ಕಾರವಾರ : ಕರ್ನಾಟಕ ಕಡಲತೀರದ ಕಣ್ಮಣಿ ಕಾರವಾರ. ಜಿಲ್ಲಾ ಕೇಂದ್ರವಾಗಿದೆ. ಅರ್ಧ ಚಂದ್ರಾಕೃತಿಯ ಜಗತ್ತಿನಲ್ಲಿಯೇ ಉತ್ತಮ ಬಂದರುಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ನೈಸರ್ಗಿಕ ಬಂದರು ಇದಾಗಿದೆ. ಕಾರವಾರ ಕಡಲದಂಡೆಯಿಂದ ಕೆಲವೆ ಅಂತರದಲ್ಲಿರುವ ದ್ವೀಪಗಳಾದ ದೇವಗಡ, ಕೂರ್ಮಗಡ, ಕಾಂಗಗಡ, ಮಧ್ಯಂಗಡ, ಅಂಜದ್ವೀಪಗಳು ಉತ್ತಮ ವಿಹಾರ ತಾಣಗಳಾಗಿದ್ದು ನೌಕಾವಿಹಾರಕ್ಕೆ ಅನುಕೂಲತೆ ಇದೆ. ಕಾರವಾರ ಸಮುದ್ರ ದಂಡೆ ಸುಂದರ, ಸ್ವಚ್ಛ; ಬ್ಲೂ ಲಗೂನ್ ಹಾಗು ಲೇಡಿಸ್ ಬೀಚಗಳು ಮನೋಹರವಾಗಿವೆ. ಕಡಲದಂಡೆಯಲ್ಲಿ ಸುಂದರವಾದ ತೋಟ, ಮತ್ಸೋದ್ಯಾನ, ಹೊಟೇಲುಗಳಿವೆ. ವಿಶ್ವಕವಿ ರವೀಂದ್ರನಾಥರು ಕಾರವಾರ ಕಡಲ ತೀರವನ್ನು ಮನಸಾರೆ ಮೆಚ್ಚಿ. “The sea beach of Karwar is certainly a fit place in which to realise that the beauty of nature is not a mirage of imagination but reflects the Joy of Infinite” ಎಂದಿದ್ದಾರೆ. ಕಪ್ಪುನದಿಯು ಕಡಲ ಸೇರುವ ಸಂಗಮಸಿರಿ, ಪೂರ್ವಕ್ಕೆ ಚಾಚಿದ ಹಸಿರು ಪರ್ವತ ಶ್ರೇಣಿ ಮತ್ತು ನೀಲ ಕಡಲ ನಡುವೆ ಚಾಚಿದ ಕಾರವಾರನಗರದ ಸೊಗಸು ಮನವನ್ನು ಸೂರೆಗೊಳ್ಳುವದರಲ್ಲಿ ಸಂದೇಹವಿಲ್ಲ. ಕಾರವಾರದ ಕಾಜುಭಾಗದಲ್ಲಿ ಈಶ್ವರ, ವಿಠ್ಠಲ ರುಕುಮಾಯಿ, ಸಾಯಿಕಟ್ಟೆ, ಮಾಲಾದೇವಿ ಗುಡಿಗಳು, ಬಾಡದಲ್ಲಿ, ರಾಮೇಶ್ವರ ಮಠ, ಬಂಡಿಕಟ್ಟೆ, ಸಪ್ತಕೋಟೇಶ್ವರ, ಗ್ರಾಮದೇವ, ಬ್ರಹ್ಮದೇವ, ರೇವತಿ, ರಾಮಕೃಷ್ಣ ಮಠ, ಪದ್ಮನಾಭಮಠಗಳು, ಕೋಡಿಭಾಗದಲ್ಲಿ ದುರ್ಗಾದೇವಿ, ಮುರಲೀಧರಮಠ, ಪೇಟೆಯಲ್ಲಿ ಮಾರುತಿ, ರಾಧಾಕೃಷ್ಣ ಮುಂತಾದ ದೇವಾಲಯಗಳಿವೆ. ದೋಭಿಘಾಟನಲ್ಲಿ ಇತ್ತೀಚೆಗೆ ನಿರ್ಮಿಸಿದ ಸುಂದರ ಸರಳಶೈಲಿಯ ಶ್ರೀಸತ್ಯಸಾಯಿ ಮಂದಿರವು ಪ್ರಶಾಂತವಾಗಿದೆ. ದೇವಿಭಾಗ ಎಂಬ ಸಮುದ್ರ ಮಧ್ಯದ ನೆಲೆಯಲ್ಲಿ ಪ್ರವಾಸಿಗರಿಗಾಗಿ ವಿಹಾರ-ವಸತಿಧಾಮವನ್ನು ಮನೋಹರವಾಗಿ ನಿರ್ಮಿಸಲಾಗಿದೆ.

