ಭಾಗ

ಘನತರ ಚಿತ್ರದ ರೂಹು ಬರೆಯಬಹುದಲ್ಲದೆ…’ :
ಹೊಸ ಅಲೆಗಳ ಸುತ್ತ ಲಿಂಗಾಯತರು ಮತ್ತು ಬ್ರಾಹ್ಮಣ/ಲಿಂಗಾಯತನಾಗಿ ಬಸವಣ್ಣ

೨೦ನೇ ಶತಮಾನದ ಎರಡನೇ ದಶಕದಲ್ಲಿ ಲಿಂಗಾಯತರು ಹೊಸ ಬದಲಾವಣೆಗಳಿಗೆ ತಮ್ಮನ್ನು ಒಡ್ದಿಕೊಂಡು, ಬದಲಾಯಿಸಿಕೊಳ್ಳುವ ತುರ್ತು ಪರಿಸ್ಥಿತಿಗಳುಂಟಾದವು. ಲಿಂಗಾಯತ ತತ್ವ ಮತ್ತು ಸಂಸ್ಕೃತಿಯ ಬಗ್ಗೆ ಮತ್ತೊಮ್ಮೆ ಮರು-ಚಿಂತನೆಗೊಳ್ಳುವಂತೆ ಲಿಂಗಾಯತರನ್ನು ಪ್ರೇರೇಪಿಸುವಲ್ಲಿ ಮತ್ತು ಪ್ರಭಾವಿಸುವಲ್ಲಿ ಸಮಾಜದಲ್ಲುಂಟಾಗುತ್ತಿದ್ದ ಬದಲಾವಣೆಗಳು ನೇರವಾಗಿ ಅಥವಾ ಪರೋಕ್ಷವಾಗಿ ಕಾರಣೀಭೂತವಾದವು. ಹೀಗಾಗಿ ಹೊಸ ಸನ್ನಿವೇಶಗಳಿಗೆ ಮತ್ತು ಹೊಸ ಸಂದರ್ಭಗಳಿಗೆ ಅನುಗುಣವಾಗಿ ಲಿಂಗಾಯತ ಧರ್ಮವನ್ನು ರೂಪಿಸಿಕೊಳ್ಳುವ ಆತುರತೆಯನ್ನು ಈ ಸಮಯದಲ್ಲಿ ಕಾಣಬಹುದು. ಶುಭೋದಯ ವಿವಾದವು[1] ಆಗುತ್ತಿದ್ದ ಬದಲಾವಣೆಗೆ ಒಂದು ಸಣ್ಣ ಉದಾಹರಣೆ ಮತ್ತು ಪ್ರಚೋದಕ ಘಟನೆ. ೧೯೧೯ರಲ್ಲಿ ಉಂಟಾದ ಈ ವಿವಾದವು (ಬಸವ-ಅಲ್ಲಮರನ್ನು ಶುಭೋದಯ ಪತ್ರಿಕೆಯಲ್ಲಿ ವ್ಯತಿರಿಕ್ತವಾಗಿ ಚಿತ್ರಿಸಿದ್ದಕ್ಕಾಗಿ) ಹೊಸ ಪೀಳಿಗೆಯ ಲಿಂಗಾಯತರಲ್ಲಿ ಸ್ವಾಭಿಮಾನವನ್ನು ಕೆರಳಿಸಿ, ಹೊಸ ಚಾರಿತ್ರಿಕ ಅಧ್ಯಾಯವನ್ನು ಬರೆಯುವಂತೆ ಪ್ರಚೋದಿಸಿತು.

ಮೈಸೂರು ಮತ್ತು ಬಾಂಬೆ ಪ್ರೆಸೆಡೆಕ್ಸಿಗಳಲ್ಲಿ ಶಿಕ್ಷಣ ಮತ್ತು ಸರ್ಕಾರಿ ಹುದ್ದೆಗಳಿಗಾಗಿ ಬಿರುಸಿನಿಂದ ನಡೆಯುತ್ತಿದ್ದ ಹಿಂದುಳಿದ ಬ್ರಾಹ್ಮೇಣೇತರರ ಮೀಸಲಾತಿ ಚಳುವಳಿ, ತಮಿಳುನಾಡಿನ self-respect movement, ತಿಲಕ್ ಮತ್ತು ಅನಿಬೆಂಸಂಟರ ಮುಂಖಡತತ್ವದಲ್ಲಿ ನಡೆಯುತ್ತಿದ್ದ ಹೋ-ರೂಲ್ ಚಳುವಳಿ, ನಂತರ ಗಾಂಧಿಯ ನಾಯಕತ್ವದಲ್ಲಿ ಉಂಟಾದ ರಾಷ್ಟ್ರೀಯ ಚಳುವಳಿ, ಕರ್ನಾಟಕ-ಏಕೀಕರಣ ಹೋರಾಟ, ರಷ್ಯಾದ ಕ್ರಾಂತಿ. ಮೊದಲನೆ ಮಹಾಯುದ್ಧ, ಮಾರ್ಕ್ಸಿಸ್ಟ್ ವಿಚಾರಗಳು, ರಷ್ಯಾ-ಜಪಾನರ ಪ್ರಗತಿ, ಮುಂತಾದವುಗಳು ಲಿಂಗಾಯತರಲ್ಲಿ ಹೊಸ ಅಲೆಯನ್ನುಂಟು ಮಾಡಿತು. ಮೈಸೂರ್ ಸ್ಟಾರ್ ಪತ್ರಿಕೆಯ ಲೇಖನಗಳು ಈ ವಿಷಯಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ನೀಡುತ್ತವೆ. ಈ ಲೇಖನಗಳಲ್ಲಿ ಪ್ರಮುಖವಾಗಿ ಎದ್ದು ಕಾಣುವುದು ಲಿಂಗಾಯತರ ಸ್ಥಿತಿ-ಗತಿಯ ಬಗ್ಗೆ ಮತ್ತು ಜಾಗತಿಕವಾಗಿ ತಾವು ಯಾವ ಸ್ಥಾನ-ಮಾನಗಳನ್ನು ಹೊಂದಿದ್ದೇವೆ ಎಂಬ ಸ್ವ-ವಿಮರ್ಶೆ. ಲಿಂಗಾಯತರು, ಪ್ರಮುಖವಾಗಿ ಪ್ರಗತಿಪರರು, ತಮಗರಿವಿಲ್ಲದಯೋ ಅಥವಾ ಪ್ರಯತ್ನಪೂರ್ವಕವಾಗಿಯೋ ವಿಭಿನ್ನ ನೆಲೆಗಳಿಂದ ಉಂಟಾಗಿದ್ದ ಬದಲಾವಣೆಗಳಿಗೆ ಪ್ರತಿಕ್ರಿಯೆಯನ್ನು ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಅಭಿವ್ಯಕ್ತಿಗೊಳಿಸಲು ಮಿತಿಗಳಿವೆ ಎಂಬುದನ್ನು ಅರಿತು ತಮ್ಮತನವನ್ನು ರಾಷ್ಟ್ರೀಯಗೊಳಿಸುವ ಮತ್ತು ರಾಷ್ಟ್ರೀಯ ಭಾವನೆಗಳನ್ನು ವ್ಯಕ್ತಪಡಿಸುವ ಉತ್ಕಟನೆಯನ್ನು ಪ್ರದರ್ಶಿಸಿದರು. ಲಿಂಗಾಯತ ಧರ್ಮವನ್ನು ಮತೀಯವಾಗಿ ಸಂಕುಚಿಸುವುದಕ್ಕಿಂತ ಮಿಗಿಲಾಗಿ ರಾಷ್ಟ್ರೀಯವಾಗಿಸುವ ಪ್ರಯತ್ನಗಳನ್ನು ಅವರ ಹೊಸ ಅನುಭವ ಮತ್ತು ಹೊಸ ಅಭಿಲಾಶೆಗಳನ್ನು ಸೂಚಿಸಿದವು. ಇಲ್ಲಿ ಇಂಗ್ಲಿಷ್ ಕಲಿತ ಲಿಂಗಾಯತ ಮಧ್ಯಮ ವರ್ಗದ ಪಾತ್ರ ಹಿರಿದು. ಹೊಸ ಜ್ಞಾನದ ಅನುಭವಗಳನ್ನು ಲಿಂಗಾಯತ ಧರ್ಮದ ಮರು-ಚಿಂತನೆಗೆ ಅಳವಡಿಸುವಲ್ಲಿ ಅವರ ಕಾಣಿಕೆ ಲಿಂಗಾಯತರ ಆಧುನಿಕ ಇತಿಹಾಸದಲ್ಲಿ ಒಂದು ಪ್ರಮುಖ ಅಧ್ಯಯನ. ಧರ್ಮದ ಜೊತೆಗೆ ಲಿಂಗಾಯತರ ಇತಿಹಾಸವನ್ನು ವೈಜ್ಞಾನಿಕವಾಗಿ ಮತ್ತು ವಸ್ತು/ವ್ಯಕ್ತಿನಿಷ್ಠವಾಗಿ ವಿವರಿಸಬಹುದು ಎಂಬ ಅರಿವು ಲಿಂಗಾಯತರಲ್ಲಿ ಆಗಿ ಹೋದ ರಾಜರು, ಪಾಳೆಗಾರರು ಮತ್ತು ವೀರ ಮಹಿಳೆಯರ ಬಗ್ಗೆ ಗೌರವಗಳನ್ನು ಹೆಚ್ಚಿಸಿತು. ಹೀಗಾಗಿ ಲಿಂಗಾಯತ ಧರ್ಮದ ಜೊತೆಗೆ, ಲಿಂಗಾಯತ ಇತಿಹಾಸವನ್ನೂ ಆಧುನಿಕತೆಗೆ ಸಂವಾದಿಯಾಗಿ ಬರೆಯುವ ಮತ್ತು ರಾಷ್ಟ್ರೀಯಗೊಳಿಸುವ ಕಾರ್ಯವು ಭರದಿಂದ ಮತ್ತು ಉತ್ಸಾಹದಿಂದ ಸಾಗಿತು. ಇವೆಲ್ಲದರ ಪರಿಣಾಮವಾಗಿ ಹೊಸದು/ಹಳೆಯ ಮತ್ತು ಸಂಪ್ರದಾಯ/ಆಧುನಿಕ ನಡುವಿನ ಸಮುದ್ರ ಮಂಥನ ಏರ್ಪಟ್ಟಿತು.

