ಕಾಶಿಪುರಿಯೊ ಪಟ್ಟಣದಲ್ಲಿ
ನೀಟುಗಾರ ಮಾರೇಗೌಡ
ಮಾರೇಗೌಡ್ನ ಮನೆಯೆಂಬೋದು
ಹ್ಯಾಗಿರುವೋದು ಕಂಡಿಲ್ಲ ನೀವು
ಸಾಲಿಗೆ ಸಾವಿರ ಕಂಬದ ಮನೆ
ಮೂಲೆ ಮುನ್ನೂರು ಕಂಬದ ಮನೆ
ದೊಡ್ಡ ಪಡಸಾಲೆ ಮನೆಯೇ ಉಂಟು
ಮಾಡಿಯ ಮೇಲೆ ಮಾಡಿ ಉಂಟು
ಚಿನ್ನದ ಕಳಸ ಬೆಳ್ಳಿಯ ಕಳಸ
ಮತ್ತೆ ಕಳಸವ ಎತ್ತಿದ ಗೌಡ
ಎಷ್ಟು ಪುಣ್ಯವಂತ ಮಾರೇಗೌಡ

ಹೆಂಡ್ತಿಗೆ ಬುದ್ಧಿಯ ಹೇಳುತಲವ್ನೆ
ಗಂಡು ಮಕ್ಕಳ ಹನ್ನೆರಡು ಮಂದಿ
ಹೆಣ್ಣು ಮಕ್ಕಳು ಹನ್ನೆರಡು ಮಂದಿ
ಕೇಳು ಕೇಳೆ ಇಕ್ಕದ ಮಾರಿ
ನನ್ನ ಮಾತ ನೀ ಕೇಳಬೇಕು
ಊರ ಒಳಗೆ ನಮ್ಮ ಮನೆಯೇ ಬೇಡ
ಊರ ಹತ್ತಿರ ನಮಗೆ ಮನೆಯೇ ಬೇಡ
ಊರ ಒಳಗೆ ನಮಗೆ ಮನೆಯಿದ್ರೆ ಹೆಂಡ್ತಿ
ಹರುಕರು ತಿರುಕರು ಬರುತರೆ ಹೆಣ್ಣೆ
ಪಡಿಯೊ ಪಾವೊ ನಾವ್ಕೊಡಬೇಕು
ಕೊಟ್ಟರೆ ನಮಗೆ ಫಲವೇನಾಯ್ತು
ಊರ ಹತ್ತಿರ ನಮ್ಮ ಹೊಲವಿದರೆ
ಕಂದಾಯ ಕಾಣ್ಕಿ ನಾವ್ಕಟ್ಟಬೇಕು
ಊರೋರ ದನ ಹೊಲ ಮೆಯ್ಯತಾವೆ
ಊರ ಹತ್ತಿರ ಹೊಲವೆ ಬೇಡ
ಊರ ಹತ್ತಿರ ಹೊಲವೆ ಬೇಡ
ಊರೊಳಗೆ ಮನೆಯೇ ಬೇಡ

ಏಳು ಬೆಟ್ಟದ ಸೊಂಪಲ ನಡುವೆ
ತಕ್ಕಲ ಕಡಿದು ನಾವು ಹೊಲ ಮಾಡೋಣ
ತಕ್ಕಲ ಕಡಿದು ನಾವು ಹೋಲ ಮಾಡೋಣ
ಅಲ್ಲಿ ನಾವೊಂದು ಮನೆಯ ಕಟ್ಟಿಸೋಣ
ಅಲ್ಲೇ ವಾಸವ ನಾವ್ ಮಾಡೋಣ
ಗೌಡನ ಮಾತ ಮೀರೋ ಹೆಂಡತಲ್ಲ
ಹೆಂಡತಿ ಮಾತ ಮೀರೋ ಗಂಡನಲ್ಲ
ಏಳು ಬೆಟ್ಟದ ಸೊಂಪಲ್ಲಿಗೋದ
ಹನ್ನೆರಡು ಹರಿದಾರಿ ಗಿಡವನ್ನೆ ಕಡಿದ
ಹನ್ನೆರಡು ಹರಿದಾರಿ ಗಿಡವನ್ನೆ ಕಡಿದು
ಆರು ಹರಿದಾರಿ ಹೊಲವ ಮಾಡಿಸವ್ನೆ
ಅಲ್ಲೆ ಒಂದು ಮನೆ ಕಟ್ಟಿಸವ್ನೆ
