ದನಗಳನ್ನು ಸಾಕುವುದಲ್ಲಿ ಅವುಗಳಿಗೆ ಸಾಕಷ್ಟು ಸರಿಯಾದ ಮೇವು, ಆಹಾರವನ್ನು ಪೂರೈಸುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ದನಗಳ ಆರೋಗ್ಯ, ಬೆಳವಣಿಗೆ ಹಾಗೂ ಅವುಗಳ ಉತ್ಪಾದನಾಶಕ್ತಿ, ಅವುಗಳಿಗೆ ಕೊಡುವ ಆಹಾರವನ್ನು ಅವಲಂಬಿಸಿರುತ್ತದೆ. ಆಹಾರ ಕೊರತೆಯನ್ನು ಹೋಗಲಾಡಿಸುವುದೇ ದನಗಳ ಅಭಿವೃದ್ದಿಯ ಕಾರ್ಯದಲ್ಲಿ ಪ್ರಥಮ ಸೋಪಾನ. ಇದನ್ನು ಸಾದಿಸಲು ಎಷ್ಟು ದನಗಳನ್ನು ಮೇಯಿಸಲು ಸಾಧ್ಯವೋ ಅಷ್ಟೇ ದನಗಳನ್ನು ಸಾಕಬೇಕು ಮೇವು ಹೆಚ್ಚು ದೊರೆಯುವ ಕಾಲದಲ್ಲಿ ಅದನ್ನು ವ್ಯರ್ಥಗೊಳಿಸಬಾರದು. ಸಕಾಲದಲ್ಲಿ ಸಂಗ್ರಹಿಸಿ  ಒಣಗಿಸಿಡಬೇಕು. ಹಸಿ ಮೇವನ್ನು ಹದಮಾಡಿ ತಗ್ಗಿನಲ್ಲಿಟ್ಟು ಹುಳಿಮೇವು ಮಾಡಿ ಬೇಸಿಗೆಯಲ್ಲಿ ಉಪಯೋಗಿಸಬೇಕು. ಮೇವನ್ನು ಮಿತವ್ಯಯವಾಗಿ ಉಪಯೋಗಿಸಿ ಹಾಳಾಗದಂತೆ ನೋಡಿಕೊಳ್ಳಬೇಕು. ಸಂಗ್ರಹಿಸಿ ಕಾದಿಟ್ಟ ಮೇವು ಬೇಸಿಗೆಯಲ್ಲಿ ಹುಲ್ಲು ಇಲ್ಲವಾದಾಗ ಉಪಯೋಗಿಸಲು ಅನುಕೂಲವಾಗುತ್ತದೆ. ನೀರಾವರಿ ಅನುಕೂಲವಿರುವ ಸ್ಥಳಗಳಲ್ಲಿ ಸುಧಾರಿಸಿದ ಸಂಕರ ನೇಪಿಯರ್, ಗಿನಿ, ಪ್ಯಾರಾ, ರೋಡ್ಸ ಮೊದಲಾದ ಹುಲ್ಲಿನ ತಳಿಗಳನ್ನು ಬೆಳೆಸಿ, ಹೆಚ್ಚು ಹುಲ್ಲು ಉತ್ಪಾದಿಸಿ, ಆಹಾರ ಕೊರತೆಯನ್ನು ದೂರ ಮಾಡಬಹುದು. ಊರ ಹತ್ತಿರ ಇರುವ ಗೋಮಾಳಗಳನ್ನು ಸುಧಾರಿಸಿ, ಉತ್ತಮ ಹುಲ್ಲು ಬೀಜಗಳನ್ನು ಬಿತ್ತಿ, ಭೂಮಿಯ ಮೇಲೆ ಬಿದ್ದ ಮಳೆನೀರು, ಹರಿದು ಹೋಗದಂತೆ ಅಲ್ಲೇ ನಿಂತು ಇಂಗುವಂತೆ ಮಾಡಲು ಸಣ್ಣ ಮರದ ನೇಗಿಲಿನಿಂದ (ಕಟ್ಟಿಗೆ ರೆಂಟೆಯನ್ನು) ಮೇಲಿನ ಮಣ್ಣನ್ನು ಕೆದರಿ ಸಣ್ಣ ಸಣ್ಣ ಕಾಲುವೆಗಳೋಪಾದಿಯಲ್ಲಿ ಅಡೆತಡೆಯನ್ನು ಮಾಡಬೇಕು. ಸರಿಯಾದ ಗೊಬ್ಬರವನ್ನು ಪೂರೈಸಬೇಕು. ಅಲ್ಲಿ ಇಲ್ಲಿ ಬಿದ್ದ ಸಗಣಿಯು ಹಾಳಾಗದಂತೆ ಅಥವಾ ಅಪವ್ಯಯವಾಗದಂತೆ ನೋಡಿಕೊಳ್ಳಬೇಕು. ಗೋಮಾಳಗಳಲ್ಲಿ ಹುಲ್ಲು ಇನ್ನೂ ಬಹಳ ಎಳೆಯದಾಗಿರುವಾಗ ಅದನ್ನು ದನಗಳು ತುಳಿದು ಹಾಳು ಮಾಡಿ ಕೆಡಿಸದಂತೆ ನೋಡಿಕೊಳ್ಳುವುದು. ಅತಿ ಅವಶ್ಯಕ. ಜಮೀನುಗಳಲ್ಲಿ ಮೇವಿನ ಬೆಳೆಯನ್ನು ಬಿತ್ತಿ ಬೆಳೆಯಬೇಕು. ಹತ್ತಿಕಾಳು, ಕಡಲೆಕಾಯಿ(ಶೇಂಗಾ) ಹಿಂಡಿ ಮೊದಲಾದವುಗಳು ಸಿಗುವ ಸುಗ್ಗಿಯ ಕಾಲದಲ್ಲಿ ಅವುಗಳನ್ನು ಕೊಂಡು ಶೇಖರಿಸಿಡಬೇಕು. ಸಹಕಾರಿ ಸಂಘಗಳನ್ನು ಸ್ಥಾಪಿಸಿ ಅವುಗಳ ಮೂಲಕ ಹತ್ತಿಕಾಳು, ಹುರುಳಿ, ಕಡಲೆಕಾಯಿ (ಶೇಂಗಾ) ಹಿಂಡಿ, ಅಕ್ಕಿತೌಡು, ಬೂಸಾ ಮೊದಲಾದವನ್ನು ಒಟ್ಟುಗಟ್ಟಲೆ  ಖರೀದಿ ಮಾಡಿ ರೈತರಿಗೆ ಸರಿಯಾದ ಬೆಲೆಗೆ ಸುಲಭವಾಗಿ ಪೂರೈಸುವ ಏರ್ಪಾಟು ಮಾಡುವ ಪದ್ಧತಿಯನ್ನು ಹಳ್ಳಿಗಳಲ್ಲಿ ಬಳಕೆಗೆ ತಂದಲ್ಲಿ ದನಗಳ ಆಹಾರ ಅಭಾವದ ತೊಂದರೆಯನ್ನು ದೂರಮಾಡಬಹುದು. ಜೋಳದ ಕಣಿಕೆಯನ್ನು ಹಳ್ಳಿಗಳಲ್ಲಿ ದನಗಳಿಗೆ ೮-೧೦ ಅಂಗುಲ ಉದ್ದ ಮುರಿದು ಹಾಕುವುದು ಸಾಮಾನ್ಯ ಪದ್ಧತಿ. ಹೀಗೆ ಮಾಡುವುದರಿಂದ ದನಗಳು ಕಣಿಕೆಯ ಮೇಲಿನ ಮೃದುಭಾಗವನ್ನು (ರವದೆಯನ್ನು) ತಿಂದು ದಪ್ಪ ದಂಟನ್ನು ತಿನ್ನದೆ ಬಿಡುವ ಸಾಧ್ಯತೆ ಇದೆ. ಅದಕ್ಕಾಗಿ ಜೋಳದ ಕಣಿಕೆಯನ್ನು ೧ ಅಥವಾ೨ ಅಂಗುಲ ಉದ್ದಕ್ಕೆ ಯಂತ್ರದಿಂದ ಕತ್ತರಿಸಬೇಕು ಆಗ, ರವದೆಯ ಜೊತೆಯಲ್ಲಿ ದಂಟಿನ ಚೂರನ್ನೂ ದನಗಳು ತಿನ್ನುವುದರಿಂದ, ಮೇವಿನ ಪೂರ್ಣ ಉಪಯೋಗವಾಗುತ್ತದೆ.

ಬೆಳೆಯುವ ಎಳೆಯ ಕರುಗಳಿಗೆ ವರ್ಷದ ಹನ್ನೆರಡೂ ತಿಂಗಳು ಉತ್ತಮ ಮೇವಿನ ಜೊತೆಗೆ ಸ್ವಲ್ಪ ಪೌಷ್ಟಿಕ ಆಹಾರವನ್ನು ಕೊಟ್ಟು ಬೆಳೆಸುಬೇಕು. ಏಕೆಂದರೆ ಇಂದಿನ ಕರುಗಳೇ ಮುಂದಿನ ಹೋರಿ, ಆಕಳುಗಳಾಗುವುವು. ಒಂದು ಉತ್ತಮ ಪೀಳಿಗೆಯ ಕರು, ಆರು ಕೀಳು ಕರುಗಳಿಗೆ ಸಮಾನ. ಒಂದು ಉತ್ತಮ ಕರುವಿಗೆ ಆರು ಕಗ್ಗ ಕರುಗಳಿಗೆ ಬೇಕಾಗುವಷ್ಟು ಮೇವು ಬೇಕಾಗುವುದಿಲ್ಲ. ಒಂದನ್ನು ಸಾಕುವಲ್ಲಿ ಹೆಚ್ಚು ತೊಂದರೆಯೂ ಆಗುವುದಿಲ್ಲ. ರೈತರು ಸಾಮಾನ್ಯವಾಗಿ ಹೋರಿಕರುಗಳು ಹೆಚ್ಚು ಪ್ರೀತಿ ಮತ್ತು ಶ್ರದ್ಧೆಯಿಂದ ನೋಡಿಕೊಳ್ಳುತ್ತಾರೆ. ಹಾಗೂ ಹೆಣ್ಣು ಕರುಗಳನ್ನು ಉದಾಸೀನ ಮಾಡುತ್ತಾರೆ. ಉತ್ತಮ ರೀತಿಯಲ್ಲಿ ಬೆಳೆಸುದ ಹೆಣ್ಣುಕರುಗಳು ಕೆಲವು ವರ್ಷಗಳಲ್ಲಿಯೇ ಕರುಹಾಕುವ ಸ್ಥಿತಿಗೆ ಬರುತ್ತವೆ. ತಾತ್ಸಾರ ಮಾಡದೆ ಅಕ್ಕರೆಯಿಂದ ಪೋಷಿಸಿ ಬೆಳೆಸಿದ ಹೆಣ್ಣುಕರುಗಳು ಜಾಗ್ರತೆಯಾಗಿ ಬೆಳೆದು, ಗಬ್ಬವಾಗಿ, ಕರು ಹಾಕಿ ಹೆಚ್ಚು ಲಾಭದಾಯಕವೆನಿಸುವುವು. ಹಾಲುಕೊಡುವ, ದುಡಿಯುವ ಮತ್ತು ಗಬ್ಬದ ದನಗಳಿಗೆ ಹುಲ್ಲಿನ ಜೊತೆಗೆ ಪುಷ್ಟಿಕರವಾದ ಮೇವುಗಳನ್ನು ಕೊಡಬೇಕು.

