ಭೂ ಸವಕಳಿಯು ವಿಶ್ವದೆಲ್ಲೆಡೆ ನಡೆದು ಬಂದ ಮತ್ತು ನಡೆಯುತ್ತಿರುವ ಒಂದು ನೈಸರ್ಗಿಕ ಕ್ರಿಯೆ. ಪರ್ವತ, ಗುಡ್ಡಗಾಡು ಮತ್ತು ಇತರ ಎತ್ತರವಾದ ಪ್ರದೇಶಗಳ ಮೇಲೆ ಬೀಳುವ ಮಳೆಯ ನೀರು, ತಗ್ಗಿನ ಪ್ರದೇಶದತ್ತ ಹರಿದು ಬಂದು, ತನ್ನ ಶಕ್ತಿಗನುಸಾರವಾಗಿ ವಿವಿಧ ಆಕಾರಗಳ ಮಣ್ಣಿನ ಕಣಗಳನ್ನು ಎಳೆದೊಯ್ಯುತ್ತದೆ. ಇದು ನೈಸಗಿಕ ಸವಕಳಿಯ ಒಂದು ರೂಪ. ನೀರಿನ ವೇಗವು ಕಡಿಮೆಯಾದಂತೆ, ಅದರಲ್ಲಿಯ ದೊಡ್ಡ ಆಕಾರದ ಕಣಗಳು ಭೂಮಿಯ ಮೇಲೆ ಉಳಿಯುತ್ತವೆ. ಜಿನುಗು ಕಣಗಳು ನೀರಿನೊಡನೆ ಸಾಗುತ್ತಾ ಕೆರೆ ಅಥವಾ ಸರೋವರಗಳನ್ನು ಸೇರಬಹುದು. ಇಲ್ಲವೇ ನದಿಗಳ ಮೂಲಕ ಮುಂದೆ ಸಾಗಿ ಸಮುದ್ರಕ್ಕೆ ಸೇರಿ ಅಲ್ಲಿ ಸಂಗ್ರಹವಾಗಬಹುದು. ಈ ನೈಸರ್ಗಿಕ ಸವಕಳಿಯಲ್ಲಿ ಮನುಷ್ಯನ ಕೈವಾಡವಿಲ್ಲವೆನ್ನಬಹುದು. ಅದಾಗ್ಯೂ ಸಂಗ್ರಹವಾಗಬಹುದು. ಈ ನೈಸರ್ಗಿಕ ಸವಕಳಿಯಲ್ಲಿ ಮನುಷ್ಯನ ಕೈವಾಡವಿಲ್ಲವೆನ್ನಬಹುದು. ಅದಾಗ್ಯೂ ಗಿಡಮರಗಳನ್ನು ನೆಟ್ಟು, ಮತ್ತಿತರೆ ಕೆಲವು ಕ್ರಮಗಳನ್ನು ಕೈಗೊಂಡು ಈ ಸವಕಳಿಯ ಪ್ರಮಾಣವನ್ನು ಕಡಿಮೆ ಮಾಡಲು ಮನುಷ್ಯನಿಗೆ ಸಾಧ್ಯವಿದೆ.

ಕಾಡನ್ನು ಕಡಿದು, ಗಿಡಗಂಟಿಗಳನ್ನು ತೆಗೆದು, ಸ್ವಚ್ಛ ಮಾಡಿ ಮಾನವನು ಬೇಸಾಯವನ್ನು ಆರಂಭಿಸಿದಾಗಿನಿಂದ ಭೂ ಸವಕಳಿಯು ಬೇಸಾಯದ ಭೂಮಿಯನ್ನು ಪ್ರವೇಶಿಸಿತಲ್ಲದೇ ಭೂ ಸವಕಳಿಯ ವೇಗವು ಅಧಿಕಗೊಳ್ಳತೊಡಗಿತು. ತೀವ್ರತರ ಭೂಸವಕಳಿಯಿಂದ ನೀರು ಹರಿದು ಹೋಗಿ ಬೆಳೆಗೆ ಸಿಗದಂತಾಗುತ್ತದೆಯಲ್ಲದೇ ಅದರೊಡನೆ ಕೊಚ್ಚಿ ಹೋದ ಫಲವತ್ತಾದ ಮಣ್ಣು ಮತ್ತು ಅದರಲ್ಲಿರುವ ಸಸ್ಯ ಪೋಷಕಗಳು ಇಲ್ಲದಂತಾಗುತ್ತವೆ. ಭೂ ಸವಕಳಿಯು ಇದೇ ರೀತಿ ಮುಂದುವರಿಯಿತೆಂದರೆ ಬೇಸಾಯಕ್ಕೆ ಮಣ್ಣೇ ಇಲ್ಲದಂತಾಗುಬಹುದು. ಆದ್ದರಿಂದ ಕೃಷಿಯು ಸ್ಥಿರಗೊಂಡು, ಮನುಷ್ಯನ ಹಲವು ಚಟುವಟಿಕೆಗಳು ಸೂಕ್ತ ರೀತಿಯಿಂದ ಮುಂದುವರೆಯಬೇಕಾದರೆ ಭೂಸವಕಳಿಯನ್ನು ನಿಯಂತ್ರಣದಲ್ಲಿಡಬೇಕಾದದು ಅನಿವಾರ್ಯ.

ನೀರಿನಂತೆ ಗಾಳಿಯೂ ಮಣ್ಣಿನ ಸವಕಳಿಯನ್ನುಂಟು ಮಾಡುತ್ತದೆ. ನೀರು ಮತ್ತು ಗಾಳಿಯಿಂದ ಉಂಟಾಗುವ ಭೂ ಸವಕಳಿ ಮತ್ತು ಸವಕಳಿಗೊಂಡ ಭೂಮಿಯ ಸುಧಾರಣೆಗೆ ಸಂಬಂಧಿಸಿದ ಪ್ರಮುಖ ವಿಷಯಗಳು ಈ ಅಧ್ಯಾಯದಲ್ಲಿವೆ.

ನೀರಿನಿಂದುಂಟಾಗುವ ಮಣ್ಣಿನ ಸವಕಳಿ

ಹರಿದು ಹೋಗುವ ನೀರು ಮತ್ತು ಅದರೊಡನೆ ಕೊಚ್ಚಿಕೊಂಡು ಹೋಗುವ ಮಣ್ಣುಗಳ ಪ್ರಮಾಣವನ್ನು ಕಡಿಮೆ ಮಾಡಲು ಕೈಗೊಳ್ಳಬೇಕಾದ ಹಲವು ಕ್ರಮಗಳ ವಿವರಗಳನ್ನು ಅಧ್ಯಾಯ ೨ರಲ್ಲಿ ವಿವರಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಮುಂದಿನಂತಿವೆ.

ನೀರಿನ ಸವಕಳಿಯಾಗುವ ಮಣ್ಣಿನ ಪ್ರಮಾಣ: ನೈಸರ್ಗಿಕವಾಗಿ ಸವಕಳಿಯಾಗುವ ಮಣ್ಣಿನ ಪ್ರಮಾಣವು ತುಲನಾತ್ಮಕವಾಗಿ ಕಡಮೆ. ದೀರ್ಘಾವಧಿಯ ಸರಾಸರಿಯನ್ನು ಪರಿಗಣಿಸಿದಾಗ, ಪ್ರತಿ ಹೆಕ್ಟೇರು ಪ್ರದೇಶದಿಂದ ಪ್ರತಿ ವರ್ಷ ಅರ್ಧ ಟನ್ನಿನಷ್ಟು ಮಣ್ಣು ಕೊಚ್ಚಿಹೋಗುತ್ತದೆಂಬ ಅಂದಾಜಿದೆ. ಪ್ರತಿವರ್ಷ ಹೊಸದಾಗಿ ನಿರ್ಮಾಣಗೊಳ್ಳುವ ಮಣ್ಣಿನ ಪ್ರಮಾಣವು ಈ ನಷ್ಟಕ್ಕೆ ಸರಿದೂಗುವುದರಿಂದ ನೈಸರ್ಗಿಕವಾಗಿ ನಡೆಯುವ ಮಣ್ಣಿನ ಸವಕಳಿಯಿಂದ ಹೇಳಿಕೊಳ್ಳುವಂತಹ ಅಪಾಯವಿಲ್ಲವೆನ್ನಬಹುದು.

ಆದರೆ ಮಾನವನು ಭೂಮಿಯನ್ನು ಬೇಸಾಯಕ್ಕೆಂದು ಉಪಯೋಗಿಸಲು ಆರಂಭಿಸಿದೊಡನೆ, ನೈಸರ್ಗಿಕ ಸವಕಳಿಗಿಂತ ಹಲವು ಪಟ್ಟು ತೀವ್ರಗತಿಯಿಂದ ಮಣ್ಣು ಕೊಚ್ಚಿ ಹೋಗಲು ಪ್ರಾರಂಭವಾಗುತ್ತದೆ. ಪ್ರತಿ ವರ್ಷ ಪ್ರತಿ ಹೆಕ್ಟೇರಿಗೆ ೧೨ ಟನ್ ಮೀರದಷ್ಟು ಮಣ್ಣು ಕೊಚ್ಚಿ ಹೋದರೂ ಅಂತಹ ಅಪಾಯವೇನಿಲ್ಲವೆಂಬುದು ಹಲವು ವರ್ಷಗಳ ಅನುಭವವಿರುವ ಕೆಲವರ ಅಭಿಮತ. ಈ ಮಿತಿಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಬೇಸಾಯ ಮಾಡುವ ಭೂಮಿಯಿಂದ ಹೆಚ್ಚು ಮಣ್ಣು ಕೊಚ್ಚಿಹೋಗದಂತೆ ನೋಡಿಕೊಳ್ಳಬೇಕು.

ಕೊಚ್ಚಿಹೋಗುವ ಮಣ್ಣಿನ ಪ್ರಮಾಣವನ್ನು ಅಂದಾಜು ಮಾಡುವ ವಿಧಾನ:

ಹಲವು ದಶಕಗಳ ಸಂಶೋಧನೆ ಮತ್ತು ಕೆಲವು ಶತಮಾನಗಳ ರೈತರ ಅನುಭವಗಳನ್ನಾಧರಿಸಿ ಸವಕಳಿಗೊಳ್ಳುವ ಮಣ್ಣಿನ ಪ್ರಮಾಣವನ್ನು ಅಂದಾಜು ಮಾಡಬಲ್ಲ ಹಾಗೂ ಎಲ್ಲ ಪರಿಸ್ಥಿತಿಗಳಿಗೆ ಅನ್ವಯವಾಗುವಂತಹ ಸಮೀಕರಣವೊಂದನ್ನು (Universal Soil Loss Equation) ರಚಿಸಲಾಗಿದೆ. ಈ ಸಮೀಕರಣದಲ್ಲಿ ನೀರು ಸಂಗತಿಗಳನ್ನು ಪರಿಗಣಿಸಲಾಗಿದೆ. ಸಮೀಕರಣವು ಕೆಳಗಿನಂತಿವೆ.

ಕೊಚ್ಚಿ ಹೋಗುವ ಮಣ್ಣಿನ ಪ್ರಮಾಣ (ಪ್ರತಿ ವರ್ಷ ಪ್ರತಿ ಹೆಕ್ಟೇರಿಗೆ ಟನ್ನುಗಳಲ್ಲಿ)

=

ಮಳೆ ಮತ್ತು ಹರಿಯುವ ನೀರು x ಮಣ್ಣಿನ ಸವಕಳಿಗೊಳ್ಳುವ ಗುಣಧರ್ಮ x ಇಳುಕಲಿನ ಉದ್ದ x ಇಳಿಜಾರಿನ ಪ್ರಮಾಣ x ಇರುವ ಬೆಳೆ ಮತ್ತು ಭೂ ಅಚ್ಛಾದನೆ x ಅನುಸರಿಸುತ್ತಿರುವ ಭೂ ಸಂರಕ್ಷಣೆಯ ಕ್ರಮಗಳು

ಮೇಲಿನ ಸಮೀಕರಣದ ಬಲಭಾಗದಲ್ಲಿರುವ ಆರು ಸಂಗತಿಗಳ ಸಂಕ್ಷಿಪ್ತ ವಿವರಣೆಗಳು ಕೆಳಗಿನಂತಿವೆ.

