ಕೂಸಿಗೆ ತಾ ಮೊಲಿ ಕೊಡುವವಳೇ | ಹೇ ರಘುರಾಮ
ಕಂದಗ ತಾ ಮೊಲಿ ಕೊಡುವವಳೇ | ಹೇ ರಘುರಾಮ
ದೇವಿ ಯಲ್ಲಮ್ಮ ಎಲ್ಲಿಗೆ ಬರುತಾಳೆ ಬಂದಾಳೆ | ಹೇ ರಘುರಾಮ
ಯೋಳುಕೊಳ್ಳ ಬಿಟ್ಟಾಳ್ರಯ್ಯ | ಹೇ ರಘುರಾಮ
ಬಂಕಾಪುರಕೆ ಬರುತಾಳ್ರಯ್ಯಾ | ಹೇ ರಘುರಾಮ
ದೇವಿ ತಾನು ಹಾಗಲ ಹಣ್ಣಾಗಿ | ಹೇ ರಘುರಾಮ
ದೇವಿ ಮುಪ್ಪಾನ ಮುದುಕ್ಯಾಗಿ | ಹೇ ರಘುರಾಮ”
ಕೈಯಾಗ ಪಡ್ಲಿಗಿ ಹಿಡಿದಿದ್ಧಾಳ್ರೀ | ಹೇ ರಘುರಾಮ
ದೀವಟ್ಗಿ ಕೋಲ ಹಿಡಿದಿದ್ದಾಳ್ರೀ | ಹೇ ರಘುರಾಮ
ಬಗಲಾಗ ಜೋಳಿಗಿ ಹಾಕಿದ್ದಾಳ್ರೀ | ಹೇ ರಘುರಾಮ
ಬಂಡಾರ ಚೀಲವ ಧರಿಸಿದ್ದಾಳ್ರೀ | ಹೇ ರಘುರಾಮ
ತಾಯಿ ಯೋಳಕೊಳ್ಳ ಬಿಟ್ಟಾಳ್ರೀ | ಹೇ ರಘುರಾಮ
ಕೆಟ್ಟಬ್ಯಾಸಗಿ ಬಿಸಿಲಿನೊಳಗ್ರೀ | ಹೇ ರಘುರಾಮ
ಬಂಕಾಪುರ ಗ್ರಾಮಕ ಬಂದ್ದಾಳ್ರೀ | ಹೇ ರಘುರಾಮ
ಶಿವಾ ಅದ ಗ್ರಾಮದ ಒಳಗ | ಹೇ ರಘುರಾಮ
ಯಪ್ಪಾ ಕೇವಲ ಬಡವರವ್ವ | ಹೇ ರಘುರಾಮ
ಬಡ ಮಾದುರಾಯನ ಮನೆಗೆ ಬಂದು | ಹೇ ರಘುರಾಮ
ಅಪ್ಪಾ ಜೋಗಮ್ಮಗ ನೀಡ ನನ್ನ ಬಡವ | ಹೇ ರಘುರಾಮ
ಯವ್ವಾ ಏನ ನೀಡಲಿ ಹಡೆದವ್ವ | ಹೇ ರಘುರಾಮ
ನಮ್ಮಲ್ಲಿ ಉಣಲಾಕ ಜೋಳಿಲ್ಲ | ಹೇ ರಘುರಾಮ
ಉಟ್ಟೆನಂದರ ಅರಬಿಯ ರಾಶಿಲ್ಲ | ಹೇ ರಘುರಾಮ
ತೊಟ್ಟೆನಂದರ ಅಂಗಿನೂ ಇಲ್ಲ | ಹೇ ರಘುರಾಮ
ನೆಲ ಹಾಸ್ಗಿ ಮಾಡತೀನಿ | ಹೇ ರಘುರಾಮ
ಮುಗಿಲ ಹೊದ್ಕಿ ಮಾಡತೀನಿ | ಹೇ ರಘುರಾಮ
ರೊಟ್ಟಿ ಅಂಬುದು ಹೋದಚೂರ | ಹೇ ರಘುರಾಮ
ಅರಬಿ ಅಂಬುದು ಕಾಶಿ ಕಾಗ್ದ | ಹೇ ರಘುರಾಮ