ದನಗಳ ಹಿಂಡಿನಲ್ಲಿ ಪ್ರಕೃತಿ ಸಿದ್ಧವಾಗಿ ಹೋರಿಯೇ ಅದಿನಾಯಕ, ಒಂದು ಗೂಳಿ ಅರ್ಧ ಹಿಂಡಿಗೆ ಸಮಾನ. ಯಾವಾಗಲೂ ಉತ್ತಮ ತಳಿಯ ಶ್ರೇಷ್ಠ ಜಾತಿಯ ಹೋರಿಯನ್ನೇ ದನಗಳ ಸಂತಾನಾಭಿವೃದ್ಧಿಗೆ ಉಪಯೋಗಿಸಬೇಕು. ಹೋರಿಯನ್ನು ಬೀಜಕ್ಕಾಗಿ ಆರಿಸುವಾಗ ಅದರ ವಂಶಾವಳಿಯ ಚರಿತ್ರೆಯನ್ನು ಸರಿಯಾಗಿ ತಿಳಿದಿರಬೇಕು. ಹೊರಗಿನ ನೋಟದ ಗುಣಗಳಿಗಿಂತ ಅನುವಂಶಿಕವಾಗಿ ಸಾಗಿಬಂದ ಗುಣಗಳಿಗೆ ಹೆಚ್ಚು ಮಹತ್ವ ಮತ್ತು ಪ್ರಾಧಾನ್ಯತೆ ಕೊಟ್ಟು ಹೋರಿಯನ್ನು ಆರಿಸಬೇಕು.

ಕರ್ನಾಟಕದ ವಾಯುಗುಣ, ಸನ್ನಿವೇಶ. ಆಹಾರಗಳಿಗೆ ಅನುಗುಣವಾದ ದನಗಳೆಂದರೆ ಅಮೃತ ಮಹಲ್, ಹಳ್ಳಿಕಾರ್ ಮತ್ತು ಖಿಲಾರ್ ಜಾತಿಯ ದನಗಳು ಹೂಡುವುದಕ್ಕೆ ಮತ್ತು ಹೊಲಮನೆಯ ಕೆಲಸಗಳಿಗೆ ಇವು ಉತ್ತಮವಾಗಿವೆ. ಸಿಂದಿ, ಗಿರ್, ಜರ್ಸಿ, ಹೊಲ್ ಸ್ಟೀನ್, ರೆಡ್ ಡೇನ್ ಹೋರಿಗಳನ್ನು ಮತ್ತು ಮುರ‍್ರ ಜಾತಿಯ ಕೋಣಗಳನ್ನು ಪಶುಪಾಲನಾ ಇಲಾಖೆಯವರು ಬೀಜಕ್ಕಾಗಿಯೇ ಸಾಕಿರುತ್ತಾರೆ. ಕೃತಕವೀರ್ಯಾವಾಪನ  ಕೇಂದ್ರಗಳಲ್ಲಿ ಈ ಜಾತಿ ಹೋರಿಗಳ ವೀರ್ಯವನ್ನು ಸಂಗ್ರಹಿಸಿ, ಹದಗೊಳಿಸಿ, ಶಿತಾಗಾರಗಳಲ್ಲಿ ಕಾದಿಟ್ಟಿರುತ್ತಾರೆ. ಬೇಕಾದಾಗ ಇದನ್ನು ತೆಗೆದು ಆಕಳಿಗೆ ವೀರ್ಯಾವಾಪನೆಯನ್ನು ಮಾಡುತ್ತಾರೆ. ಉತ್ತಮ ದರ್ಜೆ ವೀರ್ಯದಿಂದ ಆಕಳು ಮತ್ತು ಎಮ್ಮೆಗಳಿಗೆ ಗರ್ಭಧಾರಣೆ ಮಾಡಿಸಿದಲ್ಲಿ ಉತ್ತಮ ಹೈನ ದನಗಳನ್ನು ಉತ್ಪಾದಿಸಿ, ಹಾಲು ಹೆಚ್ಚಿಸಿ, ಪಶುಸಂಪತ್ತನ್ನು ಬೆಳೆಸಲು ಸಹಾಯಕವಾಗುವುದು.

ಕೆರೆ, ಹಳ್ಳ, ನದಿ ದಂಡೆಯಲ್ಲಿ ನಿಂತ ಹೊಲಸು ನೀರನ್ನು ದನಗಳಿಗೆ ಕುಡಿಯಗೊಡಬಾರದು. ದನ ಸತ್ತ ಕೊಟ್ಟಿಗೆಯನ್ನು ಫಿನಾಯಲ್ ಮಿಶ್ರವಾದ ನೀರಿನಿಂದ ಚೆನ್ನಾಗಿ ತಿಕ್ಕಿ ತೊಳೆದು ಸ್ವಚ್ಛ ಮಾಡಬೇಕು. ಸಗಣಿ ಮೂತ್ರದಿಗಳನ್ನು ಕಾಲಕಾಲಕ್ಕೆ ತೆಗೆದು ದೂರ ಸಾಗಿಸಬೇಕು. ಗೋಡೆಗೆ ಸುಣ್ಣ ಹಚ್ಚಿ ಶುದ್ಧಗೊಳಿಸಬೇಕು. ಕೊಟ್ಟಿಗೆಯಲ್ಲಿ ಶುದ್ಧ ಗಾಳಿ, ಬೆಳಕು ಬರುವಂತಿರಬೇಕು. ರೋಗಿ ದನಗಳೊಂದಿಗೆ ನಿರೋಗಿದನಗಳನ್ನು ಸೇರಿಸಬಾರದು. ರೋಗಿ ಮತ್ತು ನಿರೋಗಿ ದನಗಳ ಆರೈಕೆಯನ್ನು ಬೇರೆ ಬೇರೆ ಜನರು ಮಾಡುವುದು ಉತ್ತಮ. ಇದು ಸಾಧ್ಯವಿಲ್ಲದಿದ್ದಲ್ಲಿ ಮೊದಲು ನಿರೋಗಿ ದನಗಳ ಆರೈಕೆ ಮಾಡಿ ಕಡೆಯಲ್ಲಿ ರೋಗಿ ದನಗಳ ಶುಶ್ರೂಷೆ ಮಾಡಬೇಕು.

ದನಗಳ ಆಹಾರ

ಗಾಳಿ, ನೀರು ಮತ್ತು ಆಹಾರಗಳು ಪ್ರಾಣಿಗಳ ಪ್ರಾಣಧಾರಣೆಗೆ ಮೂಲಾಧಾರ ಇವುಗಳಲ್ಲಿ ಯಾವುದಾದರೂ ಒಂದರ ಅಭಾವವಾದಾಗ್ಯೂ ಪ್ರಾಣಿಯು ಜೀವಂತ ಉಳಿಯಲಾರದು. ಗಾಳಿ ಮತ್ತು ನೀರಿನ ಸೌಲಭ್ಯ ಪ್ರಾಣಿಗಳಿಗೆ ಹೆಚ್ಚು ಶ್ರಮವಿಲ್ಲದೆ ಸುಲಭವಾಗಿ ಸಿಗುವಂತೆ ಪ್ರಕೃತಿಯು ತಾನಾಗಿಯೇ ಪೂರೈಸಿ ಒಂದು ದೊಡ್ಡ ಉಪಕಾರ ಮಾಡಿರುತ್ತದೆ. ಆದರೆ ಮೂರನೆಯದಾದ ಆಹಾರಕ್ಕಾಗಿ ಸಾಕುಪ್ರಾಣಿಗಳು ಬಹುಮಟ್ಟಿಗೆ ಪರಾವಲಂಬಿಗಳಾಗಿ ಯಜಮಾನನ್ನು ಆಶ್ರಯಿಸಬೇಕಾಗಿದೆ. ಹೀಗಾಗಿ ದನಗಳ ಆಹಾರ ಪೂರೈಕೆ, ಒಂದು ದೊಡ್ಡ ಸಮಸ್ಯೆಯಾಗಿದೆ.

ಆಹಾರ ಜೀವನಕ್ಕೆ ಬೇಕಾದ ಬಹುಮುಖ್ಯ ವಸ್ತು ದನಗಳ ಬೆಳವಣಿಗೆ ಅವು ತಿನ್ನುವ ಆಹಾರವನ್ನು ಅವಲಂಬಿಸಿರುತ್ತದೆ. ದೈನಂದಿನ ಕೆಲಸಗಳಿಂದ ದನಗಳ ಶರೀರದಲ್ಲಿ ಉಂಟಾಗುವ ಸವಕಳಿಯನ್ನು ಆಹಾರ ತುಂಬಿಕೊಡುತ್ತದೆ. ದುಡಿಯಲು ಬೇಕಾದ ಶಕ್ತಿ ಮತ್ತು ಉಷ್ಣತೆ, ದನಗಳು ತಿಂದ ಆಹಾರದಲ್ಲಿ ಉತ್ಪನ್ನವಾಗುತ್ತವಲ್ಲದೆ. ರೋಗ ಪ್ರತಿಬಂಧಕ ಶಕ್ತಿಯೂ ಹೆಚ್ಚಿ ಆಕಳುಗಳು ಹೆಚ್ಚಾಗಿ ಹಾಲು ಕೊಡುವಂತಾಗುತ್ತದಲ್ಲದೆ. ಉತ್ತಮ ಆಹಾರದಿಂದ ಆಕಳ ಮಣಕ ಕಡಸುಗಳು ಜಾಗ್ರತೆಯಾಗಿ ಗರ್ಭಧಾರಣ ಮಾಡುತ್ತವೆ. ಅರ್ಧ ಹೊಟ್ಟೆತುಂಬಿದ ಆಕಳುಗಳು ಹೆಚ್ಚು ಹಾಲು ಕೊಡಲಾರವು. ಕರುಗಳು ಸಾಕಷ್ಟು ಹಾಲಿಲ್ಲದೆ ಸರಿಯಾಗಿ ಬೆಳೆಯಲಾರವು. ಅರೆಕಾಳು ತಿಂದ ಎತ್ತುಗಳು ಹೆಚ್ಚು ಶ್ರಮವಹಿಸಿ ಕೆಲಸ ಮಾಡಲಾರವು. ಸರಿಯಾಗಿ ಪಾಲನೆ ಪೋಷಣೆ ಹೊಂದದ ಹೋರಿಗಳಿಂದ ಸದೃಢವಾದ ಪೀಳಿಗೆ ಸಾದ್ಯವಿಲ್ಲ. ಈ ಎಲ್ಲ ಕಾರಣಗಳಿಂದ ದನಗಳ ಬೆಳವಣಿಗೆ ಸಂವರ್ಧನೆ, ಉತ್ಪಾದನಾ ಶಕ್ತಿ, ಆರೋಗ್ಯ ಹಾಗೂ ಅಭಿವೃದ್ಧಿಗಳು ಅವುಗಳಿಗೆ ಕೊಡುವ ಆಹಾರವನ್ನವಲಂಬಿಸಿರುತ್ತವೆ.

