ಇಂದು (೩೦-೧-೧೯೮೭) ಸತ್ಯಾಗ್ರಹದ ದಿನ. ಇದು ಸತ್ಯಾಗ್ರಹದ ನೆಲ, ಕರನಿರಾಕರಣೆ, ಸವಿನಯ ಕಾಯ್ದೆ ಭಂಗ, ಅಸಹಕಾರ, ವೈಯಕ್ತಿಕ ಸತ್ಯಾಗ್ರಹ ಮತ್ತು ‘ಭಾರತ ಬಿಟ್ಟು ತೊಲಗಿ’ ಚಳುವಳಿಗಳಲ್ಲಿ ಭಾಗವಹಿಸಿ, ದೇಶಕ್ಕಾಗಿ ಜೀವದಾನ ನೀಡಿದ ಮಹನೀಯರೆಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸುವುದು ನಮ್ಮ ಕರ್ತವ್ಯ. ಸ್ವಾತಂತ್ರ್ಯಾಂದೋಲನದ ಈ  ಚಿತ್ರವನ್ನು ನಮ್ಮ ಕಣ್ಣೆದುರಿಗೆ ತಂದುಕೊಂಡಾಗ ಅಲ್ಲಿಯ ಉದ್ದೇಶ ಆದರ್ಶಗಳ ನೆನಪು ಮಾಡಿಕೊಂಡಾಗ, ಅಂದು ಮತ್ತು ಇಂದಿನ ಸಾಮಾಜಿಕ ರಾಜಕೀಯ ಪರಿಸ್ಥಿತಿಯ ವಿವೇಚನೆ ಸಾಧ್ಯವಾಗುತ್ತದೆ. ಈ ದಿಶೆಯಲ್ಲಿ ಇವತ್ತಿನ ಈ ಅವಕಾಶ ಒಂದು ಅಲ್ಪ ಪ್ರಯತ್ನ.

ಬ್ರಿಟೀಷ್ ಆಡಳಿತ ಪ್ರಾರಂಭವಾದ ಮೊದಲ ನೂರು ವರ್ಷಗಳು (೧೭೫೭-೧೮೫೭) ಒಂದು ಲೆಕ್ಕದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಆಡಳಿತ. ಆದರೆ ಆರ್ಥಿಕವಾಗಿ ರಾಜಕೀಯವಾಗಿ ಭಾರತದ ಮೇಲಿನ ಅಧಿಕಾರವನ್ನು ಬ್ರಿಟೀಷ್ ಸರ್ಕಾರ ಬಲಪಡಿಸಿ, ಭದ್ರವಾಗಿಸಲು ನಡೆಸಿದ ವ್ಯವಸ್ಥೆಯಿಂದಾಗಿ ಕಾಲಕಾಲಕ್ಕೆ ತೀವ್ರವಾದ ಪ್ರತಿಕ್ರಿಯೆ, ಪ್ರತಿಭಟನೆ, ಹೋರಾಟಗಳೂ ಅಲ್ಲಲ್ಲಿ ನಡೆದು ಹ್ತಿಕ್ಕಲ್ಪಟ್ಟರೂ, ಅವೆಲ್ಲವೂ ತುತ್ತತುದಿಗೆ ಮುಟ್ಟಿದ್ದು ೧೮೫೭ ರಲ್ಲಿ ಇದನ್ನು ಸಿಪಾಯಿಗಳ ದಂಗೆಯೆಂದೋ, ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮವೆಂದೋ ಚರಿತ್ರಕಾರರು ವರ್ಣಿಸಿದರೂ ಅದು ಬರೀ ದಂಗೆಯೂ ಅಲ್ಲ, ಸ್ವಾತಂತ್ರ್ಯಕ್ಕಾಗಿ ನಡೆದ ಸ್ಪಷ್ಟ ಸಂಗ್ರಾಮವೂ ಅಲ್ಲ. ಬ್ರಿಟೀಷ್ ರಾಜಸತ್ತೆಯಿಂದ ಬಿಡುಗಡೆ ಹೊಂದಬೇಕೆಂಬ ಪ್ರಾಮಾಣಿಕ ಪ್ರಯತ್ನ ವಿವಿಧ ಮುಖವಾಗಿ ಉದ್ದಕ್ಕೂ ಕಂಡು ಬಂದಿದೆ. ಆದರೆ ಸ್ವಾತಂತ್ರ್ಯದ ಸ್ಪಷ್ಟ ಕಲ್ಪನೆ ಇಲ್ಲದೆ, ಅಳಿದು ಹೋದ ಮರಾಠಾ, ಮೊಗಲ್, ಮತ್ತಿತರ ಅರಸರ ನೆನಪುಗಳು ಅಚ್ಚಳಿಯದೇ ಇದ್ದುದರಿಂದಲೂ, ಆ ಸಂಕೇತಗಳ ಹೆಸರಿನಲ್ಲೇ ಹೋರಾಟ ನಡೆಸಿದ್ದರಿಂದಲೂ, ೧೮೫೭ ಬ್ರಿಟೀಷರಿಂದ ಬಿಡುಗಡೆ ಹೊಂದುವ ಒಂದು ಪ್ರಯತ್ನದ ಮುಕ್ತಾಯ ಎಂದೇ ಹೇಳಬೇಕು. ಬ್ರಿಟೀಷ್‌ರಿಗೆ ಬದಲು ಏನು ಎನ್ನುವ ಪ್ರಶ್ನೆ ಅಲ್ಲಿ ಸ್ಪಷ್ಟವೂ ಇಲ್ಲ ಉದ್ಭೂತವೂ ಆಗಿರಲಿಲ್ಲ.

