ಬೃಹತ್ ಕೊರಕಲಿನ ನಿರ್ಮಾಣ

 • ಸವಕಳಿಗೀಡಾಗಿರುವ ನೈಸರ್ಗಿಕ ಬಸಿಗಾಲುವೆಯಾದ ಹಳ್ಳದ ದಂಡೆಯಿಂದಲೇ ದೊಡ್ಡ ಕೊರಕಲು ಆರಂಭವಾಗುತ್ತದೆಯೆಂದು ಸಾಮಾನ್ಯವಾಗಿ ಹೇಳಬಹುದು.
 • ಹರಿಯುತ್ತಿರುವ ನೀರನ್ನು ನಿಯಂತ್ರಿಸದಿದ್ದರೆ, ಮಣ್ಣಿನ ಸವಕಳಿಯು ಮುಂದುವರಿದು ಕೊರಕಲಿನ ಪ್ರಾರಂಭಿಕ ಆಳದ ಭಾಗವು ಹೆಚ್ಚುತ್ತಾ ಹೋಗುತ್ತದೆ.
 • ದಿನಗಳು ಉರುಳಿದಂತೆ ಆ ಪ್ರದೇಶದಲ್ಲಿ ಕೊರಕಲಿನ ಶಾಖೆ, ಉಪಶಾಖೆಗಳು ನಿರ್ಮಾಣಗೊಂಡು ಅವುಗಳಿಂದ ಮಣ್ಣು ಸಾಗಿ ಬಂದು ಮುಖ್ಯ ಕೊರಲಿನ ಮುಖಾಂತರ ಹೊರಗೆ ಹೋಗುತ್ತದೆ.
 • ಇಷ್ಟಾದರೂ ಸವಕಳಿಯನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ, ಇಡೀ ಪ್ರದೇಶವೇ ಬೇಸಾಯಕ್ಕೆ ನಿರುಪಯೋಗವೆನಿಸುವ ಪರಿಸ್ಥಿತಿಯುಂಟಾಗುತ್ತದೆ (ಚಿತ್ರ-೨೯), ಕೊರಕಲುಗಳ ನಿರ್ಮಾಣದಿಂದ ಹಾನಿಗೀಡಾದ ಭೂಮಿಯ ಸುಧಾರಣೆಯನ್ನು ಕೈಗೊಳ್ಳುವಾಗ ಗಮನಿಸಬೇಕಾದ ಪ್ರಮುಖ ಸಂಗತಿಗಳು ಕೆಳಗಿನಂತಿವೆ.

ಬೃಹತ್ ಕೊರಕಲು ನಿರ್ಮಾಣಗೊಂಡ ಭೂಮಿಯ ಸುಧಾರಣೆಗಳು: ಕೊರಕಲುಗಳ ನಿರ್ಮಾಣದಿಂದ ಹಾನಿಗೀಡಾದ ಭೂಮಿಯ ಸುಧಾರಣೆಯನ್ನು ಕೈಗೊಳ್ಳುವಾಗ ಪರಿಗಣಿಸಬೇಕಾದ ಪ್ರಮುಖ ಸಂಗತಿಗಳು ಕೆಳಗಿನಂತಿವೆ:

ಕೊರಕಲಿನಿಂದಾಗುವ ಹಾನಿಗಳು

 • ಕೊರಕಲು ಆರಂಭವಾಯಿತೆಂದರೆ, ಹರಿಯುವ ನೀರು ಸಂಬಂಧಿಸಿದ ಭೂ ಭಾಗದ ಫಲವತ್ತಾದ ಮೇಲ್ಮಣ್ಣನ್ನು ಒಯ್ದು ಕೆಳಭಾಗದಲ್ಲಿರುವ ಪ್ರದೇಶದಲ್ಲಿ ಬಿಡುತ್ತದೆ. ದಿನಕಳೆದಂತೆ ಕೆಳಗಿನ ಸ್ತರದಲ್ಲಿರುವ ಸತ್ವ ಹೀನವಾದ ಮಣ್ಣನ್ನು ಸಾಗಿಸಿ ಮೊದಲು ಸಾಗಿಸಿದ ಫಲವತ್ತಾದ ಮಣ್ಣಿನ ಮೇಲೆ ಬಿಡುತ್ತದೆ. ಇದರಿಂದ ಕೊರಕಲಿಗೊಳಗಾದ ಪ್ರದೇಶ ಮತ್ತು ಸವಕಳಿಯ ಮಣ್ಣನ್ನು ಪಡೆಯುವ ಪ್ರದೇಶಗಳೆರಡೂ ಬೇಸಾಯದ ದೃಷ್ಟಿಯಿಂದ ನಿಷ್ಪ್ರಯೋಜಕವೆನಿಸುತ್ತವೆ.
 • ಒಂದೊಮ್ಮೆ ಸವಕಳಿಗೊಂಡ ಮಣ್ಣು ಹಳ್ಳದಂತಹ ನೈಸರ್ಗಿಕ ಬಸಿಗಾಲುವೆಗೆ ಹೋಗಿ ಬಿದ್ದರೆ, ಹಳ್ಳದ ಮೇಲ್ಭಾಗದಲ್ಲಿರುವ ಪ್ರದೇಶದಿಂದ ಹೆಚ್ಚಿನ ನೀರು ಸರಿಯಾಗಿ ಬಸಿದು ಹೋಗದೆ ಜೌಗುಂಟಾಗಬಹುದು.

ಕೊರಕಲು ಬಿದ್ದ ಭೂಮಿಯನ್ನು ಸುಧಾರಿಸುವಾಗ ಗಮನಿಸಬೇಕಾದ ಪ್ರಮುಖ ಅಂಶಗಳು

 • ಕೊರಕಲುಗಳಿರುವ ಪ್ರದೇಶಕ್ಕೆ ಸಂಬಂಧಿಸಿದ ಇಡೀ ಜಲಾನಯನ ಪ್ರದೇಶವನ್ನು ಗಣನೆಗೆ ತೆಗೆದುಕೊಳ್ಳುವುದು ಉತ್ತಮ. ಕಾರಣಾಂತರಗಳಿಂದ ಇದು ಸಾಧ್ಯವಾಗದಿದ್ದರೆ ಸುಧಾರಣೆಯನ್ನು ಮಾಡಬೇಕೆಂದಿರುವ ಪ್ರದೇಶಕ್ಕೆ ಯಾವ ಪ್ರದೇಶದಿಂದ ನೀರು ಹರಿದು ಬರುತ್ತದೆಯೋ ಆ ಪ್ರದೇಶವನ್ನಾದರೂ ಪರಿಗಣಿಸಬೇಕು.
 • ಕೊರಕಲುಗಳಿರುವ ಪ್ರದೇಶವನ್ನು ಬೇಸಾಯಕ್ಕೆ ಸೂಕ್ತವನ್ನಾಗಿ ಮಾಡಲು ಬೇಕಾಗುವ ಖರ್ಚು ಮತ್ತು ಸುಧಾರಣೆಯಾದ ನಂತರ ಆ ಪ್ರದೇಶದಿಂದ ದೊರೆಯುವ ಆದಾಯ ಇವೆರಡನ್ನೂ ತುಲನೆ ಮಾಡಿ ನೋಡಬೇಕು.

ಈ ಸಂದರ್ಭದಲ್ಲಿ ಒಂದು ವಿಷಯವನ್ನು ಗಮನಿಸಬೇಕು ಇಂತಹ ಸಮಸ್ಯಾತ್ಮಕ ಭೂಮಿಯನ್ನು ಸುಧಾರಿಸಿ ಕೃಷಿಗೆ ಸೂಕ್ತವನ್ನಾಗಿ ಮಾಡಲು ಬೇಕಾಗುವ ವೆಚ್ಚವು ಸುಧಾರಣೆಯಾದ ನಂತರ ದೊರೆಯುವ ಆದಾಯಕ್ಕಿಂತ ಅಧಿಕವೆಂದು ಕಂಡು ಬಂದರೂ ಕೊರಕಲುಗಳು ಇರುವ ಭೂಮಿಯನ್ನು ಸುಧಾರಿಸಬೇಕಾದುದು ಅನಿವಾರ್ಯ. ಈ ಬಗೆಯ ನಿರ್ಧಾರಕ್ಕೆ ಕೆಳಗಿನ ಕಾರಣಗಳನ್ನು ಕೊಡಬಹುದು.