ಹೆಂಡತಿಗೇನಂತ ಹೇಳುತಾನಾವಾಗ
ಕೇಳು ಕೇಳೆ ಇಕ್ಕದ ಮಾರಿ
ನನ್ನ ಮಾತ ನೀ ಕೇಳಬೇಕು
ಮೂರು ವರ್ಷದ ಮುಗ್ಗಿದ ಜೋಳ
ಆರು ವರುಷದ ಬುರುಡೆಯ ರಾಗಿ
ಅಳೆದು ಮೂರು ಪಾವ ತಕ್ಕೊಳ್ಳೆ ಗರತಿ
ಮಾಡಿಯ ಕಂಡ್ಯ ಕೇರಿಯ ಕಂಡ್ಯ
ಮಾಡಿದರೆ ಮಣ್ಣೋಗುತೈತೆ
ಕೇರಿದರೆ ಕುಸುಗೋಗುತೈತೆ
ಹಾಗೇ ಬಿಸೇ ಹಂಬಲಿ ಕಾಸೆ
ಗುಡಾಣದಂಬಲಿ ಕಾಸೇ ಗರತಿ
ಮನೆ ಹಿಂದಲ ಹೊಲಕೆ ನೀ ಹೋಗೇ
ಮೂರುಮಂಕರಿ ಮುದಣ್ಣೆ ಸೊಪ್ಪ
ತಕ್ಕೊಂಡದರೆ ಬಾರಲ ಗರತಿ
ಸೊಪ್ಪು ಗಿಪ್ಪು ನೀ ಸೊಸಲಿಬೇಡ
ಸೊಪ್ಪಿನ ಹುಳವನೆ ತೆಗಿಯಲಿಬೇಡ
ಸಪ್ಪೆ ಸೊಪ್ಪ ಬೇಸ್ಬೇಕು ಕಂಡ್ಯ
ಉಪ್ಪಿಗೆ ಕಾಸಕೊಡು ಗಂಡನಲ್ಲ
ನನ್ನ ಮಾತ ಮೀರಿ ಉಪ್ಪ ಹಾಕಿದರೆ
ನಿನ್ನ ಸೊಂಟವ ನಾ ಮುರಿತೀನಿ
ಹಜಾಮರಣ್ಣನ ಕರಸೇನು ಕಂಡ್ಯ
ತಲೆ ಮೂರು ಪಟ್ಟೆ ತೆಗಸೇನು ಕಂಡ್ಯ
ಸುಣ್ಣದ ಪಟ್ಟೆಯ ಬಳಿಸೇನು ಕಂಡ್ಯ
ಕತ್ತೆ ಮೇಲೆ ನಿನ್ನ ಕುಂಡ್ರುಸೇನು ಕಂಡ್ಯ
ಹಳೇ ಮೊರವ ಛತ್ರಿಯ ಹಿಡಿಸೆ
ಊರು ಮೂರು ಸುತ್ತು ಮೆರಸೇನು ಕಂಡ್ಯ
ಇಷ್ಟು ಬುದ್ಧಿಯ ಹೇಳಿ ಕೊಟ್ಟವ್ನೆ
ಗಂಡನಾದ ಮಾರೇಗೌಡ
ಕೇಳು ಕೇಳೇ ಇಕ್ಕದ ಮಾರಿ
ನನ್ನ ಮಾತ ಕೇಳೆ ನೀ ಗರತಿ
ಕಡಿಯೊ ನಾಯಿ ಬಾಕಲಿಗೆ ಕಟ್ಟು
ಹಾಯೋ ಹಸವ ಬಾಕ್ಲಲಿ ಕಟ್ಟು
ಅಷ್ಟು ಮೀರಿ ನಮ್ಮನೆಗೆ ಬಂದ್ರೆ
ಯಾರಾದರು ಭಿಕ್ಷಕೆ ಬಂದೆ
ಕೊಡ್ಲಿ ತಕ್ಕಂಡು ಓಡಿಸ್ಕೊಂಡೋಗೆ
ದೆವ್ವ ಬಂತಂದು ಓಡೋಗುತಾರೆ
ಇಷ್ಟೊಂದು ಬುದ್ಧಿ ಮಾತ ಹೇಳಿ ಕೊಡುತಾನೆ
ತನ್ನ ಹೆಂಡತಿ ಇಕ್ಕದ ಮಾರಿಗೆ
ಬ್ಯಾಸಿಗೆಂಬೊ ಬಿಸಿಲಲಿ ಗೌಡ
ಹನ್ನೆರಡು ಆರ ಕಟ್ಟಿಸ್ಯಾನೆ ಗೌಡ
