“ಜಾತಿವಿಡಿದು ಸೂತಕವನರಸುವೆ
ಜ್ಯೋತಿವಿಡಿದು ಕತ್ತಲೆಯನರಸುವೆ
ಇದೇಕೂ ಮರುಳುಮಾನವಾ? ಜಾತಿಯಲ್ಲಿ ಅಧಿಕನೆಂಬೆ! ”[1]

ಬಸವಣ್ಣನ[2] ಜಾರಿ ಮತ್ತು ಹುಟ್ಟಿನ ಬಗ್ಗೆ ಆಗಾಗ ಏಳುವ ವಾದ-ವಿವಾದಗಳು ಕೇವಲ ಸಾಹಿತ್ಯಕ್ಕೆ ಸೀಮಿತವಲ್ಲ. ಅವು ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಜಲುಗಳನ್ನು ಸೂಚಿಸುವ ಐತಿಹಾಸಿಕ ಕುರುಹುಗಳಾಗಿವೆ. ಇಲ್ಲಿ ಐತಿಹಾಸಿಕ ಎಂಬ ಪರಿಕಲ್ಪನೆಯ ಬಗ್ಗೆ ವಿಶೇಷ ಒತ್ತನ್ನು ನೀಡಬೇಕು. ಏಕೆಂದರೆ ೨೦ನೇ ಶತಮಾನದಾದ್ಯಂತ ಬಸವಣ್ಣನ ಜಾತಿಯ ಅಥವಾ ಹುಟ್ಟಿನ ಬಗ್ಗೆ ಉಂಟಾದ ಚರ್ಚೆ, ವಾದ-ವಿವಾದಗಳು ಬಸವಣ್ಣನವರು ಯಾವ ಜಾತಿಗೆ ಸೇರಿದನೆಂಬುದಾಗಿದೆಯೆ ಹೊರತು ಈ ವಾದ-ವಿವಾದಗಳಿಗೂ ತಳಹದಿಯಾಗಿ ಒಂದು ಐತಿಹಾಸಿಕ ಅಥವಾ ಸಂದರ್ಭ ಇದೆಯೆಂಬ ಅಂಶದ ಬಗ್ಗೆ ಇದುವರೆಗೂ ಯಾರು ಗಮನಹರಿಸಿರುವ ಅಥವಾ ತಲೆಕೆಡಿಸಿಕೊಂಡಿರುವ ಸುಳಿವುಗಳಿಲ್ಲ. ಬಸವಣ್ಣನ ಹುಟ್ಟು ಮತ್ತು ಜಾತಿಯ ಬಗ್ಗೆ ಇದುವರೆಗೆ ಲಭ್ಯವಿರುವ ಜ್ಞಾನ ಅಥವಾ ಬೌದ್ಧಿಕ ಚರ್ಚೆಗಳು ಬಹಳ ಸರಳೀಕೃತ ಹಾಗು ಏಕದೃಷ್ಟಿಕೋನವುಳ್ಳದ್ದಾಗಿವೆ. ಪ್ರಸ್ತುತ ಲೇಖನದಲ್ಲಿ ಬಸವಣ್ಣನ ಹುಟ್ಟು ಮತ್ತು ಜಾತಿಯನ್ನು ನಿಖರವಾಗಿ ಹುಡುಕುವ ಅಥವಾ ಇರುವ ವಿವಾದಗಳನ್ನು ಸುಲಲಿತವಾಗಿ ಬಗೆಹರಿಸುವ ಪ್ರಯತ್ನವಿಲ್ಲ. ಈ ವಿವಾದಗಳಿಗೆ ಹಿನ್ನಲೆಯಾಗಿ ಇರುವ ಕೆಲವು ಐತಿಹಾಸಿಕ ಸಂದರ್ಭಗಳನ್ನು ಪರಿಶೀಲಿಸುವ ಸಣ್ಣ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಲೇಖನದ ಚರ್ಚೆಯು ವಸಾಹತುಶಾಹಿ ಕಾಲಘಟ್ಟಕ್ಕೆ ಮಾತ್ರ ಸೀಮಿತವಾಗಿದೆ (ವಿಶೇಷವಾಗಿ ೧೮೮೦-೧೯೩೦).

ಭಾಗ

ಕುಲಜನೆಂಬುದಕ್ಕೆ ಆವುದು ದೃಷ್ಟ?’,
ಆರಾಧ್ಯನೋ, ಲಿಂಗಾಯತನೋ?