ದನಗಳ ಆಹಾರವು ಕೆಲವು ಘಟಕಗಳನ್ನು ಒಳಗೊಂಡಿರುತ್ತದೆ. ಒಂದೊಂದು ಘಟಕ ವಿಶಿಷ್ಟ ಉದ್ದೇಶ ಕೈಗೂಡಿಸಿ ಕೊಡಲು ನೆರವಾಗುತ್ತದೆ. ಎಲ್ಲ ಘಟಕಗಳು ಸೇರಿದ ಆಹಾರವೇ ಸರಿಯಾದ ರೀತಿಯ ಪೋಷಣೆಗೆ ಸಹಾಯಕವಾಗಬಲ್ಲದು.

ದನಗಳ ಆಹಾರದಲ್ಲಿರಬೇಕಾದ ಮುಖ್ಯ ಆಹಾರ ಘಟಕಗಳು ಈ ಕೆಳಗಿನಂತಿವೆ.

೧) ಸಸಾರಜನಕ: ಇದು ಬೆಳವಣಿಗೆ, ಮಾಂಸೋತ್ಪಾದನೆ ಮತ್ತು ಹಾಲಿನ ಉತ್ಪಾದನೆಗೆ ಅವಶ್ಯಕವಾಗಬೇಕು.

೨) ಶರ್ಕರ ಪಿಷ್ಟ ಮತ್ತು ಕೊಬ್ಬು : ಇವು ದನಗಳಿಗೆ ಬೇಕಾದ ಶಕ್ತಿಮತ್ತು ಉಷ್ಣತೆಯನ್ನು ಪೂರೈಸುತ್ತವೆ.

೩) ಲವಣ ಮತ್ತು ಖನಿಜಗಳು: ಇವು ದನಗಳ ಎಲುಬು, ಕೊಂಬು ಮತ್ತು ಗೊರಸುಗಳ ಬೆಳವಣಿಗೆ ಮತ್ತು ಗಟ್ಟಿಯಾ‌ಗುವಿಕೆಗೆ ಸಹಾಯ ಮಾಡುತ್ತವೆ.

೪) ಜೀವ ಸತ್ವಗಳು: ಇವು ಆಹಾರವು ಸರಿಯಾಗಿ ಪಚನವಾಗಿ ರಕ್ತಗತವಾಗುವಂತೆ ಮಾಡುತ್ತವೆ, ಮತ್ತು ದೇಹದ ಎಲ್ಲ ಕೆಲಸಗಳು ಸರಿಯಾಗಿ ಕ್ರಮಬದ್ದವಾಗಿ ನಡೆಯುವಂತೆ ಸಹಾಯ ಮಾಡುತ್ತವೆ.

ದನಗಳಿಗೆ ಕೊಡುವ ಆಹಾರವನ್ನು ಸ್ಥೂಲವಾಗಿ ಜೀವನಾಧಾರ ಆಹಾರ ಮತ್ತು ಉತ್ಪಾದಕ ಆಹಾರ ಎಂದು ಎರಡು ಭಾಗಗಳಾಗಿ ವಿಂಗಡಿಸಬಹುದು.

ಜೀವನಾಧಾರ ಆಹಾರ:

ದನಗಳು ಕೆಲಸ ಮಾಡಲಿ ಅಥವಾ ಬಿಡಲಿ, ಹಾಲು ಕರೆಯಲಿ ಅಥವಾ ಬಿಡಲಿ ಅವುಗಳ ಆರೋಗ್ಯವನ್ನು ಕಾಪಾಡುವುದರ ಸಲುವಾಗಿ ಕೊಡುವ ಆಹಾರಕ್ಕೆ ಜೀವನಾಧಾರ ಆಹಾರ (ಜೀವನಾಂಶ ಆಹಾರ) ವೆಂದು ಹೇಳಬಹುದು. ಈ ಆಹಾರ ಅವುಗಳ ಜೀವಧಾರಣೆಗೆ ಕೊಡಲೇಬೇಕಾದ ಆಹಾರ ಇದರಿಂದ ದನಗಳು ಸೊರಗುವುದೂ ಇಲ್ಲ. ಸೊಕ್ಕುವುದು ಇಲ್ಲ. ಕೇವಲ ತಮ್ಮ ದೈನಂದಿನ ಆರೋಗ್ಯವನ್ನು ಮಾತ್ರ ಕಾಪಾಡಿಕೊಳ್ಳುತ್ತವೆ. ಈ ಆಹಾರದ ಪ್ರಮಾಣವು ದನಗಳ ಮೈತೂಕವನ್ನು ಅವಲಂಬಿಸಿರುತ್ತವೆ. ೫೦೦ ಕಿ. ಗ್ರಾಂ. ತೂಕವಿರುವ ದನಕ್ಕೆ ಜೋಳದ ಒಣಗಿದ ಮೇವನ್ನು ೧೦ ಕಿ. ಗ್ರಾಂ. ಕೊಡಬೇಕು. ಆದರೆ ದನಗಳಿಗೆ ಕೇವಲ ಒಣ ಮೇವನ್ನು ಕೊಡುವುದು ಉಚಿತವಲ್ಲ. ಆದಕಾರಣ ಅವುಗಳಿಗೆ ಪ್ರತಿದಿನ ಕೊಡತಕ್ಕ ಒಣಮೇವಿನಲ್ಲಿ ಸ್ವಲ್ಪ ಕಡಿಮೆ ಮಾಡಿ, ಅದರ ಬದಲಾಗಿ, ಕಡಿಮೆ ಮಾಡಿದ ಪ್ರತಿ ಒಂದು ಕಿ. ಗ್ರಾಂ. ಒಣಮೇವಿನ ಬದಲು ಐದು ಕೆ. ಜಿ. ಹಸಿ ಸಜ್ಜೆ  ಮೇವನ್ನಾಗಲಿ ಅಥವಾ ನಾಲ್ಕು ಕಿ. ಗ್ರಾಂ. ಹಸಿಜೋಳದ ಮೇವನ್ನಾಗಲಿ ಅಥವಾ ಮೂರು ಕಿ. ಗ್ರಾಂ. ಹಸಿಹುಲ್ಲನ್ನಾಗಲಿ ಕೊಡಬಹುದು. ಈ ಆಹಾರ ಕೇವಲ ಹೊಟ್ಟೆ ತುಂಬಿಸುವ ಆಹಾರ. ಇದನ್ನು “ಈಡುಣಿಸು” ಎನ್ನಬಹುದು ದನಗಳ ಹೊಟ್ಟೆಯಲ್ಲಿ ನಾಲ್ಕು ಭಾಗಗಳಿರುತ್ತವೆ (ರೂಮೆನ್, ರೆಟಿಕ್ಯುಲಂ, ಒಮೇಸಮ್, ಅಬೋಮೇಸಮ್) ಆಹಾರವನ್ನು ತಿಂದೊಡನೆ ಮೊದಲು ಅದು ಹೋಗಿ ಸೇರುವ ಹೊಟ್ಟೆಯ ಭಾ‌ಗಕ್ಕೆ “ರೂಮೆನ್” ಎಂದು ಕರೆಯುತ್ತಾರೆ. ಇದು ಬಹಳ ದೊಡ್ಡದಾಗಿರುತ್ತದೆ. ಇದರಲ್ಲಿ ಸುಮಾರು ೬೦ ರಿಂದ ೭೫ ಕಿ. ಗ್ರಾಂ. ತೂಕದ ಮೇವು ಹಿಡಿಸುತ್ತದೆ. ಅದರಿಂದ ದನಗಳಿಗೆ ಒಂದು ಹಿಡಿ ಮೇವು ಹಾಕಿದರೆ ಸಾಲದು. ಹೊರೆ ಹೊರೆಯಾಗಿ ಹಾಕಬೇಕು. ಈ ದೊಡ್ಡ ಹೊಟ್ಟೆ ಭರ್ತಿಯಾಗುವಷ್ಟು ಆಹಾರ ಕೊಡದಿದ್ದರೆ ಅವುಗಳ ಪಚನಕ್ರಿಯೆಯ ಕೆಲಸ ಸರಿಯಾಗಿ ಸಾಗುವುದಿಲ್ಲ. ಮೊದಲಿನ ಹೊಟ್ಟೆಯ ಭಾಗವು ತುಂಬಿದ ಮೇಲೆ ದನವು ಆಹಾರವನ್ನು ಮರುಕಳಿಸಿ ಪುನಃ ಬಾಯಿಯಲ್ಲಿ ತಂದು ಮೆಲುಕು ಹಾಕಿ ನುಂಗಿದಾಗ ಮಾತ್ರ ಅದು ನಿಜವಾದ ಜಠರವಾದ ನಾಲ್ಕನೆಯ ಭಾಗವನ್ನು ಸೇರುತ್ತದೆ. ಆಗ ಅದರ ಪಚನಕ್ರಿಯೆಯಾಗುತ್ತದೆ. ಹೀಗೆ ಒಮ್ಮೆತಿಂದ ಆಹಾರವನ್ನು ಮೆಲುಕಾಡಿಸಲು ದನಗಳಿಗೆ ಅವಕಾಶ ಕೊಡಬೇಕು. ಪ್ರತಿ ಸಲಕ್ಕೆ ಆಕಳು ಎತ್ತುಗಳಿಗೆ. ಮೇವು ತಿನ್ನಲು ಎರಡು ಗಂಟೆ ಹಾಗೂ ಪೌಷ್ಟಿಕ ಆಹಾರವನ್ನು ತಿನ್ನಲು ಅರ್ಧ ಗಂಟೆ ಬೇಕಾಗುತ್ತದೆ.