ಲಿಂಗಾಯತ ಪ್ರಗತಿಪರರಿಗೆ ವೈದಿಕ ಪರಂಪರೆ, ಸಂಸ್ಕೃತಮಯ ಲಿಂಗಾಯತ ಧರ್ಮ ಮತ್ತು ಸಾಹಿತ್ಯಗಳು ಪುರಾತನವಾಗಿ ಮತ್ತು ಸಂಪ್ರದಾಯ ಬದ್ಧವಾಗಿ ಕಂಡಿತು. ಅವರಿಗೆ ವೈದಿಕ ಪರಂಪರೆ, ವರ್ಣಾಶ್ರಮ ವ್ಯವಸ್ಥೆ ಮತ್ತು ಸಂಸ್ಕೃತವನ್ನು ಎತ್ತಿ ಹಿಡಿಯುತ್ತಿದ್ದ ಗುರು-ಪೀಠದವರು (ಪಂಚಾಚಾರ್ಯದವರೂ ಸಹ) ಮತ್ತು ಕೆಲವು ವಿರಕ್ತ ಮತದವರು ಸಂಪ್ರದಾಯಸ್ಥರಾಗಿ, ವೈದಿಕಶಾಹಿಯನ್ನು ಮುಂದುವರೆಸುವ ಮತೀಯವಾದಿಗಳಾಗಿ ಗೋಚರಿಸಿದರು. ಇದರ ಪರಿಣಾಮ ಬಸವಣ್ಣನ ಆಧುನಿಕ ಜನ್ಮ. ಬಸವಣ್ಣ ಮತ್ತು ಶಿವಶರಣರ ವಚನ ವಾಙ್ಞಯವನ್ನು ಲಿಂಗಾಯತರು ನವೀನ, ಆಧುನಿಕ, ವೈಚಾರಿಕ ಮತ್ತು ಡೆಮಾಕ್ರೆಟಿಕ್ ಅನುಭವಗಳಿಗೆ ಸಂವಾದಿಯಾಗಿ ನೋಡಿದರು. ಇದರ ಜೊತೆಗೆ ಆಧುನಿಕ ಅನುಭವಗಳಿಗೆ ಅನುಗುಣವಾಗಿ ಲಿಂಗಾಯತರು ತಮ್ಮ ಐಟೆಂಟಿಟಿಯನ್ನು ಮರು-ಕಲ್ಪಿಸಿಕೊಳ್ಳುವ್ಲಲಿ ಆಸಕ್ತಿ ವಹಿಸಿದರು. ಪ್ರಗತಿಪರರಲ್ಲಿ ಪ್ರಮುಖವಾಗಿ ಎಂ.ಬಸವಯ್ಯ, ಹಳಕಟ್ಟಿ, ಹರ್ಡೇಕರ ಮಂಜಪ್ಪ, ಬಸವನಾಳ, ಬಿಳೆ ಅಂಗಡಿ, ಮುಂತಾದವರು ಬಸವನನ್ನು ೧೨ನೇ ಶತಮಾನದ ಕ್ರಾಂತಿಕಾರ, ಸಮಾನತೆಯ ಹರಿಕಾರ, ಪ್ರಜಾಪ್ರಭುತ್ವದವಾದಿ ಎಂದೆಲ್ಲಾ ಬಣ್ಣಿಸಿದರು. ಸಂಸ್ಕೃತ, ಶೈವ ಪುರಾಣಗಳ ಜಾಗದಲ್ಲಿ ಈಗ ಕನ್ನಡ ವಚನಗಳು ತಲೆ ಎತ್ತಿದ್ದವು. ಲಿಂಗಾಯತರಲ್ಲಾಗುತ್ತಿದ್ದ ಈ ಸ್ಥಿತ್ಯಂತರಗಳನ್ನು ಶೌಟೆನ್ನರು ಹೀಗೆ ವಿವರಿಸಿದ್ದಾರೆ.

೨೦ನೇ ಶತಮಾನದ ಎರಡನೇ ದಶಕದಲ್ಲಿ ಲಿಂಗಾಯತರು ಸಂಪ್ರದಾಯಬದ್ಧ ಹಿಂದು ನಂಬಿಕೆಯಿಂದ ದೂರವಾಗುವ ಪ್ರಯತ್ನಗಳನ್ನು ಮಾಡಿರುವುದನ್ನು ಗಮನಿಸಬಹುದು. ಹಿಂದು ಧರ್ಮದಲ್ಲಿ ಅವರ ಮೇಲ್ಜಾತಿ ಸ್ಥಾನ-ಮಾನಗಳನ್ನು ಭದ್ರಪಡಿಸಲು ಸಾಧ್ಯವಾದುದರಿಂದ, ಕೆಲವರು ತಮ್ಮ ಸಾಮಾಜಿಕ-ಧಾರ್ಮಿಕ ಪರಂಪರೆಯನ್ನು ಹಿಂದೂತನದ ಜೊತೆಗೆ ಅಥವಾ ಅದಕ್ಕೆ ವಿರೋಧವಾಗಿ ಬಿಂಬಿಸಿದರು. ಅವರಲ್ಲಿ ತಾವು ಹಿಂದುಗಳೇ ಎಂಬ ಪ್ರಶ್ನೆಯೂ ಉದ್ಭವವಾಯಿತು. ಕೆಲವರು ಹಿಂದು, ಇಸ್ಲಾಂ, ಕ್ರಿಶ್ಚಿಯನ್ ಮತ್ತು ಜೈನ ಧರ್ಮದಂತೆ ತಮ್ಮದೂ ಒಂದು ಪ್ರತ್ಯೇಕ ಧರ್ಮವೆಂದು, ತಮಗರ ಪ್ರತ್ಯೇಕ ಧರ್ಮದ ಸ್ಥಾನ-ಮಾನಗಳನ್ನು ಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಈ ರೀತಿಯ ಹೊಸ ವಿಚಾರ ಧಾರೆಯು ಸಂಸ್ಕೃತ ಪರಂಪರೆಯನ್ನು ನಿರ್ಲಕ್ಷಿಸಿ, ಕನ್ನಡ ಪರಂಪರೆಯನ್ನು ಎತ್ತಿ ಹಿಡಿಯಿತು. ಬಸವನನ್ನು ಮತ ಸ್ಥಾಪಕನೆಂದು ಬಿಂಬಿಸಲಾಗದಿದ್ದರೂ, ಅವನು ಮತೋದ್ಧಾರಕನೆಂದು ಭಾವನೆಯಿಂದ ನೋಡಲು ಪ್ರಾರಂಭವಾಯಿತು. ಪಿ.ಜಿ. ಹಳಕಟ್ಟಿಯಂತವರ ಪರಿಶ್ರಮದಿಂದ ವಚನ ಸಾಹಿತ್ಯದ ಅಮೂಲ್ಯತೆಯನ್ನು ಅರಿತುಕೊಳ್ಳಲಾಯಿತು. ಅವರ ವಚನ ಅಧ್ಯಯನಗಳು ಲಿಂಗಾಯತರಲ್ಲಿ ಹೊಸ ವಿಚಾರಗಳನ್ನುಂಟು ಮಾಡಿತು. ಆದಾಗ್ಯು ಎಲ್ಲಾ ಲಿಂಗಾಯತರು ಪ್ರಗತಿಪರವಾಗಿರಲಿಲ್ಲ. ವಿಶೇಷವಾಗಿ ಪಂಚಪೀಠಗಳ ಜೊತೆಗೆ ಸಂಪರ್ಕವಿರಿಸಿಕೊಂಡಿದ್ದ ಮತ್ತು ಪಂಚಾಚಾರ್ಯರಲ್ಲಿ ನಂಬಿಕೆ ಇದ್ದವರು ಬಸವನನ್ನು ಒಪ್ಪಿಕೊಳ್ಳದೆ ಸಂಸ್ಕೃತ ಪರಂಪರೆಯನ್ನು ಮುಂದುವರೆಸಿದರು. ಇದರಲ್ಲಿ ಪಂಡಿತ ಕಾಶಿನಾಥ ಶಾಸ್ತ್ರಿ ಮತ್ತು ಅವರ ಅನುಯಾಯಿಗಳ ಪಾತ್ರ ಗಣನೀಯವಾಗಿತ್ತು. (ಶೌಟೆನ್, ೧೯೯೫: ೭೭-೭೮).

