ಗುಡ್ಡದ ಮಹಿಮಾ ಬಾಳ ಏ ಯಕ್ಕಾ ನೀ
ಯಲ್ಲಮ್ಮನ ಗುಡ್ಡದ ಮಹಿಮಾ ಕೇಳು         ಪಲ್ಲ

ಸವದತ್ತಿ ದಾಟಿ ಹೋದರ ಸಾಕು
ಬರತದ ನೋಡು ಜೋಗುಳದ ಭಾಂವಿಕ
ಜೋಗುಳದ ಭಾಂವ್ಯಾಗ ಜಳಕವ ಮಾಡಿ
ಮೊದಲಾಗಬೇಕ ನೋಡ ಮಡಿಹುಡಿ         ೧

ಗುಡ್ಡದ ದಾರಿ ಹಿಡಿದು ಮುಂದ ಸಾಗಬೇಕ
ಎಣಿಗೊಂಡದಾಗ ಮುಳಗಬೇಕ
ಮನಸು ಕೂಡಾ ಶುದ್ಧಾಗಿರಬೇಕಿ
ಭಕ್ತಿ ಭಾವದಿಂದ ತುಂಬಿರಬೇಕ      ೨

ದೇವಿ ಗುಡಿಗೆ ಬಂದು ಮಡಿಹುಡಿಯಾಗಿ
ಭಕುತಿ ಭಾವದಿಂದ ಕೈ ಮುಗಿಯಬೇಕ
ಕಾಯಿ ಹಣ್ಣು ಹರಕೆ ಮುಟ್ಟಿಸಿ
ಉಧೋ ಉಧೋ ದೇವಿ ಅನಬೇಕ           ೩

ದೇವಿ ದರ್ಶನ ಪಡೆದ ಮ್ಯಾಲ
ಜಮದಗ್ನಿ ಗುಡಿಗೆ ಬರಬೇಕ
ಆ ಮ್ಯಾಲ ಪರಶುರಾಮಗ ಬರಬೇಕ
ಅಲ್ಲೀನು ಕಾಯಿ ಕೊಡಬೇಕ         ೪

ವರ್ಷವಿಡೀ ಬರತಾರ ಲಕ್ಷ ಲಕ್ಷ ಜನ
ಪಡಿಯಲಾಕ ದೇವಿಯ ದರ್ಶನ
ನಡಕೊಂಡಂಗ ಪಡಕೋತಾರವ್ವ
ಶಕ್ತಿ ದೇವಿ ಅವತಾರ ನೋಡ ತಂಗೆವ್ವ        ೫