i) ಮಳೆ ಮತ್ತು ಹರಿದು ಹೋಗುವ ಮಳೆ ನೀರಿನ ಗುಣಕ ಪದ

 • ವಾರ್ಷಿಕ ಮಳೆಯ ಪ್ರಮಾಣ ಮತ್ತು ಪ್ರತಿ ಮಳೆಯ ರಭಸ ಇವೆರಡು ಸಂಗತಿಗಳಿಗೂ ಹಾಗೂ ಮಣ್ಣಿನ ಸವಕಳಿಯ ಪ್ರಮಾಣಕ್ಕೂ ನೇರ ಸಂಬಂಧವಿದೆ. ಇಲ್ಲಿ ಮಳೆಯ ರಭಸದ ಪ್ರಭಾವವೇ ಅಧಿಕವೆನ್ನಬಹುದು.
 • ವಾರ್ಷಿಕ ಮಳೆಯು ಕಡಮೆ ಇದ್ದಾಗಲೂ ಮಳೆಯು ಅತಿ ರಭಸದಿಂದ ಬಂದರೆ ಅಧಿಕ ಪ್ರಮಾಣದಲ್ಲಿ ಮಣ್ಣು ಕೊಚ್ಚಿ ಹೋಗುತ್ತದೆ. ಅಷ್ಟೇ ಪ್ರಮಾಣದ ಮಳೆ ಅಥವಾ ಅದಕ್ಕಿಂತಲೂ ಹೆಚ್ಚು ಮಳೆ ನಿಧಾನವಾಗಿ ಬಿದ್ದರೆ ಮಣ್ಣಿನ ಸವಕಳಿಯು ಕಡಮೆಯಿರುತ್ತದೆ.
 • ಭೂಮಿಯಲ್ಲಿ ಬೆಳೆಯು ಬೆಳೆದು ನಿಂತಿರುವಾಗ ಬಿದ್ದ ಮಳೆಗಿಂತಲೂ ಭೂಮಿಯು ಬರಿದಾಗಿದ್ದಾಗ ಬಿದ್ದ ಮಳೆಯು ಅಧಿಕ ಪ್ರಮಾಣದಲ್ಲಿ ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತದೆ.

ವಾರ್ಷಿಕ ಮಳೆಗಿರುವ ಸವಕಳಿಯ ಶಕ್ತಿಯನ್ನು ಅಂದಾಜು ಮಾಡಲು ಕೆಳಗಿನ ವಿಧಾನವನ್ನು ಅನುಸರಿಬೇಕು.

 • ಪ್ರತಿ ಮಳೆಯ ಒಟ್ಟು ಸಾಮರ್ಥ್ಯ ಮತ್ತು ಅತಿ ರಭಸದಿಂದ ೩೦ ನಿಮಿಷಗಳವರೆಗೆ ಬಿದ್ದ ಒಟ್ಟು ಮಳೆ ಪರಿಗಣಿಸಿ ಒಂದು ಮೊತ್ತವನ್ನು ಕಂಡು ಹಿಡಿಯಬೇಕು.
 • ಇದೇ ರೀತಿ ವರ್ಷದಲ್ಲಿ ಬರುವ ಪ್ರತಿ ಮಳೆಗೆ ಸಂಬಂಧಿಸಿದ ಇಂತಹ ಮೊತ್ತದ ಲೆಕ್ಕಚಾರವನ್ನು ಮಾಡಬೇಕು.
 • ವರ್ಷದಲ್ಲಿ ಬಂದ ಎಲ್ಲ ಮಳೆಗಳ ಮೊತ್ತವನ್ನು ಸಂಕಲನ ಮಾಡಬೇಕು. ಕೆಲವು ವರ್ಷಗಳ ನಿರೀಕ್ಷಣೆಯಿಂದ ದೊರೆತ ಸರಾಸರಿ ಅಂಕೆಯನ್ನು ಸಮೀಕರಣದಲ್ಲಿ ಬಳಸಬೇಕು.

ಅಮೆರಿಕೆಯ ಸಂಯುಕ್ತ ಸಂಸ್ಥಾನಗಳಲ್ಲಿ ಮೇಲಿನಂತೆ ಲೆಕ್ಕಾಚಾರ ಮಾಡಿದ ಅಂಕೆಯು ಪ್ರದೇಶಕ್ಕನುಗುಣವಾಗಿ ೨೦-೫೫೦ರವರೆಗೆ ಇದೆಯೆಂದು ಕಂಡು ಬಂದಿದೆ.

ii) ಮಣ್ಣಿನ ಸವಕಳಿಗೊಳ್ಳುವ ಸ್ವಭಾವದ ಗುಣಕ ಪದ

 • ಯಾವುದೇ ಬೆಳೆಯನ್ನು ಬೆಳೆಯದ, ಶೇಕಡಾ ೯ರಷ್ಟು ಇಳಿಜಾರಿರುವ, ೨೨ ಮೀಟರು ಉದ್ದಳತೆಯ ಭೂಮಿಯಿಂದ ಕೊಚ್ಚಿ ಹೋಗುವ ಮಣ್ಣಿನ ಪ್ರಮಾಣವನ್ನು ಈ ಗುಣಕ ಪದವು ಸೂಚಿಸುತ್ತದೆ.
 • ಮಣ್ಣನ್ನು ಪ್ರವೇಶಿಸುವ ನೀರಿನ ವೇಗ ಮತ್ತು ಮಣ್ಣಿನ ಕಣಗಳ ಸ್ಥಿರತೆ ಇವೆರಡು ಗುಣಗಳು ಮಣ್ಣಿನ ಸವಕಳಿಯ ಮೇಲೆ ಪ್ರಭಾವವನ್ನು ಬೀರುತ್ತದೆ.
 • ಮಣ್ಣನ್ನು ಪ್ರವೇಶಿಸುವ ನೀರಿನ ವೇಗವು ಮಣ್ಣಿನ ಕಣಗಳ ಸ್ಥಿರತೆಯ ಮೇಲೆ ಅವಲಂಬಿಸಿರುವುದಲ್ಲದೇ, ಮಣ್ಣಿನ ಕಣಗಳ ಗಾತ್ರ, ಮಣ್ಣಿನಲ್ಲಿರುವ ಸಾವಯವ ಪದಾರ್ಥಗಳ ಪ್ರಮಾಣ, ಸೂಕ್ಷ್ಮ ಎರೆಕಣಗಳ ಪ್ರಕಾರ ಮತ್ತು ಎರೆಯ ಪ್ರಮಾಣ, ಮಣ್ಣಿನ ಆಳ, ಮೇಲಿನ ಸ್ತರವು ಹೆಪ್ಪುಗಟ್ಟುವ ಮಣ್ಣಿನ ಸ್ವಭಾವ ಮತ್ತು ಮಣ್ಣಿನ ಆಳದಲ್ಲಿರುವ ಗಟ್ಟಿ ಸ್ತರಗಳ ಮೇಲೂ ಅವಲಂಬಿಸಿದೆ.