ಯವ್ವಾ ಇಂಥ ಬಡತನದೊಳಗ | ಹೇ ರಘುರಾಮ
ಯಾಕಬಂದೀ ಬಡವನ ಮನೆಗೆ | ತರುಣದಾಜೀ
ಯವ್ವಾ  ಯೋಳ ಮಕ್ಕಳ ಕಟ್ಕಂಡ | ತರುಣದಾಜೀ
ಯವ್ವಾ ಕೂಲಿ ಕುಂಬಳಿ ಮಾಡತೀನಿ | ತರುಣದಾಜೀ
ಯವ್ವಾಇಂಥ ಬಡತನದೊಳಗ | ತರುಣದಾಜೀ
ಯವ್ವಾ ಏನ ನೀಡಲಿ ಹಡದ ತಾಯಿ | ತರುಣದಾಜೀ
ಮಾತು ಕೇಳೋ ನನ್ನ ಬಡವ | ರಾಮಾಕಿ ದಾಜೀ ಯಾ
ಪಹಲಾ ಪ್ರಥಮ ಬೋಣಿಗಿ ನಿಂದು | ತರುಣ ದಾಜೀ ಯಾ
ನೀನು ಭಿಕ್ಷ ನೀಡುವರೆಗೆ ನಿಂದ್ರಾಕಿ | ತರುಣ ದಾಜೀ ಯಾ
ನಾನು ಮುಂದಕ ಸಾಗುವದಿಲ್ಲ | ತರುಣ ದಾಜೀ ಯಾ
ಅವ್ವಾ ಬಾರಂಬೇ ಜಗದಂಬೇ | ಕೋಲು ಕೋಲಿನ ಕೋಲೆ
ನನ್ನ ಗುಡಿಸಲದೊಳಗೆ ಹೋಗತಾಯಿ | ಕೋಲು ಕೋಲಿನ ಕೋಲೆ
ಮೂರುಕಾಲಿನ ಗುಡಿಸಲ ಒಳಗ | ಕೋಲು ಕೋಲಿನ ಕೋಲೆ
ದೇವಿ ಒಳಗ ಹೋಗಿದಾಳ್ರೀ | ಕೋಲು ಕೋಲಿನ ಕೋಲೆ
ಗುಡಿಸಲೆಲ್ಲ ಹುಡಿಕ್ಯಾಡತಾಳ | ಕೋಲು ಕೋಲಿನ ಕೋಲೆ
ಯಪ್ಪಾ ಅದ ಮನಿಯ ಒಳಗ | ಕೋಲು ಕೋಲಿನ ಕೋಲೆ
ಪ್ರಾಚೀನ ಕಾಲದ ದೇವರ ಗದ್ದಿಗಿ | ಕೋಲು ಕೋಲಿನ ಕೋಲೆ
ಅದ ಗದ್ದಿಗಿಯಿತ್ತೋ ದೈವ | ಕೋಲು ಕೋಲಿನ ಕೋಲೆ
ಅದ ಗದ್ದಿಗಿ ಮುಂದ ಹಾಕ್ಯಾಳ್ರೀ | ಕೋಲು ಕೋಲಿನ ಕೋಲೆ
ಯೋಳ ಹರವಿ ಹುಗಿದಿದ್ದಾಳ್ರೀ | ಕೋಲು ಕೋಲಿನ ಕೋಲೆ
ಸಾಲ ಯೋಳ ಹರವಿ ಹುಗಿದಿದ್ದಾಳ್ರೀ | ಕೋಲು ಕೋಲಿನ ಕೋಲೆ
ಅದ ಯೋಳ ಹರವಿಯ ಒಳಗ | ಕೋಲು ಕೋಲಿನ ಕೋಲೆ
ದೇವಿ ಕೈ ಹಾಕಿ ನೋಡಿದಾಳ್ರೀ | ಕೋಲು ಕೋಲಿನ ಕೋಲೆ
ದೇವಿ ಕೈ ಹಾಕ್ಯಾಳ್ರಯ್ಯಾ | ಕೋಲು ಕೋಲಿನ ಕೋಲೆ
ಜಾಲಿ ಬೀಜಾ ಬಬಲಿ ಬೀಜಾ | ಕೋಲು ಕೋಲಿನ ಕೋಲೆ
