ಗುಡ್ಡದ ಎಲ್ಲಮ್ಮ ಪರಶುರಾಮನ ತಾಯಿ
ಏಳು ಕೊಳ್ಳ ಜೋಕೆ ಮಗನ ತಂದೆಲ್ಲನ
ಬಂಕಾಪುರಕ ಹೋಗಿ ಬರುವೆನ ತಂದೆಲ್ಲನ
ಹೋಗಬ್ಯಾಡ ಹಡೆದವ್ವ ತಂದೆಲ್ಲನ
ಒಬ್ಬವನೆ ಇರಲಾರೆ ತಂದೆಲ್ಲನ
ಅಡ್ಡಗಟ್ಟಿ ಬ್ಯಾಡ ತಂದೆಲ್ಲನ
ಹರಕ ಕುಬ್ಬುಸ ತೊಟ್ಟಾಳ ತಂದೆಲ್ಲನ
ಹಡ್ಲಿಗಿ ಹಿಡಿದಾಳ ತಂದೆಲ್ಲನ
ಹಿಡಿ ಬಂಡಾರ ಹಿಡದಾಳ ತಂದೆಲ್ಲನ
ಬಂಕಾಪುರಕ ಜಿಗದಾಳೆನ ತಂದೆ‌ಲ್ಲನ
ಮಾದ್ಯಾನ ಹೊಲಕ ಹೋಗ್ಯಾಳ ತಂದೆಲ್ಲನ
ಹನ್ನೆರಡ ಕೂರಿಗಿ ಹೊಲವ ತಂದೆಲ್ಲನ
ಜೋಲ ಬೆಳೆದು ನಿಂತೈತಿ ತಂದೆಲ್ಲನ
ಯಕ್ಕಯ್ಯ ಜೋಗಯ್ಯ ತಂದೆಲ್ಲನ
ಎರಡು ತೆನೆಯ ಭಿಕ್ಷಾ ಮಾಡು ತಂದೆಲ್ಲನ
ಕಲ್ಯಾ ಮಲ್ಯಾ ನಿಂಗ್ಯಾ ನೀಲ್ಯಾ ತಂದೆಲ್ಲನ
ಮೇಟಿಗಿ ಬಿಗಿದಾರಕಿನ ತಂದೆಲ್ಲನ
ಬಾರಕೋಲು ಸೆಲೆಯರತಿನಿ ತಂದೆಲ್ಲನ
ಬಾರಕೋಲು ಸೆಲೆಯರತಿನಿ ತಂದೆಲ್ಲನ
ಕಲ್ಯಾ ಮಲ್ಯಾ ನಿಂಗ್ಯಾ ನೀಲ್ಯಾ ತಂದೆಲ್ಲನ
ಮೇಟಿಗಿ ಬಿಗಿದಾರೇನ ತಂದೆಲ್ಲನ
ಬಾರಕೋಲು ಸೆಳೆಯತಾರ ತಂದೆಲ್ಲನ
ಕಲ್ಯಾ ಮಲ್ಯಾ ನಿಂಗ್ಯಾ ನೀಲ್ಯಾ ತಂದೆಲ್ಲನ
ಉರಿ ಚಳಿ ಬಂದಾವು ತಂದೆಲ್ಲನ
ಕಣದಾಗ ಬಿದ್ದು ಹೊಳ್ಯಡತಾರ ತಂದೆಲ್ಲನ
ಮೇಟಿಗಿ ಕಟ್ಟಿದ ಗಂಟು ಬಟ್ಟಿ ತಂದೆಲ್ಲನ
ಹಿಡಿ ಬಂಡಾರ ಹಿಡಿದಾಳೆಲ್ಲ ತಂದೆಲ್ಲನ
ಹನ್ನೆರಡು ಕೂರಿಗಿ ಹೊಲದಾಗ ತಂದೆಲ್ಲನ
ಬಂಡಾರ ಒಗದಾಳ ತಂದೆಲ್ಲನ
ಜೋಳದ ಹೊಲ ಸುಟ್ಟು ಹೋತು ತಂದೆಲ್ಲನ
ಬದ್ನಿ ಹೊಲಕ ಹೋಗ್ಯಾಳ ತಂದೆಲ್ಲನ
ಯಕ್ಕಯ್ಯ ಜೋಗಯ್ಯ ತಂದೆಲ್ಲನ
ಯರಡು ಕಾಯಿ ಭಿಕ್ಷಾ ಮಾಡು ತಂದೆಲ್ಲನ
ಮಾದ್ಯಾನ ಹೆಣತಿ ನೀಡ್ಯಾಳ ತಂದೆಲ್ಲನ
ಮಾದ್ಯಾನ ನೆದರಿಗಿ ಬಿದ್ದಾಳ ತಂದೆಲ್ಲನ
ನೀಡಿದ ಕಾಯಿ ಕಸಗೊಂಡಾನ ತಂದೆಲ್ಲನ
ಮಾದ್ಯಾನ ಕಣಕ ಬಂದಾಳ ತಂದೆಲ್ಲನ
ಪಾತರದ ಹೆಣ್ಣು ಅಂತ ತಂದೆಲ್ಲನ

