ಮಾರೆಗೌಡನ ಮನೆ ಸಂಪತ್ತು
ಸಾಲಿಗೆ ಸಾವಿರ ಕಂಬದ ಮಾನೆ
ಮನೆಗೆ ಮುನ್ನರು ತೊಟಿಪಡಸಾಲು
ಬಚ್ಚಲ ಕಲ್ಲೆ ಬಿಳಿ ಬಂಗಾರ
ಅದೂ ಸಾಲದೆ ಮಾಡಿಯ ಕಟ್ಟಿ
ಮಾಡಿಯ ಮ್ಯಾಲೆ ಚಿನ್ನದ ಕಳಸ
ಚಿನ್ನದ ಕಳಸ ಉಂಟಾದ ಗೌಡ
ಕುಲದಲ್ಲಿ ನಾ ಕುರುಬನಗೌಡ
ಜಾತಿಯಲ್ಲಿ ನಾ ಹೆಗ್ಗಡೆಗೌಡ
ಕೇಳೆ ಕೇಳೆ ನೀ ಶರಣೆ ನೀನು
ಶಿವ ನಮಗೇನು ಕಮ್ಮಿ ಮಾಡಿಲ್ಲ
ರಾಮ ಲಕ್ಷ್ಮಣ ಎಂಬೊ ಕಣಜ
ಎರಡು ಕಣಜದ ಹಣವೇ ಉಂಟು
ಇಷ್ಟೊಂದು ಸಂಪತ್ತುಂಟಲ ರಾಣಿ
ಸರೀಕರಂಗೆ ಬದುಕಲಿಬೇಕು
ಸಮದೋರಂಗೆ ಬಾಳಲಿಬೇಕು
ಬಾಳದಿದ್ದಾರೆ ಆಡಿಕೊಂತಾರೆ
ಅದಕೊಂದು ಬುದ್ಧಿ ಹೇಳೆನು ಕೇಳು
ಮೂರು ವರುಷದ ಮುಗ್ಗಲು ಜೋಳ
ಅಳತೆ ಮಾಡಿ ನೀ ಮೂರುಪಡಿ ತಕ್ಕೊ
ಮಾಡಲಿಬ್ಯಾಡ ಮಟ್ಟಲಿಬ್ಯಾಡ
ಬಿಸಲಿಗ್ಹಾಕಿ ನೀ ಒಣಗಿಸಬ್ಯಾಡ
ಕೋಳಿ ಕೊಕ್ಕ ಮೇದೊಯ್ತಾವೆ
ಹಾಗೇ ಬೀಸಿ ಅಂಬಲಿ ಕಾಸು
ಊರು ಮಂದಲ ಹೊಲಕ್ಹೋಗಮಿ
ಮೂರು ಮಂಕರಿಯ ಮುದಿ ಅಣ್ಣೆಸೊಪ್ಪು
ಸೊಪ್ಪು ಗಿಪ್ಪು ಸೋಸಿಯ ಕಂಡ
ಸೊಪ್ಪಿಗೆ ಉಪ್ಪು ನೀ ಹಾಕಲೀಬೇಡ
ಉಪ್ಪಿಗೆ ದುಡ್ಡು ಕೊಟ್ಟಾ ಮ್ಯಾಲೆ
ಚಿನ್ನದ ಕಣಜ ಕಮ್ಯಾಗುವುದು
ಬೆಳ್ಳೀ ಕಣಜ ಬರಿದಾಗುವುದು
ಅಪ್ಪರ ಹಣ ನಾ ಕೊಡು ಗೌಡಲ್ಲ
ದೇವರಾಣೆ ನಾ ಕೇಳ ಗರ್ತ್ಯಲ್ಲ
ಇಬ್ಬರ ಜ್ಞಾನ ಒಂದೇ ಜ್ಞಾನ
ಇಬ್ಬರ ದೃಢವು ಒಂದೆ ದೃಢವು
ಮೂರು ಮಾತು ತನ್ನೆಣತಿಗಿ ಹೇಳಿ
ಊರು ಮುಂದಕೆ ಬಂದನು ಗೌಡ