ಅಂಕೋಲೆ : ಕಡಲ ಸನಿಹದ ಗುಡ್ಡಗಳಲ್ಲಿ ಬೆಳೆಯುವ ಅಂಕೋಲೆ ಮರದಿಂದ ಊರಿಗೆ ಹೆಸರು ಬಂದಿದೆ. ಕಾರವಾರದಿಂದ ೩೪ ಕಿ.ಮೀ. ದೂರದಲ್ಲಿರುವ ತಾಲೂಕಿನ ಕೇಂದ್ರ. ಬಿಜಾಪುರ ಸುಲ್ತಾನರ, ಸೋಂದೆ ರಾಜರ, ಹೈದರ ಮೊದಲಾದವರ ಆಳ್ವಿಕೆಗೆ ಒಳಗಾದ ಈ ಊರಿನ ನಡುವೆ ಕೋಟೆಯಿದ್ದು ಒಳಗೆ ಹನುಮಂತ ದೇವಾಲಯವಿದೆ. ಕದಂಬ, ಚಾಲುಕ್ಯ, ವಿಜಯನಗರ ಅರಸರ ಕಾಲದಲ್ಲಿ ಇದೊಂದು ವ್ಯಾಪಾರಿ ಕೇಂದ್ರವಾಗಿತ್ತು. ಶಿವಾಜಿ ಈ ಊರ ಮೇಲೆ ದಾಳಿ ಮಾಡಿ ಊರನ್ನು ಸುಟ್ಟಿದ್ದನು. ಅಂಕೋಲೆಯ ಸುತ್ತಮುತ್ತ ಜೈನಧರ್ಮ ಚೆನ್ನಾಗಿ ಬೇರೂರಿದ್ದು ಅಲ್ಲಲ್ಲಿ ದೊರೆಯುವ ವೀರಗಲ್ಲು, ಶಿಲಾಶಾಸನಗಳಿಂದ ತಿಳಿದು ಬರುತ್ತದೆ. ಬೆಲೆಕೇರಿ, ಹೊನ್ನೆಬೈಲ, ಬಾವಿಕೇರಿ, ಬಬ್ರುವಾಡೆಗಳಲ್ಲಿ ಅನೇಕ ಜೈನ ಅವಶೇಷಗಳು ಕಾಣಸಿಗುತ್ತವೆ. ಹೊನ್ನಬೈಲಿನಲ್ಲಿ ಗವಿಗಳಿವೆ. ಬಬ್ರುವಾಡೆಯಲ್ಲಿ ನಾಥ ಸಂಪ್ರದಾಯದ ಮತ್ಸೇಂದ್ರನಾಥನ ಬಹುದೊಡ್ಡ ವಿಗ್ರಹವು ೫ ಅಡಿ ಎತ್ತರ ೪ ಅಡಿ ಅಗಲವಿದ್ದು ಈ ಸಂಪ್ರದಾಯದ ವಿಗ್ರಹಗಳಲ್ಲಿ ಭಾರತದಲ್ಲಿಯೇ ದೊಡ್ಡದೇನೊ ಎಂದು ಹೇಳಲ್ಪಡುತ್ತದೆ. ಬಬ್ರುದೇವರೆಂದು ಇದನ್ನು ಈಗ ಕರೆಯುತ್ತಾರೆ. ಇಲ್ಲಿ ಇಸ್ಲಾಂಧರ್ಮವೂ ಸಾಕಷ್ಟು ಶಕ್ತಿಯುತವಾಗಿ ಬೆಳೆಯಿತು. ಎರಡು ಮಹತ್ವದ ಮಸೀದಿಗಳು ಅಂಕೋಲೆಯಲ್ಲಿವೆ. ಮಹಮ್ಮದ ಪೈಗಂಬರರ ಶಿಷ್ಯನಾದ ಅಲಿಯ ಹತ್ತಿರದ ಸಂಬಂಧಿಯಾದ ಸೈಯದ ಫತುಲ್ಲಾ ಬಗದಾದಿಯ ಸ್ಮಾರಕ ಮಸೀದೆಯೂ ಇವುಗಳಲ್ಲಿ ಒಂದು. ಬಗದಾದಿಯು ಇಸ್ಲಾಂಧರ್ಮದ ಪ್ರಸಾರಮಾಡಿ ಇಲ್ಲಿಯೇ ಮರಣಹೊಂದಿದನು. ಭಾರತದಲ್ಲಿಯೇ ಪ್ರಖ್ಯಾತಿಯುಳ್ಳ ಮಸೀದೆ ಇದು. ಅಂಕೋಲೆಯಲ್ಲಿ ಭೂಮಿತಾಯಿ ದೇವರೇ ಪ್ರಮುಖವಾಗಿದ್ದು ವರುಷಕೊಮ್ಮೆ ವಿಜೃಂಭಣೆಯಿಂದ ಬಂಡಿ ಹಬ್ಬವನ್ನು ಆಚರಿಸುವರು. ಇದು ಮಾತೃಪ್ರಧಾನ ಸಂಸ್ಕೃತಿಯವರ ಹಬ್ಬ. ಪಿತೃಪ್ರಧಾನದವರೂ ಬಂದು ಸೇರಿ ಶಾಂತಾದುರ್ಗಾ ಎಂದು ಈ ದೇವಿಯನ್ನು ಕರೆದು ಹಬ್ಬ ಆಚರಿಸಿದರು. ಈ ಗುಡಿಯ ಸುತ್ತಲೂ ಅಡ್ಲೂರ ಯುದ್ಧದಲ್ಲಿ ಮಡಿದ ನಾಡವರ ವೀರಬಂಟರ ಎರಡು ಗುರ್ತುಗಳಿವೆ.

೧೬ನೇ ಶತಮಾನದಲ್ಲಿ ಗೋವೆಯಲ್ಲಿ ಪೂರ್ತುಗೀಜರು ಹಿಂದೂಗಳಿಗೆ ಹಿಂಸೆ ಕೊಡ ತೊಡಗಿದಾಗ ಅಲ್ಲಿಂದ ಸಮುದ್ರ ಮಾರ್ಗವಾಗಿ ಕೊಂಕಣಿಗರು ಶೇಣ್ವಿಗಳು ವೈಶ್ಣವರು ಇಲ್ಲಿ ಬಂದು ಮಠಾಕೇರಿ ಎಂಬಲ್ಲಿ ನೆಲೆಸಿ ಗೊವೆಯಿಂದ ತರಲ್ಪಟ್ಟ ಮಹಾಮಾಯಿ, ಕಂಡೋದರಿ, ಅಂಜದೀವದಿಂದ ತರಲ್ಪಟ್ಟ ಆರ್ಯಾದುರ್ಗಾ ದೇವರುಗಳ ಮಂದಿರ-ಮಠಗಳನ್ನು ಸುಂದರವಾಗಿ ರಚಿಸಿರುವರು. ಇವಲ್ಲದೆ ಸುಂದರ ನಾರಾಯಣ, ವೆಂಕಟರಮಣ, ಹಳೆಪೇಟೆಯ ಗಣಪತಿ, ಅಂಬರಕೊಡ್ಲದಲ್ಲಿ ನಾರಾಯಣ, ಹೊನ್ನೆಕೇರಿಯಲ್ಲಿ ಮಹಾದೇವ, ವಿಠೋಬ, ಕಾಳಭೈರವ, ಕುಂಬಾರಕೇರಿಯಲ್ಲಿ ಕದಂಬೇಶ್ವರ ಮುಂತಾದ ಆಕರ್ಷಕ ದೇವಾಲಯಗಳಿವೆ. ಅಂಕೋಲೆಯ ಕಡಲದಂಡೆಯ ಗುಡ್ಡದ ಮೇಲೆ ‘ಬಸವನ ಕಲ್ಲು’ ಎಂಬ ರಮಣೀಯ ಪ್ರದೇಶವಿದೆ. ಅಲ್ಲಿ ಬಸವ ಎಂದು ಹೇಳಲ್ಪಡುವ ಕಲ್ಲಿನ ಮೇಲೆ ಅಷ್ಟು ಎತ್ತರ ಪ್ರದೇಶದಲ್ಲಿ ಸದಾ ನೀರು ತೊಟಕುತ್ತ ಇರುವದು ಕುತೂಹಲಕಾರಿಯಾಗಿದೆ.

ಅಂಕೋಲೆ ಗೋಡಂಬಿ ಹಾಗು ಇಸಾಡ ಮಾವಿನಹಣ್ಣುಗಳಿಗೆ ತುಂಬಾ ಪ್ರಸಿದ್ಧವಾಗಿದೆ. ಸ್ವಾತಂತ್ರ್ಯ ಚಳುವಳಿಯ ಕಾಲಕ್ಕೆ ಅಂಕೋಲೆ ತಾಲೂಕಿನಲ್ಲಿ ಸತ್ಯಾಗ್ರ ಚಳುವಳಿ ಪ್ರಭಾವಶಾಲಿಯಾಗಿ ನಡೆದದ್ದು ಇತಿಹಾಸ ಪ್ರಸಿದ್ಧವಾಗಿದೆ. ಅಂಕೋಲೆಯಿಂದ ೫ ಕಿ.ಮೀ. ದೂರದಲ್ಲಿ ಬೆಳೆಂಬರ ಎಂಬಲ್ಲಿ ಅರ್ಧಾಂಗವಾಯುವಿಗೆ ತೀವ್ರಗುಣಕಾರಿಯಾದ ಗಿಡಮೂಲಿಕೆ ಔಷಧವನ್ನು ಹಾಲಕ್ಕಿ ಒಕ್ಕಲಮನೆತನದವರು ಕೊಡುತ್ತಾರೆ. ಅದರಂತೆ ಅಂಕೋಲೆಯಿಂದ ಕಾರವಾರಕ್ಕೆ ಹೋಗುವ ದಾರಿಯಲ್ಲಿ ತೋಡೂರು ಎಂಬಲ್ಲಿ ಎಲುವು ಮುರಿದರೆ ಸರಿಪಡಿಸುವ ಸಿದ್ಧೌಷಧವನ್ನು ಹಾಲಕ್ಕಿ ಒಕ್ಕಲಿಗರೆ ಕೊಡುತ್ತಾರೆ.