ದೇವಿ ಕೈಗೆ ಹತ್ತಿದಾವ | ಕೋಲು ಕೋಲಿನ ಕೋಲೆ
ಆಗ ಮಾಯಕಾರ್ತಿ ಯಲ್ಲಮ್ಮಾ | ಕೋಲು ಕೋಲಿನ ಕೋಲೆ
ಹೌದೇನು ನನ್ನ ಬಡವ | ಕೋಲು ಕೋಲಿನ ಕೋಲೆ
ನಿನ್ನ ಮಾತ ನಿಜ ಹೌದು | ಕೋಲು ಕೋಲಿನ ಕೋಲೆ
ದೇವಿ ಬಟ್ಟ ಕಚ್ಕೊಂಡಾಳ | ಕೋಲು ಕೋಲಿನ ಕೋಲೆ
ಆಗೇನ ಮಾಡಿದ್ದಾಳ್ರೀ | ತರುಣ ದಾಜೀಯಾ
ದೇವಿ ಮಾಯದ ಭಂಡಾರ ತಗೊಂಡು | ತರುಣ ದಾಜೀಯಾ
ಯೋಳ ಹರವಿ ಮ್ಯಾಲ ಚಲ್ಲಿದ್ದಾಳ್ರೀ | ತರುಣ ದಾಜೀಯಾ
ಯೋಳ ಹರವಿ ಬಂಗಾರೇನು | ತರುಣ ದಾಜೀಯಾ
ಮಾಯದ ಬಂಗಾರ ಆಯತ್ರಯ್ಯಾ | ತರುಣ ದಾಜೀಯಾ
ದೇವಿ ಯಾವ ರೂಪ ತಾಳಿದ್ದಾಳ್ರೀ | ತರುಣ ದಾಜೀಯಾ
ದೇವಿ ಮಾಯದ ಹಲ್ಲಿಯಾಗ್ಯಾಳ್ರೀ | ತರುಣ ದಾಜೀಯಾ
ದೇವರ ಗದ್ದಿಗಿ ಮ್ಯಾಲ ಕೂತಿದ್ದಾಳ್ರೀ | ತರುಣ ದಾಜೀಯಾ
ಆವಾಗ ನಮ್ಮ ದೈವ | ಹಾರು ಹಾರ ಎನ್ನ ದೈವೆ
ಅದ ಬಡವ ಕಾಣಿರಯ್ಯಾ | ಹಾರು ಹಾರ ಎನ್ನ ದೈವೆ
ಎಲ್ಲಿ ಹೋದ್ಯವ್ವ ಜೋಗಮ್ಮತಾಯಿ | ಹಾರು ಹಾರ ಎನ್ನ ದೈವೆ
ಮೂರುತಾಸ ಮೂರುಗಳಿಗಿ ಆತ | ಹಾರು ಹಾರ ಎನ್ನ ದೈವೆ
ಏನ ಮಾಡಾಕ ಹತ್ತಿ ಬೇ ಗುಡಿಸಲದೊಳಗ | ಹಾರು ಹಾರ ಎನ್ನ ದೈವೆ
ಬಡವ ಗಡಬಡಸಿ ಹುಡುಕತಾನ್ರೀ | ಹಾರು ಹಾರ ಎನ್ನ ದೈವೆ
ಗದಿಗಿ ಮುಂದ ಬಂದಾನ್ರೀ ದೈವ | ಹಾರು ಹಾರ ಎನ್ನ ದೈವೆ
ಅದ ಹರವಿ ತೆಗೆದು ನೋಡ್ಯಾನ್ರೀ | ಹಾರು ಹಾರ ಎನ್ನ ದೈವೆ
ಅದ ಯೋಳ ಹರವಿಯ ಒಳಗ | ಹಾರು ಹಾರ ಎನ್ನ ದೈವೆ
ಮಾಯದ ಬಂಗಾರ ತುಂಬ್ಯದ | ಹಾರು ಹಾರ ಎನ್ನ ದೈವೆ
