ಕರ್ನಾಟಕ ಇತಿಹಾಸ ಪರಂಪರೆಯಲ್ಲಿ ಸಾಂಸ್ಕೃತಿಕ ಬದುಕಿನಲ್ಲಿ ಮೈಸೂರು ಸಂಸ್ಥಾನಕ್ಕೆ ಅಲ್ಲಿನ ದೊರೆಗಳಿಗೆ ವಿಶಿಷ್ಟಸ್ಥಾನವಿದೆ. ವಿಜಯನಗರದ ಪತನದ ನಂತರ ಕರ್ನಾಟಕದ ಸೂತ್ರದಾರವನ್ನು ಹಿಡಿದ ರಾಜಮನೆತನಗಳಲ್ಲಿ ಮೈಸೂರರಸರು ಪ್ರಮುಖರು. ಈ ಅರಸು ಮನೆತನ ಮೈಸೂರಿನಲ್ಲಿ ನೆಲೆಯೂರಿದ್ದು ೧೬೯೯ರ ಸುಮಾರಿನಲ್ಲಿ ಯದುವಂಶದ ಯದುರಾಯ ಮತ್ತು ಕೃಷ್ಣರಾಯ ಇವರುಗಳು ಈ ವಂಶದ ಮೂಲ ಪುರುಷರೆಂದು, ಅವರು ಉತ್ತರ ಭಾರತದ ಕಡೆಯಿಂದ ಬಂದು ಮೈಸೂರಿನಲ್ಲಿ ನೆಲಸಿದರೆಂಬ ಪ್ರತೀತಿ ಇದೆ.

ಮೈಸೂರು ಅರಸು ಮನೆತನ ನಡೆಸಿಕೊಂಡು ಬಂದ ಅನೇಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ‘ರಾಜ ಒಡೆಯರ್’ ರೇ ಪ್ರವರ್ತಕರೆಂದು ಹೇಳಲಾಗುತ್ತದೆ. ಅವರು ಪಟ್ಟಕ್ಕೆ ಬಂದುದು ೧೫೭೮ರಲ್ಲಿ ಮೈಸೂರಿನಲ್ಲಿ ನವರಾತ್ರಿಯ ಸಂದರ್ಭದಲ್ಲಿ ವಿಶೇಷ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲ್ಪಡುತ್ತಿರುವುದು ಇವರ ಕಾಲದಿಂದಲೇ. ಅಂದಿನಿಂದ ‘ಮೈಸೂರು ದಸರಾ ಉತ್ಸವ’ವು ಈ ಅರಸು ಮನೆತನದ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದೆ. ಈ ಉತ್ಸವದ ಮೂಲಕವೇ ನಾಡಿನ ಕಲೆ, ಸಂಸ್ಕೃತಿಗಳು ವಿಶೇಷ ಸಂವರ್ಧನೆಗೊಂಡಿವೆ. ಮಹೋತ್ಸವದ ಅಂಗವಾಗಿ ಸಂಗೀತ, ನಾಟಕ, ನೃತ್ಯ, ಚಿತ್ರ, ಶಿಲ್ಪ ಮುಂತಾದ ಕಲೆಗಳಲ್ಲಿ ಪರಿಣಿತಿ ಪಡೆದವರಿಗೆ ಈ ಸಂದರ್ಭದಲ್ಲಿ ‘ರಾಜಮರ್ಯಾದೆ’ ಸಲ್ಲುತ್ತಾ ಬಂದಿದೆ.