ಮೇವಿನ ವಿವರ: ಈಡುಣಿಸಿನ ಗುಂಪಿನಲ್ಲಿ ಒಣಮೇವು, ಹುಲ್ಲು, ಹೊಟ್ಟು ಕರಡ, ರಾಗಿಹುಲ್ಲು ಜೋಳದ ದಂಟು, ಬತ್ತದ ಹುಲ್ಲು ಇವೆಲ್ಲ ಸಮಾವೇಶವಾಗುತ್ತವೆ. ಈ ಹೊಟ್ಟೆ ತುಂಬಿಸುವ ಮೇವಿನಲ್ಲಿ ಹೆಚ್ಚಾಗಿರುವುದು ವಿವಿಧ ಆಹಾರಯುಕ್ತ ನಾರು, ಸೆದೆ (ಅಥವಾ ಗುಂಜು) . ಈ ಗುಂಜು ಮಿಶ್ರಿತವಾದ ಮೇವಿನಲ್ಲಿ ಸೆಲ್ಯೂಲೋಸ್, ಹೆಮಿಸೆಲ್ಯೂಲೋಸ್, ಪೆಕ್ಟಿನ್, ಲಿಗ್ನಿನ್ ಮೊದಲಾದ ಶರ್ಕರ ಪಿಷ್ಟಾದಿಗಳು ಅಧಿಕ ಪ್ರಮಾಣದಲ್ಲಿರುತ್ತವೆ. ದನದ ಹೊಟ್ಟೆಯ ಮೊದಲಿನೇ ಭಾಗವಾದ “ರೂಮೆನ್” ವಿವಿಧ ಬಗೆಯ ಏಕಾಣುಜೀವಿಗಳಿಂದ ಕೂಡಿರುತ್ತದೆ. ಈ ಏಕಾಣು ಜೀವಿಗಳು ಮೇವನ್ನು ಜೀರ್ಣಿಸಿ ಪೋಷಕಾಂಶಗಳನ್ನು ರಕ್ತಗತವಾಗುವಂತೆ ಮಾಡುತ್ತವೆ. ಕೆಲವು ಏಕಾಣುಜೀವಿಗಳು ಸೆಲ್ಯೂಲೋಸ್ ನ್ನು ಜೀರ್ಣಿಸಿಕೊಳ್ಳುತ್ತವೆ. ಕೆಲವು “ಬಿ” ಗುಂಪಿನ ಜೀವಸತ್ವಗಳನ್ನು ತಯಾರಿಸುತ್ತವೆ ಹಾಗೂ ಇನ್ನು ಕೆಲವು ಏಕಾಣು ಜೀವಿಗಳ ಮೇವಿನಲ್ಲಿರುವ ಅಮೈನೋ ಆಮ್ಲಗಳಿಂದ ಅಥವಾ ಯೂರಿಯಾ ಮುಂತಾದ ಸಾರಜನಕಗಳಿಂದ ದನಗಳಿಗೆ ಬೇಕಾದ ಸಸಾರಜನಕಗಳನ್ನು ತಯಾರಿಸುತ್ತವೆ. ಇದರಿಂದ ಮೆಲುಕು ಹಾಕುವ ಪ್ರಾಣಿಗಳ ಹೊಟ್ಟೆಯಲ್ಲಿರುವ ಏಕಾಣುಜೀವಿಗಳು ಮೇವನ್ನಷ್ಟೇ ಅಲ್ಲದೆ, ಗಿರಣಿ ಮತ್ತು ಕೈಗಾರಿಕಾ ಕೇಂದ್ರಗಳಲ್ಲಿ ಮಾನವನಿಗೆ ನಿರುಪಯೋಗಿಯಾದ ಆಹಾರವಸ್ತುಗಳನ್ನು ಜೀರ್ಣಿಸಿ ಸಸಾರಜನಕವನ್ನು ದನಗಳಿಗೆ ಪೂರೈಸುತ್ತವೆ. ಮೊದಲನೆಯ ಭಾಗದ ಹೊಟ್ಟೆಯಲ್ಲಿ ಏಕಾಣುಜೀವಿಗಳಿಂದ ಮೇವಿನಲ್ಲಿರುವ ಶರ್ಕರಪಿಷ್ಟಾದಿಗಳು ಪಚನವಾಗಿ ಮುಂದೆ ಶರೀರಕ್ಕೆ ಬೇಕಾದ ಶಕ್ತಿ ಮತ್ತು ಶಾಖವನ್ನು ಪೂರೈಸುತ್ತವೆ. ಈಡುಣಿಸಿನಲ್ಲಿ ಸಸಾರಜನಕಾಂಶ, ಖನಿಜಪದಾರ್ಥ ಮತ್ತು ಜೀವಸತ್ವಗಳು ಬಹಳ ಕಡಿಮೆ ಪ್ರಮಾಣದಲ್ಲಿರುತ್ತವೆ. ಮೇವುಗಳ ಪ್ರಯೋಜನ ಅವುಗಳಲ್ಲಿನ ದಂಟುಗಳ ಮೃದುತ್ವ, ರವದೆಯ ಭಾಗ ಹಾಗೂ ದಂಟುಗಳನ್ನು ಕತ್ತರಿಸಿದ ಪ್ರಮಾಣಗಳನ್ನು ಅವಲಂಬಿಸಿರುತ್ತದೆ. ಮೇವಿಗಾಗಿ ಬೆಳೆಸಿದ ಬೆಳೆಗಳನ್ನು ತೆನೆಯಾಗುವುದಕ್ಕಿಂತ ಮೊದಲು (ಹೊಡೆ ಆದಾಗ) ಕೊಯ್ದು ಉಪಯೋಗಿಸಿದಲ್ಲಿ ಬಹಳ ಉತ್ತಮ ಆಹಾರವಾಗುತ್ತವೆ. ತೆನೆಕೊಯ್ದಾದ ನಂತರದ ದಂಟಿನಲ್ಲಿ ಪೌಷ್ಟಿಕಾಂಶಗಳು ಕಡಿಮೆ ಪ್ರಮಾಣದಲ್ಲಿರುತ್ತವೆ.

i) ಜೋಳದ ಮೇವು: ಜೋಳದ ಬೆಳೆ ಕರ್ನಾಟಕದಲ್ಲಿ ಬಹುಮುಖ್ಯವಾದ ಬೆಳೆಗಳಲ್ಲಿ ಒಂದಾಗಿದೆ. ಮನುಷ್ಯನಿಗೆ ಇದರ ಕಾಳು ಮುಖ್ಯ ಆಹಾರವಾಗಿದೆ. ಹಾಗೂ ಮೇವು ದನಗಳಿಗೆ ಹೊಟ್ಟೆತುಂಬಿಸುವ ಮುಖ್ಯ ಈಡುಣಿಸಾಗಿದೆ. ಈ ಮೇವನ್ನು ಹಸಿಯಿದ್ದಾಗಲೂ ಒಣಗಿದ ಮೇಲೂ ದನಗಳಿಗೆ ಕೊಡಬಹುದು. ಈ ಮೇವನ್ನು ದನಗಳು ಪ್ರೀತಿಯಿಂದ ತಿನ್ನುತ್ತವೆ. ಕಾಳಿಗಾಗಿ ಬೆಳೆ ಬೆಳೆದದ್ದಾದರೆ ಅದರ ದಂಟು ಗಡುತರವಾಗಿ ಮೇಲಿನ ಸಿಬರು ಬಿರುಸಾಗಿರುತ್ತದೆ. ಕೇವಲ ಮೇವಿಗಾಗಿ ಬೆಳೆದದ್ದಾದರೆ ದಂಟು ಮೃದುವಾಗಿರುತ್ತದೆ. ಇದಕ್ಕೆ ಬಿತ್ತನೆಯನ್ನು ದಟ್ಟವಾಗಿ ಮಾಡಬೇಕು. ಹೊಡೆ ಬಂದ ಕಾಲಕ್ಕೆ ಕೊಯ್ದು ದನಗಳಿಗೆ ಮೇಯಿಸಿದಲ್ಲಿ ಅಂಥ ಮೇವಿನಲ್ಲಿ ಪರಮಾವದಿ ಪ್ರಮಾಣದಲ್ಲಿ ಪೋಷಕಾಂಶಗಳು ದೊರಕುವುದು. ಮುಂಗಾರಿಗಿಂತ ಹಿಂಗಾರಿ ಜೋಳದ (ಬಿಳಿಜೋಳ ಅಥವಾ ಎಣೆಗಾರ) ಮೇವು ಹೆಚ್ಚು ಪೌಷ್ಟಿಕವಾಗಿರುತ್ತವೆ. ಉತ್ತಮ ಜೋಳದ ದಂಟು ತೆಳ್ಳಗಿದ್ದು ತಿಳಿಅರಿಸಿನ ಬಣ್ಣದ ಎಲೆಗಳು ಹೇರಳವಾಗಿರುತ್ತವೆ. ರವದೆಯ ಮೇಲೆ ಕೆಂಪು ಕಪ್ಪು ಮಿಶ್ರಿತವಾದ ಚುಕ್ಕೆಗಳು ಇರುವುದಿಲ್ಲ. ಜೋಳದ ಮೇವಿನಲ್ಲಿ ಮಾಂಸೋತ್ಪಾದಕ ಮತ್ತು ಕೊಬ್ಬು ಪದಾರ್ಥಗಳು ಕಡಿಮೆ. ಪಿಷ್ಟಮಯ ಪದಾರ್ಥವು ವಿಪುಲವಾಗಿರುತ್ತದೆ. ಈಡುಣಿಸಾಗಿ ಈ ಜೋಳದ ಮೇವು ಬಹಳ ಉಪಯುಕ್ತವಾದದ್ದು.

ಜೋಳದ ಹಸಿ ದಂಟು ಎಳೆಯದಾಗಿ ಕಳಲಾಗಿದ್ದಾಗ, ದನಗಳಿಗೆ ತಿನ್ನಿಸಬಾರದು ಇಂತಹ ಕಳಲಿನಲ್ಲಿ ವಿಷದ್ರವ್ಯವಿರುತ್ತದೆ. ಈ ವಿಷವು ಹೊಟ್ಟೆಗೆ ಹೋಗಿ ಸೇರಿದಾಗ ಬದುಕಲಾರವು. ಈ ವಿಷದ ಅಂಶವು ಜೋಳದ ಬೆಳೆಯಲ್ಲಿ ಹೊಡೆಹಾಯುವವರೆಗೂ ಇರುತ್ತದೆ. ಹೊಡೆಹಾದ ನಂತರ ಬೆಳೆ ಈ ವಿಷದಿಂದ ವಿಮುಕ್ತವಾಗುತ್ತದೆ.

ii) ರಾಗಿ ಹುಲ್ಲು: ಕರ್ನಾಟಕದಲ್ಲಿ ರಾಗಿ ಬೆಳೆಯವ ಪ್ರದೇಶದಲ್ಲಿ ಜೋಳದ ಮೇವಿನಂತೆ ಒಣರಾಗಿಯ ಹುಲ್ಲನ್ನು ದನಗಳಿಗೆ ಮುಖ್ಯ ಆಹಾರವಾಗಿ ಉಪಯೋಗಿಸುತ್ತಾರೆ. ಇದು ಸಹ ಕೇವಲ ಹೊಟ್ಟೆ ತುಂಬಿಸುವ ಆಹಾರವೇ ಹೊರತು ಪೌಷ್ಟಿಕ ಆಹಾರವಲ್ಲ.