ಏ ಪಾತರದಾಕೆ ನೀ ಯಾವ ಊರಾಕಿ, ನೀ ಇಲ್ಲಿಗ್ಯಾಕೆ ಬಂದಿದೆ ಮತ್ತು ನೀನು ಬಂದದ್ದು ಬಹಳ ಚಲೋ ಆಯಿತು. ಇವತ್ತ ಒಂದು ದಿನ ಇಲ್ಲೆ ಇರು, ನೀ ಏನ ಬೇಡತಿ ಬೇಡು, ನೂರು ಆಕಳುಗಳಿವೆ ನಿನ್ನ ಹೆಸರಿಗೆ ಮಾಡತೇನು

ನೂರ ಆಕಳು ನನ್ನ ಹೆಸರು ತಂದೆಲ್ಲನ
ಮಾಡುತೇನ ಮಾದ್ಯಾ ನೀನು ತಂದೆಲ್ಲನ
ಮನಿಗೆ ಓಡಿ ಬಂದಾನ ತಂದೆಲ್ಲನ
ಹಕ್ಕ್ಯಾಗ ಹೋಗಿ ನೋಡತಾನ ತಂದೆಲ್ಲನ
ನೂರು ಆಕಳು ಸೆಟದಾವು ತಂದೆಲ್ಲನ
ಹೊಲಕ ಓಡಿ ಬಂದಾನು ತಂದೆಲ್ಲನ
ಬಂಕಾಪುರದ ಮಾದ್ಯಾ ಕೇಳು ತಂದೆಲ್ಲನ
ಹೋಗುತೇನ ನಿಲ್ಲುದಿಲ್ಲ ತಂದೆಲ್ಲನ

ಏ ಪಾತರದಾಕಿ ಹೋಗಬೇಡ, ಇವತ್ತು ಒಂದು ದಿನ ಇಲ್ಲೆ ಇರು. ನೀ ಏನು ಬೇಡತಿದಿ ಬೇಡು. ಹನ್ನೆರಡು ಕೂರಿಗಿ ಜೋಳದ ಹೊಲ ಸುಟ್ಟು ಹೋಯಿತು, ವಾರದಾಗ ಏಳು ಎಂಟು ಬುಟ್ಟಿ ಬದನೆಕಾಯಿ ಹೊರಡತಿದ್ದವು ಅದು ಸುಟ್ಟು ಹಾಳಾಯಿತು. ನೂರು ಆಕಳುಗಳು ಸತ್ತವು. ಸತ್ತರೂ ಚಿಂತಿಯಿಲ್ಲ, ನೂರು ಎಮ್ಮೆಗಳಿವೆ ನಿನ್ನ ಹೆಸರಿಗೆ ಮಾಡುತೇನು.

ನೂರು ಎಮ್ಮಿ ನನ್ನ ಹೆಸರು ತಂದೆಲ್ಲನ
ಮಾಡುತೇನ  ಮಾದ್ಯಾ ನೀನು ತಂದಲ್ಲನ
ಬೆವಿನ ಗಿಡಕ ಬನ್ನಿ ಗಿಡಕ ತಂದೆಲ್ಲನ
ಸಾಲದೋಣಿ ಹೊಡಿ ಮಾದ್ಯಾ ತಂದೆಲ್ಲನ
ಮನಿಗೆ ಓಡಿ ಬಂದಾನ ತಂದೆಲ್ಲನ
ಹಕ್ಕ್ಯಾಗ ಹೋಗಿ ನೋಡತಾನ ತಂದೆಲ್ಲನ
ನೂರು ಎಮ್ಮಿ ಸೆಟದಾವು ತಂದೆಲ್ಲನ
ಹೊಲಕ ಓಡಿ ಬಂದಾನ ತಂದೆಲ್ಲನ
ಬಂಕಾಪುರದ ಮಾದ್ಯಾ ಕೇಳು ತಂದೆಲ್ಲನ
ಹೋಗುತೇನ ನಿಲ್ಲುದಿಲ್ಲ ತಂದೆಲ್ಲನ

