ಹತ್ತು ಸಾವಿರ ಕೋಟಿ ನರಕೋಶಗಳಿರುವ ಮಿದುಳು ಕೂಡ ಒಂದೇ ಜೀವಕೋಶದಿಂದ ತನ್ನ ಬೆಳವಣಿಗೆಯನ್ನು ಆರಂಭಿಸುತ್ತದೆ ಎನ್ನುವುದು ಸೃಷ್ಟಿಯ ವಿಸ್ಮಯ ಅಲ್ಲವೇ? ಗರ್ಭಧಾರಣೆಯಾಗಿ ಫಲಿತ ಅಂಡಾಣು, ಗರ್ಭಕೋಶಕ್ಕೆ ಬಂದು, ಅದರ ಭಿತ್ತಿಗೆ ಅಂಟಿಕೊಂಡು ಬೆಳೆಯತೊಡಗಿದ ಮೊದಲ ಮೂರು ವಾರಗಳಲ್ಲಿ ನರಕೋಶಗಳ ರಚನೆಯ ಯಾವ ಸುಳಿವೂ ಸಿಗುವುದಿಲ್ಲ. ಮೂರು ವಾರಗಳ ಕೊನೆಯಲ್ಲಿ ಸುಮಾರು ೧,೨೫,೦೦೦ ಜೀವಕೋಶಗಳುಳ್ಳ ಒಂದು ನರ ತಟ್ಟೆ (Neural Plate) ಯನ್ನು ಗುರುತಿಸಬಹುದು. ಆಮೇಲೆ ಈ ತಟ್ಟೆ ಒಂದು ಕೊಳವೆಯಾಗಿ ಮಾರ್ಪಾಟಾಗುತ್ತದೆ (Neural Tube) ತಲೆಯ ಕಡೆಯ ಉಬ್ಬಿನಿಂದ, ಮೂರು ಉಬ್ಬುಗಳು ಕಾಣಿಸಿಕೊಳ್ಳುತ್ತವೆ. ಈ ಉಬ್ಬುಗಳೇ ಮುಂದೆ ಪ್ರಧಾನ ಮಸ್ತಿಷ್ಕದ ಅರೆಗೋಳಗಳು, ಮಧ್ಯ ಮಿದುಳು ಮತ್ತು ನರಸೇತು-ಮೆಡುಲ್ಲಾಗಳಾಗಿ ವಿಕಸನಗೊಳ್ಳುತ್ತವೆ. ನರಕೊಳವೆ ಹಾಗೆ ಉಳಿದುಕೊಂಡು, ಮಿದುಳ ಕುಳಿಗಳಾಗಿ (ವೆಂಟ್ರಿಕಲ್ಸ್‌) ಕಾರ್ಯ ನಿರ್ವಹಿಸುತ್ತವೆ.

ಮಿದುಳಿನ ನರಕೋಶಗಳ ಸಂಖ್ಯಾಭಿವೃದ್ಧಿ ನಿರಂತರವಾಗಿ ನಡೆಯುತ್ತದೆ. ಪ್ರತಿ ನಿಮಿಷಕ್ಕೆ ೨,೫೦,೦೦೦ ಹೊಸ ಜೀವಕೋಶಗಳು ರೂಪುಗೊಳ್ಳತೊಡಗುತ್ತದೆ. ನರಕೋಶಗಳ ರಚನೆ, ಬೆಳವಣಿಗೆ, ಮಿದುಳಿನ ವಿವಿಧ ಭಾಗಗಳ ವಿಕಾಸ ಸಂಪೂರ್ಣವಾಗಿ ‘ವಂಶ ವಾಹಿನಿಗಳ ಯೋಜನಾ ಕ್ರಮ (Genetic Programme) ಎಂಬುದು ಕೆಲವು ವಿಜ್ಞಾನಿಗಳ ಅಭಿಮತವಾದರೆ, ಈ ವಂಶವಾಹಿತಿ ಯೋಜನೆಯ ಜೊತೆಗೆ ಪರಿಸರವೂ ಪಾತ್ರವಹಿಸುತ್ತದೆ. ಗರ್ಭಕೋಶದೊಳಗಿನ ಪರಿಸರದಲ್ಲಿ ಬದಲಾವಣೆ ತರುವುದರಿಂದ, ಮಿದುಳಿನ ವಿಕಾಸದಲ್ಲಿ ವ್ಯತ್ಯಾಸವನ್ನುಂಟು ಮಾಡಬಹುದು ಎಂಬುದು ಕೆಲವು ವಿಜ್ಞಾನಿಗಳ ಅಭಿಪ್ರಾಯ. ವಾಸ್ತವಿಕವಾಗಿ ಈ ಎರಡೂ, ಹೆಚ್ಚು ಕಡಿಮೆ ಸಮ ಪ್ರಮಾಣದಲ್ಲಿ ಮಿದುಳಿನ ರಚನೆ ವಿಕಸನದಲ್ಲಿ ಪಾಲ್ಗೊಳ್ಳುತ್ತವೆ. ಎಂಬುದು ಗಮನಾರ್ಹ. ನರಕೋಶಗಳ ಜೊತೆಗೆ, ಮಿದುಳಿನ ಗಾತ್ರಕ್ಕೆ ತನ್ನ ದೊಡ್ಡ ಕೊಡುಗೆಯನ್ನು ಸಲ್ಲಿಸುವ ‘ಗ್ಲೈಯಲ್ ಜೀವಕೋಶಗಳ’ ಸಂಖ್ಯಾಭಿವೃದ್ಧಿಯೂ ನಡೆಯತೊಡಗುತ್ತದೆ. ಈ ಜೀವಕೋಶಗಳು ಪ್ರತಿ ನರಕೋಶದ ನಡುವೆ ಒಂದು ನಿರ್ದಿಷ್ಟ ಅಂತರವಿರುವಂತೆ ನೋಡಿಕೊಳ್ಳುವುದಲ್ಲದೆ, ನರಕೋಶಗಳಿಗೆ ಪೌಷ್ಠಿಕಾಂಶಗಳು ದೊರಕುವಂತೆ ನೆರವಾಗುತ್ತವೆ.

