ಎಳ್ಳೂ ಕೊಳ್ಳೋಕೆ ಚೆಳ್ಳೂರ್ ಬಣಜಿಗ ಬಂದ
ಎಳ್ಳುಂಟೆ ನಾರಿ ಹಣವೀಗೆ | ಎನ್ನುತ್ತ
ಸುರಿದಾನು ಬಳ್ಳ ಹಣಗೋಳ ||

ಕ್ವಾರಮ್ಮ ಹಣವ ತೂರಮ್ಮ ರಾಶಿಯ
ದ್ವಾರಾವತಿ ಎಂಬೋ ಧರ್ಮರ | ಪಟ್ಟಣಕ್ಹೋಗಿ
ಧಾರಾಣೆ ಕೇಳಿ ಬಂದಿವ್ನಿ ||

ಧಾರಾಣೆ ಕೇಳ್ಬಂದೆ ದಶರಥ್ ಬಳ್ಳಾ ತಂದೆ
ಹಸುರು ಕುಪ್ಪಸದ ಹೊಸಗೋಣಿ | ತಂದಿವ್ನಿ
ಕುಸುಮಾಲೆ ಎಳ್ಳ ಅಳಿಬಾರೆ ||

ಕುಸುಮಾಲೆ ಎನುತಿರುವೆ ಹೊಸ ಮಾತಿನ್ ಬಣಜೀಗ
ಅಸಮಾನಗಾರ ಮೈದರಸು | ಕುಟ್ಹೇಳಿ
ಹಸುರು ಶೂಲಾಕೆ ಬಿಗಿಸೇನು ||

ಬಣಜಿಗ ಬೊಗಸ್ಯಲ್ಲ ಹಣಬೆ ಶತ್ತೆಯಲ್ಲ
ಒಣಗಿದ್ದ ಮರ ನೆರಳಲ್ಲ | ಬಣಜೀಗ
ನಿನಗೆ ನನ್ನ ಸಂಗ ತರವಲ್ಲ ||

ಕಡದಾ ಏರಿ ಮೇಲೆ ಕಡಗದ ಕೈನೋಳೆ
ಹೊಳೆದಾರಿ ಹುಣಿಸೇ ಎಷ್ಟೇ ದೂರ | ಒಕ್ಕಲಗಿತ್ತಿ
ಕುಡಿಯೋಕೆ ನೀರ ಕೊಡು ಬಾರೆ ||

ಜಾಣೊಕ್ಕಲಗಿತ್ತಿ ಕಡು ಚೆಲುವೆ ಎಲೆ ಹೆಣ್ಣೆ
ಕೊಳ್ಳೆ ನನ್‌ಕೈಯ್ಯ ಚಿಗುರೆಲೆ (ಯ) | ಕಳಿಯಡಕೆ
ಮೆದ್ದು ನೀ ನನ್ನ ನೆನೆ ಹೆಣ್ಣೆ ||

ನೆನೆವೇನು ತಂದೆ ತಾಯ ನೆನೆವೇನು ವತಿಯ
ನಿನಗ್ಯಾಕೆ ನೆನೆಯಾಲೋ ದೆವ್ವ ಮುಖ್ಯ | ನಿನಗಿಂತ
ಚೆಲುವ ಮನೆಪುರುಷನ ಕುಟ್ಹೀಳಿ ಹಸರು ಶೂಲಾಕೆ ಬಿಗಿಸೇನು

ಜಾಣೊಕ್ಕಲಗಿತ್ತಿ ಕಡು ಚಲುವೆ ಎಲೆ ಹೆಣ್ಣೆ
ಎಣ್ಣೆ ನೀರೆಂಬೊ ಎಣೆಗಂಟು | ಎಲೆ ಹೆಣ್ಣೆ
ಕಡಗ ತೋಳ್ಮೇಲೆ ವರಗೇನು ||

ಕಡಗ ತೋಳ್ಮೇಲೆ ವರಗಾಕೆ ಕಡಿದಾರು
ಇರಿದಾರು ನಿನ್ನ ಬಣಜೀಗ | ನಿನಗಿಂತ
ಚಲುವ ಮನೆ ಪುರುಷನ ಕುಟ್ಹೇಳೆ ಕಡಿಸೇನು ನಿನ್ನ ಇರಿಸೇನು

ಕಡಿಯೋದಿರಿಯೋದ ಒತ್ತಟ್ಟಿಗಿಡುಬಾಲೆ
ಕಟ್ಟಿದ ಕೆರೆಯ ಒಡಿಬಲ್ಲೆ | ಎಲೆ ಬಾಲೆ
ಸಂಗಾಟರಗಳಿಗೆ ಬರುವೇನು ||