೧೮೫೮ ರಿಂದ ಆರಂಭವಾದ ನೇರವಾದ ಬ್ರಿಟೀಷ್ ಸರ್ಕಾರಿ ಆಡಳಿತವು ಭಾರತವನ್ನು ಸಮಗ್ರವಾಗಿ ಒಂದು ವಸಾಹತು ಎಂದು ಪರಿಗಣಿಸಿ ಆ ದೃಷ್ಠಿಯಿಂದಲೇ ಅದರ ರಾಜಕೀಯ ವ್ಯವಸ್ಥೆಯನ್ನು ರೂಪಿಸಿಕೊಂಡು ಬಂದ ಪ್ರಯತ್ನವಾಯಿತು. ಇಂಗ್ಲಿಷ್ ಶಿಕ್ಷಣದ ಪರಿಣಾಮ ಆ ಮೂಲಕವಾಗಿ ಸ್ವಾತಂತ್ರ್ಯ ಸಮತೆ ಸೌಹಾರ್ದತೆಗಳ ಆದರ್ಶಗಳನ್ನು ಅರಗಿಸಿಕೊಂಡು ಬ್ರಿಟೀಷ್ ಸಾರ್ವಭೌಮತ್ವದಲ್ಲಿ ದೃಢವಾದ ಶ್ರದ್ಧೆಯನ್ನು ಬೆಳೆಸಿಕೊಂಡು ಒಂದು ಜನಾಂಗವೇ ಸಿದ್ಧವಾಯಿತು ಎಂದರೂ ತಪ್ಪಲ್ಲ; ನಮ್ಮ ದೇಶದಲ್ಲಿ ಬಂಗಾಲ, ಮುಂಬಯಿ ಮತ್ತು ಮದ್ರಾಸ ಆಧಿಪತ್ಯಗಳಲ್ಲಿ ಈ ಪ್ರಭಾವ ಕಂಡು ಬಂದಿತು. ನ್ಯಾಯಾನ್ಯಾಯಗಳ ಅರಿವು ಈ ಸುಶಿಕ್ಷಿತರಿಗೆ ಆಗತೊಡಗಿದಾಗ ಅಧಿಕಾರದಲ್ಲಿ ನಮಗೂ ಒಂದು ಅವಕಾಶಬೇಕು ಎನ್ನುವ ಭಾವನೆ ಬೆಳೆದು ಬರುವುದು ಅನಿವಾರ್ಯ. ಇಂಗ್ಲಿಷ್ ಶಿಕ್ಷಣವನ್ನು ಅರಗಿಸಿಕೊಂಡ ಭಾರತೀಯರಿಗೆ ಕೆಳದರ್ಜೆಯ ಹುದ್ದೆಗಳು ಮತ್ತು ಅದೇ ದರ್ಜೆಯ ಹುದ್ದೆಯಲ್ಲೂ ಕೆಳಮಟ್ಟದ ಅವಕಾಶಗಳು (ಸಂಬಳ, ಸಾರಿಗೆ) ದೊರೆತಾಗ ವರ್ಣ ಭೇದ ನೀತಿಯೂ ಸ್ಪಷ್ಟವಾಯಿತು. ಸ್ವತಂತ್ರವಾಗಿ ಅಭಿಪ್ರಾಯ ಪ್ರಕಟಣೆಗೆ ತಡೆ ಬಂದಾಗ ಆಡಳಿತ ಕೊರತೆಗಳು ಅಸಮತೆಯ ಪರಿಸ್ಥಿತಿಯೂ ಅವುಗಳನ್ನು ನಿವಾರಿಸುವ ಮತ್ತು ಅಭಿಪ್ರಾಯ ಸ್ವಾತಂತ್ರ್ಯವನ್ನು ಸಮರ್ಥಿಸುವ ಪ್ರಯತ್ನದ ಫಲವಾಗಿ, ಮೊದಲು ತಲೆ ದೋರಿದ್ದು ರಾಷ್ಟ್ರೀಯ ಪರಿಷತ್ತು. ಆಡಳಿತ ಸಭೆಗಳಲ್ಲಿ ಪ್ರಾತಿನಿಧ್ಯ, ತಾಂತ್ರಿಕ ಶಿಕ್ಷಣ, ಕಾಯಾಂಗದಿಂದ ನ್ಯಾಯಾಂಗದ ಬೇರ್ಪಡೆ ಮತ್ತು ಸಾರ್ವಜನಿಕ ಸೇವೆಯಲ್ಲಿ ನೇಮಕಾತಿ ಇವುಗನ್ನು ಸ್ಪಷ್ಟವಾಗಿ ದೇಶದ ಮುಂದಿಡಲು ಮೊದಲು ಪ್ರಯತ್ನ. ಸ್ಥಾನಿಕ ಸ್ವರಾಜ್ಯ ಸಂಸ್ಥೆಗಳು ತಲೆದೋರಿದಾಗ ಭಾರತೀಯರಿಗೆ ದೊರೆತ ಅವಕಾಶ ಇನ್ನಷ್ಟು ಹೆಚ್ಚಿಸಿಕೊಳ್ಳಬೇಕೆಂಬ ಹಂಬಲವುಂಟಾಯಿತು. ೧೮೮೫ ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ಸು ಪ್ರಾರಂಭವಾದಾಗ ಇದೇ ಉದ್ದೇಶಗಳನ್ನು ಪ್ರಾತಿನಿಧಿಕವಾಗಿ ಸಮಗ್ರವಾಗಿ ಮಂಡಿಸುವ ಒಂದು ರಾಜಕೀಯ ವ್ಯವಸ್ಥೆ ಅವಶ್ಯವೆಂದು ಕಂಡು ಬಂದಿತು. ಈ ರಾಷ್ಟ್ರೀಯತೆಯ ರಾಜಕೀಯ ಧ್ಯೇಯಕ್ಕೆ ಪ್ರಾಧಾನ್ಯತೆ ದೊರೆಯಿತು. ಪ್ರಾರಂಭದಲ್ಲಿ ಸಾಮಾಜಿಕವಾಗಿ ನಾವು ಸುಧಾರಿಸದ ವಿನಃ ರಾಜಕೀಯ ವ್ಯವಸ್ಥೆ ನಮಗೆ ಬೇಕಾದಂತೆ ರೂಪಿಸಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯಗಳಿದ್ದರೂ, ಆ ದಿಶೆಯಲ್ಲಿ  ಕಾಂಗ್ರೆಸ್ಸಿನಲ್ಲಿ ಪ್ರಯತ್ನಗಳು ನಡೆದರೂ, ಕೊನೆಗೆ ಕೇವಲ ರಾಜಕೀಯ ಸಂಸ್ಥೆಯಾಗಿ ಅದು ಪರಿವರ್ತನೆಗೊಳ್ಳುವುದು ಅನಿವಾರ್ಯವಾಯಿತು.

ಈ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಬ್ರಿಟೀಷ್ ಅಡಳಿತದ ಕ್ರಮದಲ್ಲಿ ಉದ್ದೇಶದಲ್ಲಿ ವಿಶ್ವಾಸವಿಟ್ಟು ಉದಾರ ಮತವಾದದಲ್ಲಿ ಶ್ರದ್ಧೆಯಲ್ಲಿಟ್ಟ ಮುಖಂಡರೇ ಹೆಚ್ಚಾಗಿದ್ದುದರಿಂದ ಪ್ರಾರ್ಥನೆ, ಮನವಿ, ಗೊತ್ತುವಳಿಗಳ ಮೂಲಕ ಭಾರತೀಯರಿಗೆ ಸವಲತ್ತುಗಳನ್ನು ಪಡೆಯುವ ವಾರ್ಷಿಕ ವೇದಿಕೆಯಾಗಿ ಅವು ಮುಂದುವರಿಯಿತೇ ಹೊರತು ಪ್ರಬಲವಾದ ಬದಲೀ ವ್ಯವಸ್ಥೆಯ ಸಂಘಟನೆಯಾಗಲಿಲ್ಲ ೧೯೦೦ ರಿಂದ ಅಂದಿನ ಜಾಗತಿಕ ರಾಜಕೀಯದಲ್ಲಿ ಏಶಿಯಾದ ಮೇಲುಗೈಯಾಗಿ ಅನ್ಯಾಯಗಳ ಪ್ರತಿಭಟನೆಗೆ ಇನ್ನಿತರ ಕಾರ್ಯಕ್ರಮಗಳು ಅವಶ್ಯವಾಗಿ ಕಂಡು ಬಂದಾಗ, ಭಾರತದಲ್ಲಿ ಲಾರ್ಡ ಕರ್ಜನ್ನರ  ಆಡಳಿತವು ಅದಕ್ಕೆ ತಕ್ಕ ಆಹಾರವನ್ನು ಒದಗಿಸಿತು. ಬಂಗಾಲದ ವಿಭಜನೆ ಅಥವಾ ವಂಗಭಂಗ ದೇಶವನ್ನೇ ಬಡಿದೆಬ್ಬಿಸಿ ಎಚ್ಚರಿಸಿದಂತಹ ಒಂದು ಕ್ರಮ. ಅಲ್ಲಿಯವರೆಗೆ ಸ್ವಾತಂತ್ರ್ಯದ ಕಲ್ಪನೆಯೆಂದರೆ ಬ್ರಿಟೀಷ್ ಸಾರ್ವಭೌಮತ್ವದ ಅಡಿಯಲ್ಲಿ ವಸಾಹತುಗಳು ಪಡೆದುಕೊಳ್ಳುವ ಒಂದು ರೀತಿಯ ಸ್ವಾಯತ್ತತೆ ಮಾತ್ರ .ಆದರೆ ವಂಗಭಂಗದ ಪರಿಣಾಮವಾಗಿ ಎದ್ದ ಅಲೆಗಳು ಅನೇಕ ಸಂಘಟಿತವಾದ ಶಕ್ತಿಗಳು ಆಂದೋಲನವನ್ನೇ ಪ್ರಾರಂಭಿಸಿದವು. ಸ್ವರಾಜ್ಯಕ್ಕಾಗಿ, ಸ್ವದೇಶಕ್ಕಾಗಿ, ರಾಷ್ಟ್ರೀಯ ಶಿಕ್ಷಣಕ್ಕಾಗಿ ಸರ್ಕಾರ ಒಪ್ಪದಿದ್ದರೆ ಅಸಹಕಾರದ ಮಂತ್ರ, ಅಹಿಂಸೆಯ ಮಾರ್ಗ ಪರಿಣಾಮಕಾರಿಯಾಗದಿದ್ದರೆ ಹಿಂಸೆಯ ಮಾರ್ಗ ಇವೆಲ್ಲವೂ ೨೦ನೇ ಶತಮಾನದ ಮೊದಲ ದರ್ಶಕದಲ್ಲಿ ಸ್ಪಷ್ಟವಾಗಿ ಬೆಳಕಿಗೆ ಬಂದವು.