ಮೈಸೂರು ಅರಸರ ಆಳ್ವಿಕೆಯಲ್ಲಿ ನಾಡಿನ ಸಾಂಸ್ಕೃತಿಕ ಬದುಕಿನಲ್ಲಿ ಸಂಗೀತಕಲೆಗೆ ಅತ್ಯಂತ ಪ್ರಮುಖ ಸ್ಥಾನ ಕೊಡಲಾಗಿದೆ. ದಕ್ಷಿಣ ಭಾರತದ ಪ್ರಮುಖ ಗೌರವ ದೊರೆಯುತ್ತಿದ್ದುದು ಸಹಜವಾಗಿತ್ತು. ಇದರೊಟ್ಟಿಗೆ ಅನೇಕ ಜನ ಹೆಸರಾಂತ ಹಿಂದುಸ್ತಾನಿ ಸಂಗೀತಗಾರರು ಮೈಸೂರಿನ ಆಸ್ಥಾನ ಸಂಗೀತಗಾರರಾಗಿದ್ದುದು ಒಂದು ವಿಶೇಷವಾಗಿದೆ. ಚಾಮರಾಜ ಒಡೆಯರ ಕಾಲಾವಧಿಯು ಸಂಗೀತ ಬೆಳವಣಿಗೆ ಚರಿತ್ರೆಯಲ್ಲಿ ‘ಸುವರ್ಣ ಯುಗ’ ವೆಂದು ಹೇಳಬೇಕು.

ವಿಜಯನಗರ ಸಾಮ್ರಾಜ್ಯದ ಪತನದ ನಂತರ ನೂರಾರು ವರ್ಷಗಳ ಕಾಲ ಆಶ್ರಯವನ್ನು ಕಳೆದುಕೊಂಡ ಸಂಗೀತ ಕಲೆ ಮೈಸೂರು ಒಡೆಯರ ಕೃಪಾ ಛತ್ರದಡಿ ಆಶ್ರಯ ಪಡೆಯಿತು. ಮುಮ್ಮಡಿ ಕೃಷ್ಣರಾಜ ಮತ್ತು ನಾಲ್ವಡಿ ರಾಜ ಒಡೆಯರರು ಸಂಗೀತ ಕಲೆಗೆ ವಿಶೇಷ ಪ್ರೋತ್ಸಾಹ ನೀಡಿದರು. ಅವರ ಅಸ್ಥಾನದಲ್ಲಿ ಬಿಡಾರದ ಕೃಷ್ಣಪ್ಪ, ವೀಣೆ ಶೇಷಣ್ಣ, ವ್ಯಾಘ್ರ ವರದಾಚಾರ್ಯ, ಸುಬ್ಬಣ್ಣ, ವಾಸುದೇವಾಚಾರ್ಯ, ದೇವೆಂದ್ರಪ್ಪ, ಚೌಡಯ್ಯ, ಮುತ್ತಯ್ಯ ಭಾಗವತರಂತಹ ಕರ್ನಾಟಕ ಸಂಗೀತದ ಘಟಾನುಘಟಿಗಳು, ಹಾಗೆಯೇ ನತ್ಥನ ಖಾನ, ವಿಲಾಯತ ಹುಸೇನ ಖಾನ, ದುಲ್ಲೇಖಾನ (ಅಬ್ದುಲ್ಲಾಖಾನ), ಗೋಹರ ಜಾನ ಬಾಯಿ, ಬರ್ಕುತುಲ್ಲಾಖಾನ ಮುಂತಾದ ಹಿಂದುಸ್ಥಾನಿ ಸಂಗೀತದ ಜಟ್ಟಿಗಳು ರಾಜಾಶ್ರಯ ಪಡೆದಿದ್ದರು ಮೈಸೂರು ಸಂಸ್ಥಾನ ಕರ್ನಾಟಕೀ ಹಾಗೂ ಹಿಂದುಸ್ಥಾನಿ. ಸಂಗೀತಗಳೆರೆಡರ ‘ಸಂಗಮ’ ದಂತಿತ್ತು. ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಎರಡು ಸಂಗೀತ ಪ್ರಕಾರಗಳು ಒಂದೆಡೆ ಸಮಾವೇಶವಾಗಿದ್ದವು.

ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸಂಗೀತವೆಂದರೆ ಪ್ರಾಣ. ಅದರಲ್ಲೂ ಹಿಂದೂಸ್ತಾನಿ ಸಂಗೀತವೆಂದರೆ ಅವರಿಗೆ ಬಲು ಪ್ರೀತಿ. ಒಮ್ಮೆ ಅವರು ಸಂಸ್ಥಾನದ ಕೆಲಸಕ್ಕಾಗಿ ಮುಂಬಯಿಗೆ ಹೋದಾಗ ಅಲ್ಲಿ ಅವರಿಗೆ ಪ್ರಸಿದ್ಧ ಸಂಗೀತಗಾರ ಉಸ್ತಾದ ವಿಲಾಯತ ಹುಸೇನ ಖಾನರ ತಂದೆ ಉಸ್ತಾದ ನತ್ಥನ ಖಾನರ ಸಂಗೀತ ಕೇಳುವ ಅವಕಾಶ ದೊರೆಯಿತು. ಖಾನರ ಸಂಗೀತಕ್ಕೆ ಮನಸೋತ ಮಹಾರಾಜರು ಅವರನ್ನು ತಮ್ಮ ಆಸ್ಥಾನಕ್ಕೆ ಆಮಂತ್ರಿಸಿದರು. ಮಹಾರಾಜರ ಮನವಿ ಮನ್ನಿಸಿಖಾನರು ಮೈಸೂರಿಗೆ ಬಂದರು. ಮಹಾರಾಜರು ಖಾನರನ್ನು ಆಸ್ಥಾನ ಸಂಗೀತಗಾರರನ್ನಾಗಿ ನೇಮಿಸಿದರು. ಆ ಕಾಲದಲ್ಲಿ ಖಾನರಿಗೆ ತಿಂಗಳಿಗೆ ೧೭೫ ರೂ. ಸಂಭಾವನೆ ಕೊಡಲಾಗುತ್ತಿತ್ತು.

ಉಸ್ತಾದ ನತ್ಥನ ಖಾನರು ಬಹುದೊಡ್ಡ ಸಂಗೀತಗಾರರು. ಅವರು ಆಸ್ಥಾನದಲ್ಲಿ ಆಶ್ರಯ ಪಡೆಯುವದರ ಮೂಲಕ ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತ ತಳವೂರಲು ಕಾರಣರಾದರು. ಅದರ ಪರಿಣಾಮವಾಗಿ ಅದುವರೆಗೆ ಕರ್ನಾಟಕೀ ಸಂಗೀತವೇ ಪ್ರಧಾನವಾಗಿದ್ದ ಮೈಸೂರಿನಲ್ಲಿ ಹಿಂದುಸ್ತಾನಿ ಸಂಗೀತ ಜನಾದರ ಗಳಿಸಿಕೊಳ್ಳತೊಡಗಿತು. ಆಸ್ಥಾನದಲ್ಲಿದ್ದ ಅನೇಕ ಜನ ಕರ್ನಾಟಕೀ ಸಂಗೀತಗಾರರ ಮೇಲೂ ಖಾನರ ಪ್ರಭಾವ ಅಧಿಕವಾಯಿತು. ಫಲವಾಗಿ ವೀಣೆ ಶೇಷಣ್ಣನವರಂತಹ ಪ್ರತಿಭಾಶಲಿಗಳು ತಿಲ್ಲಾನಾಗಳನ್ನು ರಚನೆಮಾಡಿದರು. ಅನೇಕ ಜನ ತರುಣ ಕಲಾವಿದರಿಗೆ ಹಿಂದುಸ್ತಾನಿ ಕಲಿಯಲು ಮಹಾರಾಜರೇ ಪ್ರೋತ್ಸಾಹ ನೀಡಿದರು. ಅರಮನೆಯ ವಿಶೇಷ ಸಂದರ್ಭಗಳಲ್ಲಿ, ನವರಾತ್ರಿ, ದಸರಾ ಉತ್ಸವಗಳಲ್ಲಿ ವ್ಯಾಪಕವಾಗಿ ಸಂತೀತ ಕಚೇರಿಗಳು ನಡೆಯುತ್ತಿದ್ದವು. ಉತ್ತರ ಭಾರತದ ಅನೇಕ ಹೆಸರಾಂತ ಸಂಗೀತಗಾರರು ದಸರಾ ಉತ್ಸವದಲ್ಲಿ ಭಗವಹಿಸಿ ಹಿಂದುಸ್ತಾನಿ ಸಂಗೀತದ ವಾತಾವರಣ ಬೆಳೆಯಲು ಅನುವು ಮಾಡಿಕೊಟ್ಟರು. ‘ದಸರಾ ದರ್ಬಾರ’ ಹಾಗೂ ಮಹಾರಾಜರ ವರ್ಧಂತಿ ಉತ್ಸವದ ಸಂದರ್ಭದಲ್ಲಿ ಮಹಾರಾಜರು ದೇಶದ ಬೇರೆ ಬೇರೆ ಭಾಗಗಳಿಂದ ಹಿಂದುಸ್ತಾನಿ ಸಂಗೀತಗಾರರನ್ನು ಆಹ್ವಾನಿಸಿ ರಾಜಸಭೆಯಲ್ಲಿ ಹಾಡಿಸಿ ಸನ್ಮಾನಿಸುತ್ತಿದ್ದರು.

