ಬಾರ್ಕೂರ ಹೆರಿಯಣ್ಣ ಸೆಟ್ರು ತೆಂಗೀನ ಬುರುಡೇ
ಹೊತ್ತಾರೆ ಮುಂಚೆ ಎದ್ದಾರೂ ತೆಂಗೀನ ಬುರುಡೇ*
ಮುತ್ತು ರತ್ನಾ ಲಾಗಾಬೇಕು
ಹಡುಗಾರೂ ಹೂಡ್ಸಾಬೇಕು
ಮಡೂದೀನಾ ಕರೀದಾರೂ
ಹಡೂಗಾರೂ ಹೂಡ್ಸಾಬೇಕು
ಅಷ್ಟು ಮಾತೂ ಲಾಡಿದಾರೂ
ಬಾರ‍್ಕೂರ ಹೆರಿಯಣ್ಣ ಸೆಟ್ರು
ಹಡೂಗಾರೂ ಹೂಡೂಸೂಕೇ
ಅಲ್ಲಿಗಾರೂ ಹೊರ್‌ಟಾರೂ
ಬಾರ್ಕೂರ ಹೆರಿಯಣ್ಣ ಸೆಟ್ರು
ಹಡುಗಾರೂ ಹುಡೂಸೀರೂ
ಹಡುಗಾರೂ ನೆಡೂದಿಲ್ಲೆ
“”ಇದ್ ಏನೂ ಕತೆ ಆಪ್ಪಾ”
ಅಷ್ಟೂ ಮಾತೂ ಲಾಡಿದಾನೂ
ಬಾರ್ಕೂರ ಹೆರಿಯಣ್ಣ ಸೆಟ್ರು
ಹಡುಗಾರೂ ನೆಡೂದಿಲ್ಲೆ
“”ಇದ್ ಏನೂ ಕತೆ ಅಪ್ಪಾ”
ಅಷ್ಟೂ ಮಾತೂ ಲಾಡಿದಾನೂ
ಬಾರ್ಕೂರ ಹೆರಿಯಣ್ಣ ಸೆಟ್ರು
ಜೋ‌ಯ್ಸ್ರ್ ಮನೀಗ್ಹೋರ್‌ಟಾರೂ
ಜೋ‌ಯ್ಸ್ರ್ ಮನೀಗ್ಹೋದಾರೂ
ಹರ‍್ಳಾರೂ ಲಿಟ್ಟೀದಾರೂ
ನರ ಹಾವ್ತೀ ಬೇಡುತ್ತಾದ್”
ಅಲ್ಲಿಂದೇ ಹೂರ್‌ಟಾರೂ
ಮನಿಗೊಮ್ಮೆ ಬರುವಾರೂ
ಮನಿಗೊಮ್ಮೆ ಬಂದೀಗ
ಮಡುದೀನಾ ಕರೀದಾರೂ
“”ಮುತ್ತು ರತ್ನಾ ತರಾಬೇಕು

ಹಡುಗಾರೂ ನಡುದಿಲ್ಲೆ
ನರ ಹಾವ್ತೀ ಬೇಡ್‌ತ್ತಂಬ್ರ್
ಲೋಟಾ ನಿಮಿತ್ಯಾ ನೋಡೀದೆ
ಹತ್ತು ಮಕ್ಳೂ ಇದ್ದೊಲ್ದಾ
ಒಂದೆ ಮಗೀನ ಕೊಡ್ ಈಗ”
ಅಷ್ಟೇ ಮಾತೂ ಲಾಡಿದಾರೂ
ಬಾರ್ಕೂರ ಹೆರಿಯಣ ಸೆಟ್ರ್
ಹೆರಿಯಣ್ಣ ಸೆಟ್ರ ಮಡೂದೀಯೂ
“”ಹಡೂಗತ್ತೇ ಬಿದ್ದೋಯ್ಲಿ
ಹಡೂಗತ್ತೇ ಮುರೂದ್ಹೋಯ್ಲಿ
ಮಗೀನಾರೂ ಕೊಡುದಿಲ್ಲೆ
ಮುತ್ತು ರತ್ನಾ ಬೇಡನಂಗೆ
ಮಗೀನಾರೂ ಕೊಡುದಿಲ್ಲೆ”
ಅಷ್ಟು ಮಾತೂ ಲಾಡೀದಾಳೂ
ಹೆರಿಯಣ ಸೆಟ್ರ ಮಡೂದೀಯೂ
ಬಾರ್ಕೂರ ಹೆರಿಯಣ ಸೆಟ್ರು
ಅಷ್ಟು ಮಾತೂ ಕೇಂಡಾರೂ
ತಂಗೀ ಮನೇಗ್ಹೊರ್‌ಟಾರೂ
