“ಒಂದು ಒಕ್ಕಲ ನೆವಣಿ ಒಂದೊಬ್ಬಿ ಮಾಡಿ
ಒಬ್ಬಳಿಗೆ ಒಬ್ಬಿ ನುರಿವಲ್ಲವು | ಅಣ್ಣಯ್ಯ
ಎಬ್ಬಿಸೋ ನಿನ್ನ ಹೆಂಡತಿಯ”

“”ಎದ್ದಾರೆ ಎಬಿಸೇನು ಅರನಿದ್ದಿ ಮರನಿದ್ದಿ”
ಎರಡೊಬ್ಬಿ ಮಾಡಿ ಅಣಿಯವ್ವ”

“”ಎರಡೊಬ್ಬಿ ಮಾಡಿದರೆ ನುಚ್ಚಕ್ಕಿಯಾದಾವು
ಎಬ್ಬಿಸಣ್ಣಯ್ಯ ಮಡದೀನ”

“”ಕುಟ್ಟಿದರೆ ಕುಟ್ಟವ್ವ ಗುರುಗುಟ್ಟಬ್ಯಾಡವ್ವ
ಕೊಟ್ಟಂತಾರ ಮನಿಗೆ ಕಳುವೇನು”

“”ಹೋರಿಯ ಇಡಿಯಣ್ಣ ಜೂಲವ ಹಾಕಣ್ಣ
ಬಾಲನ್ನ ತಾರಣ್ಣ ಬಲಗೈಗೆ | ನನ್ನೂರಗೆ
ಚಿಕ್ಕ ಅಗಸಿಯಿಂದ ತಿರುವಣ್ಣ”

ಎತ್ತನ್ನು ಹಿಡಿಯಣ್ಣ ಸಬರವ ಹಾಕಣ್ಣ
ಮಗನ್ನ ತಾರಣ್ಣ ಎಡಗೈಗೆ | ನನ್ನೂರ
ತಿಪ್ಪ್ಯಾಗಿಂದ ಎತ್ತು ತಿರುವಣ್ಣ”

ತಂಗ್ಹೋಗಿ ಮೂರುದಿನಕ ನಂದೀಯ ಕಾಲ್ಮುರಿದು
ಮನೆಯೋಳ ಮಡದಿಗೆ ಉರಿಚಳಿ | ಬಂದಾಗ
ಹೊತ್ತಿಗಿ ತೆಗೆಸಾಕ ಹೊರಹೊಂಟ”
ಹೊತ್ತೀಗಿ ತೆಗಿಸ್ಯಾರ ದೇವರಲ್ಲ ದಿಂಡರಲ್ಲ
ಮನೆಯೋಳ ತಂಗಿ ಹುಸ್ಸೆಂದು | ಹೋಗ್ಯಾಳ
ಕರಸಪ್ಪ ಮಗನ ಮದುವೀಗೆ”

ಬಂಡಿ ಬಾಡಿಗಿ ಮಾಡಿ ತಂಗಿ ಕರೆಯಲು ಹೋದ
“”ಏನ್ಮಾಡ್ತಿ ತಂಗಿ ಹೊರ ಒಳಗ | ನಾಳಿಗೆ
ಹೊರಡವ್ವ ಮಗನ ಮದುವೀಗೆ”

“”ಏನು ಮಾಡೋದಿಲ್ಲ ಎಂತು ಮಾಡೋದಿಲ್ಲ
ಉಂಬುತೀನಣ್ಣ ಹೊರಗಿರು | ನೀನಾಡಿದ
ಮಾತು ನುಂಗತೀನಣ್ಣ ಮನದಾಗ”

“”ಉಂಡಾರೆ ಉಣ್ಣವ್ವ ತಿಂದಾರೆ ತಿನ್ನವ್ವ
ಬರಬೇಕವ್ವ ಮಗನ ಮದುವೀಗೆ | ಹಂದರದಾಗ
ಮೇಲಾದ ಜವಳಿ ಉಡುವಂತಿ”

“”ಮದುವೀಗಿ ಬರಲಾಕ ನನ್ನಿಚ್ಚಿ ನಿನ್ನಿಚ್ಚಿ ?
ಅತ್ತಿ ಮಾವನ ಬೆಸಗೊಳ್ಳೊ | ಪತಿರಾಯನ
ಕೇಳೆ ತಿಳಿದಾರೆ ಯೋಚಿಸುವೆ”

“”ಅತ್ತೀನ ಬೆಸಗೊಂಡೆ ಮಾವನ ಬೆಸಗೊಂಡೆ
ಚಿಕ್ಕ ಮೈದುನರ ಬೆಸಗೊಂಡೆ | ಬಾರವ್ವ
ಹೊರಡವ್ವ ತಂಗಿ ಮದುವೀಗೆ”

“”ಅವರಿ ಹರಿಯಲಾರದೆ ತೊಗರಿ ಕೊಯ್ಯಲಾರದೆ
ತೆವರ ಮ್ಯಾಗಳ ಗದ್ದೆ ಕೊಯ್ಯಲಾರದೆ | ಹ್ಯಾಂಗ
ಬರಲಿ ಅಣ್ಣಯ್ಯ ಮದುವೀಗೆ ?”

“”ಅವರಿ ಹರಿಯುವರ ಕೊಡುವೆ ತೊಗರಿ ಕೊಯ್ವರ ಕೊಡುವೆ
ತೆವರಮ್ಯಾಗಳ ಗದ್ದಿ ಕೊಯ್ಯಾರ | ಕೊಡುವೆ
ಹೊರಡವ್ವ ತಂಗೀ ಮದುವೀಗೆ”