ಕೃಷ್ಣರಾಜ ಒಡೆಯರು ಉಸ್ತಾದ ನತ್ಥನಖಾನರ ಸಂಗೀತ ಮೆಚ್ಚಿ ರತ್ನ ಖಚಿತವಾದ ಚಿನ್ನದ ತೋಡಾವನ್ನು ಬಹುಮಾನವಾಗಿ ಕೊಟ್ಟಿದ್ದರು. ನತ್ಥನ ಖಾನರ ಮಗ ಅಬ್ದುಲ್ಲಾ ಖೆನರು ತಂದೆಯಂತೆಯೇ ಸಂಗೀತದಲ್ಲಿ ಪಳಗಿದವರು. ಅವರಿಗೆ ಎಲ್ಲರೂ ಪ್ರೀತಿಯಿಂದ  ದುಲ್ಲೇಖನ ಎಂದು ಕರೆಯುತ್ತಿದ್ದರು. ತಂದೆಯೊಡನೆ ಸಾಥಿ ಮಾಡುತ್ತಿದ್ದ ಅಬ್ಬುಲ್ಲಾ ಖಾನರ ಸಂಗೀತ ಕೇಳಿ ಅವನೂ ಒಬ್ಬ ಉಸ್ತಾದನೆಂದೇ ಮನಗಂಡು ಮಹಾರಾಜರು ತಂದೆಗಲ್ಲದೆ ಮಗನಿಗೂ ಪ್ರತ್ಯೇಕ ಸಂಭಾವನೆ ಕೊಡುತ್ತಿದ್ದರು. ನತ್ಥನ ಖಾನರಿಗೆ ಅಬ್ದುಲ್ಲಾ ಖಾನರಲ್ಲದೆ ವಿಲಾಯತ ಹುಸೇನ ಖಾನ ಮತ್ತು ನತ್ಥೂಖಾನರೆಂಬ ಇಬ್ಬರು ಗಂಡು ಮಕ್ಕಳಿದ್ದು ಅವರೆಲ್ಲರೂ ಹಿಂದುಸ್ತಾನಿ ಸಂಗೀತ ಪ್ರಪಂಚದಲ್ಲಿ ಹೆಸರು ಪಡೆದವರೇ. ಅಬ್ದುಲ್ಲಾ ಖಾನರು ಮೈಸೂರಿನಿಂದ ಬಾಗಲಕೋಟೆಗೆ ಬಂದು ಅಲ್ಲಿ ಕೆಲದಿನ ಇದ್ದು ಉತ್ತರ ಭಾರತದ ತಮ್ಮೂರಿಗೆ ಹೋದರು. ಇಬ್ಬರು ಮಕ್ಕಳು ಮುಂಬಯಿಯಲ್ಲಿ ನೆಲೆಸಿದರು. ಆದರೆ ನತ್ಥನ ಖಾನರು ಮಾತ್ರ ಕೊನೆವರೆಗೂ ಮೈಸೂರಿನಲ್ಲಿಯೇ ಇದ್ದೂ ಕನ್ನಡ ನಾಡಿನಲ್ಲೇ ದೇಹಬಿಟ್ಟರು.