iii) ಸಜ್ಜೆಯ ಮೇವು: ಸಜ್ಜೆಯ ದಂಟು ನಿಸ್ಸತ್ವವಾಗಿರುತ್ತದೆ. ಅದು ಬಿರುಸೂ ಕೂಡ. ಇದರಲ್ಲಿ ಸಿಬರಿನ ಭಾಗವೇ ಹೆಚ್ಚು ದನಗಳು ಇದನ್ನು ಪ್ರೀತಿಯಿಂದ ತಿನ್ನುವುದಿಲ್ಲ. ಸಾಮಾನ್ಯವಾಗಿ ದನಗಳಿಗೆ ಈ ಮೇವನ್ನು ಉಪಯೋಗಿಸುವುದು ಕಡಿಮೆ. ಮೇವಿನ ಅಬ್ರ ಉಂಟಾದಾಗ ನಿರ್ವಾಹವಿಲ್ಲದೆ ಉಪಯೋಗಿಸಬಹುದು. ಸಜ್ಜೆಯ ಕಾಳು ಹಾಲುಕೊಡುವ ದನಗಳಿಗೆ ಬಹಳ ಪೌಷ್ಟಿಕವಾಗಿದ್ದು ಇದರಲ್ಲಿ ಹಾಲು ಹೆಚ್ಚುಸುವ ಗುಣವಿದೆ. ಸಜ್ಜೆಯನ್ನು ಕುದಿಸಿ ಬೆಲ್ಲ, ಅರಿಸಿನ ಮೊದಲಾದ ಮಸಾಲೆ ಸಾಮಾನುಗಳನ್ನು ಕೂಡಿಸಿ ಹೊಟ್ಟಿನ ಜೊತೆಗೆ ಕರು ಹಾಕಿದ ಮೇಲೆ ಆಕಳುಗಳಿಗೆ ಕೊಟ್ಟರೆ ಒಳ್ಳೆಯದು. ಚಳಿಗಾಲದಲ್ಲಿ ಸಜ್ಜೆಯ(ಗಂಜಿಸಂಗಟೆ) ಯು ಹಾಲುಕೊಡುವ ಎಮ್ಮೆಗಳಿಗೆ ಬಹಳ ಹಿತಕರ. ಸಜ್ಜೆಯಲ್ಲಿ ಕೊಬ್ಬು ಪದಾರ್ಥಗಳು ಬಹಳ ಪ್ರಮಾಣದಲ್ಲಿರುವುದರಿಂದ ದೇಹದಲ್ಲಿ ಉಷ್ಣತೆಯು ಬೇಗ ಹುಟ್ಟುತ್ತದೆ ದೇಹಕ್ಕೆ ಬೇಕಾವಷ್ಟು ಮಾಂಸೋತ್ಪಾದಕ ಪದಾರ್ಥವೂ ಸಜ್ಜೆಯಲ್ಲಿದೆ. ಹಾಲು ಕೊಡುವ ಆಕಳುಗಳಿಗೆ ಅರ್ಧದಿಂದ ಒಂದು ಕಿ. ಗ್ರಾಂ. ಮತ್ತು ಎಮ್ಮೆಗೆ ಒಂದರಿಂದ ಒಂದೂವರೆ ಕಿ. ಗ್ರಾಂ. ಸಜ್ಜೆಯನ್ನು ಕೊಡಬಹುದು. ಇದಕ್ಕಿಂತ ಹೆಚ್ಚು ಕೊಟ್ಟರೆ ಅಷ್ಟು ಹಿತಕರವಲ್ಲ.

iv) ಬತ್ತದ ಹುಲ್ಲು: ಇದು ಜೋಳ ಮತ್ತು ರಾಗಿಯ ಹುಲ್ಲಿಗಿಂತ ಪೌಷ್ಟಿಕಾಂಶದ ದೃಷ್ಟಿಯಿಂದ ಕೀಳುತೆರನಾದ ಆಹಾರ. ಇದನ್ನು ಜೋಳದ ಮೇವು ಮತ್ತು ರಾಗಿಯ ಹುಲ್ಲಿನೊಡನೆ ಹೋಲಿಸಿದಲ್ಲಿ ಇದರಲ್ಲಿ ಪೋಷಕ ಪದಾರ್ಥಗಳು ತೀರ ಕಡಿಮೆ ಇವೆ. ಸಜ್ಜೆಯ ಮೇವಿನಂತೆ ಇದು ನಿಸ್ಸಾರ ಮತ್ತು ನಿಸ್ಸತ್ವವಾದದು. ಮೇವಿನ ಕೊರತೆಯುಂಟಾದಾಗ ಮಾತ್ರ ಬತ್ತದ ಹುಲ್ಲನ್ನು ನಿರ್ವಾಹವಿಲ್ಲದ ಉಪಯೋಗಿಸಬಹುದು. ಬತ್ತ ಬೆಳೆಯುವ ಪ್ರದೇಶದಲ್ಲಿಯ ದನಗಳು ಬಹಳ ದುರ್ಬಲವಾಗಿರುವುದು ವಾಡಿಕೆ . ಬತ್ತದ ಹುಲ್ಲು ನಿಸ್ಸಾರ ಆಹಾರವೆಂಬುದಕ್ಕೆ ಇದೇ ಪ್ರಮಾಣ. ಬತ್ತದ ಹುಲ್ಲಿನಿಂದ ಹಾಲುಕೊಡುವ ಶಕ್ತಿ ತಗ್ಗುವುದು.

v) ಮುಸುಕಿನ ಜೋಳದ ಮೇವು: (ಗೋವಿನ ಜೋಳ) ಇದನ್ನು ಜೋಳದ ಮೇವಿನಂತೆ ಒಣಗಿಸಿಟ್ಟು ಮೇಯಿಸುವುದು ಕಡಿಮೆ. ಒಣಗಿದ ಮುಸುಕಿನ ಜೋಳದ ದಂಟನ್ನು ದನ ಇಷ್ಟಪಟ್ಟು ತಿನ್ನವುದಿಲ್ಲ. ಆದರೆ ಮುಸುಕಿನ ಜೋಳದ ಹಸಿ ಮೇವು ಬಹಳ ಉತ್ತಮ. ದನಗಳು ಇದನ್ನು ಬಹಳ ಪ್ರೀತಿಯಿಂದ ತಿನ್ನುತ್ತವೆ. ತೆನೆ ತೆಗೆದು ಉಳಿದ ಮೇವಿನಲ್ಲಿ ಪೌಷ್ಟಿಕಾಂಶ ಅತ್ಯಲ್ಪ.

ಜೋಳದ ಮೇವಿಗಿಂತ ಗೋವಿನ ಜೋಳದ ಹಸಿಮೇವು ಮೂರು ದೃಷ್ಟಿಯಿಂದ ಶ್ರೇಷ್ಠವಾಗಿದೆ.

ಅ) ವರ್ಷದ ಯಾವ ಕಾಲದಲ್ಲಿ ಬೇಕಾದರೂ ಬೆಳೆಯಬಹುದು ಮತ್ತು ಒಂದೂವರೆ ತಿಂಗಳಿನಲ್ಲಿ ಬೆಳೆ ಬಂದು ಬಿಡುವುದು.

ಆ) ಬೆಳೆಯು ಯಾವ ಅವಸ್ಥೆಯಲ್ಲಿದ್ದಾಗಲೂ ಇದನ್ನು ದನಗಳಿಗೆ ತಿನ್ನಿಸಬಹುದು.

ಇ) ಮುಸುಕಿನ ಜೋಳದ ದಂಟು ಜೋಳದ ದಂಟಿಗಿಂತ ಮೆದುವಾಗಿಯೂ, ಹೆಚ್ಚು ರಸಭರಿತವಾಗಿಯೂ ಇರುತ್ತದೆ.

ಉತ್ಪಾದಕ ಆಹಾರ:ಎತ್ತುಗಳಿಗೆ ದುಡಿಯಲು ಬೇಕಾಗುವ ಶಕ್ತಿಗಾಗಿ ಮತ್ತು ಆಕಳುಗಳಿಗೆ ಹಾಲು ಉತ್ಪಾದಿಸುವುದರ ಸಲುವಾಇಗಿ ಈ ಆಹಾರವನ್ನು ಜೀವಧಾರಣೆಗೆ ಕೊಡತಕ್ಕ ಆಹಾರದ ಜೊತೆಗೆ ಕೊಡಬೇಕು. ಪೂರ್ಣವಾಗಿ ಬೆಳೆದ ಎತ್ತು ದಿನಕ್ಕೆ ೮ ಗಂಟೆಯಂತೆ ಕೆಲಸ ಮಾಡುತ್ತಿದ್ದರೆ ಮೂರರಿಂದ ನಾಲ್ಕು ಕಿ. ಗ್ರಾಂ. ಮುಸುಕಿನ ಜೋಳದಂಥ ಶಕ್ತಿವರ್ಧಕ ಆಹಾರವು ಬೇಕಾಗುತ್ತದೆ. ಇದೇ ಪ್ರಕಾರ ೩೭೫ ಕಿ. ಗ್ರಾಂ ತೂಕ ಇರುವ ೫ ಲೀಟರ್ ಹಾಲುಕೊಡುವ ಆಕಳಿಗೆ ಮೂರು ಕಿ. ಗ್ರಾಂ. ಉತ್ಪಾದಕ ಆಹಾರ ಅಂದರೆ ಹಸಿ ಮುಸುಕಿನ ಜೋಳದ ಮೇವು ಅಥವಾ ಕಾಳುಗಳು ಮಿಶ್ರಣವನ್ನು ಕೊಡಬೇಕು. ೮ ಗಂಟೆಗಿಂತ ಹೆಚ್ಚು ಅಥವಾ ಕಡಿಮೆ ಕೆಲಸ ಮಾಡಿದರೆ ಹಾಗೂ ೫ ಲೀಟರ್ ಹಾಲಿಗಿಂತ ಹೆಚ್ಚು ಅಥವಾ ಕಡಿಮೆ ಹಾಲು ಕರೆದರೆ ಅದಕ್ಕೆ ಕೊಡತಕ್ಕ ಉತ್ಪಾದಕ ಆಹಾರದ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಮಾಡಬೇಕು.

ಬೇರೆ ಯಾವ ಯಾವ ತೆರನಾದ ಉತ್ಪಾದಕ ಆಹಾರವನ್ನು ಎಷ್ಟೆಷ್ಟು ಕೊಡಬೇಕೆಂಬುದನ್ನು ಕಂಡು ಹಿಡಿಯಲು ಅನುಕೂಲವಾಗುವಂತೆ ಉದಾಹರಣೆಗಾಗಿ ಮುಸುಕಿನ ಜೋಳದ ಮೇವನ್ನು ತೆಗೆದುಕೊಂಡಿದೆ. ಈ ಬಗ್ಗೆ ಮುಸುಕಿನ ಜೋಳದಷ್ಟೇ ಸತ್ವಯುತ ಇತರ ಆಹಾರಗಳಲ್ಲಿ ಯಾವುದನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಕೊಡಬೇಕೆಂಬುದನ್ನು ಕೋಷ್ಟಕ ೧ರಲ್ಲಿ ಸೂಚಿಸಲಾಗಿದೆ.

ಕೋಷ್ಟಕ : ಮುಸುಕಿನ ಜೋಳಕ್ಕೆ ಸರಿಯಾಗುವಂಥ ಆಹಾರಗಳ ಪಟ್ಟಿ.