ಅದ ಬಡವ ಕಾಣಿರವ್ವಾ | ಹಾರು ಹಾರ ಎನ್ನ ದೈವೆ
ಹುಟ್ಟಾ ಬಂಗಾರ ಮಾಡಿ ನೋಡಿಲ್ಲಾವ | ಹಾರು ಹಾರ ಎನ್ನ ದೈವೆ
ಬಂಗಾರ ಹ್ಯಾಂಗೈತನ್ನೂದ ಗುರುತಿಲ್ಲಾ | ಹಾರು ಹಾರ ಎನ್ನ ದೈವೆ
ಆಗ ಬಡವ ಹೊರಗ ಬಂದಾನ್ರೀ | ಬಾಯಾ ಸಖಿಯಾ ರಾಯಾಜೀ
ತನ್ನ ಮಡದಿಯ ಕರೆದಿದ್ದಾನ್ರೀ | ಬಾಯಾ ಸಖಿಯಾ ರಾಯಾಜೀ
ಬಾರ ಬಾರ ನನ್ನ ಮಡದೀ | ಬಾಯಾ ಸಖಿಯಾ ರಾಯಾಜೀ
ಜೋಗಮ್ಮ ಹಾಂಗ ಹೋಗಬಾರದ ಅಂತಾರ್ರೀ | ಬಾಯಾ ಸಖಿಯಾ ರಾಯಾಜೀ
ಮನೆಗೆ ಬೆಂಕಿ ಹಚ್ಚಿದ್ದಾಳ್ರೀ | ಬಾಯಾ ಸಖಿಯಾ ರಾಯಾಜೀ
ಯೋಳಹರವಿ ತುಂಬ ಮಡದಿರ್ರೀ | ಬಾಯಾ ಸಖಿಯಾ ರಾಯಾಜೀ
ಬೆಂಕಿ ಕೆಂಡ ಹಾಕಿದ್ದಾಳ್ರೀ | ಬಾಯಾ ಸಖಿಯಾ ರಾಯಾಜೀ
ಅವರು ಒಂಬತ್ತು ಮಂದಿ ಕೂಡಿ | ಬಾಯಾ ಸಖಿಯಾ ರಾಯಾಜೀ
ದಾರಿಮ್ಯಾಲ ನಿಂತು ಹೊಕ್ಕಳು ಬಾಗ್ರಿ | ಬಾಯಾ ಸಖಿಯಾ ರಾಯಾಜೀ
ಇದ ಯಾರ ನೋಡಿದಾರ್ರೀ | ಬಾಯಾ ಸಖಿಯಾ ರಾಯಾಜೀ
ದೇವಿ ಯಲ್ಲಮ್ಮ ನೋಡಿದ್ದಾಳ್ರೀ | ಬಾಯಾ ಸಖಿಯಾ ರಾಯಾಜೀ
ಅಪ್ಪಾ ಬಾರೋ  ನನ್ನ ಬಡವರ್ರೇ | ಬಾಯಾ ಸಖಿಯಾ ರಾಯಾಜೀ
ದೇವಿ ಒಳಗ ಕರದಿದ್ದಾಳ್ರೀ | ಬಾಯಾ ಸಖಿಯಾ ರಾಯಾಜೀ
ಅಪ್ಪಾ ಬಾರ ಬಾರೋ ನನ್ನ ಬಡವಾ | ಕೋಲು ಕೋಲಿನ ಕೋಲೆ
ಹೆದರಬ್ಯಾಡೋ ನನ್ನ ಬಡವಾ | ಕೋಲು ಕೋಲಿನ ಕೋಲೆ
ನಿನ್ನ ಭಾವಕ ಮೆಚ್ಚಿ ಕೊಟ್ಟೇನು | ಕೋಲು ಕೋಲಿನ ಕೋಲೆ
ನಿನ್ನ ಭಕ್ತಿಗೆ ಮೆಚ್ಚಿ ಕೊಟ್ಟೇನು | ಕೋಲು ಕೋಲಿನ ಕೋಲೆ
ಯೋಳು ಹರವಿ ಬಂಗಾರೋ | ಕೋಲು ಕೋಲಿನ ಕೋಲೆ
ಇದು ಬಂಗಾರ ಹೌದೋ ಬಡವಾ | ಕೋಲು ಕೋಲಿನ ಕೋಲೆ