ಮಹಾರಾಜರ ಆಮಂತ್ರಣದ ಮೇರೆಗೆ ಮೈಸೂರಿಗೆ ಬಂದು ಆಸ್ಥಾನದಲ್ಲಿ ಸಂಗೀತ ಕಚೇರಿ ನೀಡಿ ರಾಜಮರ್ಯಾದೆ ಪಡೆದ ಹಿಂದುಸ್ತಾನಿ ಸಂಗೀತರಾರರು ಅನೇಕರು. ಅಂಥವರಲ್ಲಿ ಉಸ್ತಾದ ಅಬ್ದುಲ್ ಕರೀಂ ಖಾನ, ಸೂರಶ್ರೀ ಕೇಸರಿ ಬಾಯಿ ಕೇರಕರ, ಗೋಹರ ಜಾನ, ಉಸ್ತಾದ ಫಯಾಜ ಖಾನ, ಬರ್ಕತುಲ್ಲಾಖಾನ, ಸಿತಾರ ರತ್ನ ರಹಿಮತ ಖಾನ ಮುಂತಾದವರು ವಿಶೇಷ ಉಲ್ಲೇಖನೀಯರು.

ಉಸ್ತಾದ ಅಬ್ದುಲ್ ಕರೀಂಖಾನರು ಕಿರಾನಾ ಘರಾನಾದ ಅಧ್ಯಯನಗಳು. ಅವರು ಮೂಲತಃ ದೆಹಲಿ ಹತ್ತಿರದ ಕಿರಾನಾ ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಉತ್ತರ ಭಾರತದ ಅನೇಕ ರಾಜಾಸ್ಥಾನಗಳಲ್ಲಿ ಆಸ್ಥಾನ ಸಂಗೀತಗಾರರಾಗಿ ಗೌರವ ಪಡೆದವರು. ಕಾಲಾನಂತರ ಮಿರಜಕ್ಕೆ ಬಂದು ನೆಲೆನಿಂತರು. ಕರ್ನಾಟಕದ ಉತ್ತರಭಾಗದಲ್ಲಿ ಹಿಂದುಸ್ತಾನಿ  ಸಂಗೀತದ ಹಾಳಿಯನ್ನು ಬೀಸಿದವರು. ಸಂಗೀತ ಸಾಮ್ರಾಟ್ ಉಸ್ತಾದ ಅಲ್ಲಾದಿಯಾ ಖಾನರ ಶಿಷ್ಯೆಯಾದ ಸೂರಶ್ರೀ ಕೇಸರಿಬಾಯಿ ಕೇರಕರ ಅವರು ಮುಂಬೈಯಲ್ಲಿ ವಾಸವಾಗಿದ್ದರು. ಇವರ ಸಂಗೀತ ಕೇಳಿ ಮಹಾರಾಜರು ಮೈಸೂರಿಗೆ ಆಮಂತ್ರಿಸಿ ಆಸ್ಥಾನದಲ್ಲಿ ಅವರ ಸಂಗೀತ ಕಚೇರಿ ಏರ್ಪಡಿಸಿ ಅವರಿಗೆ ಆ ಕಾಲದಲ್ಲಿ ಮಹಾರಾಜರು ಒಂದು ಸಾವಿರ ರೂಪಾಯಿ ಸಂಭಾವನೆ ಕೊಟ್ಟಿದ್ದರು. ಇವಳ ಸಂಗೀತಕ್ಕೆ ಟಿ. ಚೌಡಯ್ಯರಂಥವರೇ ಮಾರುಹೋಗಿದ್ದರು. ಕಲಕತ್ತೆಯ ಪ್ರಸಿದ್ಧ  ಠುಮರಿ ಗಾಯಕಿ ಗೋಹರ ಜಾನಳು ಮೈಸೂರು ಆಸ್ಥಾನದ ವಿದೂಷಿಯಾಗಿದ್ದರು. ಈಕೆಯ ಸಂಗೀತಕ್ಕೆ ಮಹಾರಾಜರಾದಿಯಾಗಿ ಜನಸಾಮಾನ್ಯರು ನಿಬ್ಬೆರಗಾಗಿದ್ದರು. ಉಸ್ತಾದ ಫಯಾಜ ಖಾನರು ಬರೋಡಾ ಸಂಸ್ಥಾನದ  ಆಸ್ಥಾನ ಸಂಗೀತಗಾರರಾಗಿದ್ದರು. ಮಹಾರಾಜರು ಇವರನ್ನು ಮೈಸೂರಿಗೆ ಆಮಂತ್ರಿಸಿ ಅವರ ಸಂಗೀತ ಕೇಳಿ ಅವರಿಗೆ ‘ಅಫ್ಥಾಬೆ ಮುಸೀಕೀ’ (ಅಂದರೆ ’ಸಂಗೀತ ಸೂರ್ಯ’) ಎಂಬ ಬಿರುದಿತ್ತು ಗೌರವಿಸಿದ್ದರು. ನತ್ಥನ ಖಾನರ ಚರಣದ ನಂತರ ಮಹಾರಾಜರು ಫಯ್ಯಾಜ ಖಾನರನ್ನೇ ತಮ್ಮ ಆಸ್ಥಾನದ ಮಂಗಿತಗಾರರಾಗುವಂತೆ ಕೇಳಿಕೊಂಡರು. ಆದರೆ ಉಸ್ತಾದರು, ತಾವು ಈಗಾಗಲೇ ಬರೋಡಾ ಸಂಸ್ಥಾನದ ಆಸ್ಥಾನ ಸಂಗೀತಗಾರರಾಗಿದ್ದರಿಂದ ತಮ್ಮ ಬದಲಾಗಿ ನತ್ಥನ ಕಾನರ ಮಗ  ಉಸ್ತಾದ ವಿಲಾಯತ ಹುಸೇನ ಖಾನರನ್ನು ಆಸ್ಥಾನ ಗಾಯಕರನ್ನಾಗಿ ನೇಮಿಸಬೇಕೆಂಬ ಫಯ್ಯಾಜ ಖಾನರ ಸೂಚನೆಯ ಮೇರೆಗೆ ಮಹಾರಾಜರು ವಿಲಾಯತ ಹುಸೇನ ಖಾನರನ್ನ ಮುಂಬೈಯಿಂದ ಕರೆಸಿ ಮೈಸೂರಿನ ಆಸ್ಥಾನ ಸಂಗೀತಗರರನ್ನಾಗಿ ನೇಮಿಸಿದರು.

ಬರ್ಕತುಲ್ಲಾ ಖಾನರು ಪ್ರಸಿದ್ಧ ಸಿತಾರ ವಾದಕರು. ಅವರನ್ನು ಮಹಾರಾಜರು ಆಮಂತ್ರಿಸಿ ಸಂಗೀತ ಕಚೇರಿ ನೆರವೇರಿಸಿ ‘ರಾಜ ಮರ್ಯಾದೆ’ ನೀಡಿ ಗೌರವಿಸಿದರು. ಉಸ್ತಾದ ರಹಿಮತ ಖಾನರು ಸಿತರರತ್ನರೆಂದೇ ಖ್ಯಾತಿ ಪಡೆದಿದ್ದರು. ಅವರು ಮೂಲತಃ ಉತ್ತರ ಭಾರತದಿಂದ ಬಂದು ಮಿರಜದಲ್ಲಿ ನೆಲೆಸಿದ್ದರು. ಮಹಾರಾಜರ ಆಮಂತ್ರಣದ ಮೇರೆಗೆ ರಹೀಮತ ಖಾನರು ಮೈಸೂರಿಗೆ ಬಂದು ದಸರಾ ಉತ್ಸವದಲ್ಲಿ ಮಂಗೀತ ಕಛೇರಿ ನೀಡಿ ಮಹಾರಾಜರ ವಿಶೇಷ ಮನ್ನಣೆಗೆ ಪಾತ್ರರಾಗಿದ್ದರು.

