ಗಾಂಧೀಜಿ ಅಹಿಂಸೆಯನ್ನು ಅಕ್ಷರಶಃ ಪಾಲಿಸಲು ಪ್ರಯತ್ನಿಸಿದವರು. ತೀವ್ರವಾದಿಗಳಲ್ಲಿ ಉದಾಗವಾದಿಗಳಲ್ಲಿ ಒಂದು ಒಪ್ಪಂದಕ್ಕೆ ಬರಲು ಪಯತ್ನಿಸಿದರು. ಸ್ವಾರ್ಥ ರಹಿತ ರಾಜಕೀಯಕ್ಕೆ ಅಹಿಂಸೆ ಮತ್ತು ಉಪವಾಸ ಸತ್ಯಾಗ್ರಹದಂತಹ ಅಸ್ತ್ರಗಳನ್ನು ನೀಡಿದರು. ಅಹಿಂಸೆಯ ಸಾಧನೆಗೂ, ಸತ್ಯಾಗ್ರಹದ ಆಚರಣೆಗೂ ನೈತಿಕವಾದ ಜೀವನ ಕ್ರಮ ಅವಶ್ಯ; ಅಂತಹ ಶೀಲ ಚಾರಿತ್ರ್ಯಗಳಿಲ್ಲದಿದ್ದರೆ ಈ ಕಾರ್ಯದಲ್ಲಿ ಯಶಸ್ಸು ಬರಲಾರದು ಎಂಬುದು ಅವರ ಖಚಿತ ಅಭಿಪ್ರಾಯ. ೧೯೨೦-೩೦ರ ಅಸಹಕಾರ ಆಂದೋಲನ, ಸವಿನಯ ಕಾಯ್ದೆಭಂಗ ಚಳವಳಿಗಳೆಲ್ಲ ನ್ಯಾಯುತವಾಗಿ ಅಹಿಂಸಾತ್ಮಕವಾಗಿ ನಡೆಯಬೇಕೆಂದು ಪ್ರಯತ್ನಿಸಿದರು. ಆಮೇಲೆ ಸಾರ್ವತ್ರಿಕ ಅಸಹಕಾರ ವಳವಳಿಗೆ ಕಾಂಗ್ರೆಸ್ಸಿಗರಿಗೇ ಪೂಣ್ ಸಮ್ಮತಿ ಇಲ್ಲದಿದ್ದಾಗ, ವೈಯಕ್ತಿಕ ಸತ್ಯಾಗ್ರಹದ ಅವಕಾಶವನ್ನು ಕಲ್ಪಿಸಿಕೊಟ್ಟರು. ೧೯೨೦ ರಿಂದ ೧೯೩೭ರ ವರೆಗಿನ ಅವಧಿಯಲ್ಲಿ ಕಾಂಗ್ರೆಸ್ ಸಂಸ್ಥೆಯ ಸಂಘಟನೆಯಲ್ಲಿ ಎದ್ದಿರುವ ದೊಡ್ಡ ಪ್ರಶ್ನೆ ಸಹಕಾರ-ಅಸಹಕಾರ; ಶಾಸನ ಸಭಾ ಪ್ರವೇಶ –ಬಹಿಷ್ಕಾರ, ಚುನಾವಣೆಗಳನ್ನು ಬಹಿಷ್ಕರಿಸದೇ ರಾಜಕೀಯ ವ್ಯವಸ್ಥೆಯನ್ನು ಸೇರಿ, ಆಯ್ಕೆ ಹೊಂದಿ, ಆಡಳಿತ ಯಂತ್ರ ಕೆಲಸ ಮಾಡಲು ಸಾಧ್ಯವಾಗದಂತಹ ವಾತಾವರಣ ನಿರ್ಮಿಸುವಂತೆ, ಒಳಗಿದ್ದು ಅಸಹಕಾರ ಮಾಡುವ ಉದ್ದೇಶದಿಂದ ಹುಟ್ಟಿಕೊಂಡಿದ್ದು ಸ್ವರಾಜ್ಯ ಪಕ್ಷ. ಇದಕ್ಕೆ ನೇತಾರರು ಚಿತ್ತರಂಜನದಾಸ, ಮೋತಿಲಾಲ ನೆಹರೂ ಮುಂತಾದ ಪ್ರಭೃತಿಗಳು.

೧೯೨೨ರಲ್ಲೇ ಗಯಾ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಚಿತ್ತರಂಜನದಾಸ ಹೇಳಿದ ಮಾತು ಇಂದಿಗೂ ವಿಚಾರಾರ್ಹ. ‘ಬ್ರಿಟೀಷ್ ಮಾದರಿಯ ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲ್ಲಿ ಮಧ್ಯಮ ವರ್ಗದವರು ಮುಖಂಡತ್ವ ವಹಿಸಿ, ಇನ್ನಿತರರನ್ನು ದೂರವಿಡುವ ಪ್ರಯತ್ನ ನಡೆಯುತ್ತದೆ. ಅದಕ್ಕಾಗಿ ಅದು ನಮಗೆ ಯೋಗ್ಯವಲ್ಲ; ಬಿಳಿಯ ಅಧಿಕಾರಿಗಳ ಬದಲಾಗಿ ದೇಶಿ ಅಧಿಕಾರಿಗಳ “ಶಾಹಿ” ಬರುತ್ತದೆ. ಜನಸಾಮಾನ್ಯರಿಗೂ ಅವಕಾಶ ದೊರಕಬೇಕಾದರೆ ರಾಜಕೀಯ ವ್ಯವಸ್ಥೆಯು ಗ್ರಾಮಗಳನ್ನಾಧರಿಸಿ ಸಣ್ಣ ಗುಂಪುಗಳಿಂದ ಆರಂಭವಾಗಿ ಪಿರಮಿಡ್ ಮಾದರಿಯಲ್ಲಿ ಎತ್ತರಕ್ಕೆ ಬೆಳೆದು ಬರಬೇಕು’ ಅಸಹಕಾರ ಒಂದು ಮಿತಿಯನ್ನು ಮಾತ್ರ ಸಾಧ್ಯ” ಎಂದೆಲ್ಲ ಸ್ಪಷ್ಟವಾಗಿ ಉಲ್ಲೇಖಿಸಿದ್ದರು. ರಾಷ್ಟ್ರದ ಮಟ್ಟದಲ್ಲಿ ಸಂವಿಧಾನ ರೂಪಿಸಲು ಒಂದು ಘಟನಾಸಮಿತಿ- ಅದನ್ನು ದೇಶದ ಜನರೇ ಆಯ್ಕೆ ಮಾಡಬೇಕು. ಹೊರತು ನೇಮಣೂಕಿ ಮಾಡಬಾರದು ಎಂದು ಅವರು ಸೂಚಿಸಿದ್ದರು. ಆದರೆ ಅಂದಿನ ಗಾಂಧೀ ಅನಿಯಾಯಿಗಳಿಗೆ ಈ ಸಲಹೆ ಹಿಡಿಸಿರಲಿಲ್ಲ. ಗಾಂಧೀಜಿ ಮಾತ್ರ ಈ ಸಹಕಾರ- ಅಸಹಕಾರದ ಸಮಸ್ಯೆಯನ್ನು ಚಾಣಾಕ್ಷತನದಿಂದ ಬಗೆಹರಿಸಿ ೧೯೨೪ ರಲ್ಲಿ ಬೆಳಗಾವಿ ಕಾಂಗ್ರೆಸ್ಸಿನ ಅಧ್ಯಕ್ಷ ಸ್ಥಾನದಿಂದ ಕಾಂಗ್ರೆಸ್ಸಿನ ಐಕ್ಯವನ್ನು ಸಾರಿದರು. ಭಾಷಾವಾರು ಪ್ರಾಂತರಚನೆ, ರಚನಾತ್ಮಕ ಕಾರ್ಯಕ್ರಮಗಳು, ಖಾದಿ, ಚರಖಾ, ಹರಿಜನೋದ್ದಾರ, ಇತ್ಯಾದಿಗಳನ್ನು ಆಧರಿಸಿದ ಕಾಂಗ್ರೆಸ್ ಸಂಘಟನೆ ಗಾಂಧೀ ಪ್ರಣೀತ ವ್ಯವಸ್ಥೆಯಾಗಿ ಬಂತು.

