ಓಹೋ ವಯ್ಯ ನಾಟಿಕಾರನೆ
ಹೊನ್ನ ಮಿಥುನ ಮಾಸದಲಿ ಹೂಮಳೆಯ ಹೊಡೆಯೆ
ಗುಟ್ಟೆನೇಗಿಲೊಳು ದೊಡ್ಡ ಗದ್ದೆಗೆ ಉದ್ದ ಉಳುಮೆ
ನೀರುಂಡ ಒಣಗಿ ಗಡ್ಡೆ ಕಟ್ಟಿದ ನೆಲನ
ಕುಂಟೆಯೊಡೆದು ಸಾಲಿಟ್ಟು ಸಮಮಾಡೆ
ಮತ್ತೆ ಗದ್ದೆ ಹದನಾಯ್ತು ಒಟ್ಟಲಿಗೆ.
ಒಟ್ಟಲಲಿ ಬಿತ್ತಿ ಬೆಳೆದ ಪುಡಿಪೈರಿಗೆ
ಆಕೈಕೆಯನಿಟ್ಟು ತಂದರು ಹೆಣ್ಣುಗಳು
ಎಂಟಾನೆಂಟು ದಿನ ಸಸಿಯ ಒಟ್ಟಲಿನಿಂದ
ಮೃದುಕೈಯ ಚಾಚಿ ಸೆಳೆದುಕೊಂಡರು ಸಸಿಗಳ
ಹೆಣ್ಣುಗಳು ಕೊಟ್ಟ ಪುಡಿ ಸಸಿಯ ನೆಡಲು
ದೊಡ್ಡಗದ್ದೆಗೆ ದೊಡ್ಡ ಹುರುಪಲಿ ಇರಲು
ನಾಟಿ ಮೊದಲಿಡುವ ಮುಹೂರ್ತಕೆ
ಹಲಸು ಹಣ್ಣು-ಬೀಜಗಳಿಟ್ಟು ತೆಂಗು ಒಡೆಯೆ
ನಾಟಿ ನೆಡಲು ಮುಹೂರ್ತದಿ ಮುಂದಾದೆವು
ನಾಟಿ ನೆಡಲು ಮುಹೂರ್ತದಿ ಮುಂದಾದೆವು
ಸೋದರತ್ತೆಯೆ ಮಾವನನ್ನು ಮೆಲ್ಲ ನಲುಗಿಸಿ ಎಬ್ಬಿಸು ಸಮಯವಾಯಿತು
ಹಂಡೆಕೊಳಗದಿ ಸಾರು ಚಾಪೆಯ ಗಲದಿ ಅನ್ನ
ಹನ್ನೆರಡು ಆಳುಗಳ ಎತ್ತಿ ಕೊಂಡಿಹರು
ದೊಡ್ಡ ಗದ್ದೆಯ ನಾಟಿ ಕಾರರಿಗಿಡಲು
ಅವರೆ ಕಾಳಿನ ಸಾರು ಹಂಡೆಯೊಳಿಹುದು
ಕೆಂಪಕ್ಕಿ ಅನ್ನ ರುಚಿ ಕೆಸವೆದಂಟಿನ ಪಲ್ಯಕೆ
ಓ ನಾಟಿಕಾರರೆ ದೊಡ್ಡ ಗದ್ದೆಯ ನಾಟಿ ಇದು
ಉಂಡು ತಿನ್ನುತ ವೀಳ್ಯೆ ಮೆಲ್ಲುತ
ದೊಡ್ಡ ಗದ್ದೆಯ ನಾಟಿ ಮುಗಿಸಲಿ ಹಾಡಿರೆಲ್ಲರು ಒಯ್ಯವ