ನನ್ನ ಅರಿವಿನ ಮಟ್ಟಕ್ಕೆ ಹೇಳುವದಾದರೆ ಬಸವಣ್ಣನ ಹುಟ್ಟು ಮತ್ತು ಜಾತಿಯ ಬಗ್ಗೆ ಇರುವ ವಾದ-ವಿವಾದಗಳು ೧೯ನೇ ಶತಮಾನದ ಕೊನೆಯ ಎರಡು ದಶಕಗಳು ಮತ್ತು ೨೦ನೇ ಶತಮಾನದ ಮೊದಲರ್ಧದಲ್ಲಿ (ಅಂದರೆ ೧೯೧೦-೨೦ರ ದಶಕಗಳಲ್ಲಿ) ಉದ್ಭವವಾಗಿ, ತಾರಕಕ್ಕೇರಿ, ನಿರ್ಣಾಯಕ ಘಟ್ಟವನ್ನು ತಲುಪದೆ ಅಪರಿಹಾರವಾಗಿ ಉಳಿದುಕೊಂಡ ಚಾರಿತ್ರಿಕ ಸಂದರ್ಭಗಳನ್ನು ಪ್ರದರ್ಶಿಸುತ್ತವೆ. ೧೯ನೇ ಶತಮಾನದ ಕೊನೆಯ ಎರಡು ದಶಕಗಳಿಗೆ ಬಸವಣ್ಣನ ಜಾತಿಯ ಬಗ್ಗೆ ಕಾವೇರುವಷ್ಟು ವಾದ-ವಿವಾದಗಳಾಗಿರಲಿಲ್ಲ. ಪ್ರಥಮ ಬಾರಿಗೆ ಲಿಂಗಾಯತರ[3] ಬಗ್ಗೆ ಗಂಭೀರವಾಗಿ ಅಧ್ಯಯನವನ್ನು ಮಾಡಿ ತನ್ನ ವಿಚಾರ ಸರಣೆಯನ್ನು ಮಂಡಿಸಿದ ಸಿ.ಪಿ. ಬ್ರೌನ್ ಆಧುನಿಕ ಪರಿಭಾಷೆಯಲ್ಲಿ ಬಸವಣ್ಣನ ಮೂಲವನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಾನೆ. ಸಾಕಷ್ಟು ಕಾರ್ಯಕ್ಷೇತ್ರ ಮತ್ತು ಸಂಶೋಧನೆಯ ನಂತರ ಬಸವಣ್ಣನು ಆರಾಧ್ಯನಲ್ಲ, ಅವರು ಶೈವ ಬ್ರಾಹ್ಮಣನೆಂದು ಅವನು ದಾಖಲಿಸಿದ್ದಾನೆ (೧೮೭೧: ೧೪೧ ಮತ್ತು ೧೯೯೮: ೮೨). ಆಂಧ್ರ ಪ್ರದೇಶದಲ್ಲಿನ ಜಂಗಮರ ಬಗ್ಗೆ ಬರೆಯುತ್ತಾ ಬಸವಣ್ಣನ ತಂದೆ ಆರಾಧ್ಯನಾಗಿದ್ದನು ಎಂಬುದನ್ನು ಅವನು ಅಲ್ಲಗಳೆಯುತ್ತಾನೆ. ಆರಾಧ್ಯ ಮೂಲವನ್ನು ಅಲ್ಲಗಳೆಯುವದಕ್ಕೆ ಬ್ರೌನನಿಗಿದ್ದ ಕಾರಣವೇನೆಂದರೆ ಅವರು ಬ್ರಾಹ್ಮಣನ ಮಗನೆಂದು ದಾಖಲಿಸಿದ್ದಾನೆ (೧೯೮೮: ೨೪೦). ಆದರೆ ಯಾವ ಮತದ ಬ್ರಾಹ್ಮಣ ಎಂಬ ಮಾಹಿತಿ ಇಲ್ಲ. ನಂತರ ಬಂದ ಇತರ ಪಾಶ್ಚಾತ್ಯ ವಿದ್ವಾಂಸರಲ್ಲಿ (ವುರ್ಥ್[4], ಕಿಟೆಲ್, ಎ. ಬಾರ್ಥ್) ಅಥವಾ ಸ್ಥಳೀಯ ವಿದ್ವಾಂಸರಾದ ಆರ್.ಜಿ. ಭಂಡಾರಕರ್[5], ಪಿ.ಆರ್. ಕರಿಬಸವಶಾಸ್ತ್ರಿ, ಇತ್ಯಾದಿಯವರು ಬಸವಣ್ಣನನ್ನು ಬ್ರಾಹ್ಮಣನೆಂದೋ ಅಥವಾ ಆರಾಧ್ಯ ಬ್ರಾಹ್ಮಣನೆಂದೂ ಅಥವಾ ಸ್ವಾರ್ತ ಬ್ರಾಹ್ಮಣನೆಂದೂ ಇಲ್ಲದಿದ್ದರೆ ಶೈವ/ಲಿಂಗಿ ಬ್ರಾಹ್ಮಣನೆಂದು ಭಾವಿಸಿದರು.[6] ಇವರೆಲ್ಲರೂ (ಬುಕನಾನ್ ಮತ್ತು ಬ್ರೌನ್ ಇಬ್ಬರನ್ನು ಬಿಟ್ಟು) ಲಿಂಗಾಯತ ಪುರಾಣಗಳನ್ನು (ಕನ್ನಡ, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ) ಆಧಾರವಾಗಿಟ್ಟುಕೊಂಡು ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಬುಕನಾನ್ ಮತ್ತು ಬ್ರೌನ್ ಇಬ್ಬರು ಆಧಾರಗಳ ಸಮೇತ ಅನೇಕ ಲಿಂಗಾಯತ ವಿದ್ವಾಂಸರನ್ನು ಸಂದರ್ಶಿಸಿ ಅವರಿಂದ ಮಾಹಿತಿಗಳನ್ನು ಸಂಗ್ರಹಿಸಿದರು. ಹೀಗಾಗಿ ಇವರಿಬ್ಬರಲ್ಲಿ ‘ಕಾರ್ಯಕ್ಷೇತ್ರ’ದ ಪ್ರಯತ್ನಗಳನ್ನು ಕಾಣಬಹುದು. ಆದಾಗ್ಯು ಅವರ ವಿಚಾರಗಳು ಬಹತೇಕ ಗ್ರಾಂಥಿಕ ಮೂಲವಾಗಿದ್ದವು. ಹಾಗಾದರೆ ೧೯ನೇ ಶತಮಾನದ ಕೊನೆಯ ಎರಡು ದಶಕಗಳವರೆಗು ಬಸವಣ್ಣನ ಹುಟ್ಟು ಮತ್ತು ಜಾತಿಯ ಬಗ್ಗೆ ಇಲ್ಲದ ಬಿರುಸಿನ ವಾದ-ವಿವಾದಗಳು ನಂತರದ ದಶಕಗಳಲ್ಲಿ ಹುಟ್ಟಿಕೊಂಡದ್ದು ಹೇಗೆ ಮತ್ತು ಏಕೆ? ನಾನು ಭಾವಿಸುವ ಹಾಗೆ ಈ ಪ್ರಶ್ನೆಗಳು ಬಹಳ ಮುಖ್ಯವಾದುವು ಏಕೆಂದರೆ ಅವು ಮಹತ್ತರವಾದ ಐತಿಹಾಸಿಕ, ಸಾಮಾಜಿಕ ಹಾಗು ಸಾಂಸ್ಕೃತಿಕ ಅಂಶಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಮುಂದಿನ ಚರ್ಚೆಯು ಈ ವಿಷಯವನ್ನು ಮಂಡಿಸುತ್ತದೆ.

ಬಸವಣ್ಣನ ಜಾತಿ ಮತ್ತು ಹುಟ್ಟಿನ ಪ್ರಶ್ನೆಗಳು ಕೇವಲ ತಾರ್ಕಿಕ ಚರ್ಚೆಗೆ ಮಾತ್ರ ಸೀಮಿತವಾಗಿರಲಿಲ್ಲ. ಅವು ಲಿಂಗಾಯತ ಸಮಾಜದಲ್ಲಿ ಉಂಟಾದ ಸಾಮಾಜಿಕ, ಸಾಹಿತ್ಯಕ, ರಾಜಕೀಯ ಆರ್ಥಿಕ ಸ್ಥಿತ್ಯಂತರಗಳನ್ನು ಪ್ರಭಾವಿಸುವಷ್ಟು ಅಥವಾ ಪ್ರಭಾವ ಹೊಂದುವಷ್ಟು ಪರಿಣಾಮಕಾರಿಯಾಗಿದ್ದವು. ಒಂದು ಕಡೆ ಲಿಂಗಾಯತರ ಆಧುನಿಕ ಮತ್ತು ಪ್ರಗತಿಪರ ಅಸ್ಮಿತೆಯ ಹೊತೆಗೆ ತಳಕು ಹಾಕಿಕೊಂಡಿರುವಂತೆ, ಮತ್ತೊಂದು ಕಡೆ ಸಂಪ್ರದಾಯವಾದಿಗಳನ್ನು ಕೆರಳಿಸುವ ಹತ್ಯಾರುಗಳಾಗಿ ಈ ಪ್ರಶ್ನೆಗಳು ರೂಪುಗೊಂಡಿದ್ದವು. ಇವುಗಳ ಬಗ್ಗೆ ಚರ್ಚೆಯನ್ನು ಮುಂದುವರೆಸುವ ಮೊದಲು ಬಸವಣ್ಣನ ಜಾತಿ ಹುಟ್ಟಿನ ಬಗ್ಗೆ ೧೯೨೨ರ ಸುಮಾರಿಗೆ ಉಂಟಾದ ಒಂದು ಮುಖ್ಯವಾದ ಚಾರಿತ್ರಿಕ ಸಂದರ್ಭವನ್ನು ಅವಲೋಕಿಸಬೇಕಾಗುತ್ತದೆ. ಈ ಸಂದರ್ಭವು ಲಿಂಗಾಯತ ಸಂಬಂಧಿಸಿದ್ದು. ೧೯೨೨ರಲ್ಲಿ ಪ್ರಕಟಗೊಂಡ ಬಸವ ಬಾನು ಎಂಬ ಹೊತ್ತಿಗೆಯಲ್ಲಿ ಪಾವಟೆಯವರು ಆವೇಶಭರಿತವಾಗಿ ಮತ್ತು ಹೆಮ್ಮೆಯಿಂದ ಬಸವಣ್ಣನ ಬಗ್ಗೆ ಹೀಗೆ ಬರೆಯುತ್ತಾರೆ.