ದೂರಿಂದೇ ಕಂಡಾಳು
“”ಎಂದೂ ಬಾರ‍್ದಿದ್ ಅಣ್ಣಯ್ಯ
ಇಂದೇನು ಬಂದೀಯೋ”
“”ಏನೆಂದೇ ಹೇಳೂದ್ ತಂಗೀ
ಎಂತಂದೇ ಹೇಳೂದ್ ತಂಗೀ
ಮುತ್ತು ರತ್ನಾ ತರ್‌ಕಂದ್
ಹಡೂಗಾರೂ ಹೂಡುಸೀದೆ
ಹಡೂಗಾರೂ ನೆಡೂದಿಲ್ಲೆ
ನರ ಹಾವ್ತೀ ಬೇಡ್‌ತ್ತವ್
ಲೋಟಾ ನಿಮಿತ್ಯಾಕಂಡೀದೆ
ಜೋಯಿಸರ್ ಹೇಳೀರ್
ಅಷ್ಟು ಮಾತೂ ಕೇಂಡೆ ತಂಗೀ
ಮನೀಗಾರೂ ಬಂದೇ ತಂಗೀ

ಮಡುದೀನಾ ಕರೀದೇನೂ
ಹತ್ತು ಮಕ್ಳು ಇದ್ದವು ತಂಗೀ
ಒಂದೇ ಮಗೀನ್ ಕೊಡ್ ಅಂದೆ
ಹಡೂಗತ್ತೇ ಬಿದ್ಹೋಯ್ಲಿ
ಹಡೂಗತ್ತೇ ಮುರೂದ್ಹೋಯ್ಲಿ
ಮೂತ್ತೂರತ್ನಾ ನಂಗೇಬೇಡ
ಮಗೀನಾರೂ ಕೊಡುದಿಲ್ಲ
ಎಂದಾರೂ ಹೇಳೀಳು
ಅಷ್ಟೇ ಮಾತೂ ಕೇಂಡೇ ತಂಗೀ
ಇಲ್ಲೀಗೆ ಬಂದೇ ತಂಗೀ”
ಬಾರ್ಕೂರ ಹೆರಿಯಣ್ಣ ಸೆಟ್ರು
ಅಷ್ಟು ಮಾತು ಲಾಡಿದರೂ
ತಂಗೀಯೇ ಹೊನ್ನಮ್ಮಾ
ಅಷ್ಟು ಮಾತು ಕೇಂಡಾಳು
ಒಬ್ಬಾನೇ ಮಗಾನೀಗ
ಗಿಜ್ಜಾಕಾಲ್ ಮಗಾನೀಗ
ನೆರ‍್ಮನೆ ಆಟಕೆ ಹೋಗೀದ
ಅವ್ನನಾರೂ ಕರೀದಾಳೂ
ಗಿಜ್ಜಾಕಾಲ್ ಮಗಾನೀಗ
ಓಡ್ಯೋಡೀ ಬಂದಾನೂ
“”ಯಾಕೆ ಅಮ್ಮಾ ಕರ್‌ದೀರಿ”
“”ಎಂದೂ ಬಾರ‍್ದಿದ್ ಮಾವಯ್ಯ
ಇಂದಾರೂ ಬಂದೀರ್ ಮಗಾ
ಹಡ್‌ಗಾರೂ ಹೂಡ್ಸಿರಂಬ್ರ್
ನೀನಾರೂ ಬರ್‌ಕಂಬ್ರ್”
ಅಷ್ಟೇ ಮಾತೂ ಕೇಂಡಾನೂ
ಗಿಜ್ಜಾಕಾಲ್ ಮಾಗಾನೀಗ
ಅಂಗೀ ಗಿಂಗೀ ಹಾಕಿದಾನೂ
ಸಿಂಗಾರಾರೂ ಆಯೀಗ
ಮಾವ್ನ ಸಂಗಡಾ ಹೊರ್‌ಟಾನೂ
ಗಿಜ್ಜಾಕಾಲಾ ಮಗಾನೀಗಾ
ಮಾವ ಅಳಿಯಾ ಲೊಟ್ಟುಕೂಡೀ
ಹಡ್‌ಗೀನ ಬುಡುಕೆ ಹೊರ್‌ಟಾರೂ
ಮಾವ ಮುಂದಿಂದೆ ಹೊರ್‌ಟಾರೂ
ಅಳಿಯ ಹಿಂದೆಂದೆ ಹೊರ್‌ಟಾರೂ
“”ಮಾವಯ್ಯ ಮಾವಯ್ಯ
ಮಾವೀನ ಹಣ್ಣ್ ಆಯೀಕ್”
ಅಷ್ಟೇಮಾತೂ ಕೇಂಡಾರೂ