 

 

ನರಕೋಶಗಳು ತಾವು ಜನಿಸಿದ ಸ್ಥಳದಲ್ಲೇ ಉಳಿಯುವುದಿಲ್ಲ. ತಮ್ಮ ಕೆಲಸ ಕಾರ್ಯಗಳಿಗೆ ಅನುಗುಣವಾದ ಸ್ಥಳಕ್ಕೆ ಮೆಲ್ಲಗೆ ಸರಿದು ಅಲ್ಲಿ ಪ್ರೌಢತ್ವವನ್ನು ಪಡೆಯುತ್ತವೆ. ಉದಾ: ಚಲನ ಕ್ಷೇತ್ರದ ಮತ್ತು ಸಂವೇದನಾ ಕ್ಷೇತ್ರದ ನರಕೋಶಗಳು ಕ್ರಮವಾಗಿ ಮಿದುಳಿನ ಮುಂಭಾಗ ಹಾಗೂ ಪಾರ್ಶ್ವದ ಭಾಗಕ್ಕೆ ಸರಿದು, ಅಲ್ಲಿ ನೆಲೆಗೊಳ್ಳುತ್ತವೆ.

ಈ ದೃಷ್ಟಿಯಿಂದಲೇ ನಮ್ಮ ಅಂಗನವಾಡಿ ಕೇಂದ್ರಗಳಲ್ಲಿ ನರ್ಸರಿ ಶಾಲೆಗಳಲ್ಲಿ ಸಂವೇದನಾ ಪ್ರಚೋದನೆ ಹಾಗೂ ಸಮೂಹ ಚಟುವಟಿಕೆ (Group activities) ಮತ್ತು ಸ್ನೇಹ-ಹೊಂದಾಣಿಕೆ ಆಟಗಳಿಗೆ ಪ್ರಥಮ ಆದ್ಯತೆ ಸಲ್ಲಬೇಕು. ಅಕ್ಷರ ಕಲಿಸುವುದಕ್ಕೆ, ಲೆಕ್ಕ ಹೇಳಿಕೊಡುವುದಕ್ಕೆ ಆದ್ಯತೆ ಇರಲೇಬಾರದು.

ಮಿದುಳಿನ ತೂಕ

ಹುಟ್ಟಿದ ಮಗುವಿನ ಮಿದುಳಿನ ತೂಕ ೩೫೦ ಗ್ರಾಂ. ಒಂದು ವರ್ಷ ವಯಸ್ಸಿನ ಮಗುವಿನ ಮಿದುಳಿನ ತೂಕ ೭೫೦ ಗ್ರಾಂ.ಗೆ ಏರುತ್ತದೆ. ಐದು ವರ್ಷ ವಯಸ್ಸಿನ ಮಗುವಿನ ಮಿದುಳಿನ ತೂಕ, ದೊಡ್ಡವರ ಮಿದುಳಿನ ತೂಕ (೧೨೫೦ ಗ್ರಾಂ) ದಷ್ಟೇ ಇರುತ್ತದೆ. ಮಿದುಳಿನ ಬಹುತೇಕ ಬೆಳವಣಿಗೆ ಗರ್ಭಧಾರಣೆಯ ಒಂಭತ್ತು ತಿಂಗಳು ಮತ್ತು ಹುಟ್ಟಿದ ನಂತರದ ಐದು ವರ್ಷಗಳಲ್ಲಿ ಆಗುವುದರಿಂದ, ಈ ಅವಧಿ ಮಿದುಳು ಮಿದುಳು ಮನಸ್ಸಿನ ವಿಕಾಸ ದೃಷ್ಟಿಯಿಂದ ಮಹತ್ತರವಾದ ಅವಧಿ. ಈ ಅವಧಿಯಲ್ಲಿ ಅಡ್ಡಿ ಆತಂಕಗಳುಂಟಾಗಿ, ರೋಗ-ರುಜಿನಗಳಿಂದ, ಅಪೌಷ್ಠಿಕತೆಯಿಂದ ಮಿದುಳಿನ ಬೆಳವಣಿಗೆ ಕುಂಠಿತವಾದರೆ, ಮದು ಬುದ್ಧಿಮಾಂದ್ಯತೆಯಿಂದ ತನ್ನ ಇಡೀ ಜೀವನ ಪೂರ್ತಿ ಬಳಲಬೇಕಾಗುತ್ತದೆ.

ಮಿದುಳಿನ ಸರ್ವಾಂಗೀಣ ಬೆಳವಣಿಗೆಗೆ ಮುಖ್ಯವಾಗಿ ಬೇಕಾದ ಅಂಶಗಳೆಂದರೆ, ಜೈವಿಕ ನ್ಯೂನತೆ ಇಲ್ಲದ ಆರೋಗ್ಯ ಪೂರ್ಣ ಅಂಡಾಣು ಮತ್ತು ವೀರ್ಯಾಣು, ಆರೋಗ್ಯವಾದ ಗರ್ಭಕೋಶ ಮತ್ತು ಮಾಸು, ಗರ್ಭಧಾರಣೆ ಅವಧಿಯಲ್ಲಿ ಸ್ತ್ರೀಯ ದೈಹಿಕ ಮತ್ತು ಮಾನಸಿಕ ಆರೋಗ್ಯ, ಆಕೆಗೆ ಪ್ರೋಟೀನ್ ಭರಿತ ಪುಷ್ಟಿಕರವಾದ ಆಹಾರ, ಸುಖಕರವಾದ ಹೆರಿಗೆ ಹಾಗೂ ಮನೆಯವರೆಲ್ಲರ ಪ್ರೀತಿ-ವಿಶ್ವಾಸ ಪೂರ್ವಕ ಆರೈಕೆ.