ಇಂತು ಸಕಲರಿಗೂ ವಂದ್ಯನಾದ ಬಸವನನ್ನು ಕುರಿತು ಆರಾಧ್ಯನೋ ಸ್ಮಾರ್ತನೋ ಎಂದು ವಾದಿಗಳು ಕೇಳುವುದುಂಟು. ಬಸವನು ಸ್ಮಾರ್ತನಲ್ಲ, ಆರಾಧ್ಯನಲ್ಲ; ಅನಾದಿ ವೀರಶೈವನು-ಲಿಂಗವಂತನು-ಸದ್ಗುರುಜಾತನು (೧೯೨೨: ೨೩).

ಮುಂದುವರೆಯುತ್ತಾ ಪಾವಟೆಯವರು ಖಡಾ ಖಂಡಿತವಾಗಿ ಬಸವನು ಲಿಂಗಾಯತನು, ಆರಾಧ್ಯನಲ್ಲ ಎಂದು ಪುನರುಚ್ಛಿಸುತ್ತಾರೆ. (ಅದೇ: ೨೪), ಸ್ವತಳ ಸಂಸ್ಕೃತ ಪಂಡಿತರಾಗಿದ್ದ ಪಾವಟೆಯವರು ತಮ್ಮ ವಾದಗಳನ್ನು ಸಮರ್ಥಿಸಿಕೊಳ್ಳಲು ವೇದ, ಪುರಾಣೀತಿಹಾಸ ಮತ್ತು ಸಂಸ್ಕೃತ ಕೃತಿಗಳನ್ನು ಧಾರಾಳವಾಗಿ ಬಳಸಿಕೊಂಡಿದ್ದಾರೆ. ಹಿಗೆ ನಮ್ಮ ನಂಬಿಕೆಗಳನ್ನು ಮತ್ತು ಪಾವಟೆಯವರು ಜನರ ಮುಂದೆ ಇಡಲು ಇದ್ದ ಚಾರಿತ್ರಿಕ ಒತ್ತಡ ಮತ್ತು ತುರ್ತುಗಳು ಯಾವುವು?

ಇಡೀ ಹೊತ್ತಿಗೆಯಲ್ಲಿ ಪಾವಟೆಯವರ ಚರ್ಚೆಯು ಲಿಂಗಾಯತ ಧರ್ಮ ಮತ್ತು ಶಿವಶರಣರ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತಾ, ಪಂಚಾಚಾರ್ಯರ ಹಿಂಬಾಲಕರನ್ನು ತೆಗಳುತ್ತಾ ಸಾಗುತ್ತದೆ. ಬಸವಣ್ಣನ ಜಾತಿಯ ಬಗ್ಗೆ ಹೀಗೆ ಆವೇಶದಿಂದ ವಾದಿಸಲು ಅವರಿಗಿದ್ದ ಕಾರಣ ಒಂದು ವರ್ಷದ ಹಿಂದೆ ಪ್ರಕಟಗೊಂಡ ಬಸವಾದಿ ನಿಜತತ್ವದರ್ಪಣ (೧೯೨೧) ಎಂಬ ಕೃತಿ.[7] ಪಾವಟೆಯವರ ಬಸವಬಾನು ಈ ಕೃತಿಗೆ ಪ್ರತಿಕ್ರಿಯೆಯಾಗಿ ನೆರೆಯಲ್ಪಟ್ಟಿದ್ದು. ಪಂಚಾಚಾರ್ಯ ಪಂಥದ ಪ್ರಮುಖರಾಗಿದ್ದ ಕಾಶಿನಾಥ ಶಾಸ್ತ್ರಿಯ ಆಪ್ತ ಶಾಂತಪ್ಪ ವೀರಭದ್ರಪ್ಪ ಕುಬುಸದವರಿಂದ ರಚಿಸಲ್ಪಟ್ಟ ಬಸವಾದಿನಿಜತತ್ವದರ್ಪಣ ಕೃತಿಯು ಪಾವಟೆ ಮತ್ತು ಇತರ ಲಿಂಗಾಯತ ವಿದ್ವಾಂಸರನ್ನು ಕೇಳರಿಯದಷ್ಟು ಪ್ರಚೋದಿಸಿತ್ತು. ಹಾಗಾದರೆ ಈ ಕೃತಿಯಲ್ಲಿ ಪ್ರಚೋದನಕಾರಿಯಾದದ್ದೇನಿದ್ದವು? ಈ ಕೃತಿಯ ಮೂಲೋದ್ದೇಶವೆನಿದ್ದಿತು?