ಹನ್ನೆರಡು ಆರ ಕಟ್ಟಿಸ್ಯಾನೆ ಗೌಡ
ಮುಂದಲೇರಿಗೆ ಚಿನ್ನದ ನೊಗವು
ಹಿಂದಲೇರಿಗೆ ಬೆಳ್ಳಿಯ ನೊಗವು
ಹನ್ನೆರಡು ಆರ ಕಟ್ಟಿಸ್ಯಾನೆ ಗೌಡ
ಬ್ಯಾಸಿಗೆಂಬೊ ಬಿಸಿಲಲಿ ಗೌಡ
ಆಳದ ಮೂರುಪಾವು ಜೋಳ ತಕ್ಕಂಡ
ಬ್ಯಾಸಿಗೆಂಬೊ ಬಿಡಿಲಲಿ ಶಿವನೆ
ದೇಶಕಿಲ್ಲದ ಬೆಳೆಕೊಟ್ಟರೀಗ
ಅರ್ಧ ಕಾಸಿಗೆ ಹರಸೇವೆ ಮಾಡ್ಸುವೆ
ಕೀಲು ಕಾಸಿನ ಗುರುಸೇವೆ ಮಾಡುವೆ
ಅಂಗಂತ ಅರಿಕೆಯ ಮಾಡಿಕೊಂಡು ಗೌಡ

ಮೂರುಪಾವು ಜೋಳ ಬಿತ್ತಿ ಬಿಟ್ಟ ಹೊಲಕೆ
ಮೂರುಪಾವು ಜೋಳವ ಬಿತ್ತಿದ ಜೋಳ
ಬಿತ್ತಿ ಮನೆಗೆ ಬಂದನು ಗೌಡ
ಆಗ್ತದೊ ಕಾಣೆ ಹೋಗ್ತದೊ ಕಾಣೆ
ಹಾಳದ ಹೊಲಕೆ ಜೋಳ ಬಿತ್ತಿ ಬಂದೆ
ಹಾಳದ ಹೊಲಕೆ ಜೋಳ ಬಿತ್ತಿ ಬಂದೆ
ಬಿತ್ತಿ ಮನೆಗೆ ಬಂದವ್ನೆ ಗೌಡ
ಚಿನ್ನದ ತಣಿಗೆ ಬೆಳಗ್ತ ಕುಂತವ್ಳೆ
ಲಬಲಬನೆ ಬಾಯ ಬಡಕೊಂಡ ಗೌಡ
ತಣಿಗೆ ಕಿತ್ತು ಕಣಜಕ್ಕೆಸೆದವ್ನೆ
ಏನಂತ ಹೆಂಡ್ತಿಗೇಳುತಾನಾವಾಗ
ಕಳ್ಳರು ಕಾಕರು ಕಂಡರೆ ಹೆಂಡ್ತಿ
ತಣಿಗೆ ಕದ್ದುಕೊಂಡು ಹೋಗ್ತರೆ ಕಂಡ್ಯ
ತಣಿಗೆ ಕಿತ್ತು ಕಣಜಕ್ಕೆ ಎಸೆದಾನೆ
ಮುಕ್ಕ ಮೊಗೆಯಲ್ಲಿ ನೀರ ತಕ್ಕೊಂಬಾರೆ
ಕಾಲ ಮೊಗೆಯಲ್ಲಿ ನೀರು ಕೊಟ್ಲು ಹೆಂಡ್ತಿ
ಕೈಕಾಲು ಮೊಕವೆ ಘನದಿಂದ ತೊಳೆದ
ವಿಭೂತಿ ಆದ್ರೆ ಆಗೋಯ್ತು ಗೌಡ್ರೆ
ಒಲೆಯ ಬೂದಿ ತಗೊಂಬಾರೆ ಗರತಿ
ಒಂದು ಮರ ಬೂದಿ ತರಿಸಿ ಸುರಿದಾನು
ತಿಲಕನಾದರೆ ತಿದ್ದಿ ಬಿಟ್ಟ ಗೌಡ
ನಡುಮನೆಯಲ್ಲಿ ಕೂತವ್ನೆ ಗೌಡ
ಹೆಂಡತೀಗೇನಂತ ಹೇಳಿದನಾಗ
ಹಿಂದಲಟ್ಟಿಗೆ ಹೋಗಲ ಗರತಿ
ಮೂರು ಮಂಕರಿ ಮುದೆಮ್ಮೆ ಸಗಣಿ
ಸಗಣಿ ತಂದು ನಡುಮನೆಯಲ್ಲಿ