ಮೈಸೂರು ಮಹಾರಾಜರ ಆಮಂತ್ರಣದ ಮೇರೆಗೆ ದೆಹಲಿ, ಕಲಕತ್ತಾ, ಬರೋಡಾ, ಆಗ್ರಾ, ಮುಂಬೈ, ಜೈಪುರ, ಬನಾರಸ, ಜಲಂಧರ ಮುಂತಾದೆಡೆಗಳಿಂದ ಹಿಂದುಸ್ತಾನಿ ಸಂಗೀತಗಾರರು ಆಗಮಿಸಿ ಮೈಸೂರಿನಲ್ಲಿ ಕಾರ್ಯಕ್ರಮ ನೀಡಿದ ಫಲವಾಗಿ ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತದ ಗಾಳಿ ಬೀಸಲಾರಂಭಿಸಿತು. ಉತ್ತರ ಭಾರತದ ಮಹಾನ್ ಸಂಗೀತಗಾರರನೇಕರು ದಸರಾ ಸಂದರ್ಭದಲ್ಲಿ ಮೈಸೂರಿಗೆ ಬಂದು ‘ಸಂಗೀತ-ದರ್ಬಾರ’ ನಡೆಸಿಕೊಡುತ್ತ, ಆಸ್ಥಾನ ವಿದ್ವಾಂಸರಾಗುತ್ತ ಹೋದಂತೆ-ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತ ನೆಲೆಯೂರಲು ಕಾರಣವಾಯಿತು. ದಕ್ಷಿಣ ಭಾರತದ ಅನೇಕ ಪ್ರಾಂತಗಳಲ್ಲಿ ಹಿಂದುಸ್ತಾನಿ ಸಂಗೀತದ ಬೆಳವಣಿಗೆಯಲ್ಲಿ ಮೈಸೂರು ಕೇಂದ್ರ ಬಿಂದುವಾಯಿತು.

ಧಾರವಾಡ-ಹುಬ್ಬಳ್ಳಿ, ಬೆಳಗಾವಿ ಮಾರ್ಗವಾಗಿ ಮೈಸೂರಿಗೆ ಹೋಗಿ ಸಂಗೀತ ಕಚೇರಿ ನೀಡಿ ತಮ್ಮ ತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದ ಸಂಗೀತಗಾರರನೇಕರನ್ನು ಹುಬ್ಬಳ್ಳಿ-ಧಾರವಾಡದ ಜನರು ಅವರನ್ನು ತಮ್ಮಲ್ಲಿ ಇಳಿಸಿಕೊಂಡು ಅವರ ‘ಸಂಗೀತ ಬೈಠಕ್’ ಏರ್ಪಡಿಸುತ್ತಿದ್ದರು. ಫಲವಾಗಿ ಅದುವರೆಗೆ ಕರ್ನಾಟಕೀ ಸಂಗೀತವೇ ಪ್ರಭಾವವಾಗಿದ್ದ  ಈ ಪ್ರದೇಶದಲ್ಲಿ ಹಿಂದುಸ್ತಾನಿ ಸಂಗೀತದ ಗಾಳಿ ಬೀಸಲಾರಂಭಿಸಿತು. ಅನೇಕ ಜನ ತರುಣರು ಹಿಂದುಸ್ತಾನಿ ಸಂಗೀತ ಕಲಿಯಲಾರಂಭಿಸಿದರು. ದಿನೇ ದಿನೇ ಹಿಂದುಸ್ತಾನಿ ಸಂಗೀತದ ಅಭಿಮಾನಿಗಳ ಸಂಖ್ಯೆ ಬೆಳೆಯಹತ್ತಿತು. ಉಸ್ತಾದ ಅಬ್ದುಲ್ ಕರೀಂ ಖಾನ, ಭಾಸ್ಕರ ಬುವಾ, ಸಿತಾರರತ್ನ ರಹಿಮತ ಖಾನ ಮುಂತಾದವರ ಸಂಗೀತದ ಪ್ರಭಾವದಿಂದಾಗಿ ಕರ್ನಾಟಕದ ಉತ್ತರ ಭಾಗದಲ್ಲಿ ಹಿಂದುಸ್ತಾನಿ ಸಂಗೀತ ನೆಲೆ ನಿಂತಿತು. ಮೈಸೂರಿಗೆ ಹೋಗಿ ಧಾರವಾಡ ಮಾರ್ಗವಾಗಿ ಮಿರಜಕ್ಕೆ ಹೋಗುತ್ತಿದ್ದ ಸಿತಾರರತ್ನ  ಉಸ್ತಾದ ರಹಿಮತ ಖಾನರು ಧಾರವಾಡದ ಸೃಷ್ಟಿ ಸೊಬಗಿಗೆ ಮನಸೋತು ಮಿರಜ ಬಿಟ್ಟು ಧಾರವಾಡದಲ್ಲಿಯೇ ನೆಲೆ ನಿಂತರು.