ಅಪ್ಪಾ ಇದು ಬೆಂಕಿ ಅಂತ ಹೆದರಬ್ಯಾಡೋ | ಕೋಲು ಕೋಲಿನ ಕೋಲೆ
ನಾನು ಕೈಹಾಕಿ ತೋರಸ್ತೀನ ಬಾರೋ | ಕೋಲು ಕೋಲಿನ ಕೋಲೆ
ದೇವಿ ಕೈಯನ್ನು ಹಾಕಿದ್ದಾಳ್ರೀ | ಕೋಲು ಕೋಲಿನ ಕೋಲೆ
ಕೈಯಾಗ ಭಂಡಾರ ತಗೊಂಡಾಳ್ರೀ | ಕೋಲು ಕೋಲಿನ ಕೋಲೆ
ಕೈಯ ಒಡ್ಡೋ ನನ್ನ ಬಡವಾ | ಕೋಲು ಕೋಲಿನ ಕೋಲೆ
ಬಡವನ ಕೈಯಾಗ ನೀಡಿದ್ದಾಳ್ರೀ | ಕೋಲು ಕೋಲಿನ ಕೋಲೆ
ಅಪ್ಪಾ ಇದ ಬಂಗಾರ ತಗೊಂಡ ನೀನು | ಕೋಲು ಕೋಲಿನ ಕೋಲೆ
ಧಾರ್ವಾಡ ಪಟ್ಟಣಕ ಹೋಗು ಮಗನ | ಕೋಲು ಕೋಲಿನ ಕೋಲೆ
ಬಡವ ಧಾರ್ವಾಡ ಪಟ್ಟಣಕ ಬರುತಾನ | ಕೋಲು ಕೋಲಿನ ಕೋಲೆ
ಧಾರ್ವಾಡ ಶಹರದೊಳಗೂ ದೈವ | ಕೋಲು ಕೋಲಿನ ಕೋಲೆ
ಅದ ಬಡವ ಬಂದಿದ್ದಾನ್ರೀ | ಕೋಲು ಕೋಲಿನ ಕೋಲೆ
ಚಿನವಾಲರ ಅಂಗ್ಡಿಗೆ ಬಂದಿದ್ದಾನ್ರೀ | ಕೋಲು ಕೋಲಿನ ಕೋಲೆ
ಅದ ಬಂಗಾರ ಮಾರಿದ್ದಾನ್ರೀ | ಕೋಲು ಕೋಲಿನ ಕೋಲೆ
ಅದೇ ಬಂಗಾರ ಮಾರಿದ ರೊಕ್ಕಾನ್ರೀ | ಕೋಲು ಕೋಲಿನ ಕೋಲೆ
ಉಡಿ ಒಳಗ ಕಟ್ಟಿದ್ದಾನ್ರೀ | ಕೋಲು ಕೋಲಿನ ಕೋಲೆ
ಬಡವ ಯಚ್ಚಾವತ್ತಿ ಮಾಡಿದ್ದಾನ್ರೀ | ಕೋಲು ಕೋಲಿನ ಕೋಲೆ
ಅರಿವಿ ಅಂಚಡಿ ತಗೊಂಡಾನ್ರೀ | ಕೋಲು ಕೋಲಿನ ಕೋಲೆ
ಕಾಳು ಕಡಿ ತಗೊಂಡಾನ್ರೀ | ಕೋಲು ಕೋಲಿನ ಕೋಲೆ
ಬ್ಯಾಳಿ ಬೆಲ್ಲ ತಗೊಂಡಾನ್ರೀ | ಕೋಲು ಬಣ್ಣನ ಕೋಲೆ
ಇಷ್ಟೆಲ್ಲಾ ವೆಚ್ಚಾ ಮಾಡ್ಸಾರ್ರೀ | ಕೋಲು ಬಣ್ಣನ ಕೋಲೆ
ಬಂಕಾಪುರಕೆ ಬಂದಿದ್ದಾನ್ರೀ | ಬಾಯಾ ಸಖಿಯಾ ರಾಯಾಜೀ
ಆಗ ಎಂದೂ ಕಾಣದ ಬಡವಾರ್ರೀ | ಬಾಯಾ ಸಖಿಯಾ ರಾಯಾಜೀ