ಏ ಪಾತಾರದಾಕೆ, ಹೋಗಬೇಡ. ಇವತ್ತು ಒಂದು ದಿನ ಇರು. ನೂರು ಆಕಳ ಎಮ್ಮಿ, ಜೋಳದ ಹೊಲ, ಬದನೆಕಾಯಿ ಹೊಲ ಎಲ್ಲವೂ ಹಾಳಾದವು. ಹದಿನಾರು ಜೋಡಿ ಎತ್ತು ಅದಾವು ನಿನ್ನ ಹೆಸರಲೆ ಮಾಡುತೇನು

ಹದ್ನಾರು ಜೋಡಿ ಎತ್ತು ತಂದೆಲ್ಲನ
ನನ್ನ ಹೆಸರು ಮಾಡುತೇನು ತಂದೆಲ್ಲನ
ಬೇವಿನ ಮರಕ ಬನ್ನಿ ಗಿಡಕ ತಂದೆಲ್ಲನ
ಸಾಲದೋಣೀ ಹೊಡಿ ಮಾದ್ಯಾ ತಂದೆಲ್ಲನ
ಮನಿಗೆ ತಾ ಓಡಿ ಬಂದಾನ ತಂದೆಲ್ಲನ
ಹದಿನಾರು ಜೋಡಿ ಎತ್ತು ತಂದೆಲ್ಲನ
ಕಟ್ಟಿದಲ್ಲೆ ಸೆಟದಾವು ತಂದೆಲ್ಲನ
ಹೊಲಕ ಓಡಿ ಬಂದಾನ ತಂದೆಲ್ಲನ
ಬಂಕಾಪುರದ ಮಾದ್ಯಾ ಕೇಳು ತಂದೆಲ್ಲನ
ಹೋಗುತೇನ ನಿಲ್ಲುದಿಲ್ಲ ತಂದೆಲ್ಲನ

ಏ ಪಾತರದಾಕಿ ಹೋಗಬೇಡ ಈಗ ನೂರು ಆಕಳು, ನೂರು ಎಮ್ಮಿ, ಹದ್ನಾರು ಜೋಡಿ ಎತ್ತು ಸತ್ತವು, ಈ ಇನ್ನೂ ಎರಡು ಹನ್ನೆರಡು ಅಂಕಣದ ಮನೆ ನಿನಗೆ ಮಾಡುತೇನು.

ಹನ್ನೆರಡು ಅಂಕಣದ ಮನೆ ತಂದೆಲ್ಲನ
ನನ್ನ ಹೆಸರು ಮಾಡುತೇನ ತಂದೆಲ್ಲನ
ಕಾಗದ ಬರಿಸಿಕೊಂಡು ತಂದೆಲ್ಲನ
ಕುಲಕರ್ಣಿ ಸಿಗಲೊಲ್ಲ ತಂದೆಲ್ಲನ
ಸರಕಾರದ ತಾಬೀನು ಆತು ತಂದೆಲ್ಲನ
ಪಂಚರ ತಾಬೀನು ಆತು ತಂದೆಲ್ಲನ
ಹಿರಿಯರ ತಾಬೀನು ಆತು ತಂದೆಲ್ಲನ
ಬಂಕಾಪುರದ ಮಾದ್ಯಾ ಕೇಳು ತಂದೆಲ್ಲನ
ಹೋಗತೇನ ನಿಲ್ಲುದಿಲ್ಲ ತಂದೆಲ್ಲನ

ಏ ಪಾತರದಾಕಿ ಹೋಗಬೇಡ ಹನ್ನೆರಡು ಕಾಲಿನ ಮಂಚನಿದೆ. ಬಂದು ಇಳಿವ ತಂದು ಹೋಗು.

ಮಂಚಕ ಬರುತೇನ ತಂದೆಲ್ಲನ
ಇಳೆವ ತಿನ್ನುತೆನ ತಂದೆಲ್ಲನ

ಏ ಮಾದ್ಯಾ, ಮಂಚಕ ಬರುದಾತು. ನಾ ಹೇಳಿದ ಮಾತು ಕೇಳಿದರ ನಿನ್ನ ಮಂಚಕ ಬರತೇನ. ಇಲ್ಲದರ ಬರುದಿಲ್ಲ. ಪಾತರದಾಕೇ ಹೇಳಿದ ಮಾತು ಕೇಳಿದ ಬಳಿಕ ನೀ ಹೇಳಿದ ಮಾತು ಕೇಳತೇನ ಏನ ಹೇಳತೀದಿ ಹೇಳು?