ತಮ್ಮ ಧಾರ್ಮಿಕ ಮೌಲ್ಯಗಳನ್ನು ಮರು-ಪರಿಶೀಲಿಸುವ ಮತ್ತು ಹೊಸ, ಹೊಸ ಮೌಲ್ಯಗಳನ್ನು ಕಟ್ಟಿಕೊಳ್ಳುವುದರ ಜೊತೆಗೆ, ಕನ್ನಡ ಸಮಾಕವು ಹಿಂದಿನಿಂದಲೂ ಕ್ರಾಂತಿಕಾರ ಮತ್ತು ಮಾನವತಾ ವಿಚಾರಗಳನ್ನು ಹೊಂದಿತ್ತು ಎಂದು ಪ್ರಗತಿಪರರು ನಂಬಿದ್ದರು. ಆದರೆ ಕಾಲಾಂತರ ಮತ್ತು ಕಾರಣಾಂತರದಿಂದ ಕಳೆದು ಹೋದ ಈ ಸುವರ್ಣಯುಗವನ್ನು ಮತ್ತೆ ಮರಳಿ ಪಡೆಯಬಹುದು ಮತ್ತು ಇದು ಶಿವ-ಶರಣರ ಸಿದ್ಧಾಂತ/ನಂಬಿಕೆಗಳನ್ನು ಮರುಕಲಿಸುವುದರ ಅಥವಾ ಮರು ಸ್ಥಾಪಿಸುವುದರ ಮೂಲಕ ಸಾಧ್ಯವೆಂದು ಪ್ರತಿಪಾದಿಸಿದರು. ಪಾಶ್ಚಾತ್ಯರಿಂದ, ಬ್ರಾಹ್ಮಣ ಪಂಡಿತರಿಂದ ಮತ್ತು ಲಿಂಗಾಯತ ಸಂಪ್ರದಾಯಸ್ಥರಿಂದ ನಿರ್ಲಕ್ಷ್ಯಗೊಳಗಾದ ಮತ್ತು ತಪ್ಪು ವ್ಯಾಖ್ಯಾನಕ್ಕೊಳಪಟ್ಟ ಲಿಂಗಾಯತ ಧರ್ಮವನ್ನು ವಚನ ವಾಜ್ಞಯದ ಮುಖೇನ ಸರಿಪಡಿಸುವ ಹೊಣೆ ಹೊತ್ತಿದ್ದು ಹಳಕಟ್ಟಿಯವಂತವರು. ಲಿಂಗಾಯತರನ್ನು ಸುಧಾರಿಸುವ ಮತ್ತು ವಚನಗಳನ್ನು ಜನಪ್ರಿಯಗೊಳಿಸುವ ಮಹಾದಾಸೆಯನ್ನು ಹೊಂದಿದ್ದ ಅವರ ಜೊತೆಗೆ ಕೈ ಜೋಡಿಸಿದವರು ಹರ್ಡೇಕರ ಮಂಜಪ್ಪನವರು. ಬಸವ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸುವುದನ್ನು ಆರಂಭಿಸಿದ ಮಂಜಪ್ಪನವರು ಬಸವನನ್ನು ಲಿಂಗಾಯತರ ಆರಾಧ್ಯ ದೈವವನ್ನಾಗಿಸುದದಲ್ಲದೆ, ಕರ್ನಾಟಕದ ಸಂಸ್ಕೃತಿಯ ಹೆಮ್ಮೆ ಎಂಬಂತೆ ಬಿಂಬಿಸಿದರು. ೧೯೧೩ರಲ್ಲಿ ಮೊಟ್ಟ ಮೊದಲಿಗೆ ಹರ್ಡೇಕರ ಮಂಜಪ್ಪನವರು ಮತ್ತು ಚಿತ್ರದುರ್ಗದ ಮೃತ್ಯುಂಜಯ ಸ್ವಾಮಿಗಳು ಬಸವ ಜಯಂತಿಯನ್ನು ಏಪ್ರಿಲ್ ಮಾಹೆಯಲ್ಲಿ ಆಚರಿಸುವದಕ್ಕೆ ನಾಂದಿ ಹಾಡಿದರು. ಅದೇ ವರ್ಷದಂದು ದಾವಣಗೆರೆಯಲ್ಲಿ ಬಸವ ಜಯಂತಿಯನ್ನು ಸಂಕ್ಷಿಪ್ತವಾಗಿ ಆಚರಿಸಲಾಯಿತು. ಮಹಾರಾಷ್ಟ್ರದ ಶಿವಾಜಿ ಜಯಂತಿ ಮತ್ತು ತಮಿಳು ನಾಡಿನ ರಾಮೋತ್ಸವದ ಬಸವ ಜಯಂತಿಯನ್ನು ಪ್ರತಿ ವರ್ಷವು ಆಚರಿಸಬೇಕೆಂದು ನಿರ್ಧರಿಸಲಾಯಿತು.[2] ಕ್ರಮೇಣ ಬಸವ ಜಯಂತಿಯು ಲಿಂಗಾಯತರ ಮುಖ್ಯ ಹಬ್ಬಗಳಲ್ಲಿ ಒಂದಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ಲಿಂಗಾಯತರ ಸಾಮಾಜಿಕ ಸುಧಾರಣೆಯು ಹಿಂದುಳಿದ ಬ್ರಾಹ್ಮಣೇತರ ಚಳುವಳಿಯ ಜೊತೆ, ಜೊತೆಗೆ ಸಾಗಿತು. ೧೯೧೦ರಲ್ಲಿ ಸುಮಾರಿನಲ್ಲಿ ಬಿರುಸಾದ ಚಳುವಳಿಯು ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಒತ್ತಾಯವನ್ನು ಹೇರುವಿದರ ಜೊತೆಗೆ ಬ್ರಾಹ್ಮಣ-ವಿರೋಧಿ ಅಲೆಯಾಗಿ ಶಕ್ತಿಯುತವಾಗಿ ಬೆಳೆಯಿತು.[3] ಮೈಸೂರು ಪ್ರಾಂತ್ಯದಲ್ಲಿ ಈ ಚಳುವಳಿಯು ತೀವ್ರವಾಗಿತ್ತು. ಬಾಂಬೆ ಪ್ರೆಸಿಡೆನ್ಸಿಯಲ್ಲೂ ಸಹ ಲಿಂಗಾಯತರು ಬ್ರಾಹ್ಮಣೇತರ ಚಳುವಳಿಯಲ್ಲಿ ಸಕ್ರೀಯರಾಗಿದ್ದರು ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ.[4] ಬ್ರಾಹ್ಮಣತ್ವದ ಟೀಕೆ ಮತ್ತು ಮೀಸಲಾತಿ ಹೋರಾಟವು ಕ್ರಮೇಣವಾಗಿ ಲಿಂಗಾಯತರ ಆಂತರಿಕ ವಿಮರ್ಶೆಯಾಗಿ ಬೆಳೆಯಿತು. ಉದಾಹರಣೆಗೆ, ಬ್ರಾಹ್ಮಣೇತರ ಚಳುವಳಿಯ ಲಿಂಗಾಯತ ಮುಖಂಡರಾದ ಎಂ. ಬಸವಯ್ಯನವರು ವೀರಶೈವ ಮಹಾಸಭೆಯು ವರ್ಣಾಶ್ರಮಧರ್ಮವನ್ನು ಅಂಗೀಕರಿಸಿದ್ದನ್ನು (೧೯೦೯ರ ಸಮಾವೇಶದಲ್ಲಿ) ಬಲವಾಗಿ ವಿರೋಧಿಸಿದರು (ದೇವಿರಪ್ಪ, ೧೯೮೫ : ೧೫). ಕುಲೀನ ಲಿಂಗಾಯತರ ಬಸವಯ್ಯನವರು ಮೊದಲಿಗರು. ಲಿಂಗಾಯತರಲ್ಲಿ ಅನೇಕರು ಬಸವಯ್ಯನವರಂತೆ ಯೋಚಿಸುವವರಿದ್ದರು. ಸ್ವಾತಂತ್ರ‍್ಯ ಯೋಧರಾದ ತಮ್ಮಣಪ್ಪ ಚಿಕ್ಕೋಡಿಯವರ ಹೆಸರು ಇಲ್ಲಿ ಎದ್ದು ಕಾಣುತ್ತದೆ. ಅವರು ಅವಕಾಶ ಸಿಕ್ಕಾಗಲೆಲ್ಲ ವೀರಶೈವ ಮಹಾಸಭೆಯನ್ನು ಟೀಕಿಸದೆ ಬಿಡುತ್ತಿರಲಿಲ್ಲ. ಅವರ ಪ್ರಕಾರ ವೀರಶೈವ ಮಹಾಸಭೆಯು ಕೆಲವೇ ಕೆಲವು ವ್ಯಕ್ತಿಗಳ ಹಿತಾಸಕ್ತಿಯನ್ನು ಪೂರೈಸಲು ಹುಟ್ಟಿಕೊಂಡದ್ದು (ಕುಳ್ಳಿ, ೧೯೮೩: ೨೭೦).