ಕ್ರ.ಸಂ

ಮೇವಿನ ಹೆಸರು

ಒಂದು ಕೊ.ಗ್ರಾಂ. ಮುಸುಕಿನ ಜೋಳದ ಒಣಮೇವಿಗೆ ಬದಲು

ಪ್ರತ್ಯೇಕ ಆಹಾರ
ಸಜ್ಜೆಯ ಹಸಿ ಮೇವು ೧೫
ಜೋಳದ ಹಸಿ ಮೇವು ೧೦
ಹೂವಿಗೆ ಬಂದ ಹಸುರು ಹುಲ್ಲು
ಮುಸುಕಿನ ಜೋಳದ ಹಸಿಮೇವು
ಮಿಶ್ರ ಆಹಾರ
ಮುಸುಕಿನ ಜೋಳದ
ಹಸಿ ಮೇವು – ೫ ಭಾಗ
ಹಸಿ ಅಲಸಂದಿ ಬಳ್ಳಿ – ೨ ಭಾಗ
೧೦.೫
ಮುಸಿಕಿನ ಜೋಳದ
ಹಸಿ ಮೇವು – ೫ ಭಾಗ
ಹಸುರು ಅವರೆ ಬಳ್ಳಿ – ೨ ಭಾಗ
೧೦.೫
ಮುಸುಕಿನ ಜೋಳದ
ಹಸಿಮೇವು – ೫ ಭಾಗ
ಕಡಲೆಕಾಯಿ ಬಳ್ಳಿ – ೨ ಭಾಗ
೧೦.೫
ಮುಸುಕಿನ ಜೋಳದ
ಹಸಿಮೇವು – ೫ ಭಾಗ
ಲೂಸರನ್ ಸೊಪ್ಪು ಅಥವಾ ಹಸಿ ಹೆಸರುಬಳ್ಳಿ – ೨ ಭಾಗ
೯.೫

ಈ ಎರಡನೆಯ ಪ್ರಕಾರದ ಆಹಾರವೆಂದರೆ ಪೌಷ್ಟಿಕ ಆಹಾರ. ಇದನ್ನು “ತಿರುಳುಣಿಸು” ಎಂದು ಕರೆಯಬಹುದು. ಇದರಲ್ಲಿ ಕಡಲೆಕಾಯಿ (ಶೇಂಗಾ) ಹಿಂಡಿ, ಕುಸುಬಿಹಿಂಡಿ, ಕಾಳು, ನುಚ್ಚು, ತೌಡು, ಹೊಟ್ಟು(ಗೊಳಲಿ) , ಹುರುಳಿ, ಅವರೆ, ಹತ್ತಿಕಾಳು, ಸಜ್ಜೆ, ಅಲಸಂದಿ, ಹೆಸರು, ಕಡಲೆ, ಮಡಿಕೆ ಮೊದಲಾದ ಎಲ್ಲ ಕಾಳುಗಳೂ ಸಮಾವೇಶವಾಗುತ್ತವೆ. ಹಾಲು ಹೆಚ್ಚಲು ಹತ್ತಿಕಾಳಿನ ಬದಲು ಸಜ್ಜೆಯನ್ನು ಚೆನ್ನಾಗಿ ಕುದಿಸಿ ಕೊಡಬಹುದು. ಇದರ ಪ್ರಮಾಣ ಒಂದರಿಂದ ಎರಡು ಕಿ. ಗ್ರಾಂ. ಗಳು. ಹಾಲುಕೊಡುವ ಆಕಳುಗಳಿಗೆ ತೊಗರಿ ಕಡಲೆ ಚಿನ್ನಿಯನ್ನು ಕೊಡಬಹುದು (ತೊಗರಿ ನುಚ್ಚು, ಕಡಲೆನುಚ್ಚು ಸೇರಿದಕ್ಕೆ “ಚಿನ್ನಿ” ಎಂದು ಕರೆಯುತ್ತಾರೆ). ಚಿನ್ನಿ ಜೊತೆಯಲ್ಲಿ ಹತ್ತಿಕಾಳು ಸೇರಿಸಿ ನೆನೆಸಿ ಒಂದು ಕಿ. ಗ್ರಾಂ. ಕೊಟ್ಟಲ್ಲಿ ಹಾಲು ಹೆಚ್ಚುತ್ತದೆ. ಈ ಕಾಳುಗಳು ಒಡೆಯುವಾಗ ಹೊಟ್ಟು ಹೊರಬರುವುದು. ಆದರೆ ಇದರಲ್ಲಿ ನುಚ್ಚಿನಂತೆ ತಿರುಳು ಅಷ್ಟು ಹೆಚ್ಚಾಗಿ ಇರುವುದಿಲ್ಲ. ಗೋಪಾಲಕರು ಹೊಟ್ಟನ್ನಷ್ಟೇ ಹೆಚ್ಚಾಗಿ ಉಪಯೋಗಿಸುತ್ತಾರೆ. ಅಂತಹ ಹಸುವಿನ ಅಥವಾ ಎಮ್ಮೆಯ ಹಾಲಿನಲ್ಲಿ ಬೆಣ್ಣೆ ಭಾಗವು ಕಡಿಮೆಯಾಗಿರುತ್ತದೆ.

ಹುರುಳಿ, ಹೆಸರು, ಕಡಲೆ, ಉದ್ದು, ಅವರೆ, ಮಡಕೆ, ಅಲಸಂದಿ, ಕಡಲೆಕಾಯಿ, ಮೊದಲಾದವುಗಳ ಹೊಟ್ಟು ದನಗಳಿಗೆ ಬಹಳ ಪೌಷ್ಟಿಕ ಮತ್ತು ರುಚಿಕರ ಆಹಾರ ಇದರಲ್ಲಿ ಖನಿಜ ಮತ್ತು ಲವಣಾಂಶಗಳು ಹೆಚ್ಚು ಪ್ರಮಾಣದಲ್ಲಿರುತ್ತವೆ. ಬೆಳೆಯುವ ದನಗಳಿಗೆ, ದುಡಿಯುವ ದನಗಳಿಗೆ, ಕರೆಯುವ ದನಗಳಿಗೆ ಮತ್ತು ಗಬ್ಬದ ಆಕಳುಗಳಿಗೆ ಇದು ಉತ್ತಮ ಆಹಾರ. ಇದರ ಪ್ರಮಾಣ ಒಣಮೇವಿನ ಮೂರರಲ್ಲಿ ಒಂದು ಪಾಲು ಇರಬೇಕು. ಈ ಪೌಷ್ಟಿಕ ಆಹಾರವನ್ನು ದುಡಿಯುವ ಹಾಗೂ ಹೂಡುವ ದನಗಳಿಗೆ ಮೇಲೆ ಹೇಳಿದ ಈಡುಣಿಸಿನ ಜೊತೆಗೆ ಕೊಡಬೇಕು. ಇವುಗಳ ಜೊತೆಗೆ ಪೂರಕ ಆಹಾರ ಬೆರೆತಿರಬೇಕು. ಈ ಪೂರಕ ಆಹಾರವೆಂದರೆ ಬೂಸ (ಗೋದಿತೌಡು) ಮತ್ತು ಅಕ್ಕಿತೌಡು ಇವುಗಳಲ್ಲಿ ಉಪ್ಪು, ಸುಣ್ಣ, ರಂಜಕ, ಕಬ್ಬಿಣ ಇತ್ಯಾದಿ ಜೀವಸತ್ವಗಳು ಸೇರಿರುತ್ತವೆ. ಇವುಗಳನ್ನು ಉಪಯೋಗಿಸುವುದರಿಂದ ದನಗಳ ಎಲುಬುಗಳುಬೆಳೆದು ಗಟ್ಟಿಯಾಗುತ್ತವೆ. ಶರೀರದಲ್ಲಿರುವ ಗ್ರಂಥಿಗಳಲ್ಲಿ ಕಿಣ್ವಗಳ ಉತ್ಪಾದನೆಯನ್ನು ಹೆಚ್ಚಿಸಿ ಆಹಾರವು ಸರಿಯಾಗಿ ಪಚನವಾಗಿ ರಕ್ತಗತವಾಗುವುದರಲ್ಲಿ ಈ ಪೂರಕ ಆಹಾರ ಬಹಳ ಹೆಚ್ಚಿನ ಪಾತ್ರ ವಹಿಸುತ್ತದೆ. ಈ ಪ್ರಕಾರ ನಮ್ಮ ದನಗಳ ಬೆಳವಣಿಗೆಗೆ, ಆರೋಗ್ಯಕ್ಕೆ ಶಕ್ತಿವರ್ಧನಕ್ಕೆ ಮತ್ತು ಹೆಚ್ಚು ಹಾಲು ಕೊಡುವುದಕ್ಕೆ ಈ ಎರಡು ಪ್ರಕಾರದ ಆಹಾರವನ್ನು, ಅಂದರೆ ಜೀವನಾಧಾರ ಆಹಾರ ಅಥವಾ ಈಡುಣಿಸು, ಉತ್ಪಾಸಕ ಆಹಾರ ಅಥವಾ ತಿರುಳುಣಿಸು ಇವುಗಳನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿಕೊಡಬೇಕು. ಇವುಗಳಲ್ಲಿ ಯಾವುದಾದರೂ ಒಂದರ ಕೊರತೆಯಾದಲ್ಲಿ ದನಗಳ ಬೆಳವಣಿಗೆ ಮತ್ತು ಆರೋಗ್ಯ ಕುಂಠಿತವಾಗುತ್ತದೆ.