ಬಾರ್ಕೂರ ಹೆರಿಯಣ್ಣ ಸೆಟ್ರು
ಮಾಯ್ನಣ್ಣೇ ತೆಗ್ಸೀ ಕೊಟ್ಟೀರ್
“”ಮಾವಯ್ಯ ಮಾವಯ್ಯ
ಚೂರ‍್ಯಾರೂ ಆಗಾಬೇಕು”
ಅಷ್ಟೇ ಮಾತೂ ಕೇಂಡಾರೂ
ಬಾರ್ಕೂರ ಹೆರಿಯಣ ಸೆಟ್ರು
ಚೂರ‍್ಯಾರೂ ತೆಗ್ಸೀಕೊಟ್ರ್
ಮಾವ ಅಳಿಯಾ ಲೊಟ್ಟುಕೂಡೀ
ಹಡ್ಗಿನ ಬುಡಕೆ ಹೊರ್‌ಟಾರೂ
ಹಡ್‌ಗ್ ಹತ್ತೀ ಕುಳಿತಾರೂ
ಹಡ್‌ಗ್ ಹತ್ತೀ ಕುಳೀತಾರೂ
ಮಾವ ಅಳಿಯಾ ಲೊಟ್ಟುಕೂಡೀ
ಅಳಿಯಾ ಎಂಬೌನ್
ಮಾಯ್ನ ಹಣ್ಣ ಅರೀದಾನೂ
ಮಾಯಿನ್ ಹಣ್ಣ ಅರೀವಂಗೂ
ಒಂದೇ ಬೆರ್‌ಲಾರೂ ಅರ್‌ದೇಹೋಯ್ತ್
ರಕ್ತಾ ಹಾರಾಲಾಯೀತ್
ಹಡ್‌ಗಾರೂ ಲೆದ್ದೀತ್
ಹಡ್‌ಗಾರೂ ನಡೀದೀತ್
ಮಾವಯ್ಯ ಅಳಿಯರೂ
ಒಟ್ಟು ಕೂಡೀ ಹಡ್‌ಗ್ ಏಳ್ಸೀ ತಂದಾರೂ
ಬರ್ಕೂರ ಹೆರಿಯಣ ಸೆಟ್ರು
ಮನೀ ಎದ್ರೆ ಮಲೂಗೆದ್ದೆ
ಹಡೂಗಾರೂ ಹೋಯೀತ್

ದೂರಿಂದೆ ಕಂಡಾಳೂ
ಹೆರಿಯಣ ಸೆಟ್ರ ಮಡೂದೀಯಾ
ಮಕ್ಳನಾರೂ ಕರೀದಾಳೂ
“”ಅಪ್ಪಯ್ಯಾ ಹಡ್ಗ್ ಬಂತ್
ಅಲ್ಲಿಗಾರೂ ಹೋಯ್ನಿ ಮಕ್ಳೇ”
ಅಷ್ಟೇ ಮಾತೂ ಕೆಂಡೋ ಆಗ
ಮಕ್ಕಳೆಲ್ಲ ಹೋದೋ ಈಗಾ
ಹಡ್ಗನಾರೂ ತಿರ‍್ಸಿದಾರೂ
ಬಾರ್ಕೂರ ಹೆರಿಯಣ ಸೆಟ್ರು
ತಂಗೀ ಮನೀಗ ಹೊರ್‌ಟಾರೂ
ಮಡುದೀಯೂ ಮಕ್ಕಳೂ
ಮರ‍್ಕುತಾರೂ ನಿತ್ತೀರೂ
ಹೆರಿಯಣ ಸೆಟ್ರು ಮಡೂದೀಯೂ
ಮುತ್ತೂ ರತ್ನಾ ನೋಡುವಂಗೂ
ಬಾಳಾ ಆಸೆ ಆಯೀತೂ
“”ಒಂದೇ ಮಗನಾರೂ ಕೊಡೂತಿದ್ದೆ”
ಏನು ಹೇಳೀರೂ ಕೇಳಾಲಿಲ್ಲೆ
ಬಾರ್ಕೂರ ಹೆರಿಯಣ ಸೆಟ್ರು
ತಂಗೀ ಮನೀಗ್ಹೋದಾರೂ
ದೂರಿಂದೇ ಕಂಡಾಳೂ
ತಂಗೀಯೇ ಹೊನ್ನಮ್ಮ
“”ಇಲ್ಲಿಗಾರೂ ಏಕೆ ತಂದೇ
ಹುಡುಗಾರೂ ಏಕೆ ತಂದೇ”
“”ಇತ್ತು ಕೇಳೇ ತಂಗಿ ನೀನೂ
ನಿಂಗಿರುವುದೂ ಒಂದೇ ಮಗೂ