ಸುಮಾರು ೧೭ ವರ್ಷಗಳ ಗಾಂಧೀ ಮುಖಂಡತ್ವದಲ್ಲಿ ಕಾಂಗ್ರೆಸ್ಸಿಗರು ಶಾಸನ ಸಭೆಗಳನ್ನು ಸೇರಿದ್ದನ್ನು ಬಹಳ ಮುತುವರ್ಜಿಯಿಂದ ಭಾಗವಹಿಸಿ ಪಾರ್ಲಿಮೆಂಟರಿ ಪದ್ಧತಿಯಲ್ಲಿ ಅನುಭವ ಪಡೆದುದನ್ನು ಒಂದು ಚಿತ್ರವಾಗಿ ಕಂಡರೆ, ಸತ್ಯಾಗ್ರಹ ಅಸಹಕಾರ ಚಳುವಳಿಗಳ ಮುಖಾಂತರ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಸಾಮಾನ್ಯ ವೀರಧೀರರನ್ನೂ ರಚನಾತ್ಮಕ ಕಾರ್ಯದಲ್ಲಿ ತೊಡಗಿದ ಸಮಾಜ ಕಾರ್ಯಕರ್ತರನ್ನೂ ಇನ್ನೊಂದು ಚಿತ್ರವಾಗಿ ನೋಡುತ್ತೇವೆ. ಕಾಂಗ್ರೆಸ್ಸಿನಂಥಹ ಒಂದು ಸಂಘಟನೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಸ್ವರಾಜ್ಯಕ್ಕಾಗಿ ಐಕ್ಯತೆಯನ್ನು ಸಾಧಿಸಲು ಗಾಂಧೀಜಿಯ ಪ್ರಯತ್ನ ಎಷ್ಟರಮಟ್ಟಿಗೆ ಯಶಸ್ವಿಯಾಯಿತು ಅಥವಾ ಆಗಲಿಲ್ಲ ಎನ್ನುವುದನ್ನು ಚರಿತ್ರೆ ಎತ್ತಿ ತೋರಿಸುತ್ತವೆ. ಅಸ್ಪೃಶ್ಯತೆಯ ಸಮಸ್ಯೆ, ಹಿಂದೂ-ಮುಸ್ಲೀಂ ಸಮಸ್ಯೆಗಳಿಗೆ ಟಿಳಕರು ತೋರಿದ ದಾರಿ ಒಂದಾದರೆ, ಗಾಂಧೀಜಿ ತೋರಿದ ದಾರಿ ಇನ್ನೊಂದು. ಆದರೆ ಅಧಿಕಾರದ ರುಚಿ ತೋರಿಸಿದ ಶಾಸನಾಸಭಾ ಸದಸ್ಯತ್ವದಲ್ಲಿ ಅರ್ಧ ಜವಾಬ್ದಾರಿ ಮತ್ತು ಪೂರ್ಣ ಜವಾಬ್ದಾರಿ (೧೯೩೭) ಪ್ರಾಂತಿಕ ಸರ್ಕಾರಗಳ ರಚನೆಯ ಸಮಯದಲ್ಲಿ ಅಲ್ಪಸಂಖ್ಯಾತರಿಗೆ ಬಹು ಸಂಖ್ಯಾತರು ನೀಡಿದ ಅಥವಾ ನೀಡದೇ ಇದ್ದ ಅವಕಾಶಗಳಿಂದಾಗಿ ಹಿಂದೂ-ಮುಂಸ್ಲೀಂ ಸಮಸ್ಯೆ ದೇಶದ ವಿಭಜನೆಗೆ ಪಾಯ ಹಾಕಿತು ತನ್ನುವುದನ್ನು ಚರಿತ್ರೆಯಲ್ಲಿ ನೋಡುತೇವೆ. ಭಾರತಕ್ಕೆ ಸಂಪೂರ್ಣ ಸ್ವರಾಜ್ಯ ಒಂದೇ ದಾರಿ ಅಥವಾ ಬ್ರಿಟೀಷ್ ಸಾಮ್ರಾಜ್ಯದಲ್ಲಿ ಸ್ವಾಯತ್ತತೆ ಪಡೆದ ವಸಾಹತು ಬರಬೇಕೆಂಬ ಬೇಡಿಕೆಯ ಮಧ್ಯದಲ್ಲಿ ಸಾವಕಾಶವಾಗಿ ಜವಾಬ್ದಾರಿ ಸರಕಾರವನ್ನು ನೀಡುವ ಒಂದು ಕ್ರಮ ಮೊದಲು ಬಂದದ್ದು ೧೯೧೯ ರಲ್ಲಿ. ಆಮೇಲೆ ದುಂಡು ಮೇಜಿನ ಪರಿಷತ್ತುಗಳಾಗಿ ೧೯೩೫ ರಲ್ಲಿ ಭಾರತ ಸರಕಾರದ ಕಾಯಿದೆ ಬಂತು. ಅದರನ್ವಯ ೧೯೩೭ ರಲ್ಲಿ ಪ್ರಾಂತಿಕ ಸರಕಾರಗಳನ್ನು ರಚಿಸುವ ಕಾಲದಲ್ಲಿ ಪುನಃ ಅದೇ ಪ್ರಶ್ನೆ ಸಹಕಾರವೋ, ಅಸಹಕಾರವೋ, ಎಂದು ಸರಕಾರ ರಚಿಸಬೇಕೋ ಬೇಡವೋ ಎಂದು, – ಸಹಕಾರಿಗಳ ಕೈಮೇಲಾಯಿತು. ಗಾಂಧೀಜಿ ಆಗಲೇ ಹೇಳಿದರು- ಕಾಂಗ್ರೇಸ್ ಸಂಸ್ಥೆಯನ್ನು ವಿಸರ್ಜಿಸಿ ಎಂದು. ಅದು ಎಲ್ಲ ಅಭಿಪ್ರಾಯಗಳ ಎಲ್ಲ ಪಕ್ಷಗಳ ಸಂಘಟನೆಯಾಗಿ ಉಳಿಯುವುದಿಲ್ಲ. ಪಕ್ಷಗಳ ರಾಜಕೀಯ ಬರುವ ಸಂದರ್ಭದಲ್ಲಿ ಕಾಂಗ್ರೇಸ್ ಸಂಸ್ಥೆ ಉಳಿಯುವುದಿಲ್ಲ ಎಂಬ ಅಭಿಪ್ರಾಯ ಅವರದಾಗಿತ್ತು ಎಂದು ತೋರುತ್ತದೆ.

