ಬೆಳ್ಳಿ ತಕ್ಕಡಿ ಮಾಡಿ ಬಂಗಾರ ಪರಡಿ ಮಾಡಿ
ತೂಗ್ತಾನ ಮಾಲಗಾರ ನಾಗಶೆಟ್ಟಿ || ಪಲ್ಲ

ಅವನ ಭಾವ ಭಕ್ತಿ ನೋಡಲಾಕ | ಮಾಲಗಾರ ನಾಗಶೆಟ್ಟಿ
ದೇವಿ ಯೇಳುಕೊಳ್ಳ ಬಿಟ್ಟಾಳ | ಮಾಲಗಾರ ನಾಗಶೆಟ್ಟಿ
ಶೆಟ್ಟಿ ಹಂತೇಕ ಬಂದಿದಾಳ | ಮಾಲಗಾರ ನಾಗಶೆಟ್ಟಿ
ಒಂದು ಉಳ್ಳಾಗಡ್ಡಿ ಬೇಡುವಾಗ | ಮಾಲಗಾರ ನಾಗಶೆಟ್ಟಿ
ನಿನ್ನ ಬಾಯಿಮ್ಯಾಲೆ ಹೊಡದೇನಂದ | ಮಾಲಗಾರ ನಾಗಶೆಟ್ಟಿ
ಒಂದು ಬೆಳ್ಳುಳ್ಳಿ ಬೇಡುವಾಗ | ಮಾಲಗಾರ ನಾಗಶೆಟ್ಟಿ
ನಿನ್ನ ಮುಸುಡಿಮ್ಯಾಲೆ ಹೊಡ್ದೆನಂದ  ಮಾಲಗಾರ ನಾಗಶೆಟ್ಟಿ
ನೀನು ಜೋಳ ನೀಡೋ ನನ್ನ ಶೆಟ್ಟಿ  | ಮಾಲಗಾರ ನಾಗಶೆಟ್ಟಿ
ಇನ್ನ ಬೋಣಗಿ ಆಗಿಲ್ಲ ಹೋಗ  | ಮಾಲಗಾರ ನಾಗಶೆಟ್ಟಿ
ದೇವಿ ತಳಗಾದ್ರ ಕೆಡಹಿದಾನ  | ಮಾಲಗಾರ ನಾಗಶೆಟ್ಟಿ
ಕೆಡವಿ ಬಾಯಿ ಬಾಯಿ ಗುದ್ದುತಾನ | ಮಾಲಗಾರ ನಾಗಶೆಟ್ಟಿ
ದೇವಿ ಅಕ್ರಾಳ ಇಕ್ರಾಳ ರೂಪತಾಳಿ | ಮಾಲಗಾರ ನಾಗಶೆಟ್ಟಿ
ದೇವಿ ಬಿರದಿನ ಜಡೆಯ ಬಿಟ್ಟು | ಮಾಲಗಾರ ನಾಗಶೆಟ್ಟಿ
ಭಂಡಾರ ಹಣೆಯ ಮ್ಯಾಲೆ ಧರಿಸಿ | ಮಾಲಗಾರ ನಾಗಶೆಟ್ಟಿ
ಶೆಟ್ಟಿ ಮನೆಗಾದ್ರು ಬಂದಾಳ | ಮಾಲಗಾರ ನಾಗಶೆಟ್ಟಿ
ಅವನ ಎಂಟೆತ್ತ ಇದಿರಿಗೋದ್ಲು | ಮಾಲಗಾರ ನಾಗಶೆಟ್ಟಿ
ದೇವಿ ಕಣ್ತುಂಬ ನೋಡಿದಾಳ | ಮಾಲಗಾರ ನಾಗಶೆಟ್ಟಿ
ಅವನ ಹಿಂಡುವ ಎಂಟೆಮ್ಮಿ | ಮಾಲಗಾರ ನಾಗಶೆಟ್ಟಿ
ದೇವಿ ಕಣ್ತುಂಬ ನೋಡಿದಾಳ | ಮಾಲಗಾರ ನಾಗಶೆಟ್ಟಿ
ಅವನ ಹೊಲಕಾದ್ರು ಹೋಗ್ಯಾಳ | ಮಾಲಗಾರ ನಾಗಶೆಟ್ಟಿ
ಅವನ ಬೆಳದಿದ್ದ ಹೊಲ ನೋಡಿ | ಮಾಲಗಾರ ನಾಗಶೆಟ್ಟಿ
ಅವನ ಸೌತೆಕಾಯಿ ಹೊಲ ನೋಡಿ | ಮಾಲಗಾರ ನಾಗಶೆಟ್ಟಿ
ದೇವಿ ಮಾಯದ ಭಂಡಾರ ತಗೊಂಡು | ಮಾಲಗಾರ ನಾಗಶೆಟ್ಟಿ
ದೇವಿ ಉಧೋ ಅಂತ ತೂರ‍್ಯಾಳ | ಮಾಲಗಾರ ನಾಗಶೆಟ್ಟಿ