ಬಸವಾದಿ ನಿಜತತ್ವದರ್ಪಣದಲ್ಲಿ ಶಿವ ಶರಣದ ಬಗ್ಗೆ ಇನ್ನೂರು ಪ್ರಶ್ನೆಗಳು, ಸಂದೇಹಗಳು ಮತ್ತು ಆಪಾದನೆಗಳಿವೆ. ಇವೆಲ್ಲವೂ ೧೨ನೇ ಶತಮಾನದ ‘ಕ್ರಾಂತಿಕಾರ’ ಚಳುವಳಿ ಮತ್ತು ಅವರ ಧಾರ್ಮಿಕ ಆಚಾರ-ವಿಚಾರಗಳ ಅಪ್ರಸ್ತುತತೆಯನ್ನು ಕುರಿತದ್ದಾಗಿವೆ. ಈ ಕೃತಿಯಾಗಿ ಕುಬುಸದರವರು ಮಾನವ ಶಾಸ್ತ್ರ, ಸಾಹಿತ್ಯ, ಇತಿಹಾಸ, ಪುರಾಣ, ಇತ್ಯಾದಿಗಳನ್ನು ವಾದ-ಪ್ರತಿಪಾದನೆಗಾಗಿ ಉಪಯೋಗಿಸಿಕೊಂಡಿದ್ದಾರೆ. ಲಿಂಗಾಯತರ ಬಗ್ಗೆ ಪ್ಲೀಟ್ ಮತ್ತು ಗ್ಯಾರೆಟರಿಂದ ರಚಿಸಲ್ಪಟ್ಟ ಕೃತಿಗಳ ಉಲ್ಲೇಖಗಳನ್ನು ಇಲ್ಲಿ ಧಾರಾಳವಾಗಿ ಕಾಣಬಹುದು. ಸಂಸ್ಕೃತ ಭಾಷೆಯಲ್ಲಿರುವ ಬಸವಪುರಾಣ, ಪ್ರಭುಲಿಂಗಲೀಲೆ. ಕಾಡಸಿದ್ದೇಶ್ವರ ವಚನ, ಸಿಂಗಿರಾಜ ಪುರಾಣ ಮತ್ತು ಚೆನ್ನಬಸವ ಪುರಾಣಗಳನ್ನು ಬಳಸಿಕೊಂಡು ಶಿವ ಶರಣದ ಬಗ್ಗೆ ಈ ಕೃತಿಗಳಲ್ಲಿರುವ ವೈರುಧ್ಯ ಮತ್ತು ವಿರೋಧಾಭ್ಯಾಸಗಳನ್ನು ಎತ್ತಿ ತೋರಿಸಲಾಗಿದೆ. ವೈಜ್ಞಾನಿಕ ಇತಿಹಾಸ ಮತ್ತು ಸಾಂಪ್ರದಾಯಿಕ ಜ್ಞಾನ ಪರಂಪರೆಗಳೆರಡನ್ನೂ ಉಪಯೋಗಿಸಿಕೊಂಡು ಪಾವಟೆಯವರನ್ನು ತಾರ್ಕಿಕ ಇಕ್ಕಟಿಗೆ ಸಿಕ್ಕಿಸುವ ಜಾಣ ಪ್ರಯತ್ನವಿದಾಗಿತ್ತು. ಈ ಕೃತಿಯಲ್ಲಿ ಹನ್ನೆರಡು, ಹದಿಮೂರು ಮತ್ತು ಹದಿನಾಲ್ಕನೆ ಪ್ರಶ್ನೆಗಳು ಬಸವಣ್ಣನ ಜಾತಿಯ ಬಗ್ಗೆ ಇದ್ದು ಅವುಗಳನ್ನು ಕ್ರಮವಾಗಿ ಹೀಗೆ ಪಟ್ಟಿ ಮಾಡಬಹುದು:

ಬಸವನು ಆದಿಯಲ್ಲಿ ಯಾವ ಮತದವನು?
ಇವನ (ಬಸವಣ್ಣನ) ವಿಷಯದಲ್ಲಿ ಕೆಲವು ಗ್ರಂಥಗಳು ಸ್ಮಾರ್ತನೆಂದಲೂ,
ಕೆಲವು ಗ್ರಂಥಗಳು ಆರಾಧ್ಯ (ವೀರಶೈವ)ನೆಂತಲೂ ಪ್ರತಿಪಾದಿಸುವವು.
ಇವುಗಳಲ್ಲಿ ನಿಜವಾವುದು?
ಸ್ಮಾರ್ತನೆಂದರೆ ಲಿಂಗಧಾರಣ ವಿಷಯದಲ್ಲಿ ತಂದೆ ಮಕ್ಕಳಿಗೆ ವಾದ
ವಿವಾದವು ಉತ್ಪನ್ನವಾಗುತ್ತಿದ್ದಲ್ಲವಷ್ಟೆ? ಆರಾಧ್ಯ (ವೀರಶೈವ)ನೆಂದರೆ
ಇವನ ತಾಯಿಯು ವೀರಶೈವ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಸ್ಥಾವರ
ನಂದಿಶ್ವರ ವ್ರತವನ್ನು ಹೇಗೆ ಮಾಡಿದಳು? (ಕುಬುಸದ, ೧೯೩೨: ೮).

ಈ ಮೇಲಿನ ಪ್ರಶ್ನೆಗಳು ಬಸವಣ್ಣನ ಮೂಲವನ್ನು ಪ್ರಶ್ನಿಸುವ ಮತ್ತು ಸಂದೇಹಿಸುವ ಧೈರ್ಯವನ್ನು ಪ್ರದರ್ಶಿಸಿದರೂ, ಆತನನ್ನು ಸಂಪೂರ್ಣವಾಗಿ ತಿರಸ್ಕರಿಸುವ ಅಥವಾ ಚಾರಿತ್ರಿಕ ಸ್ಮೃತಿ ಪಲ್ಲಟದಿಂದ ಅಳಿಸಿ ಹಾಕುವ ಪ್ರಯತ್ನಗಳಾಗಿರಲಿಲ್ಲ. ಭಾಗಶಃ ಕುಬುಸದಂತವರಿಗೆ ಬಸವಣ್ಣನು ಶೈವ ಬ್ರಾಹ್ಮಣ ಕುಲಕ್ಕೆ ಸೇರಿದವನು ಎಂಬ ಅಚಲವಾದ ನಂಬಿಕೆ ಇತ್ತು. ಹೀಗೆ ಬಸವಣ್ಣನು ಬ್ರಾಹ್ಮಣದಿಂದ ಶೈವ, ಬ್ರಾಹ್ಮಣನಾಗಿ, ಶೈವ ಬ್ರಾಹ್ಮಣದಿಂದ ಲಿಂಗಾಯತನಾಗಿ ಪರಿವರ್ತನೆಯಾಗಿದ್ದು ಯಾವಾಗ ಮತ್ತು ಅದಕ್ಕಿರುವ ಕಾರಣಗಳೇನು? ಬಸವಣ್ಣನು ಶೈವ ಬ್ರಾಹ್ಮಣ ಎಂದು ವಾದಿಸುವದಕ್ಕೂ ಸಹ ಬಹಳ ಮುಖ್ಯವಾದ ಚಾರಿತ್ರಿಕ, ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳಿದ್ದವು. ಮೊದಲು ಈ ಕಾರಣಗಳನ್ನು ಪರೀಕ್ಷಿಸೋಣ. ನಂತರ ೨೦ರ ದಶಕದಲ್ಲಿ ಕುಬುಸದರಂತವರು ಬಸವಣ್ಣನ ಬಗ್ಗೆ ಏಕೆ ಸಂದೇಹಿಗಳಾದರು ಎಂಬುದನ್ನು ಚರ್ಚಿಸಬಹುದು.