ಸ್ವಾತಂತ್ರ್ಯಾಂದೋಲನ ವಂಗಭಂಗದಿಂದ ಪ್ರಾರಂಭ. ಸ್ವಾತಂತ್ರ್ಯ ಒಂದು ನಿರ್ದಿಷ್ಟವಾದ ಧ್ಯೇಯವಾಗಿ ಬದಲೀ ವ್ಯವಸ್ಥೆಯ ಆದರ್ಶವಾಗಿ, ಆಂದೋಲನದ ಘೋಷಣೆಯಾಗಿ ರೂಪುಗೊಂಡಿದ್ದು ಈ ಕಾಲದಲ್ಲಿ. ಇಲ್ಲಿಂದ ೧೯೪೨ ರ ವರೆಗೂ ಅಂದೋಲನದ ನಾನಾ ಸ್ವರೂಪಗಳನ್ನು ಕಾಣುತ್ತೇವೆ. ಈ ಅವಧಿಯಲ್ಲಿ ಹಳೆ, ಹೊಸ ಧುರೀಣತ್ವದ ಉದಾಯ ಮತವಾದಿಗಳ, ತೀವ್ರವಾದಿಗಳ ಸಂಘರ್ಷ ಸಹಕಾರ-ಅಸಹಕಾರಗಳ ಚರ್ಚೆ-ವಿಚರ್ಚೆಗಳು, ಚಳುವಳಿ-ಪ್ರಯೋಗಗಳು ಜಾತೀಯ ದಂಗೆ-ಅವುಗಳ ಪರಿಹಾರಕ್ಕೆ ಪ್ರಯತ್ನಗಳು, ಶಾಸನಸಭೆಯ ಪ್ರಾತಿನಿಧ್ಯದ ವಿಸ್ತಾರ, ಅರ್ಧ ಹೊಣೆಗಾರಿಕೆಯ ಪ್ರಾಂತಿಕ ಸ್ವಾಯತ್ತತೆಗಳ ಪ್ರಯೋಗ, ಪೂರ್ಣ ಹೊಣೆಗಾರಿಕೆಯ ಪ್ರಾಂತಿಕ ಆಡಳಿತ ವ್ಯವಸ್ಥೆ ಎಲ್ಲವೂ ನಡೆದವು.

ಈ ಹಿನ್ನೆಲೆಯಲ್ಲಿ ಈ ಆಂದೋಲನದ ಕಾಲದ ಮೌಲ್ಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. “If you with to cast the horoscope of Nation, follow its leaders across the threshold of their homes” (ಒಂದು ದೇಶದ ಜಾತಕ ಬರೆಯುವುದಿದ್ದರೆ ಆ ದೇಶದ ಮುಖಂಡರು ತಮ್ಮ ಮನೆಯ ಹೊರಗೆ ಏನೆಲ್ಲ ನಡೆಸಿದ್ದಾರೆ ಎಂಬುದನ್ನು ನೋಡಿ) ಎಂದು ಲಾರ್ಡ ಬ್ರ್ಯಾಯ್ಸ ಹೇಳಿದ ಮಾತು ನೆನಪಾಗುತ್ತದೆ. ಆದ್ದರಿಂದ ಅಂದಿನ ಧುರೀಣರು ಕಾಲಕಾಲಕ್ಕೆ ವ್ಯಕ್ತಪಡಿಸಿದ ಆದರ್ಶ ಮತ್ತು ಆಶಯಗಳ ಹಿನ್ನೆಲೆಯಲ್ಲಿ ನಾವು ಮೌಲ್ಯಗಳ ವಿವೇಚನೆ ಮಾಡಿದರೆ ಅರ್ಥಪೂರ್ಣವಾದೀತು.

ಅಂದು: ಈ ದಿಶೆಯಲ್ಲಿ ಮೊಟ್ಟ ಮೊದಲು ನಮ್ಮೆದುರು ನಿಲ್ಲುವುದು ದಾದಾಭಾಯಿ ನವರೋಜಿ (೧೮೧೫-೧೯೧೭) ಯವರ ಚಿತ್ರ. ೧೯ನೇ ಶತಮಾನದಲ್ಲಿ ಅವರಷ್ಟು ವೈವಿಧ್ಯಮಯವಾಗಿ ಭಾರತವನ್ನು ಪ್ರತಿನಿಧಿಸಿದ ವ್ಯಕ್ತಿ ಬೇರೊಬ್ಬರಿಲ್ಲ. ಕಾಂಗ್ರೆಸ್ ಜನಕರಲ್ಲಿ ಅವರೊಬ್ಬರು. ೧೮೮೬, ೧೮೯೩ ಮತ್ತು ೧೯೦೬ ರಲ್ಲಿ ಕಾಂಗ್ರೆಸ್ಸ್ ಮಹಾಸಭೆಗಳ ಅಧ್ಯಕ್ಷರಾದ ಈ ವ್ಯಕ್ತಿ ಭಾರತದಲ್ಲಿ ಶಾಸನಸಭೆಯ ಸದಸ್ಯರಾಗಿ, ಪಾರ್ಲಿಮೆಂಟಿನ ಸದಸ್ಯತ್ವವನ್ನು ಪಡೆಯುವಲ್ಲಿ ಯಶಸ್ವಿಗಳಾಗಿ ಭಾರತದ ಬಡತನಕ್ಕೆ ಬ್ರಿಟೀಷ್ ಆಡಳಿತವೇ ಕಾರಣ ಎನ್ನುವುದನ್ನು ಸಮರ್ಥವಾಗಿ ಎತ್ತಿ ತೋರಿಸಿದರು. ಕೊನೆಗೆ ಸ್ವರಾಜ್ಯವೊಂದೇ ಭಾರತಕ್ಕೆ ದಾರಿ ಎಂದು ಸಾರುಚಲ್ಲಿಯವರೆಗೆ ಕಾಂಗ್ರೆಸ್ಸಿನ ಮುಂದಿನ ಕಾರ್ಯಕ್ರಮಗಳಿಗೆ ಒಂದು ನಿರ್ದಿಷ್ಟ ಧ್ಯೇಯದ ಸ್ವರೂಪ ಕೊಡುವಲ್ಲಿಯವರೆಗೆ ಯಶಸ್ವಿಗಳಾದರು. ಆ ಸ್ವರಾಜ್ಯದ ಸಂದೇಶದಲ್ಲಿ “ಐಕ್ಯತೆಯಿಂದಿರಿ ಸತತ ಪ್ರಯತ್ನಮಾಡಿ, ಆರತದಲ್ಲಿ ಹೊಟ್ಟೆಗಿಲ್ಲದೇ ಕ್ಷಾಮ ಪೀಡಿತರಾಗಿ ರೋಗ ಪೀಡಿತರಾಗಿ ಬಲಿಯಾಗುತ್ತಿರುವ ಲಕ್ಷಾಂತರ ಮಂದಿಯನ್ನು, ಅರೆಹೊಟ್ಟೆ ತಿಂದು ಹೇಗೋ ಜೀವ ಹಿಡಿದು ನಿಂತಿರುವ ಲಕ್ಷಾಂತರ ಜನರನ್ನು ಕಾಪಾಡಲು ಸ್ವತಂತ್ರ ಸ್ವಯಂ ಆಡಳಿತವನ್ನು ಸಾಧಿಸಿ ಭಾರತವು ಹಿಂದಿನಂತೆಯೇ ಅತಿ ಶ್ರೇಷ್ಠ ಸುಸಂಸ್ಕೃತ ರಾಷ್ಟ್ರಗಳ ಪಕ್ತಿಯಲ್ಲಿ ಮೆರೆಯುವಂತೆ ಸತತ ಪ್ರಯತ್ನ ನಡೆಸಿ” ಎಂದು ಸಾರಿದರು. ೧೯೦೬ ರಲ್ಲಿ ಬಡತನದ ಪ್ರಶ್ನೆಯನ್ನು ಮೊಟ್ಟ ಮೊದಲು ಎತ್ತಿ ಅದನ್ನು ಸಕಾರಣವಾಗಿ ವಿವರಿಸಿ ಪರಿಹಾರವನ್ನು ಆರ್ಥಿಕವಾಗಿ ರಾಜಕೀಯವಾಗಿ ಸೂಚಿಸಿದ ನವರೋಜಿಯವರ ಕಾರ್ಯ ಇಂದಿಗೂ ಆದರ್ಶಮಯ.

