ಸಾಮಾಜಿಕಪ್ರಜ್ಞೆ-ಎಂಬುದು ಸಾಹಿತ್ಯ ವಿಮರ್ಶೆಯಲ್ಲಿ ತೀರಾ ಇತ್ತೀಚಿಗೆ ಬಳಕೆಯಾಗುತ್ತಿರುವ ಒಂದು ಪದವಾಗಿದೆ. ಸಮಾಜವಾದೀ ರಾಷ್ಟ್ರಗಳ ಸಾಹಿತ್ಯಕ ಸಂದರ್ಭದಲ್ಲಿ ಹುಟ್ಟಿಕೊಂಡ ಈ ಪದ ಸಾಹಿತಿಗೆ ಇರಬೇಕಾದ ಸಾಮಾಜಿಕ ಎಚ್ಚರ, ಸಾಮಾಜಿಕ ಜವಾಬ್ದಾರಿ ಇತ್ಯಾದಿಗಳನ್ನು ಸೂಚಿಸುತ್ತದೆ. ಹಾಗೆ ನೋಡಿದರೆ ಸಾಹಿತ್ಯವನ್ನು ಕುರಿತ ವ್ಯಾಖ್ಯೆಗಳೆಲ್ಲವೂ ಕಾಲದಿಂದ ಕಾಲಕ್ಕೆ ಸಾಹಿತ್ಯವು ತನ್ನ ಸುತ್ತಣ ಸಮಾಜದೊಂದಿಗೆ ಇರಿಸಿಕೊಂಡು ಸಂಬಂಧಗಳನ್ನೆ ಅನುಲಕ್ಷಿಸಿ ನಿರೂಪಿತವಾಗಿರುತ್ತವೆ. ಮತ್ತು ಸಾಹಿತ್ಯದಲ್ಲಿ, ಅಂದಂದಿನ ಸಮಾಜವು-ಅದರಲ್ಲೂ ಹಿಂದಿನ ಕಾವ್ಯಗಳ ಸಂದರ್ಭದಲ್ಲಿ-ಅಂದಂದಿನ ಸಹೃದಯ ಸಮಾಜ, ಯಾವ ರೀತಿಯ ಬದುಕನ್ನು, ಬದುಕಿನ ದೃಷ್ಟಿಯನ್ನು ಬೆಲೆಗಳನ್ನು ಬಹುಮುಖ್ಯವೆಂದು ಭಾವಿಸಿತ್ತೋ ಅವುಗಳೇ ಅಭಿವ್ಯಕ್ತವಾಗಿರುವುದನ್ನು ಗುರುತಿಸಬಹುದು.

ಸಾಹಿತ್ಯವು ಒಂದು ಕಾಲದ ಸಾಮಾಜಿಕ ಸಂದರ್ಭದಲ್ಲಿ ಸಂಭವಿಸುತ್ತದೆ. ಸಾಹಿತಿಯೂ ಆ ಸಮಾಜದ ಒಂದು ಅನಿವಾರ್ಯವಾದ ಅಂಗವಾಗಿರುವುದರಿಂದ ಮತ್ತು ಸಾಮಾಜಿಕ ಸಂಪರ್ಕ ಮಾಧ್ಯಮವಾದ ಭಾಷೆಯ ಮೂಲಕವೇ ತನ್ನ ಸಮಾಜದೊಂದಿಗೆ ಕೃತಿಮುಖೇನ ವ್ಯವಹರಿಸುವುದರಿಂದ, ಸಾಹಿತಿಯಾದವನು ತನ್ನ ಸಮಕಾಲೀನ ಸಮಾಜದ ಬಗ್ಗೆ, ಮತ್ತು ಸಾಮಾಜಿಕ ಮಾಧ್ಯಮವಾದ ಭಾಷೆಯ ಬಗ್ಗೆ, ವಿಶೇಷ ರೀತಿಯ ಎಚ್ಚರವನ್ನು ತಾಳಿರುತ್ತಾನೆ. ಈ ವಿಶೇಷ ರೀತಿಯ ಎಚ್ಚರವನ್ನು ಸ್ಥೂಲವಾಗಿ ನಾವು ಪ್ರಜ್ಞೆ ಎಂದು ಕರೆಯುತ್ತೇವೆ.