ಕುಮಟೆ : ಕಾರವಾರ ದಿಂದ ೮೦ ಕಿ.ಮೀ. ಹೊನ್ನಾವರದಿಂದ ೨೦ ಕಿ.ಮೀ. ದೂರದಲ್ಲಿರುವ ಕುಮಟೆ ಸಮುದ್ರ-ನದಿಗಳ ಸಾಮಿಪ್ಯದಿಂದಾಗಿ ಪ್ರಸಿದ್ಧ ಬಂದರವೂ ವ್ಯಾಪಾರಿಕೇಂದ್ರವೂ ಆಗಿತ್ತು. ಹಿಂದೆ ‘ಕುಮಟಾ ಕಾಟನ್’ ಎಂದು ಜಗತ್ಪ್ರಸಿದ್ಧಿ ಪಡೆದ ಹುಬ್ಬಳ್ಳಿ-ಬಳ್ಳಾರಿ ಮತ್ತು ಮಹಾರಾಷ್ಟ್ರ ಪ್ರದೇಶಗಳಿಂದ ಇಲ್ಲಿಗೆ ಬಂದು ರಪ್ತಾಗುತ್ತಿದ್ದ ಹತ್ತಿಯ ವ್ಯಾಪಾರಿ ಬಲು ಜೋರಾಗಿತ್ತು. ಈಗ ತಾಲೂಕಿನ ಕೇಂದ್ರವಾಗಿದ್ದು ವಾಣಿಜ್ಯ, ಶಿಕ್ಷಣ, ಅಡಿಕೆ ಗೋಡಂಬಿ ವ್ಯಾಪಾರ, ಗಂಧದ ಗುಡಿಗಾರಿಕೆ ಇತ್ಯಾದಿಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿಯ ದೇವಾಲಯಗಳು ಸುಂದರವೂ, ಕಲಾತ್ಮಕವೂ ವಿಶಾಲವೂ ಆಗಿದ್ದು ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವಲ್ಲಿ ಹೆಸರಾಗಿವೆ. ಕುಮಟೆಗೆ ಹೆಸರು ಬಂದದ್ದು ಇಲ್ಲಿರುವ ಕುಂಭೇಶ್ವರ ದೇವಸ್ಥಾನದಿಂದ. ಈ ಊರನ್ನು ಹಿಂದೆ ಕುಂಭಾಪುರವೆಂದೂ, ಕುಂಭಟಂ ಕುಮ್ಮಿ, ಕುಂಭಟೇಮ್ ಮೊದಲಾದ ಹೆಸರಿನಿಂದ ಕರೆಯಲಾಗಿದೆ. ಗ್ರಾಮದೇವತೆಯಾದ ಭೂಮಿತಾಯಿ (ಶಾಂತಿಕಾಪರಮೇಶ್ವರಿ-ಅಮ್ಮನವರ) ದೇವಸ್ಥಾನದಲ್ಲಿ ವಿಗ್ರಹದ ಹಿಂದುಗಡೆ ಮಹಾಹುತ್ತ ಬೆಳೆದಿದ್ದು ಆಕರ್ಷಕವಾಗಿದೆ. ಜಟ್ಟಗ ದೇವಸ್ಥಾನ, ಜೈನ ಬಸದಿಯ ಪಾರ್ಶ್ವನಾಥ, ಶಾಂತೇರಿ ಕಾಮಾಕ್ಷಿ, ಕಾವೇರಿ ಕಾಮಾಕ್ಷಿ, ಮಾಹಾಳಸಾ, ವೆಂಕಟರಮಣ, ಉಪ್ಪಿನ ಗಣಪತಿ, ಮಹಾಸತಿ ದೇವಾಲಯಗಳು ಆಕರ್ಷಣೀಯವಾಗಿವೆ. ಹೆಚ್ಚಿನ ದೇವಾಲಯಗಳಲ್ಲಿ ಕಲ್ಯಾಣಮಂಟಪ ಹಾಗು ವೇದಿಕೆ, ರಂಗಸ್ಥಳಗಳಿದ್ದು ಸಾಮಾಜಿಕ ಕಾರ್ಯಗಳಿಗೆ ಸಹಾಯಕಾರಿಯಾಗಿವೆ. ಭೂಮಿತಾಯಿ ದೇವಾಲಯದ ಬಂಡಿಹಬ್ಬ ವಿಶೇಷವಾಗಿದ್ದು ಆಗ ಹೂವಿನ ಮಕ್ಕಳು-ಕೋಲಕಾರರು ಬೆಂಕಿಯ ಕುಂಡದಲ್ಲಿ ಹಾಯ್ದು ಹೋಗುವ ದೃಶ್ಯ ಅದ್ಭುತವಾದದ್ದು. ಅದರಂತೆ ಕಾವೇರಿ ಕಾಮಾಕ್ಷಿ ದೇವಸ್ಥಾನದ ಉತ್ಸವದಲ್ಲಿ ಬರಿಗೈಯಿಂದ ಕುದಿಯುವ ಎಣ್ಣೆ ಕಾವಲಿಯಿಂದ ವಡೆಗಳನ್ನು ತೆಗೆಯುವ ಚಮತ್ಕಾರ ನಾಸ್ತಿಕರಲ್ಲೂ ಆಸ್ತಿಕ ಭಾವನೆಯನ್ನು ಪ್ರಚೋದಿಸುವದು. ಮಹಾಲಸಾ ದೇವಾಲಯಗಳಲ್ಲಿಯ ಶ್ರೇಷ್ಠ ದರ್ಜೆಯ ಕಾವಿಕಲೆಯ ಚಿತ್ರಣಗಳು ಹಾಗು ದೇವಾಲಯಗಳಲ್ಲಿಯ ಕಟ್ಟಿಗೆಯ ಛಾವಣಿಗಳಲ್ಲಿನ ಕೆತ್ತನೆಯ ಕಲಾಕುಸುರು ಕಲಾರಸಿಕರಿಗೆ ಪಾಠಶಾಲೆಯಂತಿವೆ. ಕುಮಟೆಯ ಸುತ್ತಲಿನ ಪ್ರದೇಶ ರಮ್ಯವಾಗಿದೆ. ಗಿಬ್ ಹೈಸ್ಕೂಲಿನ ಗುಡ್ಡ ಊರ ನಡುವೆ ಇದ್ದು ಇಲ್ಲಿಂದ ದೂರದವರೆಗಿನ ಸುತ್ತಲಿನ ನೋಟ ಬಲು ರಮ್ಯ. ಬಳಿಯಲ್ಲಿರುವ ಹಳಕಾರ, ಮಣಕಿ ಹಾಗು ಕುಮಟೆ ಹೊಳೆಯ ಸ್ಥಳಗಳು ನೌಕಾವಿಹಾರಕ್ಕೆ ಯೋಗ್ಯವಾಗಿವೆ. ಸಮುದ್ರ, ಬಂದರ ಬಳಿಯ ಬ್ರಹ್ಮದೇವರ ಗುಡ್ಡ ಉತ್ತಮ ವಿಹಾರ ಸ್ಥಳ. ದೇಶವಿದೇಶಿಯರನ್ನು ಆಕರ್ಷಿಸುವ ಸ್ಥಾನ ಗುಡಿಗಾರರಲ್ಲಿ. ಇಲ್ಲಿಯ ಗುಡಿಗಾರರು ತಯಾರಿಸುವ ಗಂಧ, ಹಸ್ತಿದಂತ, ಕಲ್ಲು, ಕಟ್ಟಿಗೆ, ಬೆಂಡುತಳ ಕೆತ್ತನೆಯ ವಸ್ತು ವಿಶೇಷಗಳು, ಮೂರ್ತಿ ಮಂಟಪಗಳು, ಚಿತ್ರಫಲಕ, ರಥ, ಗೃಹಾಲಂಕಾರ ವಸ್ತು, ಹಾರ ಇತ್ಯಾದಿಗಳು ಜಗತ್ಪ್ರಸಿದ್ಧ. ಕತ್ತದ ಬೆತ್ತದ ವಸ್ತುಗಳನ್ನು ನಿರ್ಮಿಸುವ ಕೈಗಾರಿಕಾ ಶಾಲೆಗಳು ಇಲ್ಲಿವೆ. ಗೋಕರ್ಣ, ಕರಾಕಾನಮ್ಮನ ಬೆಟ್ಟ, ಯಾಣ, ಧಾರೇಶ್ವರ, ಬಾಡ ಮೊದಲಾದ ಪ್ರೇಕ್ಷಣೀಯ ಸ್ಥಳಗಳು ಹತ್ತಿರವಿರುವದರಿಂದ ಈ ಊರಲ್ಲಿ ಪ್ರವಾಸಿ ಕೇಂದ್ರವನ್ನು ಸ್ಥಾಪಿಸಿ ಸರ್ವ ಅನುಕೂಲತೆಗಳನ್ನು ಪ್ರವಾಸಿಗರಿಗೆ ಒದಗಿಸಬೇಕು. ಜಿಲ್ಲೆಯ ಮಧ್ಯವರ್ತಿಸ್ಥಳವಾಗಿದ್ದು ಇಲ್ಲಿಂದ ಜಿಲ್ಲೆಯ ಇನ್ನುಳಿದ ಸ್ಥಳಗಳಿಗೆ ಹೋಗಲು ಸೌಕರ್ಯಗಳಿವೆ.