ಕಟ್ಟಿಯಾದರೆ ಕಟ್ಟಿಲ ಗರತಿ
ಕಟ್ಟೆ ತುಂಬ ಅಂಬಲಿ ಸುರಿದು
ಅಣ್ಣೆ ಸೊಪ್ಪ ತಂದು ಹಾಕೆಣ್ಣೆ

ಮುಂದಲ ಬಾಕಲ ಹಾಕಲ ಗರತಿ
ಹಿಂದಲ ಬಾಕಲ ತೆಗಿಯಲ ಗರತಿ
ದಗ್ಗಲ ಮಂಡಿ ಊರನೆ ಗೌಡ
ಕೈಲಿ ಊಂಡರೀಗ ತಡವಾಗುತೈತೆ
ನಾಯಿ ನೆಕ್ಕಿದಂಗೆ ಅಂಬಲಿ ನೆಕ್ಕುತಾನೆ
ಕತ್ತೆ ತಿಂದಂಗೆ ಸೊಪ್ಪು ತಿನ್ನುತ್ತಾನೆ
ಅಂಬಲಿ ಕುಡಿಯೋ ಸಮಯದಲ್ಲಿ
ಹಾಳಾದ್ದೊಂದು ನೊಣವೆ ಬಂದು
ಅಂಬಲಿಗಾದರು ಬಿತ್ತಲ್ಲೊ ಶಿವನೆ
ಹಾಳದ ನೊಣವೆ ಎಸ್ಟಂಬಲಿ ಕುಡಿದೆ
ನನ್ನ ಹೊಟ್ಟೆಗೆ ಸಾಲದೆ ಬಂತು
ಹುಲಿ ಹಿಡಿದಂಗೆ ನೊಣವನೆ ಹಿಡಿದು
ನೊಣವನಾದರೆ ಸೀಪಿದ ಗೌಡ
ಹೇಳಲಾರದೆ ಒದ್ದಾಡುತಾನೆ
ಇತ್ತತ್ತ ಬಾರೆ ಕೆಟ್ಟಬಡ್ಡಿ ಹೆಂಡತಿ
ಹೆಂಡತಿ ಸೊಂಟವ ಹಿಡಕೊಂಡು ಗೌಡ
ಮುಗ್ಗರಿಸಾದರೆ ಎದ್ದನು ಗೌಡ
ಉಡುದಾರನಾದರೆ ಕಿತ್ತೆಹೋಗೈತೆ
ಉಡುದಾರಕ್ಕೆ ಕಾಸು ಇಲ್ಲವಲ್ಲೊ ಶಿವನೆ
ಎಂದು ಯೋಚನೆ ಮಾಡುತ ಕುಂತವ್ನೆ
ಹೆಂಡತಿ ಸೀರೆಯ ಹರಿದಾನೆ ಗೌಡ
ಉಡುದಾರವ ಕಟ್ಟಿದ ಗೌಡ

ಮಂಚದ ಮೇಲೆ ಕೂತವ್ನೆ ಗೌಡ
ವೀಳ್ಯವಾದರೆ ತಕಂಬಾರೆ ಗರತಿ
ಹನ್ನೆರಡು ವರ್ಷದ ತರಗೆಲೆ ತಾರೆ
ಆರು ವರ್ಷದ ಗೋಟಡಕೆ ತಾರೆ
ಮೂರುವರ್ಷದ ಒಣಸುಣ್ಣ ತಾರೆ
ಇಷ್ಟೊಂದು ವೀಳ್ಯವ ಮೆಲ್ಲಿದ ಗೌಡ
ಏನಂದು ಯೋಚನೆ ಮಾಡುತನಾವಾಗ
ಆಳಾದ ಹೊಲಕೆ ಜೋಳ ಬಿತ್ತಿ ಬಂದೆ
ಆಗೈತೊ ಕಾಣೆ ಹೋಗೈತೊ ಕಾಣೆ
ಮಾಯಕಾರಿ ಜಗದೀಶನಾಗ
ಇವನ ಸತ್ಯವ ನೋಡಬೇಕೆಂದು
ಮಾಯದ ಮಳೆಯ ಹುಯ್ಸೊನೆ ಸ್ವಾಮಿ
ಮಾಯದ ಬೆಳೆಯ ಕೊಟ್ಟಾನೆ ಸ್ವಾಮಿ
ಮಾಯದ ಬೆಳೆಯ ಕೊಟ್ಟಾನೆ ಸ್ವಾಮಿ