ನೀನಾರೂ ಕಳುಸೀದೆ
ಗಿಜ್ಜಾ ಕಾಲೂ ಮಗನಾರೂ
ಹತ್ತು ಮಕ್ಳೇ ಲಿದ್ದೋನಂಗೂ
ಒಂದೇ ಮಗೀನ್ ಕಳ್ಸಾಲಿಲ್ಲೆ
ಮುತ್ತೂ ರತ್ನಾ ನಿಂಗೇ ತಂಗೀ

ಗಿಜ್ಜಾ ಕಾಲೂ ಮಗಾನೀಗೆ
ಹಡೂಗಾರೂ ಅವ್ನಿಗೆ ತಂಗೀ”
“”ನಮಗಾರೂ ಬ್ಯಾಡಾ ಅಣ್ಣ
ನಿನ್ನ ಹೆಂಡ್ರ ಮಕ್ಳ್ ಇದ್ದಾರಲ್ಲಾ
ಅವ್ರೀಗಾರೂ ಕೊಡೂ ಅಣ್ಣ
ಏನು ಹೇಳೀರೂ ಕೇಳಾಲಿಲ್ಲೆ
ಬಾರ್ಕೂರ ಹೆರಿಯಣ ಸೆಟ್ರು
ಹಡ್ಗುನಾರೂ ಬಿಟ್ಟೇ ಹೋದ್ರ್
ಮುತ್ತೂ ರತ್ನಾ ಬಿಟ್ಟೇ ಹೋದ್ರ್
ತಂಗೀಯೂ ಮನೆಯಲ್ಲಿ
ಬಾರ್ಕೂರ ಹೆರಿಯಣ ಸೆಟ್ರು
ತನ ಮನೇಗ್ಹೋದಾರೂ
ಮಡೂದೀಯಾ ಮಕ್ಕಾಳೂ
“”ಹಾದೀಲ್ ಹೋಪೋರ್ ಯಾರಾದ್
ನಮ್ಮನೇಗ್ ಬರಾಬೇಡಿ
ಗಂಡ್ಸ್ರ್ಯಾರೂ ಇಲ್ಲಿದ್‌ಮನೇ
ನಮ್ಮನೇಗ್ ಬರಾಬೇಡಿ”
ಅಷ್ಟು ಮಾತುಲಾಡಿದಾರೂ
ಮಡದೀಯೂ ಮಕ್ಕಾಳೂ
ಅಷ್ಟು ಮಾತೂ ಕೇಂಡಾರೂ
ಬಾರ್ಕೂರ ಹೆರಿಯಣ ಸೆಟ್ರು
ಅಲ್ಲಿಂದೆ ಹೊರ್‌ಟಾರೂ
ತಂಗೀಯ ಮನೇಗ್ಹೋದಾರೂ
ಬಾಳಾ ಸಿಟ್ಟು ಬಂದೀತು
ತಂಗೀ ಮನೀಗ್ಹೊರ್‌ಟಾರು
ತಂಗೀ ಮನೀಗ್ ಬಂದಾರೂ
“”ಮಾವಯ್ಯಾ ಮಾವಯ್ಯ
ಇವತ್ತೇನೇ ಬಂದೀರೀ”
“”ಏನೆಂದೇ ಹೇಳೂದ್ ಮಗೂ
ನಾನ್ ನೀನೇ ಒಟ್ಟು ಕೂಡೀ

ನಿನ್ ಮನೀಲ್ ಇತ್ತೀ ಮಗಾ”
ಅಣ್ಣನೇ ತಂಗೀಯೂ
ಮಾವಾನೇ ಅಳಿಯನೇ
ಮೂರೂ ಜನಾ ಲೊಟೂಕೂಡೀ
ಒಂದೇ ಮನೇಲಿ ಇದ್ದಾರೂ

* ಪ್ರತಿ ಪಾದದ ಕೊನೆಯಲ್ಲೂ “ತೆಂಗೀನ ಬುರುಡೇ’ ಎಂದು ಸೇರಿಸಿಕೊಳ್ಳಬೇಕು.*      ಬಾರ್ಕೂರ ಹೆರಿಯಣ್ಣ ಸೆಟ್ರು, ಕೆದ್ಲಾಯ ಕುಂಜಿಬೆಟ್ಟ ಸುಬ್ರಹ್ಮಣ್ಯ, ಹಾಡಿಗೆ ಹನ್ನೆರಡು ಕಬರು ಕ.ಅ.ಸಂಸ್ಥೆ, ಮೈಸೂರು ವಿ.ವಿ. ಮೈಸೂರು-೧೯೭೩, ಪು.ಸಂ.೧೩೩-೧೪೦