ಕುಮಟೆಯಿಂದ ೯ ಕಿ.ಮೀ. ದೂರದಲ್ಲಿ ಬಾಡ ಎಂಬಲ್ಲಿ ಅಮ್ಮನವರ ದೇವಾಲಯವು ಸಮುದ್ರ ದಂಡೆಯ ಬಳಿಯಿದ್ದ ಎತ್ತರದ ಗುಡ್ಡದ ಮೇಲಿದ್ದು ಸುತ್ತಲಿನ ಚೆಲುವು ನಯನಾಕರ್ಷಕ. ಹಾಗೆಯೇ ಮುಂದೆ ಸಾಗಿದರೆ ಕಾಗಾಲ ಗುಡ್ಡದ ಮೇಲೆ ಜೀರ್ಣವಾದ ಕೋಟೆ ಕಾಣುತ್ತದೆ. ಇಲ್ಲಿಂದ ಅಘನಾಶಿನಿ ನದಿ ಸಮುದ್ರ ಸೇರುವಾಗ ನಿರ್ಮಾಣವಾದ ಹಿನ್ನೀರಿನ ಹಾಗು ಸಂಗಮದ ನೋಟ ಅವರ್ಣನೀಯವಾಗಿವೆ.

ಹೊನ್ನಾವರ : ದಕ್ಷಿಣೋತ್ತರ ಕನ್ನಡ ಜಿಲ್ಲೆಗಳು ಒಂದಾಗಿ ಇದ್ದಾಗ ಹೊನ್ನಾವರವೇ ಆ ಪ್ರದೇಶಗಳ ಜಿಲ್ಲಾ ಕೇಂದ್ರವಾಗಿತ್ತು. ಈಗ ತಾಲೂಕಾ ಕೇಂದ್ರವಾಗಿದೆ. ನವೇರಾ, ಹೊನ್ನಾವರ, ಓನೋರ, ಹಿನೊರ ಹೊನ್ನುರು ಮೊದಲಾದ ಹೆಸರಿದ್ದ ಈ ಊರಿಗೆ ಕ್ರಿ.ಶ. ೮೦೦ ರರ ಸುಮಾರಿಗೆ ಆಳಿದ ರಾಣಿ ಹೊನ್ನಮ್ಮನಿಂದಾಗಿ ಹೆಸರು ಬಂದಿದೆ ಎಂದು ಕೆಲವರು ಹೇಳುತ್ತಾರೆ. ಅರಬ್ಬಿ ತುರ್ಕಿ ದೊರೆಗಳು ಹೊನ್ನಾವರದ ಮೂಲಕವೇ ವಿಜಯನಗರ ರಾಜರೊಡನೆ ಕುದುರೆ ಇತ್ಯಾದಿ ವ್ಯಾಪಾರ ಮಾಡುತ್ತಿದ್ದರು. ಕದಂಬ, ರಾಷ್ಟ್ರಕೂಟ, ಚಾಲುಕ್ಯ, ವಿಜಯನಗರ, ಬಿದನೂರ ರಾಜರುಗಳಾಳಿದ್ದಾರೆ. ೧೫೦೩ರಲ್ಲಿ ವಾಸ್ಕೋಡಿಗಾಮಾನು ಈ ಊರನ್ನು ಸಂಪೂರ್ಣ ಸುಟ್ಟು ಕೊನೆಗೆ ಇಲ್ಲೊಂದು ಕಾರ್ಖಾನೆಯನ್ನು ಸ್ಥಾಪಿಸಿದನು. ೧೫೯೯ ರಲ್ಲಿ ಕ್ರಿಶ್ಚಿಯನ್ ಚರ್ಚು ಪೋರ್ತುಗೀಜರಿಂದ ಕಟ್ಟಲ್ಪಟ್ಟಿತು.’ಸಾನ್ ಸಾಲ್ವಾಡೋರ್’ ಚರ್ಚು ಇಲ್ಲಿದ್ದು ಕ್ರಿಶ್ಚಿಯನ್ ಜನವಸತಿ ಹೆಚ್ಚು. ಶರಾವತಿನದಿಯ ಸೇತುವೆ ರಾಜ್ಯದಲ್ಲಿಯೆ ದೊಡ್ಡದು. ಸದಾ ಜನಸಂದಣಿಯಿಂದೊಪ್ಪುವ ಬಂದರ, ಶರಾವತಿ ನದಿಯ ಪರಿಸರ ಸುತ್ತಲಿನ ಗುಡ್ಡ ಬೆಟ್ಟಗಳಿಂದ, ಹುಲುಸಾದ ತೆಂಗು, ಮಾವು, ಹಲಸು ಮೊದಲಾದ ಮರಗಳ ಚಪ್ಪರದಿಂದ ಹೊನ್ನಾವರ ತುಂಬಾ ಚೆಲುವಿನ ಊರಾಗಿದೆ. ಕರ್ನಲ್ ಹಿಲ್, ರಾಮತೀರ್ಥ ಪ್ರದೇಶಗಳು ಆಕರ್ಷಣೀಯ. ಶರಾವತಿನದಿಯ ಉತ್ತರ ದಂಡೆಗೆ ಹೊಂದಿ ಹಿಂದೆ ಪಾಳಯಗಾರರು ವಾಸಿಸಿದ್ದ ‘ಕೆಳಗಿನ ಪಾಳ್ಯ’ ಎಂಬ ನೆಲೆಯಿದೆ. ದುರ್ಗಾಕೇರಿಯಲ್ಲಿ ದಂಡಿನ ದುರ್ಗಾದೇವಿ ಗುಡಿಯಿದೆ. ಹೊನ್ನಾವರ ಸೈನ್ಯದ ಠಾಣೆಯಾಗಿತ್ತು ಎಂಬುದಕ್ಕೆ ಇವು ಸಾಕ್ಷಿಗಳಾಗಿವೆ. ಲಕ್ಷ್ಮೀನಾರಾಯಣ, ಹನುಮಂತ, ವಿಠೋಬ, ರಾಮೇಶ್ವರ, ವೆಂಕಟರಮಣ, ಗೋಪಾಲಕೃಷ್ಣ, ಮೂಡುಗಣಪತಿ, ಶ್ರೀ ರಾಮಮಂದಿರ ಮೊದಲಾದ ದೇವಾಲಯಗಳಿದ್ದು ಧಾರ್ಮಿಕ ಹಾಗು ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಿಕೊಂಡು ಬಂದಿವೆ.