ಈ ವಿಷಯವನ್ನು ಕುರಿತು ವಿಚಾರಮಾಡುವಾಗ ಮೂರು ಮುಖ್ಯವಾದ ಪ್ರಶ್ನೆಗಳು ಏಳುತ್ತವೆ :

ಒಂದು, ಸಾಮಾಜಿಕಪ್ರಜ್ಞೆ ಎಂದರೇನು ?

ಎರಡು, ಸಾಮಾಜಿಕಪ್ರಜ್ಞೆಯ ಅಭಿವ್ಯಕ್ತಿಗೆ ಸಾಹಿತಿ ತಾನು ಆರಿಸಿಕೊಳ್ಳುವ ವಸ್ತುವು ಎಷ್ಟರಮಟ್ಟಿಗೆ ನೆರವಾಗುತ್ತದೆ ಅಥವಾ ಆತಂಕವಾಗುತ್ತದೆ ?

ಮೂರು, ಸಾಮಾಜಿಕ ಪ್ರಜ್ಞೆಯೊಂದರಿಂದಲೇ, ಸಾಹಿತ್ಯದ ನೆಲೆ ಬೆಲೆಗಳನ್ನು ಗುರುತಿಸಲು ಹೊರಡುವುದು ಸಾಧುವೇ ?

ಮೊದಲನೆಯದಾಗಿ ‘ಸಾಮಾಜಿಕ ಪ್ರಜ್ಞೆ’ ಎಂದರೇನೆಂಬುದನ್ನು ನೋಡೋಣ. ಈ ಪ್ರಶ್ನೆಗೆ ಉತ್ತರವಿರುವುದು ಕವಿಗೂ ಸುತ್ತಣ ಸಮಾಜಕ್ಕೂ ಇರುವ ಸಂಬಂಧದ ಸ್ವರೂಪದಲ್ಲಿ. ಸಮಾಜವನ್ನು ಸಾಹಿತಿಯಲ್ಲದ ಬೇರೆ ಬೇರೆಯವರು ನೋಡುವ ದೃಷ್ಟಿಗೂ, ಕವಿಯಾದವನು ನೋಡುವ ದೃಷ್ಟಿಗೂ ವ್ಯತ್ಯಾಸವಿದೆ ಎಂಬುದೇ ಇಲ್ಲಿ ಗುರುತಿಸಿಕೊಳ್ಳಬೇಕಾದ ಅಂಶ. ಒಬ್ಬ ಚರಿತ್ರಕಾರ, ಮಾನವ ಶಾಸ್ತ್ರಜ್ಞ, ಭಾಷಾ ಶಾಸ್ತ್ರಜ್ಞ ಇವರೂ ಸಮಾಜವನ್ನು ತಮ್ಮ ತಮ್ಮ ನಿಲುವುಗಳಿಂದ ಅದರ ಇತಿಹಾಸವನ್ನು, ನಡೆ ನುಡಿಗಳನ್ನು ಅಭ್ಯಾಸ ಮಾಡುತ್ತಾರೆ. ಆದರೆ ಒಬ್ಬ ಕವಿ ಸಮಾಜವನ್ನು ನೋಡುವುದು ಅಥವಾ ಅದನ್ನು ತನ್ನ ಅನುಭವದ ವಸ್ತುವನ್ನಾಗಿ ಮಾಡಿಕೊಳ್ಳುವುದು ಮತ್ತು ಆ ಅನುಭವವನ್ನು ಕಲಾತ್ಮಕವಾಗಿ ರೂಪಿಸುವುದು, ಸಮಾಜಶಾಸ್ತ್ರಜ್ಞನ ಚರಿತ್ರಕಾರನ ಮಾನವಶಾಸ್ತ್ರಜ್ಞನ ಸಂಶೋಧನಾತ್ಮಕ ದೃಷ್ಟಿಯಿಂದ ಭಿನ್ನವಾಗಿರುತ್ತದೆ. ಯಾಕೆಂದರೆ ಸಾಹಿತ್ಯ, ಇತರ ಶಾಸ್ತ್ರಗಳಂತೆ ಸಮಾಜದ ಅಂದಂದಿನ ಬದುಕಿನ, ಹಾಗೂ ಸಂಗತಿಗಳ ದಾಖಲೆ ಅಲ್ಲ ; ಅದು ಅಂದಿನ ಸಮಗ್ರ ಬದುಕನ್ನು ಕವಿಯಾದವನು ತನ್ನ ತೀವ್ರವಾದ ಸಂವೇದನೆಗೆ ಒಳಗುಪಡಿಸಿಕೊಂಡದ್ದರ ಪರಿಣಾಮವಾಗಿರುತ್ತದೆ. ‘ಪ್ರಜ್ಞೆ’ ಎಂದರೆ ಯಾವುದೇ ವಸ್ತುಸತ್ಯವನ್ನು ತನ್ನ ಪ್ರತಿಭಾನದಿಂದ ಗ್ರಹಿಸಿ ಪರಿಭಾವಿಸುವ ಒಂದು ವಿಶೇಷ ಸಂವೇದನೆ ಎಂದು ಅರ್ಥ. ಕವಿಯಾದವನು ಈ ‘ಪ್ರಜ್ಞೆ’ಯಿಂದ ತನ್ನ ಸುತ್ತಣ ಸಮಾಜದ  ಆಶೋತ್ತರಗಳನ್ನು ತುಡಿತ ಮಿಡಿತಗಳನ್ನು, ನಂಬಿಕೆಗಳನ್ನು, ಮೌಲ್ಯಗಳನ್ನು ಒಳಹೊಕ್ಕು ಕಂಡು ತನ್ನ ಕೃತಿಯಲ್ಲಿ ಕಲಾತ್ಮಕವಾಗಿ ಅಭಿವ್ಯಕ್ತಪಡಿಸುತ್ತಾನೆ. ಆದರೂ ಅಂದಂದಿನ ಸಾಮಾಜಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡುವವರಿಗೆ, ಸಾಹಿತ್ಯವು ವಿಶ್ವಸನೀಯವಾದ ಸಂಗತಿಗಳನ್ನು ಸೂಚಿಸುವ ಹಲವು ಆಕರಗಳಲ್ಲಿ ಒಂದು ಎಂಬುದನ್ನು ಮರೆಯಬಾರದು.

ಎರಡನೆಯ ಪ್ರಶ್ನೆ, ಸಾಹಿತಿಯ ಸಾಮಾಜಿಕಪ್ರಜ್ಞೆಯ ಅಭಿವ್ಯಕ್ತಿ, ಅವನು ತನ್ನ ಕೃತಿರಚನೆಗೆ ಆರಿಸಿಕೊಳ್ಳುವ ವಸ್ತುವಿನಮೇಲೆ ಅವಲಂಬಿತವಾಗಿರುತ್ತದೆಯೇ ಎನ್ನುವುದು. ಅಂದರೆ ಸಾಹಿತಿಯೊಬ್ಬನು ತನ್ನ ಸಮಕಾಲೀನನಾದ ಸಮಾಜದ ಸಂದರ್ಭದಿಂದ ವಸ್ತುವನ್ನೆತ್ತಿಕೊಂಡು ಬರೆಯುವಾಗ ಅವನ ಸಾಮಾಜಿಕಪ್ರಜ್ಞೆಯ ಅಭಿವ್ಯಕ್ತಿಗೆ ಇರುವ ಅನುಕೂಲ ಹಾಗೂ ಅವಕಾಶಗಳು, ಅವನು ಪ್ರಾಚೀನವಾದ ಪುರಾಣೇತಿಹಾಸಗಳಿಂದ ವಸ್ತುವನ್ನೆತ್ತಿಕೊಂಡು ಬರೆಯುವಾಗ ಇರುತ್ತವೆಯೆ ? ಹೀಗಾದಾಗ, ಪುರಾಣೇತಿಹಾಸಗಳನ್ನು ವಸ್ತುವನ್ನಾಗಿ ಮಾಡಿಕೊಳ್ಳಬೇಕಾದ ಪರಿಸ್ಥಿತಿಗೆ ಕಟ್ಟುಬಿದ್ದ ಹಿಂದಿನ ಸಾಹಿತಿಗಳು, ಆಧುನಿಕ ಕಾಲದ ಸಮಕಾಲೀನ ಲೇಖಕರಿಗಿಂತ ಕಡಿಮೆ ಸಾಮಾಜಿಕಪ್ರಜ್ಞೆಯನ್ನು ಪ್ರಕಟಿಸಿದ್ದಾರೆಂದೂ ಅಥವಾ ಇಂಥ ಪ್ರಾಚೀನ ವಸ್ತುಗಳನ್ನು ನಿರ್ವಹಿಸುವ ಯಾವ ಕಾಲದ ಲೇಖಕರೂ, ತಮ್ಮ ಸಮಕಾಲೀನ ಸಾಮಾಜಿಕ ಪ್ರಜ್ಞೆಯನ್ನು ಸಮರ್ಪಕವಾಗಿ ಪ್ರಕಟಿಸಲು ಸಾಧ್ಯವೇ ಆಗುವುದಿಲ್ಲವೆಂದೂ ಹೇಳಬಹುದೆ ?  