ನಿನ್ನ ನೆಂಬಿದೆ ರಾಮನೆ ತಾನಂದನೆ
ಇಂಬನಾಗಿ ರಾಮನೆ
ಒಂದಾನೆ ಒಂದು ದಿವಸ ತಾನಂದನೆ
ಒಕ್ಕಲಿಗರ ಮುದ್ದೇಗೌಡ್ನು
ಒಕ್ಕಲಿಗರ ಮದ್ದೇಗೌಡ್ನಿಗೆ
ಏಳುಜನ ಗಂಡುಮಕ್ಕಳು
ಒಕ್ಕಲಿಗರ ಮುದ್ದೆಗೌಡ್ನಗೆ
ಕೈಯಿಲ್ಲದ ಕಾಲಿಲ್ಲದಂಥ
ಎಳವನು ಹುಟ್ಟಿದನು
ಆರುಜನ ಚೆನ್ನಾಗವ್ರೆ
ಕುಂಟೆಳವನು ಹುಟ್ಟಿದನು
ಏಳು ಜನ ಗಂಡುಮಕ್ಳು
ಒಬ್ಬಳೆ ಹೆಣ್ಣು ಮಗಳು
ಒಂದಾನು ಒಂದು ದಿವಸ
ಒಕ್ಕಲಿಗರ ಮುದ್ದೆಗೌಡ್ನಗೆ
ಗಡ್ಡ ಮೀಸೆಯಂಥ
ಒಕ್ಕಲಿಗರ ಮುದ್ದೇಗೌಡ್ನಗೆ
ಗಡ್ಡ ಮೀಸೆ ಬೆಳೆದೋದೊ
ಮುಂದೇನುಗತಿಯೆಂದು
ನನಸ್ವಾಮಿ ನನ್ನ ಗುರುವೆ
ಒಕ್ಕಲಿಗರ ಮುದ್ದೇಗೌಡ್ನು
ಏನೆಂತೋಚನೆ ಮಾಡುತವ್ನೆ
ನನ್ನ ಗಡ್ಡ ಮೀಸೆಗಳ
ಕೆಲಸ ಯಾರು ಮಾಡೋರು
ಡಂಗೂರವನ ಕರೆಸಿ
ಸಾರಿಸ್ತಾನೆ ನನ್ನ ಗುರುವೆ
ಈ ಕಡತ ತಪ್ಪಿಸಿಕೊಟ್ರೆ
ಕೇಳಿದ್ದ ಕೊಡ್ತೀನಂಥ
ಆ ಹೊತ್ತು ಆಡುತವ್ನೆ
ಡಂಗೂರವ ಸಾರಿಸಿಬಿಟ್ಟ
ಹಜಾಮರವನು ಎಂಬುವನು
ಹಜಾಮರ ಗಂಡುವೆ
ಅವನಿಗೆ ಚೆಪ್ಪೋಡು
ನೂರೊಂದು ಆಯ್ದವು
ಹಡದೆಯ ತಕ್ಕಂಡು
ಕಂಕ್ಳಿಗೆ ಆಡ್ಕಂಡು
ಚೆಪ್ಪೋಡು ಸಾರೋಟಿನಲ್ಲಿ
ಒಕ್ಕಲಿಗರ ಮುದ್ದೇಗೌಡ್ನ
ಅರಮನೆಗೆ ಬಂದ
ಬಾಕಲಲ್ಲಿ ಕೂತುಕಂಡು
ಸುತ್ತ ಮುತ್ತ ನೋಡುತಾನೆ
ಬಾಕಲು ಬಂದಾಗೈತೆ
ನಿನ್ನ ಒಕ್ಕಲು ಮುದ್ದೇಗೌಡ್ನ
ಆಸ್ಥಾನಕ್ಕೆ ಹೋಗಬೇಕು
ಯಾವ ಮೂಲೆಗೆ ಹೋಗಬೇಕು
ಯಾವ ಮೂಲೆಗೆ ಬರಬೇಕು
ಯೋಚನೆಯ ಮಾಡುತಾನೆ
ಹಜಾಮರ ಹುಡುಗಾನು
ಯಾರೂವೆ ಹಲಸ್ನಣ್ಣ
ಅಡೆಯ ಹಾಕವ್ರೆ
ವಾಸನೆ ಹಿಡಕಂಡು
ಹೆಗ್ಗಣವೆ ಹೋಯ್ತಂತೆ
ಬಾಲಾವೆ ಸಿಕ್ಕಿಕೊಂಡು