 • ಕೊರಕಲುಗಳ ಮೂಲಕ ನಡೆಯುತ್ತಿರುವ ಮಣ್ಣಿನ ಸವಕಳಿಯನ್ನು ತಡೆಯದಿದ್ದರೆ ಕೊರಕಲು ದೊಡ್ಡದಾಗುತ್ತಾ ಸಾಗಿ ವಿಶಾಲವಾದ ಪ್ರದೇಶವನ್ನಾವರಿಸಬಹುದು.
 • ಅಕ್ಕಪಕ್ಕದಲ್ಲಿರುವ ಪ್ರದೇಶಗಳಿಗೂ ಈ ಸಮಸ್ಯೆಯು ವಿಸ್ತರಿಸಬಹುದು.
 • ದೊಡ್ಡ ಪ್ರಮಾಣದಲ್ಲಿ ಕೊಚ್ಚಿಕೊಂಡು ಹೋದ ಸತ್ವಹೀನ ಮಣ್ಣು, ಕೆಳಭಾಗದಲ್ಲಿರುವ ಫಲವತ್ತಾದ ಭೂಮಿಯ ಮೇಲೆ ನೆಲೆಸಿ ಈ ಪ್ರದೇಶವನ್ನೂ ಬೇಸಾಯಕ್ಕೆ ನಿರುಪಯೋಗವಾಗುವಂತೆ ಮಾಡಬಹುದು.

ಕೊರಕಲು ಬಿದ್ದ ಭೂಮಿಯ ಸುಧಾರಣೆಯನ್ನು ಮಾಡುವ ವಿಧಾನಗಳು

ಸುಧಾರಣೆಯನ್ನು ಮಾಡುವ ಯೋಜನೆಯನ್ನು ಯೋಜಿಸುವಾಗ ಮುಂದಿನ ಸಂಗತಿಗಳನ್ನು ಪರಿಗಣಿಸಬೇಕು.

 • ಸಂಬಂಧಿಸಿದ ಒಟ್ಟು ಕ್ಷೇತ್ರ
 • ಭೂಮಿಯ ಇಳುಕಲಿನ ಪ್ರಮಾಣ, ಉದ್ದ ಮತ್ತು ಇತರ ಗುಣಧರ್ಮಗಳು.
 • ಪ್ರದೇಶದ ಹವಾಮಾನ.
 • ಮಣ್ಣಿನ ಸವಕಳಿಯ ತೀವ್ರತೆ.
 • ಭೂ ಸುಧಾರಣೆಗೆ ಲಭ್ಯವಿರುವ ಹಣದ ಮೊತ್ತ.

ಸುಧಾರಣೆಯನ್ನು ಆರಂಭಿಸುವ ಮೊದಲು, ಕೊರಲಿಗೆ ಹರಿದು ಬರುವ ನೀರನ್ನು ತಡೆಯುವ ಮತ್ತು ಆ ನೀರನ್ನು ಬೇರೆಡೆಗೆ ಸಾಗಿಸುವ ವ್ಯವಸ್ಥೆಯನ್ನು ಮಾಡುವುದು ಅವಶ್ಯವೆನ್ನಬಹುದು. ಕೆಲವು ಪ್ರಸಂಗಗಳಲ್ಲಿ ಈ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯೂ ಕಂಡು ಬರಬಹುದು. ಆದರೆ, ಹರಿಯುವ ನೀರನ್ನು ಬೇರೆಡೆ ಹರಿಯುವಂತೆ ಮಾಡಿದಾಗ ಆ ಭೂ ಪ್ರದೇಶಕ್ಕೆ ಯಾವುದೇ ರೀತಿಯ ನಷ್ಟವುಂಟಾಗದೆ ನೀರು ಸುರಕ್ಷಿತವಾಗಿ ಹೊರ ಹರಿಯುವಂತೆ ಎಚ್ಚರವಹಿಸಬೇಕು.

ಕೊರಕಲುಗಳಿದ್ದ ಭೂಮಿಯನ್ನು ಸರಿಪಡಿಸಲು ಹಲವಾರು ವಿಧಾನಗಳನ್ನು ಬಳಸಬಹುದು. ಕೊರಕಲುಗಳು ಸಣ್ಣವಾಗಿದ್ದರೆ ಭೂಮಿಯನ್ನು ಉಳುಮೆ ಮಾಡಿ ಇಲ್ಲವೇ ಅಗೆದು ಮಟ್ಟ ಮಾಡಿ ಕೊರಕಲುಗಳನ್ನು ಸರಿಪಡಿಸಬಹುದು. ಆದರೆ ಬೃಹದಾಕಾರದ ಕೊರಕಲಿರುವ ಭೂಮಿಯನ್ನು ಸುಧಾರಿಸಲು ಬೇರೆ ವಿಧಾನಗಳನ್ನೇ ಅನುಸರಿಸಬೇಕಾಗುತ್ತದೆ. ಈ ಕಾರ್ಯಕ್ಕೆ ಸಸ್ಯಗಳನ್ನು ನೆಡಬಹುದು ಅಥವಾ ನಿರ್ಜೀವ ವಸ್ತುಗಳನ್ನು ಉಪಯೋಗಿಸಬಹುದು ಇಲ್ಲವೇ ಇವೆರಡೂ ವಿಧಾನಗಳ ಸಂಯೋಜನೆಯಿಂದಲೂ ಭೂ ಸವಕಳಿಯನ್ನು ತಡೆದು ಕೊರಕಲುಗಳನ್ನು ನಿವಾರಿಸಬಹುದು. ಪ್ರಮುಖ ವಿಧಾನಗಳ ಸಂಕ್ಷಿಪ್ತ ವರ್ಣನೆಯು ಕೆಳಗಿನಂತಿವೆ.

) ಕುಡಜೂ (Pueraria Species) ಬಳಕೆ: ಕುಡಜೂ ಇದು ಬೇಳೆಕಾಳು ವರ್ಗಕ್ಕೆ ಸೇರಿದ ಒಂದು ಬಳ್ಳಿ. ಕೊರಕಲಿನ ದಂಡೆಯ ಮೇಲೆ ಈ ಬಳ್ಳಿಯ ಬೀಜಗಳನ್ನು ಬಿತ್ತಿದರೆ ಅಥವಾ ಕಾಂಡದ ತುಂಡುಗಳನ್ನು ನೆಟ್ಟರೆ, ಕೆಲವು ದಿನಗಳಲ್ಲಿ ಸಸ್ಯವು ಬೆಳೆದು ಕೊರಕಲಿನ ಭಾಗವನ್ನೆಲ್ಲಾ ಆಕ್ರಮಿಸುತ್ತದೆ. ಬಳ್ಳಿಯ ಬೇರುಗಳು ಎಲ್ಲೆಡೆ ಪಸರಿಸಿ, ಮಣ್ಣಿನ ಕಣಗಳು ಚದುರಿ ಹೋಗದಂತೆ ಹಿಡಿದಿಡುತ್ತದೆ. ಕೊರಕಲಿನ ಅಂಚನ್ನು ಸಾಧ್ಯವಾದಲ್ಲೆಲ್ಲಾ ಕೆಳಗೆ ದೂಡಿದರೆ ಅಥವಾ ಅಗೆದು ಇಳಿಜಾರಾಗುವಂತೆ ಮಾಡಿದರೆ ಸರಿಯಾಗಿ ಮತ್ತು ಶೀಘ್ರಗತಿಯಿಂದ ಪಸರಿಸಲು ಸಸ್ಯಕ್ಕೆ ಅನುಕೂಲವುಂಟಾಗುತ್ತದೆ.

ಕುಡಜೂ ಬಳ್ಳಿ ದನಕರುಗಳಿಗೆ ಪೌಷ್ಟಿಕ ಹಸಿರು ಮೇವು, ಹವಾಮಾನವು ಅನುಕೂಲಕರವಿದ್ದಾಗ, ಬಳ್ಳಿಗಳನ್ನು ಬಿಸಿಲಿನಲ್ಲಿ ಒಣಗಿಸಿ ಸಂಗ್ರಹಿಸಿಟ್ಟುಕೊಂಡರೆ ಹಸಿರು ಮೇವು ಸಿಗದಾಗ, ಈ ಒಣ ಮೇವನ್ನು ಪಶುಗಳಿಗೆ ಪೂರೈಸಬಹುದು.