ಸವಕಳಿಯ ಈ ಗುಣಕ ಪದವು ೦ (ಸೊನ್ನೆ)ಯಿಂದ ಆರಂಭವಾಗಿ ೦.೬ರವರೆಗೆ ಇರಬಹುದು. ನೀರು ಸುಲಭವಾಗಿ ಪ್ರವೇಶಿಸಬಲ್ಲ ಮರಳು ಮಣ್ಣಿನಲ್ಲಿ ಮತ್ತು ಕಬ್ಬಿಣ ಹಾಗೂ ಅಲ್ಯೂಮಿನಿಯಂ ಆಕ್ಸೈಡ್‌ಗಳ ಪ್ರಾಬಲ್ಯವಿರುವ ಕೆಂಪು ಮಣ್ಣಿನಲ್ಲಿ ಈ ಗುಣಕ ಪದವು ೦.೧ ಕ್ಕಿಂತ ಕಡಿಮೆ ಇರುತ್ತದೆ. ಆದರೆ ಸುಲಭವಾಗಿ ಸವಕಳಿಯನ್ನು ಹೊಂದುವ ಜಿಗುಟು ಎರೆ ಮಣ್ಣಿನಲ್ಲಿ ಈ ಅಂಕೆಯು ೦.೩ ಅಥವಾ ಅದಕ್ಕಿಂತ ಅಧಿಕವಾಗಿರಬಹುದು.

iii) ಇಳುಕಲಿನ ಉದ್ದ ಮತ್ತು ಇಳಿಜಾರಿನ ಪ್ರಮಾಣದ ಗುಣಕ ಪದ: ಭೂಮಿಯ ಇಳುಕಲಿನ ಶೇಕಡಾ ಪ್ರಮಾಣವು ಅಧಿಕಗೊಂಡರೆ ಕೊಚ್ಚಿಹೋಗುವ ಮಣ್ಣಿನ ಪ್ರಮಾಣವು ಹೆಚ್ಚುತ್ತದೆ. ಅದರಂತೆಯೇ ಇಳಿಜಾರಿನ ಉದ್ದಳತೆಯು ಹೆಚ್ಚುತ್ತಾ ಹೋದಂತೆ ಸವಕಳಿಯ ಪ್ರಮಾಣವೂ ಅಧಿಕಗೊಳ್ಳುತ್ತದೆ. ಇದರ ಗುಣಕ ಪದವನ್ನು ಕೆಳಗಿನ ಸಮೀಕರಣದಿಂದ ಕಂಡು ಹಿಡಿಯಬಹುದು.

ಇಳುಕಲಿನ ಉದ್ದ ಮತ್ತು ಇಳಿಜಾರಿನ ಪ್ರಮಾಣದ ಗುಣಕ ಪದ

=

ಸಂಬಂಧಿಸಿದ ಕ್ಷೇತ್ರದಿಂದ ಕೊಚ್ಚಿ ಹೋಗುವ ಮಣ್ಣಿನ ಪ್ರಮಾಣ

ಬೆಳೆಯು ಇರದ ಶೇಕಡಾ ೯ರಷ್ಟು ಇಳುಕಲಿರುವ ೨೨ ಮೀ. ಉದ್ದದ ಕ್ಷೇತ್ರದಿಂದ ಸವಕಳಿಯಾಗುವ ಮಣ್ಣಿನ ಪ್ರಮಾಣ

ಸಮೀಪಕರಣದ ಬಲ ಭಾಗದಲ್ಲಿರುವ ಸಂಗತಿಗಳನ್ನುಸಂಬಂಧಿಸಿದ ಪ್ರದೇಶದಲ್ಲಿ ಪ್ರಯೋಗವನ್ನು ನಡೆಸಿ ಕಂಡುಕೊಳ್ಳಬೇಕು.

iv) ಬೆಳೆ ಆಚ್ಛಾದನೆ ಮತ್ತು ಬೇಸಾಯ ಪದ್ಧತಿಗಳ ಗುಣಕ ಪದ:

ಬೆಳೆಯ ಸ್ವಭಾವ, ಬೆಳೆ ಪರಿವರ್ತನೆ, ಭೂಮಿಯ ಮೇಲಿರುವ ಅಚ್ಛಾದನೆ ಮತ್ತು ಅನುಸರಿಸುತ್ತಿರುವ ಬೇಸಾಯ ಪದ್ಧತಿಗಳು ಮಣ್ಣಿನ ಸವಕಳಿಯ ಮೇಲೆ ಪ್ರಭಾವವನ್ನು ಬೀರುತ್ತವೆ. ಉದಾಹರಣೆಗೆ, ದಟ್ಟವಾದ ಅಡವಿಯಲ್ಲಿ ಮಣ್ಣಿನ ಸವಕಳಿಯು ಕಡಮೆ. ಆದರೆ ಬೆಳೆಗಳನ್ನು ಬೆಳೆಯಲು ಆರಂಭಿಸಿದೊಡನೆ ಸವಕಳಿಯು ಹೆಚ್ಚುತ್ತದೆ. ಬೆಳೆಗಳ ಗುಣಧರ್ಮ ಮತ್ತು ಬೇಸಾಯ ಪದ್ಧತಿಯ ಮೇಲಿಂದಲೂ ಸವಕಳಿಯ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗುತ್ತದೆ. ಭೂಮಿಯ ಅಧಿಕ ಭಾಗವನ್ನು ಆವರಿಸಬಲ್ಲ ಅಥವಾ ಕಡಿಮೆ ಅಂತರದ ಸಾಲುಗಳಲ್ಲಿ ಬಿತ್ತಿದ ಬೆಳೆಗಳಲ್ಲಿ ಮಣ್ಣಿನ ಸವಕಳಿಯು ಕಡಮೆ. ಸಾಲುಗಳ ಅಂತರವು ಅಧಿಕವಿರುವ ಮತ್ತು ಮೇಲಿಂದ ಮೇಲೆ ಅಂತರ ಬೇಸಾಯವನ್ನು ಮಾಡಬೇಕಾಗುವ ಬೆಳೆಯಲ್ಲಿ ಹೆಚ್ಚು ಮಣ್ಣು ಕೊಚ್ಚಿ ಹೋಗುತ್ತದೆ. ಭೂ ಸವಕಳಿಗೆ ಆಸ್ಪದವನ್ನು ಮಾಡಿಕೊಡುವ ಗುಣಧರ್ಮದ ಮೇಲಿಂದ ಕೆಲವು ಬೆಳೆಗಳನ್ನು ಕೆಳಗೆ ತೋರಿಸಿದಂತೆ ಹೊಂದಿಸಬಹುದು.