ಈ ಸಂಶಯಕ್ಕೆ ನಮ್ಮ ಇಡೀ ಕನ್ನಡ ಸಾಹಿತ್ಯ ಪರಂಪರೆಯು ಸಾಕಷ್ಟು ಆಧಾರಗಳನ್ನು ಒದಗಿಸುತ್ತದೆ. ಪಂಪ ರನ್ನಾದಿ ಮಾರ್ಗ ಕವಿಗಳೂ, ಮತ್ತು ದೇಸೀ ಪರಂಪರೆಯಲ್ಲೂ,  ಪುರಾಣೇತಿಹಾಸಗಳನ್ನು ವಸ್ತುವನ್ನಾಗಿಸಿಕೊಂಡು ಬರೆದ ಇನ್ನಿತರ ಕವಿಗಳೂ, ತಮ್ಮ ಸಮಕಾಲೀನ ಸಮಾಜದ ಬಗ್ಗೆ ಅಂಥ ವಿಶೇಷವಾದ ಕಾಳಜಿಯನ್ನು ವಹಿಸಿದ್ದಾರೆಂದೂ, ಸಾಮಾಜಿಕಪ್ರಜ್ಞೆಯನ್ನು ಪ್ರಕಟಿಸಿದ್ದಾರೆಂದೂ ತೋರುವುದೇ ಇಲ್ಲವಲ್ಲ ! ಉದಾತ್ತ ವಸ್ತುಗಳನ್ನೂ, ಉದಾತ್ತ ವ್ಯಕ್ತಿಗಳನ್ನೂ, ಮಹಿಮಾಶಾಲಿಗಳಾದ ಅವತಾರ ಪುರುಷರನ್ನೂ ಕುರಿತು ಕೃತಿರಚನೆ ಮಾಡಿದ ನಮ್ಮ ಹಿಂದಿನ ಕವಿಗಳು ತಮ್ಮ ಸುತ್ತಣ ಸರಳ ಸಾಧಾರಣ ಬದುಕಿನ ಬಗೆಗೆ, ಸಾಮಾನ್ಯ ಜನದ ಬಗೆಗೆ, ತೋರಿರುವ ನಿರ್ಲಕ್ಷ್ಯ ಗಮನಿಸತಕ್ಕದ್ದಾಗಿದೆ. ರಾಜಾಧಿರಾಜರ ಭೋಗ ವಿಲಾಸ ವೈಭವಗಳ ಚಿತ್ರಣದಲ್ಲಾಗಲಿ, ಮತ್ತು ಅದಕ್ಕೆ ವಿರುದ್ಧವಾದ ತ್ಯಾಗ ವೈರಾಗ್ಯಶಾಲಿಗಳ ಮತ್ತು ಅವತಾರಪುರುಷರ ಪವಾಡಮಯ ನಡವಳಿಕೆಯಲ್ಲಾಗಲಿ ಯಾವ ಸಾಮಾಜಿಕ ಪ್ರಜ್ಞೆ ಪ್ರಕಟವಾಗಿದೆ? ಹಾಗೆಯೇ ಮಾರ್ಗಕವಿಗಳು ಬಳಸಿದ ಪ್ರೌಢವಾದ ಪಂಡಿತಭಾಷೆ ಯಾವಾಗಲಾದರೂ ಅಂದಿನ ಸಮಾಜದ ಸಹಜವಾದ ಸಂಪರ್ಕ ಮಾಧ್ಯಮವಾಗಿತ್ತೆಂದು ನಂಬಬಹುದೆ ? ಹೀಗಾಗಿ ಸುತ್ತಣ ಸಮಾಜದಿಂದ ತಾವೇ ಬೇರೆಯಾಗಿ ಯಾವುದೇ ಕೆಲವು ವಿಶಿಷ್ಟ ವರ್ಗದವರ ಮನಃಪ್ರೀತ್ಯರ್ಥವಾಗಿ ಅಥವಾ ತಾವು ಹುಟ್ಟಿದ ಮತಧರ್ಮಗಳನ್ನು ಮತ್ತು ಅದರ ಉದಾತ್ತ ತತ್ವಗಳನ್ನು ಪ್ರಚಾರ ಮಾಡುವ ಸಾಧನವಾಗಿ ಮಾತ್ರ ಕಾಣಿಸಿಕೊಳ್ಳುವ ಹಿಂದಿನ ಸಾಹಿತ್ಯ, ಸಾಮಾಜಿಕ ಪ್ರಜ್ಞೆಯನ್ನು ಪ್ರಕಟಿಸಿದೆ ಎಂದು ಒಪ್ಪುವುದಾದರೂ ಹೇಗೆ ?