ದರದರನೆ ಎಳಕೊಂಡು
ಹಜಾಮರ ಹುಡುಗನತ್ರ
ಬಂತಂತೆ ಹೆಗ್ಗಣರಾಜ
ಕೇಳು ಕೇಳು ಹಜಾಮದೊರೆ
ನೀ ಬಂದೀರೊ ಕಾರ್ಯವ
ನಿನ್ನ ಕಾರ್ಯವ ಗೆಲುಸ್ತೀನಿ
ಸೆರೆಯನ್ನ ಬಿಡಿಸಪ್ಪ
ಹಲಸನಣ್ಣ ಅಂಟುವ
ಸೆರೆಯನ್ನೆ ಬಿಡಿಸಿಕೊಟ್ರೆ
ನಿನ್ನ ಕೆಲಸವ ಗೆಲ್ಲುಸ್ತೀನಿ
ಆವಾಗ ಹಜಾಮರವನು
ಅಂಟನ್ನು ಕತ್ತರಿಸಿಬಿಟ್ಟ
ಒಕ್ಕಲು ಮುದ್ದೇಗೌಡ್ನ
ಮನೇಲಿರೊ ಹಜಾರಕ್ಕೆ
ಬಿಟ್ಟು ಕೊಡಬೇಕಯ್ಯ
ನನ್ನ ಹೆಗ್ಗಣರಾಜ
ಏಳುತಿನಿ ಕೇಳಪ್ಪ
ನಾನು ನಿಜವಾಗಿ ಏಳುತೀನಿ
ನನ್ನ ಬಾಲವ ಹಿಡಕಪ್ಪ
ಹಿಂದುಗುಂಟೆ ಬಾರಪ್ಪ
ಬಚ್ಚಲ ಕಂಡಿನಲ್ಲಿ
ಕರಕೊಂಡು ಹೋಗುತಂತೆ
ಅರಮನೆ ಒಳಗಡೆ
ಹೋಗವುದ ನೋಡ್ತಾನೆ
ಒಕ್ಕಲ ಮುದ್ದೇಗೌಡ್ನು
ರತ್ನದ ಮಂಚದ ಮೇಲೆ
ಮನಗವ್ನೆ ನನ ಗುರುವೆ
ಹಡದೆಯ ಬಿಚ್ಚಿಕಂಡು
ಆಯ್ದವ ಹಿಡಕೊಂಡು
ಚೌರವ ಮಾಡುತಾನೆ
ಮೀಸೆಯ ಕತ್ತರಸವ್ನೆ
ಗಡ್ಡವೆಲ್ಲ ನುಣ್ಣಗೆ
ಬೋಳಿಸಿ ಹಾಕವ್ನೆ
ಮಾಯಕರ ನನಗುರುವೆ
ಹಜಾಮರ ಹುಡುಗನು
ಮನೆಬಿಟ್ಟು ಬಂದಾನು


ಬೆಳಗಾಗಿ ಕೋಳಿಕೂಗ್ತು
ಬೆಳ್ಳಿಹುಟ್ತು ನನಗುರುವೆ
ರತ್ನದ ಮಂಚದ ಮೇಲೆ
ಮಲಗಿದ್ದ ಗೌಡನು
ಮೇಲಕ್ಕೆ ಎದ್ದನು
ಗಡ್ಡವ ಸವರುತಾನೆ
ತಲೆಯನ್ನೆ ಸವರುತಾನೆ
ನನಗೆ ಅರಿವಿಲ್ಲದಂತೆ ಚೌರವ
ಯಾವನಯ್ಯ ಮಾಡಿದಾನು
ಯಾವನಯ್ಯ ಮಾಡಿದ
ನಾನೇಯ ಅಂತೇಳಿ
ಬಂದಾರೆ ಸಾಕಲ್ಲೊ
ಬೆಳಗ್ಗೆಯ ಎದ್ದಾನು
ಹಡಬೆಯ ನ್ಯಾರಾಕ್ಕೊಂಡು
ನಾನೇಯ ಸ್ವಾಮಿ ಎಂದು
ಬಂದಾನು ಹಜಾಮರುಡುಗ
ಅಯ್ಯ ಕೇಳುಕೇಳು ಹಜಾಮರುಡುಗ
ಏನು ಕೇಳ್ತಿ ಕೇಳಯ್ಯ
ಒಕ್ಕಲ ಮುದ್ದೇಗೌಡ್ನು
ಹಾಗಂಥ ಕೇಳುತವ್ನೆ
ಕೇಳು ಕೇಳು ನಿಮ್ಮ ಪಾದ
