ಓರಂಗಲ್ಲ ರಾಯನೆಲ್ಲಾ ಶೀಲವಂತ
ಭಾಳ ಶೀಲವಂತನ ಎಲ್ಲಾ ಪಂತಗಾರನ ಪಲ್ಲ
ಅಂಥವನ ಮನಿಗೆ ಹ್ವಾದಳೆಲ್ಲ
ಜೋಗ ಹೇಳಿ ನಿಂತಾಳ
ಭಿಕ್ಷಾನಾದಾರನೀಡೋ ಮಗನ
ದಾನ ಆದರ ಮಾಡೊ ೧
ಹೆಣ್ಣೆಂಬ ದೇವತೆಗೋಳೂ
ನಮ್ಮಲ್ಲಿಲ್ಲ ಹೋಗೆಂದ
ಭಂಡಾರ ಕೊಟ್ರ ನಾವು ಇಂದು
ಧರಸೋದಿಲ್ಲಾ ಹೋಗೆಂದಾ ೨
ಅಂಗಳದಾಗ ನಿಂತಾಳೆಲ್ಲ
ಅವನಂತರಂಗ ತಿಳಿದಾಳೆಲ್ಲ
ಬಾಗಲ್ದಾಗ ಕುಂತಾಳೆಲ್ಲ
ಭಯಭಕ್ತಿ ನೋಡ್ಯಾಳೆಲ್ಲ ೩
ಮನಿಯ ಒಳಗ ಹ್ವಾದಾಳೆಲ್ಲ
ಮನದಾನ ಮನಸ ನೋಡಿದಾಳ
ಎಂಟ ಎತ್ತಿನ ಬಾರಕೋಲ
ಸುತ್ತಿ ಸುತ್ತಿ ಬಡದಾನೆಲ್ಲ ೪
ಬೆಟ್ಟಾನಾದರ ಸೇರ್ಯಾಳೆಲ್ಲ
ಪ್ಯಾಟಿಗಾರ ಗೌಡನೆಲ್ಲ
ಪೆಟ್ಟನಾದರ ಕಾಸ್ಯಾನ
ಓರಂಗಲ್ಲ ರಾಯಂದೆಲ್ಲ ೫
ಬತವ ನೆನ್ಯಾಂಗ ಅಳದಾಳ
ಸಂದಿಗೆ ಸಾವಿರ ಅಂಗನೆಲ್ಲ
ನೀರಾಗ್ಹಾಕ್ಸಿ ಬಿಟ್ಟಾಳೆಲ್ಲ
ನೋಡುವಂಥ ಚೇಜಿ ಎಲ್ಲ ೬
ಕೇಡು ಮಾಡುತ ಬಂದಾಳ
ಕುಂದ್ರುವಂಥ ಗಾದಿನೆಲ್ಲ
ಹಾಳುಮಾಡುತ ಬಂದಾಳ
ಓರಂಗಲ್ಲ ರಾಯಗೆಲ್ಲಾ ಬ್ಯಾನಿ ಎಂಥಾದ್ಹಾಕ್ಯಾಳ ೭
ತೆಲಿಯಾನ ಬ್ಯಾನಿ ಘನವಾದವೆಲ್ಲ
ತೆಲಿಬ್ಯಾನಿ ತಗಿ ನನ ಜಗದಂಬಾ
ತೆಲಿತುಂಬ ಕುಂದಲ ಕಾಡೀನಂದಾನ
ಎಲ್ಲಾ ಹಿರಿಯ ಜಗ ಹೊತ್ತೇನಂದಾನ ೮
ಹಣಿಯಾನಬ್ಯಾನಿ ಘನವಾದಾವೆಂದಾನ
ಹಣಿಯಾನ ಬ್ಯಾನಿ ತಗಿ ನನ ಜಗದಂಬಾ
ಭಂಡಾರ ಬಟ್ಟ ಧರಿಸೇನೆಂದಾನ
ಕುಂಕುಮ ಬಟ್ಟ ಇಟ್ಟೇನೆಂದಾನ ೯
ಕಣ್ಣಾನ ಬ್ಯಾನಿ ಘನವಾದಾವೆಲ್ಲ
ಕಣ್ಣಾನ ಬ್ಯಾನಿ ತಗಿ ನನ್ ಜಗದಂಬಾ
ಕಣಬಟ್ಟಾದರ ಮಾಡಿಸೇನಂದಾನ
ಕಣ್ಣ ತೆರದು ನೋಡೇನಂದಾನ ೧೦
ಮೂಗಿನಾಗಿನ ಬ್ಯಾನಿ ಘನವಾದಾವೆಲ್ಲ
ಮೂಗಿನಾನ ಬ್ಯಾನಿ ತಗಿ ನನ ಜಗದಂಬಾ
ಮೂಗುತ್ಯಾದರ ಮಾಡಸೇನಂದಾನ
ಮ್ಯಾಲ ಸರಜಾನತ್ತ ಇಟ್ಟೇನಂದಾನ ೧೧