ಲಿಂಗಾಯತ ಪ್ರಗತಿಪರರು ತಮ್ಮ ಸಮುದಾಯವನ್ನು ಪ್ರಜಾತಾಂತ್ರಿಕಗೊಳಿಸಿ, ಲಿಂಗಾಯತರಲ್ಲಿದ್ದ ಮೇಲು-ಕೀಳು ಭಾವನೆಗಳನ್ನು ನಿರ್ಮೂಲನಗೊಳಿಸಬೇಕೆಂದು ಪ್ರಯತ್ನ ಪಟ್ಟರು. ಇಲ್ಲಿ ಆಂತರಿಕ ಟೀಕೆ ಮತ್ತು ಬ್ರಾಹ್ಮಣತ್ವ-ವಿರೋಧಿ ಅಲೆಯು ಲಿಂಗಾಯತರು ಜಾತ್ಯಾತೀತವಾಗುವ ಪ್ರಕ್ರಿಯೆಯನ್ನು ಸೂಚಿಸುತ್ತಾರೆ. ಆದರೆ ಜಾತ್ಯಾತೀತವಾಗುವ ಪ್ರಕ್ರಿಯೆಯು ಇತರರನ್ನು ಟೀಕಿಸುವ/ವಿರೋಧಿಸುವ (ಜಾತಿ/ಧರ್ಮದ ಆಧಾರದ ಮೇಲೆ) ವಿಪರ್ಯಾಸ/ವೈರುಧ್ಯವನ್ನು ಒಳಗೊಂಡಿತ್ತು. ಪ್ರಗತಿಪರರಿಗೆ ಸ್ವಾಭಾವಿಕವಾಗಿ ಬಸವಣ್ಣ ಮತ್ತು ಇತರ ಶಿವಶರಣರು[5] ಮಾದರಿಗಳಾದರು. ಸಮಾಜ ಸುಧಾರಣೆ ಮತ್ತು ಸಮುದಾಯದ ಪ್ರಗತಿಯ ಸಮರ್ಥನೆಗೆ ಪ್ರಗತಿಪರರು ಆಧುನಿಕತೆಯ ಮೇಲೆ ಮಾತ್ರವೆ ಅವಲಂಬಿತವಾಗಿರಲಿಲ್ಲ. ಸಂಪ್ರದಾಯವನ್ನೂ ಸಹ ತಮ್ಮ ಪ್ರಗತಿಪರ ಹೋರಾಟಕ್ಕೆ ಉಪಯೋಗಿಸಿಕೊಂಡರು. ಆದರೆ ಪ್ರಗತಿಪರರಿಗೂ ಮತ್ತು ಸಂಪ್ರದಾಯವಾದಿಗಳಿಗೂ ಇದ್ದ ವ್ಯತ್ಯಾಸ ‘ಯಾವುದು ನಿಜವಾದ ಸಂಪ್ರದಾಯ, ಯಾವುದು ಅಲ್ಲ ಮತ್ತು ಸಂಪ್ರದಾಯವೆಂದರೇನು’ ಎಂದು ನಿರ್ಧರಿಸುವಲ್ಲಿ. ಲಿಂಗಾಯತರಲ್ಲಿ ಅಡಗಿದ್ದ ಡಂಭಾಚಾರಗಳು, ಮೂಢ ಆಚಾರ-ವಿಚಾರಗಳನ್ನು ಟೀಕಿಸುತ್ತಿದ್ದ ಪ್ರಗತಿಪರರು ಕ್ರಮೇಣವಾಗಿ ಗುರುಸ್ಥಲ/ಪಂಚಾವಾರ್ಯರ ಆಚಾರ-ವಿಚಾರಗಳನ್ನು ತಿರಸ್ಕರಿಸಲು  ಪ್ರಾರಂಭಿಸಿದರು. ಇದೇ ಸಮಯದಲ್ಲಿ ವಿರಕ್ತ ಮಠಾಧೀಶರು ತಮ್ಮ ಸಮುದಾಯದಲ್ಲಿ ಆಗುತ್ತಿದ್ದ ಬದಲಾವಣೆಗಳ ಲಾಭ ಪಡೆಯಲು ಹಾತೊರೆಯುತ್ತಿದ್ದರು.[6] ತಮ್ಮೊಳಗೆ ಅಸಮಾನತೆ, ಪಕ್ಷಪಾತ ಮತ್ತು ಗೊಂದಲಗಳನ್ನು ಒಳಗೊಂಡಿದ್ದರೂ, ವಿರಕ್ತ ಮಠಾಧೀಶರು ಗುರು-ಸ್ಥಲಗಳನ್ನು ಟೀಕಿಸಲು ಮತ್ತು ಅವರನ್ನು ಅವಮಾನಿಸಲು ಶಿವಶರಣರ ತತ್ವಗಳನ್ನು ಉಪಯೋಗಿಸಿದರು. ಶಿವಶರಣರನ್ನು ಆಧಾರವಾಗಿರಿಸಿಕೊಂಡು ಅನೇಕ ಕೆಳಜಾತಿಯವರನ್ನು ಲಿಂಗಾಯತ ಮತಕ್ಕೆ ಮತಾಂತರಗೊಳಿಸುವಲ್ಲಿ ವಿರಕ್ತ ಮಠಾಧೀಶರು ಸಕ್ರಿಯ ಪಾತ್ರ ನಿರ್ವಹಿಸಿದರು. ೧೯೨೦ರಲ್ಲಿ ಬಾಳೆಹಳ್ಳಿ ಮಠಾಧೀಶರು ಈ ಮತಾಂತರಗಳಿಂದ ವೀರಶೈವ ಧರ್ಮವು ಮೈಲಿಗೆಯಾಯಿತೆಂದು ಇದಕ್ಕೆಲ್ಲಾ ಕಾರಣ ಬಸವಣ್ಣನ ತತ್ವಗಳು ಎಂದು ತೆಗಳಿದರು.[7]

*

ಲಿಂಗಾಯತರ ಬ್ರಾಹ್ಮಣ ವಿರೋಧಿ ನಿಲುವು ಮತ್ತು ಮೀಸಲಾತಿ ಚಳುವಳಿಯು ಸಮುದಾಯದ ಒಳಿತಿಗಾಗಿ ಎಂದು ವರ್ಣಾಶ್ರಮದ (ಗುರು ಸ್ಥಲಕ್ಕೆ ಸೇರಿದ ಮತ್ತು ಕೆಲವು ವಿರಕ್ತ ಸಂಪ್ರದಾಯದವರು) ಸಮರ್ಥಕರು ನಂಬಿದ್ದರು. ಆದರೆ ಕ್ರಮೇಣ ಅವು ತಮ್ಮ ಸಾಮಾಜಿಕ ಮತ್ತು ಧಾರ್ಮಿಕ ಸ್ಥಾನ-ಮಾನಗಳನ್ನು ಅಲುಗಾಡಿಸುತ್ತಿದುದು ಅವರಲ್ಲಿ ಕಳವಳವನ್ನುಂಟು ಮಾಡಿತು. ಬ್ರಾಹ್ಮಣೇತರ ಚಳುವಳಿಯ ಪ್ರಭಾವ ಮತ್ತು ಪ್ರಗತಿಪರರ ಸಮಾಜ ಸುಧಾರಣೆ, ವರ್ಣಾಶ್ರಮ ಧರ್ಮದ ಸಮರ್ಥಕರಿಗೂ ಮತ್ತು ಅವರ ವಿರೋಧಿಗಳ ನಡುವೆ ಇದ್ದ ಐಡಾಲಜಿಯ ಕಂದರವನ್ನು ಮತ್ತಷ್ಟು ಹೆಚ್ಚಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಗುರುಸ್ಥಲದವರು ಶುಭೋದಯ ವಿವಾದದಲ್ಲಿ ವ್ಯತಿರಿಕ್ತವಾಗಿ ನಡೆದುಕೊಂಡರು. ಈ ವಿವಾದವು ಪ್ರಗತಿಪರ ಲಿಂಗಾಯತರಿಗೆ ಕೆಲವೊಂದು ಪಾಠಗಳನ್ನು ಕಲಿಸಿತು. ೧೨ನೇ ಶತಮಾನದ ಶರಣ ಚಳುವಳಿ ಮತ್ತು ಶಿವ ಶರಣರ ತತ್ವಗಳನ್ನು ಜನಪ್ರಿಯಗೊಳಿಸಬೇಕಾದರೆ ಮತ್ತು ಇರುವ ತಪ್ಪು ಗ್ರಹಿಕೆಗಳನ್ನು ಸರಿ ಪಡಿಸಬೇಕಾದರೆ, ಅದಕ್ಕೆ ಒಂದು ಶಕ್ತಿಯುತವಾದ ಐಡಿಯಾಲಜಿಯ ಅವಶ್ಯಕತೆ ಇದೆ ಎಂದು ಮನಗಂಡರು. ಆಂಗ್ಲೋ-ಹಿಂದು ಕಾನೂನು ಪದ್ಧತಿಯಲ್ಲಿ ನುರಿತರಾಗಿದ್ದು, ಕಾನೂನು ತಜ್ಞರಾದ ಪಾವಟೆ, ಹಳಕಟ್ಟಿ, ಮುಂತಾದ ಲಿಂಗಾಯತರಿಗೆ ಇದರ ಅರಿವು ಹೆಚ್ಚು ಆಯಿತು. ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟಿನಲ್ಲಿ ಜರುಗಿದ ವ್ಯಾಜ್ಯದ ವಾದ-ವಿವಾದಗಳು ಹಳಕಟ್ಟಿಯಂತವರಿಗೆ ಸರಿಬೀಳಲಿಲ್ಲ. ಆಧುನಿಕ ಕೋರ್ಟ್/ಕಾನೂನು ಪದ್ಧತಿಗಳು ಒಂದು ಸಮುದಾಯದ ಸಂಸ್ಕೃತಿ ಮತ್ತು ಸಮಾಜದ ಬಗ್ಗೆ ತಿಳಿದುಕೊಳ್ಳಲು ನೀಕರವಾದ ಆಧಾರ, ಪದ್ಧತಿ, ಸಾಮಾಜಿಕ ವ್ಯವಸ್ಥೆಗಳನ್ನು ಪರಿಗಣಿಸುವದರಿಂದ, ಪಾವಟೆ ಮತ್ತು ಹಳಕಟ್ಟಿಯವರಿಗೆ ತಮ್ಮ ಸಮುದಾಯದ ಬಗ್ಗೆ ಇದ್ದ ಗೊಂದಲ, ಅಸ್ಪಷ್ಟತೆ ಮತ್ತು ವೈಜ್ಞಾನಿಕ ಇತಿಹಾಸ ಪ್ರಜ್ಞೆಗಳನ್ನು ಸರಿಪಡಿಸುವ ಜರೂರತ್ತು ಹಿಂದಿಗಿಂತಲೂ ಇಂದು ತೀವ್ರವಾಗಿತ್ತು.[8] ಜೊತೆಗೆ ಆಂತರಿಕ ವೈಷಮ್ಯ ಮತ್ತು ಬ್ರಾಹ್ಮಣ-ವಿರೋಧಿ ಭಾವನೆಗಳು ಲಿಂಗಾಯತರನ್ನು ದಾರಿ ತಪ್ಪಿಸುತ್ತಿದುದು ಹಳಕಟ್ಟಿಯಂತವರಿಗೆ ಸ್ಪಷ್ಟವಾಗಿ ಗೋಚರಿಸಿತು. ಇದರ ಪರಿಣಾಮವಾಗಿಯೇ ಪಾವಟೆಯಂತವರು ಗುರು-ಸಂಪ್ರದಾಯ ಅನುಯಾಯಿಗಳಿಗೆ ವಿರುದ್ದವಾಗಿ ತಮ್ಮ ಲೇಖನದಲ್ಲಿ ಬಸವಣ್ಣನನ್ನು ಲಿಂಗಾಯತ ಎಂದು ಬಲವಾಗಿ ವಾದಿಸಿದರು. ಶುಭೋದಯ ವ್ಯಾಜ್ಯದಲ್ಲಿ ಪ್ರಮುಖ ಪಾತ್ರವಹಿಸಿದ ಪಾವಟೆಯವರ ವಾದಗಳಿಗೆ ವಿರುದ್ಧವಾಗಿ ಮತ್ತು ಸಮಾಜದಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ಸವಾಲಾಗಿ ಸ್ವೀಕರಿಸಿದ ಗುರು-ಸಂಪ್ರದಾಯದವರಿಗೆ ಬಸವಣ್ಣನ ಮತ್ತು ಇತರ ಶಿವಶರಣರ ಬಗ್ಗೆ ಅನೇಕ ಅನುಮಾನಗಳನ್ನು ಮತ್ತು ಪ್ರಶ್ನೆಗಳನ್ನು ಹುಟ್ಟು ಹಾಕುವ ತುರ್ತು ಪರಿಸ್ಥಿತಿ ಗುರುತರವಾಗಿ ಕಾಡಿತು. ಇವೆಲ್ಲದರ ಪರಿಣಾಮವಾಗಿಯೇ, ಲೇಖನದಲ್ಲಿ ಮೊದಲಲ್ಲಿ ಚರ್ಚಿಸಲ್ಪಟ್ಟಂತೆ. ಬಸವಣ್ಣನು ಸ್ಮಾರ್ತ ಬ್ರಾಹ್ಮಣನೋ ಅಥವಾ ಲಿಂಗಾಯತನೋ ಎಂಬ ವಿವಾದ ಉಂಟಾಗಿದುದು. ಬಸವಣ್ಣನ ಮತ್ತು ಇತರ ಶಿವಶರಣರ ಜಾತಿ-ಹುಟ್ಟಿನ ಪ್ರಶ್ನೆಗಳನ್ನು ಹಾಕುವುದರ ಮೂಲಕ ಅವರ ಪ್ರಾಮುಖ್ಯತೆಯನ್ನು ತಗ್ಗಿಸುವ ಪ್ರಯತ್ನವನ್ನು ಅವರು ಮಾಡಿದರು.