ಮಿದುಳಿನ ಅಸಮರ್ಪಕ ಬೆಳವಣಿಗೆಗೆ ಕಾರಣವಾಗಿ ತನ್ಮೂಲಕ ಬುದ್ಧಿಮಾಂದ್ಯತೆಗೆ ಕಾರಣವಾಗುವ ಸಾಮಾನ್ಯ ಅಂಶಗಳು ಇವು

. ಜನಿಕ ಮತ್ತು ವರ್ಣತಂತುಗಳ ನ್ಯೂನತೆ ಅಥವಾ ವ್ಯತ್ಯಾಸಗಳು: ಇವು ಅನುವಂಶಿಕವಾಗಿ ಬರಬಹುದು. ಉದಾ: ಸಣ್ಣ ತಲೆ (Micro Cephaly) ಲೈಂಗಿಕ ವರ್ಣತಂತುಗಳಲ್ಲಿ ನ್ಯೂನತೆ ಅಥವಾ ಸ್ತ್ರೀಗೆ ೩೫ ವರ್ಷ ವಯಸ್ಸಾದ ನಂತರ ಗರ್ಭಧಾರಣೆಯಾದರೆ, ೨೧ನೇ ಜೊತೆ ವರ್ಣತಂತುವಿನಲ್ಲಿ ನ್ಯೂನತೆ ಕಂಡು ಬಂದು, ಮಗು ಡೌನ್ಸ್ ಸಿಂಡ್ರೋಮ್‌ಗೆ ಒಳಗಾಗುವುದು.

೨. ಗರ್ಭಿಣಿಗೆ ಮೊದಲ ಮೂರು ತಿಂಗಳುಗಳಲ್ಲಿ ವೈರಸ್ ಸೋಂಕು (ಉದಾ: ದಡಾರ, ಚಿಕ್ಕಮ್ಮ, ಗೌತಲಮ್ಮ, ಇನ್‌ಫ್ಲೂಯೆಂಜಾ, ಮಿದುಳ ಜ್ವರ ಇತ್ಯಾದಿ) ಆದಾಗ, ಭ್ರೂಣದ ಮಿದುಳು ಹಾನಿಗೀಡಾಗಬಹುದು.

. ಅಯೋಡಿನ್ ಕೊರತೆ: ಕೆಲವು ಭೂಭಾಗಗಳಲ್ಲಿ ಜನ ಸೇವಿಸುವ ಆಹಾರ ಪದಾರ್ಥಗಳಲ್ಲಿ ‘ಅಯೋಡಿನ್’ ಅಂಶ ಕಡಿಮೆ ಇರಬಹುದು. ಇದರಿಂದ ಗರ್ಭಿಣಿ ‘ಹೈಪೋಥೈರಾಯಿಡ್‌’ ಸ್ಥಿತಿಗೆ ಒಳಗಾಗಿ, ಕತ್ತಿನಲ್ಲಿ ಗಂಟು ಕಾಣಿಸಿಕೊಳ್ಳುತ್ತದೆ. ಆಕೆಗೆ ಜನಿಸಿದ ಮಗು ದೈಹಿಕವಾಗಿ ಕುಬ್ಜವಾಗಿರುವುದಲ್ಲದೆ, ಅದಕ್ಕೆ ನಿಧಾನ ಗತಿಯ ಚಲನೆ, ಬುದ್ದಿಮಾಂದ್ಯತೆಯೂ ಇರುತ್ತದೆ. (Cretinism) ಈ ಸ್ಥಿತಿಯನ್ನು ಗುರುತಿಸಿ ಮಗುವಿಗೆ ಥೈರಾಕ್ಸಿನ್ ರಸದೂತವನ್ನು ಹೊರಗಿನಿಂದ ಕೊಟ್ಟರೆ, ಕ್ರೆಟಿನಿಸಮ್ ಸ್ಥಿತಿ ಮಾಯವಾಗಿ, ಮಗುವಿನ ದೈಹಿಕ, ಬೌದ್ಧಿಕ ಬೆಳವಣಿಗೆ ಸರಿಯಾಗುತ್ತದೆ. ಅಯೋಡಿನ್ ಅಂಶ ಕಡಿಮೆ ಇರುವ ಪ್ರದೇಶಗಳಲ್ಲಿ ವಾಸಿಸುವ ಜನ ‘ಅಯೋಡೈಸ್ಡ್‌ ಉಪ್ಪನ್ನು’ ಬಳಸುವುದು ಕ್ಷೇಮ.

. ಅಪೌಷ್ಟಿಕತೆ ಅದರಲ್ಲೂ ಮುಖ್ಯವಾಗಿ ಪ್ರೋಟೀನ್ ಕೊರತೆ: ಮಿದುಳಿನ ರಚನೆ ಮತ್ತು ಬೆಳವಣಿಗೆಗೆ ಪ್ರೋಟೀನ್ ಬಹುಮುಖ್ಯ. ಗರ್ಭಿಣಿ ಸ್ತ್ರೀ ಮತ್ತು ತನ್ನ ಮೊದಲ ಎರಡು ವರ್ಷಗಳಲ್ಲಿ ಮಗುವಿಗೆ, ಅಪೌಷ್ಟಿಕತೆಯುಂಟಾದರೆ, ಪ್ರೋಟೀನ್ ಸರಿ ಪ್ರಮಾಣದಲ್ಲಿ ಲಭ್ಯವಿಲ್ಲದೆ, ಮಿದುಳಿನ ಬೆಳವಣಿಗೆ ಸ್ಥಗಿತಗೊಳ್ಳಬಹುದು. ತೀವ್ರ ಬಡತನ, ಅಜ್ಞಾನ, ಮೂಢ ನಂಬಿಕೆಗಳಿಂದ ಲಭ್ಯವಿರುವ ಪ್ರೋಟೀನ್‌ಯುಕ್ತ ಆಹಾರ ಪದಾರ್ಥವನ್ನು ಕೊಡದಿರುವುದು (ಮೊಳಕೆ ಕಟ್ಟಿದ ಬೇಳೆಕಾಳುಗಳು, ಸೋಯಾ ಅವರೆ, ಕಡಲೇಕಾಯಿ, ಮೊಟ್ಟೆ ಮಾಂಸ ಇತ್ಯಾದಿ). ಆಗಿಂದಾಗ್ಗೆ ವಾಂತಿ ಬೇಧಿಯಾಗುವುದು, ಹೊಟ್ಟೆಯಲ್ಲಿ ವಿಪರೀತ ಜಂತುಗಳು, ಲಿವರ್ ಹಾನಿ, ಜಠರ ಮತ್ತು ಕರುಳಿನ ಕಾಯಿಲೆಗಳು ಅಪೌಷ್ಟಿಕತೆಗೆ ಸಾಮಾನ್ಯ ಕಾರಣಗಳು. ಇವನ್ನು ನಿವಾರಿಸಬೇಕು.

. ಗರ್ಭಿಣಿಯ ಅನಾರೋಗ್ಯ: ಗರ್ಭಿಣಿ ಸ್ತ್ರೀಗೆ ಸಿಹಿಮೂತ್ರ ರೋಗವಿದ್ದು ಆಕೆ, ಸೂಕ್ತ ಔಷಧಿ, ಆಹಾರ ಪಥ್ಯ, ವ್ಯಾಯಾಮ ಮಾಡದೆ, ರೋಗ ಹತೋಟಿಯಲ್ಲಿ ಇಲ್ಲದಿರುವ ಅವಧಿಯಲ್ಲಿ ಗರ್ಭಧಾರಣೆ ಮಾಡಿದರೆ, ಗರ್ಭದಲ್ಲಿರುವ ಭ್ರೂಣಕ್ಕೆ ಗ್ಲೂಕೋಸ್ ಕೊರತೆಯುಂಟಾಗಿ ಅದರ ಮಿದುಳಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ.

ಗರ್ಭಿಣಿಗೆ ಲೈಂಗಿಕ ರೋಗವಾದ ಸಿಫಿಲಿಸ್ ಇದ್ದು, ಅದು ಆಕೆಯ ಗಮನಕ್ಕೆ  ಬರದೇ ಹೋಗಬಹುದು (ಜನನಾಂಗದೊಳಗೆ ನೋವಿಲ್ಲದ ಹುಣ್ಣು ಈ ರೋಗದ ಲಕ್ಷಣ) ಅಥವಾ ಇದು ಆಕೆಯ ಗಮನಕ್ಕೆ ಬಂದರೂ ಸಂಕೋಚದಿಂದ ಆಕೆ ಚಿಕಿತ್ಸೆ ಪಡೆಯದೇ ಹೋದರೆ ಅಥವಾ ರೋಗ ಪೀಡಿತ ಗಂಡನಿಂದ ಪದೇ ಪದೇ ಸೋಂಕು ಉಂಟಾಗುತ್ತಿದ್ದರೆ, ಸಿಫಿಲಿಸ್ ರೋಗಾಣುಗಳು ಮಗುವಿನ ಮಿದುಳಿನ ಬೆಳವಣಿಗೆಗೆ ತಡೆ ಒಡ್ಡುತ್ತವೆ.

. ವಿಷವಸ್ತುಗಳ ಸೇವನೆ: ಗರ್ಭಿಣಿಗೆ ಮದ್ಯಪಾನ ಮಾಡುವ ಅಭ್ಯಾಸವಿದ್ದರೆ, ಆಲ್ಕೋಹಾಲ್ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಮಾರಕವಾಗುತ್ತದೆ. ಅದು ಒಂದು ವಿಶೇಷ  ರೋಗ ಸ್ಥಿತಿಯಾದ ‘Foetal Alcohol Syndrome’ (ಭ್ರೂಣದ ಮದ್ಯಸಾರ ರೋಗ ಲಕ್ಷಣ ಸಮೂಹ)ಗೆ ಒಳಗಾಗುತ್ತದೆ. ಇದರ ಪ್ರಮುಖ ಲಕ್ಷಣಗಳೆಂದರೆ, ಗರ್ಭಧಾರಣೆ ಅವಧಿಯಲ್ಲಿ ಮತ್ತು ಅನಂತರವೂ ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ. ತಲೆ ಜೊತೆಗೆ ಮಿದುಳು ಚಿಕ್ಕದಾಗಿರುತ್ತದೆ. ಬುದ್ಧಿಮಾಂದ್ಯತೆ, ಅಸಹಜ ನಡವಳಿಕೆಗಳು ಕಂಡುಬರುತ್ತವೆ. ಮದ್ಯಸಾರದ ಅತಿ ಬಳಕೆಯಿಂದ ಸ್ತ್ರೀಗೆ ಗರ್ಭಪಾತವಾಗುವುದು ಅಥವಾ ಕಡಿಮೆ ತೂಕದ ಮಗು ಜನಿಸುವುದು ಕಂಡುಬರುತ್ತದೆ. ಆದಕಾರಣ ಮಹಿಳೆ ಗರ್ಭಧಾರಣೆ ಅವಧಿಯಲ್ಲಿ ಮಧ್ಯಪಾನ ಮಾಡಬಾರದು. ಮಾಡಿದರೆ ಅಪಾಯಕ್ಕೆ ಆಹ್ವಾನಕೊಟ್ಟಂತೆ.