ಅಪ್ಪಾ ಜಿಕ್ಕೊಂತ ಕುಣಕೋತಾನ್ರಿ | ಬಾಯಾ ಸಖಿಯಾ ರಾಯಾಜೀ
ತನ್ನ ಮನಿಗೆ ಬಂದಿದ್ದಾನ್ರಿ | ಬಾಯಾ ಸಖಿಯಾ ರಾಯಾಜೀ
ಬಾರ ಬಾರ ನನ್ನ ಮಡದಿರ್ರೀ | ಬಾಯಾ ಸಖಿಯಾ ರಾಯಾಜೀ
ತಾಯಿ ಜೋಗಮ್ಮ ಹಸಿದಿದ್ದಾಳ್ರೀ | ಬಾಯಾ ಸಖಿಯಾ ರಾಯಾಜೀ
ಬೇಗನೆ ಅಡ್ಗಿ ಮಾಡ ಮಡದೇರ್ರೆ  | ಬಾಯಾ ಸಖಿಯಾ ರಾಯಾಜೀ
ಆಗ ಮಡದಿಯು ನೀರ ತಂದಾಳ್ರೀ | ಬಾಯಾ ಸಖಿಯಾ ರಾಯಾಜೀ
ಜಲ್ದ ಅಡಗಿ ಹೂಡಿದ್ದಾಳ್ರೀ | ಬಾಯಾ ಸಖಿಯಾ ರಾಯಾಜೀ
ಪಂಚಾಮೃತ ಅಡಗಿ ಮಾಡ್ಯಾಳ್ರೀ | ಬಾಯಾ ಸಖಿಯಾ ರಾಯಾಜೀ
ದೇವಿ ಊಟಕ್ಕ ಕರೆದಿದ್ದಾನ್ರೀ | ಬಾಯಾ ಸಖಿಯಾ ರಾಯಾಜೀ
ದೇವಿಗೆ ಊಟಕ್ಕ ಬಡಿಸಿದ್ದಾನ್ರೀ | ಬಾಯಾ ಸಖಿಯಾ ರಾಯಾಜೀ
ದೇವಿ ಶಾಂತ ಊಟ ಮಾಡ್ಯಾಳ್ರೀ | ಕಲ್ಯಾಣದಯ್ಯಾರ್ರೀ
ಬಾರೊ ಬಾರೋ ನನ್ನ ಬಡವಾರ್ರೆ | ಕಲ್ಯಾಣದಯ್ಯಾರ್ರೀ
ನಾನು ನನ್ನ ಗಿರಿಗೆ ಹೋಗ್ತೀನಿ ಬಡವಾರ್ರೆ | ಕಲ್ಯಾಣದಯ್ಯಾರ್ರೀ
ದೇವಿ ಬಡವಗ ಏನು ಹೇಳುತಾಳ್ರೀ | ಕಲ್ಯಾಣದಯ್ಯಾರ್ರೀ
ನನ್ನ ಮಾತ ಕೇಳು ಬಡವಾರ್ರೆ | ಕಲ್ಯಾಣದಯ್ಯಾರ್ರೀ
ನೀನು ಮಂಗಳವಾರ ಶುಕ್ರಾರ ಬಡವಾರ್ರೇ | ಕಲ್ಯಾಣದಯ್ಯಾರ್ರೀ
ಮಡಿನೀರ ತರಬೇಕ್ರೇ | ಕಲ್ಯಾಣದಯ್ಯಾರ್ರೀ
ಮನಿಮಾರ ಸಾರ್ಸಬೇಕ್ರೇ | ಕಲ್ಯಾಣದಯ್ಯಾರ್ರೀ
ನನ್ನ ಪೂಜಿ ಮಾಡಬೇಕರ್ರೀ | ಕಲ್ಯಾಣದಯ್ಯಾರ್ರೀ
ನಿನ್ನ ತಲೆ ಬೀಳುವವರೆಗೆ ಕಲ್ಯಾಣದಯ್ಯಾರೀ
ರಾಜಧರ್ಮಾ ಮಾಡೋ ಬಡವಾರ‍್ರೇ | ಕಲ್ಯಾಣದಯ್ಯಾರ್ರೀ
ಯೋಳ ಅಂತಸ್ತಿನ ಮನೆಯ ಕಟ್ಟೋ ಬಡವಾರ್ರೇ | ಕಲ್ಯಾಣದಯ್ಯಾರ್ರೀ