) ಮರದ ರೆಂಬೆಗಳ ಉಪಯೋಗ: ಕೊರಕಲು ಸಣ್ಣ ಅಥವಾ ಮಧ್ಯಮಕಾರವಿದ್ದಾಗ ಮರದ ಶಾಖೆಗಳಿಂದ ಉಂಟು ಮಾಡಿದ ತಡೆಯಿಂದ ಸುಧಾರಣೆಯನ್ನು ಪರಿಣಾಮಕಾರಿಯಾಗಿ ಮಾಡಬಹುದು. ಮರದ ರೆಂಬೆಗಳನ್ನು ಕಡಿದು ತಂದು ೧೦-೧೨ ಸೆಂ.ಮೀ. ಅಂತರದಲ್ಲಿ ಕೊರಕಲಿನಲ್ಲಿಡಬೇಕು. ರೆಂಬೆಗಳಿಂದ ಸುಮಾರು ೩೦ ಸೆಂ.ಮೀ. ದೂರದಲ್ಲಿ ಕೊರಕಲಿನ ಕೆಳಭಾಗದಲ್ಲಿ ಸುಮಾರು ೧೦ ಸೆಂ.ಮೀ. ವ್ಯಾಸದ ಗೂಟಗಳನ್ನು ಕೊರಕಲಿಗೆ ಅಡ್ಡವಾಗಿ ನಿಲ್ಲಿಸಬೇಕು. ಹೀಗೆ ಮಾಡುವುದರಿಂದ ಮರದ ಶಾಖೆಗಳಿಗೆ ಸಂರಕ್ಷಣೆಯು ದೊರೆಯುತ್ತದೆ.

ಮೇಲೆ ವಿವರಿಸಿದಂತೆ ಮರದ ರೆಂಬೆಗಳನ್ನು ಬಳಸುವುದರಿಂದ ಕೊರಕಲಿನಲ್ಲಿ ಹರಿಯುವ ನೀರಿನ ವೇಗವು ತಗ್ಗಿ, ಮಣ್ಣಿನಲ್ಲಿರುವ ರೇವೆಯ ಸ್ವಲ್ಪ ಭಾಗವು ರೆಂಬೆಗಳ ಸಮೀಪದಲ್ಲಿ ತಡೆದು ನಿಲ್ಲುತ್ತದೆ. ಈ ಮಣ್ಣಿನಲ್ಲಿ ಕೆಲವು ಸಸ್ಯಗಳು ಬೆಳೆಯಲಾರಂಭಿಸಿ ಸವಕಳಿಯನ್ನು ತಡೆಯಲು ಸಹಾಯಕವೆನಿಸುತ್ತವೆ.

) ಹುಲ್ಲಿನ ಗಡ್ಡೆಗಳನ್ನು ನೆಡುವುದು (Planting Sods): ಕೆಲವು ಸಂದರ್ಭಗಳಲ್ಲಿ ಹುಲ್ಲು ಇಲ್ಲವೇ ಇತರ ಸೂಕ್ತ ಬೆಳೆಗಳನ್ನು ಕೊರಕಲಿರುವ ಸ್ಥಳಗಳಲ್ಲಿ ಅತಿ ಶೀಘ್ರವಾಗಿ ಬೆಳೆಸಿ, ಭೂ ಸವಕಳಿಯನ್ನು ಕೂಡಲೇ ಕಡಿಮೆ ಮಾಡಬಹುದು. ಸನಿಹದಲ್ಲಿ ಹುಲ್ಲಿನ ಗಡ್ಡೆಗಳು ಸಿಗುವಂತಿದ್ದರೆ ಇವುಗಳ ಸಹಾಯದಿಂದ ಸಣ್ಣ ಮತ್ತು ಮಾಧ್ಯಮಕಾರದ ಕೊರಕಲುಗಳನ್ನು ಪರಿಣಾಮಕಾರಿಯಾಗಿ ಸುಧಾರಿಸಲು ಸಾಧ್ಯ.

ಹುಲ್ಲಿನ ಗಡ್ಡೆಗಳನ್ನು ಹಚ್ಚಲು ಬೇಕಾಗುವ ಖರ್ಚು, ಕುಡಜೂ ಅಥವಾ ಇತರ ಸಸ್ಯಗಳನ್ನು ಬೆಳೆಸಲು ತಗಲುವ ಖರ್ಚಿಗಿಂತ ಅಧಿಕ. ಆದ್ದರಿಂದ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಇದನ್ನು ಬೆಳೆಸುವುದು ಪ್ರಶಸ್ತ. ಸಿಮೆಂಟು ಅಥವಾ ಕಾಂಕ್ರೀಟಿನ ತಡೆಗಳ ನಿರ್ಮಾಣಕ್ಕೆ ಖರ್ಚಾಗುವ ಹಣಕ್ಕಿಂತ ಹುಲ್ಲಿನ ಗಡ್ಡೆಗಳನ್ನು ಹಚ್ಚಲು ಬೇಕಾಗುವ ಹಣದ ಮೊತ್ತವು ಕಡಮೆ ಎಂಬುದನ್ನು ಇಲ್ಲಿ ಗಮನಿಸಬಹುದು.

) ಕೊರಕಲಿನ ಸುಧಾರಣೆಗೆ ಸಸ್ಯಗಳು

i) ಸಸ್ಯಗಳ ಆಯ್ಕೆ ಕೊರಲಿನ ಸುಧಾರಣೆಯನ್ನು ಮಾಡುವ ಉದ್ದೇಶಕ್ಕೆ ಬೆಳೆಸುವ ಸಸ್ಯಗಳನ್ನು ಆರಿಸುವಾಗ ಕೆಲವು ಸಂಗತಿಗಳನ್ನು ಲಕ್ಷ್ಯದಲ್ಲಿಡಬೇಕು.

 • ಭೂ ಸವಕಳಿಯನ್ನು ತಡೆದು, ಕೊರಕಲನ್ನು ತುಂಬಿ, ಭೂ ಸುಧಾರಣೆ ಆಗುವಲ್ಲಿ ಸಹಾಯವನ್ನೀಯುವ ಸಾಮರ್ಥ್ಯವುಳ್ಳ ಸಸ್ಯಗಳಾಗಿರಬೇಕು.
 • ಭೂ ಸುಧಾರಣೆಯ ನಂತರ ಆ ಸಸ್ಯಗಳಿಂದ ಮುಂದೆ ಯಾವ ಉದ್ದೇಶಕ್ಕಾಗಿ ಬಳಸಬೇಕೆಂದಿದೆಯೋ ಅದನ್ನು ಗಮನದಲ್ಲಿಟ್ಟು, ಸಸ್ಯವನ್ನು ಆರಿಸಿಕೊಳ್ಳಬೇಕು.
 • ಸ್ಥಾನಿಕ ಹವಾಮಾನ ಮತ್ತು ಭೂಮಿಯ ಪರಿಸ್ಥಿತಿಗೆ ಹೊಂದಿಕೊಳ್ಳಬಲ್ಲ ಸಸ್ಯ ಪ್ರಕಾರಗಳನ್ನೇ ಆರಿಸಿಕೊಳ್ಳುವುದು ಶ್ರೇಯಸ್ಕರ.
 • ಸ್ಥಾನಿಕ ಪರಿಸ್ಥಿತಿಗೆ ಹೊಂದಿಕೊಳ್ಳಬಲ್ಲ ಸಸ್ಯ ಪ್ರಕಾರಕ್ಕೆ ಭೂ ಸವಕಳಿಯನ್ನು ತಡೆಗಟ್ಟಿ, ಕೊರಕಲುಗಳ ಸುಧಾರಣೆಯನ್ನು ಮಾಡುವ ಸಾಮರ್ಥ್ಯವು ಇಲ್ಲದ ಪರಿಸ್ಥಿತಿಯು ಉದ್ಭವಿಸಿದರೆ ಬೇರೆ ಪ್ರದೇಶಗಳಿಂದ ಸಸ್ಯಗಳನ್ನು ತರುವ ಅನಿವಾರ್ಯತೆಯುಂಟಾಗುತ್ತದೆ. ಆಗಲೂ ಆ ಸಸ್ಯಗಳು ಸ್ಥಾನಿಕ ವಾತಾವರಣಕ್ಕೆ ಹೊಂದಿಕೊಳ್ಳುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು.

