ಮಂಜಟಿಗದ್ದೆಗೆ ಸಂಬಂಧ ಮಂಜಟಿಕೋಣದ್ದು
(ಗದ್ದೆಗಳಲ್ಲಿ ನಡುವಣಗದ್ದೆ ದೊಡ್ಡದು
ದೇವರ ಕಳೆ ಹೊತ್ತಿರುತ್ತದೆ. ಅಂತಾಂಗಿ
ಈ ಗದ್ದೆಗೆ ಮಂಜಟಿ ಗದ್ದೆ ಎಂಬ ಹೆಸರಂತೆ)
ಓ ಮಂಜಟೀ ಕೋಣವೇ… ಉಯೀ (ಪಲ್ಲವಿ)
ಈಗೀ ಮನೆ ಕೋಣವು
ಮಾಯದಿ ಬಂದಿಹ ಮಂಜಟಿ ಕೋಣ
ಎಲ್ಲಕು ನೋಡಲು ಕಾತರ ಕಾಣಾ
ನೋಡೇ ನೋಡಲು ಜನಗಳ ಕೂಟ
ಕೋಣನ ಒಯ್ದು ಮೈಯನು ತೊಳೆ ಆಳುಮಗು
ಕೋಣನ ಹಿಡಿಯಲು ಇಬ್ಬದಿ ಜನಗಳೆ ಬೇಕೇಬೇಕು
ಕೋಣನ ಹಿಡಿಯಲು ಮುಖ್ಯನು ತಾನು ಇರಲು ಬೇಕು
ಕೋಣನ ಕಟ್ಟಲು ಎಂತಹ ಹಗ್ಗವು ಇರಬೇಕು ?
ಕೋಣನ ಕಟ್ಟಲು ಹುರಿ ಹಗ್ಗವು ಉದ್ದನ ಬೇಕು
ಹುರಿ ಹಗ್ಗದಿ ಕೋಣನ ಹಿಡಿದಿಹೆ ಈಗಲು ನಾನು
ಅದೆ ಚೂಡಿಯ ಹಗ್ಗದಿ ಕೋಣನ ಕಟ್ಟಿ ಹೆ ನಾನು
ಕೋಣಕೆ ಮೇಯಲು ಹುಲ್ಲನು ಹಾಕು ಆಳು ಮಗು
ಅನ್ನ ನೀರು ತೌಡನು ಸೇರಿಸಿ ಕೊಡುವಳು ಮನೆ ಹೆಣ್ಣು
ಅನ್ನ ನೀರು ತೌಡನು ಕೋಣಗೆ ಉಣಿಸು ಆಳು ಮಗು
ಓ ಮಂಜಟಿಕೋಣವೇ ನೀ ಈ ಮನೆ ಕೋಣ
ಕೋಣನ ಮೈಯನು ಮೀಯಿಸಿ ಬಾರೆಲೆ ಅಳುಮಗು
ಕೋಣನ ತೊಳೆದಿರೆ ಎಣ್ಣೆಯ ಹಚ್ಚಿಲೆ ಆಳುಮಗು
ಓ ಮಂಜಟಿ ಕೋಣವೆ ಈ ಮನೆ ಕೋಣ
ಸಂಪಾಜೆಪುತ್ತೊರೊಳು ಕೋಣನು ಈಗ ಹೋಗಲಿ ಬೇಕು
ನಾನು ನೀನು ಕೋಣನ ಕೂಡಿ ಸಾಗುವ ಆಳುಮಗು
ಪುತ್ತೊರೊಳು ಉಂಟು ದೊಡ್ಡದು ಗದ್ದೆ ದೇವರ ಗದ್ದೆ
ಪುತ್ತೊರೊಳು ಉಂಟು ದೊಡ್ಡದು ಗದ್ದೆ ದೇವರ ಗದ್ದೆ
ದೇವರ ಗದ್ದೆಯ ಓಡಲು ಈ ಕೋಣನ ಕಟ್ಟುವ ನಾವು