ಆ ನಂತರದ ಹತ್ತು ವರ್ಷಗಳ ರಾಜಕೀಯದಲ್ಲಿ ಪ್ರಾಂತಿಕ ಸರಕಾರಗಳ ರಚನೆ, ಕಾಂಗ್ರೇಸ್ ಆಡಳಿತದ ಪ್ರಾರಂಭ ಮತ್ತು, ಆಡಳಿತದ ಪ್ರಾರಂಭ ಮತ್ತು ವಿಸರ್ಜನೆ, ೨ ನೇ ಮಹಾಯುದ್ದದ ಪ್ರಾರಂಭ, ಭಾರತದ ರಾಜಕೀಯ ಭವಿಷ್ಯಕ್ಕಾಗಿ ಮಾತುಕತೆಗಳು, ಕಾಂಗ್ರೇಸ್ ಅಧ್ಯಕ್ಷರಾಗಿದ್ದ ಸುಭಾಸ್‌ಚಂದ್ರ ಭೋಸರ ನಿರ್ಗಮನ, ಬ್ರಿಟೀಷ್‌ರನ್ನು ಓಡಿಸಲು ಸಶಸ್ತ್ರ ಪ್ರಯತ್ನಕ್ಕಾಗಿ ಅವರ ವಿದೇಶಾಗಮನ.

೧೯೪೨ರ ಭಾರತ ಬಿಟ್ಟು ತೊಲಗಿ ಚಳುವಳಿಗೆ ಗಾಂಧೀಜಿ ಅಂಕಿತ ದೊರೆಯಿತು. ಆದರೆ ಅದು ಗಾಂಧಿ ಪ್ರಣೀತ ಚಳುವಳಿಯಾಗಿರಲ್ಲ, ಹಿಂಸಾತ್ಮಕವಾಗಿತ್ತು. ಸಾರ್ವಜನಿಕ ಆಸ್ತಿಪಾಸ್ತಿಗಳ ನಷ್ಟವನ್ನುಂಟು ಮಾಡಿದರೆ ಸರಕಾರ ತಾನೇ ಮಣಿಯುತ್ತದೆ ಎಂದು ಈ ಚಳುವಳಿಯ ಮೂಲ ಮಂತ್ರ. ಅಸಂಖ್ಯ ದೇಶಪ್ರೇಮಿಗಳನ್ನು ಆಕರ್ಷಿಸಿದರೂ ಸ್ವಾತಂತ್ರ್ಯಾ ನಂತರದ ಭಾರತದಲ್ಲಿಯೂ ಅದು ದೇಶಪ್ರೇಮಿಗಳನ್ನು ಆಕರ್ಷಿಸಿದರೂ ಸ್ವಾತಂತ್ರ್ಯಾ ನಂತರದ ಭಾರತದಲ್ಲಿಯೂ ಅದು ಮುಂದುವರಿಯಿತು. ಬೇರೆ ಬೇರೆ ಉದ್ದೇಶಗಳಿಗಾಗಿ – ಗಾಂಧೀಜಿ ಕಲಿಸಿದ ಅಹಿಂಸಾತ್ಮಕ ಹೋರಾಟ ಅಂದಿನಿಂದ ಕಣ್ಮರೆಯಾಯಿತು.

ಈ ಹಿನ್ನಲೆಯಲ್ಲಿ ಗಾಂಧೀಜಿ ದೇಶಕ್ಕೆ ನೀಡಿದ್ದೇನು? ಯಾವ ಮೌಲ್ಯಗಳನ್ನು ಸಮರ್ಥಿಸಿ ನಮ್ಮನ್ನು ಮನುಷ್ಯರನ್ನಾಗಿ ಮಾಡಿದರು ಎನ್ನುವುದನ್ನು ಅರ್ಥ ಮಾದಿಕೊಳ್ಳಬೇಕು. ೧೯೦೯ ರಲ್ಲೇ ಗೋಖಲೆಯವರು ಗಾಂಧೀಜಿಯವರ ಬಗ್ಗೆ ಹೇಳಿದ್ದರು “ನೆನಪಿಡಿ- ಭಾವನೆಗಳನ್ನು ಉದ್ರೇಕಿಸುವ ಸಂದರ್ಭದಲ್ಲಿ ತ್ಯಾಗಕ್ಕೆ ಅವರನ್ನು ಅಣಿ ಮಾಡುವ, ಹಿರಿಯ ಆದರ್ಶಗಳಿಗಾಗಿ ಅವರನ್ನು ಬಡಿದೆಬ್ಬಿಸುವ ಕಾರ್ಯದಲ್ಲಿ ಗಾಂಧಿ ಉತ್ತಮ ಮುಖಂಡರು, ಆದರೆ ಒಂದು ಎಚ್ಚರಿಕೆ, ಬಹಳ ಸೂಕ್ಷ್ಮವಾದ ಮಾತು ಕತೆಗಳು ನಡೆಯುವ ಸಂದರ್ಭದಲ್ಲೆಲ್ಲ ಮುಂಜಾಗ್ರತೆ, ಎಚ್ಚರಿಕೆ, ಬುದ್ದಿವಂತಿಕೆ, ನಿಪುಣತೆ ಏನೆಲ್ಲ ಯಶಸ್ವಿಗೆ ಬೇಕೊ- ಎಡೀ ರೊಟ್ಟಿಯೂ ಇಲ್ಲವಾಗಿಸುವ ಸಂದರ್ಭದಲ್ಲ ಅರ್ಧ ರೊಟ್ಟಿಯಾದರೂ ಸಾಕು ಎನ್ನುವ ಮಾತುಕತೆಯಲ್ಲಿ – ಭಾರತವು ಗಾಂಧೀಯಲ್ಲಿ ವಿಶ್ವಾಸವಿಡುವುದಿಲ್ಲ.

ಒಂದು ದೃಷ್ಟಿಯಿಂದ ನೋಡಿದರೆ ಗೋಖಲೆ ಮತ್ತು ಗಾಧೀಜಿ ಇಬ್ಬರ ಜೀವನ ಕ್ರಮವು ಒಂದು ಉದಾಹರಣೀಯವೂ ಹೌದು, ಎಚ್ಚರಿಕೆಯೂ ಹೌದು. ಭಾವಶುದ್ದಿ ಭೌತಕ ಆಸ್ತಿ – ಆಸಕ್ತಿಗಳಿಗೆ ಉಪೇಕ್ಷೆ, ಅಧಿಕಾರದಲ್ಲಿ ಅನಾಸಕ್ತಿ, ಧರ್ಮಾತೀತವದ ನೈತಿಕತೆ, ಸತ್ಯ- ಅಹಿಂಸಾ ಕ್ರಮದಲ್ಲಿ ನಿಷ್ಠೆ ಇವೆಲ್ಲ ಹೆಚ್ಚಿನ ಗುಣಗಳಾಗದ್ದರೂ ಕೂಡಾ ಪರಂಪರಾಗತವಾದ ಸಂಸ್ಕೃತಿಯ ಹಿನ್ನಲೆಯಲ್ಲಿ ಆಧುನಿಕ ದೃಷ್ಟಿಕೋನವನ್ನು ಪ್ರಾರಭಿಸುವ ಕ್ರಮಕ್ಕೆ ಇವು ಪೂರ್ತಿಯಾಗಿ ಸಹಾಯಕವಾಗಲಾರವು. ಗೋಖಲೆಯವರ ದೃಷ್ಟಿಕೋನ ವಿಚಾರವಂತಿಕೆಯದಾದರೆ ಗಾಂಧೀಜಿಯವರು ಆತ್ಮಸಾಕ್ಷಿಯ – ಅಹಿಂಸಾತ್ಮಕ ಅಸಹಕಾರದ್ದು. ಬಹುಶಃ ಇವೆರಡೂ ಕೂಡಿದರೆ ಮಾತ್ರ ಇಂದಿನ ಸಮಸ್ಯೆಗಳನ್ನು ಯಶಸ್ವಿಯಾಗಿ ಎದುರಿಸಬಹುದೇನೋ.