ಅವನ ಎಂಟೆತ್ತು ಸತ್ತಾವ | ಮಾಲಗಾರ ನಾಗಶೆಟ್ಟಿ
ಅವನ ಎಂಟೆಮ್ಮಿ ಸತ್ತಾವ | ಮಾಲಗಾರ ನಾಗಶೆಟ್ಟಿ
ಅವನ ಬೆಳದಿದ್ದ ಹೊಲದಾಗ | ಮಾಲಗಾರ ನಾಗಶೆಟ್ಟಿ
ಅವನ ಬೆಳೆಯಲ್ಲ ನಾಶವಾಗಿ | ಮಾಲಗಾರ ನಾಗಶೆಟ್ಟಿ
ಅವನ ಕರೆಕರ್ಕಿ ಹೊಲ ನಿಂತೈತಿ | ಮಾಲಗಾರ ನಾಗಶೆಟ್ಟಿ
ಶೆಟ್ಟಿ ಯಾವಾರ ಆಗಲಿಲ್ಲ | ಮಾಲಗಾರ ನಾಗಶೆಟ್ಟಿ
ಶೆಟ್ಟಿ ನಿನಗೆಲ್ಲಿ ಬಿಡತೀನಿ ನಾನು | ಮಾಲಗಾರ ನಾಗಶೆಟ್ಟಿ
ದೇವಿ ಮಾಯದ ಭಂಡಾರ ತಗೊಂಡು | ಮಾಲಗಾರ ನಾಗಶೆಟ್ಟಿ
ದೇವಿ ಉಧೋ ಅಂತ ತೂರಿದಾಳ | ಮಾಲಗಾರ ನಾಗಶೆಟ್ಟಿ
ಅವ್ನ ತುಟಿನೋಡ ತುಂಬ್ರಿ ಹುಣ್ಣ | ತಂದನಾನ ತಂದಲ್ಲಿನಾನ
ಅವನ ಬಾಯಿಗಾಕ್ಯಾಳ ಬಗದಾಳೋ ಹುಣ್ಣ | ತಂದನಾನ ತಂದಲ್ಲಿನಾನ
ಅವನ ತಲಿಯ ನೋಡ ಡವಗಿ ಹುಣ್ಣ | ತಂದನಾನ ತಂದಲ್ಲಿನಾನ
ಅವನ ಬೆನ್ನ ನೋಡ ಬ್ಯಾತಾಳ ಹುಣ್ಣ | ತಂದನಾನ ತಂದಲ್ಲಿನಾನ
ಅವನ ಹತ್ತೂ ಬೆಳ್ಳಿಗೆ ಗಿರಣಿ ಹುಣ್ಣ | ತಂದನಾನ ತಂದಲ್ಲಿನಾನ
ಶೆಟ್ಟಿಗೆ ಕೀವು ರಕ್ತ ಬಸಿಯಾಕ್ಹತ್ತೈತಿ | ತಂದನಾನ ತಂದಲ್ಲಿನಾನ
ದೇವಿ ಸಾಕ ಮಾಡ ಜಗದಂಬಾ | ತಂದನಾನ ತಂದಲ್ಲಿನಾನ
ಯವ್ವಾ ಹಿರಿಯ ಗುಡ್ಡ ಹತ್ತತೀನಿ | ತಂದನಾನ ತಂದಲ್ಲಿನಾನ
ಯವ್ವಾ ಸೀರಿ ಕುಬ್ಸ ಉಡಸತೀನಿ | ತಂದನಾನ ತಂದಲ್ಲಿನಾನ
ದೇವಿ ಕಾಲೊಳುಗೆಜ್ಜೆ ಕಟ್ಟುತೀನಿ | ತಂದನಾನ ತಂದಲ್ಲಿನಾನ
ದೇವಿ ಥೈ ಥೈ ಅಂತ ಕುಣಿಯುತೀನಿ | ತಂದನಾನ ತಂದಲ್ಲಿನಾನ
ದೇವಿ ದೀಡ ನಮಸ್ಕಾರ ಹಾಕತೀನಿ | ತಂದನಾನ ತಂದಲ್ಲಿನಾನ
ದೇವಿ ಹೇಳೀದಾಂಗ ಕೇಳುತೀನಿ | ತಂದನಾನ ತಂದಲ್ಲಿನಾನ
ಯವ್ವಾ ಮಾಯ ಮಾಡೋ ಮಾಟಗಾರ್ತಿ | ತಂದನಾನ ತಂದಲ್ಲಿನಾನ

ಬೆಳ್ಳಿ ತಕ್ಕಡಿ ಮಾಡಿ ಬಂಗಾರ ಪರಡಿಮಾಡಿ
ತೂಗ್ತಾನ ಮಾಲಗಾರ ನಾಗಶೆಟ್ಟಿ