ದೇವರ ಗದ್ದೆಯ ಓಡಲು ಇರುವುದು ನಮ್ಮೀಕೋಣವು
ಮೊದಲಿಗೆ ಮನೆ ಮಲ್ಲೂರಿಗೆ ಕೋಣವು ನೆಡೆಯಲಿಬೇಕು
ಮನೆಮಲ್ಲೂರಲಿ ನಮ್ಮೀ ಕೋಣವು ಗೆಲ್ಲಲಿ ಬೇಕು
ನಮ್ಮಯ ಕೋಣಕೆ ಜಯದ ನಂಬರು ಉಂಟೇ ಉಂಟು
ಕರ್ರನ ಕೋಣಕು ನಂಬರು ಉಂಟದು ಓಟದಿ ಸೆಣಸಲಿ
ನೂರನೆ ನಂಬರು ಬಿಳಿಯ ಕೋಣವು ಕೂಡ ಇಹುದು
ಮಾಯದಿ ಬಂದಿಹ ಮಂಜಟಿ ಕೋಣ
ಸಂಪಾಜೆ ಪುತ್ತೂರೊಳು ಗೆಲ್ಲಲಿ ಬೇಕು ನಮ್ಮೀ ಕೋಣ
ಸಂಪಾಜೆ ಪುತ್ತೊರೊಳು ಗೆಲ್ಲಲಿಬೇಕು ನಮ್ಮೀ ಕೋಣ
ಕೋಣನ ಕಾಲಿಗೆ ಚಿನ್ನದ ಗೆಜ್ಜೆ ಕಟ್ಟಿ ಹೆ ನಾನು
ಕೋಣನ ಕಾಲಿಗೆ ಚಿನ್ನದ ಕಟ್ಟನು ಇಟ್ಟಿಹೆನಾನು
ಕೋಣನ ಮೈಯಿಗೆ ಕಂಪಿನ ಬಟ್ಟೆ ಸಿಂಗಾರವಿರೆ
ಹಣೆಯೊಳು ಚಂದದ ಕೆಂಪಿನ ಬೊಟ್ಟನು ಹಚ್ಚಿರುವೆ
ನಮ್ಮಯ ಕೋಣವು ಸೆಣಸಲಿ ಗೆಲ್ಲುತ ಬರಬೇಕು
ಕೋಣಗೆ ಹುರುಳಿಯ ತಿನ್ನಲು ಅಷ್ಟು ಕೊಡಬೇಕು
ಹುರುಳಿಯ ತಿಂದಿರೆ ಗಂಜಿ ಅನ್ನವ ಇಡಲಿ ಬೇಕು
ಓ ಮಂಜಟಿ ಕೋಣ ಈ ಮನೆ ಕೋಣ
ತಂಬಲ ಮೆಲ್ಲಲು ತೆಗೆದಿಡು ಹೆಣ್ಣೆ ಮನೆಹೆಣ್ಣೆ
ಬಾಯೊಳು ಎಲೆ ಅಡಿಕೆಯ ಮೆಲ್ಲುವೆ ನಾ ಹೆಣ್ಣೆ
ಓ ಮಂಜಟಿ ಕೋಣ ಮನೆ ಕೋಣ
ನನ್ನಯ ಮೆಚ್ಚಿನ ಕೋಣವ ಒಯ್ಯತ ಹೋಗುವ ನಾವು
ಮೆಚ್ಚಿನ ಕೋಣವ ಒಯ್ಯಲು ಬೇಕು ಆಳು ಮಗು
ಹಿಡಿದೊಯ್ಯಲು ಆ ಬದಿ ಈ ಬದಿ ಜನ ಇರಬೇಕು
ಮಚ್ಚಿನ ಕೋಣನ ಒಯ್ಯಲು ಬೇಕು ಆಳುಮಗು
ನೇಗಿಲು ನೊಗವನು ತರದಿರು ಹೆಣ್ಣೆ ಅಲ್ಲಿಡು ಹೆಣ್ಣೆ
ಓಡುವ ಕೋಣನ ಉಳುಮೆ ಹೊಡಲು ಬಾರದು ಬಾಲೆ
ಓ ಮಂಜಟೀ ಕೋಣ ಈ ಮನೆ ಕೋಣ