ದಂಟೆಂಬೋದೆ ಕಣಕಾಲು ಗಾತ್ರ
ತಲೆಯಂಬೋದೆ ಮೂಡೆಯಗಾತ್ರ
ಹೊಲತಕ್ಕೆ ಹೋಗಿ ನೋಡಿದ ಗೌಡ
ಅವನಿಗೆ ಬಾಳ ಸಂತೋಷವೆ ಆಯ್ತು
ಮಾಯದ ಬೆಳೆಯ ನೋಡಿದ ಇವನಿಗೆ
ಬಾಳ ಸಂತೋಷವೆ ಆಯಿತು ಇವನಿಗೆ
ಹೀಗೆ ಹೊಲವ ನಾ ಬಿಟ್ಟಿದ್ದರೆ
ಕುಬುಚಕ್ಕಿ ಅರ್ಧ ಮೇದೋಗುತಾವೆ
ಇಲಿ ಆದರೆ ತಿಂದೋಗುತಾವೆ
ಎನ್ನುತಗೌಡ ಯೋಚನೆ ಮಾಡಿ
ಹನ್ನೆರಡಾಳುದ್ದ ಮಂಚವ ಹಾಕಿದ
ಮಂಚದ ಮೇಲೆ ಕೂತುಕೊಂಡ ಗೌಡ
ಆಕಳಿಸುತಾನೆ ತೂಕಡಿಸುತಾನೆ
ಜೋಳದ ಗದ್ದೆಯ ಕಾಯ್ತಾ ಕೂತವ್ನೆ
ತೆನೆತೆನೆಗೆಲ್ಲ ಚೀಲ ಕಟ್ಟಿಸ್ಯಾನೆ
ಸಾಲದ ಹೊಲಕೆ ಗುಬಚಿಯ ಮುಳ್ಳ
ತಂದು ಕಟ್ಯಾನೆ ಮಾರೇಗೌಡ
ಇವನ ಸತ್ಯವ ಈಗ ನೋಡಬೇಕು
ಎಂದು ಮಾಯಕಾರಿ ಪರಶಿವನಾಗ
ಮುದುಕ ಜಂಗಮನಾಗೆ ಬಂದವ್ನೆ
ಕಾಶಿಯಾತ್ರೆಗೆ ಹೋಗಿದ್ದೆ ಮಗನೆ
ಬಾಳ ಹಸಿವೆ ನನಗಾಗೈತೆ
ಒಂದು ಜೋಳದ ತೆನೆ ಕೊಡೊ ಗೌಡ
ತಿಂದುಕೊಂಡು ನಾನು ಹೋಗುತಿನಿ ಅಂದ
ಅಂತ ಮಾತ ಕೇಳಿದ ಗೌಡ
ಮಂಚದಿಂದ ಕೆಳಕ್ಕೆ ಇಳಿದು ಬಂದವ್ನೆ
ಹೋಗು ಹೋಗು ತಿರುಕ ಜಂಗಮನೆ
ಗೌಡ ಊರಿಗೆ ಹೋಗವ್ನೆ ಕಾಣೊ
ಗದ್ದೆಯ ಗೌಡ ಇಲ್ಲಿಲ್ಲವಲ್ಲಪ್ಪ
ನಾನು ತೆನೆಯ ಕೊಡುವುದಿಲ್ಲಪ್ಪ
ನಾನು ಅವರ ಮನೆಯ ಸಂಬಳದಾಳು
ನಾನು ತೆನೆಯ ಕೊಡಲಾರೆ ಕಾಣೊ
ಅಷ್ಟು ನಿನಗೆ ಹಸಿವೆ ಆಗಿದ್ರೆ
ನನ್ನ ಹೆಂಡತಿ ಮನೆಯಲ್ಲವ್ಳೆ
ಹೋಗಿ ನೀನು ಊಟ ಮಾಡಯ್ಯ
ಎಂದು ಹೇಳುತಾನೆ ಮಾರೇಗೌಡ
ಮಾಯಕಾರಿ ಪರಮೇಶ್ವರನಾಗ
ಇಲ್ಲಿ ಇವನ ಸತ್ಯ ನೋಡಿದ್ದಾಯ್ತು
ಮನೆಯಲಿ ಹೆಂಡತಿಯ ಭಕ್ತಿ ನೋಡಬೇಕು
ಎಂದು ಹೊರಟನೆ ಶಿವನು ಆವಾಗ