ಗಾಂಧೀಜಿ ಕಟ್ಟಿದ ಕಾಂಗ್ರೇಸ್ ಮಹಾ ಸಂಸ್ಥೆಯಲ್ಲಿ ವಿವಿಧ ರಾಜಕೀಯ ಅಭಿಪ್ರಾಯದವರ ಪ್ರವೇಶವೂ ಸಾಧ್ಯವಾಯಿತು. ಸಮಾಜವಾದಿ ಒಲವಿನ ಜವಾಹರಲಾಲ್ ನೆಹರೂ, ಸುಭಾಸಂದ್ರ ಭೋಸ್, ಸಮಾಜವಾದಿ ಒಲವಿನ ಮಾನವೇಂದ್ರನಾಥ್ ರಾಯ್ ಇವರು ಆಂದೋಲನದ ಕಾಲದಲ್ಲಿ ಮುಖ್ಯರು. ಯಾಕೆಂದರೆ ರಷ್ಯದ ಮಹಾಕ್ರಾಂತಿಯಿಂದ ಪ್ರಭಾವಿತರಾದ ರಾಜಕೀಯ ಆರ್ಥಿಕ ಶೋಷಣೆಯನ್ನು ತಪ್ಪಿಸುವ ಉದ್ದೇಶದಿಂದ ದೇಶದ ಆರ್ಥಿಕ ಭವಿತವ್ಯವನ್ನು ಜನತಯೇ ರೂಪಿಸಬಹುದೆಂಬ ಆಶಯದಿಂದ ಕಾಂಗ್ರೇಸ್ನ್ನು ಆಂತರಿಕವಾಗಿ ಬಲಪಡಿಸಲು ಅಥವಾ ಪರಿವರ್ತಿಸಲು ಇವರ ಪ್ರಯತ್ನ ನಡೆಯಿತು. ಆದರೆ ಗಾಮಧೀ ಮುಖಂಡತ್ವದಲ್ಲಿ ಸಮಾಜವಾದೀ ವಿಚಾರಗಳಿಗೆ, ಪ್ರಯತ್ನಗಳಿಗೆ ಆಸ್ಪದ ಸಿಗಲಿಲ್ಲ. ಕಾಂಗ್ರೇಸ್ ಅಧ್ಯಕ್ಷರಾಗಿ ಜವಹರಲಾಲ್ ನೆಹರು ೧೯೩೧ ರಲ್ಲೇ ಆರ್ಥಿಕ ಕಾರ್ಯಕ್ರಮವನ್ನು ಸಾರಿದರೂ ಅದು ಜಾರಿಯಲ್ಲಿ ಬಂದದ್ದು ಸ್ವಾತಂತ್ರ್ಯದ ನಂತರ. ಕಾಂಗ್ರೇಸ್ ಅಧ್ಯಕ್ಷರಾಗಿ ಯೋಜನಾ ಸಮಿತಿಗಳನ್ನು ನೇಮಿಸಿ ಕಾರ್ಯಾರಂಭ ಮಾಡಿಸಿದರೂ ಆ ವರದಿಗಳು ಪ್ರಕಟವಾದದ್ದಾಗಲೀ ಅವುಗಳಂತೇ ಒಂದು ಕ್ರಮ ಜಾರಿಗೆ ಬಂದದ್ದಾಗಲೀ ಸ್ವಾತಂತ್ರ್ಯದ ನಂತರ – ಸಮತಾವಾದಿಗಳು ಬೇರೆಯಾಗಿ ರಾಯ್ ಅವರನ್ನು ಬಿಟ್ಟು ಪ್ರತ್ಯೇಕ ಪಕ್ಷವನ್ನು ಸಂಘಟಿಸಿ ಆಮೇಲೆ ಅದನ್ನು ವಿಸರ್ಜಿಸಿದ್ದು, ಪಕ್ಷರಹಿತ ರಾಜಕೀಯ ಸಾರಿದ್ದು ಬಹು ಮುಖ್ಯವಾದ ಅಂಶ. ಪಂಡಿತ ನೆಹರು ಅವರ ಕ್ರಾಂತಿಕಾರಿ ವಿಚಾರಗಳು ಗಾಂಧಿ ಮುಖಂಡತ್ವದಲ್ಲಿ ಪ್ರಯೋಗಕ್ಕೆ ಬರಲು ಅವಕಾಶವೇ ಇರಲಿಲ್ಲ. ಆದರೂ ಗಾಂಧೀ ನಂತರ ಅವರ ಉತ್ತರಾಧಿಕಾರಿ ಯಾರು ಎಂದು ಕೇಳಿದಾಗ ಜವಾಹರ ಲಾಲ್ ನೆಹರು ಎನ್ನುವುದೇ ಸ್ಪಷ್ಟವಾಯಿತು.

ಇದು ೧೯೦೪ರಿಂದ ೧೯೪೨ರ ವರೆಗಿನ ಸ್ವಾತಂತ್ರ್ಯಾಂದೋಲನದ ಮುಖಂಡತ್ವದ ಮೌಲ್ಯಗಳ ಆದರ್ಶಗಳ ಕತೆ. ಕಾಂಗ್ರೇಸ್ ಮಹಾ ಸಂಸ್ಥೆ ಬೆಳೆದು ಬಂದಂತೆ ಸ್ವರಾಜ್ಯ ಸ್ವದೇಶಿ ಅಸಹಾಕಾರ ಸತ್ಯಾಗ್ರಹ ರಚನಾತ್ಮಕ ಕಾರ್ಯಕ್ರಮಗಳು ರೂಪಿತವಾದ ರೀತಿ ಅಸ್ಪೃಶ್ಯತಾ ನಿವಾರಣೆಯಾಗಲೀ ಹಿಂದೂ ಮುಂಸ್ಲೀಂ ಸಮಸ್ಯೆಯಾಗಲೀ ಭವಿಷ್ಯ ಭಾರತದ ರಾಜಕೀಯ ಸ್ವರೂಪವನ್ನೇ ಅವಲಂಬಿಸಿ ಪರಿಹಾರ ಕಾಣದೇ ಉಳಿದುಕೊಂಡಿದ್ದನ್ನು ಆನಂತರ ಉಳಿದ ವಿಷಯಗಳ ಇತ್ಯರ್ಥ ತಾನೇ ಆಗುತ್ತದೆ ಎಂಬ ಭಾವನೆಯೂ ಬೇರೂರಿದ್ದನ್ನು ಕಾಣುತ್ತೇವೆ. ರಚನಾತ್ಮಕ ಕಾರ್ಯಕ್ರಮ, ಖಾದಿ ಚರಕಗಳನ್ನು ಗಾಂಧೀಜಿ ಸಂಘಟಿಸಿದ್ದರಿಂದ ಅವು ಕೆಲವೊಂದು ಕಾಲ ಕಾಂಗ್ರೇಸ್ಸಿನ ಸಂಕೇತಗಳದವು.