ಪಾದರಸ, ಸೀಸದಂತಹ ಭಾರಲೋಹದ ಕಣಗಳು, ವಿಕಿರಣಗಳು (ರೇಡಿಯೇಶನ್) ದೀರ್ಘಾವಧಿಯಲ್ಲಿ ದೇಹದೊಳಕ್ಕೆ ಸೇರುವುದರಿಂದ, ಮಗುವಿನ ಮಿದುಳಿಗೆ ಹಾನಿಯಾಗುತ್ತದೆ.

. ರಕ್ತ ಗುಂಪಿನ ಹೊಂದಾಣಿಕೆ ಇಲ್ಲದಿರುವುದು: ತಾಯಿಯ ರಕ್ತ ಗುಂಪು ಮತ್ತು ಆಕೆಯ ಗರ್ಭಸ್ಥ ಶಿಶುವಿನ ರಕ್ತದ ಗುಂಪು ಬೇರೆಯಾಗಿ ಸಮಸ್ಯೆಯನ್ನುಂಟು ಮಾಡಬಲ್ಲದು. ತಾಯಿಯ ರಕ್ತ ಗುಂಪು ಆರ್.ಎಚ್.ನೆಗೆಟಿವ್‌ ಮಗುವಿನ ರಕ್ತ ಗುಂಪು ಆರ್.ಎಚ್. ಪಾಸಿಟಿವ್ ಆದಾಗ ಅಥವಾ ಒಬ್ಬರದು ಎಬಿ ಮತ್ತೊಬ್ಬರದು ಓ ಗುಂಪಾಗಿ ಹೊಂದಾಣಿಕೆ ಇಲ್ಲದೆ, ಪ್ರತಿಕ್ರಿಯೆ ಉಂಟಾಗಿ (ISO Immunization), ಮಿದುಳಿಗೆ ಹಾನಿಯುಂಟಾಗುತ್ತದೆ. ಮಗು ಸಾಯುತ್ತದೆ ಇಲ್ಲವೇ ಬುದ್ಧಿಮಾಂದ್ಯತೆಗೆ ಒಳಗಾಗುತ್ತದೆ.

. ಹೆರಿಗೆ ಸಮಯದ ತೊಂದರೆಗಳು: ಮಗು ಗರ್ಭದಲ್ಲಿ ಅಡ್ಡಡ್ಡವಾಗಿ ಮಲಗಿ ಅಥವಾ ತಲೆಯ ಬದಲು, ಬೇರೊಂದು ಭಾಗ ಮೊದಲು ಹೊರಬರಲು ಯತ್ನಿಸಿ ಅಥವಾ ತಾಯಿಯ ಜನನದ್ವಾರ ಸರಿಯಾಗಿ ಹಿಗ್ಗದೇ ಅಥವಾ ಗರ್ಭಕೋಶದ ಸ್ನಾಯುಗಳು ಬಲವಾಗಿ ಸಂಕುಚನಗೊಳ್ಳದೇ ಅಥವಾ ಮತ್ಯಾವುದೇ ಕಾರಣದಿಂದ ಹೆರಿಗೆ ಕಷ್ಟವಾಗಬಹುದು. ಆಗ ಅದುವರೆಗೆ ಚೆನ್ನಾಗಿ ಬೆಳೆದ ಮಿದುಳು ರಕ್ತಸ್ರಾವದಿಂದ ಅಥವಾ ವಿಪರೀತ ಒತ್ತಡಕ್ಕೆ ಒಳಗಾಗಿ ಹಾನಿಗೀಡಾಗುತ್ತದೆ. ಇದನ್ನು Birth Trauma ಎನ್ನುತಾರೆ. ಹೆರಿಗೆಯಾಗುವಾಗ ಆಗುವ ಈ ಪೆಟ್ಟಿನಿಂದಾಗಿ ಮಗು ಬುದ್ಧಿಮಾಂದ್ಯತೆಗೆ, ಮೂರ್ಛೆ ರೋಗಕ್ಕೆ, ಅತಿ ಚಟುವಟಿಕೆ-ಏಕಾಗ್ರತೆಯ ಕೊರತೆಯ ಸ್ಥತಿಗೆ (Hyperkinetic and attention deficit disorder) ಒಳಗಾಗುತ್ತದೆ. ಬೌದ್ಧಿಕ ಹಿಂದುಳಿಯುವಿಕೆ ಪ್ರಮುಖ ಲಕ್ಷಣ. ಓದು, ಬರಹ, ಗಣಿತ ಕಲಿಯುವಿಕೆ ಕಷ್ಟವಾಗುವ ‘ಡಿಸ್‌ಲೆಕ್ಸಿಯಾ’ ಸ್ಥಿತಿಯೂ ಉಂಟಾಗುತ್ತದೆ. ಶೇಕಡಾ ೧೨ ರಷ್ಟು ಮಕ್ಕಳು ಡಿಸ್‌ಲೆಕ್ಸಿಯಾದಿಂದ ಬಳಲುತ್ತಾ ಶಾಲೆಯಲ್ಲಿ ದಡ್ಡರು, ಸೋಮಾರಿಗಳೆಂದು ಬೈಸಿಕೊಳ್ಳುತ್ತಾರೆ. ಅವರಿಗೆ ನಿಧಾನವಾಗಿ ಬರೆಯಲು ಅವಕಾಶಕೊಡಬೇಕು.