ii) ಸಸ್ಯಗಳ ಸಂರಕ್ಷಣೆ

 • ಕೊರಕಲಿನ ಸುಧಾರಣೆಯನ್ನು ಮಾಡುವ ಸಲುವಾಗಿ ಗಿಡಮರಗಳನ್ನು ಬೆಳೆಸಲು ನಿರ್ಧಾರ ಮಾಡಿದ ಪ್ರದೇಶದ ಸುತ್ತಲೂ ಭದ್ರವಾದ ಬೇಲಿಯನ್ನು ನಿರ್ಮಿಸಬೇಕು. ಇಲ್ಲವಾದರೆ ಹಸಿರು ಸಸ್ಯಗಳನ್ನು ಕೊಂಡೊಡನೆಯೇ ದನಕರುಗಳು ಸಸ್ಯಗಳನ್ನು ಮೇಯುತ್ತವೆಯಲ್ಲದೇ ಸಸಿಗಳನ್ನು ತುಳಿದು ಅವು ಸರಿಯಾಗಿ ಬೆಳೆಯದಂತಾಗುತ್ತವೆ.
 • ಕೊರಕಲಿನ ಅಗಲಕ್ಕಿಂತ ಎರಡು-ಮೂರು ಪಟ್ಟು ಅಗಲದ ಪ್ರದೇಶಕ್ಕೆ ಬೇಲಿಯನ್ನು ನಿರ್ಮಿಸಬೇಕು. ಕೊರಕಲು ಆರಂಭವಾದ ಪ್ರದೇಶದಲ್ಲಿ ಇನ್ನಷ್ಟು ಅಗಲವಾದ ಪ್ರದೇಶವನ್ನು ಬೇಲಿಯ ಮೂಲಕ ಸಂರಕ್ಷಿಸಬೇಕು.

) ಗಿಡಗಂಟಿಗಳ ಒಡ್ಡು : ಸಣ್ಣ ಪ್ರದೇಶಗಳಲ್ಲಿ ಕಂಡುಬರುವ ಕೊರಕಲುಗಳನ್ನು ಸುಧಾರಿಸಲು ಗಿಡಗಂಟಿಗಳ ಒಡ್ಡು ಪರಿಣಾಮಕಾರಿಯೆನ್ನಬಹುದು. ಈ ವ್ಯವಸ್ಥೆಗೆ ಬೇಕಾಗುವ ಖರ್ಚು ಕಡಮೆ. ಸ್ಥಾನಿಕವಾಗಿ ದೊರೆಯುವ ಗಿಡಗಂಟಿಗಳ ಪ್ರಕಾರ ಮತ್ತು ಪ್ರಮಾಣಗಳಿಗೆ ಅನುಗುಣವಾಗಿ ಒಡ್ಡಿನ ನಿರ್ಮಾಣದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

ಒಡ್ಡನ್ನು ನಿರ್ಮಿಸಬೇಕೆಂದಿರುವ ಸ್ಥಳದಲ್ಲಿ ಗಿಡಗಂಟಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಇಡಬೇಕು. ಕಂಟಿಗಳ ಬುಡಗಳು, ಪ್ರವಾಹದ ಮೇಲ್ದಿಕ್ಕಿನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಗಿಡಗಂಟಿಗಳ ಕೆಳಭಾಗದಲ್ಲಿ ಗೂಟಗಳನ್ನು ನಿಲ್ಲಿಸಿ ತಂತಿಯಿಂದ ಕಟ್ಟಬೇಕು. ಹೀಗೆ ಮಾಡುವುದರಿಂದ ಗಿಡಗಂಟಿಗಳನ್ನು ಒತ್ತಿದಂತಾಗಿ ಅವು ಸರಿಯಾಗಿ ನೆಲೆ ನಿಲ್ಲುತ್ತವೆ. ಒಡ್ಡಿನ ಮೇಲೆ ಹುಲ್ಲನ್ನು ಹರಡಬೇಕು. ಇದರಿಂದ ನೀರಿನೊಡನೆ ಕೊಚ್ಚಿ ಬಂದ ಮಣ್ಣಿನ ಕೆಲವು ಭಾಗಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ಒಡ್ಡಿನ ಎರಡು ಅಂಚುಗಳಿಗಿಂತ ಮಧ್ಯದ ಭಾಗು ಕೆಲಮಟ್ಟಿಗೆ ತಗ್ಗಾಗಿರುವಂತೆ ನೋಡಿಕೊಳ್ಳಬೇಕು. ಈ ವ್ಯವಸ್ಥೆಯಿಂದ ಹರಿದು ಬರುವ ನೀರು ಒಡ್ಡಿನ ಮೇಲಿಂದಲೇ ಹರಿಯತೊಡಗುತ್ತದೆ. ಇಲ್ಲವಾದರೆ ನೀರು ಒಡ್ಡಿನ ಹೊರಭಾಗಕ್ಕೆ ಹರಿದು, ಒಡ್ಡಿನ ಉದ್ದೇಶವು ಸಫಲವಾಗುವುದಿಲ್ಲ.

ಮೇಲಿನ ವ್ಯವಸ್ಥೆಯ ಬದಲು ಕೊರಕಲಿಗೆ ಅಡ್ಡಲಾಗಿ ಗೂಟಗಳನ್ನು ಭದ್ರವಾಗಿ ನಿಲ್ಲಿಸಿ ತಂತಿಯ ಜಾಳಿಗೆಯನ್ನು ಕೂಡಿಸಿದರೂ ಮೇಲಿನ ವ್ಯವಸ್ಥೆಯ ಪ್ರಯೋಜನವನ್ನು ಪಡೆಯಬಹುದು.

) ತಾತ್ಕಾಲಿಕ ಒಡ್ಡುಗಳು: ಕೆಲವು ಪ್ರಸಂಗಗಳಲ್ಲಿ ಸಾಕಷ್ಟು ಮಣ್ಣು ಮತ್ತು ಆರ್ದ್ರತೆಗಳ ಕೊರತೆಯಾಗಿ ಕೊರಕಲಿನಲ್ಲಿ ಸಸ್ಯಗಳನ್ನು ಬೆಳೆಸಲು ಸಾಧ್ಯವಾಗುವುದಿಲ್ಲ. ಅಂತಹ ಪ್ರದೇಶದಲ್ಲಿ ಕೊರಕಲಿಗೆ ಅಡ್ಡವಾಗಿ ಸಣ್ಣ ಆಕಾರದ ತಾತ್ಕಾಲಿಕ ಒಡ್ಡುಗಳನ್ನು ನಿರ್ಮಿಸಿದರೆ, ಮಣ್ಣು ಸಂಗ್ರಹವಾಗಿ ಅದರಲ್ಲಿ ಆರ್ದ್ರತೆಯು ಉಳಿದು ಸಸ್ಯಗಳಿಗೆ ಬೆಳೆಯಲು ಉತ್ತಮ ವಾತಾವರಣವುಂಟಾಗುತ್ತದೆ.

ಒಂದೇ ದೊಡ್ಡ ಒಡ್ಡಿನ ಬದಲು ಸಣ್ಣ ಆಕಾರದ ಹಲವು ಒಡ್ಡುಗಳನ್ನು ನಿರ್ಮಿಸುವುದು ಹೆಚ್ಚು ಪ್ರಯೋಜನಕಾರಿ. ಅದರಂತೆಯೇ ಈ ಒಡ್ಡುಗಳನ್ನು ನಿರ್ದಿಷ್ಟಗೊಳಿಸಿದ ಅಂತರದಲ್ಲಿ ಕಟ್ಟುವುದಕ್ಕಿಂತ ಆರಿಸಿದ ಸೂಕ್ತ ಸ್ಥಳಗಳಲ್ಲಿ ನಿರ್ಮಿಸುವುದೇ ಮೇಲು. ಇದರಿಂದ ಒಡ್ಡುಗಳ ಸಂಖ್ಯೆಯನ್ನು ಮಿತಗೊಳಿಸಿ ಖರ್ಚುನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ಒಡ್ಡಿನ ಎತ್ತರವು ೩೫-೪೦ ಸೆಂ.ಮೀ.ನಷ್ಟಿದ್ದರೆ ಸಾಕಾಗುತ್ತದೆ. ಒಡ್ಡಿನ ಮೇಲಿಂದ ನೀರು ಹರಿದು ಹೋಗುವ ಭಾಗವು ಕೊರಕಲಿನ ತಳಭಾಗದಿಂದ ೨೫-೩೦ ಸೆಂ.ಮೀ. ಎತ್ತರವಿರುವುದು ಅನುಕೂಲ.