ಇಂದು: ಸ್ವಾತಂತ್ರ್ಯ ಬಂದು ೪೦ ನೆಯ ವರ್ಷ ಪ್ರಾರಂಭವಾಗುತ್ತಿದೆ. ನಮ್ಮ ದೇಶದ ಸಾಧನೆ ಕಡಿಮೆಯೇನಲ್ಲ. ಪ್ರಪಂಚದ ರಾಷ್ಟ್ರಗಳ ಮಾಲಿಕೆಯಲ್ಲಿ, ಮೂರನೆಯ ಜಗತ್ತಿನ ರಾಷ್ಟ್ರಗಳಲ್ಲಿ ನಾವು ಪ್ರಮುಖರಾಗಿದ್ದೇವೆ. ಈ ೪೦ ವರ್ಷಗಳಲಲ್ಲಿ ಪ. ಜವಹರಲಾಲ್ ನೆಹರು ಆನಂತರ ಶ್ರೀಮತಿ ಇಂದಿರಾಗಾಂಧಿ ಅವರು ರೂಪಿಸಿದ ದೋರಣೆಗಳಿಂದಾಗಿ ವಿಜ್ಞಾನ ತಂತ್ರಜ್ಞಾನಗಳನ್ನಾಧರಿಸಿದ ಅಭಿವೃದ್ದಿಯ ಕಾರ್ಯಕ್ರಮಗಳನ್ನು ಒಪ್ಪಿಕೊಂಡು ೭ ಪಂಚವಾರ್ಷಿಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ದೇಶದ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ನಡೆಸಿದ್ದಾಗಿದೆ. ಅದಕ್ಕೆ ತಕ್ಕ ಸಂಶೋಧನಾ ಕೇಂದ್ರಗಳ ಜಾಲವನ್ನೇ ದೇಶದಾಂದ್ಯಂತ ಪ್ರಾರಂಭಿಸಿದ್ದಾಗಿದೆ. ಅಣುಯುಗ ಪ್ರವೇಶಿಸಿದ್ದೇವೆ, ಬಾಹ್ಯಾಕಾಶ ಪ್ರಯೋಗಗಳನ್ನು ಮಾಡಿದ್ದೇವೆ. ಪ್ರಪಂಚದ ಔದ್ಯೋಗಿಕ ರಾಷ್ಟ್ರಗಳಲ್ಲಿ ೮ ನೆಯ ಸ್ಥಾನ ನಮ್ಮದು. ಇಷ್ಟೆಲ್ಲ ಸಾಧನೆ ಇದ್ದರೂ ಬಡತನದ ಪ್ರಶ್ನೆ ಇನ್ನೂ ಪೆಡಂಭೂತವಾಗಿಯೇ ಇದೆ. ಅಂದು ನವರೋಜಿ ಬ್ರಿಟೀಷ್ ಸರಕಾರದ ಆಡಳಿತವನ್ನು ವಿಶ್ಲೇಷಿಸಿ ಎತ್ತಿದ ಪ್ರಶ್ನೆ ಅದು. ಇಂದು ಜೊತೆಗೆ ಜಾತ್ಯಾತೀತತೆಯ ಆದರ್ಶವನ್ನೊಪ್ಪಿಕೊಂಡರೂ ಹಿಂದು ಮುಂಸ್ಲೀ ಸಮಸ್ಯೆ ಇದೆ. ಸಾಂವಿಧಾನಿಕವಾಗಿ ಅಸ್ಪೃಶ್ಯತೆಯ ನಿವಾರಣೆ ಮಾಡಿದರೂ ಹರಿಜನರ ಶೋಷಣೆ ಇನ್ನೂ ನಡೆದಿದೆ. ನಿರುದ್ಯೋಗ ಸುಶಿಕ್ಷಿತರಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಬೆಳೆಯುತ್ತಿದೆ. ನಗರೀಕರಣ ಔದ್ಯೋಗೀಕರಣ ವಿಷಮ ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ. ಇವುಗಳ ಪರಿಹಾರಕ್ಕೆ ದಾರಿ ಕಾಣದಿರುವ ಹಿನ್ನೆಲೆಯಲ್ಲಿ ಹಿಂದಿನ ಆದರ್ಶಗಳನ್ನು ನೆನಪಿಸಿಕೊಳ್ಳಬೇಕು.