. ಮಗುವಿಗೆ ಬರುವ ಕಾಯಿಲೆಗಳು: ಆಗಿಂದಾಗ್ಗೆ ಮಗುವಿಗೆ ವಾಂತಿ, ಬೇಧಿ ಆಗುವುದು. ತೀವ್ರ ಬಗೆಯ ಜಾಂಡೀಸ್, ಮಿದುಳ ಪೊರೆ ಉರಿತ ಅಥವಾ ಮಿದುಳುರಿತದಂತಹ ಮಿದುಳ ಜ್ವರಗಳಿಗೆ ಒಳಗಾಗುವುದು, ಪದೇ ಪದೇ ಫಿಟ್ಸ್ ಬರುವುದು, ಮೇಲಂದ ಬಿದ್ದು ಅಥವಾ ಅಪಘಾತಗಳಲ್ಲಿ ತಲೆಗೆ ನೇರವಾಗಿ ಪೆಟ್ಟು ಬೀಳುವುದು, ಡಿಫ್ತೀರಿಯಾ, ಪೋಲಿಯೋದಂತಹ ರೋಗಗಳು ಬರುವುದು-ಮಿದುಳು ನರಮಂಡಲಕ್ಕೆ ಹಾನಿಯುಂಟು ಮಾಡಬಹುದು. ಮಿದುಳಿನ ಬೆಳವಣಿಗೆ ಸ್ಥಗಿತಗೊಳ್ಳಬಹುದು.

೧೦.ಅನಾರೋಗ್ಯ ಪರಿಸರ: ವಿಪರೀತ ಬಡತನ, ಅತಿ ಜನ ಸಾಂದ್ರತೆ, ಪ್ರಚೋದನೆಗಳಿಲ್ಲದ, ವೈವಿಧ್ಯತೆಗಳಿಲ್ಲದ ಬರಡು ವಾತಾವರಣ, ಭಾವನಾತ್ಮಕವಾಗಿ ಮಗುವನ್ನು ತಿರಸ್ಕರಿಸುವ ಹಾಗೂ ಅದನ್ನು ಪ್ರೀತಿಸದ ತಂದೆ-ತಾಯಿಗಳು ತಾಂತ್ರಿಕ ಜೀವನ ಶೈಲಿಯ ಸಮಾಜ, ಆಲೋಚನೆ ಚಿಂತನೆಗೆ ಪ್ರೋತ್ಸಾಹ ಕೊಡದ ಶಿಕ್ಷಣ ಕ್ರಮಗಳು, ಅತಿ ಭಯ-ಭೀತಿಯ ವಾತಾವರಣ ಕೂಡ ಮಗುವಿನ ಮಿದುಳಿನ ಬೆಳವಣಿಗೆಗೆ ಸಹಾಯಕವಾಗುವುದಿಲ್ಲ. ಇಂತಹ ಪರಿಸರದಲ್ಲಿ ಬೆಳೆದ ಮಕ್ಕಳು ಕಡಿಮೆ ಬುದ್ಧಿ ಕೌಶಲಗಳು, ಅತಿ ಹಿಂಜರಿಕೆ ಸ್ವಭಾವ, ಸುಲಭವಾಗಿ ಭಾವೋದ್ರೇಕಕ್ಕೆ ಒಳಗಾಗುವ ಮನೋಭಾವಕ್ಕೆ ಒಳಗಾಗುತ್ತಾರೆ.

ಆದ್ದರಿಂದ ಮಿದುಳಿನ ಸೂಕ್ತ ಹಾಗೂ ಪರಿಪೂರ್ಣ ಬೆಳವಣಿಗೆಗೆ ಈ ಕೆಳಗಿನ ಸೂಚನೆಗಳನ್ನು ಸರ್ವರೂ ಪರಿಪೂರ್ಣ ಪಾಲಿಸುವುದು ಉತ್ತಮ.

ನಿವಾರಣೆ:

  • ವಂಶ ಪಾರಂಪರ್ಯವಾಗಿ ಬರುವಂತಹ ಕಾಯಿಲೆ ನ್ಯೂನತೆಗಳಿರುವ ಕುಟುಂಬದ ಸದಸ್ತರು ತೀರಾ ಹತ್ತಿರದ ಸಂಬಂಧದಲ್ಲಿ ಮದುವೆಯಾಗಬಾರದು. ಆದಷ್ಟು ದೂರದ ಸಂಬಂಧ ಮತ್ತು ಆರೋಗ್ಯವಂತ ಕುಟುಂಬದವರನ್ನು ಮದುವೆಯಾಗುವುದು ಕ್ಷೇಮ.
  • ಮಹಿಳೆ ಗರ್ಭಧಾರಣೆ ಮಾಡಲು ಪ್ರಶಸ್ತ ವಯಸ್ಸೆಂದರೆ ೨೦ ರಿಂದ ೩೫ ವರ್ಷಗಳು. ೨೦ ಕ್ಕಿಂತ ಕಡಿಮೆ ವಯಸ್ಸಿನಲ್ಲಿ ಅಥವಾ ೩೫ ವರ್ಷ ವಯಸ್ಸಿನ ನಂತರ ಗರ್ಭಧಾರಣೆ ಕ್ಷೇಮವಲ್ಲ.
  • ಗರ್ಭಿಣಿಯ ದೈಹಿಕ ಪೋಷಣೆ, ವ್ಯಾಯಾಮ, ಮನಸ್ಸಿನ ಸಂತೋಷ ನೆಮ್ಮದಿಗೆ ಎಲ್ಲ ಏರ್ಪಾಟುಗಳನ್ನು ಮಾಡಬೇಕು. ಆಕೆ ಅಪೌಷ್ಟಿಕತೆಯಿಂದ ಮನೋಕ್ಲೇಶಗಳಿಂದ ನರಳದಂತೆ ಎಚ್ಚರವಹಿಸಬೇಕು.
  • ಪ್ರತಿ ತಿಂಗಳಿಗೆ ಒಮ್ಮೆ ಅನಂತರ ಹದಿನೈದು ದಿನಗಳಿಗೊಮ್ಮೆ ಗರ್ಭಿಣಿಗೆ ವೈದ್ಯಕೀಯ ತಪಾಸಣೆ ಆಗಬೇಕು. ಯಾವುದೇ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ, ಚಿಕಿತ್ಸೆ ನೀಡಬೇಕು.
  • ಗರ್ಭಿಣಿಯ ಪರಿಸರ ಸ್ವಚ್ಛವಾಗಿ, ಉಲ್ಲಾಸದಾಯಕವಾಗಿರುವಂತೆ ನೋಡಿಕೊಳ್ಳಬೇಕು. ಇದರಿಂದ ಅಪಾಯಕಾರಿ ರೋಗಾಣಿಗಳನ್ನು ದೂರವಿಡಬಹುದು.
  • ಆಕೆಯ ಹೆರಿಗೆ ಕಷ್ಟವಿಲ್ಲದೆ, ಸುಸೂತ್ರವಾಗಿ ನಡೆಯುವಂತೆ ವ್ಯವಸ್ಥೆ ಮಾಡಬೇಕು. ನುರಿತ, ತರಬೇತಿ ಪಡೆದ ದಾಯಿ/ ವೈದ್ಯನಿಂದ ಹೆರಿಗೆ ಮಾಡಿಸಬೇಕು. ಹೆರಿಗೆ ಕಷ್ಟವಾಗಬಹುದು ಎಂಬ ಸೂಚನೆ ಇದ್ದರೆ, ಹೆರಿಗೆಯನ್ನು ಆಸ್ಪತ್ರೆಯಲ್ಲೇ ಮಾಡಿಸಬೇಕು. ಮಗು ಹುಟ್ಟಿದ ತಕ್ಷಣ ಅತ್ತು, ಉಸಿರಾಟ ಪ್ರಾರಂಭವಾಗುವಂತೆ ನೋಡಿಕೊಳ್ಳಬೇಕು.
  • ಮೊದಲು ಎರಡು ವರ್ಷಗಳಲ್ಲಿ ಮಗುವಿಗೆ ಪ್ರೋಟೀನ್‌ ಭರಿತ ಆಹಾರ, ಸ್ವಚ್ಛ ಪರಿಸರ ಪ್ರಚೋದನಾ-ವೈವಿಧ್ಯತೆ ಇರುವ ವಾತಾವರಣವನ್ನು ಕಲ್ಪಿಸಿಕೊಡಬೇಕು.
  • ವಿವಿಧ ಆಟಗಳು, ಬೌದ್ಧಿಕ ಚಟುವಟಿಕೆಗಳು, ವಿವಿಧ ವಸ್ತುಗಳು, ಪರಿಸರದ ವಸ್ತುಗಳ ಬಗ್ಗೆ ಮಾಹಿತಿ, ಪ್ರಶ್ನೆ ಕೇಳುವ ಪ್ರವೃತ್ತಿಯನ್ನು ಪ್ರೋತ್ಸಾಹಿಸುವುದು, ಒಳ್ಳೆಯ ಶಿಕ್ಷಣ, ಚಿಂತನ ಶೀಲತೆಯನ್ನೂ ಸಮಸ್ಯೆಗಳನ್ನು ವಿಶ್ಲೇಷಿಸಿ ಪರಿಹಾರ ಕಂಡು ಹಿಡಿಯುವ ಅವಕಾಶಗಳನ್ನು ಹೆಚ್ಚಿಸುವುದು-ಮಿದುಳಿನ ವಿಕಾಸಕ್ಕೆ ಪ್ರೇರಕವಾಗುತ್ತವೆ.
  • ಮಿದುಳಿಗೆ ಪೆಟ್ಟು ಹಾನಿಯಾಗುವುದನ್ನು ತಡೆಯುವುದು.

ಅಪೂರ್ಣ ಹಾಗೂ ಅಸಮರ್ಪಕವಾಗಿ ಬೆಳೆದ ಮಿದುಳನ್ನು ಸರಿಪಡಿಸುವುದು ಹೇಗೆ?

ಈ ಮೊದಲು ವಿವರಿಸಿದ ಯಾವುದೇ ಕಾರಣದಿಂದ ಮಿದುಳು ಸರಿಯಾಗಿ ಬೆಳೆಯದೇ ಹೋದಾಗ, ಹಾನಿಗೀಡಾಗಿ ಬೆಳವಣಿಗೆ ಸ್ಥಗಿತಗೊಂಡಾಗ, ಏನು ಪರಿಹಾರ? ಮಿದುಳು ಬೆಳೆಯಲು ನೆರವಾಗುವ ಔಷಧಿಗಳಿವೆಯೇ? ಚಿಕಿತ್ಸಾ ವಿಧಾನಗಳಿವೆಯೇ? ಎಂದು ಜನ ಪ್ರಶ್ನಿಸುತ್ತಾರೆ.