ಅಲ್ಲೊಂದು ಜ್ಞಾನ ತಿಳುದನು ಗೌಡ
ಇಲ್ಲಿ ನಾನು ಹೊಲ ಮಾಡಿದರೆ
ಕಂದಾಯ ಉಂಟು ಕಾಣಿಕೆ ಉಂಟು
ಹಡದೆ ಉಂಟು ಮಿರಾಸು ಉಂಟು
ಹಿಟ್ಟ ಉಂಟು ಬಿಟ್ಟಿ ಉಂಟು

ಮನೆಗೆ ಆದರೆ ಬಂದನು ಗೌಡ
ಗಂಡನಾದರೆ ಹಸ್ತವನಂದು
ಚಿನ್ನದ ಚೊಂಬೆಲಿ ನೀರು ತಂದಾಳು
ಬುದ್ಧಿಲ್ಲವೇನೆ ಮಾಯದ ಗರತಿ

ಹಾಳಾದ ಚೊಂಬು ಎಷ್ಟು ಸವದೋಯ್ತೆ
ಹಿಂದಲ್ವಾಡೆಗೆ ಎಸಯೆ ಮುಂಡೆ
ಮಣ್ಣ ಬೋಕಿಲಿ ನೀರು ತತ್ತಾರೆ

ಮಣ್ಣ ಬೋಕಿಲಿ ನೀರು ಕೊಟ್ಟಾಳು
ಕೈಕಾಲು ಮುಖವ ಘನದಿಂದ ತೊಳದೆ
ನಡು ಮನೆಯಲ್ಲಿ ಕುತುಕೊಂಡ ಗೌಡ
ಅಂದಕ್ಕೇ ಈಬೂತಿಯ ಧರಸಿ
ಚಂದಕ್ಕೇ ತಿಲಕಾವೆ ತಿದ್ದಿ
ಚಿನ್ನದ ತಣಗೆಯ ಬೆಳಗುಕೆ ಬಂದಲು
ಬುದ್ಧಿಲ್ಲವೇನೆ ಮಾಯದ ಗರತಿ
ಹಾಳಾದ ತಣಗೆ ಎಷ್ಟು ಸವದೊಯ್ತೆ
ಹಿಂದಲ್ವಾಡೆಗೆ ಎಸೆಯೆ ಮುಂಡೆ
ಹಿಂದಲಟ್ಟಿಗೆ ಹೋಗೇ ನೀನು
ಎಮ್ಮೆ ಸಗಣಿ ಮೂರು ಮಂಕ್ರಿ ತತ್ತ
ನಡು ಮನೆಯಲ್ಲಿ ಕಟ್ಟೆಕಟ್ಟು ಗರತಿ
ನಡು ಮನೆಯಲ್ಲಿ ಕಟ್ಟೆ ಕಟ್ಟಿದಳಾಗ
ಗುಡಾಣದಂಬಲಿ ತಂದು ಬಿಟ್ಟಾಳು
ಮಂಕರಿ ಸೊಪ್ಪು ತಂದಾಕ್ಯಾಳು
ಕತ್ತೆ ತಿಂದಂಗೆ ಸೊಪ್ಪು ತಿಂತಾನೆ
ಕುತುಕೊಂಡು ನಾನು ಅಂಬಲಿ ಕುಡುದರೆ
ಚರಕ-ಪರಕ ಅಂತಾದಲ್ಲೆ
ಯಾರಾದರೂ ಕೇಳಿದರ‍್ಹೆಂಗೆ
ಅಂಬಲಿ ಕೊಡಂತ ಅಂಬ್ರಿಕೊಂತಾರೆ
ಸೊಪ್ಪು ಕೊಡಂತ ತಗಲಿಕೊಂತಾರೆ
ಮಕಾಡೆ ತಾನು ಬಿದ್ದುಕೊಂಡ ಗೌಡ
ನಾಯಿ ನೆಕ್ಕಿದಂಗೆ ನೆಕ್ಕತಾನೆ ಗೌಡ
ಅಂಬಲಿ ಕುಡಿಯೊ ಸಮಯದಲ್ಲಿ
ಅಂಬಲಿಯೊಳಗೆ ನೊಣವೇ ಬಿತ್ತು
ಹಾಳದ ನೊಣವೆ ಎಷ್ಟಂಬಲಿ ಕುಡದೆ
ನನ್ನ ಹೊಟ್ಟೆಗೆ ಸಾಲದೆ ಹೊಯ್ತು
ನೊಣವೆ ಸೀಪಿ ಬಿಸಾಕಿದಾನು
ಅಂತವನಲ್ಲೊ ಮಾರೇಗೌಡ
ಅಂತವನಲ್ಲೊ ಕೋಣಮೇಗೌಡ

