ನು ಪರರ ಬಗ್ಗೆ ರಾಜರ,     ಅಥವಾ ಯುದ್ಧಗಳನ್ನು ಕುರಿತು ಹಾಡುತ್ತಿದ್ದರಂತೆ. ಫಕೀರುಲ್ಲಾದ ಪ್ರಕಾರ ಪಂಜಾಬಿ “ಢಾಡಿ”ಗಳು “ದೊಲ್ಕ” ಬಾರಿಸುತ್ತ ಯುದ್ಧಗಳ ಕಾವ್ಯಗಳನ್ನು         ಹಾಡುತ್ತಿದ್ದರಂತೆ. ಪಂಜಾಬಿ ಭಾಷೆಯಲ್ಲಿ “ಢಾಡಿ” ಎಂದರೆ ಡ್ರಮ್ಮು (ಡೊಲ್). ಹಾಡುವ ಸಂದರ್ಭದಲ್ಲಿ ಕನಿಷ್ಟ ಇಬ್ಬರಿದ್ದು, ಹಿರಿಯ ಉಸ್ತಾದನು ಆರಂಭದ ಪಲ್ಲವಿಯನ್ನು ಹಾಡುತ್ತಿದ್ದರೆ, ಅನುಯಾಯಿಗಳು (ಶಗಿರ್ದರು) ಅವುಗಳನ್ನು ಅನುಸರಿಸುತ್ತಿದ್ದರು.

೧೭ನೇ ಶತಮಾನದ “ಢಾಡಿ”ಯರ ಸಂಗೀತದ ಕಲೆ ಇಂದಿನ ಕಲೆಗೂ ಅನ್ವಯಿಸುತ್ತದೆ. ಮೈಕೆಲ್ ನಿಜವಾನ (Michael Nijhawan)ರು ಹೇಳುವಂತೆ ಢಾಡಿ ಸಂಗೀತದಲ್ಲಿ ಉಸ್ತಾದನು ಮುಖ್ಯ ಹಾಡುಗಾರನಾದರೆ, ಶಗಿರ್ದರು ಅದನ್ನು ಅನುಸರಿಸುತ್ತಾರೆ. ಈ ಸಂಗೀತದಲ್ಲಿ ರಾಜಪ್ರಿತರ ವೀರಯುಗ, ವೀರರು ಅವರ ಯದ್ಧಗಳು, ಅವರು ಯುದ್ಧಗಳ ಸಂದರ್ಭದಲ್ಲಿ ತ್ಯಾಗ ಮಾಡುವ ಮನೋಭಾವ ಮುಂತಾದವುಗಳನ್ನು ಹಾಡಲಾಗುತ್ತದೆ. ಅದರಂತೆ ಸಿಖರು ತಮ್ಮ ಗುರುಗಳ ಶೌರ್ಯ ಹಾಗೂ ತ್ಯಾಗಬಲಿದಾನದ ಬಗ್ಗೆ ಹಾಡುತ್ತಾರೆ. ಸಿಖರ ಗುರು ಹರಗೋವಿಂದ ಹಾಗೂ ಗುರು ಗೋವಿಂದರ ಬಗ್ಗೆ ಈ ಬಗೆಯ ಹಾಡುಗಳಿವೆ.