ಇಡಗುಂಜಿ, ಗುಂಡಬಾಳೆ, ಕರಿಕಾನಮ್ಮ, ಬಸವರಾಜದುರ್ಗ, ಗುಣವಂತೆ, ಮಂಕಿ, ಮಾವಿನಕುರ್ವೆ, ತಂಬೊಳ್ಳಿ, ಕುದ್ರಗಿ, ಗೇರುಸೊಪ್ಪೆ, ಅಪ್ಸರಕೊಂಡ ಮೊದಲಾದ ಹಲವು ಪ್ರೇಕ್ಷಣೀಯ ಸ್ಥಳಗಳು ಹತ್ತಿರವಿದೆ.

ಭಟಕಳ : ಮಹಾಸಾಧು ಭಟ್ಟಾಕಲಂಕನಿಂದ ಊರಿಗೆ ಈ ಹೆಸರು ಬಂತೆಂದು ಹೇಳುತ್ತಾರೆ. ೧೪೧೪ ಹಾಗು ೧೫೪೫ ರ ಉಲ್ಲೇಖಗಳಲ್ಲಿ ಈ ಊರಿಗೆ ‘ವೃತ್ತಪುರ’ ಎಂಬ ಹೆಸರಿದೆ. ಇದರಿಂದ ಬಟ್ಟ (ವೃತ್ತ)+ಕಳ (ಸ್ಥಳ) ಎಂಬ ಕನ್ನಡ ಪದಗಳಿಂದ ಊರಿಗೆ ಹೆಸರು ಬಂದಿರಬಹುದೆಂತಲೂ ಊಹಿಸಬಹುದು. ಏಕೆಂದರೆ ಭಟಕಳದ ಪ್ರದೇಶ ವೃತ್ತಾಕಾರದಲ್ಲಿದೆ. ಕಾರವಾರವನ್ನು ಬಿಟ್ಟರೆ ಭಟಕಳವು ಸುಂದರ ರೇವಾಗಿದೆ. ಮೊದಲು ಈ ಊರಿಗೆ ಚೆನ್ನಪಟ್ಟಣವೆಂತಲೂ ಹೆಸರಿತ್ತು. ವಾಸ್ಕೋಡಿಗಾಮನು ಈ ಬಂದರಿಗೆ ‘ಸೆಂಟ-ಮೆರಿ’ ಎಂದು ಹೆಸರಿಟ್ಟಿದ್ದನು. ೧೩೨೧ ರಲ್ಲಿ ಅರಬರಾಜನು ಭಟ್ಕಳವನ್ನು ಆಳುತ್ತಿದ್ದನು. ಅದರಿಂದ ನವಾಯತ ಸಮಾಜ ನಿರ್ಮಿತವಾಗಿ ಈಗ ಊರಲ್ಲಿ ಅವರ ಸಂಖ್ಯೆಯೇ ಹೆಚ್ಚಿದ್ದು ಸುಂದರವಾದ ವಿಶಾಲವಾದ ಬಂಗ್ಲೆಗಳನ್ನು ಕಟ್ಟಿಸಿಕೊಂಡು ವ್ಯಾಪಾರ ಮಾಡಿಕೊಂಡಿದ್ದಾರೆ. ಎಂಟು ಮಸೀದಿಗಳಲ್ಲಿ ಸುಲ್ತಾನ ಮಸೀದಿ, ಜುಮ್ಮಾ ಮಸೀದಿಗಳು ಮುಖ್ಯವಾಗಿವೆ.

ಗ್ರಾಮದೇವತೆ ‘ಮಾರುತಿ’ಯಾಗಿದೆ. ರಾಮನವಮಿಗೆ ಜಾತ್ರೆ ನಡೆಯುವದು. ಅನೇಕ ದೇವಾಲಯಗಳಿವೆ. ಮೂಡಭಟಕಳದ ದೇವಾಲಯದಲ್ಲಿ ರಾಮಾಯಣದ ಕತೆಯನ್ನು ಆದಿಯಿಂದ ಅಂತ್ಯದವರೆಗೆ ಕಲಾತ್ಮಕವಾಗಿ ಚಿತ್ರಿಸಲಾಗಿದೆ.

ಭಟಕಳದ ೧೩ ಬಸ್ತಿಗಳು ಪ್ರೇಕ್ಷಣೀಯವಾಗಿವೆ. ಇವುಗಳ ಕಲಾಕುಸುರಿಗೆ ವಿದೇಶಿ ಯಾತ್ರಿಕರು ಬೆರಗಾಗಿದ್ದಾರೆ. ಚಂದ್ರನಾಥ, ಪಾರ್ಶ್ವನಾಥ, ಅಡಿಕೆ ನಾರಾಯಣ, ನರಸಿಂಹ ಮೊದಲಾದ ಗುಡಿಗಳು ಚಿತ್ತಾಕರ್ಷಕವಾಗಿವೆ. ಕೇತ ಪೈ ನಾರಾಯಣದೇವಾಲಯದಲ್ಲಿ ಪೌರಾಣಿಕ ಹಾಗೂ ಸಾಮಾಜಿಕ ವಾಸ್ತುಶಿಲ್ಪಗಳು ಅತ್ಯಂತ ಪ್ರಶಂಸನೀಯವಾಗಿವೆ. ಅನೇಕ ಶಿಲಾಶಾಸನಗಳಿದ್ದು ನಾರಾಯಣ ನಾಯಕ, ಜಟ್ಟಪ್ಪನಾಯಕ, ಖೇತ ಪೈ ಮೊದಲಾದವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಭಟಕಳದ ದೀಪಸ್ಥಂಬದ ಬಳಿ ನಿಂತಾಗ ಕಾಣುವ ದೃಶ್ಯ ಸುಂದರ. ಭಟಕಳದಿಂದ ೬.೪ ಕಿ.ಮೀ. ಅಂತರದಲ್ಲಿ ಸಮುದ್ರದಲ್ಲಿ ನೇತ್ರಾಣಿ ಮತ್ತು ಜಾಲಿಕುಂಡ (ಜಾಲಿದ್ವೀಪ)ಗಳೆಂಬ ನಡುಗಡ್ಡೆಗಳಿದ್ದು ಉತ್ತಮ ವಿಹಾರಧಾಮಗಳನ್ನಾಗಿ ಇವುಗಳನ್ನು ಪರಿವರ್ತಿಸಬಹುದು.