ಬಸವಣ್ಣನು ಲಿಂಗಾಯತ ಮತ ಸ್ಥಾಪಕನು ಎಂಬ ಪ್ರಚಾರ ಕುಬುಸದ ಮತ್ತು ಕಾಶಿನಾಥ ಶಾಸ್ತ್ರಿಯಂತವರನ್ನು ಗಾಬರಿಗೊಳಿಸಿತ್ತು. ವೇದ ಕಾಲದಿಂದಲೂ ವೀರಶೈವ ಮತವಿತ್ತು ಮತ್ತು ಅದನ್ನು ಸ್ಥಾಪಿಸಿದವರು ಪಂಚ ಆರಾಧ್ಯರು ಎಂದು ಬಲವಾಗಿ ನಂಬಿದ್ದ ಅವರಿಗೆ ಹೊಸ ಅಲೆಯು ಆತಂಕವನ್ನುಂಟು ಮಾಡಿತು. ಹೀಗಾಗಿ ಅವರಿಗೆ ಬಸವಣ್ಣನು ಶೈವ ಬ್ರಾಹ್ಮಣ ಜಾತಿಗೆ ಸೇರಿದ ಮತ್ತು ವೀರಶೈವ ಮತವನ್ನು ಉದ್ಧಾರಿಸಿದ ಧರ್ಮಕರ್ತನೆ ಹೊರತು, ವೇದ ಅಥವಾ ಶೈವ ಸಂಸ್ಕೃತವನ್ನು ಬಹಿಷ್ಕರಿಸಿದ ಸಮಾಜ ಸುಧಾರಕನಲ್ಲ, ಆದರೆ ಪಾವಟೆಯಂತವರಿಗೆ ಬಸವಣ್ಣನು ಸಮಾಜ ಸುಧಾರಕನಲ್ಲದಿದ್ದರೂ, ಲಿಂಗಾಯತ ಜಾತಿಗೆ ಸೇರಿದ ಮಹಾನ್ ವ್ಯಕ್ತಿ. ಬಸವಣ್ಣನು ಪೂರ್ವದಲ್ಲಿ ಪ್ರಾಕೃತ ಬ್ರಾಹ್ಮಣರಾದ ಮಾದರಸ, ಮಾದಲಾಂಬೆಯರಿಗೆ ಜನಿಸಿದ್ದರೂ, “ಗುರುವಿನ ನಿರ್ಮಲವಾದ ಕರಕಮಲದಲ್ಲಿ ಹುಟ್ಟಿದುದರಿಂದ ಬಸವಣ್ಣನ ಜಾತ್ಯಾದಿಗಳನ್ನು ಕಲ್ಪಿಸಕೂಡದೆಂದು” (ಪಾವಟೆ, ೧೯೨೨: ೨೪) ವಾದಕ್ಕೆ ಅಂತ್ಯ ಎಳೆಯುವ ಪ್ರಯತ್ನ ಮಾಡುತ್ತಾರೆ.[9] ಬಸವಣ್ಣನ ಜಾತ್ಯಾದಿಗಳನ್ನು ಕಲ್ಪಿಸಕೂಡದೆಂದು ವಾದಿಸುತ್ತಾ, ಆತನನ್ನು ಲಿಂಗಾಯತ ಜಾತಿಗೆ ಗುರುತಿಸಿಕೊಳ್ಳುವ ವಿರೋಧಾಭಾಸವನ್ನು ಲಿಂಗಾಯತರು ಪ್ರತ್ಯೇಕವಾದ ಮತವನ್ನು ಹೊಂದಿದ ಸಮುದಾಯ ಎಂಬ ಅಚಲವಾದ ನಂಬಿಕೆ ಇತ್ತು. ಇಲ್ಲಿ ಮತ್ತೊಂದು ಸೂಕ್ಷ್ಮತೆಯನ್ನು ನಾವು ಗಮನಿಸಬೇಕು. ಈ ಸೂಕ್ಷ್ಮತೆಯು ಪಾವಟೆ ಮತ್ತು ಪ್ರಗತಿಪರ ಹಳಕಟ್ಟಿ, ಹೆರ್ಡೆಕರ್ ಮಂಜಪ್ಪ, ಮುಂತಾದವರ ನಡುವೆ ಇದ್ದ ತಾತ್ವಿಕ ವ್ಯತ್ಯಾಸಗಳು. ಪಾವಟೆಯವರು ಪಂಚಾಚಾರ್ಯರ ವಿರುದ್ಧವಿದ್ದರೂ, ಅವರು ವೇದ ವಿರೋಧಿಗಳಲ್ಲ. ಜೊತೆಗೆ ಅವರು ಅನೇಕ ವಿಷಯಗಳಲ್ಲಿ ಸಂಪ್ರದಾಯಗಳಾಗಿ ಗೋಚರಿಸುತ್ತಾರೆ. ವೀರಶೈವ ಧರ್ಮವು ವೈದಿಕವಾದುದು ಮತ್ತು ಸನಾತನವಾದುದು ಎಂಬ ತೀವ್ರ ದೃಷ್ಟಿಕೋನವನ್ನು ಹೊಂದಿದವರಾಗಿದ್ದರು. ವಾದದ ಭರದಲ್ಲಿ ಒಮ್ಮೆ ಅವರು ಹೀಗೆ ಬರೆಯುತ್ತಾರೆ “ಶ್ರೀ ಬಸವೇಶ್ವರು ನೀಚ  ಜಾತಿಯವರಿಗಾರಿಗೂ ಲಿಂಗಧಾರಣ ಮಾಡಿಲ್ಲ” (೧೯೨೨ : ೧೨೨). ಇಲ್ಲಿ ಪಾವಟೆಯವರ ಜಾತಿ/ವಿಜಾತಿ ಎಂಬ ಮನೋಭಾವನೆಯನ್ನು ಕಾಣಬಹುದು. ಹಳಕಟ್ಟಿಯಂತವರು ಇಂತಹ ವಾದ-ವಿವಾದಗಳಿಂದ ದೂರವಿದ್ದವರು. ಅವರು ಬಸವಣ್ಣನು ಜಾತಿ-ಹುಟ್ಟಿನ ಜಂಜಾಟಗಳಿಂದ ದೂರಾದ ಮತ್ತು ಪ್ರಗತಿಪರ ವಿಚಾರಗಳನ್ನು ಸಾರ್ವತ್ರಿಕಗೊಳಿಸಿದ ಶ್ರೇಷ್ಟ ವ್ಯಕ್ತಿ ಎಂದು ಚಿತ್ರಿಸಿದರು. ತಮ್ಮ ಲೇಖನಗಳು ಮತ್ತು ಭಾಷಣಗಳ ಮೂಲಕ ಈ ಅಭಿಪ್ರಾಯವನ್ನು ಪ್ರಚಾರ ಮಾಡುತ್ತಿದ್ದರು. ಇಷ್ಟೆಲ್ಲಾ ವಾದ-ವಿವಾದಗಳು ಉಂಟಾದರು ಬಸವಣ್ಣನು ಮೂಲತಃ ಬ್ರಾಹ್ಮಣ ಎಂದು ಸಾರ್ವತ್ರಿಕವಾಗಿ ಉಳಿಯಲು ಕಾರಣವೇನು?