ಮಿದುಳಿನ ಬೆಳವಣಿಗೆಯನ್ನು ಪ್ರಚೋದಿಸುವ, ಆದ ಹಾನಿಯನ್ನು ಸರಿಪಡಿಸುವ ಔಷಧಗಳು ಇಲ್ಲ. ಮಾರುಕಟ್ಟೆಯಲ್ಲಿ ಮಿದುಳಿನ ಬಲವರ್ಧಕ ಎಂದು ಮಾರಾಟವಾಗುವ ಅನೇಕ ಮಾತ್ರೆ-ಔಷಧಗಳಲ್ಲಿ ನಂಬಲಾರ್ಹವಾದ, ಪರಿಣಾಮಕಾರಿಯಾದ ಯಾವುದೇ ಬಲವರ್ಧಕ ಗುಣ ಇಲ್ಲ. ದುಬಾರಿಯಾದ ಈ ಮಾತ್ರೆಗಳನ್ನು ಬರೆಯುವ ಸಾಹಸವನ್ನು ವೈದ್ಯರೂ ಮಾಡಬಾರದು. ಕೊಂಡುಕೊಳ್ಳುವ-ಅವನ್ನು ಬುದ್ಧಿಮಾಂದ್ಯ ಮಗುವಿಗೆ ಕೊಡುವುದನ್ನು ಜನರೂ ಮಾಡಬಾರದು.

ಹಾಗಾದರೆ ಏನು ಮಾಡಬೇಕು?

ಇರುವಷ್ಟು ಮಿದುಳನ್ನು ಹೆಚ್ಚು ಪ್ರಚೋದಿಸುವ ಹಾಗೂ ಅದರಿಂದ ಹೆಚ್ಚು ಕೆಲಸ ತೆಗೆಯುವ ಕೆಲಸವನ್ನು ನಾವು ಮಾಡಬೇಕು. ಪಂಚೇಂದ್ರಿಯಗಳಿಗೆ ಹೆಚ್ಚು ಪ್ರಚೋದನೆ ಕೊಡುವುದರಿಂದ ತರಬೇತಿ ಕೊಡುವುದರಿಂದ, ನರಕೋಶಗಳು ಹೆಚ್ಚು ಕವಲೊಡೆಯುತ್ತವೆ. ಆಗ ಒಂದು ನರಕೋಶವೇ ಎರಡು ನರಕೋಶಗಳ ಕೆಲಸ ಮಾಡಬಲ್ಲದು. ಇದು ಪ್ರಯೋಗಗಳಿಂದ ಸಾಬೀತಾಗಿದೆ.

ಬುದ್ಧಿಮಾಂದ್ಯ ಮಗುವಿಗೆ ನಿಶ್ಶಕ್ತ ಕತ್ತು, ಕೈ, ಕಾಲುಗಳಿಗೆ ಮಸಾಜ್ ಮಾಡಿ, ವ್ಯಾಯಾಮ ಮಾಡಿಸಿದರೆ ಆ ಭಾಗಗಳ ಸ್ನಾಯುಗಳು ಬಲಗೊಂಡು, ಮಗು ಕೈಕಾಲುಗಳನ್ನು ಹೊಂದಾಣಿಕೆಯಿಂದ ಬಳಸಲು ಶಕ್ತವಾಗುತ್ತದೆ. ಮಾತಾಡಲು, ಇತರರೊಡನೆ ಸಂಪರ್ಕ ಸಾಧಿಸಲು, ಕಲಿಯಲು ಶಕ್ತವಾಗುತ್ತದೆ. ದೈನಂದಿನ ಕೆಲಸಗಳಾದ ಆಹಾರ ಸೇವನೆ, ಮಲ ಮೂತ್ರಗಳ ವಿಸರ್ಜನೆ, ಸ್ನಾನ ಮಾಡುವುದು, ಸ್ವಚ್ಛವಾಗಿರುವುದು, ಸಾಮಾನ್ಯ ಅಪಾಯಗಳನ್ನು ನಿವಾರಿಸಿಕೊಳ್ಳುವುದು, ಉಡುಪು ಧರಿಸುವುದು, ಇವೆಲ್ಲವನ್ನು ಮಾಡಲು, ಹಂತ ಹಂತವಾಗಿ ನಿಧಾನವಾಗಿ ತರಬೇತಿ ಕೊಡಬೇಕು. ಕಲಿಯುವ ಆಸಕ್ತಿಯನ್ನು ಹೆಚ್ಚಿಸುವ ಸಲುವಾಗಿ, ಬಹುಮಾನ-ಪ್ರೋತ್ಸಾಹಗಳನ್ನು ನೀಡಬೇಕು. ಮನೆಯೊಳಗೆ, ಹೊರಗೆ ಸುತ್ತಲಿನ ಪರಿಸರದಲ್ಲಿರುವ ಎಲ್ಲ ವಸ್ತುಗಳನ್ನು ಗುರುತಿಸಿ, ಅವುಗಳ ಉಪಯೋಗವನ್ನು ಹೇಳಿಕೊಡಬೇಕು. ಹೀಗೆ ಸಹನೆಯಿಂದ ಮಾಡಿ ತೋರಿಸಿ, ಮಾಡಿಸಿ, ಪ್ರೋತ್ಸಾಹಿಸಿ ಮಾರ್ಗದರ್ಶನ ಮಾಡಿದರೆ ಅಸಮರ್ಪಕ ಬೆಳವಣಿಗೆಯುಳ್ಳ ಮಿದುಳು ಈ ಮಕ್ಕಳು ಉತ್ತಮರಾಗಲು ಹಾಗೂ ಉಪಯುಕ್ತರಾಗಿ ಬಾಳಲು ಖಂಡಿತ ಸಾಧ್ಯವಿದೆ.