ಶಿರಸಿ : ಘಟ್ಟದ ಮೇಲಿನ ಎತ್ತರ ನೆತ್ತಿಯ ಮೇಲಿನ ಪ್ರದೇಶವಾಗಿದ್ದರಿಂದಲೇ ಶಿರಸಿ ಎಂದು ಹೆಸರಾಗಿದೆ ಎನ್ನುತ್ತಾರೆ. ‘ಶಿರೀಷ’ ಎಂಬ ಸಂಸ್ಕೃತ ಪದದಿಂದ ಉತ್ಪತ್ತಿಯನ್ನು ಸೂಚಿಸುತ್ತಾರೆ. ಗೋವೆಯ ಒಂದು ಶಿಲಾಶಾಸನದಲ್ಲಿ ‘ಶಚಿಪುರಾಚ ಶಿರಸಿ’ ಎಂದಿದೆ. ಬುಕಾನನ್ನು ಇಲ್ಲಿಗೆ ಬಂದಾಗ ‘ಸೆರ್ಸಿ’ ಒಂದು ಸಣ್ಣ ಹಳ್ಳಿಯಾಗಿದ್ದು ಸೋಂದೆಯ ತಹಶೀಲಿಗೆ ಸೇರಿದ್ದು ಬೇರೆ ಬೇರೆ ಊರಿನ ರಸ್ತೆಗಳು ಕೂಡುವ ಸ್ಥಳವಾಗಿತ್ತು. ಶಾಸನದ ಪ್ರಕಾರ ಶಿರಿಷೆಯಲ್ಲಿ ಯುದ್ಧನಡೆದಿತ್ತು. ಇಲ್ಲಿ ಸೋಂದೆಯ ರಾಮಚಂದ್ರನಾಯಕನು ಕೋಟೆ ಕಟ್ಟಿಸಿ ಸ್ಥಳಕ್ಕೆ ಚೆನ್ನಪಟ್ಟಣವೆಂದು ಕರೆದನು. ಅಡಿಕೆ, ಯಾಲಕ್ಕಿ, ಮೆಣಸುಗಳ ಸಾಂಬಾರ ವಸ್ತುಗಳ ಪ್ರಮುಖ ವ್ಯಾಪಾರಿ ಕೇಂದ್ರವಾಗಿ ಶಿರಸಿ ಭರದಿಂದ ಬೆಳೆಯಿತು. ಇಂದು ವಾಣಿಜ್ಯೋದ್ಯಮ, ಬ್ಯಾಂಕು, ಶೈಕ್ಷಣಿಕ ಸಂಸ್ಥೆ ಇತ್ಯಾದಿಗಳಿಂದಾಗಿ ಮಾರಿಕಾಂಬಾ ಜಾತ್ರೆಯಿಂದಾಗಿ ಕರ್ನಾಟಕದಾದ್ಯಂತ ಪ್ರಸಿದ್ಧಿ ಪಡೆದಿದೆ.

ಮಾರಿಕಾಂಬಾ ದೇವಸ್ಥಾನವು ಶಿರಸಿಗೆ ಕಿರೀಟಪ್ರಾಯವಾಗಿದೆ. ೧೬೯೮ ರಲ್ಲಿ ರಚಿತವಾದ ದೇವಾಲಯವನ್ನು ೧೯ ನೇ ಶತಮಾನದಲ್ಲಿ ಈಗಿದ್ದ ರೀತಿಯಲ್ಲಿ ನಿರ್ಮಿಸಲಾಯಿತು. ಈ ಗುಡಿಯನ್ನು ಆಗಾಗ ನವೀಕರಿಸಲಾಗಿದೆ. ದೇವಾಲಯ, ರಂಗಮಂಟಪಗಳು ವಿಶಾಲವಾಗಿವೆ. ಗೋಡೆಗಳಲ್ಲಿ ಕಾವಿ ಕಲೆಯ ಉತ್ತಮ ಚಿತ್ರಗಳಿದ್ದವು. ಕೆಲವು ನಾಶವಾಗಿವೆ. ಎದುರಿಗೆ ಗೋಡೆಯಲ್ಲಿದ್ದ ಕಾವಿ ಚಿತ್ರಣಕ್ಕೆ ಇನೆಮಲ್ ಬಣ್ಣ ಬಳಿಯಲಾಗಿದೆ. ಮಾರಿಕಾಂಬಾ ಕಟ್ಟಿಗೆಯ ಮೂರ್ತಿಯು ದೇವಿಕೆರೆಯಲ್ಲಿ ದೊರೆತಿತೆಂದು ಪ್ರತೀತಿ. ಎರಡು ವರುಷಕೊಮ್ಮೆ ನಡೆಯುವ ಮಾರಿಕಾಂಬಾ ಜಾತ್ರೆ ಕರ್ನಾಟಕದಲ್ಲೆ ಅತಿ ದೊಡ್ಡ ಜಾತ್ರೆಯಾಗಿದ್ದು ಆಗ ದೇವಿಯ ಪ್ರತಿಮೆಯನ್ನು ನವೀಕರಿಸಲಾಗುವದು. ಹಿಂದೆ ಪ್ರಾಣಿಬಲ ನಡೆಯುತ್ತಿತ್ತು. ಮಹಾತ್ಮಾಗಾಂಧಿಯವರು ಇಲ್ಲಿಗೆ ಬಂದಾಗಿನಿಂದ ಪ್ರಾಣಿ ಬಲಿ ನಿಲ್ಲಿಸಲ್ಪಟ್ಟಿದೆ. ಶಿರಸಿಯಲ್ಲಿ ಅನೇಕ ಮಂದಿರಗಳು, ಮಠ, ಕಲ್ಯಾಣಮಂಟಪಗಳಿದ್ದು ವಿಶಾಲವಾಗಿ ಕಲಾತ್ಮಕವೂ ಆಗಿವೆ. ಗೋಪಾಲಕೃಷ್ಣ, ವೀರಭದ್ರ, ಈಶ್ವರ, ವಿಠೋಬ, ಮಾರುತಿ, ವೆಂಕಟೇಶ್ವರ, ವಿಷ್ಣು, ಗೌರೀಶ್ವರ, ಸೋಮೇಶ್ವರ, ಬಸವಣ್ಣ, ಅಂಬಾಗಿರಿಯ ಅಂಬೆ, ವಿನಾಯಕ ಕಾಲೋನಿಯ ವಿನಾಯಕ ಗುಡಿಗಳೂ ಉಣ್ಣಿ ಮಠ, ಚೌಕಿಮಠ, ಶಾಂತವೀರಸ್ವಾಮಿ ಮಠ, ನಿತ್ಯಾನಂದ ಆಶ್ರಮಗಳೂ ಸುಲ್ತಾ-ಈ-ಹನಿಫಿ ಮತ್ತು ಅಹಲೆ ಅದಿಫಾ ಮಸೀದಿಗಳು, ಸೇಂಟ ಎಂಟೋನಿ ಮತ್ತು ಸೇಂಟಪಾಲ್ ಮಾರ್ಥೋಮಾ ಚರ್ಚುಗಳು ನೋಡತಕ್ಕಂಥವುಗಳು. ಅರಣ್ಯಖಾತೆಯವರು ಚಿಕ್ಕದೊಂದು ಪ್ರಾಣಿಸಂಗ್ರಹಾಲಯವನ್ನಿಟ್ಟಿದ್ದಾರೆ. ಶಿರಸಿಯಲ್ಲಿ ಜಿಲ್ಲಾ ವಿಭಾಗಿ ಕಚೇರಿಗಳು, ಶಾಲಾ ಕಾಲೇಜುಗಳು, ವ್ಯಾಪಾರಿ ಮಳಿಗೆಗಳು ಬಹಳಿದ್ದು ಘಟ್ಟದ ಪ್ರದೇಶಗಳಿಗೆ ಮಧ್ಯವರ್ತಿಯಾದ್ದರಿಂದ ಪ್ರವಾಸೋದ್ಯಮ ಕೇಂದ್ರವನ್ನಾಗಿಸಬಹುದಾಗಿದೆ.