ನನ್ನ ಹೆಂಡತಿಯ ಗುರುತೇಳುತೀನಿ
ಸಿಕ್ಕು ಸೀರಣಿಗೆ ಬಕ್ಕುತಲೆಯೆಲ್ಲ
ಮೂಗೆಂಬುದು ಮುಂಗೈಗಾತ್ರ
ಕಣ್ಣೆಂಬುದು ಕೊತ್ತಿಯ ಕಣ್ಣು
ಇಂಥ ಚೆಲುವೆ ನನ್ನ ಹೆಂಡತಿ ಅವಳೆ
ಹೋಗೋ ಹೋಗಿ ಊಟ ಮಾಡೈಯ್ಯ

ಅಂಗಂದ ಮಾತ ಕೇಳಿದ ಸ್ವಾಮಿ
ಜೋಳದ ಗದ್ದೆಯಿಂದ ಮನೆಗೊರಟಾನೆ
ನಡುಮನೆಯಲ್ಲಿ ಕೂತವ್ಳೆ ಗರತಿ
ಏನಂತ ಸ್ವಾಮಿ ಹೇಳುತನಾವಾಗ
ಕಾಶಿ ಯಾತ್ರೆಗೆ ಹೋಗಿದ್ದೆ ಮಗಳೆ
ಜೋಳದ ಗದ್ದೆ ಬಳಿಗೆ ಬಂದೆ ಮಗಳೆ
ಮನೆಗಾದರೆ ನೀ ಹೋಗು ಅಂತ ಹೇಳಿದ ಗೌಡ
ಊಟಕಾದರೆ ನೀಡಮ್ಮ ಮಗಳೆ
ಎಂದು ಸ್ವಾಮಿ ಕೇಳುತಾನಾವಾಗ
ಅಂಗಂದ ಮಾತ ಕೇಳಿದಳಾವಾಗ
ಇಕ್ಕದ ಮಾರಿ ಏನಂದಳಾಗ
ಹೋಗೋ ಹೋಗೋ ತಿರುಕ ಜಂಗಮನೆ
ನಾನು ಈ ಮನೆಯ ಸಂಬಳದಾಳು
ಮನೆಯ ಗರತಿ ಊರಿಗೋಗವ್ಳೆ
ಎಂದು ಹೇಳ್ತಾಳೆ ಪರಶಿವನಲ್ಲಿ
ಎಷ್ಟು ಬೇಡಿದರು ಊಟಕ್ಕಿಡಲಿಲ್ಲ
ಪಾಪಿಗೇಡಿ ಇಕ್ಕದ ಮಾರಿ

ಹಿಂದುರುಗಿ ಹೊಲಕ್ಕೆ ಬರುತಾನೆ ಸ್ವಾಮಿ
ಏನೋ ಗೌಡ ಊಟಕೆ ಕೊಡಲಿಲ್ಲ
ಮನೆಯ ಯಜಮಾನಿ ಊರೊಳಗಿಲ್ಲ
ಸಂಬಳದಾಳು ಮನೆಯೊಳಗಿದ್ಲು
ಒಂದರ್ಧ ಜೋಳದ ತೆನೆಯ
ಕೊಡೈಯ್ಯ ಎಂದು ಕೇಳಿದ ಸ್ವಾಮಿ
ಜೋಳದ ತೆನೆಯ ಕೊಡುವುದಿಲ್ಲ
ನಾನು ಇವರ ಮನೆಯ ಸಂಬಳದಾಳು
ಅಷ್ಟು ನಿನಗೆ ಹಸಿವೆ ಆಗಿದ್ರೆ
ನಾನೆ ಬರುತೀನಿ ಊಟಕೆ ಕೊಡುಸ್ತೀನಿ
ಎಂದು ಕರಕೊಂಡು ಜಂಗಮನನ್ನು
ಮನೆ ಕಡೀಕೆ ಹೊರಟಾನೆ ಗೌಡ
ಏನಂತ ಆಗ ಹೇಳಿದ ಶಿವನಿಗೆ
ನೀನು ಹಿಂದಾಗಿ ಬಾರೊ ನಮ್ಮ ಮನೆಗೆ
ನಾನು ಮುಂದಾಗೆ ಮನೆಗೆ ಹೋಗಿ
ನನ್ನ ಹೆಂಡತಿಗೆ ಹೇಳುತೀನಿ ಅಂದ
ಓಡೋಡಿ ಮನೆಗೆ ಓಡೋದ ಗೌಡ