ಭಾಗ

ಅಳಿವರ ಉಳಿವರ ಸುಳಿವರ ನಿಲವ ನೋಡಿ ಕಂಡು” :
ಬ್ರಾಹ್ಮಣನಾಗಿ ಬಸವಣ್ಣ

ಅನೇಕ ವಿದ್ವಾಂಸರು ಮತ್ತು ಪ್ರಗತಿಪರರಿಗೆ ಬಸವಣ್ಣನು ಬ್ರಾಹ್ಮಣನಾಗಿದ್ದರೂ ಬ್ರಾಹ್ಮಣವನ್ನು ತಿರಸ್ಕರಿಸಿ ವೀರಶೈವ/ಲಿಂಗಾಯತ ಮತವನ್ನು ಮತ್ತು ಸಮಾನತೆಯನ್ನು ಪ್ರತಿಪಾದಿಸಿದನು ಎಂಬ ನಂಬಿಕೆಯು ಡೆಮಾಕ್ರೆಟಿಕ್ ಆಗಿ ಗೋಚರಿಸಿತು. ಹೀಗಾಗಿ ಅನೇಕ ಪ್ರಗತಿಪರ ಲಿಂಗಾಯತ ವಿದ್ವಾಂಸರು (ಉದಾ. ಬಿಳೆ ಅಂಗಡಿ) ಮತ್ತು ಬ್ರಾಹ್ಮಣ ಸಾಹಿತ್ಯಕಾರರು (ಎಮ್. ಆರ್. ಶ್ರೀನಿವಾಸಮೂರ್ತಿ, ಟಿ.ಎಸ್. ವೆಂಕಣ್ಣಯ್ಯ, ಆರ್.ಆರ್. ದಿವಾಕರ, ಮಾಸ್ತಿ, ಇತ್ಯಾದಿ) ಬಸವಣ್ಣನು ಮೂಲತಃ ಬ್ರಾಹ್ಮಣನೆಂದು ತಮ್ಮ ಲೇಖನಗಳ ಮೂಲಕ ಪ್ರಸಿದ್ಧಿ ಪಡಿಸಿದರು. ಇವರ ನಂಬಿಕೆ ಮೂಲಾಧಾರವಾಗಿ ಇದ್ದ ಮಾಹಿತಿಗಳೇನೆಂದರೆ ಬಸವಣ್ಣನ ಬಗ್ಗೆ ಇದ್ದ ಪುರಾಣಗಳು ಮತ್ತು ಐತಿಹ್ಯಗಳು.[10] ಇವರಲ್ಲಿದ್ದ ಒಂದು ಚಾರಿತ್ರಿಕ ವೈರುಧ್ಯವನ್ನು ನಾವು ಗಮನಿಸಬೇಕು. ಅದೇನೆಂದರೆ ಬಸವಣ್ಣನ ಹುಟ್ಟು ಮತ್ತು ಜಾತಿಯ ಬಗ್ಗೆ ಮಾತನಾಡುವಾಗ ಅನೇಕರಿಗೆ ಪುರಾಣಗಳು ಅಥವಾ ಶಾಸನಗಳು ಆಧಾರವಾದರೆ, ಸಮಾನತೆ ಮತ್ತು ಇತರ ಪ್ರಗತಿಪರ ವಿಚಾರಗಳ ಬಗ್ಗೆ ವಾದಿಸಬೇಕಾದರೆ ವಚನಗಳು ಆಸರೆಗಳಾಗಿದ್ದವು.[11] ಇವರೆಲ್ಲರೂ ತಮ್ಮ ಆಸಕ್ತಿ ಹಿನ್ನೆಲೆ ಮತ್ತು ಉದ್ದೇಶಗಳಿಗನುಗುಣವಾಗಿ ಒಮ್ಮೊಮ್ಮೆ ಪುರಾಣಗಳನ್ನು, ಮಗದೊಮ್ಮೆ ವಚನಗಳನ್ನು ಬಳಸಿಕೊಂಡಿದ್ದಾರೆ. ಹಾಗಾಗಿ ಶಿವಶರಣರ ಚರಿತ್ರೆಯ ಬಗ್ಗೆ ಏಕತಾನತೆ ಅಥವಾ ಏಕದೃಷ್ಟಿಕೋನವಿಲ್ಲ. ಇವೆಲ್ಲದರ ಪರಿಣಾಮವಾಗಿ ಶಿರಶರಣರ ಹುಟ್ಟು ಮತ್ತು ಜಾತಿಯ (ವಿಶೇಷವಾಗಿ ಬಸವಣ್ಣ) ಬಗ್ಗೆ ಇದ್ದ ವಾದ-ವಿವಾದಗಳು ಮತ್ತಷ್ಟು ಜಟಿಲತೆ, ವೈರುಧ್ಯ ಮತ್ತು ಸಂಕೀರ್ಣತೆಯನ್ನು ಹೊಂದಿದವು. ಬಹುತೇಕರು ಬಸವಣ್ಣನನ್ನು ಬ್ರಾಹ್ಮಣನನ್ನಾಗಿ ಪರಿಭಾವಿಸಿದರೆ, ಇನ್ನು ಕೆಲವರು ಲಿಂಗಾಯತನನ್ನಾಗಿ ಚಿತ್ರಿಸಿದರು. ಈ ವಾದ-ವಿವಾದಗಳು ವಸಾಹತ್ತೋತ್ತರ ಕಾಲಘಟ್ಟದಲ್ಲೂ ಮುಂದುವರೆಯಿತು.[12] ನನ್ನ ಪ್ರಕಾರ ಈ ಜಟಿಲತೆ, ಸಂಕೀರ್ಣತೆ ಮತ್ತು ವೈರುಧ್ಯಗಳು ಕನ್ನಡ ಸಂಸ್ಕೃತಿ, ಸಮಾಜ ಮತ್ತು ಸಾಹಿತ್ಯದ ಚಾರಿತ್ರಿಕ ವೈರುಧ್ಯಗಳನ್ನು ಪ್ರತಿಪಲಿಸುವ ಕಥನಗಳಾಗಿವೆ.

ಉಲ್ಲೇಖಿತ ಕೃತಿಗಳು ಮತ್ತು ಲೇಖನಗಳು

೧.        ಬ್ರೌನ್, ಸಿ.ಪಿ. ೧೯೭೧. “Essays on the Creed and Customs of the Jangams”, The Journal of the Royal Asiatic Society of Great Britain and Ireland, ಸಂಖ್ಯೆ. V, ಲಂಡನ್.

೨.        – ೧೯೯೮ (೧೮೪೦). “Essays on the Creed, Customs and Literature of the Jangams” in Selected Essays of C.P. Brown on Telugu Literature and Culture,” ಸಂ. ಇ.ಎನ್, ರೆಡ್ಡಿ.

೩.        ಬಸವಲಿಂಗಪ್ಪ, ಜೀರಿಗೆ. ೧೯೩೩. “ಲಿಂಗಾಯತರು ಮತ್ತು ಆರಾಧ್ಯರು” ಶಿವಾನುಭವ ಸಂ.ಹಳಕಟ್ಟಿ, ಸಂ. ೭, ಸಂ. ೨.

೪.        ಬುಕನಾನ್, ಫ್ರಾನ್ಸಿಸ್ ೧೯೮೮. A Journey from Madras Through Mysore, Canara and Malabar, ಸಂಚಿಕೆ. I, ಏಷಿಯನ್ ಏಜುಕೇಶನಲ್ ಸರ್ವಿಸಸ್.

೫.        ಬ್ಯಾಳಿ, ಕಲ್ಯಾಣಪ್ಪ, ೧೯೫೫ “ಬಸವನ ಜಾತಿಯ ಬಗ್ಗೆ ಶೈವ ಕವಿಗಳ ಭ್ರಮೆ”, ಶಿವಾನುಭವ ಸಂ. ಹಳಕಟ್ಟಿ, ಸಂ. ೨೯, ಸಂ. ೫.

೬.        ಬೋರಟ್ಟಿ, ವಿಜಯಕುಮಾರ್ ಎಂ. ೨೦೦೫. Narratives and Communities: A Study of “Literary” Controversies, ಅಪ್ರಕಟಿತ ಪಿ.ಎಚ್.ಡಿ. ಹೈದರಾಬಾದ್ ವಿ.ವಿ.ಗೆ ಸಾದರಪಡಿಸಿದ್ದು.