ಸಿದ್ದಾಪುರ : ಕಾರವಾರದಿಂದ ೧೦೨ ಕಿ.ಮೀ. ದೂರವಿರುವ ಈ ಪ್ರದೇಶವನ್ನು ಬಿಳಗಿ ದೊರೆಗಳು ಸಮೃದ್ಧಿಗೊಳಿಸಿ ಸಿದ್ಧಿವಿನಾಯಕನ ಗುಡಿಕಟ್ಟಿ ಸಿದ್ದಾಪುರವೆಂದು ಹೆಸರಿಸಿದರು. ಜೋಗಜಲಪಾತಕ್ಕೆ ಹತ್ತಿರವಿರುವ ಈ ಊರು ತಾಲೂಕಾ ಕೇಂದ್ರವಾಗಿದೆ. ಇದು ಮೊದಲು ಕೊಂಡ್ಲಿಹಳ್ಳಿಯ ಭಾಗವೇ ಆಗಿತ್ತು. ಬಿಳಗಿಯ ರಾಣಿ ಜಯಂತಿ ರಾಜಕುಮಾರ ಸಿದ್ದಪ್ಪನ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಈ ಗುಡಿಗೆ ಉಂಬಳಿ ಕೊಟ್ಟ ಬಗ್ಗೆ ೧೬೫೧ರ ಶಾಸನವಿದೆ. ಗಂಗಾಧರೇಶ್ವರ ದೇವಾಲಯಕ್ಕೂ ದತ್ತಿಕೊಟ್ಟ ಬಗ್ಗೆ ಇನ್ನೊಂದು ಶಾಸನವಿದೆ. ವಿಘ್ನೇಶ್ವರ, ಹನುಮಂತ, ಲಕ್ಷ್ಮೀನಾರಾಯಣ, ಬಸವೇಶ್ವರ ಗುಡಿಗಳಿವೆ. ಕೊಂಡ್ಲಿ ಎಂಬಲ್ಲಿ ಕೋಟೆಯಿದ್ದು ಶಿಥಿಲಗೊಂಡ ಈಶ್ವರಮಂದಿರ, ಕಲ್ಲಮ್ಮನಗುಡಿ, ವೀರಗಲ್ಲುಗಳೆಲ್ಲ ಇರುವದರಿಂದ ಪುರಾತನ ನೆಲೆಯೆಂದು ಅನಿಸುವದು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಸಿದ್ದಾಪುರ ಸೀಮೆಯ ಜನರು ತುಂಬಾ ಕ್ರಿಯಾಶೀಲರಾಗಿ ಹೋರಾಡಿ ಹೆಸರುಗಳಿಸಿದ್ದಾರೆ.

ಯಲ್ಲಾಪುರ : ಘಟ್ಟದ ಮೇಲಿನ ತಾಲೂಕಿನ ಸ್ಥಳ. ಕಾರವಾರ-ಹುಬ್ಬಳ್ಳಿ ರಸ್ತೆಯಲ್ಲಿ ಕಾರವಾರದಿಂದ ೯೬ ಕಿ.ಮೀ. ದೂರದಲ್ಲಿದೆ. ೧೩ನೇ ಶತಮಾನದಲ್ಲಿ ಕಾಲಜ್ಞಾನ ವಚನಗಳಲ್ಲಿ ‘ಮೇಲುಗೈ-ಯಲ್ಲಾಪುರ’ ಎಂದು ಹೇಳಿದೆ. ಚೆನ್ನಬಸವಣ್ಣನು ಇದೇ ಹಾದಿಯಿಂದಲೆ ಉಳವಿಗೆ ಹೋದನಂತೆ. ಯಶಪುರ ಎಂದೂ ಕರೆಯಲ್ಪಟ್ಟಿದೆ. ದಟ್ಟ ಅರಣ್ಯಗಳಿಂದ ಸುತ್ತು ಆವರಿಸಲ್ಪಟ್ಟ ಊರಿದು. ಇಲ್ಲಿಯ ಮಾರಿ ಗುಡಿಯ ಜಾತ್ರೆ ಮೂರು ವರುಷಗಳಿಗೊಮ್ಮೆ ಆಗುವದು. ಈ ಗುಡಿಯಲ್ಲಿ ದೇವಮ್ಮ-ಕಾಳಮ್ಮ ಎಂಬ ಎರಡು ದೇವತೆಗಳಿಗೆ ಪೂಜೆ ಸಲ್ಲುತ್ತಿದ್ದು ಜೋಡುಕೆರೆ ಇರುವಲ್ಲಿ ಮೂರ್ತಿಯೊಂದಿದೆ. ೧ ೧/೨ ಕಿ.ಮೀ. ದೂರ ಹೊಲದಲ್ಲಿ ಕಲ್ಮಠ ಎಂಬಲ್ಲಿ ವಿಜಯನಗರ ಶೈಲಿಯ ಮಂಟಪವಿದ್ದು ಕಂಬಗಳ ಮೇಲಿನ ಬರಹದಿಂದ ಇದೊಂದು ಲಿಂಗಾಯತ ವಿರಕ್ತನ ಗದ್ದುಗೆಯಾಗಿದೆ ಎಂಬುದು ತಿಳಿದು ಬರುವದು. ಇಲ್ಲಿಯ ಶಿಲ್ಪ ಕಲಾತ್ಮಕವಾಗಿದೆ. ವೀರಗಲ್ಲುಗಳು, ಟಿಪ್ಪುಕಾಲದ ಮಸೀದಿ, ಗೌಸಿಯಾ ಮಸೀದಿ, “ಅವರ್ ಲೇಡಿ ಆಫ್ ರೋಜರಿ”ಚರ್ಚು ಇವೆ. ಯಲ್ಲಾಪುರದ ಸುತ್ತ ಮುತ್ತ ಅನೇಕ ಜಲಪಾತಗಳಿವೆ. ಯಲ್ಲಾಪುರವು ಅಕ್ಕಿ, ಅಡಿಕೆ, ತೆಂಗು, ಕಟ್ಟಿಗೆ ವ್ಯಾಪಾರಕ್ಕೆ ಪ್ರಸಿದ್ಧವಾಗಿದೆ.