ಹಿಂದೆ ಬರುತಾನೆ ಜಂಗಮನಾಗ

ಯಾವಾಳೆ ಹೆಂಡತಿ ಕೆಟ್ಟಬಡ್ಡಿ ನೀನು
ಹರಕಲ ಚಾಪೆ ತಕ್ಕಂಡು ಬಾರೆ
ಹರಕಲು ಚಾಪೆ ತಂದು ಕೊಟ್ಟವ್ಳೆ
ಬೆಲ್ಲದ ನೀರ ಮಾಡಿಕೊಂಡು ಬಾರೆ
ನನಗೆ ಚಾಪೆಯ ಬಿರಬಿರನೆ ಸುತ್ತೆ
ಬೆಲ್ಲದ ನೀರೆಲ್ಲ ಮೇಲೆಯೆ ಚೆಲ್ಲೆ
ತಲೆತಾವಾದರೆ ಕೂತುಕೊಳ್ಳೆ ಗರತಿ
ಲಬಲಬನೆ ಬಾಯ ಬಡಕೊಳ್ಳೆ ಗರತಿ
ನನ್ನ ಗಂಡ ಸತ್ತೋದನೆಂದು
ಬಡಕೊಂಡು ಕೂತವ್ಳೆ ನಡುಮನೆಯಲ್ಲಿ
ಮಾಯಕಾರಿ ಪರವೇಶನಾಗ
ಮನೆಗೆ ಬಂದವ್ನೆ ನಿಧಾನವಾಗಿ
ಬಂದು ಬಾಗ್ಲಲ್ಲಿ ನಿಂತುಕೊಂಡ ಸ್ವಾಮಿ
ಏನಮ್ಮ ಇದು ಪೂರ ಅನ್ಯಾಯ
ಹೋಗೋಗೊ ತಿರುಕ ಜಂಗಮ ನೀನು
ಗಂಡಸತ್ತು ಮನೆಯಲ್ಲಿ ಬಿದ್ದವ್ನೆ
ಅಡಿಗೆಯನ್ನೆ ನಾನು ಮಾಡಿಲ್ಲ ಕಾಣೊ
ಗಂಡನ ಕಳಕೊಂಡು ದುಃಖವೆ ನನಗೆ
ಅಂತ ಮಾತ ಕೇಳಿದ ಸ್ವಾಮಿ
ಮಾಯಕಾರಿ ಪರಮೇಶ್ವರನು
ಕಲಿಯುಗದೊಳಗೆ ಇಂಥ ಅನ್ಯಾಯ ನಡೀತೆ
ಎಂದು ಮನದೊಳಗೆ ಯೋಚನೆಮಾಡಿ
ಗಂಡನ ಕಳಕೊಂಡೆ ಎಂದು
ಯೋಚನೆನಾದರೆ ನೀ ಮಾಡಬೇಡ
ಗಂಡನ ಪ್ರಾಣವ ಉಳಿಸಿ ನಾ ಕೊಡುತೀನಿ
ಅಂಗಂದಮಾತ ಕೇಳಿದಳಾಗ
ಗಂಡ ಉಳುಕೊಂಡ್ರೆ ಅನ್ನ ಊಟಕ್ಕಿಡಬೇಕು
ನಿನ್ನನ್ಯರೊ ಕರಸ್ದೋರು ಜಂಗಮ
ಗಂಡನ ಉಳಿಸು ಬಾ ಎಂದು ನಿನ್ನ
ನಿನ್ನನ್ನು ನಾನು ಕರೆಸ್ಲಿಲ್ಲ ಕಾಣೊ
ಎಂದು ಬರಲ ಹಿಡಕೊಂಡು ಪಾಪಿ
ಇಂಥ ಪಾಪಗೇಡಿ ಗಂಡ ಹೆಂಡ್ತೀರ
ಕಲಿಯುಗದಲ್ಲಿ ನಾ ಬಿಡಬಾರದೆಂದು
ಒಳಗ್ಗಡೇಕೆ ಹೋಗವ್ನೆ ಸ್ವಾಮಿ ಆವಾಗ
ಹರಕಲ ಚಾಪೇಲಿ ಸುತ್ತಟ್ಟವಳೆ
ಊಟ ಕೊಡದಿದ್ದರೆ ಅಂತೆ ಹೋಗಲಿ
ಜೋಳದ ಹೊಲನಾದರೆ ಕಾಯೋಗೋ ಗೌಡ
ಎಷ್ಟು ಕೂಗಿದರು ಮಾತಾಡಲಿಲ್ಲ