ಬಾಯಾನ ಬ್ಯಾನಿ ಘನವಾದಾವೆಲ್ಲ
ಬಾಯಾನ ಬ್ಯಾನಿ ತಗಿ ನನ ರೇಣುಕಾ
ಬಾಯ ತೆರದು ಹಾಡೇನಂದಾನ
ಉರಿಯ ಪಂಜ ನುಂಗೇನಂದಾನ ೧೨
ಕಿವಿಯಾನ ಬ್ಯಾನಿ ಘನವಾದಾವೆಲ್ಲ
ಕಿವಿಯಾನ ಬ್ಯಾನಿ ತಗಿ ನನ ಕೊಳ್ಳದಮ್ಮ
ವಾಲಿ ಬುಗುಡಿ ಮಾಡಿಸೇನಂದಾನ
ಹೂವ ಬುಗುಡಿ ಇಟ್ಟೇನೆಂದಾನ ೧೩
ಕೊರಳಾನ ಬ್ಯಾನಿ ಘನವಾದಾವೆಲ್ಲ
ಕೊರಳಾನ ಬ್ಯಾನಿ ತಗಿ ನನ್ನ ಎಲ್ಲಮ್ಮಾ
ದರಸಿನ ಸರಾ ಕಟ್ಟೇನಂದಾನ
ಕವಡಿಸರಾ ಇಟ್ಟೇನಂದಾನ ೧೪
ತೋಳಿನ ಬ್ಯಾನಿ ಘನವಾದಾವೆಲ್ಲ
ತೋಳಿನ ಬ್ಯಾನಿ ತಗಿ ನನ ಕೊಳದಮ್ಮ
ರೇಶಿಮೆ ಕುಬಸಾ ತೊಟ್ಟೇನಂದಾನ
ಬಾಜೂ ಬಂದ ಇಟ್ಟೇನಂದಾನ ೧೫
ಕೈಯಾನ ಬ್ಯಾನಿ ಘನವಾದವೆಲ್ಲ
ಕೈಯಾನ ಬ್ಯಾನಿ ತಗಿ ನನ ಜಗದಂಬಾ
ರೇಸ್ಮಿ ಬಳಿಯ ಇಟ್ಟೇನಂದಾನ
ಕಾಜಿನ ಬಳಿಯ ಹಾಕೇನಂದಾನ ೧೬
ನಡದಾನ ಬ್ಯಾನಿ ಘನವಾದಾವೆಲ್ಲ
ನಡದಾನ ಬ್ಯಾನಿ ತಗಿ ನನ ಜಗದಂಬಾ
ಸುರತೀಸಾಡೀ ಉಟ್ಟೇನಂದಾನ
ಕೀಲೀ ಡಾಬ ಇಟ್ಟೇನಂದಾನ ೧೭
ಕಾಲಾನ ಬ್ಯಾನಿ ಘನವಾದವೆಲ್ಲ
ಕಾಲಾನ ಬ್ಯಾನಿ ತಗಿ ನನ ಜಗದಂಬಾ
ಗೆಜ್ಜಿನಾದರ ಕಟ್ಟೇನಂದಾನ
ದಂಗಾ ದಿಂಗಾ ಕುಣಿದೇನಂದಾನ ೧೮
ಪಾದಾನ ಬ್ಯಾನಿ ಘನವಾದವೆಲ್ಲ
ಪಾದಾನ ಬ್ಯಾನಿ ತಗಿ ನನ ಎಲ್ಲಮ್ಮ
ಮುಳ್ಳಾವಿಗ್ಯಾದರ ಮಾಡ್ಸೇನಂದಾನ
ಮುಳ್ಳಾವಿಗ್ಯಾದರ ಮೆಟ್ಟೇನಂದಾನ ೧೯
ಬೆರಳಾನ ಬ್ಯಾನಿ ಘನವಾದಾವೆಲ್ಲ
ಬೆರಳಾನ ಬ್ಯಾನಿ ತಗಿ ನನ ಕೊಳದಮ್ಮ
ಕಾಲುಂಗ್ರಜೋಡ ಇಟ್ಟೇನಂದಾನ
ಮೀನ ಪಿಲ್ಲ್ಯಾದರ ಧರಿಸೇನಂದಾನ ೨೦
ಅಂಗಾಲ ಬ್ಯಾನಿ ಘನವಾದಾವೆಲ್ಲ
ಅಂಗಾಲ ಬ್ಯಾನಿ ತಗಿ ನನ ಜಗದಂಬಾ
ಗಿರಿವಾಸಾದರ ಏರೇನಂದಾನ
ಪೌಳಿ ಮ್ಯಾಲ ಕುಣಿದೇನಂದಾನ ೨೧
Leave A Comment