ಅಂದೊಳ್ಳೆ ಅಡಿಗಲ್ಲೇ ಚಂದೊಳ್ಳೆ ಮೇಗಲ್ಲೇ
ಚಂದ್ರಮತಿಯೆಂಬೋ ಗೆರಸಿ [ಯ]-ರಾಗೀಕಲ್ಲೇ
ಒಂದ್ ಹೂಡನ ಬಾರೆ ಹಿರಿಯಕ್ಕ-ನಾನಿನ್ನ
ಹಾಡಿಗೆ ದನಿಯ ಕೊಡುತೀನಿ

ಅಕ್ಕಿ ಬೀಸೋ ಕಲ್ಲೆ ಸಕ್ಕರೆ ಒಡೆಗಲ್ಲೆ
ಸಟ್ಟಿ ಅಣ್ಣಯ್ನ ಅರಮನೆ-ರಾಗೀಕಲ್ಲೆ
ಹಟ್ಟಿ ಬಾಕಲಿಗೆ ದನಿದೋರೇ

ರಾಗಿ ಬೀಸೋ ಕಲ್ಲೆ ರಾಜನಾ ಒಡಿಗಲ್ಲೆ
ರಾಯ ಅಣ್ಣಯ್ನ ಅರಮನೆ – ರಾಗೀಕಲ್ಲೆ
ನೀ ರಾಜ ಬೀದಿಗೆ ದನಿದೋರೇ

ಕಲ್ಲಮ್ಮ ಮಾತಾಯಿ ಮೆಲ್ಲಮ್ಮ ರಾಗಿಯ
ನೀ ಜಲ್ಲ ಜಲ್ಲಾನೆ ಉದುರಮ್ಮ – ನಾ ನಿನಗೆ
ನೆಲ್ಲಕ್ಕಿ ಪಡಿಯ ನಡೆಸೇನು

ಅಕ್ಕನೀ ತೆರೆ ಹುಯ್ಯೆ ಅಕ್ಕಯ್ಯ ತೆರೆ ಹುಯ್ಯೇ
ನಾನಕ್ಕಿ ಹೊಂಬಾಳೆ ಕದಲಿಯ – ಕಟ್ಟಿಸುವೆ
ನಮ್ಮಕ್ಕ ಸರಸತಿಯೇ ತೆರೆಹುಯ್ಯೆ

ಶಿವನೇ ಗುರುವೆಂದು ಹಿಡಿದೆನು ರಾಗೀ ಕಲ್ಲ
ಶಿವಕಂಚಿ ಪುರದ ಗಜನಿಂಬೆ – ಮರದಡಿಯ
ಶಿವ ಮಾಡುತಿದ್ರು ಶಿವಪೂಜೆ

ಶರಣೆಂದೆ ಗುರುವಿಗೆ ಶರಣೆಂದೆ ಶಿವನಿಗೆ
ಶರಣೆಂದೆ ಶಿವನ ಮಡದಿ[ಗೆ] – ಗೌರಮ್ಮಗೆ
ನಾ ಶರಣೆಂದು ಕಲ್ಲ ಹಿಡಿದೇನು

ಸರಸೋತಿ  ಸಣ್ಣೋಳೆ ನಗುಮುಖದ ಹೊನ್ನೋಲೆ
ಕಲಕಂಠದರಸಿ ಗಿರಿಜಮ್ಮ – ಪಾರ್ವತ ದೇವಿ
ಕಲಿಸೆ ಕಲ್ಯಾಣದ ನುಡಿಗsಳ

ಅಕ್ಕನ ನೆನೆದರೆ ಗಕ್ಕsನೆ ಪದ ಬsರೋ
ಅಕ್ಕ ಪಟ್ಟಣದ ಒಳಗವ್ಳೆ – ಸರಸೋತಿ
ಅಕ್ಕೀ ಕೊಂಡ್ಹೋಗಿ ಕರತನ್ನಿ