ಏಳಲಾರದೆ ಒದ್ದಾಡುತಾನೆ
ವಡದಾರಾವೆ ಬಡ್ಡಂತಲ್ಲೊ
ನೆರಿಗೆ ಉರಿಯ ಬಿಚ್ಚಿಕೊಡ್ಹೆಣ್ಣೆ
ಸೊಂಟಕಾದರೆ ಬಿಗುದನು ಗೌಡ
ಕಯ್ಯಿಡುದಾಗ ಎತ್ತುತಾಳಲ್ಲೆ

ಜಲ್ಲುಪಲ್ಲು ಒಂದು ರುಮಾಲ ಸುತ್ತಿ
ಮೋಟು ಗುದ್ದಲಿ ಹೆಗಲಮ್ಯಾಲೆ ಮಡಗಿ
ಏಳು ಬೆಟ್ಟದ ಸೊಂಪಲಿಗ್ಹೋದ
ಅಲೊಂದು ಜ್ಞಾನ ಮಾಡನು ಗೌಡ

ಇಲ್ಲೀ ನಾನು ಹೊಲಮಾಡಿದರೆ
ಕಂದಾಯ ಇಲ್ಲ ಕಾಣಿಕೆ ಇಲ್ಲ
ಹಿಟ್ಟ ಇಲ್ಲ ಬಿಟ್ಟ ಇಲ್ಲ
ಬೆಳೆದುದ್ದ ಬೆಳದಂಗೆ ತುಂಬಿಕೋಬಮದು

ಮನೆ ಆದರೆ ಬಂದನು ಗೌಡ
ಹನ್ನೆರಡಾರ ಕಟ್ಟಿಕೊಂಡು ಗೌಡ

ಮೂರು ಕಂಡುಗ ಬಿತ್ತೂ ಹೊಲಕೆ
ಅಳತೆ ಮಾಡಿ ಮೂರುಪಡಿ ತಕ್ಕೊ
ಮೂರುಪಡಿ ಜ್ವಾಳ ತಕ್ಕೊಂಡು ಗೌಡ
ಹನ್ನೆರಡಾರು ಹೊಡಕೊಂಡಾನು

ಹೊಲದ್ಹತ್ತರಕೆ ಬಂದಾನು ಗೌಡ
ಕಾಳೆ ಹಿಡಸಿ ಜ್ವಾಳ ಬಿತ್ತುತಾನೆ
ನಗಾರೆ ಹೊಡಸಿ ಸಾಲು ಕೂಡುತಾನೆ
ಮಾರಿಗೊಂದು ಕಾಳ ಚೆಲ್ಲುತಾನೆ ಗೌಡ
ದಟ್ಟವಾಯ್ತುಂತ ಅಯ್ಕೊಂತಾನೆ

ಕೇಳು ಕೇಳು ನೀ ಪರಮೇಶ್ವರನೆ
ಬ್ಯಾಸಿಕಂಬೊ ಬಿಸಲಿನ ವಳಗೆ
ಶಿವರಾತ್ರೆಂಬೊ ಕಾಲದಲ್ಲಿ
ಹಾಳಾದ ಹೊಲಕೆ ಜ್ವಾಳ ಬಿತ್ತಿದೇನು
ಆದದೊ ಕಾಣೆ ಹೋದದೋ ಕಾಣೆ