ಹಾಲು ಕರೆಯುವ ಅಥವಾ ಹೂಡುವ ದನಗಳಿಗೆ ಅವುಗಳ ಮೈತೂಕಕ್ಕೆ ತಕ್ಕೆಂತೆ ಆರೋಗ್ಯವಾಗಿ ಬದುಕುವುದಕ್ಕೆ ಆಹಾರ ಕೊಡುವುದಲ್ಲದೆ, ದುಡಿಮೆಗೆ ತಕ್ಕಂತೆ ಆರೋಗ್ಯವಾಗಿ ಬದುಕುವುದಕ್ಕೆ  ಆಹಾರ ಕೊಡುವುದಲ್ಲದೆ, ದುಡಿಮೆಗೆ ತಕ್ಕಂತೆ ಅಥವಾ ಹಾಲಿನ ಉತ್ಪಾದನೆಯ ಪ್ರಮಾಣಕ್ಕನುಗುಣವಾಗಿ ಪೌಷ್ಟಿಕ ಆಹಾರವನ್ನು ಕೊಡಬೇಕು ಸಾಮಾನ್ಯವಾಗಿ ೧೦೦ ಕಿ. ಗ್ರಾಂ. ಮೈತೂಕವಿರುವ ಪ್ರತಿ ದನಕ್ಕೆ, ಒಂದು ದಿವಸಕ್ಕೆ ಎರಡು ಕಿ. ಗ್ರಾಂ. ಒಣಮೇವು (ಅಂದರೆ ಸೊಪ್ಪು, ಕಣಿಕಿ) ಅಥವಾ ಇದರ ಬದಲು ಐದು ಕಿ. ಗ್ರಾಂ. ಹಸಿಮೇವು ಬೇಕಾಗುವುದು. ಸಾಮಾನ್ಯವಾಗಿ ಒಂದು ಆಕಳು ಅಥವಾ  ಎತ್ತಿನ ಮೈತೂಕ ೩೫೦ ರಿಂದ ೫೦೦ ಕಿ. ಗ್ರಾಂಗಳವರೆಗೆ ಇರುತ್ತದೆ. ಆದ್ದರಿಂದ ಇಷ್ಟು ಮೈತೂಕವಿರುವ  ದನಗಳಿಗೆ ಏಳರಿಂದ ಹತ್ತು ಕಿ. ಗ್ರಾಂ ಒಣಮೇವು ಅಥವಾ ಹದಿನೆಂಟರಿಂದ ಇಪ್ಪತ್ತು ಕಿ. ಗ್ರಾಂ ಹಸಿಮೇವು ಒಂದು ದಿವಸಕ್ಕೆ ಬೇಕಾಗುತ್ತದೆ. ಈ ಆಹಾರದ ಪ್ರಮಾಣ ೪-೬ ವರ್ಷದ ದನಗಳಿಗೆ ಮಾತ್ರ ಅನ್ವಯಿಸುತ್ತದೆ. ಇದಕ್ಕಿಂತ ಸಣ್ಣ ವಯಸ್ಸಿನ ಬೆಳೆಯುವ ದನಕ್ಕೆ, ಅದರ ಬೆಳವಣಿಗೆಗಾಗಿ ಹೆಚ್ಚು ಕಾಳಿನ ನುಚ್ಚು  ಕೊಡಬೇಕಾಗುತ್ತದೆ. ಹಸಿಮೇವು ಪಚನಕ್ಕೆ ಸುಲಭವಾಗಿ, ನಾಲಿಗೆಗೆ ರುಚಿಯಾಗಿ, ಸಿಹಿಯಾಗಿ ಮತ್ತು ರಸವತ್ತಾಗಿದ್ದು  ಜೀವಸತ್ವಗಳಿಂದ ಕೂಡಿರುತ್ತದೆ. ಬರೀ ಹಸಿಮೇವನ್ನು ಮೇಯಿಸುವುದರಲ್ಲಿ ಒಣಮೇವಿನ ಎರಡೂವರೆ ಪಟ್ಟು ಹಸಿಮೇವು ಬೇಕಾಗುತ್ತದೆ. ಏಕೆಂದರೆ ಹಸಿಮೇವಿನಲ್ಲಿ ನೀರಿನ ಅಂಶವೇ ಬಹಳ. ಒಂದು ಕಿ. ಗ್ರಾಂ. ಒಣಮೇವು ಎರಡೂವರೆ ಕೆ. ಜಿ. ಹಸಿಮೇವಿಗೆ ಸಮಾನ ಎಂದು ತಿಳಿಯಬೇಕು.

ಆಹಾರದ ಸಂಗಡ ಕೊಡತಕ್ಕ ಉಳಿದ ಪದಾರ್ಥಗಳು

(i) ನೀರು: ದನಗಳಿಗೆ ದೊಡ್ಡ ಪ್ರಮಾಣದಲ್ಲಿ ಪೂರೈಸುವ ಆಹಾರಕ್ಕೆ ಅನುಗುಣವಾಗಿ ಸಾಕಷ್ಟು ನೀರು ಅತಿ ಅವಶ್ಯಕ. ಆಹಾರವು ಸರಿಯಾಗಿ ಜೀರ್ಣವಾಗುವುದಕ್ಕೆ ನೀರು ಬೇಕು. ನೀರಿನಲ್ಲಿ ಕರಗಿದ ಆಹಾರ ಭಾಗವು ಸುಲಭವಾಗಿ ರಕ್ತಗತವಾಗುತ್ತದೆ. ನೀರಿನಿಂದ ರಕ್ತವು ತೀವ್ರವಾಗಿ ಚಲಿಸುವುದು. ಶರೀರದಲ್ಲಿ ಉತ್ಪನ್ನವಾದ ಕಶ್ಮಲ ಮತ್ತು ವಿಷ ಪದಾರ್ಥಗಳನ್ನು ನೀರು, ಬೆವರು ಮತ್ತು ಮಲಮೂತ್ರಾದಿಗಳ ಮೂಲಕ ಹೊರ ಹಾಕಲು ಸಹಾಯಮಾಡುತ್ತದೆ. ಒಂದು ದಿವಸಕ್ಕೆ ೧೦ ಕಿ. ಗ್ರಾಂ. ಆಹಾರ ಕೊಟ್ಟಲ್ಲಿ ೨೦ ಕಿ. ಗ್ರಾಂ ನೀರು ಕೊಡಬೇಕಾಗಿತ್ತದೆ. ಕರೆಯುವ ದನಗಳಿಗೆ ಇದಲ್ಲದೆ ಪ್ರತಿಯೊಂದು ಲೀಟರ್ ಹಾಲಿಗೆ ಎರಡು ಲೀಟರ್ ನೀರು ಹೆಚ್ಚಾಗಿ ಬೇಕಾಗುತ್ತದೆ. ದನಗಳ ಮೈತೂಕದ ಮೇಲೂ ಕೊಡಬೇಕಾಗುವ ನೀರಿನ ಲೆಕ್ಕಚಾರ ಮಾಡಬಹುದು. ೩೦೦ ರಿಂದ ೩೫೦ ಕಿ. ಗ್ರಾಂ. ನೀರು ಕೊಡಬೇಕಾಗುತ್ತದೆ. ನೀರನ್ನು ಮೂರು ಸಮಯ ಕುಡಿಸುವ ಪದ್ಧತೊ ಉತ್ತಮ. ಈ ನೀರು ಸ್ವಚ್ಛವಾಗಿರಬೇಕು.

(ii) ಉಪ್ಪು : ದನಗಳಿಗೆ ಹಾಕತಕ್ಕ ಆಹಾರದಲ್ಲಿ ಪ್ರತಿಯೊಂದಕ್ಕೆ ಪ್ರತಿದಿನ ೧೦ ರಿಂದ ೨೫ಗ್ರಾಂ ಉಪ್ಪು ಸೇರಿಸಿಕೊಡಬೇಕು. ಇದಕ್ಕೆ ಹೊರತಾಗಿ ಬೇಸಗೆಯ ಕಾಲದಲ್ಲಿ ಅವುಗಳ ಗೋದಲಿಯಲ್ಲಿ ನೆಕ್ಕಲು ಸಿಗುವಂತೆ ಸೈಂಧ ಲವಣದ ಒಂದು ದೊಡ್ಡ ತುಂಡನ್ನು ಯಾವಾಗಲೂ ಇಟ್ಟಿರಬೇಕು.

ಆಹಾರ ಕೊಡತಕ್ಕ ವೇಳೆ

ದನಗಳಲ್ಲಿ ಹಾಲು ಕರೆದುಕೊಳ್ಳುವುದಕ್ಕಿಂತ ಮುಂಚಿತವಾಗಿ ಅಥವಾ ಬೆಳಿಗ್ಗೆ ಕೆಲಸಕ್ಕೆ ಹೂಡುವ ಒಂದು ಗಂಟೆ ಮುಂಚಿತವಾಗಿ ಸರಿಯಾಗಿ ನೆನೆಸಿ ತಯಾರಿಸಿದ ಕಾಳಿನ ಮಿಶ್ರಣ ಅಥವಾ ಕಾಳಿನ ಒಣ ಮಿಶ್ರಣವನ್ನು ಕೊಡಬೇಕು. ಅನಂತರ ಗೋದಲಿಯನ್ನು ಚೆನ್ನಾಗಿ ಸ್ವಚ್ಛಮಾಡಬೇಕು. ಅವು ಮೇಯುವುದಕ್ಕೆ ಹೊರಗೆ ಹೋಗದಿದ್ದರೆ ಗೋದಲಿಯಲ್ಲಿ ಸ್ವಲ್ಪ ಮೇವನ್ನು ಹಾಕಬೇಕು. ಮೇಯುವುದಕ್ಕೆ ಹೊರಗೆ ಹೋಗುತ್ತಿದ್ದರೆ ಮೇವು ಹಾಕುವ ಅವಶ್ಯಕತೆಯಿಲ್ಲ. ಬರೀ ಮೈತಿಕ್ಕಿ ಹೊರಗೆ ಮೇಯುವುದಕ್ಕೆ ಹೊಡೆದು ಬಿಡಬೇಕು ಮೇಯುವುದಕ್ಕೆ ಹೊರಗೆ ಹೋಗುವುದರಿಂದ ದನಗಳಿಗೆ ಸಾಕಷ್ಟು ವ್ಯಾಯಾಮ ಮತ್ತು ಸೂರ್ಯಕಿರಣಗಳ ಪ್ರಯೋಜನ ಸಿಗುತ್ತದೆ. ಬಹಳ ಮಳೆ ಬೀಳುತ್ತಿರುವಾಗ, ಬಹಳ ಚಳಿ ಅಥವಾ ನಿಖರ ಬಿಸಿಲಿನ ತಾಪವಿದ್ದಾಗ ದನಗಳನ್ನು ಹೊರಗೆ ಬಿಡದಿರುವುದು ಒಳ್ಳೆಯದು. ಸಂಜೆ ಹಾಲು ಕರೆದುಕೊಳ್ಳುವ ಹೊತ್ತಿಗೆ ಅರ್ಧ ಗಂಟೆ ಮುಂಚಿತವಾಗಿ ಅವುಗಳನ್ನು ತಂದು ಕೊಟ್ಟಿಗೆಯಲ್ಲಿ ಕಟ್ಟಬೇಕು. ಗೋದಲಿಯಲ್ಲಿ ತಿನ್ನದೆ ಉಳಿದಿದ್ದ ಮೇವನ್ನು ತೆಗೆದು ಸ್ವಚ್ಛಗೊಳಿಸಿ ತಯಾರು ಮಾಡಿದ ಕಾಳಿನ ಮಿಶ್ರಣವನ್ನು ಕೊಡಬೇಕು. ಹಾಲು ಕರೆದುಕೊಂಡ ನಂತರ ಅವುಗಳಿಗೆ ಪ್ರತಿದಿನ ಕೊಡತಕ್ಕ ಮೇವನ್ನು ಗೋದಲಿಯಲ್ಲಿ ಹಾಕಬೇಕು. ರಾತ್ರಿ ತಮ್ಮ ಇಚ್ಚಾನುಸಾರವಾಗಿ ಅದನ್ನು ತಿನ್ನುತ್ತವೆ. ಮೇವನ್ನು ಸಣ್ಣಗೆ  ಕತ್ತರಿಸಿ ಮೇಯಿಸುವುದರಿಂದ ಮೇವು ಹೆಚ್ಚು ನಷ್ಟವಾಗುವುದಿಲ್ಲ.

ನಾವು ನಮ್ಮ ದನಗಳಿಗೆ ಕೊಡುವ ಆಹಾರ ಶುಚಿಯಾಗಿ, ರುಚಿಯಾಗಿ, ಜೀರ್ಣವಾಗುವುದಕ್ಕೆ ಸುಲಭವಾಗಿ, ಹೊಟ್ಟೆ ತುಂಬುವಂತಿರಬೇಕು. ಅಲ್ಲದೆ, ವೈವಿಧ್ಯದಿಂದ ಕೂಡಿದ್ದು, ಪ್ರಮಾಣ ಬದ್ಧವಾಗಿ ಪಿಷ್ಟ, ಸಸಾರಜನಕ, ಕೊಬ್ಬು ಹಾಗೂ ಜೀವಸತ್ವಗಳಿಂದ ಕೂಡಿರಬೇಕು. ಆಹಾರವನ್ನು ಬದಲಾವಣೆ ಮಾಡುವುದಾದಲ್ಲಿ ಅದನ್ನು ಕ್ರಮೇಣವಾಗಿ ಮಾಡುತ್ತ ಹೋಗಬೇಕೇ ವಿನಃ ಯಾವುದನ್ನೂ ಇದ್ದಕ್ಕಿದ್ದಂತೆ ತಕ್ಷಣವೇ ಬದಲಾಯಿಸಬಾರದು.