) ಕಲ್ಲು ಮತ್ತು ಇತರ ವಸ್ತುಗಳಿಂದ ನಿರ್ಮಿಸಿದ ಒಡ್ಡುಗಳು: ಸ್ಥಾನಿಕವಾಗಿ, ಸೂಕ್ತ ಬೆಲೆಯಲ್ಲಿ, ಕಲ್ಲು ದೊರೆಯುವ ಪ್ರದೇಶಗಳಲ್ಲಿ, ಕಲ್ಲಿನ ಒಡ್ಡುಗಳನ್ನು ನಿರ್ಮಿಸಬಹುದು. ಇಂತಹ ಒಡ್ಡುಗಳನ್ನು ಚಪ್ಪಟೆಯಾಗಿರುವ ಕಲ್ಲುಗಳಿಂದ ಕಟ್ಟಿದರೆ ಹೆಚ್ಚು ಭದ್ರವಾಗಿರುತ್ತದೆ. ಗೋಲಾಕಾರದ ಅಥವಾ ಆಕಾರಹೀನ ಕಲ್ಲುಗಳನ್ನು ಬಳಸಿದರೆ ಹೊರಭಾಗದಲ್ಲಿರುವ ಕಲ್ಲುಗಳು ನೀರಿನ ಒತ್ತಡಕ್ಕೆ ಬೇರ್ಪಟ್ಟು ಒಡ್ಡು ಕೆಲ ಸಮಯದಲ್ಲೇ ನಿರುಪಯೋಗಿಯಾಗುತ್ತವೆ. ಆದರೆ, ಇಂತಹ ಕಲ್ಲುಗಳ ಬಳಕೆಯು ಅನಿವಾರ್ಯವಾದಾಗ ತಂತಿಯ ಜಾಳಿಗೆಯ ಸಹಾಯದಿಂದ ಕಲ್ಲುಗಳು ಹೊರಹೋಗದಂತೆ ವ್ಯವಸ್ಥೆಯನ್ನು ಮಾಡಬೇಕು.

ಗೋಲಾಕಾರದ ಅಥವಾ ಆಕಾರ ಹೀನ ಕಲ್ಲುಗಳಿಂದ ಒಡ್ಡನ್ನು ನಿರ್ಮಿಸುವ ಕಾರ್ಯವು ಕೆಲವು ಪ್ರಸಂಗಗಳಲ್ಲಿ ಬಹಳ ಶ್ರಮದಾಯಕವೆನಿಸುತ್ತದೆ. ಇಂತಹ ಸಮಸ್ಯೆಯು ಎದುರಾದಾಗ ಗೋಡೆ ಮತ್ತು ಸಿಮೆಂಟ್ ಇವುಗಳನ್ನು ಬಳಸಿ ಪರಿಣಾಮಕಾರಿಯಾದ ಒಡ್ಡುಗಳನ್ನು ನಿರ್ಮಿಸಬಹುದು. ಇದರ ಬದಲು ಸಿಮೆಂಟ್ ಕಾಂಕ್ರೀಟಿನಿಂದ ಒಡ್ಡನ್ನು ನಿರ್ಮಿಸುವುದು ಉತ್ತಮವೆನ್ನಬಹುದು.

ಗಾಳಿಯಿಂದ ಮಣ್ಣಿನ ಸವಕಳಿ

ನೀರಿನಂತೆ ಗಾಳಿಯೂ ಮಣ್ಣನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಿ, ಭೂ ಸವಕಳಿಯನ್ನುಂಟು ಮಾಡುತ್ತದೆ. ಈ ಕ್ರಿಯೆಯು ವಿಶ್ವದೆಲ್ಲೆಡೆ ಕಂಡುಬರುತ್ತದೆ. ಗಾಳಿಯಿಂದಾಗುವ ಸವಕಳಿಯು ಶುಷ್ಕ ಮತ್ತು ಅರೆಶುಷ್ಕ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಭಾರತದ ರಾಜಾಸ್ತಾನ, ಹರಿಯಾಣಾ, ಪಂಜಾಬ್, ಉತ್ತರ ಪ್ರದೇಶ, ಪಶ್ಚಿಮಬಂಗಾಳ, ಒರಿಸ್ಸಾ, ಗುಜರಾತ್, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮೊದಲಾದ ರಾಜ್ಯಗಳಲ್ಲಿರುವ ಶುಷ್ಕ ಮತ್ತು ಅರೆಶುಷ್ಕ ಪ್ರದೇಶಗಳಲ್ಲಿ, ಗಾಳಿಯು ಮಣ್ಣನ್ನು ಸ್ಥಳಾಂತರಗೊಳಿಸುತ್ತದೆ.

ಗಾಳಿಯಿಂದಾಗುವ ಸವಕಳಿಯ ದುಷ್ಪರಿಣಾಮಗಳು: ಗಾಳಿಯಿಂದ ನಡೆಯುವ ಮಣ್ಣಿನ ಸವಕಳಿಯು ಪ್ರಮುಖವಾಗಿ ಒಣ ಹವೆಯಲ್ಲಿ ಕಂಡುಬರುವ ಘಟನೆ. ಆದರೆ, ಕೆಲವು ವಿಶಿಷ್ಟ ಪ್ರಸಂಗಗಳಲ್ಲಿ ಆರ್ದ್ರ ಪ್ರದೇಶಗಳಲ್ಲಿಯೂ ಗಾಳಿಯಿಂದ ಮಣ್ಣು ಸವಕಳಿ ಹೊಂದಬಹುದು.

ಗಾಳಿಯಿಂದಾಗುವ ಮಣ್ಣಿನ ಸವಕಳಿಯಿಂದ ಹಲವು ಬಗೆಯ ನಷ್ಟಗಳುಂಟಾಗುತ್ತವೆ. ಪ್ರಮುಖವಾದ ಹಾನಿಗಳು ಕೆಳಗಿನಂತಿವೆ.

 • ಮಣ್ಣಿನಲ್ಲಿರುವ ಎಲ್ಲ ಆಕಾರದ ಕಣಗಳನ್ನು ಸಾಗಿಸುವ ಸಾಮರ್ಥ್ಯವನ್ನು ಗಾಳಿಯು ಹೊಂದಿದೆಯಾದರೂ ಅತಿ ಜಿನುಗು ಕಣಗಳನ್ನು ಅತಿ ಎತ್ತರಕ್ಕೆ ಮತ್ತು ಬಹುದೂರದವರೆಗೆ ಕೊಂಡೊಯ್ಯುತ್ತದೆ. ಹೀಗಾಗಿ ಫಲವತ್ತಾದ ಮಣ್ಣೇ ಸವಕಳಿಗೊಂಡು ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆಗಳು ಕಡಮೆಯಾಗುತ್ತವೆ.
 • ಕೆಲವೆಡೆ ಕೇವಲ ಮಣ್ಣನ್ನಲ್ಲದೆ, ಅಲ್ಲಿ ಬೆಳೆಯುವ ಬೆಳೆಗಳನ್ನೇ ಬೇರು ಸಹಿತ ಕಿತ್ತು ಬೇರೆಡೆ ಒಯ್ದು ಸಾಯಲು ಬಿಡಬಹುದು. ಇಲ್ಲವೇ ಬೇರುಗಳು ಹೊರಬಂದಿರುವುದರಿಂದ ಸಸ್ಯಗಳು ಸಾಯಬಹುದು.
 • ಗಾಳಿಯು ತಂದ ಮಣ್ಣಿನ ಕಣಗಳು ಬೆಳೆಯಲು ಮೇಲೆ ನೆಲೆಸುವುದರಿಂದ ಇಡೀ ಬೆಳೆಯೇ ಮುಚ್ಚಿಹೋಗಿ ನಾಶಗೊಳ್ಳಬಹುದು.