ಭಾಗ

ಆತನ ಕುಲದವರೆಲ್ಲರೂ ಮುಖದ ನೋಡಲೊಲ್ಲದೈದಾರೆ’ :ಶೈವ ಬ್ರಾಹ್ಮಣನಾಗಿ ಬಸವಣ್ಣ

೧೮೮೦ರ ಸುಮಾರಿನಲ್ಲಿ ಅನೇಕ ಲಿಂಗಾಯತ ವಿದ್ವಾಂಸರು ಬಸವಣ್ಣನ ‘ಕ್ರಾಂತಿಕಾರಕ’ ವಿಚಾರಗಳನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಬ್ರೌನ್ ಮತ್ತು ಇತರ ಪೌರುತ್ಯ ವಿದ್ವಾಂಸರ ವಾದಗಳನ್ನು ಅವು ಇದ್ದಂತೆ ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಬಸವಣ್ಣನು ಬ್ರಾಹ್ಮಣ-ಮತ್ತು-ಜಾತಿ ವಿರೋಧಿ ಎಳ್ಳಷ್ಟೂ ಸಿದ್ಧರಿರಲಿಲ್ಲ.[8] ಇದರ ಜೊತೆಗೆ ಬಸವಣ್ಣನು ಸಮಾನತೆಯ ಹರಿಕಾರ, ಸಮಾಜ್ಚೋದ್ಧರಕ, ಇತ್ಯಾದಿ ಗ್ರಹಿಕೆಗಳು ಲಿಂಗಾಯತ ಜನಸಾಮಾನ್ಯರಲ್ಲಿ ಅಸ್ಪಷ್ಟವಾಗಿತ್ತು. ಇಷ್ಟಾಗಿಯು ಬಸವಣ್ಣನ ಶಿವನ ಅವತಾರ ಎಂಬುದರಲ್ಲಿ ಅವರಿಗೆ ಸಂಶಯವಿರಲಿಲ್ಲ. ಅವನನ್ನು ವೀರಶೈವ ಮತದ ಉದ್ಧಾರಕ ಎಂದು ನಂಬಿದ್ದರು. ಬಸವಣ್ಣನ ಬಗ್ಗೆ ಯಾರಾದರೂ ತಪ್ಪು ಮಾತಾಡಿದರೆ ಅವರನ್ನು ಖಂಡಿಸದೇ ಬಿಡುತ್ತಿರಲಿಲ್ಲ. ಆದರೆ ಇದು ಬಸವಣ್ಣನ ವಿಚಾರಗಳಾಗಲಿ ಅಥವಾ ಆತನ ಪೌರೋಹಿತ್ಯ-ವಿರೋಧಿ ನಿಲುವುಗಳ ಸಮರ್ಥನೆಯಾಗಿರಲಿಲ್ಲ. ಉದಾಹರಣೆಗೆ ಹಿಂದು ಚರಿತ್ರೆ ದರ್ಪಣದಲ್ಲಿ (೧೮೮೨ರಲ್ಲಿ ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರವಾದದ್ದು) ಬಸವಣ್ಣನನ್ನು ಕಪಟಿಯೆಂದು ಜರಿಯಲಾಯಿತು, ಬಿಜ್ಜಳನ ವಿರುದ್ಧ ಸಂಚು ಹೂಡಿದ ಪಾತಕಿಯೆಂದು ಅವನನ್ನು ಮೂದಲಿಸಲಾಗಿತ್ತು. ಅದರಲ್ಲಿ ಮತ್ತೊಂದು ಕೆಣಕುವ ಅಂಶವೇನೆಂದರೆ ಬಸವಣ್ಣನನ್ನು ಸ್ಮಾರ್ತ ಆರಾಧ್ಯ ಇದಕ್ಕೆ ವಿರುದ್ಧವಾಗಿ ಕರಿಬಸವಶಾಸ್ತ್ರಿಯವರು ಬಸವಣ್ಣನು ಸ್ಮಾರ್ತ ಆರಾಧ್ಯ ಬ್ರಾಹ್ಮಣನಾಗಿರುವದಕ್ಕೆ ಸಾಧ್ಯವೇ ಇಲ್ಲವೆಂದು ವಾದಿಸುತ್ತಾರೆ.

ಇನ್ನೊಂದು ಕಡೆಯಲ್ಲಿ ಬಸವಣ್ಣನು, ಸ್ಮಾರ್ತ ಆರಾಧ್ಯ ಬ್ರಾಹ್ಮಣ
ಜಾತಿಯಲ್ಲಿ ಹುಟ್ಟಿ ಲಿಂಗಾಯತ ಮತವನ್ನು ಸ್ಥಾಪಿಸಿದನೆಂದು
ಹೇಳಿದ್ದಾರೆ. ಸ್ಮಾರ್ತ ಬ್ರಾಹ್ಮಣನು ಜೈನಕ್ಷತ್ರಿಯ ಜಾತಿಯಲ್ಲಿ ವಿವಾಹ
ಸಂಬಂಧವಂ ಮಾಡುವ ಪದ್ಧತಿಯು ಜಗದಾದಿಯಿಂದ ಈವರೆಗು
ಇಲ್ಲ (೧೮೮೪: ೫೩)[9]