ನೀವು ಕೇಳಿದ್ದು ಕೊಡುತೀನಂದ್ರೆ
ಕೈಮುಟ್ಟಿ ಭಾಷೆಕೊಟ್ರೆ
ಹೇಳುತೀನಿ ಅಂತೇಳಿ
ಆ ಮಾತು ಕೇಳುತವ್ನೆ
ನಿನ್ನ ಒಕ್ಕಲ ಮುದ್ದೇಗೌಡ್ನು
ಆ ಮಾತಿಗೊಪ್ಪಿಕೊಂಡು
ಭಾಷೆಯ ಕೊಟ್ಟು ಬಿಟ್ಟ
ನೀ ಕೇಳಿದ್ದು ಕೊಡುತೀನಂಥ
ಧೈರ್ಯವಾಗಿ ಕೇಳಯ್ಯ
ನಾನು ಕೇಳುತೀನಿ ಕೊಡಿಸ್ವಾಮಿ
ಒಂದಿನ ಒಪ್ಪತ್ತು
ನಿಮ ದರಬಾರ ಕೊಡಬೇಕು
ಒಕ್ಕಲ ಮುದ್ದೇಗೌಡ್ನು
ಕುಂತುಕಂಡು ಹೇಳುತಾನೆ
ಯೋಚನೆಯ ಮಾಡುತವ್ನೆ
ಏನು ಮಾಯ ಮಾಡುವುದು
ಆ ಮಾತ ಕೇಳಿಕೊಂಡ
ಮುಂದೇನು ಗತಿಯೆಂದು
ಯೋಚನೆಯ ಮಾಡಿಬಿಟ್ಟು
ಕೊಟ್ಟ ಭಾಷೆಗೆ ತಪ್ಪಬಾರದು
ಒಂದಿನ ಒಪ್ಪತ್ತು
ರಾಜ್ಯಭಾರ ಕೊಟ್ಟಾನು
ಒಕ್ಕಲ ಮುದ್ದೇಗೌಡನ್ನು
ರಾಜ್ಯಭಾರ ಕೊಟ್ಟುಬಿಟ್ಟು
ಹೊರಟನು ನನಗುರುವೆ
ನಿಮ್ಮ ಕೈಲಿದ್ದ ಸಿರಿಉಂಗ್ರ
ನನಕೈಗೆ ಇಕ್ಕಬೇಕು
ಅವನ ದರಬಾರವ
ಕೊಟ್ಟುಬಿಟ್ಟ ಮುದ್ದೇಗೌಡ


ಮುಂದಾಕೆ ಹೊರಟಾನು
ಬೇರೆ ಮನೆಯ ಮಾಡಿಕೊಂಡು
ಸಂಸಾರ ಕರಕೊಂಡು
ಬೇರೆ ಮನೆಯ ಒಳಗೆ
ವಾಸವ ಮಾಡುತವ್ನೆ
ಒಂದಾನು ಒಂದು ದಿವಸ
ಒಕ್ಕಲ ಮುದ್ದೇಗೌಡ್ನಿಗೆ
ಏಳುಹಟ್ಟಿ ದನಗಳಂತೆ
ಏಳುಹಟ್ಟಿ ಕುರಿಗಳಂತೆ
ಏಳುಹಟ್ಟಿ ಆಡುಗಳಂತೆ
ಬಾಳ ಬಾಳಾಡ್ತಾ ಅವ್ನೆ
ಏಳು ಜನಕೆ ಒಂದಿಗುಟ್ದ
ಹೆಣ್ಣು ಮಗಳು ಎಂಬುವಳು
ಅವಳು ಗೌರಮ್ಮ ಎಂಬುವಳು
ಏನು ಕೆಲಸ ಮಾಡವ್ಳೆ
ತಪ್ಪಲೆಯ ಕೈಯಲಿಡಿದು
ಎಮ್ಮೆಯ ಕೊಟ್ಟಿಗ್ಗೋಗಿ
ಹಾಲನ್ನು ಕರಿತವ್ಳೆ
ಮನೆತಾಯಿ ಗೌರಮ್ಮ
ಒಂದಾನು ಹೊತ್ತಿನಲ್ಲಿ
ಒಂದೆಮ್ಮೆ ಕರುವಾದು
ಕರುಗೋಳು ಹಾಕಿಕೊಂಡು
ಓಡಿಬಂದು ಹಾಕಿಕೊಂಡು
ಓಡಿಬಂದು ನೋಡುತಾಳೆ