ಕೇಳೊ ಕೇಳೋ ನೀ ಪರಮೇಶ್ವರನೆ
ನಾಡಿಗಿಲ್ಲದ ಮಳೆಯು ಈಗ
ನನ್ನ ಹೊಲಕ್ಕೆ ಹುಯ್ಯಿಸೊ ಸ್ವಾಮಿ
ಸೀಮೆಗಿಲ್ಲದ ಬೆಳೆಯು ಈಗ
ನನ್ನ ಹೊಲಕ್ಕೆ ಕೊಡಿಸೊ ಗುರುವೆ
ಅರ್ಧ ಕಾಸಿನ ಹರಿಸಾವೆ ಮಾಡುವೆ
ಕೀಲು ಕಾಸಿನ ಮುಡಿಪೇ ಕಟ್ಟುವೆ
ಒಂದೆ ಕಾಸಿನ ಅಕ್ಕಿಯ ತರಸಿ
ಹನ್ನೆರಡೆ ಜನ ಗಣಂಗಳಿಗೆ
ಹಾಗಂತೇಳಿ ಹರಕೆ ಕಟ್ಟಿದ
ಸಂತರ್ಪಣೆ ನಾ ಮಾಡಿಸುವೇನು
ಅಂತಾನೆ ಆಗ ಕೊಣಮೇಗೌಡ
ಹರಕೆ ಕಟ್ಟಿ ಊರಿಗೆ ಬಂದ
ಗೌಡನ ಸತ್ಯ ನೋಡಬೇಕೆಂದು
ಮಾಯದ ಮಳೆಯ ಹುಯ್ಸಿದ ಸ್ವಾಮಿ
ಮಾಯದ ಆರಂಭ ಕೊಟ್ಟನಲ್ಲಯ್ಯ
ತೆನೆ ನೋಡಿದರೆ ಮೂಡೆಗಾತ್ರ
ಕಡ್ಡಿ ನೋಡಿದರೆ ಕಣಕಾಲ ಗಾತ್ರ
ಹುಚ್ಚು ಬೆಳೆ ತಾ ಕೊಟ್ಟನು ಸ್ವಾಮಿ

ಗೌಡ ನೋಡಿ ಏನಂತಾನೆ
ಹೀಗೆ ನನ್ನ ಹೊಲವಿದ್ದಾರೆ
ಹಕ್ಷಿ ಪಕ್ಷಿ ತಿಂದ್ಹೋಗುತಾವೆ
ನೂರು ವರಕ್ಕೆ ಜವಳಿಯ ತರಸಿ
ತೆನೆಗೊಂದು ಕುವಾಲಿ ಹೊಲಿದಾನು ಗೌಡ
ತೆನೆ ತೆನೆಗೆ ತಾ ಕಟ್ಟುತ ಬಂದ

ಅರ‍್ದ ಹೊಲಕೆ ಸಾಲದೆ ಹೊಯ್ತು
ಸಾಲದ ಹೊಲಕೆ ಗುಮ್ಚಿ ಮುಳ್ಳು
ತಂದಾನಲ್ಲೆ ಕೊಣಮೇಗೌಡ
ಸಾಲದ ಹೊಲಕೆ ಸರಿಮಾಡಿದನು
ಹೊಲದ ಮೂರು ಸುತ್ತು ಕಂದುಕ ತಗಸಿ
ಮೂರಾಳುದ್ದ ಮುಳ್ಳು ಬೇಲಿ ಹಾಕಿ
ಕಂದುಕದೊಳಗೆ ಬೆಂಕಿಯ ಕೆಂಡ
ಇರಬಾ ಗಿರಬಾ ಬರುತಾವೆಂದು
ಇರುಬನವಿಡದು ಸಂಕಾಲೆ ಹಾಕಿ
ಹುಲ್ಲೆ ಸಾರಗ ಬರುತಾವೆಂದು
ಸಾರಗನಿಡದು ಸಂಕಾಲೆ ಹಾಕಿ
ಎಂಟಾಳುದ್ದ ಅಟ್ಣೆ ಹಾಕಿ
ಅಟ್ಣೆ ಮ್ಯಾಲೆ ಕೂತುಕಂಡು ಗೌಡ
ಹದ್ದು ಕಾಗೆಯ ಅಟ್ಟುತಲವನೆ
ಕವಣೆ ಕಲ್ಲು ಬೀಸುತಲವನೆ