ಗಾಳಿಯಿಂದ ಆಗುವ ಭೂ ಸವಕಳಿಯ ಮೇಲೆ ಪ್ರಭಾವ ಬೀರುವ ಸಂಗತಿಗಳು:

i) ಮಣ್ಣಿನಲ್ಲಿರುವ ಆರ್ದ್ರತೆ: ಆರ್ದ್ರವಾಗಿರುವ ಮಣ್ಣಿನಿಂದ ಗಾಳಿಯು ಕಣಗಳನ್ನು ಬೇರ್ಪಡಿಸಲಾರದಲ್ಲದೆ ಅವನ್ನು ದೂರದವರೆಗೂ ಒಯ್ಯಲಾರದು. ಮಣ್ಣು ಒಣಗಿದಂತೆ, ಗಾಳಿಯ ಪ್ರಭಾವವು ಹೆಚ್ಚಿ ಸವಕಳಿಯು ಅಧಿಕಗೊಳ್ಳುತ್ತದೆ.

ii) ಗಾಳಿಯ ವೇಗ: ಗಾಳಿಯ ವೇಗವು ಅಧಿಕಗೊಂಡಂತೆ ತನ್ನೊಡನೆ ಮಣ್ಣನ್ನು ಕೊಂಡೊಯ್ಯುವ ಸಾಮರ್ಥ್ಯವು ಹೆಚ್ಚುತ್ತದೆ. ಮಣ್ಣಿನ ಸವಕಳಿಯು ಆರಂಭವಾಗಬೇಕಾದರೆ ಗಾಳಿಯ ವೇಗವು ಪ್ರತಿ ಗಂಟೆಗೆ ಸುಮಾರು ೨೦ ಕಿ.ಮೀ.ನಷ್ಟಾದರೂ ಇರಬೇಕಾಗುತ್ತದೆಂದು ಅಧ್ಯಯನಗಳಿಂದ ಕಂಡುಬಂದಿದೆ. ಒಮ್ಮೆ ಭೂ ಸವಕಳಿಯು ಆರಂಭವಾಯಿತೆಂದರೆ, ಗಾಳಿಯ ವೇಗವು ಹೆಚ್ಚಾದಂತೆಲ್ಲ ಸವಕಳಿಯ ಪ್ರಮಾಣವೂ ಅಧಿಕಗೊಳ್ಳುತ್ತದೆ.

iii) ಮೇಲ್ಭಾಗದ ಮಣ್ಣಿನ ಸ್ಥಿತಿ: ಮೇಲ್ಭಾಗದ ಮಣ್ಣಿನ ಸ್ಥಿತಿಗೂ ಗಾಳಿಯಿಂದ ನಷ್ಟವಾಗುವ ಮಣ್ಣಿನ ಪ್ರಮಾಣಕ್ಕೂ ನೇರ ಸಂಬಂಧವಿದೆ. ಭೂಮಿಯನ್ನು ಉಳುಮೆ ಮಾಡಿ ಹೆಂಟೆಗಳನ್ನು ಹಾಗೆಯೇ ಉಳಿಸಿದರೆ, ಗಾಳಿಯು ಮಣ್ಣನ್ನು ದೊಡ್ಡ ಪ್ರಮಾಣದಲ್ಲಿ ತನ್ನೊಡನೆ ಕೊಂಡೊಯ್ಯಲಾರದು. ಇದರ ಬದಲು, ಹೆಂಟೆಗಳನ್ನು ಒಡೆದು ಪುಡಿ ಮಾಡಿದರೆ ಅಧಿಕ ಪ್ರಮಾಣದಲ್ಲಿ ಮಣ್ಣು, ಗಾಳಿಯೊಡನೆ ಹಾರಿ ಹೋಗುತ್ತದೆ. ಮಣ್ಣಿನ ಮೇಲ್ಭಾಗದಲ್ಲಿ ರವದಿ ಅಥವಾ ಇತರ ಪದಾರ್ಥಗಳ ಆಚ್ಛಾದನೆಯಿದ್ದರೆ, ಗಾಳಿಯಿಂದಾಗುವ ಸವಕಳಿಯ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುತ್ತದೆ.

iv) ಮಣ್ಣಿನ ಗುಣಧರ್ಮಗಳು: ಗಾಳಿಯಿಂದಾಗುವ ಸವಕಳಿಯ ಮೇಲೆ ಮಣ್ಣಿನ ಹಲವು ಗುಣಧರ್ಮಗಳು ಪರಿಣಾಮಕವನ್ನು ಬೀರುತ್ತವೆ. ಉದಾಹರಣೆಗೆ, ಗಾಳಿಯಲ್ಲಿರುವ ಮಣ್ಣಿನ ಕಣಗಳ ಹೊಡೆತದಿಂದ ಸಡಿಲವಾಗದೇ ಭದ್ರವಾಗಿ ಉಳಿಯಬಲ್ಲ ಹೆಂಟೆಗಳಿರುವ ಮಣ್ಣಿನಲ್ಲಿ, ಸವಕಳಿಯ ಪ್ರಮಾಣವು ಕಡಮೆಯೆನ್ನಬಹುದು. ಮಳೆಯ ನಂತರ ಮಣ್ಣಿನ ಮೇಲ್ಮೈಯಲ್ಲಿ ನಿರ್ಮಾಣಗೊಂಡ ಪದರು ಸ್ಥಿರವಾಗಿದ್ದರೆ, ಮಣ್ಣಿನಿಂದ ಗಾಳಿಯು ಕಣಗಳನ್ನು ಸುಲಭವಾಗಿ ಸೆಳೆದೊಯ್ಯಲಾರದು. ಅದರಂತೆಯೇ ಸಾವಯವ ಪದಾರ್ಥವು ಸಾಕಷ್ಟು ಪ್ರಮಾಣದಲ್ಲಿರುವ ಮಣ್ಣಿನಲ್ಲಿ, ಎರೆಕಣಗಳು ಸಾವಯವ ಪದಾರ್ಥಗಳೊಡನೆ ಅಂಟಿಕೊಂಡು ಗಾಳಿಯ ಸೆಳೆತದಿಂದ ತಪ್ಪಿಸಿಕೊಳ್ಳುತ್ತವೆ.

ಸರಾಸರಿ ವ್ಯಾಸವು ೦.೧ ಮಿ.ಮೀ. ಇರುವ ಕಣಗಳು ಗಾಳಿಯಿಂದ ಆಗುವ ಸವಕಳಿಗೆ ಬಲಿಯಾಗುತ್ತವೆಯಾದರೂ, ಅದಕ್ಕಿಂತ ಸಣ್ಣ ಮತ್ತು ದೊಡ್ಡ ಆಕಾರದ ಕಣಗಳು ಅಷ್ಟು ಸುಲಭವಾಗಿ ಗಾಳಿಯ ಸವಕಳಿಗೆ ತುತ್ತಾಗುವುದಿಲ್ಲವೆಂದೂ ಕಂಡು ಬಂದಿದೆ. ಆದ್ದರಿಂದಲೇ ಜಿನುಗು ಮರಳು, ಗಾಳಿಯಿಂದಾಗುವ ಸವಕಳಿಗೆ ಬಹು ಸುಲಭವಾಗಿ ಒಳಪಡುತ್ತದೆ.

ಈ ಸಂದರ್ಭದಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಗಾಳಿಯ ಸೆಳೆತಕ್ಕೆ ಸುಲಭವಾಗಿ ಸಿಕ್ಕ ೦.೧ ಮಿ.ಮೀ. ವ್ಯಾಸವಿರುವ ಮಣ್ಣಿನ ಕಣಗಳು ತನಗಿಂತ ಆಕಾರದಲ್ಲಿ ದೊಡ್ಡವಾಗಿರುವ ಕಣಗಳಿಗೆ ರಭಸದಿಂದ ಅಪ್ಪಳಿಸಿದವೆಂದರೆ, ಒತ್ತಡಕ್ಕೀಡಾದ ದೊಡ್ಡ ಕಣಗಳು ನೆಲಕ್ಕೆ ಸಮಾನಾಂತರವಾಗಿ ಮುಂದೆ ಚಲಿಸುತ್ತವೆ. ಅದರಂತೆಯೇ ತನಗಿಂತ ಸಣ್ಣ ಆಕಾರದ ಕಣಗಳಿಗೆ ಅಪ್ಪಳಿಸಿದಾಗ, ಆ ಸಣ್ಣ ಕಣಗಳು ಮೇಲೆ ಜಗಿದು ಗಾಳಿಯ ಸೆಳೆತಕ್ಕೆ ಸಿಕ್ಕಿ ಮೂಲ ಸ್ಥಾನದಿಂದ ದೂರದ ಸ್ಥಳಕ್ಕೆ ಹೋಗಿ ಬೀಳುತ್ತವೆ.

v) ಸಸ್ಯಗಳು ಮತ್ತು ಭೂ ಆಚ್ಛಾದನೆ

 • ಬೆಳೆಯ ಸಾಲುಗಳು ಗಾಳಿಯ ಚಲನೆಯ ದಿಕ್ಕಿಗೆ ಲಂಬವಾಗಿರುವಂತೆ ನೋಡಿಕೊಂಡರೆ ಗಾಳಿಯಿಂದಾಗುವ ಸವಕಳಿಯನ್ನು ಸಮರ್ಥವಾಗಿ ತಡೆಯಲು ಸಾಧ್ಯವಾಗುತ್ತದೆ.
 • ಸಸ್ಯದ ಬೇರುಗಳು, ಮಣ್ಣನ್ನು ಬಂಧಿಸುವುದರಿಂದ ಬೆಳೆಯಿರುವ ಮಣ್ಣಿನಲ್ಲಿ ಗಾಳಿಯಿಂದಾಗುವ ಸವಕಳಿಯ ಪ್ರಮಾಣವು ಕಡಮೆ.
 • ಮಣ್ಣಿನ ಮೇಲ್ಭಾಗದಲ್ಲಿ ಸರಿಯಾದ ಆಚ್ಛಾದನೆಯಿದ್ದರೆ, ಗಾಳಿಯು ಭೂ ಸವಕಳಿಯನ್ನು ಉಂಟು ಮಾಡಲಾರದು. ಭೂಮಿಯನ್ನು ಪೂರ್ತಿಯಾಗಿ ಆವರಿಸುವ ಬೆಳೆಯೂ ಭೂ ಆಚ್ಛಾದನೆಯ ಪ್ರಯೋಜನವನ್ನು ದೊರಕಿಸಿಕೊಡಬಲ್ಲದು.

