ಎಲ್ಲಿಗೆ ಹೋಗಿದ್ದಿ ನನ ಗೆಜ್ಜಿ ಕಾಲ ರಾಮಣ್ಣ
ಎಲ್ಲಿಗೆ ಹೋಗಿದ್ದಿ ನನ ಚಿಣಿಕೋಲ ರಾಮಣ್ಣ
ಹಾಲ ಕುಡಿಬಾರ ರಾಮಣ್ಣ
ಬಾ ನನ್ನ ರಾಮಣ್ಣ ಹಾಲಕುಡಿ
ನಿನ್ನಹಾಲು ನನಗ ಇಸ ಆದಾವ ಎಲ್ಲಮ್ಮ
ನನ್ನ ಒಬ್ನ ಹಡದಂಗ ಇನ್ನೊಬ್ನ ಹಡಿಯವ್ವ
ತಂಗಿ ತಮ್ಮಂದ ಕರಿತಿನೇ ಎಲ್ಲಮ್ಮ
ನಿನ್ನೊಬ್ಬ ಹಡದಂಗ ಇನ್ನೊಬ್ಬನ ಹಡಿಯಾಖ
ಬಾದಿ ಹುಲ್ಲುಗಡ್ಡಿಯಲ್ಲ ಜಿಗಿಯಾಕ ನನ ರಾಮಣ್ಣ
ಹಳ್ಳಕ ಹೋಗಿದ್ದೆ ಹಳಮುಳ್ಳ ತುಳಿದಿದ್ದೆ
ನಾ ಹರಳಸೋಂಕಿ ನಿನ್ನ ಹಡದಿನೀ ರಾಮಣ್ಣ
ತೋಟದಾಗ ಇರುವೆ ತೋಟಗಾರನ ತೋರವ್ವ
ಅವನ ಅಪ್ಪ ಎಂದು ಕರೆದೆನು
ಬಾಳಿ ಹಣ್ಣಿನಂಗ ಬಾಗಿ ಬಂದಾವ ಮಲಿಯು
ಬಾಯಲಿ ಹಾಲು ಸುರಿದಾವ ರಾಮಣ್ಣ
ಬಾಯಲಿ ಹಾಲು ಸುರಿದಾವ ನಿನಗ
ನಿನ್ನ ಹಾಲು ಸುರಿದರ ನನಗೆ ಇಸವಾತ ಎಲ್ಲಮ್ಮ
ಅರಿಸಿಣ ಹಚ್ಚಲಲಿಲ್ಲ ಸರಸಿನಾ ಕುಂತಿಲ್ಲ
ಬೆರಿಸಿ ಬಿಳಿಯಲಿ ಮೆಲಿದಿಲ್ಲ
ನಿನ್ನ ಹಾಲು ಕುಡಿಯದ ಇಂದಿಗೆ ಹನ್ನೊಂದ ವರ್ಷ
ನಿನ ಹಾಲು ನನಗ ಇಸವಾತ ಎಲ್ಲಮ್ಮ
ನಿಂಬಿಹಣ್ಣಿನಂಗ ತುಂಬಿ ಬಂದಾವ ಮಲಿಯು
ಬೆನ್ನಿಲೆ ಹಾಲು ಸುರಿದಾವ
ತಂದೆ ನುಂಗಿದ ಹುಲಿ ಮ್ಯಾಲೈತಿ ಕೆಳಗೈತಿ
ಶಿರನೋಡಿ ರುಂಡ ಹೊಡಿಸ್ಯಾಳ ಎಲ್ಲಮ್ಮ
ರಂಡಿ ಮುಂಡಿ ಮಗ ಪುಂಡ ಪರಸುರಾಮ
ನನ ತಂದೆ ತೋರೆಂದು ಅಳತಾನ
ತಂದೆ ನೀನು ತೋರೆಂದು ಅಳತಾನ ಮುನ್ನೆಸರು
ರುಂಡಕ ಬಳಿಯಾ ಒಡಿಸ್ಯಾನ
ನಾನೀಗ ತಾಯಲ್ಲ ನೀ ನನಗ ಮಗನಲ್ಲ
ನಿನ ಸಲ್ಲ ಬ್ಯಾಡ ರಾಮಣ್ಣ
ಎಲ್ಲಿಗೆ ಹೋಗಿದ್ದಿ ನನ ಗೆಜ್ಜಿ ಕಾಲ ರಾಮಣ್ಣ
ಎಲ್ಲಿಗೆ ಹೋಗಿದ್ದಿ ನನ ಚಿಣಿಕೋಲ ರಾಮಣ್ಣ
ಮಲಿಕುಡಿಬಾರ ರಾಮಣ್ಣ
ಅರಸನ ಗುರುತು ನನಗಿಲ್ಲ ರಾಮಣ್ಣ
ಗಂಡ ಸತ್ತವ್ವಗ ಗಂದ ಕುಂಕುಮಯಾಕ
ಗಂಜಿ ಮೊರಂಬು ಬಳಿಯಾಕಮ್ಮ
ಸಿರಸಂಗಿನಾಡ ಬಳಿಯಾಕ ಎಲ್ಲಮ್ಮ
ಗಂಡನ್ನ ತೋರಂದರ ಸತ್ತಾಂಗ ಬಿದ್ದಾಳ
ದತ್ತೂರಿ ರಂಡಿ ಹೊಯಿಮಾಲಿ ರಂಡಿ ಎಲ್ಲಮ್ಮ
ಗುಡ್ಡಕ್ಕೆ ಹೋಗಿದ್ದೆ ಗುಣಕಲ್ಲ ತುಳಿದಿದ್ದೆ
ಗುಡಸೋಕಿ ನಿನ್ನ ಹಡದಿನ ರಾಮಣ್ಣ
ಗುಡದಾಗಿರುವ ಒಡ್ಡನ್ನ ತೋರವ್ವ
ಅವನ ಅಪ್ಪನೆಂದು ಕರೆದೇನು
ಹಂದರ ಹಾಕಲಿಲ್ಲ ನಂದಿಯ ಬರಿಲಿಲ್ಲ
ಗಂಡನ ಗುರುತು ನನಗಿಲ್ಲ ರಾಮಣ್ಣ
ಹಾಸಿಗೆ ಹಾಸಲಿಲ್ಲ ಹೇಸಿಗಿಯಾಗ ನಿಲ್ಲಿಲ್ಲ
ಸೂತಕ ಇಲ್ಲದೆ ನಿನ್ನ ಹಡದಿನಿ ರಾಮಣ್ಣ
ನನ್ನ ಒಬ್ಬನ್ನ ಹಡದಂಗ ಇನ್ನೊಬ್ಬನ್ನ ಹಡಿಯವ್ವ
ನಾನು ತಂಗಿ ತಮ್ನಂತ ಕರೆದೇನ ಎಲ್ಲಮ್ಮಾ
ನಿನ್ನೊಬ್ಬನ ಹಡದಂಗ ಇನ್ನೊಬ್ಬನ ಹಡೆಯಾಕ
ಬಾದಿ ಹುಲ್ಲುಗಡ್ಡೆಲ್ಲೊ ಚಿಗಿಯಾಕ
ಎಲ್ಲಿಗೆ ಹೋಗಿದ್ದಿ ನನ ಜುಲುಮೆ ರಾಮಣ್ಣ
ಬಾ ನನ ಮಗನೇ ಮಲಿಕುಡಿ ರಾಮಣ್ಣ