ಭೂ ಸವಕಳಿಯು ಹೆಚ್ಚುತ್ತಾ ಸಾಗುತ್ತದೆ —–>

ಹುಲ್ಲುಗಳು, ಮೇವಿನ ಬೆಳೆಗಳು < ಸೇಂಗಾ < ಗೋಧಿ,            ಓಟ್ಸ್‌ < ಜೋಳ, ಮುಸುಕಿನ ಜೋಳ < ಬೆಳೆಯಿರುವ ಭೂಮಿ

ಸಸ್ಯದ ಬೆಳವಣಿಗೆಯ ಹಂತಕ್ಕೂ ಮಣ್ಣಿನ ಸವಕಳಿಗೂ ಸಂಬಂಧವಿದೆ. ಸಸಿಗಳು ಸಣ್ಣ ಅಥವಾ ಎಳೆಯವಿರುವಾಗ ಸವಕಳಿಯು ಅಧಿಕ. ಸಸಿಗಳು ಬೆಳೆದು ಭೂಮಿಯನ್ನು ಆವರಿಸಿಕೊಂಡರೆ ಭೂ ಸವಕಳಿಯು ತಗ್ಗುತ್ತದೆ. ಇದರಂತೆಯೇ, ಸವಕಳಿಯನ್ನು ತಡೆಯುವ ಸಾಮರ್ಥ್ಯವಿದ್ದ ಬೆಳೆಗಳನ್ನು ಅಂತರ ಬೆಳೆಗಳನ್ನಾಗಿ ಬೆಳೆದರೆ ಅಥವಾ ಅವನ್ನು ಬೆಳೆ ಪರಿವರ್ತನೆಯಲ್ಲಿ ಅಳವಡಿಸಿಕೊಂಡರೆ ಮಣ್ಣಿನ ಸವಕಳಿಯು ಕಡಮೆಯಗುತ್ತದೆ.

ಬೆಳೆಗಳ ಕೊಯ್ಲಾದ ನಂತರ ಎಲೆ ಹಾಗೂ ಮತ್ತಿತರ ಕಸ ಕಡ್ಡಿಗಳನ್ನು ಭೂಮಿಯ ಮೇಲೆ ಇರಲು ಬಿಟ್ಟರೆ ಮಣ್ಣಿನ ಸವಕಳಿಯು ಕಡಿಮೆಯಾಗುತ್ತದೆ. ಮೇಲಿಂದ ಮೇಲೆ ಉಳುಮೆ ಮಾಡಿದರೆ ಇಲ್ಲವೇ ಬೇಸಾಯದ ಇತರ ಉಪಕರಣಗಳನ್ನು ಉಪಯೋಗಿಸಿದರೆ ಭೂ ಸವಕಳಿಯು ಹೆಚ್ಚುತ್ತದೆಂಬುದನ್ನು ಗಮನದಲ್ಲಿಡಬೇಕು.

ಬೆಳೆ ಆಚ್ಛಾದನೆ ಮತ್ತು ಬೇಸಾಯ ಪದ್ಧತಿಗಳಿಗೆ ಸಂಬಂಧಿಸಿದ ಗುಣಕ ಪದವನ್ನು ಕೆಳಗಿನ ಸಮೀಕರಣದಿಂದ ಕಂಡುಕೊಳ್ಳಬಹುದು.

ಬೆಳೆ ಅಚ್ಛಾದನೆ ಮತ್ತು ಬೇಸಾಯ ಪದ್ಧತಿಗಳ ಗುಣಕ ಪದ

=

ಸಂಬಂಧಿಸಿದ ಬೆಳೆ ಅಥವಾ ಬೆಳೆಗಳು ಮತ್ತು ಅನುಸರಿಸಿದ ಬೇಸಾಯ ಪದ್ಧತಿಯಿಂದ ಆಗುವ ಭೂ ಸವಕಳಿಯ ಪ್ರಮಾಣ

ಕಳೆ ಕಸಗಳಿಲ್ಲದಂತೆ ಭೂಮಿಯನ್ನು ಸ್ವಚ್ಛವಾಗಿಟ್ಟು ಯಾವುದೇ ಬೆಳೆಯನ್ನು ಬೆಳೆಯದೇ ಇರುವಾಗ ಆಗುವ ಭೂ ಸವಕಳಿಯ ಪ್ರಮಾಣ

ಅನುಭವಿ ವಿಜ್ಞಾನಿಗಳು ಮೇಲಿನ ಗಣಕ ಪದವನ್ನು ಸುಲಭವಾಗಿ ನಿರ್ಧರಿಸಬಲ್ಲರು.

v) ಅನುಸರಿಸುತ್ತಿರುವ ಭೂ ಸಂರಕ್ಷಣಾ ಕ್ರಮಗಳು: ಹರಿದು ಹೋಗುತ್ತಿರುವ ನೀರಿನ ವೇಗವನ್ನು ತಗ್ಗಿಸಿ ನೀರಿನೊಡನೆ ಕೊಚ್ಚಿ ಹೋಗುವ ಮಣ್ಣಿನ ಪ್ರಮಾಣವನ್ನು ಕಡಮೆ ಮಾಡುವ ವಿವಿಧ ವಿಧಾನಗಳ ವಿವರಗಳನ್ನು ಅಧ್ಯಾಯ ೨ರಲ್ಲಿ ವಿವರಿಸಿದೆ. ಈ ಕ್ರಮಗಳನ್ನು ಎಷ್ಟರ ಮಟ್ಟಿಗೆ ಅನುಸರಿಸಲಾಗಿದೆ ಎಂಬುದರ ಮೇಲೆ ಈ ಗುಣಕಪದವು ಅವಲಂಭಿಸಿದೆ. ಭೂ ಸಂರಕ್ಷಣೆಯ ಯಾವುದೇ ಕ್ರಮಗಳನ್ನು ಕೈಗೊಳ್ಳದಿದ್ದರೆ ಗುಣಕ ಪದವು ೧ರ ಸಮೀಪದಲ್ಲಿರುತ್ತದೆ. ಸೂಕ್ತ ಕ್ರಮಗಳನ್ನು ಅನುಸರಿಸಿದರೆ ಗುಣಕ ಪದವು ಗಣನೀಯವಾಗಿ ತಗ್ಗುತ್ತದೆ. ಯಾವುದೇ ಪರಿಸ್ಥಿತಿ ಅಥವಾ ಸಂದರ್ಭದಲ್ಲಿ ಈ ಗುಣಕ ಪದವು ಎಷ್ಟೆಂಬುದನ್ನು ವಿಜ್ಞಾನಿಗಳು ಅನುಭವದಿಂದ ಸುಲಭವಾಗಿ ಅಂದಾಜು ಮಾಡಲ್ಲರು.