ಮಾಯದ್ದೊರೆಯು ಶಿವನೇನಂದ
ಮಾಯದ ಆರಂಬ ಕೊಟ್ಟಿದ್ದೀನಿ
ಗೌಡನ ಸತ್ಯ ನೋಡಬೇಕೆಂದು
ಗೌಡನ ಭಕ್ತಿ ಯಾಗಿರುವೋದು
ಮುದಿ ಮುದಿ ಜಂಗುಮನಾದನು ಸ್ವಾಮಿ
ಮುಂಗೈಯೀಗೆ ಜೋಳಿಗೆ ಧರಿಸಿ
ಕಾವಿ ಕಮಂಡಲ ಧರಿಸಿದ ಗುರುವು
ಅಟ್ಣೆ ಹತ್ತಿರಕೆ ಬಂದಾನಯ್ಯ

ಹಾಲು ಸಾಗರೊಂದಾಗಲಿ ಗುರುವೆ
ಮಕ್ಕಳ ಸಂಪತ್ಹೆಚ್ಚಲಿ ಕಂದ
ಬಾಳಾ ದಿವಸದ ಮುತುಕನು ನಾನು
ಬಾಳಾ ಧರ್ಮವೆ ಬರುವುದು ಕಂಡ್ಯ
ಹನ್ನೆರಡೆ ದಿನದಿಂದ ನ್ಹಾರಿಲ್ಲ
ನನಗೊಂದು ತ್ಯನೆ ಕೊಡಪ್ಪ ಮಗನೆ
ಬಾಳ ಧರ‍್ಮವೆ ಬರುವುದು ನಿನಗೆ
ಹೋಗೊ ಹೋಗೊ ನೀ ಹುಚ್ಚು ಜಂಗಮಯ್ಯ
ಹೊಲದಾ ಗೌಡ ಊರಿಗೋಗ್ಯವನೆ
ಅವನ ಮನೇನಾ ಸಂಬಳದಾಳು
ಅವನ ಮನೇನಾ ಜೀತದ ಆಳು
ನನ್ನಾ ಹೊಲವೆ ಆಗಿದ್ದಾರೆ
ಒಂದು ತೆನೆಯ ಕೊಡೋತಾಕ್ಕೆ
ಹತ್ತು ತೆನೆಯ ಕೊಡಂಥ ಗೌಡ
ಅಪ್ಪರಾಣೆ ನಾ ಹೊಲದವನಲ್ಲ
ಊರಿಗಾದರೆ ಹೋಗಪ್ಪ ಶಿವನೆ
ಊರಲ್ಲಾದರೆ ನನ್ನೆಣತವಳೆ
ಊಟ ಮಾಡಿಕೊಂಡು ಹೋಗಪ್ಪ ನೀನು
ಹೆಣ್ತಿ ಅಂದಚಂದ ಹೇಳಿಕೊಟ್ಟೇನು
ಎಣ್ಣೆ ಬೆಣ್ಣೆ ಕಂಡ ತಲೆಯಲ್ಲ
ಅಗಸರ ಮೊಕವೆ ಕಂಡ ಬಟ್ಯಲ್ಲ
ಮೂಗು ನೋಡಿದರೆ ಮುಂಗೈ ಗಾತ್ರ
ತಲೆ ನೋಡಿದರೆ ಗುಂಗುರುದಾಲೆ
ಕ್ವಾರೆ ಹಲ್ಲಿನ ಕೊಡದಾ ಮಾರಿ
ಅಂತಾ ಚೆಲುವೆ ಮನೆಯಲ್ಲವಳೆ
ಊಟವಾದರೆ ಇಕ್ಕುತಾಳೆ ನಿಮಗೆ
ಊಟ ಮಾಡಿಕೊಂಡು ಹೋಗಪ್ಪ ಸ್ವಾಮಿ
ಹಾಗೆ ಆಗಲಿ ಹೇಳಯ್ಯ ಗೌಡ
ಊರಿಗಾದರೆ ಬರುತಾನೆ ಸ್ವಾಮಿ

