ಬಂಗಾರದ ತಕ್ಕಡಿ ಬೆಳ್ಳಿಯ ದಂಡೀಗಿ
ತೂಗ್ತಾನ ಭಂಗಾರ ಮಾಲಗಾರ ನಾಗಶೆಟ್ಟಿ            ಪಲ್ಲ

ಯಕ್ಕಯ್ಯ ಜೋಗ ಬೇಡಲಿಕ್ಕೆ ಹೊಗ್ತಾಳ
ಜೋಗನಾದರ ಬೇಡ್ತಾಳ ಮಾಲಗಾರ ನಾಗಶೆಟ್ಟಿ
ಉಳ್ಳಾಗಡ್ಡಿ ಬೇಡ್ತಾಳ ಬಾಯಿ ಬಾಯಿ ಬಡದೇನಂದ
ಗಜರೀತುಂಬ ಬೇಡ್ತಾಳ ಮೂಗಿನಮ್ಯಾಲ ಬಜ್ಜೇನಂದ
ಚಿಕ್ಕಹಣ್ಣು ಬೇಡ್ತಾಳ ಕಣ್ಣಗುಡ್ಡಿ ಬಜ್ಜೇನಂದ
ಬಾಳೆಹಣ್ಣು ಬೇಡ್ತಾಳ ಬಾಯಿಮ್ಯಾಲ ಬಡದೇನಂದ
ಮೂಲಂಗಿ ಕೊಡಂದ್ರ ಮಣಕೈನಿಂದ ಮುರದೇನಂದ
ಪಪ್ಪಳಕಾಯಿ ಕೊಡಂದ್ರ ತಲಿಡವಗಿ ಒಡದೇನಂದ
ಬದನೀಕಾಯಿ ಕೊಡಂದ್ರ ಮಣಕಾಲಪಟ್ಟಿತಗದೇನಂದ
ಕಬ್ಬಿನ ಗಣಿಕಿ ಬೇಡಿದರ ಕಾಲಕಿತ್ತು ಹಾಕೇನಂದ       ೧

ಎಂಟೆತ್ತು ಕರಿಗಲ್ಗೆ ಬಿಳಿಗಲ್ಲಾಯ್ತು
ಎಂಟೆತ್ತ ಬಾರಕೋಲು ಹಾಂವಾಯ್ತು
ಮಟ್ಟಿಹರ್ದು ಬಾಂವ್ಯಾಗ ಬಿತ್ತು
ಮಿಣಿಹಗ್ಗ ಹೆಬ್ಬಾಂವಾತು
ಕೆರಿಮಾತ್ರ ಒಣಗಿಹೋಯ್ತು
ಬಾಂವಿ ಮಾತ್ರ ಬತ್ತಿ ಹೋಯ್ತು
ಹಣಿಹಣಿ ಬಡಕೊಂಡ
ಗುಡಸಲ್ದಾಗ ಮಲಕೊಂಡ
ಉರಲಹಾಕೊ ಹಗ್ಗವನ್ನು
ಸರಪಣಿ ಮಾಡಿ ಬಿಟ್ಟಾಳಲ್ಲಿ          ೨

ತಲಿಗೆ ನೋಡ ಡವಿಗಿ ಹುಣ್ಣ
ಕಣ್ಣಿಗೆ ನೋಡ ಕಣಿಕೀ ಹುಣ್ಣ
ಮೂಗಿಗೆ ನೋಡ ತೊನಸೀ ಹುಣ್ಣ
ತುಟಿಗೆ ನೊಡ ತೊಂಡೀ ಹುಣ್ಣ
ಬಾಯುಇಗೆ ನೋಡ ಬಗದಾಳ ಹುಣ್ಣ
ಗಲ್ಲಕ ನೋಡ ಜಂತಿನ ಹುಣ್ಣ
ಕುತ್ತಿಗೆ ನೋಡ ಹುತ್ತಿನ ಹುಣ್ಣ
ಹೊಟ್ಟಿಗೆ ನೋಡ ಸಾಣಿಗಿ ಹುಣ್ಣ
ಬೆನ್ನಿಗೆ ನೋಡ ಬ್ಯಾತಾಳ ಹುಣ್ಣ
ನಡಕ ನೋಡ ಸರಪಣಿ ಹುಣ್ಣ
ತೊಡಿಗೆ ನೋಡ ತೊಂಡೀ ಹುಣ್ಣ
ಹತ್ತ ಬಳ್ಳಿಗೆ ಸುತ್ತಿನ ಹುಣ್ಣ
ಅಂಗಾಲಿಗೆ ನಿಂಗದ ಹುಣ್ಣ           ೩

ಯೋಳ್ಹಾಸಿಗಿ ಹಾಸಿದ್ದ
ಯೋಳ್ಹಾಸಿಗಿ ಹೊತ್ತಿದ್ದ
ರಗತ್ಗೀಂವ ಹಾಸಿಗ್ಗುಂಟ
ಬಸೀತಿತ್ತ ಹರೀತಿತ್ತ        ೪

ಮಾಯಕಾರತಿ ಜಗದಂಬೆ
ಜೋಗವಾಗಿ ಹ್ವಾದಳಲ್ಲೆ
ಹಾಸಿಗೀಲಿ ಬಿದ್ದ ಶೆಟ್ಟಿ
ಜೋಗ್ಹೇಳೆಂದು ಕೇಳ್ಯಾನ
ತಿರಿಕೊಂದ್ತಿನ್ನು ಜೋಗವ್ನಾ
ಜೋಗಳಾ ಏನ ಹೇಳಲೆ
ಕಂಟಲೆತ್ತ ಮುಂದ್ಮಂದು
ಎಂಟೆತ್ತ ಬಂಡಿ ಹಿಂದಿಂದ
ಐದಮಂದಿ ಜೋಗೇರಕರಕೊಂಡ
ಕೊಳ್ಳಕ ಬಂದಾನವ್ವಾ ಉಧೋ ಉಧೋ ಎಂದು