ಸತ್ಯ ಅಹಿಂಸೆಗಳ ಅನುಷ್ಠಾನ ಹಿಂದಿತ್ತು. ನವರೋಜಿ, ಗೋಖಲೆ, ಟಿಳಕ, ಗಾಂಧಿ ಸತ್ಯ ಅಚಲ ಶ್ರದ್ದೆಯನ್ನಿಟ್ಟು, ಅದಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಮಹಾನ್‌ ಧುರೀಣರು. ರಾಷ್ಟ್ರೀಯ ಜೀವನದಲ್ಲಿ ಅನಂತರ, ಸತ್ಯವೂ ಮೌಲ್ಯವಾಗಿ ಮುಂದುವರಿಯಲಿಲ್ಲ. ಹಿಂಸೆ ಗಾಂಧೀಜಿಯ ಜೀವಮಾನದಲ್ಲೇ ೧೯೪೨ ಮತ್ತು ಅನಂತರ ಮೂಲೆಗುಂಪಾದ ಮೌಲ್ಯವಾಯಿತು. ಸ್ವರಾಜ್ಯ – ಸ್ವದೇಶಿಗಳಲ್ಲೂ- ಬದಲಾವಣೆ ಸ್ವತಂತ್ರ್ಯಭಾರತ೧೯೪೭ ರಲ್ಲಿ ;ಸ್ವತಂತ್ರ್ಯ ಗಣರಾಜ್ಯ ೧೯೫೦ ರಲ್ಲಿ ಪ್ರಜಾಸತ್ತಾತ್ಮಕವಾದ ಸಂವಿಧಾನ ಪಡೆದಾಗ ಬ್ರಿಟೀಷ್ ಮಾದರಿಯ ಆಡಳಿತ ದೇಶದಲ್ಲಿ ಮುಂದುವರಿಯಿತು. ಆ ಸ್ವರಾಜ್ಯ ಪ್ರಾಂತೀಯ ರಾಜಧಾನಿಗಳನ್ನು ಬಿಟ್ಟು ಜಿಲ್ಲೆಗಳ ಮಟ್ಟಕ್ಕೆ ಇಳಿಯಲು ಮತ್ತೆ ಒಂದು ದಶಕವೇ ಕಳೆಯಿತು. ಆದರೂ ಕೇಂದ್ರೀಕೃತ ರಾಜ್ಯವ್ಯವಸ್ಥೇಯಲ್ಲಿ ರಾಜ್ಯಗಳು ಕೇಂದ್ರದ ಮೇಲೆ ಅವಲಂಬಿತ, ಜಿಲ್ಲೆಗಳು ರಾಜ್ಯದ ಮೇಲೆ ಅವಲಂಬಿತ, ಗ್ರಾಮ ಪಂಚಾಯತಗಳು ಜಿಲ್ಲಾ ಸಂಸ್ಥೆಗಳ ಮೇಲೆ ಅವಲಂಬಿತ, ಎಲ್ಲಿಯೂ ಸ್ವಾವಲಂಬನೆಗೆ ಅವಕಾಶವೇ ಇಲ್ಲ. ವಿದೇಶಿ ಉದ್ದಿಮೆಗಳು ಹೋಗಿ ಸ್ವದೇಶಿ ಉದ್ದಿಮೆಗಳು ಬಂದವು ನಿಜ, ಆದರೆ ಮಾರುಕಟ್ಟೆ, ವಿದೇಶಿ ವ್ಯಾಪಾರ ಲಾಭಗಳಿಕೆಯೇ ಮುಖ್ಯವಾಗಿ ಶೋಷಣೆ ತಪ್ಪದೇ, ಉದ್ಯೋಗಾವಕಾಶಗಳು ಬೆಳೆಯದೇ ಮೂಲಭೂತ ಅವಶ್ಯಕತೆಗಳು ಪೂರ್ತಿಯಾಗಿ ಪೂರೈಸಲಾಗದೇ, ಬಡತನ ಇನ್ನೂ ದೊಡ್ಡ ಸಂಖ್ಯೆಯಲ್ಲಿ ಇರುವ ಪರಿಸ್ಥಿತಿಯು ಈ ೪೦ ವರ್ಷಗಳಲ್ಲಿ ೭ ಯೋಜನೆಗಳಲ್ಲಿ ಕಂಡು ಬಂದಿದೆ. ಇಂದು ವಿದೇಶಿಯರಿಲ್ಲ. ಬಹುರಾಷ್ಟ್ರೀಯ ಕಂಪನಿಗಳು, ವಿದೇಶಿ ತಂತ್ರಜ್ಞಾನ, ಪ್ರಪಂಚದಾದ್ಯಂತ ಸಾಲ, ಭಾರತವನ್ನು ಆಕ್ರಮಿಸಿದೆ. ವಿದೇಶಿ ವಸ್ತುಗಳ ಬಗ್ಗೆ ಮೋಹ ಮಿತಿಮೀರಿದೆ. ಎಲ್ಲಿದೆ ಸ್ವದೇಶ?- ಈ ಹಿನ್ನಲೆಯಲ್ಲಿ ದೇಶಿಯ ಸಂಶೋಧನೆಗೆ ತ್ರಂತ  ಜ್ಞಾನಕ್ಕೆ, ಅಭಿವೃದ್ದಿಯ ಕಾರ್ಯಕ್ಕೆ ಪ್ರೋತ್ಸಾಹ ಕಡಿಮೆ, ರಾಷ್ಟೀಯ ಶಿಕ್ಷಣ ಇನ್ನೂ ೪೦ ವರ್ಷಗಳು ಕಳೆದರೂ ರೂಪಿತವಾಗಲೇ ಇಲ್ಲ. ೨೧ ನೇ ಶತಮಾನಕ್ಕೆ ಕಾಲಿಡುತ್ತಿದೇವೆ. ವಿಜ್ಞಾನ ತಂತ್ರಜ್ಞಾನಗಳಿಗೆ ಪ್ರೋತ್ಸಾಹವಿದ್ದರೂ ಅದನ್ನು ದೇಶೀಯವಾಗಿ ಮೂಡಿಕೊಳಲು ಪುರಸ್ಕಾರವಿಲ್ಲ. ಸತ್ಯಾಗ್ರಹ ಪ್ರತಿಯೊಂದು ಸಂಘಟಿತ ಗುಂಪು ತನ್ನ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವ ಅಸ್ತ್ರವಾಗಿ ಪರಿಣಮಿಸಿದೆ. ಅಸ್ಪೃಶ್ಯತಾ ನಿವಾರಣೆ ಸಂವಿಧಾನಿಕವಾಗಿ ಆಗಿದೆ. ಆದರೆ ದೇಶದಲ್ಲಿ ಅಲ್ಲಲ್ಲಿ ಹರಿಜನರ ಮೇಲೆ ನಡೆಯುತ್ತಿರುವ ಅನ್ಯಾಯ ದಬ್ಬಾಳಿಕೆಗಳ ಕತೆಯೂ ಹೇಳತೀರದು. ಹಿಂದೂ-ಮುಸ್ಲೀಂ ಸಮಸ್ಯೆ ದೇಶ ಇಬ್ಬಾಗವಾದರೂ ಬಗೆಹರಿದಿಲ್ಲ. ಕಾಲಕಾಲಕ್ಕೆ ಅತಿರೇಕ ದಂಗೆಗಳು ಕಂಡುಬರುತ್ತಿವೆ. ರಾಷ್ಟೀಯ ಜೀವನ ಕ್ರಮದಲ್ಲಿ ಸಾಮರಸ್ಯ-ಇನ್ನೂ ನಾವು ಗಳಿಸಬೇಕಾದ ಆದರ್ಶ. ಜೊತೆಗೆ ಶೀಖರು ಪಂಜಾಬಿನಲ್ಲಿ, ಗೂರ್ಖಾಗಳು ಬಂಗಾಲದಲ್ಲಿ ತೀರ್ವವಾಗಿ ಪ್ರತಿಭಟಿಸುತ್ತಾರೆ. ಯಾವ ರಾಷ್ಟ್ರೀಯತೆಗೆ ಮಹತ್ವಕೊಟ್ಟು ಭಾರತ ಮಹಾನ್ ರಾಷ್ಟ್ರವಾಗಬೇಕೆಂಬ ಆಶಯವನ್ನು ಹಿಂದಿನವರು ಸಾರಿದರೋ ವಿದೇಶಿಗಳ ದೃಷ್ಟಿಯಲ್ಲಿ ಪ್ರಪಂಚದ ರಾಷ್ಟ್ರಗಳ ಸಾಲಿನಲ್ಲಿ ಭಾರತ ನೆಹರೂ ಯುಗದಲ್ಲಿ ಸ್ಥಾನ ಪಡೆದರೂ ಆಂತರಿಕವಾಗಿ ಆ ರಾಷ್ಟ್ರೀಯತೆ ಬೆಳೆದಿಲ್ಲ, ಸ್ವದೇಶಿ ಭಾವನೆಗಳಿಗೆ ಎಡೆ ಕೊಡಲಲಿಲ್ಲ. ಗಡಿಯುದ್ದ ಬಂದಾಗ ಮಾತ್ರ ಸರಕಾರವನ್ನು ಎಚ್ಚರಿಸಬಹುದೆಂಬುದು ಎಲ್ಲ ಸಂಘಟಿತ ಗುಂಪು, ಪಕ್ಷಗಳ ಅನುಭವ, ೧೯೪೨ ರ ಮಾದರಿಯ ಹಿಂಸಾತ್ಮಕವಾದ, ಸಾರ್ವಜನಿಕ ಆಸ್ತಿಪಾಸ್ತಿಗಳ ನಷ್ಟ, ತೀರ ಸಾಮಾನ್ಯ.

ನೆಹರೂ ಯುಗ ಸ್ವತಂತ್ರ ಭಾರತದ ಏಳ್ಗೆಗೆ ಶ್ರಮಿಸಿದೆ. ಕೆಲಮಟ್ಟಿಗೆ ಸಾಧಿಸಿದೆ ಎಂಬುದರಲ್ಲಿ ಎರಡಭಿಪ್ರಾಯವಿಲ್ಲ. ಆದರೆ, ಸ್ವಾವಲಂಬನೆ ಸ್ವಪ್ರಯತ್ನ ಸ್ವಾಭಿಮಾನಗಳ ಮೂಲಕ ನಮ್ಮ ತಂತ್ರಜ್ಞಾನ ಅಭಿವೃದ್ದಿ ಕ್ರಮ ಸಾರುವ ವಿಷಯದಲ್ಲಿ ಹಿಂದೇಟು ಹೊದೆದಿದೆ. ಕಾಲಕಾಲಕ್ಕೆ ಚುನಾವಣೆಗಳನ್ನು ನಡೆಸಿ, ಬಹುದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿದ್ದೇವೆ ನಿಜ, ಆದರೆ ಜನಸಾಮಾನ್ಯರ ಅನಾಸ್ಥೆ- ದ್ಯೆನಂದಿನ ಸಮಸ್ಯೆಗಳ ನಿರ್ವಹಣೆಯಲ್ಲಿ ಸರಕಾರದ ಮೇಲೆ ಅವಲಂಬನ –ಇವು ಹೋಗಿಲ್ಲ, ಹೋಗುವಂಹ ಕಾರ್ಯಕ್ರಗಳಿಗೆ ಪ್ರಾಶಸ್ತ್ಯವಿಲ್ಲ. ಆರ್ಥಿಕವಾಗಿ ಕೆಲವೇ ಆರ್ಥಿಕ ಹಿತಾಸಕ್ತರ ಕೈವಾಡದಲ್ಲಿ- ದೇಶ ಮುಂದುವರಿಯುತ್ತಿದೆ. ಎಂಬ ಆಪಾದನೆಗಳಿಗೂ ಅರ್ಥವಿಲ್ಲದೇ ಇಲ್ಲ. ನಿರುದ್ಯೋಗ, ಜನಸಂಖ್ಯಾ ಸಮಸ್ಯೆ, ಬಡತನದ ಗಂಭೀರತೆ ಅಂತ್ಯೋದಯ, ೨೦ ಅಂಶಗಳ ಕಾರ್ಯಕ್ರಂಗಳ ನಡುವೆಯೂ ಹೆಚ್ಚಾಗಿವೆ.