ಬತ್ತ ಕುಟ್ಟುತಾಳೆ ಹೊಟ್ಟು ಮುಕ್ಕುತಾಳೆ
ನಾಯಿನಂಗೆ ನಳ್ಳಾಲುತಾಳೆ
ಕೋಳಿಯಂಗೆ ಕೊರಗುಡುತಾಳೆ
ಅಂತ ಸಮಗೆ ಶಿವನೇ ಬಂದ
ಹಾಲು ಸಾಗರೊಂದಾಗಲಿ ಮಗಳೆ
ಮಕ್ಕಳ ಸಂಪತ್ ಹೆಚ್ಚಲಿ ಕಂದ
ಬಾಳಾ ಹಸುವು ಆಯ್ತದೆ ಕಂಡ್ಯ
ಊಟಕಾದರೆ ಇಕ್ಕೇ ಮಗಳೆ
ಹೋಗೊ ಹೋಗೊ ನೀ ಹುಚ್ಚು ಜಂಗುಮಯ್ಯ
ಮನೆಯ ಗರತಿ ಸಂತೆಗ್ಹೋಗವಳೆ
ಅವಳ ಮನೇನಾ ಸಂಬಳದಾಳು
ಅಪ್ಪರಾಣೆ ನಾ ಮನೆಯವಳಲ್ಲ
ದೇವರಾಣೆ ನಾ ಮನೆಯವಳಲ್ಲ

ಹೊಲತಾಕ್ಕೆ ನೀ ಹೊಗಪ್ಪ ಶಿವನೆ
ಅಲ್ಲಿ ನಮ್ಮ ಯಜಮಾನ್ರವರೆ
ಊಟಕೆ ಒಂದು ತೆನೆಯಾನಾದ್ರೆ
ಜ್ವಾಳದ ತೆನೆಯ ಕೊಡುತಾರವರು
ಹಾಗೇ ಆಗಲಿ ಹೇಳಮ್ಮ ಮಗಳೆ
ಗೌಡನ ಸತ್ಯ ಹೊಲದಲಿ ನೋಡಿದೆ
ಹೆಣ್ತಿ ಸತ್ಯ ಮನೆಯಲಿ ನೋಡಿದೆ
ಇಬ್ಬರ ಜ್ಞಾನ ಒಂದೇ ಜ್ಞಾನ
ಇಬ್ಬರ ದೃಢವು ಒಂದೇ ದೃಢವು
ಹಿಂತಿರುಗಿ ತಾ ಬರುತಾನೆ ಸ್ವಾಮಿ

ಶಿವನು ಬರೋದೆ ಗೌಡ ನೋಡಿ
ಆರಾಳುದ್ದ ಅಟ್ಣೆ ನೆಗೆದ
ಎಂಟಾಳುದ್ದ ಕಂದುಕ ನೆಗದ
ಗಿಡಬಿದ್ದು ಗೌಡ ಓಡ್ಹೋಗುತಾನೆ
ಎಲ್ಲಿ ಹೋದಿಯೊ ಮಾರೇಗೌಡ
ಎಲ್ಲಿ ಹೋದಿಯೊ ಕೋಣಮೇಗೌಡ

ಅರ‍್ದ ದಾರಿಗೆ ಕರಕೊಂಡು ಬಂದ
ಅಲ್ಲೊಂದು ಜ್ಞಾನ ತಿಳುದನು ಗೌಡ
ಇಬ್ಬರು ನಾವು ವೊಂದಿಗ್ಹೋದಾರೆ
ಮನೆಯ ಗರತಿ ವಳ್ಳೆವಳಲ್ಲ
ಮುಂದು ಮುಂದುಗಡೆ ನಾನ್ಹೋಗುತಿನಿ
ಹಿಂದ್ಹಿಂದುಗಡೆ ಬಾರಪ್ಪ ಶಿವನೆ
ಊಟ ಮಾಡೊ ಸಮಯದಲ್ಲಿ
ನೀನು ಆದರೆ ಬಾರಪ್ಪ ಶಿವನೆ
ಊಟಕಾದರೆ ಇಕ್ಕಿಸೇನು ನಾನು
ಹಾಗೇ ಆಗಲಿ ನಡಿಯಪ್ಪ ಗೌಡ