ಸತ್ತೋದೊನಂಗೆ ಬಿದ್ದವ್ನೆ ಗೌಡ
ಮಾಯಕಾರಿ ಪರಮೇಶ್ವರನಿಗೆ
ಬಾಳ ಆಶ್ಚರ್ಯವೆ ಆಯಿತಾವಾಗ
ದೇವಲೋಕದಿಂದೆರಡಾನೆ ತರಸಿದ
ಗಂಡ ಹೆಂಡತಿಯ ಆನೆ ಕಾಲಿಕ್ಕಟ್ಟಿಸಿದ
ಆನೆಕಾಲ್ಗೆ ಕಟ್ಟಿಸವ್ನೆ ಸ್ವಾಮಿ
ನಗ್ಗಿನ ಮುಳ್ಳಲ್ಲಿ ಎಳಸೀದ ಸ್ವಾಮಿ
ನಗ್ಗಲ ಮುಳ್ಳಲ್ಲಿ ಎಳಸೀದ ಸ್ವಾಮಿ

ಗಿರಿಕೊಂದೆ ಖಂಡ ಕಿತ್ತೋಗುತೈತೆ
ಮಾತನಾದರೆ ಆಡಲಿಲ್ಲ
ಪರಮ ಚಂಡಾಲ ಮಾರೇಗೌಡ
ಮಡದಿಯಾದಂಥ ಇಕ್ಕದ ಮಾರಿ
ಧರಣಿ ಶೋಕವ ಮಾಡುತಳಾವಾಗ
ನಗ್ಗಿನ ಮುಳ್ಳಲಿ ತಿರುಗಿಸಿದರು
ಇವನು ಮಾತೇ ಆಡಲಿಲ್ಲವಲ್ಲ
ಅವನ ಉದ್ದ ಗುಂಡಿ ಹೊಡಸ್ದ
ಕುತ್ಕೆ ತಕ್ಕ ಹೊಣೆಬಿಟ್ಟ ಸ್ವಾಮಿ
ಈಗಲಾದರು ಮಾತಾಡ್ತೀ ಇಲ್ವೊ
ಇಲ್ಲದಿದ್ದರೆ ಕಲ್ಲ ಎತ್ತಾಕುತೀನಿ
ಎತ್ತಲಾರದ ಕಲ್ಲ ಎತ್ಕೊಂಡ ಸ್ವಾಮಿ
ನಿಂತ್ಕಂಡ ಮಾರೇಗೌಡನ ಮುಂದೆ
ಮಾತಾಡ್ತೀಯೊ ಇಲ್ಲವೊ ಗೌಡ
ಕಲ್ಲ ಕೈಯ್ಯನ್ನೆ ಬಿಡುತೀನಿ ಈಗ
ಊಟಕೆ ನೀನು ಕೇಳದೆ ಹೋದರೆ
ಮಾತ ನಾನು ಆಡ್ತೀನಿ ಸ್ವಾಮಿ
ಪರಮ ಪಾಪಿಯು ಇವನು ಎಂದು
ಮನದಲ್ಲಿ ಯೋಚನೆ ಮಾಡಿದ ಸ್ವಾಮಿ
ಗುಂಡಿಂದೀಚೆಗೆ ಎತ್ತಿಕೊಂಡ ಇವನ
ಗುಂಡಿಂದೀಚೆಗೆ ಕರಕೊಂಡನಾಗ
ಹೂವಿನ ಪಾಲಕಿ ತರಿಸಿದ ಸ್ವಾಮಿ
ದಾನಧರ್ಮವ ಮಾಡದ ಪಾಪಿ
ಕಲಿಯುಗದಲ್ಲಿ ಇರಲು ಬಾರ್ದು
ಎಂದು ಕೈಲಾಸಕೆ ಕಳುಸ್ದ ಸ್ವಾಮಿ
ಗಂಡ ಹೆಂಡ್ತಿ ಕೈಲಾಸಕೆ ಕಳುಸ್ದ
ಕೈಲಾಸಕ್ಕೆ ಕಳಿಸ್ದ ಸ್ವಾಮಿ
ಏನಂದಾಗ ಹೇಳುತಾನೆ ಸ್ವಾಮಿ
ದಾನಧರ್ಮವ ಮಾಡಲಾರದ ಪಾಪಿಯು
ಕೈಲಾಸಕೋದ ಕತೆಯಿದು ಕೇಳಿರಿ
ಇಲ್ಲಿಗಾದರೆ ಮಾರೇಗೌಡನ
ಕತೆಯು ಅಂಕಿತವಾಯಿತೀವಾಗ