ಕೆಲವು ವಿದ್ವಾಂಸರು “ಢಾಡಿ” ಸಂಗೀತದ ಬಗ್ಗೆ ಭಿನ್ನವಾದ ಮಾಹಿತಿಯನ್ನು ಒದಗಿಸಿದ್ದಾರೆ. Charlotte Vaudeville (೧೯೬೨ : ೦೪ : ೪೫)ಯವರು ಈ ಸಂಗೀತದಲ್ಲಿ ಹಾಡುಗಾರರು ಡೋಲು ಬಾರಿಸುತ್ತ ಲಾವಣಿಯನ್ನು ಹಾಡುತ್ತಾರೆ ಎಂದಿದ್ದಾರೆ. ಶಾರ್ಲಲಗಳ ಪ್ರಕಾರ ಈ ಸಂಗೀತದಲ್ಲಿ ಭಕ್ತಿ ಪಂಥದ ಗುರುಗಳ   ಸ್ಮರಣೆ ಇದೆ ಎಂದು ತಿಳಿದು ಬರುತ್ತದೆ. “ಢಾಡಿ” ಎಂಬ ಪದವು ಭಕ್ತಿ ಸಂಗೀತದ ಪಠ್ಯಗಳಲ್ಲಿ ನಮೂದಾಗಿದೆ. ವಲ್ಲಾಭಾಚಾರ್ಯ ಪಂಥದ ಸ್ಥಾಪಕ ಸೂರದಾಸ (೧೪೮೩-೧೫೬೩)ರು ತಮ್ಮ ಭಾವಗೀತೆಗಳಲ್ಲಿ ಢಾಡಿ ಪದವನ್ನು ಬಳಸಿದ್ದಾರೆ. ಅನೇಕ ಭಕ್ತಿಪಂಥದ ಗುರುಗಳು ಪಂಜಾಬಿ ಭಾಷೆಯ ಸೌಂದರ್ಯಕ್ಕೆ ಕಾರಣರಾದರು. ಅವರು ಬಳಸುತ್ತಿದ್ದ ದೋಹಾ ಚರಣವು ಸಿಖರ ಧರ್ಮಗ್ರಂಥದಲ್ಲಿ ಇದೆ. ಢಾಡಿ ಸಂಗೀತಗಾರರು ದೋಹಾಗಳನ್ನು ಜನಪ್ರಿಯಗೊಳಿಸಿದರೆಂದು ವಡೆವಿಲ್ಲೆ ಎನ್ನುವವರು ವಾದಿಸುತ್ತಾರೆ. ಅವರ ಪ್ರಕಾರ ಢಾಡಿಗಳು “ಜಾಟ” ಹಾಗೂ “ಮಿರಾಸಿ”ಗಳಿಂದ ಉದಯವಾದವರು. ಮೂಲತಃ ಅವರು ಕಂಗಾನ ಹಾಡುಗಾರರಾಗಿದ್ದರು. ನಂತರ ಸಿಕಾರಾ (cikara) ಸಾರಂಗಿ ಹಾಗೂ ಡಾಪ ಸಂಗೀತ ಉಪಕರಣಗಳನ್ನು ಬಳಸತೊಡಗಿದರು. ವಿವರಣೆಗೆ ನೋಡಿ: Punjab’s Dhadi Tradition : Genre and Community in the Aftermath of partition Micheal Nijhawan. Assistant Prof. Social Anthropology, South Asia Institute of Heidelberg University, Germany Editior, Indian FOLKLIFE VELACHARY, CHENNI-INDIA.

[8]      ರಾಜಸ್ಥಾನದಲ್ಲಿ “ಭೋಪ” ಎಂಬ ಜನಪದ ವೃತ್ತಿಗಾರರು ಢಾಡಿಯರು ಹಾಗೆ ವೃತ್ತಿ ಮಾಡುವುದನ್ನು ಗಮನಿಸಬಹುದು.

[9]     ವಿವರಣೆಗೆ ನೋಡಿ: “ಕರ್ನಾಟಕ ಹೆಳವರು ಒಂದು ಜಾನಪದೀಯ ಅಧ್ಯಯನ,” (ಪ್ರಕಟಿತ ಪಿಎಚ್‌ಡಿ, ಮಹಾ ಪ್ರಬಂಧ), ಡಾ.ಹರಿಲಾಲ ಪವಾರ, ಕನ್ನಡ       ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೯೫, ಪುಟ-೮೪.

[10]    “ಗಾಜಿ ಮತ್ತು ಗಂಧಾ” ಇವರಿಬ್ಬರು ಭಾಟ ಜಾತಿಯ ಮೂಲ ಪುರುಷನ ಮಕ್ಕಳಾಗಿದ್ದರು. ಮುಂದೆ ಇವರು ಮುಸಲ್ಮಾನ ಧರ್ಮವನ್ನು ಸ್ವೀಕರಿಸಿದರು. ಈಗಲೂ       ಢಾಡಿಯರು ಮದುವೆಯ ಸಂದರ್ಭದಲ್ಲಿ ಇವರ ಹೆಸರಿನಲ್ಲಿ ಗಂಡುಮೇಕೆಯನ್ನು ಬಲಿಕೊಡುವ ಸಂಪ್ರದಾಯವಿದೆ ಎಂದು ಮಿ.ಎನ್.ಎಫ್. ಕಂಬರಲೇಜ್ ಅವರು ಉಲ್ಲೇಖಿಸಿದ್ದಾರೆ.