ಅಂದು ಮಹಾರಾಜರು ವಿಶೇಷ ಆಸ್ಥೆ ವಹಿಸಿ ಅನೇಕ ಹಿಂದುಸ್ತಾನಿ ಸಂಗೀತಗಾರರನ್ನು ಮೈಸೂರಿಗೆ ಆಮಂತ್ರಿಸಿ, ರಾಜಮನ್ನಣೆ ನೀಡಿ, ಆಸ್ಥಾನ ಸಂಗೀತಗಾರರನ್ನಾಗಿಸಿದ ಫಲವಾಗಿ ಕರ್ನಾಟಕದಲ್ಲಿ ಅನೇಕ ಹಿಂದುಸ್ತಾನಿ ಸಂಗೀತಗಾರರು ರೂಪಗೊಳ್ಳಲು ಅವಕಾಶವಾಯಿತು. ಅಖಿಲಭಾರತ ಖ್ಯಾತಿವೆತ್ತ ಹಿಂದುಸ್ತಾನಿ  ಸಂಗೀತಗಾರರಲ್ಲಿ ಬಹುಪಾಲು ಕರ್ನಾಟಕದವರಾಗಿರುವುದೇ ಇದಕ್ಕೆ ನಿದರ್ಶನವಾಗಿದೆ. ಮಲ್ಲಿಕಾರ್ಜುನ ಮನಸೂರ, ಗಂಗೂಬಾಯಿ ಹಾನಗಲ್ಲ, ಬಸವರಾಜ ರಾಜಗುರು, ಭೀಮಸೇನ ಜೋಶಿ, ಕುಮಾರ ಗಂಧರ್ವ ಮುಂತಾದ ಹಿಂದುಸ್ತಾನಿ ಸಂಗೀತದ ಘಟಾನುಘಟಿಗಳು ಅಂದು ಮೈಸೂರ ಅರಸರು ನೆಟ್ಟ ಸಸಿ, ಬಿಟ್ಟ ಸಮೃದ್ಧ ಫಲಗಳು ಎನ್ನಬಹುದು.

ಕಾಲಾಂತರದಲ್ಲಿ ಮೈಸೂರು ಸಂಸ್ಥಾನ ವಿಲೀನವಾಗಿ ಕರ್ನಾಟಕದಲ್ಲಿ ಪ್ರಜಾಪ್ರತಿನಿಧಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮೈಸೂರು ಸಂಸ್ಥಾನದಲ್ಲಿ ವಿಶೇಷ ಆಕರ್ಷಣೆಯಾದ ನವರಾತ್ರಿಯ ದಸರಾ ಉತ್ಸವ ಎಂದಿನ ಅದ್ಧೂರಿಯಂತೆ-ಮುನ್ನಡೆದಿದೆ. ಕರ್ನಾಟಕ ಸರಕಾರ ವಿಶೇಷ ಆಸ್ಥೆ ವಹಿಸಿ ದಸರಾ ಉತ್ಸವದಲ್ಲಿ ಸಂಗೀತಗಾರರಿಗೆ ವಿಶೇಷ ಗೌರವ ಮನ್ನಣೆ ನೀಡುತ್ತಾ ಬಂದಿದೆ.