ಈ ತರ್ಕವೇನೋ ಸ್ವಾರಸ್ಯವಾಗಿದೆ. ಆದರೆ ಅದು ಸಂಪೂರ್ಣವಾಗಿ ಸರಿ ಎಂದು ಒಪ್ಪಲಾಗುವುದಿಲ್ಲ. ಯಾಕೆಂದರೆ ಅದು ಸಾಹಿತ್ಯವೆಂದರೆ ಸಾಮಾಜಿಕ ಪ್ರಜ್ಞೆಯ ಅಭಿವ್ಯಕ್ತಿಯೇ-ಎಂಬ ಏಕಮುಖವಾದ ಧೋರಣೆಯನ್ನು ಪ್ರತಿಪಾದಿಸುತ್ತದೆ ಮತ್ತು ಸಾಹಿತ್ಯದ ಮೌಲಿಕತೆಯನ್ನು ಸಾಮಾಜಿಕಪ್ರಜ್ಞೆಯೊಂದರಿಂದಲೇ ನಿರ್ಣಯಿಸಲು ಹೊರಡುತ್ತದೆ. ಇಷ್ಟು ಮಾತ್ರ ನಿಜ, ಆಧುನಿಕ ಸಾಹಿತ್ಯಕ್ಕೆ ಇರುವ ಪ್ರಮಾಣದ ಸಾಮಾಜಿಕಪ್ರಜ್ಞೆ ಪ್ರಾಚೀನ ಸಾಹಿತ್ಯಕ್ಕೆ ಇರಲಿಲ್ಲ. ಅದಕ್ಕೆ ಅನೇಕ ಸಾಂಸ್ಕೃತಿಕವಾದ ಕಾರಣಗಳೂ, ಸಾಹಿತ್ಯದ ವಸ್ತುವಿನ ಆಯ್ಕೆಯಲ್ಲಾದ ಬದಲಾವಣೆಗಳೂ ಕಾರಣವಾಗಿವೆ. ಹಾಗೆಂದ ಮಾತ್ರಕ್ಕೆ ಹಿಂದಿನ ಸಾಹಿತ್ಯದಲ್ಲಿ, ಅದರ ಪರಿಮಿತಿಗಳೇನೇ ಇರಲಿ, ಸಾಮಾಜಿಕಪ್ರಜ್ಞೆ ಅಭಿವ್ಯಕ್ತವಾಗಿಯೇ ಇಲ್ಲವೆಂದು ಹೇಳಲಾಗುವುದಿಲ್ಲ. ಇದಕ್ಕೆ ಪಂಪನ ‘ವಿಕ್ರಮಾರ್ಜುನ ವಿಜಯ’ವೇ ಸಾಕ್ಷಿ. ನಯಸೇನನ ‘ಧರ್ಮಾಮೃತ’ವೇ ಸಾಕ್ಷಿ. ಮುಂದೆ ಹನ್ನೆರಡನೆಯ ಶತಮಾನದಲ್ಲಿ ನಡೆದ ವಚನಕಾರರ ಧಾರ್ಮಿಕ ಸಾಮಾಜಿಕ ವಿಚಾರ ಕ್ರಾಂತಿಯಿಂದ, ವಚನಾಭಿವ್ಯಕ್ತಿಯಲ್ಲಿ ತೆರೆಯುವ ಸಾಮಾಜಿಕ ಪ್ರಜ್ಞೆ ಆಶ್ಚರ್ಯಕರವಾಗಿದೆ. ಮುಂದಿನ ಅನೇಕ ಷಟ್ಪದಿ ಹಾಗೂ ಸಾಂಗತ್ಯ ಕೃತಿಗಳಲ್ಲಿ, ಅವುಗಳ ವಸ್ತು ಎಷ್ಟೇ ಉದಾತ್ತವಾದುದಾದರೂ ತಕ್ಕ ಮಟ್ಟಿನ ಸಾಮಾಜಿಕಪ್ರಜ್ಞೆ ಅಭಿವ್ಯಕ್ತವಾಗಿರುವುದನ್ನು ಗುರುತಿಸಬಹುದು. ಮೊದಲೇ ಹೇಳಿರುವ ಹಾಗೆ ಅಂದಂದಿನ ಸಾಹಿತ್ಯವು ಎಷ್ಟೆಷ್ಟರ ಮಟ್ಟಿಗೆ ತನ್ನ ಸುತ್ತಣ ಸಮಾಜದೊಂದಿಗೆ ಸಂಬಂಧವನ್ನು ಸ್ಥಾಪಿಸಿಕೊಳ್ಳತೊಡಗಿದೆಯೋ, ಅಷ್ಟಷ್ಟರಮಟ್ಟಿಗೆ ಅಂದಂದಿನ ಸಾಹಿತ್ಯದಲ್ಲಿ ಅದರ ಸಾಮಾಜಿಕ ಕಾಳಜಿಗಳನ್ನು ನಾವು ಗುರುತಿಸಬಹುದು. ಈ ದೃಷ್ಟಿಯಿಂದ ಇಡೀ ಕನ್ನಡ ಸಾಹಿತ್ಯ ಚರಿತ್ರೆಯೇ, ಸಾಮಾಜಿಕಪ್ರಜ್ಞೆ ಜಾಗೃತವಾಗುತ್ತ ಬಂದದ್ದರ ಚರಿತ್ರೆಯಾಗಿದೆ.

ಮೂರನೆಯ ಪ್ರಶ್ನೆ ‘ಸಾಮಾಜಿಕಪ್ರಜ್ಞೆ’ ಯೊಂದರಿಂದಲೇ, ಯಾವುದೇ ಸಾಹಿತ್ಯದ ನೆಲೆ-ಬೆಲೆಗಳನ್ನು ನಿರ್ಣಯಿಸುವುದು ಸಾಧ್ಯವೇ ? ಇದೊಂದು ಮೌಲಿಕವಾದ ಪ್ರಶ್ನೆ. ಸಾಮಾಜಿಕಪ್ರಜ್ಞೆಯೊಂದೇ, ಒಂದು ಕೃತಿಯ ಸಾಹಿತ್ಯ ಮೌಲ್ಯವನ್ನು ಅಳೆಯುವ ಮಾನದಂಡವಲ್ಲ.  ವ್ಯಕ್ತಿನಿಷ್ಠವಾದ ಭಕ್ತಿ ಸಾಹಿತ್ಯದಲ್ಲಾಗಲೀ, ಸೌಂದರ್ಯನಿಷ್ಠ ಭಾವಗೀತಗಳಲ್ಲಾಗಲೀ, ಸಾಮಾಜಿಕಪ್ರಜ್ಞೆಯನ್ನು ಕಾಣಲಾಗುವುದಿಲ್ಲವೆಂಬ ಕಾರಣದಿಂದ ಅವು ಸಾಹಿತ್ಯವೇ ಅಲ್ಲ ಅನ್ನಬಹುದೆ ? ಹರಿಹರನ ರಗಳೆಯ ಪಾತ್ರಗಳು, ವಾಸ್ತವವಾಗಿ ಸರಳ ಸಾಧಾರಣ ಸಾಮಾಜಿಕ ಸ್ತರಗಳಿಂದ ಬಂದವುಗಳಾದರೂ, ಅವುಗಳ ವ್ಯವಹಾರವೆಲ್ಲಾ ಅಲೌಕಿಕ ಸಾಧನೆಯ ಕಡೆಗೇ ಕೇಂದ್ರೀಕೃತವಾಗಿವೆ. ಪರಮಾತ್ಮನಾದ ಶಿವ ಹಾಗೂ ಭಕ್ತ ಇವರಿಬ್ಬರ ಖಾಸಗೀ ವ್ಯವಹಾರವೆಂಬಂತೆ ಅವರುಗಳ ನಡವಳಿಕೆಯಿಂದ ಭಾಸವಾಗುತ್ತದೆ. ಆದರೆ ಹರಿಹರನ ರಗಳೆಗಳನ್ನು ಸಾಮಾಜಿಕಪ್ರಜ್ಞೆಯಿಲ್ಲವೆಂಬ ಕಾರಣದಿಂದ, ಸಾಹಿತ್ಯವಲ್ಲವೆಂದು ತಳ್ಳಿಹಾಕುವುದು ಮೂರ್ಖತನವಾಗುತ್ತದೆ. ಹಾಗೆಯೇ ಕುವೆಂಪು ಅವರು ಬರೆದ ‘ರಾಮಾಯಣ ದರ್ಶನಂ’ದಲ್ಲಿ ಸಾಮಾಜಿಕಪ್ರಜ್ಞೆ ಇದೆಯೆ ಎಂದೂ ಪ್ರಶ್ನಿಸುವುದೂ ಅಷ್ಟೇ ತಪ್ಪು.  