ಶಾಸನ ಸಭಾ ನಡವಳಿಕೆಗೆ ಗೋಖಲೆ ತೋರಿದ ದಾರಿ ಜನಸಂಘಟನೆಗೆ ಟಿಳಕರ ಮಾರ್ಗ ಗಾಂಧೀ ಹೇಳಿದ ಸ್ವದೇಶಿ, ಅಹಿಂಸಾತ್ಮಕ ಪ್ರತಿಭಟನಾಕ್ರಮ ಇವುಗಳನ್ನು ನಮ್ಮ ರಾಷ್ಟ್ರೀಯ ಜೀವನ ಕ್ರಮದಲ್ಲಿ ಅಳವಡಿಸಿಕೊಳ್ಳುವ ಬುದ್ದಿ ಇನ್ನೂ ಬರಬೇಕು. ಈ ಪರಿಸ್ಥಿತಿಯನ್ನು ವಿಶ್ಲೇಷಿಸಿ ಮೌಲ್ಯರಾಹಿತ್ಯಕ್ಕೆ ಉತ್ತರವಾಗಿ ಸಂಘಟಿತ ಪ್ರಜಾಪ್ರಭುತ್ವ ಪಕ್ಷರಹಿತ ರಾಜಕೀಯ, ಸಂಪೂರ್ಣ ಕ್ರಾಂತಿ ಇವು ಸಮಾಜವಾದಿಗಳ ಕಾರ್ಯಕ್ರಮ, ಮಾನವೇಂದ್ರನಾಥ್ ರಾಯ್, ಜಯಪ್ರಕಾಶ ನಾರಾಯಣರವರು ಪ್ರಸ್ತಾಪಿಸಿದ ಈ ಆದರ್ಶಗಳು ಇನ್ನೂ ಬಹುಸಂಖ್ಯರನ್ನು ಆಕರ್ಷಿಸಿಲ್ಲ. ಚುನಾವಣಾ ಪ್ರಧಾನವಾದ ರಾಜಕೀಯಲ್ಲಿ ಗೆಲ್ಲುವ ಮೌಲ್ಯಮೊಂದೇ ಮುಖ್ಯ. ಉಳಿದುದೆಲ್ಲಾ ಅದಕ್ಕೆ ಆದೀನವಾಗಿರುವಾಗ- ಸ್ವಾತಂತ್ರ್ಯ ಆಂದೋಲನ ಕಾಲದ ಮೌಲ್ಯಗಳಿಗೆ ನಾವು ತಿಲಾಂಜಲಿ ನೀಡಿದ್ದೇವೆಯೇ ಎಂಬ ಶಂಕೆ ಬರುವುದು ಸ್ವಾಭಾವಿಕ. ಇದು ಸತ್ಯಾಗ್ರಹಿಗಳಿಗೂ ಬುದ್ದಿ ಜೀವಿಗಳಿಗೂ, ೨೧ ನೇ ಶತಕವನ್ನು ಪ್ರವೇಶಿಸುವ ಯುವ ಸಮುದಾಯಕ್ಕೂ ಒಂದು ಆಹ್ವಾನ. ಸ್ವಾತಂತ್ರ್ಯದ ಮೌಲ್ಯಗಳು, ಸಾರಿದ ಮುಖಂಡರ ಜೀವನಕ್ರಮ ಸಾಧನೆ ಅಭ್ಯಾಸ ನಮ್ಮ ಯುವ ಪೀಳಿಗೆಗೆ ಕಡ್ಡಾಯವಾದರೆ, ಆ ತಂತ್ರ ವಿಧಾನ ಆದರ್ಶಗಳ ಪರಿಚಯ ಉಳಿದೀತು, ಇಲ್ಲವಾದರೆ ಅವೆಲ್ಲ ಬರೀ ಗತ ವೈಭವ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯದ ಆಂದೋಲನ ಪ್ರಾರಂಭವಾದದ್ದು ಟಿಳಕರ ಯುಗದಲ್ಲಿ, ಅಲ್ಲಲ್ಲಿ ತಲೆಯೆತ್ತಿದ ಹೋಂ ರೂಲ್ ಲೀಗ ಘಟಕಗಳು, ರಾಷ್ಟ್ರೀಯ ಶಿಕ್ಷಣ ಶಾಲೆಗಳು ಶಾಲೆಗಳನ್ನು ಬಿಟ್ಟು. ವೃತ್ತಿಯನ್ನು ಬಿಟ್ಟು ಸ್ವಾತಂತ್ರ್ಯಕ್ಕಾಗಿ ಧುಮಕಿದ ನಿದರ್ಶನಗಳು ಈ ಜಿಲ್ಲೆಯ ಶಿರಸಿ, ಸಿದ್ದಾಪುರ, ಕುಮಟಾ, ಹೊನ್ನಾವರ, ಅಂಕೋಲಾ, ಕಾರವಾರಗಳಲ್ಲಿ ಕಾಣಿಸಿಕೊಂಡವು. ಅನಂತರ ಗಾಂಧೀಯುಗದಲ್ಲಿ ಸಮಗ್ರ ಜಿಲ್ಲೆ ಸತ್ಯಾಗ್ರಹದ ಮಂತ್ರ ಜಪಿಸಿತು. ಅಂಕೋಲಾ ಸಿದ್ದಾಪುರಗಳು ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಪಡೆದ ಸತ್ಯಾಗ್ರಹ ಸ್ಥಾನಗಳಾಗಿದ್ದರೆ ಬನವಾಸಿಯ ಸಮೀಪ ತಿಗಣಿಯಲ್ಲಾದ ಸತ್ಯಾಗ್ರಹ ಗಾಂಧೀಜಿಯವರಿಂದಲೂ ಪ್ರಶಂಸೆ ಪಡೆಯಿತು. ೧೯೨೦ ರಲ್ಲಿ ಮತ್ತು ೧೯೩೦ ರಲ್ಲಿ ಕರ್ನಾಟಕ ಪ್ರಾಂತೀಯ ಕಾಂಗ್ರೇಸ್ ಕಮೀಟಿಯವರು ಉತ್ತರ ಕನ್ನಡ ಜಿಲ್ಲೆಯನ್ನು ಸತ್ಯಾಗ್ರಹಕ್ಕೆ ಆಯ್ಕೆ ಮಾಡಿದಾಗ ಸಮಗ್ರ ಕರ್ನಾಟಕದ ಕಾಂಗ್ರೇಸ್ ಮುಖಂಡತ್ವವೆಲ್ಲ ಇಲ್ಲಿಯ ಸತ್ಯಾಗ್ರಹದ ಕಾರ್ಯಕಲಾಪಗಳಲ್ಲಿ ಭಾಗವಹಿಸಿದ್ದನ್ನು ನೋಡುತ್ತೇವೆ. ವೈಯುಕ್ತಿಕ ಸತ್ಯಾಗ್ರಹ, ಸವಿನಯ ಕಾಯ್ದೆ ಭಂಗಗಳಲ್ಲಿ ತುರಂಗವಾಸವನ್ನು ಅನುಭವಿಸಿ ಕಷ್ಡ ನಷ್ಡಗಳನ್ನು ಕಂಡವರು ಎಷ್ಟೋ ಜನ. ೧೯೪೨ ರಲ್ಲಂತೂ ಸಾರ್ವತ್ರಿಕವಾದ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಉತ್ತರ ಕನ್ನಡಿಗರ ಪ್ರವೇಶ, ಕರ್ನಾಟಕ ಗಾಂಧಿ ಪ್ರಾಂತ್ಯವಾದರೆ ಇದು ಗಾಂಧಿ ಜಿಲ್ಲೆ  ಎನ್ನುವಷ್ಟರ ಮಟ್ಟಿಗೆ ಅಹಿಂಸೆ, ಸತ್ಯಾಗ್ರಹ ರಚನಾತ್ಮಕ ಕಾರ್ಯಕ್ರಮಗಳು, ಹರಿಜನೋದ್ದಾರ, ಸರ್ವೋದಯ ಇವೆಲ್ಲ ಇಲ್ಲಿ ಕೃತಿಗಿಳಿದವು.