ಮುಂಡಗೋಡ : ಕಾರವಾರದಿಂದ ೧೬೫ ಕಿ.ಮೀ. ದೂರವಿರುವ ತಾಲೂಕಿನ ಸ್ಥಳ. ಹಾನಗಲ್ಲಿನ ಕದಂಬರು ಕೋಟೆ ಕಟ್ಟಿ ಆಳಿದ್ದರು. ನಂತರ ಬಹಮನಿ ಹಾಗೂ ವಿಜಾಪುರದ ಸುಲ್ತಾನರ ಆಧೀನದಲ್ಲಿತ್ತು. ೧೭೬೪ ರಲ್ಲಿ ಪೇಶ್ವೆ ಮಾಧವರಾಯ ಆಕ್ರಮಿಸಿದ್ದ. ಹೈದರಲಿ-ಟಿಪ್ಪು ಈ ಊರನ್ನು ವಿಶಾಲಗೊಳಿಸಿ ಮಸೀದಿ ಕಟ್ಟಿಸಿದರು. ಖಾದರಲಿಂಗ ಎಂಬ ಪೀಠ ಈ ಮಸೀದಿಯ ಎದುರಿಗಿದ್ದು ಹಿಂದೂ ಮುಸಲ್ಮಾನರಿಬ್ಬರೂ ಪೂಜಿಸುತ್ತಾರೆ. ಕೋಟೆಯ ಒಳಗೆ ನರಸಿಂಹ ದೇವಾಲಯವಿದೆ. ಹಳೆ ಮುಂಡಗೋಡು ಎಂಬಲ್ಲಿ ದೇವಾಲಯಗಳಿದ್ದು, ವೀರಗಲ್ಲು, ನಾಗಬಂದಶಿಲ್ಪ, ಕಲ್ಲಿನ ಹಲಗೆಯ ಮೇಲೆ ಶಿಲ್ಪಕೃತಿಗಳು, ವಿಗ್ರಹಗಳು, ಕಾಣಸಿಗುತ್ತವೆ. ಮುಂಡಗೋಡದ ಉತ್ತರಕ್ಕೆ ೭ ಕಿ.ಮೀ. ದೂರ ಇಂದೂರು ಪ್ರಾಚೀನ ಪ್ರಸಿದ್ಧ ನೆಲೆಯಾಗಿದ್ದು ಕಲ್ಮೇಶ್ವರ ದೇವಸ್ಥಾನದ ಕುರುಹು, ಧ್ವಜಸ್ಥಂಬ, ಗುಡಿಯ ಗೋಡೆಯ ಚಿತ್ರಗಳು ಗಮನಸೆಳೆಯುತ್ತವೆ. ಇಂದೂರ ಬಳಿ ಟಿಬೇಟಿಯನ್‌ರ ಕಾಲೋನಿಗಳಿವೆ. ಮುಂಡಗೋಡದ ಪರಿಸರದಲ್ಲಿ ಒಟ್ಟು ೯ ಹಳ್ಳಿಗಳಲ್ಲಿ ಎರಡು ಲಾಮಾಕೇಂದ್ರಗಳಲ್ಲಿ ಟಿಬೇಟಿಯನ್ನರಿಗೆ ೧೯೬೭ ರಲ್ಲಿ ವಸತಿ ಏರ್ಪಡಿಸಲಾಯಿತು. ಟಿಬೇಟಿಯನ್‌ರ ವಸತಿ ಪ್ರದೇಶ ನೋಡತಕ್ಕಂಥವುಗಳಾಗಿವೆ. ಅವರ ಜೀವನಕ್ರಮ, ಸಂಸ್ಕೃತಿ, ಕೈಗಾರಿಕಾ ಕೇಂದ್ರಗಳು, ಉಣ್ಣೆಬಟ್ಟೆ, ಕಟ್ಟಿಗೆ ವಸ್ತುಗಳು, ರತ್ನಗಂಬಳಿ ಮೊದಲಾದ ಕರಕುಶಲ ವಸ್ತುಗಳನ್ನು ತಯಾರಿಸುವ ಸಂಘಗಳನ್ನು ಸ್ಥಾಪಿಸಿಕೊಂಡು ಮಾರಾಟ ಮಾಡುವ ಬಗೆ ಎಲ್ಲವೂ ಆಕರ್ಷಕವಾಗಿವೆ. ಈ ಟಿಬೇಟಿಯನ್ನರಿಂದ ಈ ಜಿಲ್ಲೆಯವರಾಗಿಯೇ ಜೀವನ ಸಾಗಿಸುತ್ತಿದ್ದಾರೆ.

ಹಳಿಯಾಳ : ಹಳ್ಯಾಳ ಕೋಟೆಯ ಆವರಣದಲ್ಲಿದ್ದ ಗೋವಾಕದಂಬರ ಶಾಸನವೊಂದು ೧೧೪೪೪ರಲ್ಲಿ ಈ ಊರನ್ನು “ಪಲ್ಲಿಯಾಳ” ಎಂದು ನಮೂದಿಸಿದೆ. ಧಾರವಾಡದಿಂದ ೩೫ ಕಿ.ಮೀ. ದೂರದಲ್ಲಿದ್ದು “ದೇವಮ್ಮಾ”ಳ ಧಾರ್ಮಿಕ ಪೂಜೆಗೆ ಪ್ರಸಿದ್ಧವಾಗಿದೆ. ದೇವಮ್ಮಾಳ ಮೂರ್ತಿ ಭವ್ಯವಾಗಿದೆ. ದಸರೆಯ ಕಾಲಕ್ಕೆ ಪಾಂಡವರ ವೇಷಗಳೊಂದಿಗೆ ವಿಜೃಂಭಣೆಯಿಂದ ಉತ್ಸವ ಆಚರಿಸುತ್ತಾರೆ. ಹೈದರ ಶಹಾನದರ್ಗಾ ಇದ್ದು ಉರುಸು ಜರುಗುತ್ತದೆ. ಮಲ್ಲಿಕಾರ್ಜುನ, ರಾಮ, ಮಾರುತಿ, ಬಸವೇಶ್ವರ ವೆಂಕಟರಮಣ ಮೊದಲಾದ ದೇವಾಲಯಗಳಿವೆ. ಮಲ್ಲಿಕಾರ್ಜುನ ದೇವಾಲಯದ ಕಂಬಗಳು ಆಕರ್ಷಕ; ಕಿಡಕಿಯ ಜಾಲರಿಗಳಲ್ಲಿ ಸುಂದರ ಶಿಲ್ಪಗಳಿವೆ. ಹಳಿಯಾಳದಿಂದ ಎರಡು ಕಿ.ಮೀ. ದೂರದಲ್ಲಿ ಹವಗಿ ಎಂಬಲ್ಲಿ ಕಲ್ಮೇಶ್ವರ, ಹವಗಿನಾಥ, ಮಾರುತಿ, ದ್ಯಾಮವ್ವ, ಸುಕಲ್ಲವರ ಗುಡಿಗಳಿವೆ. ಇಲ್ಲಿಯ ವಿಗ್ರಹಗಳು, ಚತುರ್ಮುಖ ಮೂರ್ತಿ, ಷಷ್ಠಮುಖಿಸ್ತಂಭ ಮೊದಲಾದವು ಚಾಲುಕ್ಯ ಶೈಲಿಯಲ್ಲಿವೆ.

(ಸೂಪಾ) ಜೊಯಿಡಾ : ಶೂರ್ಪನಖಯ ಸ್ಥಳವೆಂದು ಖ್ಯಾತಿವೆತ್ತ ಸೂಪಾ ಪಟ್ಟಣವು ಕಾಳಿ ಆಣೆಕಟ್ಟಿನಿಂದ ನೀರಿನಲ್ಲಿ ಮುಳುಗಡೆಯಾದ ನಂತರ ೧೯೮೧ ರಿಂದ ಜೊಯಡಾ ಪ್ರದೇಶವನ್ನು ತಾಲೂಕಿನ ಸ್ಥಳವನ್ನಾಗಿ ಮಾಡಲಾಗಿದೆ. ಕಾರವಾರ-ಬೆಳಗಾಂವ ರಸ್ತೆಯಲ್ಲಿ ಬೆಳೆಯುತ್ತಿರುವ ಊರು. ಸುತ್ತಲಿನ ನಿಸರ್ಗ ಸುಂದರವಾಗಿದೆ.

ಈ ಎಲ್ಲ ತಾಲೂಕು ಕೇಂದ್ರಗಳಿಂದ ಆ ಆ ತಾಲೂಕು ಕೇಂದ್ರಗಳಲ್ಲಿ ನೋಡಿ ನಲಿಯಬಹುದಾದ ಅನೇಕ ಹಳ್ಳಿಗಳು ಗುಡಿಗೋಪುರಗಳಿಂದ ಪ್ರಕೃತಿರಮ್ಯ ನೆಲೆಗಳಿಂದ ಸಮೃದ್ಧವಾಗಿವೆ.