ಗುಣಕ ಪದಗಳನ್ನು ನಿರ್ಧರಿಸುವ ಸಂಗತಿಗಳ ಮೇಲೆ ಮಾನವನ ಹತೋಟಿ

ಮಳೆಯ ಮೇಲೆ ಮಾನವನ ಹತೋಟಿಯು ಇಲ್ಲವೆಂದರೂ ತಪ್ಪಲ್ಲ. ಭೂಮಿಯ ಇಳಿಜಾರಿನ ಪ್ರಮಾಣ ಮತ್ತು ಉದ್ದ ಇವುಗಳನ್ನು ಕೆಲಮಟ್ಟಿಗೆ ಬದಲಿಸಿ ಮಣ್ಣಿನ ಸವಕಳಿಯನ್ನು ಅಲ್ಪ ಸ್ವಲ್ಪ ಬದಲಾವಣೆಯನ್ನು ಮಾಡಿ ಭೂ ಸವಕಳಿಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬಹುದು. ಆದರೆ ಮೇಲೆ (iv) ಮತ್ತು (v)ರಲ್ಲಿ ವಿವರಿಸಿದ ಬೆಳೆ ಅಚ್ಛಾದನೆ ಮತ್ತು ಬೇಸಾಯ ಪದ್ಧತಿಗಳು ಹಾಗೂ ಭೂ ಸಂರಕ್ಷಣೆಯ ಕ್ರಮಗಳ ಸಹಾಯದಿಂದ, ಮಣ್ಣಿನ ಸವಕಳಿಯನ್ನು ಗಣನೀಯವಾಗಿ ಕಡಿಮೆ ಮಾಡಿ ಪ್ರತಿ ಹೆಕ್ಟೇರು ಪ್ರದೇಶದಿಂದ, ಪ್ರತಿ ವರ್ಷ ಕೊಚ್ಚಿ ಹೋಗುವ ಮಣ್ಣಿನ ಪ್ರಮಾಣವನ್ನು ನಿರ್ಧರಿತ ಮಿತಿಯೊಳಗೆ ಇರುವಂತೆ ನೋಡಿಕೊಳ್ಳಲು ಸಾಧ್ಯವಿದೆ.

ಪ್ರತಿ ವರ್ಷ ನಷ್ಟವಾಗುವ ಮಣ್ಣಿನ ಪ್ರಮಾಣವನ್ನು ಅಂದಾಜು ಮಾಡುವ ವಿಧಾನಗಳು

ಪ್ರತಿ ವರ್ಷ ಪ್ರತಿ ಹೆಕ್ಟೇರು ಪ್ರದೇಶದಿಂದ ಸವಕಳಿಗೊಳ್ಳುವ ಮಣ್ಣಿನ ಪ್ರಮಾಣವನ್ನು ಕೆಳಗಿನ ಉದಾಹರಣೆಯಲ್ಲಿ ತೋರಿಸಿದಂತೆ ಅಂದಾಜು ಮಾಡಬಹುದು.

ಸಂಗತಿಗಳು

ಗುಣಕ ಪದ

i) ಮಳೆ ಮತ್ತು ಹರಿಯುವ ನೀರು ೩೦೦
ii) ಸವಕಳಿಗೊಳ್ಳುವ ಮಣ್ಣಿನ ಗುಣ ೦.೩
iii) ಇಳುಕಲು ಉದ್ದ ಮತ್ತು ಪ್ರಮಾಣ ೦.೫
iv) ಬೆಳೆ ಆಚ್ಛಾದನೆ ಮತ್ತು ಬೇಸಾಯ ಪದ್ಧತಿ ೧.೦ ಬೆಳೆಯಿಲ್ಲ
v) ಭೂ ಸಂರಕ್ಷಣಾ ಕ್ರಮಗಳು ೧.೦ ಕ್ರಮಗಳನ್ನು ಕೈಗೊಂಡಿಲ್ಲ

ಈ ವಿವರಗಳ ಆಧಾರದಿಂದ ಸವಕಳಿ ಹೊಂದುವ ಮಣ್ಣಿನ ಅಂದಾಜನ್ನು ಕೆಳಗಿನಂತೆ ಮಾಡಬೇಕು.

ಪ್ರತಿ ಹೆಕ್ಟೇರಿನಿಂದ ಪ್ರತಿ ವರ್ಷ ಸವಕಳಿಗೊಳ್ಳುವ ಮಣ್ಣಿನ ಪ್ರಮಾಣ (ಟನ್ನುಗಳಲ್ಲಿ) = ೩೦೦ x ೦.೩ x ೦.೫ x ೧ x ೧
= ೪೫

ಈಗಾಗಲೇ ಸೂಚಿಸಿದಂತೆ ಪ್ರತಿ ಹೆಕ್ಟೇರು ಪ್ರದೇಶದಿಂದ ಪ್ರತಿ ವರ್ಷ ೧೨ ಟನ್ನುಗಳಿಗಿಂತ ಹೆಚ್ಚು ಮಣ್ಣು ನಷ್ಟವಾಗದಂತೆ ನೋಡಿಕೊಳ್ಳಬೇಕು. ಆದರೆ, ಮೇಲಿನ ಉದಾಹರಣೆಯಲ್ಲಿ ಮಿತಿಗಿಂತ ೩.೭೫ ಪಟ್ಟು ಹೆಚ್ಚು ಮಣ್ಣು ಕೊಚ್ಚಿ ಹೋಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ರೈತನು ಕೆಳಗಿನ ವಿಧಾನವನ್ನು ಅನುಸರಿಸಬಹುದು.