ಅರವಿಂದರ ‘ಸಾವಿತ್ರಿ’ಯಂತಹ ಮಹಾಕಾವ್ಯದಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಸಂಶೋಧಿಸಲು ಹೊರಡುವುದೂ ಇದೇ ರೀತಿಯದು. ಮೊದಲನೆಯದಾಗಿ, ಸಮಕಾಲೀನವಾದ ಸಾಮಾಜಿಕ ಸಂದರ್ಭದಿಂದ ವಸ್ತುವನ್ನಾರಿಸಿಕೊಂಡವರಲ್ಲಿಯೇ ಸಾಮಾಜಿಕಪ್ರಜ್ಞೆ ಇದೆ ಎಂದು ಭಾವಿಸುವುದೂ, ಇದರಿಂದ ಬೇರೆಯಾದ ವಸ್ತುಗಳನ್ನಾರಿಸಿಕೊಂಡವರಲ್ಲಿ ಸಾಮಾಜಿಕಪ್ರಜ್ಞೆ ಇಲ್ಲವೆಂದು ಸಾಧಿಸುವುದೂ ಸರಿಯಾದ ದೃಷ್ಟಿ ಅಲ್ಲ. ಎರಡನೆಯದಾಗಿ ಸಾಮಾಜಿಕಪ್ರಜ್ಞೆ ಎಂದರೆ, ತಾನು ಬದು ಕಿದ ಸುತ್ತಣ ಪರಿಸರದ ಸಾಮಾಜಿಕ ಸಂಗತಿಗಳನ್ನು ದಾಖಲೆಮಾಡುವ ಕೆಲಸ ಎಂದೂ ಅಲ್ಲ. ಕವಿಗೆ ಅಂದಿನ ಸಮಾಜವನ್ನೂ ಒಳಗೊಳ್ಳುವ, ಮತ್ತು  ಅದನ್ನೂ ವಿರಿದ ಸಮಗ್ರ ಬದುಕು ಮುಖ್ಯ. ಆ ಬದುಕನ್ನು, ಮತ್ತು ಅದಕ್ಕೆ ಹಿನ್ನೆಲೆಯಾದ ಯುಗಧರ್ಮವನ್ನು, ಮೌಲ್ಯಗಳನ್ನು ಸಾಂಸ್ಕೃತಿಕ ಸಂಘರ್ಷಗಳನ್ನು, ಕವಿ ಎಷ್ಟರಮಟ್ಟಿಗೆ ತನ್ನ ತೀವ್ರ ಸಂವೇದನೆಯಿಂದ ಕಾವ್ಯಾನುಭವವನ್ನಾಗಿ ಮಾಡಿಕೊಂಡಿದ್ದಾನೆ ಎಂಬುದನ್ನು ವಿಮರ್ಶಕರು ಗಮನಿಸಬೇಕು ; ಅದರ ಬದಲು ಒಂದು ಕಾವ್ಯದಲ್ಲಿ ಅಂದಂದಿನ ನಡವಳಿಕೆಗಳು, ಆ ಜನದ ವೇಷಭೂಷಣಗಳು, ಆಚಾರಗಳು, ಹಬ್ಬ ಹರಿದಿನಗಳು, ನಂಬಿಕೆಗಳು, ಸಮಸ್ಯೆಗಳು, ಇನ್ನೂ ಇಂಥ ಸಂಗತಿಗಳನ್ನು ಪಟ್ಟಿಹಾಕಿ ಸಂಶೋಧಿಸಿ, ಅದರಿಂದ ಮಾತ್ರ ಸಾಹಿತ್ಯದಲ್ಲಿನ ಸಾಮಾಜಿಕ ಪ್ರಜ್ಞೆಯನ್ನು ಗುರುತಿಸಲು ಹೊರಡುವುದು ಸಮರ್ಪಕವಾಗಲಾರದು. ಹಾಗೆ ನೋಡಿದರೆ ಯಾವುದೇ ಮಹತ್ವದ ಕವಿ ಕೃತಿ, ಅಂದಂದಿನ ಸಾಮಾಜಿಕ ಸಂದರ್ಭದಲ್ಲಿ ಉದ್ಭವಿಸುವುದರಿಂದ, ಅದು ಅಂದಿನ ಸಮಾಜದ ಆಶೋತ್ತರಗಳ ಪ್ರತಿನಿಧಿಯಾಗಿರುವುದು ಅನಿವಾರ್ಯ.