ಬಸವಾದಿ ನಿಜತತ್ವದರ್ಪಣದಲ್ಲಿ ಬಸವಣ್ಣನು ತನ್ನ ಹಿತಾಸಕ್ತಿಗಳನ್ನು ಕಾಪಾಡಲು ಬಿಜ್ಜಳ ಜೊತೆಗೆ ತನ್ನ ಅಕ್ಕನ ವಿವಾಹವನ್ನು ಮಾಡಿಸಿದನೆಂದು ದಾಖಲಿಸಿರುವದಕ್ಕೆ ಕರಿಬಸವಶಾಸ್ತ್ರಿಯವರು ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. ಕೃತಿಕಾರರ ಪಕ್ಷಪಾತವನ್ನು ಮತ್ತು ಅಪ್ರಮಾಣಿಕತೆಯನ್ನು ಜರಿಯುತ್ತಾ ಬಸವಣ್ಣನು ಅಲಿಂಗಿ ಬ್ರಾಹ್ಮಣ ಕುಲದಲ್ಲಿ ಜನಿಸಿ ಸಂಗಮನಾಥದಿಂದ ವೀರಶೈವ ದೀಕ್ಷೆಯನ್ನು ಪಡೆದನೆಂದು ಪ್ರತಿ-ವಾದಿಸಿದ್ದಾರೆ. ಮೈಸೂರ್ ಸ್ವಾರ್ ಕರೆಸ್ಪಾಂಡೆನ್ಸ್ (೧೮೮೪)ನಲ್ಲಿ ಈ ಪುಸ್ತಕದ ವಿಮರ್ಶೆ ಮಾಡುತ್ತಾ ಕರಿಬಸವಶಾಸ್ತ್ರಿಯವರು ಬಸವಣ್ಣನ ವಿರುದ್ಧವಿರುವ ವಿವರಗಳನ್ನು ತೀಕ್ಷ್ಣವಾಗಿ ಖಂಡಿಸಿದರು. ಈ ತರಹದ ಅಪಪ್ರಚಾರಕ್ಕೆ ಲಿಂಗಾಯತೇತರ ಕೃತಗಳೇ ಕಾರಣವೆಂದು ತೆಗಳಿದ್ದಾರೆ. ಹಿಂದೂ ಚರಿತ್ರೆ ದರ್ಪಣವು ಜೈನ ಪಂಡಿತರಿಂದ ರಚಿಸಲ್ಪಟ್ಟು, ವುರ್ಥನಿಂದ ಸಂಕಲಿಸಲ್ಪಟ್ಟ ಪ್ರಕ್ಕಾವ್ಯ ಮಾಲಿಕೆ ಎಂಬ ಕೃತಿಯ ಮೇಲೆ ಆಧಾರವಾದುದರಿಂದ, ಅದು ಏಕಪಕ್ಷೀಯವೆಂದು ತಿರಸ್ಕರಿಸಲಾಯಿತು. ಕರಿಬಸವಶಾಸ್ತ್ರಿಯವರು ಇಷ್ಟೊಂದು ಉದ್ವೇಗ ಮತ್ತು ಆತಂಕಗೊಳ್ಳಲು ಇದ್ದ ಕಾರಣವೇನೆಂದರೆ ಬಸವಣ್ಣನು ಬ್ರಾಹ್ಮಣ-ವಿರೋಧಿಯೆಂದು ಸಾಬೀತಾದರೆ ಲಿಂಗಾಯತರು ತಮ್ಮನ್ನು ಬ್ರಾಹ್ಮಣರೆಂದು ಅಥವಾ ಬ್ರಾಹ್ಮಣರಂತೆ ತಾವೂ ಸಹ ಶ್ರೇಷ್ಠರು ಎಂದು ಸಾಧಿಸಲು ಸಾಧ್ಯವಿಲ್ಲವೆಂದು ಬ್ರಾಹ್ಮಣರು ವಾದಿಸಬಹುದಾದ ಸಾಧ್ಯತೆ.[10] ಬಸವಣ್ಣನು ಕೆಳ ವರ್ಗದವರ ಉದ್ಧಾರಕನೆಂಬುದು ಲಿಂಗಾಯತರ ಬ್ರಾಹ್ಮಣತ್ವದ ಸಮರ್ಥನೆಗೆ ವ್ಯತಿರಿಕ್ತವಾಗಿತ್ತು. ಆದ್ದರಿಂದ ಬಸವಣ್ಣನ ಹಿರಿಮೆಯನ್ನು ಸ್ವೀಕರಿಸಿದರೂ, ಅವನು ಬ್ರಾಹ್ಮಣ ಅಥವಾ ಬ್ರಾಹ್ಮಣ ವಿರೋಧಿ ಎಂದು ಒಪ್ಪಿಕೊಳ್ಳಲು ಕರಿಬಸವಶಾಸ್ತ್ರಿಯಂತರಿಗೆ ಕಷ್ಟವಾಯಿತು. ಬಸವಣ್ಣನ ‘ಕ್ರಾಂತಿಕಾರಕ’ ವಿಚಾರಗಳನ್ನು ಬದಿಗಿರಿಸಿ ಲಿಂಗಾಯತರ ಬ್ರಾಹ್ಮಣದ ಶ್ರೇಷ್ಠತೆಯನ್ನು ಪ್ರದರ್ಶಿಸುವ ಹೊಣೆಯು ಈಗ ಅವರ ಮೇಲೆ ಇತ್ತು. ಹೀಗಾಗಿ ಬಸವಣ್ಣನನ್ನು ಸ್ಮಾರ್ತ ಬ್ರಾಹ್ಮಣನನ್ನಾಗಿ ಒಪ್ಪಿಕೊಳ್ಳದೆ, ಅದು ಶೈವ, ಅಪ್ರಾಕೃತ ಬ್ರಾಹ್ಮಣರೆಂದು ಪದೇ, ಪದೇ ವಾದಿಸುತ್ತಿದ್ದರು.[11] ಇದಕ್ಕೆ ಪೂರಕವಾಗಿ ೧೯೦೧ರ ಮೈಸೂರ್ ಸೀಮೆಯ ಸೆನ್ಸಸ್ ರಿಪೋರ್ಟ ಸಹ ಬಸವಣ್ಣನು “ಬೆಲ್ಗಾಮಿಗೆ ಸೇರಿದ ಬಗವಾಡಿಯ ನಿವಾಸಿಯಾದ ಒಬ್ಬ ಆರಾಧ್ಯ ಬ್ರಾಹ್ಮಣನ ಮಗನು” ಎಂದು ದಾಖಲಿಸಿತು.[12] ಕರಿಬಸವಶಾಸ್ತ್ರಿಯವರ ವಾದಗಳನ್ನು ಆಗಿನ ಮತ್ತೊಬ್ಬ ಲಿಂಗಾಯತ ನಾಯಕರಾದ ಯಜಮಾನ್ ವೀರಸಂಗಪ್ಪನವರು[13] ಪುಷ್ಟೀಕರಿಸಿದ ಉದಾಹರಣೆಗಳು ಸಾಕಷ್ಟಿವೆ.

ಲಿಂಗಾಯತರ ಧಾರ್ಮಿಕ ಮತ್ತು ಸಾಮಾಜಿಕ ಸನ್ನಿವೇಶಗಳು ಮುಂದಿನ ದಶಕಗಳಲ್ಲಿ ಮತ್ತಷ್ಟು ಬದಲಾವಣೆಗೊಳಗಾದವು. ೨೦ನೇ ಶತಮಾನದ ಎರಡನೆ ದಶಕದಲ್ಲಿ ಮೊದಲ್ಗೊಂಡು ಉಂಟಾದ ಸಾಮಾಜಿಕ ಅರಿವು, ಸಮಾಜ ಸುಧಾರಣೆ ಮತ್ತು ಹೊಸ ಧಾರ್ಮೀಕ ವಿಚಾರಗಳು ಪಂಚಾಚಾರ್ಯ ಮತ್ತು ಕೆಲವು ವಿರಕ್ತ ನಂಬಿಕೆದಾರರಿಗೆ ಗಾಬರಿ ಮತ್ತು ಆತಂಕವನ್ನುಂಟು ಮಾಡಿದವು. ಇದೇ ಸಮಯದಲ್ಲಿ ಕರಿಬಸವಶಾಸ್ತ್ರಿಯಂಥವರ ವಿಚಾರಗಳು ಹೊಸ ಪೀಳಿಗೆಯ ಲಿಂಗಾಯತ ವಿದ್ವಾಂಸರಿಗೆ ಸಂಪ್ರದಾಯಿಕ/ಹಿಮ್ಮುಖವಾಗಿ ಗೋಚರಿಸಿದವು. ತಲೆತಲಾಂತರದಿಂದ ನಡೆದುಕೊಂಡು ಬಂದ ಆಚಾರ-ವಿಚಾರಗಳಿಗೆ ವ್ಯತಿರಿಕ್ತವಾಗಿ ಹೊಸ ಪೀಳಿಗೆಯ ಲಿಂಗಾಯತರಿಂದ ಮತ್ತು ಶಿವ ಶರಣರ ಬಗ್ಗೆ ಉಂಟಾದ ನವೀನ ವಿಚಾರದ ಅಲೆ ಸಂಪ್ರದಾಯವಾದಿಗಳಿಗೆ ಸವಾಲನ್ನು ಎಸೆಯಿತು. ಈ ಹೊಸ ಅಲೆಯು ಲಿಂಗಾಯತರ ಹೊಸ ಧಾರ್ಮೀಕ ಮತ್ತು ಸಾಮಾಜಿಕ ಇತಿಹಾಸವನ್ನು ಆರಂಭಿಸಲು ನಾಂದಿಯಾಯಿತು. ಇದನ್ನು ಮತ್ತಷ್ಟು ಪರೀಕ್ಷಿಸೋಣ.