ಒಂದು ದೃಷ್ಟಿಯಿಂದ ನೋಡಿದರೆ ಅಸಹಕಾರದ ಅನುಭವ ಬ್ರಿಟೀಷ್ ಆಡಳಿತದ ವಿರುದ್ದ ದಂಗೆ ೧೮೫೭ ರಲ್ಲಿ ಈ ಜಿಲ್ಲೆಗೆ ಬಂದಿದೆ. ಆಮೇಲೆ ವನದುಃಖ ನಿವಾರಣಾ ಸಮಸ್ಯೆ ೧೮೬೨ ರಲ್ಲಿ ಉ. ಕ, ಜಿಲ್ಲೆಯ ಜನ ಪ್ರದರ್ಶಿಸಿದ್ದಾರೆ. ಗಾಂಧಿಯುಗದಲ್ಲಿ ಕರನಿರಾಕರಣೆ, ಅರಣ್ಯ ಸತ್ಯಾಗ್ರಹ ಹುಲ್ಲು ಬನ್ನಿಯ ಚಳುವಳಿ ಇವೆಲ್ಲ ಆ ಸಮಸ್ಯೆಯ ಮುಂದುವರಿದ ಹೋರಾಟಗಳೇ. ಹೀಗೆ ಆಯಾ ಕಾಲದಲ್ಲಿ ನಡೆದ ಹೋರಾಟದಲ್ಲಿ ಈ ಜಿಲ್ಲೆ ಹಿಂದೆ ಬಿದ್ದಿಲ್ಲ.

ಆದರೆ ಸ್ವರಾಜ್ಯದ ಮಂತ್ರವನ್ನು ಜಪಿಸಿ ಸ್ವದೇಶಿ ಧರ್ಮವನ್ನು ಅನುಸರಿಸಲು ಹೊರಟ ಜನ ಈಗ ಮೂಲೆಗುಂಪಾಗಿದ್ದಾರೆ, ರಚನಾತ್ಮಕ ಕಾರ್ಯಕ್ರಮಗಳೆಲ್ಲ ಚದುರಿ ಹೋಗಿವೆ, ಖಾದಿ ಉತ್ಪಾದನೆಯ ಒಂದೆರಡು ಚರಕಾ ಕೇಂದ್ರಗಳು ಮಾತ್ರ ಉಳಿದುಕೊಂಡಿವೆ. ಸತ್ಯಾಗ್ರಹದ ಮಹಾ ಕಾರ್ಯಗಳಲ್ಲಿ ಭಾಗವಹಿಸಿದ ಕೆಲವರು ಇನ್ನೂ ಬದುಕಿದ್ದಾರೆ, ಸರಕಾರದ ಪೆನ್ಶನ್ ಬರುತ್ತಿರಬಹುದು, ಆದರೆ ಅಂದಿನ ಆದರ್ಶಗಳಿಗೆ ಇಂದು ಅವಕಾಶವೇ ಇಲ್ಲ. ಇಂದಿನ ಪರಿಸ್ಥಿತಿಗೆ ಸತ್ಯಾಗ್ರಹಿಗಳು ಹೊಂದಿಕೊಳ್ಳಬೇಕಾದ ಸಂದರ್ಭ, ಈ ಜಿಲ್ಲೆ ಒಂದು ಎನ್ನುವ ಭಾವನೆ ಇನ್ನೂ ಬರಬೇಕಾಗಿದೆ. ಜನರನ್ನು ನಿರಾಶ್ರಿತರನ್ನಾಗಿ ಮಾಡುವ ಬಹುದೊಡ್ಡ ಸಮಸ್ಯೆ ಇಲ್ಲಿ ಎದುರಾಗುತ್ತಿದ್ದರೂ ಎಲ್ಲದಕ್ಕೂ ಸರಕಾರವನ್ನೇ ಅವಲಂಭಿಸಿದ ಜನ ಸಂಘಟಿತರಾಗುವುದು ದುರ್ಲಭ. ಕಳೆದ ೪೦ ವರ್ಷಗಳ ಆಡಳಿತದಲ್ಲಿ ಸರಕಾರದ ಮೇಲೆ ಅವಲಂಬನೆ, ಸಬ್ಸಿಡಿ ಸಾಲಗಳ ಮೇಲೆ ಜೀವನ, ಒಂದು ಕಾಲಕ್ಕೆ ಶುದ್ಧ ಚಾರಿತ್ರ್ಯಕ್ಕೆ, ನಷ್ಣಾತ ಸೇವೆಗೆ ಹೆಸರಾದ ಜನ ಇಂದು ಲಂಚಕೋರ ಆಡಳಿತದ ಕಪಿಮುಷ್ಟಿಯಲ್ಲಿ ಸಿಲುಕಿದ್ದಾರೆ. ಜಿಲ್ಲೆಯ ಸಂಪತ್ತು ಮಾಯವಾಗುತ್ತಿದೆ. ಆದರೂ ಹಿಂದೆ ತೋರಿದ ಕೆಚ್ಚು, ಸ್ವಾಭಿಮಾನ ಜಾಗ್ರತವಾಗಲು ಯಾವ ಪೀಳಿಗೆ ಇನ್ನೂ ಮುಂದೆ ಬರಬೇಕು? ಸ್ವತಂತ್ರ್ಯಾಂದೋಲನದಲ್ಲಿ ಅಥವಾ ಗಾಂಧಿಯುಗದಲ್ಲಿ ಪ್ರಮುಖ ಪಾತ್ರ ವಹಿಸಿದ ಜಿಲ್ಲೆಗೆ ಇಂದು ದೊರಕಿದ್ದು ಏನು? ಎಂದು ವಿಚಾರಿಸಿದರೆ ಇಲ್ಲಿಯ ಸಂಪನ್ಮೂಲಗಳನ್ನೆಲ್ಲ ರಾಜ್ಯದ, ರಾಷ್ಟ್ರದ ಹೆಸರಿನಲ್ಲಿ ಅವ್ಯವಸ್ಥಿವಾಗಿ ಬಳಸಿಕೂಂಡು ದೀಪದಡಿಯಲ್ಲಿ ಕತ್ತಲೆ ಸಾರುವ ಮಹಾ ವಿದ್ಯುತ್ತನ ಪ್ರಯೋಗ. ಮಾಲಿನ್ಯ ಪಸರಿಸುವ ಕಾರ್ಖಾನೆಗಳು, ನಿರಾಶ್ರಿತರಾಗಿಸುವ ರಕ್ಷಣಾ ಕ್ರಮ, ಇವುಗಳನ್ನು ಎದುರಿಸುವ ಕೆಚ್ಚು ಯಾವಾಗ ಬಂದೀತು ಎಂಬುದೇ ನಮ್ಮ ನಿರೀಕ್ಷೆ.

* * *