ಇದೇ ಸಮಯದಲ್ಲಿ ಪಶ್ವಿಮ ಭಾರತದಲ್ಲಿ ಇನ್ನಿಬ್ಬರು ಮುಖಂಡರು ಸ್ವಾತಂತ್ರ್ಯದ ಆದರ್ಶವನ್ನು ಸ್ವರಾಜ್ಯದ ಹಿರಿಮೆಯನ್ನು ಅದಕ್ಕಾಗಿ ಅವಶ್ಯವಿರುವ ಪ್ರಜಾಸತ್ತೆಯ ಮೌಲ್ಯವನ್ನು ತಮ್ಮ ಜೀವನ ಕ್ರಮದಲ್ಲಿಯೇ ತೋರಿಸಿಕೊಟ್ಟ ಆದರ್ಶಪ್ರಾಯರಾದರು. ಅವರೆಂದರೆ ಗೋಪಾಲಕೃಷ್ಣ ಗೋಖಲೆ ಮತ್ತು ಬಾಲಗಂಗಾಧರ ಟಿಳಕ. ಇಬ್ಬರೂ ಪುಣೆಯಲ್ಲಿ ಕಾರ್ಯಾರಂಭ ಮಾಡಿದರೂ, ಇಬ್ಬರ ದಾರಿಗಳೂ ಬೇರೆ ಬೇರೆ ದಾರಿಗಳಾಗಿ ಕವಲೊಡೆದರೂ, ಕೆಲವೊಂದು ಸಲ ಪರಸ್ಪರ ವಿರೋಧಿಗಳೋ ಎಂಬಂತೆ ಸಾರ್ವಜನಿಕರಿಗೆ ಅನ್ನಿಸಿದರೂ ಭಾರತದ ಭವಿಷ್ಯದ ಬಗ್ಗೆ ಅವರವರು ನಡೆಸಿದ ಪ್ರಾಮಾಣಿಕ ಪ್ರಯತ್ನ ಯಾವ ವೈಯಕ್ತಿಕ ದ್ವೇಷ ವಿರೋಧಗಳಿಗೂ ಅವಕಾಶ ಕೊಡದೇ ಮುಂದುವರಿದದ್ದು ಮಹತ್ವದ ಚಾರಿತ್ರಿಕ ಸಂಗತಿ.

ಗೋಪಾಲಕೃಷ್ಣ ಗೋಖಲೆ ಶಿಕ್ಷಕರಾಗಿ, ಶಾಸನಸಭೆಯ ಪ್ರತಿನಿಧಿಗಳಾಗಿ ರಾಜಕೀಯವನ್ನು ಗಂಭೀರವಾಗಿ ಪರಿಗಣಿಸಿದ ವ್ಯಕ್ತಿ. ಬ್ರಿಟೀಷ್ ಉದಾರ ಮತವಾದಿಗಳಲ್ಲಿ ಅವರಿಗೆ ಅಚಲ ವಿಶ್ವಾಸ. ಬ್ರಿಟೀಷ್ ಆಡಳಿತ ವ್ಯವಸ್ಥೆಯಲ್ಲಿ ನಂಬುಗೆ. ಅದರ ಕೊರತೆಯನ್ನು ಕಾಲಕಾಲಕ್ಕೆ ಬಯಲಿಗೆಳೆದು ಭಾರತೀಯರ ಬಗ್ಗೆ ಅವರ ಹೊಣೆಗಾರಿಕೆಯನ್ನು ಎತ್ತಿ ತೋರಿಸುವ ಪ್ರಯತ್ನವನ್ನು ಉದ್ದಕ್ಕೂ ಗೋಖಲೆಯವರು ಮಾಡಿದರು. ಅವರ ಸಹಕಾರಿ ಧೋರಣೆ ನಿರ್ದಿಷ್ಟವಾದ ಪರಿಣಾಮಗಳನ್ನು ತರದಿದ್ದರೂ, ಸಾರ್ವಜನಿಕ ಸೇವೆ ನೀತಿಯುತವಾಗಿರಬೇಕು; ಸಾಕಷ್ಟು ಸಂಖ್ಯೆಯಲ್ಲಿ ಜನ ಮುಂದೆ ಬಂದು ದೇಶ ಸೇವೆಗೆ ಧಾರ್ಮಿಕ ಭಾವನೆಯಿಂದ ತೊಡಗೇಕು; ಸಾರ್ವಜನಿಕ ಜೀವನ ಆಧ್ಯಾತ್ಮಕವಾಗಬೇಕು ಎನ್ನುವ ಧ್ಯೇಯವನ್ನು ಅವರು ಸಾರಿದರು.

ಸ್ವರಾಜ್ಯದ ಆದರ್ಶವನ್ನು ಅವರು ಎತ್ತಿಹಿಡಿದರು. ಸ್ವದೇಶಿಯ ಕಾರ್ಯಕ್ರಮವನ್ನು ಒಪ್ಪಿಕೊಂಡರು. ಆದರೆ ಅದಕ್ಕಾಗಿ ವಿದೇಶಿ ವಸ್ತುಗಳ ಬಹಿಷ್ಕಾರಕ್ಕೆ ಸಿದ್ಧರಾಗಲಿಲ್ಲ. ಅಸಹಕಾರದ ಕ್ರಮ ಕೊನೆಯ ಅಸ್ತ್ರ ಎಂದರು. ಗೋಖಲೆಯವರ ಸಾವ್ವಜನಿಕ ಜೀವನದಲ್ಲಿ ಸತ್ಯಕ್ಕೆ ಗೌರವ, ನೈತಿಕ ಧೈರ್ಯ, ದೇಶ ಸೇವೆಯ ಆದರ್ಶಕ್ಕೆ ಸ್ವಾರ್ಥರಹಿತ ಸೇವೆ, ಕೂಡಲೇ ಕೈಗೊಳ್ಳಬೇಕಾದ ಕ್ರಮದಲ್ಲಿ ವಾಸ್ತವಿಕ ದೃಷ್ಟಿ ಇವುಗಳನ್ನು ಸ್ಪಷ್ಟವಾಗಿ ಕಾಣುತ್ತೇವೆ. ಟಿಳಕರಂತೆ ಅವರು ಚಾಣಾಕ್ಷರಲ್ಲ, ಗಾಂಧೀಜಿಯವರಂತೆ ತಂತ್ರವಿಧಾನಗಳ ಬಗ್ಗೆ ಅಷ್ಟಾಗಿ ಆಲೋಚಿಸಿದವರಲ್ಲ. ಆದರೆ, ಧರ್ಮದ ನಿಜವಾದ ತಿರುಳನ್ನು ಕಂಡು ಬಾಳಿದ ವ್ಯಕ್ತಿ. ಅವರು ಸ್ಥಾಪಿಸಿದ ಭಾರತ ಸೇವಕ ಸಮಾಜ (Servents of India Society) ಈ ರೀತಿಯ ಶುದ್ಧ ಚಾರಿತ್ರ್ಯದ ಸಮಾಜ ಸೇವಕರನ್ನು ತಯಾರಿಸುವ ತರಬೇತುಗೊಳಿಸುವ ಉದ್ದೇಶದಿಂದ ಸ್ಥಾಪಿತವಾಯಿತು.