ಅಂಗಿ ಕಳಿ ಮಾದ್ಯಾ ತಂದೆಲ್ಲನ
ಧೋತರ ಕಳಿ ಮಾದ್ಯಾ ತಂದೆಲ್ಲನ
ಪಾವಡ ತೆಗಿ ಮಾದ್ಯಾ ತಂದೆಲ್ಲನ
ಉಡದಾಗ ಹರಿ ಮಾದ್ಯಾ ತಂದೆಲ್ಲನ
ಹಿಂದಕ ಹೊಳ್ಳು ಮಾದ್ಯಾ ತಂದೆಲ್ಲನ
ನೋಡಕೋರೋ ನಿನ್ನ ಮಾನ ತಂದೆಲ್ಲನ
ಜಾಡಿಸಿ, ಜಾಡಿಸಿ ಒದಿತಾಳ ತಂದೆಲ್ಲನ
ಎಳೆದು ಎಳೆದು ಒಗಿತಾಲ ತಂದೆಲ್ಲನ
ಹೊಳ್ಳಿ ಹೊಳ್ಳಿ ಕಾಲಿಗೆ ಬಿದ್ದ ತಂದೆಲ್ಲನ
ಬಂಕಾಪುರದ ಮಾದ್ಯಾ ಕೇಳು ತಂದೆಲ್ಲನ
ಸೀರಿಯ ಉಡಿಸ್ಯಾಳ ತಂದೆಲ್ಲನ
ಕುಬಸ ತೊಡಿಸ್ಯಾಳ ತಂದೆಲ್ಲನ
ಗೆಜ್ಜಿಯ ಕಟಿಸ್ಯಾಳ ತಂದೆಲ್ಲನ
ಕೈಯಾಗ ಬಳಿ ಇಡಿಸ್ಯಾಳ ತಂದೆಲ್ಲನ
ಸಡಕ ಒಡ್ಡಲ ಇಡಿಸ್ಯಾಳ ತಂದೆಲ್ಲನ
ಕೊಳ್ಳಾಗ ಭಂಡಾರ ಚೀಲ ತಂದೆಲ್ಲನ
ಬಗಲಾಗ ಜೋಳಿಗಿ ತಂದೆಲ್ಲನ
ಬಗಲಾಗ ದೀವಟಗಿ ತಂದೆಲ್ಲನ
ಬಲಗೈಯಾಗ ಚವುರವ ತಂದೆಲ್ಲನ
ಹಲ್ಲಿಗೆ ಹಲ್ಲಿಟ್ಟ ತಂದೆಲ್ಲನ
ಇಳಿವ ತಿನಿಸ್ಯಾಳು ತಂದೆಲ್ಲನ
ಬೆನ್ನಿಗೆ ಜಡಿ ಬಿಡಿಸ್ಯಾಳ ತಂದೆಲ್ಲನ
ಕೊಡಪಾನ  ಹೊರಸ್ಯಾಳ ತಂದೆಲ್ಲನ
ಸಮಾಳಿ – ತನಕ ತರಿಸ್ಯಾಳ ತಂದೆಲ್ಲನ
ಐದು ಹೆಚ್ಚಿ ಕುಣಿಸ್ಯಾಳ ತಂದೆಲ್ಲನ
ಭಂಡಾರ ಬಡದಾಳ ತಂದೆಲ್ಲನ
ಉಧೋ ಅನಿಸಿ ಬಿಟ್ಟಾಳಲ್ಲ ತಂದೆಲ್ಲನ
ಬಂಕಾಪುರದ ಮಾದ್ಯಾ ಕೇಳು ತಂದೆಲ್ಲನ
ಎರಡು ತೆನೆ ನೀಡಲಿಲ್ಲ ತಂದೆಲ್ಲನ
ಮೆಟಿಗಿ ಬಿಗಿಸಿದ್ದಿ ತಂದೆಲ್ಲನ
ಬಾರಕೋಲು ಬಡಿಸಿದಿ ತಂದೆಲ್ಲನ
ಬಂಕಾಪುರದ ಮಾದ್ಯಾ ಕೇಳು ತಂದೆಲ್ಲನ
ಎರಡು ಬದನೆ ಕಾಯ ನಿನ್ನ ಹೆಂಡತಿ ನೀಡಿದ ತಂದೆಲ್ಲನ
ನೀಡಿದ ಕಾಯಿ ಕಸಗೊಂಡಿ ತಂದೆಲ್ಲನ
ಬಂಕಾಪುರದ ಮಾದ್ಯಾ ಕೇಳು ತಂದೆಲ್ಲನ
ಪಾತರದಾಕೆ ಪಂತ ಕೇಳು ತಂದೆಲ್ಲನ
ಪಾತರದಾಕೆ ಪಂತ ನೋಡು ತಂದೆಲ್ಲನ