[1] ಈ ವಚನಗಳನ್ನು ಎಮ್.ಎಮ್. ಕಲ್ಬುರ್ಗಿಯವರ ವಚನ ಸಂಪುಟದಿಂದ (೧೯೯೩) ಆರಿಸಲಾಗಿದೆ.

[2] ಬಸವಣ್ಣನನ್ನು ಅನೇಕ ಹೆಸರಿನಿಂದ ಗುರುತಿಸುತ್ತಾರೆ. ಉದಾಹರಣೆಗೆ ಬಸವ, ಬಸವೇಶ, ಬಸವರಸಯ್ಯ, ಬಸವೇಶ್ವರ, ಬಸವಂಣಬಟ್ಟ, ಬಸವರಾಜ, ಇತ್ಯಾದಿ. ಇವುಗಳಲ್ಲಿ ಅನೇಕವು ಬಸವಣ್ಣನ ಬ್ರಾಹ್ಮಣ ಜಾತಿ ಸೂಚಕವಾಗಿ ಹೆಸರುಗಳೆಂದು ಬಿ. ರಾಜಶೇಖರಪ್ಪರವರು ಭಾವಿಸುತ್ತಾರೆ. (೨೦೦೭ : ೬೮-೬೯).

[3] ಲೇಖನದುದ್ದಕ್ಕೂ ನಾನು ಲಿಂಗಾಯತ ಎಂಬ ಪರಿಕಲ್ಪನೆಯನ್ನು ಬಳಸಿದ್ದೇನೆ. ಲಿಂಗಾಯತ ಮತ್ತು ವೀರಶೈವ ಪರಿಕಲ್ಪನೆಗಳ ನಡುವೆ ಇರುವ ಭಿನ್ನಾಭಿಪ್ರಾಯಗಳ ಬಗ್ಗೆ ಅರಿವಿದೆ. ಆದರೆ ಅದರ ಚರ್ಚೆ ಇಲ್ಲಿ ಅಪ್ರಸ್ತುತ.

[4] ವುರ್ಥ್ ಸಹ ಬಸವ ಪುರಾಣದ ಇಂಗ್ಲೀಷ್ ಭಾಷಾಂತರದಲ್ಲಿ ಬಸವಣ್ಣನು ಶೈವ ಬ್ರಾಹ್ಮಣ ಜಾತಿಗೆ ಸೇರಿದ ತಂದೆ-ತಾಯಿಗಳು ಮಗನೆಂದು ಚಿತ್ರಿಸಿದ್ದಾನೆ (೧೮೬೬ : ೬೭).

[5] ತಮ್ಮ ಲೇಖನದಲ್ಲಿ (Section XIII,The Kalachuris, ೧೮೯೫, (೧೯೮೫): ೯೩-೯೭) ಭಂಡಾರಕರರು ಬಸವಣ್ಣನನ್ನು ಸ್ಪಷ್ಟವಾಗಿ ಬ್ರಾಹ್ಮಣ ಮೂಲಕ್ಕೆ ಸೇರಿಸುತ್ತಾರೆ. ಅವರ ಈ  ಅಭಿಪ್ರಾಯಕ್ಕೆ ಇದ್ದ ಮೂಲ ಆಧಾರ ಕನ್ನಡದ ಬಸವ ಪುರಾಣ.

[6] ಆಗಿನ ಲಿಂಗಾಯತ ವಿದ್ವಾಂಸರು ಬಸವಣ್ಣನನ್ನು ಆರಾಧ್ಯ ಬ್ರಾಹ್ಮಣನೆಂದೂ ಅಥವಾ ಸ್ಮಾರ್ತ ಬ್ರಾಹ್ಮಣನೆಂದೊ ಇಲ್ಲದಿದ್ದರೆ ಶೈವ ಬ್ರಾಹ್ಮಣನೆಂದು ವಿವಿಧ ರೀತಿಯಲ್ಲಿ ಭಾವಿಸಿರುವದಕ್ಕೆ ಪಾಶ್ಚಾತ್ಯರು ಮತ್ತು ಬ್ರಾಹ್ಮಣ ವಿದ್ವಾಂಸರಿಗೆಲ್ಲ ತಮ್ಮದೆ ಆದ ಭಿನ್ನ ಭಿನ್ನ ಐತಿಹಾಸಿಕ ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳಿದ್ದವು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ವಿಷಯಕ್ಕಾಗಿ ನಾನು ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ ಸಾದರಪಡಿಸಿದ ಪಿ.ಎಚ್.ಡಿ. ಮಹಾಪ್ರಬಂಧವನ್ನು (೨೦೦೫) ನೋಡಿ.

[7] ಈ ಕೃತಿಯು ಮೊಟ್ಟಮೊದಲಿಗೆ ೧೯೩೧ರಲ್ಲಿ ಪ್ರಕಟವಾಯಿತು. ಪ್ರಸ್ತುತ ಲೇಖನಕ್ಕೆ ನಾನು ಅದರ ನಾಲ್ಕನೇ ಆವೃತ್ತಿಯನ್ನು (೧೯೩೨) ಆದರಿಸಿದ್ದೇನೆ.

[8] ಬ್ರೌನನು ಬಸವನ ಕ್ರಾಂತಿಕಾರಕ ವಿಚಾರಗಳನ್ನು ಪಶ್ಚಿಮದ ಪ್ರೊಟೆಸ್ಟಂಟ್ ಚಳುವಳಿಗೆ ಹೋಲಿಸಿದ ಪ್ರಥಮ ವಿದ್ವಾಂಸ.

[9] ಬಸವಣ್ಣನು ತನ್ನ ತಂಗಿಯನ್ನು ಬಿಜ್ಜಳನಿಗೆ ಕೊಟ್ಟು ಆತನಿಂದ ಮಂತ್ರಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದನೆಂದು ದರ್ಪಣದಲ್ಲಿ ಬರೆಯಲಾಗಿದೆ.