ಶಾಸನ ಸಭೆಯಲ್ಲಿ ಅವರ ನಡವಳಿಕೆ, ವಾದ ಚಾತುರ್ಯ, ಭಾರತದ ಆರ್ಥಿಕ ಪರಿಸ್ಥಿತಿಯ ಬಗೆಗಾಗಲೀ ಸಾರ್ವಜನಿಕ ಶಿಕ್ಷಣ ಬಗೆಗಾಗಲೀ ಅವರು ಮಂಡಿಸಿದ ಗೊತ್ತುವಳಿಗಳು ಬಹುಶಃ ಇಂದಿನ ಪ್ರಾತಿನಿಧಿಕ ಪ್ರಜಾಪ್ರಭುತ್ವದಲ್ಲಿ ನಾವು ಅನುಸರಿಸಬಹುದಾದ ಆದರ್ಶ ಪುರುಷರು ಎಂಬುದನ್ನು ಎತ್ತಿತೋರಿಸುತ್ತವೆ. ಮನುಷ್ಯನನ್ನು ಶಿಕ್ಷಣದಿಂದ ಸುಧಾರಿಸಬಹುದು ಎಂಬ ನಂಬುಗೆ ಅವರದ್ದು. ಜಾತ್ಯಾತೀತತೆಯಲ್ಲಿ ಅವರಿಗೆ ನಂಬುಗೆ. ರಾಜಕೀಯವೂ ಒಂದು ವೃತ್ತಿ. ಅದಕ್ಕಾಗಿ ತರಬೇತು ಸಿದ್ಧತೆ ಎಲ್ಲವೂ ಬೇಕು ಎನ್ನುವುದು ಅವರ ಮತ. ೧೯೧೨ ರಲ್ಲಿ ಅವರು ದಕ್ಷಿಣ ಆಪ್ತಿಕೆಯ ಪ್ರವಾಸದಲ್ಲಿ ಗಾಂಧೀಜಿಯವರನ್ನು ಹತ್ತಿರದಿಂದ ನೋಡಿದರು. ಆಗಲೇ ಅವರಲ್ಲಿ ಗುರು-ಶಿಷ್ಯ ಸಂಬಂಧ ಪ್ರಾರಂಭವಾದುದ್ದು.

ಲೋಕಮಾನ್ಯ ಬಾಲ ಗಂಗಾಧರ ಟಿಳಕರು ಶಿಕ್ಷಕರಾಗಿ, ವಕೀಲರಾಗಿ, ಜನನಾಯಕರಾಗಿ ಬಹುಮುಖವಾಗಿ ಭಾರತದಲ್ಲಿ ಪ್ರಜಾಸತ್ತೆಯನ್ನು ಕಾಣುವ ಆದರ್ಶವನ್ನು ಸಾರಿದ ವ್ಯಕ್ತಿ. ಸ್ವರಾಜ್ಯವೇ ನನ್ನುಸಿರು ಎಂದವರು. ಸ್ವಾಭಿಮಾನ ಸ್ವಾವಲಂಬನದ ಸ್ವಪ್ರಯತ್ನಗಳ ಫಲವಾಗಿ ಸ್ವದೇಶಿ ಬೆಳೆಯಬೇಕೆಂದು ಸಾರಿದವರು. ಸಾಮಾನ್ಯ ಜನರು ರಾಜಕೀಯದಲ್ಲಿ ಭಾಗವಹಿಸುವಂತೆ ಮಾಡಲು ಅವರಿಗೆ ಅರ್ಥವಾಗುವಂತಹ ಶಿವಾಜಿ ಉತ್ಸವ, ಗಣೇಶೋತ್ಸವಗಳನ್ನು ಪ್ರಾರಂಭಿಸಿ ರಾಜಕೀಯ ಜಾಗೃತಿಗೆ ನೆರವಾದರು. ರಾಷ್ಟ್ರೀಯ ಶಿಕ್ಷಣವನ್ನು ಸಂಘಟಿಸಿದರು. ಬ್ರಿಟೀಷ್ ಆಡಳಿತ ಸಂವಿಧಾನಕ ಆಡಳಿತವೇ ಅಲ್ಲ. ಏಕೆಂದರೆ ಜನತೆಯ ಅಭಿಪ್ರಾಯವನ್ನೇ ಅವರು ಸ್ವೀಕರಿಸಲಿಲ್ಲ. ಅಂದ ಮೇಲೆ ಅನ್ಯಾಯದ ಕಾಯ್ದೆ ಭಂಗ ತಪ್ಪಲ್ಲ ಎಂಬುದನ್ನು ತಮ್ಮ ಜೀವನದುದ್ದಕ್ಕೂ ಸಾರಿ ಸಾಧಿಸಿದರು. “ದೇಶ ದ್ರೋಹ”ಕ್ಕೆ ಆರು ವರ್ಷ ಕಠಿಣ ಶಿಕ್ಷೆಯನ್ನು ಪಡೆದ ಮೊದಲ ಮುಖಂಡರು.

ಕಾಂಗ್ರೆಸ್ಸಿನ ಧ್ಯೇಯ ಧೋರಣೆಗಳನ್ನು ಬದಲಿಸಲು ಅದನ್ನು ಜನ ಬೆಂಬಲಿತ ರಾಷ್ಟ್ರೀಯ ಸಂಸ್ಥೆಯಾಗಿ ಮಾರ್ಪಡಿಸಲು ಟಿಳಕರು ಮಾಡಿದ ಪ್ರಯತ್ನದಿಂದಾಗಿ ಕಾಂಗ್ರೆಸ್ಸು ಒಡೆದು, ಉದಾರ ಮತವಾದಿಗಳು ಮತ್ತು ತೀವ್ರವಾದಿಗಳು ಎಂದು ಬೇರ್ಪಟ್ಟರು. ಪುನಃ ೧೯೧೬ ರಿಂದ ೧೯೨೦ ರ ವರೆಗೆ ಕಾಂಗ್ರೆಸ್ಸಿನ ಅತ್ಯಂತ ಪ್ರಮುಖ ಮುಖಂಡರಾಗಿ ಟಿಳಕರು ಮಾಡಿದ ಕಾರ್ಯ ಚಿರಸ್ಮರಣೀಯ. ಹಿಂದೂ ಮುಸ್ಲೀಂ ಗುಂಪುಗಳಲ್ಲಿ ರಾಜಕೀಯ ಉದ್ದೇಶಗಳಿಗೆ ಐಕ್ಯವನ್ನು ಸಾಧಿಸಿದ ಶ್ರೇಯಸ್ಸು ಟಿಳಕರದು. ಹಿಂದು, ಮುಸ್ಲೀಂ ಸಮಸ್ಯೆ ಅವರ ದೃಷ್ಟಿಯಲ್ಲಿ ತ್ರಿಪಕ್ರೀಯ ಸಮಸ್ಯೆ. ಅವರು ಗೋಖಲೆಯವರಂತೆ ಧರ್ಮಾತೀತರಲ್ಲ. ತನ್ನ ಧರ್ಮದಲ್ಲಿ ಹೆಮ್ಮೆಯಿಟ್ಟುಕೊಂಡವರು. ಆದರೆ ರಾಜಕೀಯದಲ್ಲಿಧರ್ಮ ಅವಶ್ಯವಿಲ್ಲ ಎಂದರು. ಅವರವರ ಧಮ್ಮ ಅವರವರಿಗೆ, ಆದರೆ ರಾಷ್ಟ್ರೀಯತ್ವ ಎಲ್ಲರದು. ಪ್ರಜಾಸತ್ತೆ ಎಲ್ಲರದು ಎನ್ನುವ ಧೋರಣೆ ಅವರದು. ಹೋಂ ರೂಲ್ ಲೀಗ್ ಸ್ಥಾಪಿಸಿ ಪಶ್ಚಿಮ ಭಾರತದಲ್ಲಿ ಅವರು ಮಾಡಿದ ಕಾರ್ಯದಿಂದಾಗಿ ಪ್ರಾಂತೀಯ ಸಂಘಟನೆ, ಭಾಷಾವಾರು ಪ್ರಾತಿನಿಧ್ಯತೆ ಕಾಂಗ್ರೆಸ್ಸಿನ ಮುಂದಿನ ರಾಜಕೀಯರಲ್ಲಿ ಹೆಚ್ಚು ಮಹತ್ವವನ್ನು ಪಡೆದವು. ಮಾಂಟೆಗ್ಯೂ ಅವರ ಅರ್ಧ ಜವಾಬ್ದಾರಿ ಸರ್ಕಾರದ ಧೋರಣೆಗಳಿಗೆ ಟಿಳಕರು ವಿರೋಧ ವ್ಯಕ್ತಪಡಿಸಿದರು. ಹೊಸ ರಾಜಕೀಯ ಪಕ್ಷವೊಂದನ್ನು ಕಟ್ಟಲು ಅವರ ಪ್ರಯತ್ನ ನಡೆಯಿತು.

ಚುನಾವಣೆಯ ಕಣದಲ್ಲಿ ಇಳಿದು ಶಾಸನ ಸಭೆಗಳಲ್ಲಿ ವಿರೋಧವನ್ನು ವ್ಯಕ್ತಪಡಿಸಿ ಸಾಂವಿಧಾನಿಕವಾಗಿ ಹೋರಾಡಬೇಕೆನ್ನುವುದು ಟಿಳಕರ ಮತ. ಈ ಹಿನ್ನೆಲೆಯಲ್ಲಿ ನೋಡಿದರೆ ಬ್ರಿಟೀಷ್ ಆಡಳಿತ ಯಂತ್ರದ ನೈತಿಕ ನೆಲಗಟ್ಟನ್ನೇ ಅಲುಗಿಸಿ ಅಹಿಂಸತ್ಮಕ ಅಸಹಕಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್ಸಿನ ಗದ್ದುಗೆಯನ್ನು ಏರದೇ ರಾಷ್ಟ್ರದ ಮುಖಂಡರಾಗಿ ಟಿಳಕರು ತಮ್ಮ ನೈತಿಕ ಸಾಮರ್ಥ್ಯದಿಂದ ಸರ್ವಕಾಲಕ್ಕೂ ಆದರ್ಶ ಪ್ರಾಯವಾದ ನಾಯಕರೆನಿಸಿದರು. ಅವರ ವಿದ್ವತ್ತು ಗೀತಾ ರಹಸ್ಯ, ವೇದದ ಮೂಲಗಳಲ್ಲಿ ಪ್ರಕಟವಾದರೆ, ಅದನ್ನು ಸ್ವದೇಶಿ ಕಾಗದದಲ್ಲಿಯೇ ಮುದ್ರಿಸಬೇಕೆಂಬ ಅವರ ಸ್ವದೇಶಿತನ ಸ್ವಪ್ರಯತ್ನ ಸ್ವಾವಲಂಬನೆಗಳ ಒಂದು ಆದರ್ಶ. ಅದಕ್ಕಾಗಿಯೇ ಗಾಂಧೀಜಿ ಅವರನ್ನು “ಮನುಷ್ಯರ ನಡುವೆ ಮಾನವ, ವೀರರ ನಡುವೆ ಧೀರ, ದೇಶ ಪ್ರೇಮಿಗಳ ನಡುವೆ ದೇಶಭಕ್ತ” ಎಂದು ವರ್ಣಿಸಿದ್ದಾರೆ.

ಸ್ವರಾಜ್ಯ, ಸ್ವದೇಶಿ- ಬಹಿಷ್ಕಾರ ರಾಷ್ಟ್ರೀಯ ಶಿಕ್ಷಣ- ಅಸಹಕಾರಗಳು ಅವರ ಕಾಯರ್ಕ್ರಮದ ಚತುಸ್ಸೂತ್ರಗಳು. ೧೯೧೮ ರಲ್ಲಿ ವಿಶ್ವಶಾಂತಿ ಪರಿಷತ್ತು ಸೇರಿದಾಗ ಭಾರತಕ್ಕೆ ಸ್ವಾಯತ್ತತೆ ನೀಡಬೇಕೆಂಬ ಬೇಡಿಕೆಯನ್ನು ಅಲ್ಲಿಟ್ಟು ಯೋಗ್ಯ ಪ್ರಾತಿನಿಧ್ಯ ಭಾರತಕ್ಕೆ ಬೇಕೆಂಬ ವಾದವನ್ನು ಮಂಡಿಸಿ ಪತ್ರ ಕಳಿಸಿದವರು ಟಿಳಕರು.- ಇದು ಬರೀ ಭಾರತಕ್ಕೆ ಮಾತ್ರವಲ್ಲ ವಿಶ್ವಶಾಂತಿಗೂ ಅನುಕೂಲ ಎಂಬ ಮೊಟ್ಟಮೊದಲ ವಾದ ಸರಣಿ ಬಂದುದು ಟಿಳಕರಿಂದ. ಅವರ ಕೊನೆಯ ಕಾಲದಲ್ಲಿ ಗಾಂಧೀಜಿಯವರು ಅಸಹಕಾರ ಸತ್ಯಾಗ್ರಹದ ಕಾರ್ಯಕ್ರಮ ಕಾಂಗ್ರೆಸ್ ವೇದಿಕೆಗೆ ಬಂದಾಗ ಟಿಳಕರ “ಕಾರ್ಯಕ್ರಮ ನನಗೆ ಒಪ್ಪಿಗೆ ಆಗುವಂತಹುದೇ. ಆದರೆ ದೇಶ ಈ ಬಗೆಯ ತ್ಯಾಗಮಯ ಸನ್ನಿವೇಶಕ್ಕೆ ಸಿದ್ಧವಿದೆಯೋ ಇಲ್ಲವೋ ಎನ್ನುವುದು ನನ್ನ ಸಂಶಯ” ಎಂದರು.

ಹೀಗೆ ಲೋಕಮಾನ್ಯ ಟಿಳಕರ ರಾಜಕೀಯ ಜೀವನ ಸತ್ಯಾನ್ವೇಷಣೆ, ಸ್ವರಾಜ್ಯ ಸ್ವದೇಶಿ ರಾಷ್ಟ್ರೀಯ ಶಿಕ್ಷಣ ಅಸಹಕಾರಗಳಿಂದ ಪಾನನಿರೋಧ ಗೋ-ರಕ್ಷಣೆಯವರೆಗೂ ಜನಜಾಗ್ರತಿ ಪ್ರಜಾಸತ್ತೆಯ ಸಮರ್ಥನೆ ಕಾಯ್ದೆಯ ಚೌಕಟ್ಟಿನಲ್ಲಿ ಹೋರಾಟ ಇವುಗಳನ್ನು ಸ್ಪಷ್ಟವಾಗಿ ಮತ್ತು ನಿರ್ಧಿಷ್ಟವಾಗಿ ಪ್ರಸ್ತಾಪಿಸಿದ ಆದರ್ಶಮಯ ಸನ್ನಿವೇಶವಾಗಿದೆ. ದೇಶದ ಗತ ವೈಭವದಲ್ಲಿ ಹೆಮ್ಮೆಯನ್ನಿಟ್ಟುಕೊಂಡವರು-ಭವಿಷ್ಯದಲ್ಲಿ ನಂಬುಗೆಯನ್ನಿಟ್ಟುಕೊಂಡವರು ಟಿಳಕರ ಹೆಸರನ್ನು ಕೃತಜ್ಞತೆಯಿಂದ ಸ್ಮರಿಸಬೇಕು ಎಂದು ಅರವಿಂದರೇ ಹೇಳಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ಸು ಸಂಪೂರ್ಣವಾಗಿ ರಾಜಕೀಯ ಸಂಘಟನೆಯಾಗಿ ಪರಿವರ್ತನೆ ಹೊಂದಿದ್ದು ಅವರಿಂದಲೇ ಎಂದರೂ ತಪ್ಪಲ್ಲ. ಆಧುನಿಕ ಪ್ರಜಾಸತ್ತಾತ್ಮಕ ಭಾರತದ ಮೂಲ ಅಡಿಪಾಯವನ್ನು ಹಾಕಿದವರು ಟಿಳಕರು ಎಂದು ನಿಸ್ಸಂದೇಹವಾಗಿ ನಾವು ಹೇಳಬಹುದು.