ಮುಂದು ಮುಂದುಗಡೆ ಬಂದನು ಗೌಡ
ಗಂಡ ಬರುವುದೆ ಗೌಡಸಾನಿ ನೋಡಿ
ಗಂಡನಾದರೆ ಹಸ್ತವನಂದು
ಊಟವಾದರೆ ಮಾಡಬನ್ನಿ ಗೌಡ್ರೆ
ನಿನ್ನ ಊಟದ ಮನೆ ಹಾಳಾಗಿ ಹೋಗ
ನೀರಿನ ಮಾನೆ ನಿಸಾಂತ್ರವಾಗ
ಬಂಡ ಜಂಗಮ ಬಂದವನಲ್ಲೆ
ಮುಂಡಿ ಜಂಗಮ ಬಂದವನಲ್ಲೆ
ಎಲ್ಲಿ ಹೊಕ್ಕರು ಬಿಡನಲ್ಲೆ ಮಾರಿ
ಅದಕೊಂದು ಬುದ್ಧಿ ಹೇಳೆನು ಕೇಳು
ಸತ್ತವನಂಗೆ ಬಿದ್ದುಕೊಂತೀನಿ
ಸ್ಯಾಪೆಲಿ ಸುತ್ತಿ ಕೊಟಕೆಲ್ಹಾಕು
ಬೆಲ್ಲದ ನೀರ ಸಿಮುಕ್ಸೆ ಮಾರಿ
ಕಂಡುಗ ನೊಣವೆ ಮುತ್ತಿಕೊಂಡಾವೆ
ಕಣ್ಣಿಗೆ ಕಾರದ್ಹುಡಿ ಚೆಲ್ಲಿಕೊಳಮ್ಮಿ
ಗಂಡ ಮಕ್ಕಳು ಸತ್ತು ಬಿದ್ದವ್ರೆ
ಬಾಯಿ ಬಾಯಿನೆ ಬಡಕೊಳ್ಳಮ್ಮಿ
ಶಿವನು ನೋಡಿ ಹಿಂದಕ್ಹೊಯ್‌ತಾನೆ
ಆಮೇಲೆ ನಾವು ಊಟಮಾಡೋಣ

ಹಾಗೆ ಆಗಲಿ ಹೇಳಿರಿ ಗೌಡ್ರೆ
ಸತ್ತವನಂಗೆ ಬಿದ್ದುಕೊಂಡಾನು
ಸ್ಯಾಪೆಲಿಸುತ್ತಿ ಮನುಗ್ಸಾಳಾಗ
ಬೆಲ್ಲದ ನೀರು ಸಿಮುಕ್ಸಾಳು ಮಾರಿ
ಗಂಡ ಮಕ್ಕಳು ಸತ್ತಾರೆಂದು
ಬಾಯಿ ಬಾಯಿನೆ ಬಡಕೊಂತಾಳೆ
ತಲೆ ತಲೆಯಾನೆ ಚೆಚ್ಚಿಕೊಂತಾಳೆ
ಅಂತಾ ಸಮಗೆ ಶಿವನೆ ಬಂದ

ಬಾಳ ಧರ‍್ಮವೆ ಬರುವುದು ಮಗಳೆ
ಹಾಲು ಸಾಗರೊಂದಾಗಲಿ ಕಂದ
ಊಟಕಾದರೆ ಇಕಸಪ್ಪ ಗೌಡ
ಹೋಗೊ ಹೋಗೊ ಹುಚ್ಚು ಜಂಗುಮಯ್ಯ
ಗಂಡ ಮಕ್ಕಳು ಸತ್ತು ಬಿದ್ದವ್ರೆ
ನಿಮ್ಮ ಸುಮಾನ ನಿಮಗಾಗ್ಯದೆ
ನಮ್ಮ ಕಷ್ಟವೆ ನಮಗಾಗ್ಯದೆ
ಹೆಣ್ಣು ಮಗಳು ನೀನೆಷ್ಟು ಹೆದರಿದೆ
ಅದಕೊಂದು ಬುದ್ಧಿ ಹೇಳೆನು ಕೇಳು
ಮೂರು ಮಂಕರಿಯ ಬೆಣ್ಣಿ ತತ್ತಾರೆ
ನಡುಮನೆಯಲ್ಲಿ ಒಟ್ಟೀ ಮಾರಿ
ಮೂರು ಬರಗೂಳ ತಂದುಕೊಳಮ್ಮಿ
ಮೂರು ಬರಗೂಳ ಕೆಂಪಗೆ ಕಾಸಿ
ಜನಿವಾರ‍್ದ ಬರೆ ತಗುದಾನೆ ಸ್ವಾಮಿ