೭.        ಕಲಬುರ್ಗಿ, ಎಮ್.ಎಮ್. ೧೯೯೩. ಬಸವಣ್ಣನವರ ವಚನ ಸಂಪುಟ, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪು. ೫೯೫.

೮.        ಕುಳ್ಳಿ, ಜಯವಂತ್. ೧೯೮೩. ತಮ್ಮನಪ್ಪನವರು ಚಿಕ್ಕೋಡಿ, ಗದಗ: ವೀರಶೈವ ಅಧ್ಯಯನ ಸಂಸ್ಥೆ.

೯.        ದೇವೀರಪ್ಪ, ಎಚ್. ೧೯೮೫. ಮೈಸೂರು ಬಸವಯ್ಯನವರು. ಚಿತ್ರದುರ್ಗ: ತರಳಬಾಳು.

೧೦.      ಹಾಲಪ್ಪ, ಗ.ಸ. ೧೯೬೬. ಶ್ರೀ ಬಸವ ಚರಿತ್ರೆ, ರಾಷ್ಟದೃಷ್ಟಾರ ಹರ್ಡೆಕರ್ ಮಂಜಪ್ಪ, ಸಂ. ಗ.ಸ. ಹಾಲಪ್ಪ, ಧಾರವಾಡ: ಹರ್ಡೇಕರ್ ಮಂಜಪ್ಪ ಸ್ಮಾರಕ ಗ್ರಂಥ ಮಾಲೆ.

೧೧.      ಪಾವಟೆ, ಸಿದ್ಧರಾಮಪ್ಪ. ೧೯೨೨. ಬಸವ ಬಾನು. ಹುಬ್ಬಳ್ಳಿ.

೧೨.      ಮೂರ್ತಿ, ಚಿದಾನಂದ ಎಮ್. ೨೦೦೦. ವೀರಶೈವ ಧರ್ಮ: ಭಾರತೀಯ ಸಂಸ್ಕೃತಿ (ಹಿಂದು: ಲಿಂಗಾಯತ), ಬೆಂಗಳೂರು: ಮಿಂಚು.

೧೩.      ಜೇಮ್ಸ್, ಮ್ಯಾನರ್. ೧೯೭೭. Political Change in an Indian State: Mysore (೧೯೧೭-೧೯೫೫) ನ್ಯೂ ದೆಲ್ಲಿ: ಮನೋಹರ್.

೧೪.      ತಿಮ್ಮಯ್ಯ, ಜೆ. ೧೯೯೩. Power, Politics and Social Justice: Back-ward Caste Movement in Karnataka, ದೆಲ್ಲಿ: ಸೇಜ್.

೧೫.      ಚಾರ್ಲ್ಸ್ ವರ್ತ, ನೀಲ್. ೧೯೮೫. Peasants and Imperial Rule: Agriculture and Agrarian Society in the Bombay Presidency: ಕೇಂಬ್ರಿಡ್ಜ್ ಯೂನಿವರ್ಸಿಟ್ ಪ್ರೆಸ್: ಕೇಂಬ್ರಿಡ್ಜ್.

೧೬.      ಶೌಟೆನ್, ಜೆ.ಪಿ. ೧೯೯೧. Revolution of the Mystics: On the Social Aspects of Virashaivism, ದಿ ನೆದರ್ ಲ್ಯಾಂಡ್: ಕೊಕ್ ಪ್ರೊಸ್.

೧೭.      ಮಾರ್ಕ ಕರ್ಮಾಕ್, ವಿಲಿಯಂ. ೧೯೬೩. “Lingayaths as Sect”, The Journal of the Royal Anthropogical Institute of Great Britain and Ireland, ಸಂ. ೯೩, ಸಂ. ೧ (ಜ.-ಜೂ).

೧೮.      ನಂಜುಂಡಾರಾಧ್ಯರು, ಎಮ್.ಜಿ. “ಶಿರಸಿ ಗುರುಸಿದ್ದಶಾಸ್ತ್ರಿಗಳು”, ವೀರಶೈವ ಪುಣ್ಯ ಪುರುಷರು ಮಾಲೆ, ಸಂ. ಬಸವರಾಜ ಮಲ್ಲಶೆಟ್ಟಿ, ಸಂ. ೧. ಗದಗ: ವೀರಶೈವ ಅಧ್ಯಯನ ಸಂಸ್ಥೆ.

೧೯.      ರಾಜಶೇಖರಪ್ಪ, ಬಿ. ೨೦೦೭. “ಬಸವಣ್ಣನವರ ಜಾತಿಮೂಲ: ಕೇವಲ ಕಾಲ್ಪನಿಕ ವಾದ” ಎನ್ನ ತಂದೆ ಕೂಡಲಸಂಗಮದೇವಾ, ಬಸವ ಪಥ, ವಿಶೇಷ ಸಂಚಿಕೆ.

೨೦.      ರೆ. ಜಿ. ಎ. ವುರ್ಥ್. ೧೮೬೩-೬೬. “Basava Purana of the Lingaits” in The Journal of the Bombay Branch of the Royal Asiatic Society, ಸಂ. ೨೪. ಸಂಖ್ಯೆ. ೮, ಪು. ೬೫-೯೭.

೨೧.      ವೀರಪ್ಪ, ಬಿ.ಸಿ. ೨೦೦೧. ಬೆಂಗಳೂರು ನಗರದ ವೀರಶೈವ ಮಠಗಳು: ಒಂದು ಸಾಂಸ್ಕೃತಿಕ ಅಧ್ಯಯನ, ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್.

[1] ಮತ್ತಷ್ಟು ವಿವರಗಳಿಗಾಗಿ ನನ್ನ ಅಪ್ರಕಟಿತ ಪಿ.ಎಚ್.ಡಿ. ಮಹಾಪ್ರಬಂಧವನ್ನು (೨೦೦೫) ನೋಡಿ.

[2] ಮಂಜಪ್ಪನವರು ಬಸವಣ್ಣ ಜನ್ಮದಿನವನ್ನು ಖಚಿತವಾಗಿ ತಿಳಿದುಕೊಳ್ಳಲು ಅನೇಕ ಲಿಂಗಾಯತ ವಿದ್ವಾಂಸರನ್ನು ಸಂಪರ್ಕಿಸಿದರು. ಒಮ್ಮೆ ಚಂದ್ರಶೇಖರಶಾಸ್ತ್ರಿ ಎಂಬುವವರನ್ನು ಭೇಟಿಯಾದಾಗ, ಮಂಜಪ್ಪನವರಿಗೆ ಆಶ್ಚರ್ಯ ಕಾದಿತ್ತು. ಶಾಸ್ತ್ರಿಯವರು ಮಂಜಪ್ಪನವರಿಗೆ ಬಸವಣ್ಣನ ಜನ್ಮ ದಿನದ ಬಗ್ಗೆ ತಲೆಕೆಡಿಸಿಕೊಳ್ಳಬಾರದೆಂದು, ಬದಲಾಗಿ ರೇಣುಕಾಚಾರ್ಯ ಜಯಂತಿಯನ್ನು ಆಚರಿಸಬೇಕೆಂದು ಉಪದೇಶಿಸಿದರು. ಆಗ ಮಂಜಪ್ಪನವರಿಗೆ ಶಾಸ್ತ್ರಿಯವರು ಹೀಗೇಕೆ ಹೇಳಿದರು ಎಂದು ಹೊಳೆಯಲಿಲ್ಲ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗ.ಸ. ಹಾಲಪ್ಪನವರ ಕೃತಿಯನ್ನು (೧೯೬೬) ನೋಡಿರಿ.

[3] ಈ ಚಳುವಳಿಯ ಬಗ್ಗೆ ವಿದ್ವಾತ್ತಾಗಿ ಅಧ್ಯಯನವನ್ನು ಮಾಡಿದವರಲ್ಲಿ ಜೇಮ್ಸ್ ಮ್ಯಾನರ ಮತ್ತು ಜಿ. ತಿಮ್ಮಯ್ಯನವರು ಪ್ರಮುಖವಾಗಿ ಎದ್ದು ಕಾಣುತ್ತಾರೆ.

[4] ನೀಲ್ ಚಾಲ್ಸ್ ವರ್ತ್‌ರವರು ದಕ್ಷಿಣ ಮಹಾರಾಷ್ಟ್ರದಲ್ಲಿ ಆಗುತ್ತಿದ್ದ ಬ್ರಾಹ್ಮಣೇತರ ಮೀಸಲಾತಿ ಚಳುವಳಿಯ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅವರ ಪ್ರಕಾರ “ಮಹಾರಾಷ್ಟ್ರದಲ್ಲಿ, ವಿಶೇಷವಾಗಿ ದಕ್ಷಿಣ ಮಹಾರಾಷ್ಟ್ರ, ಬ್ರಾಹ್ಮಣೇತರ ಚಳುವಳಿಯು ಜ್ಯೋತಿ ಬಾ ಫುಲೆಯವರ ಸಾಮಾಜಿಕ ಚಳುವಳಿಗಿಂತ ಭಿನ್ನವಾದದ್ದು. ಅದು ರಾಜಕೀಯ ಹಿತಾಸಕ್ತಿಗಳನ್ನೊಳಗೊಂಡಿತ್ತು. ಸಾರ್ವಜನಿಕ ವಲಯದಲ್ಲಿ ಅರ್ಧದಷ್ಟು ಸ್ಥಾನಗಳನ್ನು ಹಿಂದುಳಿದ ಸಮುದಾಯಗಳಿಗೆ ಮೀಸಲಾಗಿ ಇಡಬೇಕೆಂದು ಒತ್ತಾಯಿಸಲಾಯಿತು. ನಗರದಲ್ಲಿ ವಾಸಿಸುತ್ತಿದ್ದ ಮುಖಂಡರಿಂದ ಬಿಸಿಯೇರಿದ್ದ ಈ ಚಳುವಳಿಗೆ, ಗ್ರಾಮದ ಭೂಮಾಲೀಕರ ಬೆಂಬಲವಿತ್ತು. ಆದರೆ ಈ ಚಳುವಳಿಯು ಅಷ್ಟೊಂದು ಪರಿಣಾಮಕಾರಿಯಾಗಿ ಅಥವಾ ಪ್ರಭಾವಶಾಲಿಯಾಗಿರದೆ ಅಲ್ಲಲ್ಲಿ ಚದುರಿ ಹೋಗಿತ್ತು” (೧೯೮೫: ೨೬೦).