ವಂಗಭಂಗದಿಂದ ಮೊದಲನೇ ಮಹಾಯುದ್ಧದ ಕೊನೆಯವರೆಗಿನ ಅವಧಿಯಲ್ಲಿ ಸ್ವಾತಂತ್ರ್ಯಾಂದೋಲನ ಸಾಗಿಬಂದ ದಾರಿಯಲ್ಲಿ ಆಗಿರುವ ಬದಲಾವಣೆಗಳಿಗೆ ಬಂಗಾಲದ ದೃಷ್ಟಾಂತವೊಂದೇ ಸಾಕು. ಪ್ರಾರಂಭದಲ್ಲಿ ರಾಷ್ಟ್ರೀಯ ಪರಿಷತ್ತು ಕೂಡಿದ್ದು ಅಲ್ಲಿ. ೨ನೇ ರಾಷ್ಟ್ರೀಯ ಕಾಂಗ್ರೆಸ್ಸು ಸೇರಿದ್ದು ಅಲ್ಲೇ. ೧೯೦೬ ರಲ್ಲಿ ನವರೋಜಿಯವರು ಸ್ವರಾಜ್ಯದ ಸಂದೇಶವನ್ನು ನೀಡಿದ ಕಾಂಗ್ರೆಸ್ಸ ಮಹಾಸಭೆಯೂ ಅದೇ ಪ್ರಾಂತ್ಯದಲ್ಲಿ ನಡೆದಿತ್ತು. ಅರವಿಂದ ಘೋಷ್, ಜತೀನ್ ಮುಖರ್ಜಿ ಮುಂತಾದ ತೀವ್ರಗಾಮಿ- ಕ್ರಾಂತಿಗಳಿಗೂ ರವೀಂದ್ರನಾಥ ಟಾಗೋರ್ ಮುಂತಾದ ಮಾನವತಾವಾದಿ ಕವಿಗಳಿಗೂ ವಿವೇಕಾನಂದರಂತಹ ಧಾರ್ಮಿಕ ಪುನರುಜ್ಜೀವನದ ಮಹಾನ್ ಧುರೀಣರಿಗೂ ಆಶ್ರಯ ಕೊಟ್ಟ ನೆಲ ಬಂಗಾಲ. ವಂಗಭಂಗದ ಪರಿಣಾಮವಾಗಿ ಬ್ರಿಟೀಷ್ ರಾಜಸತ್ತೆಯನ್ನು ಸಶಸ್ತ್ರ ಕ್ರಾಂತಿಯಿಂದಲೇ ಓಡಿಸಬೇಕು ಎನ್ನುವ ಪಣತೊಟ್ಟು ಶಸ್ತ್ರಗಳನ್ನು ಗುಪ್ತವಾಗಿ ಆಮದು ಮಾಡಿಕೊಳ್ಳುವ ಸಾಹಸಕ್ಕೆ ಇಳಿದು ಸಫಲರಾಗದವರಲ್ಲಿ ಈ ಕ್ರಾಂತಿಕಾರಿಗಳು ಮುಖ್ಯ. ಆ ವಾದದ ತಾತ್ವಿಕ ಚಿಂತನೆ ಹಿನ್ನೆಲೆ ಅರವಿಂದರ ಬರಹಗಳಲ್ಲಿ ಕಾಣುತ್ತೇವೆ. ಟಿಳಕರೊಡನೆ ಹೊಸ ರಾಜಕೀಯ ಪಕ್ಷವನ್ನು ಕಟ್ಟಲು ಬಂಗಾಲದ ಬಿಪಿನ್‌ಚಂದ್ರಪಾಲರ, ಪಂಜಾಬದ ಲಾಲಾ ಲಜಪತ್‌ರಾಯರು ಯತ್ನಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಇಲ್ಲಿ ಅಹಿಂಸೆಯೇ ಮುಖ್ಯವಲ್ಲ. ಹಿಂಸೆಯ ಕ್ರಮವೂ ನ್ಯಾಯಬದ್ದವಾಗಬಹುದಾದ ಸಂದರ್ಭಗಳಿವೆ. ಆದರೆ ಹಿಂಸೆಯ ಮಾರ್ಗವನ್ನು ಅನುಸರಿಸಿದವರು ದೇಶತ್ಯಾಗ ಮಾಡಬೇಕಾಯಿತು. ಅಂಥವದಲ್ಲಿ ತರುಣ ಮಾನವೇಂದ್ರನಾಥರ ಯ್ ಒಬ್ಬರು. ಉದಾರ ಮತವಾದಿಗಳ ಅಭಿಪ್ರಾಯ ಪ್ರಯತ್ನಗಳು ಆಳಸರ ಮೆಚ್ಚುಗೆ ಪಡೆದರೂ “ನಿಮ್ಮಂಥವರು ಭಾರತಕ್ಕೆ ಇನ್ನಷ್ಟು ಜನ ಬೇಕು” ಎಂದು ಲಾರ್ಡ್‌ ಕರ್ಜನ್ ಗೋಖಲೆಯಂಥವರಿಗೆ ತಿಳಿಸಿದರೂ ಕಾಂಗ್ರೆಸ್ ಸಂಸ್ಥೆಯನ್ನು ಬೆಳೆಸುವಲ್ಲಿ ಅವರು ಸಫಲರಾಗಲಿಲ್ಲ. ಅನ್ನಿಬೆಸಂಟರ ಹೋಂ ರೂಲ್ ಚಳುವಳಿ ದೇಶದ ಕೆಲವೆಡೆಗಳಲ್ಲಿ ಶಿಕ್ಷಣ ಕಾರ್ಯ, ರಾಜಕೀಯ ಅರಿವನ್ನು ಮೂಡಿಸಲು ಯಶಸ್ವಿಯಾದರೂ ಅದು ಸಾರ್ವತ್ರಿಕವಾಗಲಿಲ್ಲ. ಒಟ್ಟಿನಲ್ಲಿ ಒಂದನೆಯ ಮಹಾಯುದ್ಧ ಮುಗಿದು ಆ ಯುದ್ಧದ ಕಾರ್ಯಕ್ಕೆ ಭಾರತೀಯರು ಸಂಪೂರ್ಣ ಸಹಕಾರ ನೀಡಿ ಅದಕ್ಕೆ ಪ್ರತ್ಯುತ್ತರವಾಗಿ ಬ್ರಿಟೀಷರಿಂದ ಹೊಸ ಕಾಣಿಕೆ ಬರಬಹುದು ಭಾರತದ ಸ್ವಾತಂತ್ರ್ಯ ಬೇಡಿಕೆಗೆ ಎನ್ನುವ ಹೊತ್ತಿಗೆ, ಗೋಖಲೆ ದಿವಂಗತರಾಗಿದ್ದರು ; ನನರೋಜಿ ಇಲ್ಲವಾಗಿದ್ದರು; ಲೋಕಮಾನ್ಯರು ೧೯೨೦ ರಲ್ಲಿ ಕೊನೆಯುಸಿರೆಳೆದರು.

ಈ ಅವಧಿಯಲ್ಲಿ ಭಾರತಕ್ಕೆ ಪ್ರವೇಶಮಾಡಿದ ಇನ್ನೊಬ್ಬ ವ್ಯಕ್ತಿ ಗಾಂಧೀಜಿ. ಈ ಮೊದಲು ೧೯೨೦ ರ ಹೊತ್ತಿಗೇ ಅವರು ಭಾರತದಲ್ಲಿ ಓಡಾಡಿದರೂ ಗೋಖಲೆಯವರ ಗುರುತ್ವವನ್ನು ಸಂಪಾದಿಸಿದರೂ ಅದು ದಕ್ಷಿಣ ಆಫ್ರಿಕೆಯ ಗಾಂಧಿ ಎಂದು. ಭಾರತದಲ್ಲಿ ೧೯೧೫ ರ ಮೊದಲ ಭಾಗದಲ್ಲಿ ಗಾಂಧಿ ಕಾಲಿಟ್ಟಾಗ ಗೋಖಲೆಯವರ ಭಾರತ ಸೇವಕ ಸಮಾಜವನ್ನು ಸೇರುವ ಇಚ್ಚೆ ವ್ಯಕ್ತಪಡಿಸಿದರು. ಅದಕ್ಕೆ ಉತ್ತರವಾಗಿ ಗೋಖಲೆಯವರ ಸಲಹೆ ಸ್ಪಷ್ಟವಾಗಿದ್ದಿತು.” ಪರಿಣಾಮಕಾರಿ ದೇಶಭಕ್ತನಾಗುವದಾದರೆ ವರುಷ ವರುಷವೂ ನಡೆಸುವ ಪುಸ್ತಕಗಳ ಅಭ್ಯಾಸ ಮುಖ್ಯವಲ್ಲ ಜನರನ್ನು ಮುಖತಃ ಕಂಡು ಅವರ ಆಸೆ ಆಕಾಂಕ್ಷೆಗಳನ್ನು ಅರಿಯುವುದು ಬಹಳ ಮಹತ್ವದ್ದು.” ಆದ್ದರಿಂದಲೇ ಗಾಂಧೀಯವರಿಗೆ ಭಾರತದ ಮೂಲೆ ಮೂಲೆಗಳನ್ನು ಸಂಚರಿಸಿ ಪರಿಚಯ ಮಾಡಿಕೊಂಡು ಬನ್ನಿ ಆಮೇಲೆ ನಿರ್ಧರಿಸೋಣ ಎಂದದ್ದು ಗೋಖಲೆಯವರು. ಅದನ್ನು ಅಕ್ಷರಶಃ ಮುಗಿಸಿಕೊಂಡು ಗಾಂಧೀಜಿಯವರು ಮರಳಿದಾಗ ಗೋಖಲೆ ದಿವಂಗತರಾಗಿದ್ದರು. ದಕ್ಷಿಣ ಆಫ್ರಿಕೆಯ ಅನುಭವದ ಆಧಾರದ ಮೇಲೆ ಅಸಹಕಾರ ಸತ್ಯಾಗ್ರಹದ ವಿಚಾರವನ್ನು ರೌಲೆಟ್ ಕಾಯ್ದೆಗಳ ವಿರುದ್ಧ ಗಾಂಧೀಜಿ ಸಾರಿದಾಗ ಟಿಳಕರ ಆಶೀರ್ವಾದ ದೊರೆಯಿತು. ಆದರೆ ಅವರ ಉಪಸ್ಥಿತಿ ಇಲ್ಲವಾಯಿತು. ಹೀಗಾಗಿ ೧೯೧೯-೨೦ ರಿಂದ ಗಾಂಧಿಯುಗ ಆರಂಭ.

ಮಧ್ಯಮವರ್ಗದ ಸುಶಿಕ್ಷಿತರ ಸಂಸ್ಥೆಯಾದ ಕಾಂಗ್ರೆಸ್‌ನ್ನು ಟಿಳಕರು ಜನರಿಗೆ ಹತ್ತಿರವಾಗಿ ತಂದಿದ್ದರು. ‘ಈ ಜನತೆಯೊಡನೆ ಸುಶಿಕ್ಷಿತರಾದವರು ಈಜಿ ಗೆಲ್ಲಬೇಕು ಅಥವಾ ಮುಳುಗಬೇಕು’ ಎನ್ನುವುದು ಟಿಳಕರ ಅಭಿಪ್ರಾಯವಾಗಿತ್ತು. ಗೋಖಲೆಯವರ ಮಾರ್ಗದರ್ಶನ ಟಿಳಕರ ಆದರ್ಶ ಇವರೆಡನ್ನು ಒಪ್ಪಿಕೊಂಡ ಗಾಂಧೀಜಿ ಕಾಂಗ್ರೆಸ್‌ನ್ನು ಜನಸಾಮಾನ್ಯರ ಸಂಘಟನೆಯನ್ನಾಗಿ ಮಾಡಿದರು. ಈ ಹಿಂದಿನ ಆದರ್ಶಗಳಿಗೆ ಹೊಸ ಅರ್ಥವನ್ನು ಹೆಚ್ಚಿಸಿದರು. ಸತ್ಯ, ಅಹಿಂಸೆ, ಅಸಹಕಾರಗಳ ಹಿನ್ನೆಲೆಯಲ್ಲಿ ರಾಜಕೀಯವನ್ನು ಒಂದು ಧಾರ್ಮಿಕ ಕಾರ್ಯವಾಗಿ ಪ್ರಯತ್ನ ಮಾಡಿದರು. ಸ್ವರಾಜ್ಯವನ್ನು ಗೊತ್ತುವಳಿಗಳಿಂದಾಗಲೀ ಭಾಷಣಗಳಿಂದಾಗಲೀ ಗಳಿಸಲು ಸಾಧ್ಯವಿಲ್ಲ. ಆ ಸ್ವರಾಜ್ಯಕ್ಕೆ ತಕ್ಕ ಶೀಲ ಚಾರಿತ್ರ್ಯಗಳನ್ನು ಗಳಿಸಿಕೊಳ್ಳುವುದು ಮುಖ್ಯ ಎಂದು ೧೯೧೬ ರಲ್ಲೇ ಗಾಂಧೀಜಿ ಬನಾರಸ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದರು. ಸ್ವದೇಶಿಯ ಬಗ್ಗೆ ಅವರ ಹಚ್ಚಿದ ಅರ್ಥ ವಿಶಿಷ್ಟ ರೀತಿಯದು. ವಿದೇಶಿ ಉತ್ಪಾದನೆ, ವಿದೇಶಿ ವಸ್ತುಗಳಿಗೆ ಪ್ರತಿಯಾಗಿ ನಮ್ಮ ದೇಶದಲ್ಲೇ ನಮ್ಮವರೇ ಆ ವಸ್ತುಗಳ ಉತ್ಪಾದನೆ ನಡೆಯುವಂತಹ ಕಾರ್ಯಕ್ಕೆ ಸ್ವದೇಶಿ ಎಂಬ ಅರ್ಥವನ್ನೂ ಅದರಂತೆ ಕಾರ್ಯಕ್ರಮಗಳನ್ನೂ ಹಿಂದಿನವರು ರೂಪಿಸಿದ್ದರು. ಆದರೆ ಗಾಂಧೀಜಿ ಹಚ್ಚಿದ ಅರ್ಥ ಬೇರೆ- ನಮ್ಮ ಸುತ್ತಮುತ್ತಲಿನ ಸಂಪನ್ಮೂಲಗಳನ್ನು ನಮ್ಮ ಬಳಕೆಗೆ ಸುತ್ತಮುತ್ತಲಿನವರ ಸೇವೆಗೆ ಬಳಸಿಕೊಳ್ಳುವ ಕ್ರಮವೇ ಸ್ವದೇಶಿ. ಅಂತಹ ಉತ್ಪಾದನೆಯಲ್ಲಿ ತೊಡಗಿದ ಉದ್ದಿಮೆಗಳೇ ಸ್ವದೇಶಿ ಉದ್ದಿಮೆಗಳು. ಅಲ್ಲಿ ಶೋಷಣೆ ಇಲ್ಲ. ಬಳಕೆಗೆ ಹೆಚ್ಚು ಪ್ರಾಧಾನ್ಯ. ಹಿಂದಿನ ಮುಖಡರು ಸ್ವದೇಶಿಯನ್ನು ಬಹಿಷ್ಕಾರದ ಆಂದೋಲನವಾಗಿ ವಿದೇಶಿ ವಸ್ತುಗಳ ಹೋಳಿಯಾಗಿ ಪರಿಗಣಿಸಿದ್ದರೆ, ಗಾಂಧೀಜಿಯವರಿಗೆ ಅದೊಂದು ಧಾರ್ಮಿಕ ಕಾರ್ಯ. ಸ್ವಾವಲಂಬನೆ ಸ್ವ ಪ್ರಯತ್ನಗಳ ಫಲವಾಗಿ ಜೀವನ ಕ್ರಮವಾಗಿ ಬಂದಂಥ ಕಾರ್ಯಕ್ರಮ ಸ್ವದೇಶಿ. ಈ ಕ್ರಮದಲ್ಲಿ ದೈಹಿಕ ತೊಂದರೆಗಳು ಉಂಟಾದರೂ ಅದನ್ನು ಸಹಿಸಿಕೊಳ್ಳುವ ಆತ್ಮಶಕ್ತಿ ಬೆಳೆಸಿಕೊಳ್ಳಬೇಕಾದುದು ಅತ್ಯಂತ ಅವಶ್ಯಕ. “ನಿನ್ನ ಆಸ್ತಿಯನ್ನು ಇತರರನ್ನು ಭಂಗಗೊಳಿಸಲು ಮಾತ್ರ ಉಪಯೋಗಿಸಬೇಡ, ಸರಿಯಾಗಿ ಬಳಸು, ಪೈಪೋಟಿ, ಗೊಂದಲಕ್ಕೆ ಅವಕಾಶ ಕೊಡದೇ ಸಹಕಾರ ಸಂಯೋಜನೆಗೆ ಅನುವು ಮಾಡಿಕೊಡು” ಎನ್ನುವುದೇ ಗಾಂಧೀ ಮಂತ್ರ.