[10] ೧೯ನೇ ಶತಮಾನದ ಅಂತ್ಯದಲ್ಲಿ ಲಿಂಗಾಯತರು ತಾವು ಬ್ರಾಹ್ಮಣರಷ್ಟೆ ಶ್ರೇಷ್ಟರು ಎಂದು, ತಮ್ಮನ್ನು ವೀರಶೈವ ಬ್ರಾಹ್ಮಣರೆಂದು ಕರೆಯಬೇಕೆಂದು ಮೈಸೂರ್ ಸರ್ಕಾರವನ್ನು ಒತ್ತಾಯಿಸುತ್ತಿದ್ದರು. ಇದಕ್ಕೆ ಪೂರಕವಾಗಿ ಬ್ರಾಹ್ಮಣತ್ವದ ಬಗ್ಗೆ ಲಿಂಗಾಯತರಿಗೂ ಮತ್ತು ಬ್ರಾಹ್ಮಣರಿಗೂ ನಡೆದ “ಧರ್ಮಯುದ್ಧ” (ಚಿದಾನಂದ ಮೂರ್ತಿ, ೨೦೦೦: ೨೦೨)ದ ಬಗ್ಗೆ ೧೮೮೪ರಲ್ಲಿ ಪ್ರಕಟವಾದ ಮೈಸೂರ್ ಸ್ಟಾರ್ ಕರೆಸ್ಪಾಂಡೆನ್ಸ್ ಪುಸ್ತಕದಲ್ಲಿ (ಎರಡು ಸಂಪುಟಗಳು) ಹೇರಳವಾದ ಮಾಹಿತಿಗಳೂ ಸಿಗುತ್ತವೆ. ತಮಗೂ ಮತ್ತು ಬ್ರಾಹ್ಮಣರಿಗೂ ಮೈಸೂರ್ ಸ್ಟಾರ್ ನಲ್ಲಿ ಆದ ವಾದ-ವಿವಾದಗಳು ಮತ್ತು ಸಂವಾದಗಳನ್ನು ವೀರಸಂಗಪ್ಪನವರು ಈ ಪುಸ್ತಕದಲ್ಲಿ ಸಂಕಲಿಸಿ, ಪ್ರಕಟಿಸಿದರು. ನನಗೆ ಲಭ್ಯವಿರುವ ಸಂಪುಟಗಳಲ್ಲಿ ಪಿ.ಆರ್. ಕರಿಬಸವಶಾಸ್ತ್ರಿಯವರು ಬ್ರಾಹ್ಮಣ ವಿದ್ವಾಂಸರಿಗೆ ನೀಡಿದ ಪ್ರತ್ಯುತ್ತರಗಳಿವೆ. ಎರಡನೇ ಸಂಪುಟದಲ್ಲಿ ವೀರಸಂಗಪ್ಪನವರು ಬರೆದ ವಾದಗಳಿವೆ ಎಂದು ತಿಳಿದು ಬಂದಿದೆ. ಆದರೆ ಈ ಪುಸ್ತಕವು ನನ್ನ ಬಳಿಯಿಲ್ಲ.

[11] ಇದ್ಕಕ್ಕೆ ಮತ್ತಷ್ಟು ಉದಾಹರಣೆಗಳನ್ನು ಸಿರಸಿ ಗುರುಸಿದ್ಧಶಾಸ್ತ್ರಿಯವರಿಂದ ಪ್ರಕಟಿಸಲ್ಟಟ್ಟ ಉಪನ್ಯಾಸ ಸಂಗ್ರಹ (೧೯೨೫) ಎಂಬ ಗ್ರಂಥದಲ್ಲಿ ಪರಿಶೀಲಿಸಬಹುದು.

[12] ಈ ಸೆನ್ಸಸ್ ರಿಪೋಟನ್ನು ಪ್ರಕಟಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಕರಿಬಸವಶಾಸ್ತ್ರಿ ಮತ್ತು ತುಮಕೂರಿನ ಮಹದೇವಯ್ಯನವರನ್ನು ಸಂಪರ್ಕಿಸಿ ಅವರಿಂದ ಲಿಂಗಾಯತ ಮತದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದರು. ಇದರ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಉಪನ್ಯಾಸ ಸಂಗ್ರಹವನ್ನು ನೋಡಿ. ಕರಿಬಸವಶಾಸ್ತ್ರಿಯವರು ಬಸವಣ್ಣನನ್ನು ಒಮ್ಮೆ ಶೈವ ಬ್ರಾಹ್ಮಣನನ್ನಾಗಿ ಮತ್ತೊಮ್ಮೆ ಆರಾಧ್ಯ ಬ್ರಾಹ್ಮಣನನ್ನಾಗಿ ಭಾವಿಸಿರುವದು ವಿಶೇಷವಾಗಿದೆ. ಇದರ ಬಗ್ಗೆ ಮತ್ತಷ್ಟು ಸಂಶೋಧನೆಯಾಗಬೇಕಾಗಿದೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಜೀರಿಗೆ ಬಸವಲಿಂಗಪ್ಪನವರ ಪರೋಕ್ಷ ಹೇಳಿಕೆಗಳು ಗಮನಾರ್ಹ:

“ಈಗ ತಾನೇ ತಾವು ಹೆಚ್ಚಿನ ಪಂಗಡದವರೆಂದು ಊಹೆ ಮಾಡುವ ಕೆಲ ಜನರು ಲಿಂಗಾಯತರಲ್ಲಿ ಜಾತಿ ಭೇದಗಳನ್ನು ಪ್ರಬೋಧಿಸುವದರಲ್ಲಿಯೂ, ಬಸವೇಶವನನ್ನು ಕುರಿತು ಹೀನ ಶಬ್ದಗಳಿಂದ ಮಾತಾಡುವದರಲ್ಲಿಯೂ, ಲಿಂಗಾಯತರಲ್ಲಿ ವಿಚ್ಛಿದ್ರವನ್ನು ತಂದೊದಗಿಸಿರುತ್ತಾರೆ. ಇದೆಲ್ಲಾ ಲಿಂಗಾಯತರಲ್ಲಿ ಬ್ರಾಹ್ಮಣವನ್ನು ಸಂಪಾದಿಸುವದಕ್ಕಾಗಿ ಉಂಟಾದ ತೊಂದರೆಯಾಗಿರುತ್ತದೆ. ಈ ತೊಂದರೆಯು ಮೇಲೆ ಹೇಳಿದಂತೆ ಮೊದಲಿನ ಜನ ಪರಿಗಣಿತಿಯ ಲಾಗಾಯಿತು ಉಂಟಾದುದಾಗಿರುತ್ತದೆ” (೧೯೩೩ : ೧೧೬) ಬಹುಶಃ ಆರಾಧ್ಯ ಕುಲಕ್ಕೆ ಸೇರಿದ ಮೈಸೂರಿನ ವಿದ್ವಾಂಸರು (ಜಂಗಮರೂ ಹೌದು) ತಮ್ಮ ಕುಲವನ್ನೇ ಬಸವಣ್ಣನ ಮೇಲೆ ಹೇರಿರುವದನ್ನು ಬಸವಲಿಂಗಪ್ಪನವರು ಇಲ್ಲಿ ತೆಗಳಿದ್ದಾರೆ.

[13] ಯಜಮಾನ್ ವೀರಸಂಗಪ್ಪನವರು ಮೈಸೂರ್ ಸ್ಟಾರ್ ಪತ್ರಿಕೆಯ ಸಂಪಾದಕರಾಗಿದ್ದರು.