[5] ಇದರರ್ಥ ಎಲ್ಲಾ ಶಿವ-ಶರಣರು ಪ್ರಗತಿಪರರಿಗೆ ಮಾದರಿಯಾದರೆಂದು ಅರ್ಥವಲ್ಲ. ಅವರಿಗೆ ಪ್ರಮುಖವಾಗಿ ಬಸವ, ಚೆನ್ನಬಸವನಣ್ಣ, ಅಲ್ಲಮಪ್ರಭು, ಮತ್ತು ಅಕ್ಕಮಹಾದೇವಿಯವರು ಹೆಚ್ಚು ಪ್ರಸ್ತುತವಾಗಿ ಕಂಡರು.

[6] ವಿರಕ್ತ ಮಠಗಳು ಸಂಪ್ರದಾಯಿಕವಾಗಿ ನಡೆದುಕೊಂಡು ಬಂದ ಶ್ರೇಣಿಕೃತ ವ್ಯವಸ್ಥೆಯನ್ನು ಮುಂದುವರೆಸಿದವು. ಉದಾಹರಣೆಗೆ, ಅನೇಕ ವಿರಕ್ತ ಮಠಗಳು ಜಂಗಮೇತರರನ್ನು ಪೀಠಾಧೀಶರನ್ನಾಗಿ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಅಂದಿನ ಪ್ರಸಿದ್ಧ ಲಿಂಗಾಯತರ ಧಾರ್ಮೀಕ ಮುಖಂಡರಾದ ಹಾನಗಲ್ಲ ಕುಮಾರಸ್ವಾಮಿಯವರು ಜಂಗೇಮೇತರರು ವೀರಶೈವ ಮಠಗಳಿಗೆ ಗುರುಗಳಾಗಲು ಎಂದಿಗೂ ಸಾಧ್ಯವಿಲ್ಲವೆಂದು ನಂಬಿದ್ದರು. ಮಠಾಧೀಶರಾಗಬೇಕೆನ್ನುವವರು ಜಂಗಮ ಹಿನ್ನಲೆಯನ್ನುಳ್ಳರಾಗಿರಬೇಕೆಂದು ಅವರ ವಾದವಾಗಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ಗದುಗಿನ ತೋಂಟದಾರ್ಯ ಮಠದ ಬಸಪ್ಪಸ್ವಾಮಿಯವರು ಜಂಗಮೇತರರನ್ನು ಮಠಾಧೀಶರರನ್ನಾಗಿ ನೇಮಿಸಲು ಸಿದ್ದರಿದ್ದರು. ಇದರ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ವೀರಪ್ಪನವರ ಅಧ್ಯಯನವನ್ನು (೨೦೦೧ : ೧೬೨) ನೋಡಿರಿ.

[7] ಶಿರಸಿ ಗುರುಸಿದ್ಧ ಶಾಸ್ತ್ರಿಯವರ ಜೀವನ ಚರಿತ್ರೆ ಬರೆದಿರುವ ನಂಜುಂಡಾರಾಧ್ಯರು ಸಹ ಇದರ ಬಗ್ಗೆ ನಮ್ಮ ಗಮನ ಸೆಳೆಯುತ್ತಾರೆ. ೧೯೨೦ ದಶಕದ ಸುಮಾರಿನಲ್ಲಿ ಪಂಚಾಚಾರ್ಯ ಪ್ರಭದಲ್ಲಿ ಮತಾಂತರಗಳ ವಿರುದ್ಧ ಅನೇಕ ಲೇಖನಗಳು ಪ್ರಕಟವಾದವು ಎಂದು ಅವರು ಬರೆಯುತ್ತಾರೆ (೧೯೮೩).

[8] ವಿಲಿಯಂ ಮಾರ್ಕ್ ಕರ್ಮಾಕ್ ಈ ವಿಷಯದ ಬಗ್ಗೆ ತಮ್ಮ “Lingayaths as a Sect” (೧೯೬೩) ಎಂಬ ಲೇಖನದಲ್ಲಿ ಸಾಕಷ್ಟು ಒಳನೋಟಗಳನ್ನು ಒದಗಿಸಿದ್ದಾರೆ.

[9] ಈ ವಾದವು ಅಂದಿನ ಮತ್ತು ಮುಂದಿನ ಪೀಳಿಗೆಯವರಿಗೆ ಬಲಿಷ್ಟವಾದ ತಾತ್ವಿಕ ಅಡಿಪಾಯವನ್ನು ಹಾಕಿಕೊಟ್ಟಿತು. ಈಗಲೂ ಅನೇಕರು ಈ ವಾದವನ್ನು ಪುಷ್ಟೀಕರಿಸುತ್ತಾರೆ.

[10] ಬ್ರಾಹ್ಮಣ ಸಾಹಿತಿಗಳು ಬಸವಣ್ಣ ಮತ್ತು ಇತರ ಶಿವಶರಣರ ಬಗ್ಗೆ ಆಸಕ್ತಿ ವಹಿಸಿದುದು ಒಂದು ರೋಚಕ ಇತಿಹಾಸವನ್ನೆ ತೆರೆದಿಡುತ್ತದೆ. ಇದರ ಬಗ್ಗೆ ಸಾಕಷ್ಟು ಸಂಶೋಧನೆಯಾಗಬೇಕಾಗಿದೆ.

[11] ಈ ಚಾರಿತ್ರಿಕ ವೈರುಧ್ಯವನ್ನು ೧೯೩೨ರಲ್ಲಿಯೇ ಒರ್ವ ಮತಾಭಿಮಾನಿ ಎಂಬುವವರು ಮೈಸೂರ್ ಸ್ಟಾರ್ ಪತ್ರಿಕೆಯಲ್ಲಿ ವಚನಗಳನ್ನು ವಿಮರ್ಶಿಸುತ್ತಾ ಟೀಕಿಸಿದ್ದಾರೆ.

[12] ಉದಾಹರಣೆಯಾಗಿ ಕಲ್ಯಾಣಪ್ಪ ಬ್ಯಾಳಿ ಎಂಬುವವರು ೧೯೫೫ರಲ್ಲಿ ಹೀಗೆ ಬರೆಯುತ್ತಾರೆ.

“ಅನಾದಿ ವೀರಶೈವ ಸಂಗ್ರಹ”ದಲ್ಲಿ ಹೇಳಿರುವಂತೆ ಬಸವನು ಜಾತಿಯಿಂದ ಶುದ್ಧ ವೀರಶೈವ ವಂಶನಾದ ಪಂಚಮಸಾಲೆಯವನು” (೧೯೫೫ : ೨೬೯). ಅವರು ಭಾವಿಸುವ ಹಾಗೆ ಬಸವಣ್ಣನು ಅಪ್ರಾಕೃತ ಅಥವಾ ಆರಾಧ್ಯ ಬ್ರಾಹ್ಮಣ ಅಥವಾ ಅತಿ ವರ್ಣಾಶ್ರಮಿ ಬ್ರಾಹ್ಮಣನು. ಆದರೆ ದುರಾದೃಷ್ಟವಶಾತ್ “ಇದನ್ನರಿಯದ ವೈಷ್ಣವ ಕವಿಯಾದ ಸಿಂಗಿರಾಜನೂ ಮತ್ತು ಶೈವ ಕವಿಗಳಾದ ಹರಿಹರ ಭೀಮಾದಿಗಳೂ ಬಸವನಿಗೆ ಪ್ರಾಕೃತ ಬ್ರಾಹ್ಮಣವನ್ನಾರೋಪ ಮಾಡಲಿಕ್ಕೆ ಹೋಗಿ ದೊಡ್ಡ ಪೇಚಿನಲ್ಲಿ ಬಿದ್ದು ಬಿಟ್ಟಿದ್ದಾರೆ” (ಅದೇ). ಒಂದು ಹೆಜ್ಜೆ ಮುಂದೆ ಹೋಗಿ ಅವರು ಈ ಪುರಾಣಗಳು (ಸಿಂಗಿರಾಜ ಪುರಾಣ, ಬಸವರಾಜದೇವರ ರಗಳೆ, ಬಸವಪುರಾಣ) ನಂಬಲರ್ಹವಲ್ಲವೆಂದು ವಾದಿಸುತ್ತಾರೆ. ಈ ಬ್ರಾಹ್ಮಣೇಕರಣದ ಅಂಶವನ್ನು ಮಾತೆ ಮಹಾದೇವಿಯವರು ಸಹ ಟೀಕಿಸಿದ್ದಾರೆ. ಇದರ ಬಗ್ಗೆ ಮತ್ತಷ್ಟು ವಿವರಗಳಿಗಾಗಿ ಬಸವ ವಚನ ದೀಪ್ತಿ ವಿವಾದದ ಸಂದರ್ಭವನ್ನು ಪರಿಶೀಲಿಸಿ.