 • ಸೂಕ್ತ ಬೆಳೆ ಮತ್ತು ಸರಿಯಾದ ಬೆಳೆ ಪದ್ಧತಿಯನ್ನು ಅನುಸರಿಸಬೇಕು. ಈ ರೀತಿ ಮಾಡಿ ಇದಕ್ಕೆ ಸಂಬಂಧಿಸಿದ ಗುಣಕ ಪದವನ್ನು ೧ ರಿಂದ ೦.೩ಕ್ಕೆ ಇಳಿಸಲಾಯಿತೆಂದು ಈ ಉದಾಹರಣೆಗೆ ಪರಿಗ್ರಹಿಸೋಣ.
 • ಸೂಕ್ತವಾದ ಭೂ ಸಂರಕ್ಷಣೆಯ ಕ್ರಮಗಳನ್ನು ಕೈಗೊಂಡು, ಇದರಿಂದ ಗುಣಕ ಪದವು ೧ರಿಂದ ೦.೩ಕ್ಕೆ ಇಳಿಯಿತೆಂದು ತಿಳಿಯೋಣ.

ಇವೆರಡು ರೀತಿಯ ಕ್ರಮಗಳನ್ನು ಅನುಸರಿಸಿದ್ದರಿಂದ, ಕೊಚ್ಚಿ ಹೋಗುವ ಮಣ್ಣಿನ ಪ್ರಮಾಣವನ್ನು ಅಂದಾಜು ಮಾಡಿ ನೋಡೋಣ:

ಪ್ರತಿ ಹೆಕ್ಟೇರಿನಿಂದ ಪ್ರತಿ ವರ್ಷ ಸವಕಳಿಗೊಳ್ಳುವ ಮಣ್ಣಿನ ಪ್ರಮಾಣ (ಟನ್ನುಗಳಲ್ಲಿ) = ೩೦೦ x ೦.೩ x ೦.೫ x ೦.೩ x ೦.೩ = ೪.೦೫

ಮೇಲಿನ ವಿಧಾನಗಳಿಂದ ಮಣ್ಣಿನ ನಷ್ಟವನ್ನು ೪೫ ಟನ್ನುಗಳಿಂದ ಕೇವಲ ೪.೦೫ ಟನ್ನುಗಳಿಗೆ ತಗ್ಗಿಸಲು ಸಾಧ್ಯವಾಯಿತು.

ನೀರಿನಿಂದ ಸವಕಳಿಗೊಂಡ ಭೂಮಿಯ ಸುಧಾರಣೆಗಳು

ನೀರು, ಗಾಳಿ ಮತ್ತು ಗುರುತ್ವಾಕರ್ಷಣೆಗಳಿಂದ ಭೂಮಿಯು ಸವಕಳಿಯಾಗುತ್ತದೆ. ನೀರು ಮತ್ತು ಗಾಳಿಗಳಿಂದ ಅದರಲ್ಲಿಯ ನೀರಿನಿಂದಾಗುವ ಸವಕಳಿಯು ಬೃಹತ್ ಪ್ರಮಾಣದಲ್ಲಾಗುತ್ತಿರುವುದು ಎಲ್ಲೆಡೆ ಕಂಡುಬರುತ್ತದೆ. ನೈಸರ್ಗಿಕವಾಗಿ ಆಗುತ್ತಿರುವ ಭೂ ಸವಕಳಿಯು ನಿರಂತರವಾಗಿದ್ದರೂ ನಿಧಾನವಾಗಿರುತ್ತದೆ. ಆದರೆ ಮಾನವನ ಚಟುವಟಿಕೆಗಳಿಂದ ಪ್ರಚೋದನೆಗೊಂಡ ಸವಕಳಿಯು ತೀವ್ರಗತಿಯಿಂದ ಮತ್ತು ಬೃಹತ್ ಪ್ರಮಾಣದಲ್ಲಿ ಸಾಗುತ್ತದೆ. ಈ ಸವಕಳಿಯು ಕೃಷಿಕರಿಗಷ್ಟೇ ಅಲ್ಲ ಸಾರ್ವಜನಿಕರಿಗೂ ಅಪಾಯಕಾರಿಯಾಗಬಲ್ಲದು.

ತೀವ್ರಗತಿಯಿಂದ ನಡೆಯುವ ಸವಕಳಿಯಲ್ಲಿ ಎರಡು ಪ್ರಮುಖ ಹಂತಗಳಿವೆ.

) ಕಣಗಳ ಬೇರ್ಪಡೆ (Detachment): ಮಣ್ಣಿನಲ್ಲಿರುವ ನೀರು ಹೆಪ್ಪುಗಟ್ಟಿ ನಂತರ ಕರಗುವುದರಿಂದ, ಮಳೆ ಹನಿಗಳ ಹೊಡೆತದಿಂದ ಮತ್ತು ಹರಿಯುವ ನೀರಿನಿಂದ ಮಣ್ಣಿನ ಕಣಗಳು ಬೇರ್ಪಡುತ್ತವೆ. ಎತ್ತರದಿಂದ ಬೀಳುವ ಮಳೆಹನಿಗಳು ಕೆಳಗೆ ಹೇಳಿದ ಪರಿಣಾಮಗಳನ್ನುಂಟು ಮಾಡುತ್ತವೆ:

i) ಮಣ್ಣಿನ ಕಣಗಳು ಒಂದರಿಂದ ಇನ್ನೊಂದು ಬೇರ್ಪಡುತ್ತವೆ.

ii) ಕಣಗಳ ರಚನೆಯು ನಷ್ಟಗೊಂಡು, ರಚನೆಯಲ್ಲಿರುವ ಕಣಗಳು ಎಲ್ಲೆಡೆ ಚದುರಿ ಹೋಗುತ್ತವೆ. ಪ್ರತ್ಯೇಕಗೊಂಡ ಕಣಗಳು ಮಣ್ಣಿನ ಮೇಲ್ಭಾಗದಲ್ಲಿ ಪಸರಿಸುತ್ತವೆ. ಮಣ್ಣು ಒಣಗಿತೆಂದರೆ ನೀರಿನ ಪ್ರವೇಶವನ್ನು ತಡೆಯಬಲ್ಲ ಒಂದು ಪದರು ನಿರ್ಮಾಣವಾಗುತ್ತದೆ. ಇದಾದ ನಂತರ ಬಂದ ಮಳೆಯ ನೀರು, ಮಣ್ಣಿನೊಳಗೆ ಸುಲಭವಾಗಿ ಪ್ರವೇಶಿಸಲು ಆಗದಿರುವುದರಿಂದ ಮಣ್ಣಿನ ಮೇಲ್ಭಾಗದಲ್ಲಿಯೇ ಹರಿದು ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತದೆ.

iii) ಮಳೆಯ ಹನಿಗಳ ಹೊಡೆತಕ್ಕೆ ಸಿಕ್ಕ ಮಣ್ಣಿನ ಕಣಗಳು ಮೇಲೆ ಜಿಗಿದು ತಾವಿದ್ದ ಸ್ಥಳದಿಂದ ಸ್ವಲ್ಪ ದೂರದವರೆಗೆ ಹಾರಿ ಬೀಳುತ್ತವೆ.