ಜೋಳದ ಹೊಲಾಕೆ ಕೂಳು ಕೊಂಡ್ಹೋಗೋಳೆ
ಜಾಣೊಕ್ಕಲಗಿತ್ತಿ ಕಡು ಚೆಲುವೆ | ಎಲೆ ಹೆಣ್ಣೆ
ನಮಗೊಂದು ತುತ್ತ ಸೀ ತೋರೆ ||

ಒಬ್ಬಾರ್ಗಟ್ಟಿಡಿಗೆ ಇಬ್ಬಾರುಣ್ಣಲು ಬಹುದೆ
ಇಬ್ಬಂದಿಕಾರ ಬಣಜೀಗ | ನನ್ತಾಯ್ತಂದೆ
ಇಬ್ಬರ್ಗೆ ಧಾರೆ ಎರೆದಾರೊ ||

ಎಷ್ಟು ಹೇಳಿದರೂ ಕೇಳೊಲ್ಲೊಕ್ಕಲಗಿತ್ತಿ
ಹಾಸೆ ವಜ್ಜರದ ದಸರೀಯ | ಎಲೆ ಬಾಲೆ
ಸಂಗಾಟರಗಳಿಗೆ ವರಗೇನು

ನೂಲಲ್ಲಿ ನೂತ್ಸ್ಯವ್ರೆ ಬಣ್ಣ ಕಟ್ಸ್ಯವ್ರೆ
ಸಣ್ಮುತ್ತ ಅದಕೆ ಬಿಗಿಸ್ಯಾವ್ರೆ | ಸಣ್ಮುತ್ತ
ಬಗಿದ ದಸರೀಯು ಮಾಸಿದ್ರೆ ನಮ್ಮೋರು ನಮ್ಮ ಕಡಿದಾರು

ದೊಡ್ಡೊಕ್ಕಲಗಿತ್ತಿ ಕಡು ಚೆಲುವೆ ದೊರಕಿದರೆ
ಕಡಲೆವೋಲಾಡಿ ಬೆಳೆಸೇನು | ಕಡಲೆ ಕಾಯ್ಹಂಗೆ
ಕಡೆಮುತ್ತ ಕಟ್ಸೇನು ಕಡಿದಾ ಮಾಳ್ಗೇಲಿ ಇರಿಸೇನು

ವಾಜಾರಿಕ್ಕಿದ ನೇಗಿಲ ಹೊತ್ಕೊಂಡು
ತೆಂಕಲ ಹೊಲವ ಉಳುವಾ (ರು) | ನನ್
ಪುರುಷಾರು ಕಡಲೆವೋಲಾಡಿ ಬೆಳೆವೋರು ||

ಕಡಲೆ ಕಾಯ್ಹಂಗೆ ಕಡೆ ಮುತ್ತ ಕಟ್ಸೇನು

ಕಡಿದ ಮಾಳ್ಗೇಲಿ ಇರಿಸೇನು | ಉದ್ದು ವೋಲಾಡಿ
ಬೆಳೆಸೇನು ಎಲೆ ಹೆಣ್ಣೆ ದೊಡ್ಡ ಮಾಳ್ಗೇಲಿ ಇರಿಸೇನು ||

ಬಡಗಿ ಇಕ್ಕಿದ ನೇಗಿಲ ಹೊತ್ಕೊಂಡು
ಮೂಡಲ ಹೊಲವ ಉಳುವ (ರು) | ನನ್ ಪುರುಷಾರು
ಉದ್ದುವೂಲಾಡಿ ಬೆಳೆವೋರು ||

ಮೂಡಲ್ ತೋಟ್ದಂದ ಮೂರ್ತುಂಡ್ ಬಾಳೆಲೆ ಬಂದೊ
ನಮ್ಮಾವಾನ ಮಗನೀಗೆ ಶನಿವಾರ | ನಮ್ಮಾವಾನ ಮಗನ
ಶನಿವಾರ್ಕೆ ಉಂಡ್ಹಾಳೆ ನಾಯಾಗಿ ನೆಕ್ಕೊ ಬಣಜೀಗ ||

ನಮ್ಮತ್ತೆ ಮಗನೀಗೆ ನೂರ್ಬಿಂದ್ಗೆ ನೀರ್ಕಾಯ್ತು
ನಮ್ಮತ್ತೆ  ಮಗನಿಗೆ ಶನಿವಾರ | ನಮ್ಯತ್ತೆ ಮಗನು
ಶನಿವಾರ್ಕೆ ಮೀದ್ನೀರ್ಲಿ ಕತ್ಯಾಗಿ ಹೊರಳೋ ಬಣಜೀಗ