ನೀರಿನಿಂದಾಗುವ ಸವಕಳಿಯಲ್ಲಿದ್ದಂತೆ, ಗಾಳಿಯಿಂದ ಸಂಭವಿಸುವ ಭೂ ಸವಕಳಿಯಲ್ಲಿಯೂ ಎರಡು ಹಂತಗಳಿವೆ.

) ಕಣಗಳ ಬೇರ್ಪಡಿಕೆ: ಘರ್ಷಣೆಯ ಸಾಮರ್ಥ್ಯವಿರುವ ಗಾಳಿಯು, ಮಣ್ಣಿನ ಹೆಂಟೆಗಳಲ್ಲಿ ಮತ್ತು ಮಣ್ಣಿನ ಕಣಗಳ ರಚನೆಗಳಲ್ಲಿರುವ ಕಣಗಳನ್ನು ಮೂಲದಿಂದ ಬೇರ್ಪಡಿಸುತ್ತದೆ. ಮಣ್ಣಿನ ಕಣಗಳು ಸೇರಿಕೊಂಡ ಮೇಲಂತೂ ಗಾಳಿಯ ಘರ್ಷಣಾ ಸಾಮರ್ಥ್ಯವು ಅಧಿಕಗೊಂಡು ಕಣಗಳನ್ನು ಬೇರ್ಪಡಿಸುವ ಕಾರ್ಯವು ಹೆಚ್ಚು ತೀಕ್ಷ್ಣಗೊಳ್ಳುತ್ತದೆ. ಬೇರ್ಪಟ್ಟ ಕಣಗಳು ಮುಂದಿನ ಹಂತವಾದ ವಹನಕ್ಕೆ ಸಿದ್ಧವಾದಂತೆ.

) ಕಣಗಳ ವಹನಕ್ರಿಯೆ: ಬೇರ್ಪಟ್ಟ ಮಣ್ಣಿನ ಕಣಗಳನ್ನು ಗಾಳಿಯು ಹಲವು ರೀತಿಯಿಂದ ದೂರ ಕೊಂಡೊಯ್ಯುತ್ತದೆ. ಕೆಳಗಿನ ವಿಧಾನಗಳು ಮಹತ್ವವಾದುದೆನ್ನಬಹುದು.

 • ಮೊದಲ ಮತ್ತು ಅತಿ ಮಹತ್ವದ ವಿಧಾನವೆಂದರೆ ಕಣಗಳ ಜಿಗಿತ (Saltation) ಈ ವಿಧಾನದಲ್ಲಿ, ಮಣ್ಣಿನ ಕಣಗಳು ಹಲವಾರು ಬಾರಿ ಜಿಗಿಯುತ್ತ, ಕುಪ್ಪಳಿಸುತ್ತ ಮುಂದೆ ಸಾಗುತ್ತವೆ. ಈ ರೀತಿ ಕುಪ್ಪಳಿಸುವಾಗ ಕಣಗಳು ಭೂಮಿಯ ಸಮೀಪದಲ್ಲಿಯೇ ಇರುತ್ತವೆ. ಹೆಚ್ಚೆಂದರೆ ನೆಲದಿಂದ ಸುಮಾರು ೩೦ ಸೆಂ.ಮೀ.ನಷ್ಟು ಎತ್ತರಕ್ಕೇರಬಹುದು. ಚಲಿಸುವ ಒಟ್ಟು ಕಣಗಳ ಶೇಕಡಾ ೫೦ ರಿಂದ ೭೦ ರಷ್ಟು ವಹನವು ಈ ವಿಧಾನದಿಂದಲೇ ಸಾಗುತ್ತದೆಂದು ಕಂಡು ಬಂದಿದೆ.
 • ಇನ್ನೊಂದು ಬಗೆಯ ಚಲನೆಯಲ್ಲಿ, ಕಣಗಳು ಭೂಮಿಯ ಮೇಲೆ ತೆವಳುತ್ತಾ (Creeping) ಮುಂದೆ ಸಾಗುತ್ತವೆ. ಮೇಲೆ ವಿವರಿಸಿದಂತೆ ಮಣ್ಣಿನ ಕಣಗಳು ಕುಪ್ಪಳಿಸುತ್ತಾ ಮುಂದೆ ಸಾಗುತ್ತಿರುವಾಗ ಅವುಗಳ ದಾರಿಯಲ್ಲಿರುವ ದೊಡ್ಡ ಆಕಾರದ ಕಣಗಳನ್ನು ಅಪ್ಪಳಿಸುತ್ತವೆ. ಈ ಹೊಡೆತದಿಂದ ದೊಡ್ಡ ಕಣಗಳು ತೆವಳುತ್ತಾ ಸಾಗುತ್ತವೆ. ಸುಮಾರು ೦.೮೫ ಮಿ.ಮೀ. ವ್ಯಾಸದವರೆಗಿನ ಕಣಗಳು ಈ ವಿಧಾನದಿಂದ ಮುಂದೆ ಚಲಿಸುತ್ತವೆಂದು ಕಂಡು ಬಂದಿದೆ. ಚಲಿಸುವ ಒಟ್ಟು ಕಣಗಳ ಶೇ ೫-೨೫ರಷ್ಟು ಇಂತಹ ಚಲನೆಗೆ ಗುರಿಯಾಗುತ್ತವೆ.
 • ಕಣಗಳು ಗಾಳಿಯಲ್ಲಿ ತೇಲುತ್ತ ಚಲಿಸುವ ವಿಧಾನವೇ (Suspension) ಎಲ್ಲಕ್ಕಿಂತ ಎದ್ದು ಕಾಣುವ ಬಗೆಯೆನ್ನಬಹುದು. ಇಲ್ಲಿ ಜಿನುಗು ಮರಳಿನ ಮತ್ತು ಅದಕ್ಕಿಂತ ಸಣ್ಣ ಆಕಾರದ ಕಣಗಳು, ಗಾಳಿಯ ಹೊಡೆತಕ್ಕೆ ಸಿಕ್ಕಿ ನೆಲಕ್ಕೆ ಸಮಾನಾಂತರದಲ್ಲಿ ಮತ್ತು ನೆಲದಿಂದ ಮೇಲ್ಗಡೆಗೆ ಚಲಿಸುತ್ತವೆ. ಕಣಗಳು ನೆಲದಿಂದ ಕೆಲವು ಮೀ.ಗಳ ಎತ್ತರದಲ್ಲಿ ಗಾಳಿಯೊಡನೆ ಚಲಿಸುವ ಕ್ರಿಯೆಯು ಸಾಮಾನ್ಯ. ಆದರೆ ಜೋರಾಗಿ ಬೀಸುವ ಗಾಳಿಯು ಮಣ್ಣಿನ ಕಣಗಳನ್ನು ಹಲವು ಕಿ.ಮೀ.ಗಳ ಎತ್ತರಕ್ಕೆ ಕೊಂಡೊಯ್ದು ನೂರಾರು ಕಿ.ಮೀ. ದೂರದವರೆಗೆ ಸಾಗಿಸಲೂ ಬಹುದು. ಈ ರೀತಿ ಬಹುದೂರ ಚಲಿಸಿದ ಕಣಗಳು, ಗಾಳಿಯು ಸ್ತಬ್ಧವಾದೊಡನೆ ನೆಲಕ್ಕೆ ಬೀಳುತ್ತದೆ. ಇಷ್ಟರಲ್ಲಿ ಆಕಸ್ಮಿಕವಾಗಿ ಮಳೆಯು ಬಂದಲ್ಲಿ ಕೆಳ ಬೀಳುವ ನೀರಿನ ಹನಿಗಳೊಡನೆ ಮಣ್ಣಿನ ಕಣಗಳೂ ಭೂಮಿಯನ್ನು ತಲುಪುತ್ತವೆ.