ಇದಕಂಜಿಕೊಂಡು ನಾ ಮಾತಾಡಿದಾರೆ
ಜ್ವಾಳದ ತೆನೆ ಕೊಡಬೇಕಾಯ್ತು
ಅದಕಂಜಿಕೊಂಡು ಗೌಡ ಮಾತಾಡನಿಲ್ಲ
ಕಾಮ ಗುದ್ದಲಿ ಕೆಂಪಗೆ ಕಾಸಿ
ಮೂಗಿನ ಮ್ಯಾಲೆ ಮಡಗಿದ ಸ್ವಾಮಿ
ಮೂಗಂಬೋದೆ ತೃಣವೇ ಇಲ್ಲ

ಇದಕಂಜಿಕೊಂಡು ನಾ ಮಾತಾಡಿದಾರೆ
ಜ್ವಾಳದ ತೆನೆ ಕೊಡಬೇಕಾಯ್ತು
ಅದಕಂಜಿಕೊಂಡು ಗೌಡ ಮಾತಾಡನಿಲ್ಲ

ಆನೆಕಾಲಿಗೆ ಜುಟ್ಟು ಕಟ್ಟಿ
ಊರು ಮೂರು ಸುತ್ತು ಎಳಸಿದ ಸ್ವಾಮಿ
ಮುಳ್ಳಿಗಿಷ್ಟುವೊ ಕಂಡವಾಯಿತು
ಕಲ್ಲಿಗಿಷ್ಟುವೊ ರಕ್ತವಾಯಿತು
ಅದಕಂಜಿಕೊಂಡು ಗೌಡ ಮಾತಾಡನಿಲ್ಲ

ಮಟ್ಟಾದುದ್ದ ಗುಂಡಿಯ ತಗಸಿ
ಗುಂಡಿ ಒಳಕೆ ಗೌಡನ ನಿಲಿಸಿ
ಎತ್ತಲಾರದ ಪಾರೆ ಕಲ್ಲು
ಎತ್ತಿ ತಲೆಮ್ಯಾಲೆ ಇಟ್ಟುಕೊಂಡ ಶಿವನು
ಮಾತಾಡುತೀಯೊ ತಲೆಮ್ಯಾಲ್ಹಾಕಲೊ

ಕಣ್ಣು ಬುಟ್ಟು ತಾ ನೋಡಿದ ಗೌಡ
ತಲೆಮ್ಯಾಲ್ಹಾಕಿದರೆ ಸತ್ತೊಯಿತೀನಿ
ಜ್ವಾಳದ ತೆನೆ ಕೇಳದೆ ಹೋದರೆ
ನಾನು ಆದರೆ ಮಾತಾಡುತೀನಿ
ನಿನ್ನ ಜ್ವಾಳದ ತೆನೆ ಹಾಳಾಗಿ ಹೋಗ
ನಿನ್ನ ಜ್ವಾಳದ ತೆನೆ ಯಾರಿಗೆ ಬೇಕು
ಪ್ರಪಂಚದಲ್ಲಿ ನೀನಿರಬ್ಯಾಡ
ನಿನ್ನ ನಡತೆಯ ಕಲಿಯುತ್ತಾರೆ

ಮೂರು ದಿವಸದ ಮಧ್ಯಾನಕ್ಕೆ
ಕೈಲಾಸಕ್ಕೆ ಬಾರೊ ಗೌಡ