[11]    “Very often in the evening’s professional singers enliven village platforms. Bhatts and Dhadis entertain in the audiences   till Very late in the night and keep men and woman of all ages absolutely spell-bound with their ballads. These roving             minstrels are sometimes sccompained by instrumentalists, who carry folk instruments like an “Algoza, an Iktara and a Dhad sarangi and by playing on them add charm to the recital”. “FOLKLORE OF THE PUNJAB,” SOHINDER SING            BEDI.” (1971, p. 105-106).

[12]    Quoted by : R.V. Russell and Rai Bahadur Hiralal “The tribes and castes of the central provinces of india,” Vol.” ** 1975, pp. 170-172.

[13]    “ಕಿತಾಬೆ-ನೌರಸ”- ಡಾ. ಕೃಷ್ಣ ಕೊಲಾರ ಕುಲಕರ್ಣಿ ೧೯೯೭, ಪುಟ-೪೯.

[14]    ಬ್ರಿಟೀಷರ ಆಳ್ವಿಕೆಯ ಪೂರ್ವದಲ್ಲಿ ಢಾಡಿಗಳು ಸಂತರ ಆಶ್ರಯದಾತರ ಬಗ್ಗೆ ಹಾಡುತ್ತಿದ್ದರು. ಸ್ವಾತಂತ್ರ್ಯಸಂದರ್ಭದಲ್ಲಿ ಭಾರತ ವಿಭಜನೆಯಾದ್ದರಿಂದ ಇದು ಇನ್ನಷ್ಟು ಕಷ್ಟವಾಯಿತು. ಆದರೆ ಢಾಡಿ ಕಲೆ ಹಾಗೂ ಸಿಖ ಇತಿಹಾಸದ ಮಧ್ಯದ ಸಂಬಂಧ ಸಂಕೀರ್ಣವಾಗಿದೆ. ಇದಕ್ಕೆ ಕಾರಣವೆಂದರೆ ಸಿಖ ಹಾಗೂ ಸೂಫಿ ಪರಂಪರೆಗಳ ನಡುವಿನ ಅಂತರ, ಪಂಜಾಬದ ಮುಸ್ಲಿಮರು ಪಾಕಿಸ್ತಾನಕ್ಕೂ, ಪಾಕಿಸ್ತಾನದ ಹಿಂದೂ ಸಿಖರು ಭಾರತಕ್ಕೂ ಬಂದಾಗ ಅಲ್ಲಿ ಜನಜೀವನ ಸಂಪೂರ್ಣ ಬದಲಾಯಿತು. ಆದ್ದರಿಂದ “ಢಾಡಿ” ಸಂಗೀತ ಪರಂಪರೆಯಲ್ಲಿ ಅನೇಕ ಏರಿಳಿತಗಳಾದವು. ಢಾಡಿ ಸಂಸ್ಕೃತಿಗೆ ರಾಜಕೀಯ ಸೋಂಕು ತಗುಲಿತು. ಅಲ್ಲಿಯ ಮುಸಲ್ಮಾನರು ಢಾಡಿ ಸಂಗೀತವನ್ನು ಪ್ರದರ್ಶಿಸುವುದು ಕಡಿಮೆ ಮಾಡಿದರು. ಕಾರಣ “ಢಾಡಿ” ಕಲಾವಿದರನ್ನು ಗುರುದ್ವಾರದಲ್ಲಿ ಬಿಡಲಿಲ್ಲ. ಆಗ ಅವರು ಸೂಫಿ ಸಂತರ ಕುರಿತು ಮಾತ್ರ ಈ ಕಲೆಯನ್ನು ಬಳಸತೊಡಗಿದರು. ಹೀಗೆ ಮುಸ್ಲಿಂ ವಿರೋಧಿ ಭಾವನೆಗಳು “ಢಾಡಿ” ಸಂಗೀತ ಕಲೆಗೆ ಮಾರಕವಾದವು ಎಂದು ಹೇಳಬಹುದು.

[15]    “ದಕ್ಷಿಣ ಕರ್ನಾಟಕ ಜನಪದ ಕಾವ್ಯ ಪ್ರಕಾರಗಳು” : ಡಾ. ಜೀ.ಶಂ. ಪರಮಶಿವಯ್ಯ, ೧೯೭೯, ಪುಟ ೬೨.೬೩