ಒಂದು ದೃಷ್ಟಿಯಿಂದ ನೋಡಿದರೆ ಸಾಮಾಜಿಕಪ್ರಜ್ಞೆ ವ್ಯಕ್ತಿ ವಿಶಿಷ್ಟವಾದದ್ದು ಮತ್ತು ಒಬ್ಬ ಕವಿಯಿಂದ ಮತ್ತೊಬ್ಬ ಕವಿಗೆ ವ್ಯತ್ಯಾಸ ಹೊಂದತಕ್ಕದ್ದು. ರಾಜಾಸ್ಥಾನದಂತಹ ವ್ಯವಸ್ಥೆಯೊಳಗಿನ ಕವಿಯ ಸಾಮಾಜಿಕಪ್ರಜ್ಞೆಗೂ ಅದರಿಂದಾಚೆಗೆ ನಿಂತ ಕವಿಗಳ ಸಾಮಾಜಿಕಪ್ರಜ್ಞೆಗೂ ಖಂಡಿತ ವ್ಯತ್ಯಾಸವಿದೆ. ಮಾರ್ಗ ಕವಿಗಳಾದ ಪಂಪ-ರನ್ನರ ಮತ್ತು ವಚನಕಾರರ, ಪಂಪರ-ರಾಘವಾಂಕರ ಕೃತಿಗಳನ್ನು ಹೋಲಿಸಿ ನೋಡಿದರೆ ಈ ಮಾತಿನ ಸತ್ಯ ಗೋಚರವಾಗುತ್ತದೆ. ಕೇವಲ ನಗರಗಳಲ್ಲಿ ಬದುಕುವ ಲೇಖಕರ ಸಾಮಾಜಿಕಪ್ರಜ್ಞೆಗೂ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬದುಕಿದ ಅಥವಾ ಬದುಕುವ ಲೇಖಕರ ಸಾಮಾಜಿಕಪ್ರಜ್ಞೆಗೂ ವ್ಯತ್ಯಾಸಗಳಿವೆ. ಹಾಗೆಯೇ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು, ಆನಂತರ ವಿದೇಶಗಳಲ್ಲಿ ನೆಲಸಿ ತಮ್ಮ ಹಳೆಯ ನೆನಪುಗಳ ಆಧಾರದ ಮೇಲೆ ಕೃತಿರಚನೆ ಮಾಡುವ ಲೇಖಕರ ‘ಸಾಮಾಜಿಕಪ್ರಜ್ಞೆ’ ಯಾವುದು? ಒಂದೇ ಸಾಮಾಜಿಕ ಪರಿಸರದಲ್ಲಿ ಬದುಕುವ ಹಲವು ಜನ ಲೇಖಕರೂ ಒಂದೇ ರೀತಿಯ ಸಾಮಾಜಿಕಪ್ರಜ್ಞೆಯನ್ನು ಪ್ರಕಟಿಸುವರೆಂದು ಹೇಳಲಾಗುವುದಿಲ್ಲ. ಯಾಕೆಂದರೆ, ಆಯಾ ಸಾಹಿತಿಗಳ ದೃಷ್ಟಿ, ಧೋರಣೆ, ಅಭಿರುಚಿ ಮತ್ತು ತಮ್ಮ ಸುತ್ತಣ ಬದುಕನ್ನು ತಮ್ಮ ಅನುಭವದ ತೆಕ್ಕೆಯೊಳಕ್ಕೆ ತೆಗೆದುಕೊಳ್ಳುವ ಸಾಮರ್ಥ್ಯ, ಇವೆಲ್ಲವೂ ಅವರವರ ಸಾಮಾಜಿಕಪ್ರಜ್ಞೆಯನ್ನು ನಿಯಂತ್ರಿಸುತ್ತವೆ.

ಪ್ರತಿಕ್ರಿಯೆ-೧೯೮೨