) ವಹನ ಕ್ರಿಯೆ (Transportation): ಅ(iii)ರಲ್ಲಿ ಹೇಳಿದಂತೆ ಬೇರ್ಪಟ್ಟ ಕಣಗಳು ಸ್ವಲ್ಪ ದೂರ ಮಾತ್ರ ಕ್ರಮಿಸುತ್ತವೆ. ಕೆಲವು ಪ್ರಸಂಗಗಳಲ್ಲಿ ಈ ದೂರವು ೧-೨ ಮೀ. ನಷ್ಟವಾಗಬಹುದಾದರೂ ಹರಿಯುವ ನೀರು ಮಣ್ಣಿನ ಕಣಗಳನ್ನು ಬಹುದೂರದವರೆಗೆ ಕೊಂಡೊಯ್ಯುತ್ತದೆ. ಆದ್ದರಿಂದ ಭೂ ಸವಕಳಿಯಲ್ಲಿ ಹರಿಯುವ ನೀರಿನ ಪಾತ್ರವೇ ಬಹು ಮುಖ್ಯವಾದುದೆನ್ನಬಹುದು. ನೀರಿನಿಂದ ಮೂರು ಬಗೆಯ ಸವಕಳಿಗಳು ಆಗುತ್ತವೆ.

 • ತೆಳು ಪದರು ಸವಕಳಿ (Sheet Erosion): ಇಳುಕಲಿನ ದಿಕ್ಕಿನಲ್ಲಿ ಭೂ ಪ್ರದೇಶದ ಪ್ರತಿ ಭಾಗದಿಂದಲೂ ಒಂದೆ ಪ್ರಮಾಣದಲ್ಲಿ ಮಣ್ಣು ಕೊಚ್ಚಿ ಹೋಗುತ್ತದೆ. ಈ ರೀತಿಯ ಸವಕಳಿಯು ಕೃಷಿಕನ ಗಮನಕ್ಕೆ ಸಾಮಾನ್ಯವಾಗಿ ಬರುವುದಿಲ್ಲ. ಆದ್ದರಿಂದ ಈ ಬಗೆಯ ಭೂ ಸವಕಳಿಯನ್ನು ಪ್ರತಿಬಂಧಿಸುವ ಪ್ರಯತ್ನವನ್ನೇ ಮಾಡದಿರುವುದು ಸಹಜ. ನಿರಂತರವಾಗಿ ಸಾಗುತ್ತಿರುವ, ಆದರೆ ಗಮನವನ್ನು ಸೆಳೆಯದ ತೆಳು ಪದರು ಸವಕಳಿಯು ಬಹು ಅಪಾಯಕಾರಿಯಾದ ಸವಕಳಿ ಎಂದರೆ ತಪ್ಪಗಲಾರದು.
 • ಸೂಕ್ಷ್ಮ ಕೊರಕಲಿನ ಸವಕಳಿ (Rill Erosion): ಭೂ ಪ್ರದೇಶದ ವಿವಿಧ ಭಾಗಗಳಿಂದ ಹರಿದುಬರುವ ನೀರು ತನ್ನೊಡನೆ ಮಣ್ಣನ್ನು ಎಳೆದು ತರುತ್ತದೆ. ನೀರು ಹರಿದುಬರುವ ಪ್ರಮಾಣವು ಕಡಮೆ ಇದ್ದಾಗ ಅದರೊಡನೆ ಸಾಗಿಬರುವ ಮಣ್ಣಿನ ಪ್ರಮಾಣವೂ ಕಡಮೆ ಇರುವುದು ಸ್ವಾಭಾವಿಕ. ಮಳೆಯ ನಂತರ ಅಲ್ಲಲ್ಲಿ ಸಣ್ಣ ಕೊರಕಲುಗಳು ಕಾಣಿಸಿಕೊಳ್ಳುತ್ತವೆ. ಇಂಥ ಕೊರಕಲುಗಳು ರೈತನ ದೃಷ್ಟಿಗೆ ಬರುತ್ತವೆಯಾದರೂ ಬೇಸಾಯದ ಉಪಕರಣಗಳ ಸಹಾಯದಿಂದ ಕೊರಕಲುಗಳನ್ನು ಸುಲಭವಾಗಿ ಮುಚ್ಚಲು ಸಾಧ್ಯವಿರುವುದರಿಂದ ಈ ಬಗೆಯ ಭೂ ಸವಕಳಿಗೆ ಅವನು ಅಷ್ಟು ಮಹತ್ವವನ್ನು ಕೊಡದಿರುವುದೇ ಸಾಮಾನ್ಯ.

iii) ಬೃಹತ್ ಕೊರಕಲಿನ ಸವಕಳಿ(Gully Erosion): ಭೂ ಪ್ರದೇಶದ ಮೇಲಿಂದ, ನೀರು ದೊಡ್ಡ ಪ್ರಮಾಣದಲ್ಲಿ ವೇಗವಾಗಿ ಹರಿಯತೊಡಗಿ, ಆ ನೀರಿನೊಡನೆ ಮಣ್ಣೂ ಬೃಹತ್ ಪ್ರಮಾಣದಲ್ಲಿ ಕೊಚ್ಚಿ ಹೋಗುತ್ತದೆ. ಇದರ ಪರಿಣಾಮವಾಗಿ ಭೂಮಿಯಲ್ಲಿ ಆಳವಾದ ಕೊರಕಲು ನಿರ್ಮಾಣವಾಗುವುದರಿಂದ ಇಂತಹ ಭೂಮಿಯಲ್ಲಿ ಬೇಸಾಯದ ಉಪಕರಣಗಳನ್ನು ಬಳಸುವುದೇ ಅಸಾಧ್ಯವಾಗಬಹುದು.