ದನಗಳಿಗೆ ಮೇವಿನೊಡನೆ ಕೊಡಬೇಕಾದ ಪೂರಕ ಆಹಾರ 

ವಿವಿಧ ಉದ್ದೇಶಗಳ ದನಗಳಿಗೆ ವಿವಿಧ ಪ್ರಮಾಣದಲ್ಲಿ ಪೂರಕ ಆಹಾರ ಕೊಡಬೇಕಾಗುವುದು ಅವುಗಳ ವಿವರ ಮುಂದಿನಂತಿದೆ.

i) ಸುಮಾರು ೩೭೫ ಕಿ. ಗ್ರಾಂ. ತೂಕ ಇರುವ ಮತ್ತು ೫ ಲೀಟರ್ ಹಾಲು ಕರೆಯುವ ಆಕಳಿಗೆ

ಕಡಲೆಕಾಯಿ (ಶೇಂಗಾ) ಹಿಂಡಿ ೧ ೧/೨ ಕಿ. ಗ್ರಾಂ
ಅಕ್ಕಿ ತೌಡು ಅಥವಾ ಬೂಸಾ ೧ ಕಿ. ಗ್ರಾಂ
ಹತ್ತಿಕಾಳು ಅಥವಾ ಹುರುಳಿ ನುಚ್ಚು ೧/೨ ಕಿ. ಗ್ರಾಂ.
ಉಪ್ಪು ೬೦ ಗ್ರಾಂ
ಒಟ್ಟು ೩. ಕಿ. ೬೦ ಗ್ರಾಂ

ಇವುಗಳನ್ನು ೬ರಿಂದ೮ ಗಂಟೆಗಳವರೆಗೆ ತೋಯಿಸಿ (ನೆನೆಸಿ) ಬೆಳಗ್ಗೆ ಅರ್ಧ ಸಾಯಂಕಾಲ ಅರ್ಧ ಕೊಡಬೇಕು.

ii) ಸುಮಾರು ೪೦೦ಕಿ. ಗ್ರಾಂ ತೂಕವಿರುವ ಬೀಜಿದ ಹೋರಿಗೆ-

ಕಡಲೆಕಾಯಿ(ಶೇಂಗಾ) ಹಿಂಡಿ ೧ ೧/೨ಕಿ. ಗ್ರಾಂ
ಅಕ್ಕಿ ತೌಡು ಅಥವಾ ಬೂಸಾ ೧ ಕಿ. ಗ್ರಾಂ
ಹುರುಳಿ ನುಚ್ಚು ೧ ೧/೨ ಕಿ. ಗ್ರಾಂ
ಉಪ್ಪು ೬೦ ಗ್ರಾಂ
ಒಟ್ಟು ೪ ಕಿ. ೬೦ ಗ್ರಾಂ

ಇವುಗಳನ್ನು ೬ ರಿಂದ ೮ ಗಂಟೆಗಳವರೆಗೆ ನೆನೆಸಿ ಬೆಳಿಗ್ಗೆ ಅರ್ಧ, ಸಾಯಂಕಾಲ ಅರ್ಧ ಕೊಡಬೇಕು.

iii) ಸುಮಾರು ೧೨೫ ಕೆ. ಜಿ. ತೂಕವಿರುವ, ಹಾಲು ಬಿಡಿಸಿದ ಕರುವಿಗೆ-

ಕಡಲೆಕಾಯಿ(ಶೇಂಗಾ) ಹಿಂಡಿ ೧ ೧/೨ ಕಿ. ಗ್ರಾಂ
ಅಕ್ಕಿ ತೌಡು ಅಥವಾ ಬೂಸಾ ೧ ಕಿ. ಗ್ರಾಂ
ಹುರುಳಿ ನುಚ್ಚು ೧ ಕಿ. ಗ್ರಾಂ
ಉಪ್ಪು ೩೦ ಗ್ರಾಂ
ಒಟ್ಟು ೩ ೧/೨ ಕಿ. ಗ್ರಾಂ

ಇವುಗಳನ್ನು ನೆನೆಸಿ ಬೆಳಿಗ್ಗೆ ಅರ್ಧ, ಸಾಯಂಕಾಲ ಅರ್ಧ ಕೊಡಬೇಕು.

iv) ಸುಮಾರು ೫೦೦ ಕಿ. ಗ್ರಾಂ ತೂಕವಿರುವ ದುಡಿಯುವ ಎತ್ತಿಗೆ-

ಕಡಲೆಕಾಯಿ(ಶೇಂಗಾ) ಹಿಂಡಿ ೧ ೧/೨ ಕಿ. ಗ್ರಾಂ
ಹುರುಳಿ ನುಚ್ಚು ಅಥವಾ ಬೂಸಾ ೧ ೧/೨ ಕಿ. ಗ್ರಾಂ
ಅಕ್ಕಿ ತೌಡು ಅಥವಾ ಬೂಸಾ ೧ ೧/೨ ಕಿ. ಗ್ರಾಂ
ಉಪ್ಪು ೬೦ ಗ್ರಾಂ
ಒಟ್ಟು ೪ ೧/೨ ಕಿ. ೬೦ ಗ್ರಾಂ

ಇವುಗಳನ್ನು ನೆನೆಸಿ ಬೆಳಿಗ್ಗೆ ಅರ್ಧ, ಸಾಯಂಕಾಲ ಅರ್ಧ ಕೊಡಬೇಕು.

v) ಕರು ಹಾಕಿದ ಎಮ್ಮೆ ಅಥವಾ ಆಕಳಿಗೆ-

ಕುಟ್ಟಿದ ಸಜ್ಜೆ ೨ ೧/೨ ಕಿ. ಗ್ರಾಂ
ನುಚ್ಚು ಹತ್ತಿಕಾಳು ಅಥವಾ ಅಕ್ಕಿ ತೌಡು ೧ ೧/೨ ಕಿ. ಗ್ರಾಂ
ಒಟ್ಟು ೪ ಕಿ. ಗ್ರಾಂ

ಇವುಗಳನ್ನು ನೆನೆಸಿ ಬೆಳಿಗ್ಗೆ ಅರ್ಧ, ಸಾಯಂಕಾಲ ಅರ್ಧ ಕೊಡಬೇಕು.

ಕಾಯಿಲೆಯಾದ ದನಗಳಿಗೆ ಕೊಡುವ ಆಹಾರ

ರೋಗದ ದನಗಳಿಗೆ ಮೇಲೆ ಹೇಳಿದ ಆಹಾರ ಉಪಯೋಗವಿಲ್ಲ. ಕಾಯಿಲೆ ದನಗಳಿಗೆ ತಿರುಳುಣಿಸು ಎಂದರೆ ಹತ್ತಿಕಾಳು, ಕಡಲೆಕಾಯಿ(ಶೇಂಗಾ) ಹಿಂಡಿ, ಹುರುಳಿ ನುಚ್ಚು ಇಂಥ ಬಹಳ ಗಟ್ಟಿಯಾದ ಆಹಾರ ಪದಾರ್ಥಗಳನ್ನು ಕೊಡಬಾರದು. ಇದರಿಂದ ಅಜೀರ್ಣವುಂಟಾಗುತ್ತದೆ. ಆದ್ದರಿಂದ ಕಾಯಿಲೆಯಾದ ದನಗಳಿಗೆ ಹಗುರಾದ ಅಂದರೆ ಸುಲಭವಾಗಿ ಅರಗುವ ಮೆತ್ತಗಿನ ಸಾರಯುಕ್ತವಾದ ಆಹಾರವನ್ನು ಕೊಡಬೇಕು. ಒಂದೂವರೆ  ಕಿ. ಗ್ರಾಂ ಬೂಸಾ ಅಥವಾ ಅಕ್ಕಿತೌಡಿಗೆ ೩೦ ಗ್ರಾಂ ಉಪ್ಪು ಸ್ವಲ್ಪ ಬೆಲ್ಲ ಸೇರಿಸಿ ಮುಕ್ಕಾಲು ಲೀಟರ್ ಕುದಿಯುವ ನೀರಿನಲ್ಲಿ ಚೆನ್ನಾಗಿ ಕಲಕಿ ೨೦ ನಿಮಿಷಗಳವರೆಗೆ ಮುಚ್ಚಬೇಕು ಆಮೇಲೆ ಇದು ಆರಿದ ನಂತರ ಕುಡಿಸಬೇಕು. ಇಲ್ಲವೆ, ಅರ್ಧ ಕಿ. ಗ್ರಾಂ ಅಗಸೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಇದಕ್ಕೆ ಒಂದು ಕಿ. ಗ್ರಾಂ ಅಕ್ಕಿ ತೌಡು ಅಥವಾ ಬೂಸಾ ಮತ್ತು ೩೦ ಗ್ರಾಂ ಉಪ್ಪು, ಸ್ವಲ್ಪ ಬೆಲ್ಲ ಸೇರಿಸಿ ಸ್ವಲ್ಪ ಹೊತ್ತು ಮುಚ್ಚಿಟ್ಟಿದ್ದು ಮೆತ್ತಗಾಗಿ ಆರಿದ ಮೇಲೆ ಕೊಡಬೇಕು ಅಥವಾ ಜೋಳದ ಹಿಟ್ಟು ಅಥವಾ ರಾಗಿ ಹಿಟ್ಟನ್ನು ನೀರಿನಲ್ಲಿ ಕುದಿಸಿ ಗಂಜಿ ಮಾಡಿ ಅಂದರೆ, ಜೋಳದ ಅಂಬಲಿ ಮಾಡಿ ಇದಕ್ಕೆ ೩೦ ಗ್ರಾಂ ಉಪ್ಪು ಸೇರಿಸಿ ಕುಡಿಸಬೇಕು. ಕಾದು ಆರಿದ ನೀರು ಅಥವಾ ಉಗುರುಬೆಚ್ಚಗಿರುವ ನೀರನ್ನು ಕುಡಿಸಬೇಕು. ಕೆನೆ ತೆಗೆದ ಹಾಲಾಗಲೀ ಮಜ್ಜಿಗೆಯನ್ನಾಗಲೀ ಕೊಡಬಹುದು.

ಈ ಪ್ರಕಾರ ದನಗಳನ್ನು ಮೇಯಿಸಿದಲ್ಲಿ ಬೆಳವಣಿಗೆ ಉತ್ತಮವಾಗಿ ಆರೋಗ್ಯವು ಹೆಚ್ಚಿ ಅವು ಲಾಭದಾಯಕವಾ‌ಗುತ್ತವೆ.