ಯಪ್ಪಾ ದ್ವಾರಬಾಗಿಲ ಕಟ್ಟೋ ಬಡವಾರ್ರೇ | ಕಲ್ಯಾಣದಯ್ಯಾರ್ರೀ
ಯಪ್ಪಾ ನಿನ್ನ ಮನೆಯ ಒಳಗರ್ರೇ | ಕಲ್ಯಾಣದಯ್ಯಾರ್ರೀ
ನನ್ನ ಗುಡಿಯ ಕಟ್ಟೋ ಬಡವಾರ್ರೇ | ಕಲ್ಯಾಣದಯ್ಯಾರ್ರೀ
ದೇವಿ ಮತ್ತ ಏನಂತ ಹೇಳುತ್ತಾಳ್ರೀ | ಕಲ್ಯಾಣದಯ್ಯಾರ್ರೀ
ನೀನು ಪ್ರತಿವರ್ಷಕ್ಕೊಮ್ಮೆರ್ರೀ | ಕಲ್ಯಾಣದಯ್ಯಾರ್ರೀ
ಯೋಲ ಬಂಡಿ ಹೊಡಕೊಂಡ್ಹೋಗ್ರೀ | ಕಲ್ಯಾಣದಯ್ಯಾರ್ರೀ
ನನ್ನ ಗಿರಿಗೆ ಬರಬೇಕ್ರೇ | ಕಲ್ಯಾಣದಯ್ಯಾರ್ರೀ
ಯಾಕ ಆಗೊಲ್ಲಬೇ ಹಡದವ್ವ | ಕಲ್ಯಾಣದಯ್ಯಾರ್ರೀ
ನೀ ಹೇಳಿದಾಂಗ ಪಾಲಸತೀನಿ | ಕೋಲು ಕೋಲಿನ ಕೋಲೆ
ನೀ ಹೇಳಿದಾಂಗ ಕೇಳತೀನಿ | ಕೋಲು ಕೋಲಿನ ಕೋಲೆ
ದೀಡನಮಸ್ಕಾರ ಹಾಕತೀನಿ | ಕೋಲು ಕೋಲಿನ ಕೋಲೆ
ಯಪ್ಪಾ ಇಷ್ಟ ಅನ್ನುದರೊಳಗ | ಕೋಲು ಕೋಲಿನ ಕೋಲೆ
ದೇವಿ ಮಾಯಾಗಿ ಹೋಗಿದ್ದಾಳ್ರೀ | ಕೋಲು ಕೋಲಿನ ಕೋಲೆ
ಹಕ್ಕ್ಯಾಗಿ ಹಾರಿದ್ದಾಳ್ರೀ | ಕೋಲು ಕೋಲಿನ ಕೋಲೆ
ಪಕ್ಷ್ಯಾಗಿ ಜಿಗಿದ್ದಾಳ್ರೀ | ಕೋಲು ಕೋಲಿನ ಕೋಲೆ
ಯಪ್ಪಾ ಇನ್ನೂವರೆಗೇರಿ | ಕೋಲು ಕೋಲಿನ ಕೋಲೆ
ಅದ ಬಡವನ ಮನೆಯವರ್ರೀ | ಕೋಲು ಕೋಲಿನ ಕೋಲೆ
ಹಾಲು ಉಕ್ಕಿದ್ಹಾಂಗ ಉಕ್ಕತೇತ್ರಿ | ಕೋಲು ಕೋಲಿನ ಕೋಲೆ
ಈ ಮಾತು ಸುಳ್ಳಾದರ‍್ರೀ | ಕೋಲು ಕೋಲಿನ ಕೋಲೆ
ನೀವು ಪ್ರತ್ಯಕ್ಷ ಬಂಕಾಪುರಕ್ಕೆ ಹೋಗಿ ನೋಡ್ರೀ | ಕೋಲು ಕೋಲಿನ ಕೋಲೆ
ಇಷ್ಟು ಹೇಳಿ ದೇವಿ ಆಖ್ಯಾನ ಮುಗಿದೈತಿರ್ರೀ | ಕೋಲು ಕೋಲಿನ ಕೋಲೆ
ದೇವಿ ಕಥಾ ಸುಳ್ಳು ಅಲ್ಲಾರ‍್ರೀ | ಕೋಲು ಕೋಲಿನ ಕೋಲೆ