ಚಲನೆಯ ಈ ವಿಧಾನವು ಅತಿ ಆಕರ್ಷಕವೆನಿಸಿದರೂ ಚಲಿಸುವ ಒಟ್ಟು ಕಣಗಳ ಶೇಕಡಾ ೧೫ಕ್ಕಿಂತ ಕಡಿಮೆ ಕಣಗಳು ಈ ವಿಧಾನದಿಂದ ಸ್ಥಳಾಂತರಗೊಳ್ಳುತ್ತವೆ. ಕ್ವಚಿತ್ತಾಗಿ ಈ ಪ್ರಮಾಣವು ಶೇಕಡಾ ೪೦ರವರೆಗೆ ಏರಬಹುದು.

ಗಾಳಿಯಿಂದಾಗುವ ಭೂ ಸವಕಳಿಯ ತಡೆಗಳು: ಬೇಸಾಯ ಕ್ರಮದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡು ಮತ್ತು ಬೀಸುವ ಗಾಳಿಗೆ ತಡೆಯನ್ನೊಡ್ಡಬಲ್ಲ ಗಿಡಮರಗಳನ್ನು ಬೆಳೆಸಿ, ಗಾಳಿಯಿಂದಾಗುವ ಭೂ ಸವಕಳಿಯನ್ನು ಕಡಮೆ ಮಾಡಬಹುದು. ಪ್ರಮುಖವಾದ ಕ್ರಮಗಳು ಕೆಳಗಿನಂತಿವೆ.

i) ಸಾವಯವ ಪದಾರ್ಥದ ಆಚ್ಛಾದನೆ: ಬೆಳೆಯ ಕೊಯ್ಲಾದ ನಂತರ ಅದರ ಕೊಳೆ, ದಂಟು, ರವದಿ ಮುಂತಾದ ಸಾವಯವ ಪದಾರ್ಥಗಳನ್ನು ಭೂಮಿಯ ಮೇಲೆ ಇರಲು ಬಿಟ್ಟರೆ ಹರಿಯುವ ನೀರಿನ ವೇಗವನ್ನು ತಗ್ಗಿಸಿ ಅದರೊಡನೆ ಕೊಚ್ಚಿ ಹೋಗುವ ಮಣ್ಣನ್ನು ತಡೆಯಬಹುದುದೆಂಬುದನ್ನು ಈಗಾಗಲೇ ತಿಳಿಸಿದೆ. ಸಾವಯವ ಪದಾರ್ಥದ ಆಚ್ಛಾದನೆಯಿಂದ ಗಾಳಿಯಿಂದಾಗುವ ಭೂ ಸವಕಳಿಯನ್ನು ಕಡಿಮೆ ಮಾಡುವ ಸಂಗತಿ ಮಹತ್ವದೆನ್ನಬಹುದು.

ಭಾರತದ ಬಹಳಷ್ಟು ಪ್ರದೇಶಗಳಲ್ಲಿ ಬೆಳೆಗಳ ದಂಟು, ರವದಿ, ಹುಲ್ಲು ಮೊದಲಾದವು ದನಕರುಗಳಿಗೆ ಮೇವಾಗಿ ಬಳಕೆಯಾಗುತ್ತಿವೆ. ಆದ್ದರಿಂದ ಇವುಗಳನ್ನು ಭೂ ಆಚ್ಛಾದನೆಗೆಂದು ಬಳಸುವುದು ಸಾಧ್ಯವಾಗದ ಮಾತು. ಆದರೆ ಯಂತ್ರೋಪಕರಣಗಳ ಸಹಾಯದಿಂದಲೇ ಬೇಸಾಯವನ್ನು ಮಾಡುವ ಪ್ರದೇಶಗಳಲ್ಲಿ, ಮೇಲೆ ಸೂಚಿಸಿದ ಸಾವಯವ ವಸ್ತುಗಳನ್ನು ಭೂ ಆಚ್ಛಾದನೆಗೆಂದು ಉಪಯೋಗಿಸಬಹುದು.

ii) ಗಾಳಿಗೆ ಅಡ್ಡವಾಗಿ ಬೇಸಾಯ ಕ್ರಿಯೆಗಳು: ಬೆಳೆಯ ಕೊಯ್ಲಾದ ನಂತರ ಭೂಮಿಯನ್ನು ಗಾಳಿ ಬೀಸುವ ದಿಕ್ಕಿಗೆ ಅಡ್ಡಲಾಗಿ (ಲಂಬವಾಗಿ) ಉಳುಮೆ ಮಾಡಿ ಹೆಂಟೆಗಳನ್ನು ಹಾಗೆಯೇ ಉಳಿಸಿದರೆ, ಹೆಂಟೆಗಳಲ್ಲಿ ಮಣ್ಣಿನ ಕಣಗಳನ್ನು ಸುಲಭವಾಗಿ ಬೇರ್ಪಡಿಸಲು ಗಾಳಿಗೆ ಸಾಧ್ಯವಾಗದಿರುವುದರಿಂದ ಭೂ ಸವಕಳಿಯ ಪ್ರಮಾಣವು ಕಡಮೆಯಾಗುತ್ತದೆ.

iii) ಗಾಳಿಯನ್ನು ತಡೆಯುವ ಪಟ್ಟಿ ಬೆಳೆ ಪದ್ಧತಿಗಳು: ಗಾಳಿಯು ಬೀಸುವ ದಿಕ್ಕಿಗೆ ಅಡ್ಡವಾಗಿ ಬೆಳೆಯ ಹಲವು ಸಾಲುಗಳನ್ನು ಬಿತ್ತಿ ಮುಂದಿನ ಕೆಲವು ಸಾಲುಗಳನ್ನು ಗಾಳಿಯಿಂದಾಗುವ ಸವಕಳಿಯನ್ನು ತಡೆಯುವ ಸಾಮರ್ಥ್ಯವುಳ್ಳ ಬೆಳೆಗಳನ್ನು ಬಿತ್ತಬೇಕು. (ಈ ಬೆಳೆಗಳ ಬದಲು ಸಾವಯವ ವಸ್ತುಗಳ ಆಚ್ಛಾದನೆಯನ್ನು ಕೈಗೊಳ್ಳಬಹುದು). ಉದಾಹರಣೆಗೆ, ಹೆಸರುಕಾಳಿನ ಬೆಳೆಯ ಹಲವು ಸಾಲುಗಳನ್ನು ಬಿತ್ತಿ, ನಂತರ ಹುಲ್ಲು ಮತ್ತು ಔಡಲದ (ಹರಳು) ಕೆಲವು ಸಾಲುಗಳನ್ನು ಬೆಳೆದರೆ ಗಾಳಿಯಿಂದುಂಟಾಗುವ ಭೂಸವಕಳಿಯನ್ನು ತಡೆಯಬಹುದೆಂದು ಜೋಧಪುರದಲ್ಲಿ ನಡೆಸಿದ ಸಂಶೋಧನೆಗಳಿಂದ ತಿಳಿದುಬಂದಿದೆ.

iv) ಗಾಳಿಯನ್ನು ತಡೆಯುವ ಮರಗಳು: ಗಾಳಿಯು ಬೀಸುವ ದಿಕ್ಕಿಗೆ ಅಡ್ಡವಾಗಿ ಬೇಸಾಯವನ್ನು ಮಾಡುವ ಭೂ ಪ್ರದೇಶದ ಅಂಚಿನಲ್ಲಿ ಒಂದು ಅಥವಾ ಹೆಚ್ಚು ಸಾಲುಗಳಲ್ಲಿ ಗಿಡಮರಗಳನ್ನು ಬೆಳೆಸುವುದರಿಂದ ಗಾಳಿಯ ವೇಗವನ್ನು ಕಡಿಮೆ ಮಾಡಬಹುದು. ಅದಕ್ಕಾಗಿ ಆಯಾ ಪ್ರದೇಶಕ್ಕೆ ಸೂಕ್ತವೆನಿಸಿದ ಮರಗಳನ್ನೇ ಬಳಸಬಹುದು.