ಮನೆಯವರು ಬಿಟ್ಟಾರ
ಎಂದುಕೊಂಡು ಗೌರಮ್ಮ
ಹೆಣ್ಣು ಮಗಳು ಅವಳಿಗೆ
ಏಳು ಮಾರು ಜಡೆಯಂತೆ
ಏಳು ಕರಗಳ ಎಳೆದಾಳು
ಏಳು ಮಾರು ಜಡೆಯಲ್ಲಿ
ಎಳಕಂಡು ಬಂದಾಳು
ಹಜಾಮರ ಹುಡುಗಾನು
ಅವಳ ನೋಡಿಬಿಟ್ಟು ಬಂದಾನು
ಅಪ್ಪನ ಮನೆಗಿನ್ನು
ಅವಳ ನೋಡಿಬಿಟ್ಟು ಬಂದಾನು
ತಂದೆಯ ಮನೆಗೆ ಬಂದು
ಮಕ್ಕಡೆ ಮನಿಕಂಡ
ಮಕ್ಕಡೆ ಮನಿಗಿಬಿಟ್ಟು
ಯೋಚನೆಯ ಮಾಡುತಾನೆ
ಯೋಚನೆಯ ಮಡುತಾನೆ
ಏನು ಕೆಲಸ ಮಾಡುತಾನೆ
ತಾಯಿ ತಂದೆ ಬಂದರು
ಯಾಕೆ ಮಗ ಇಷ್ಟೊಂದು
ಮಕವಾದರೆ ಕೆಟ್ಟೈತೆ
ಯೋಚನೆ ಯಾಕ್ಬಂತು
ಹೇಳಪ್ಪ ನನಕಂದ
ಕೇಳುಕೇಳು ತಾಯಿತಂದೆ
ಸತ್ಯದಿಂದ ಹೇಳುತೀನಿ
ಒಕ್ಕಲ ಮುದ್ದೇಗೌಡ್ನ
ಮಗಳು ಗೌರಿ ಎಂಬುವಳು
ಏಳುಜನರ ಒಂದಿಗುಟ್ಟಿದವಳು
ಚೆಂದದಲಿ ಚಲುವೆಯು
ಒಪ್ಪಿದ್ದು ಆಯ್ತಮ್ಮ
ಅವಳ ತಂದು ನನಗೆ
ಮದುವೆಯ ಮಾಡಬೇಕು
ಅವರು ಕೊಡೊದಿಲ್ಲ ಎಂದರೆ
ಮಾಡೊಶಕ್ತಿ ನನಗೈತೆ
ಕೊಡ್ತೀನಿ ಅಂದರೆ
ಆಗುವ ಶಕ್ತಿ ನನಗದೆ
ಆ ಮಾತು ಹೇಳಿ ಬಿಟ್ಟು
ಬಲಗೈಲಿ ಭಾಷೆಕೊಟ್ರೆ
ನೀವು ತಾಯಿಗೊಳೆ ತಂದೆಯು
ನೀವು ಭಾಷೆಯ ಕೊಟ್ಟರೆ
ಊಟವ ಮಾಡುತೀನಿ
ಭಾಷೆಯ ಕೊಡದೆ ಹೋದ್ರೆ
ಪ್ರಾಣಹತ್ಯ ಮಾಡ್ಕೋತೀನಿ
ಅವಳ ಹೆಸರಿನ ಮೇಲೆ
ಪ್ರಾಣವ ಬಿಡುತೀನಿ
ಆ ಮಾತಿಗೊಪ್ಪಿಕೊಂಡು
ಮಗನಿಗೆ ಭಾಷೆಯ ಕೊಟ್ಟಾರು
ಏಳು ಜನ ಏಳು ಕುದುರೆ ಮ್ಯಾಲೆ
ಕೂತುಕಂಡು ಹೊರಟಾರು
ಒಕ್ಕಲ ಮುದ್ದೇಗೌಡನ
ಮನೆಹೋಗಿ ಇಳಿದಾರು
ಒಕ್ಕಲ ಮುದ್ದೆಗೌಡ್ನ ಮಕ್ಕಳು
ಮೂಡ್ಲಾಗಿ ಕೆಬ್ಬೆ ಹೊಲವು
ಹೊಲವನ್ನು ಉತ್ತುಬಿಟ್ಟು
ಹನ್ನೆರಡು ಗಂಟೆ ಒಳಗೆ
ಏರನ್ನೆ ಬಿಚ್ಚಿ ಬಿಟ್ಟು
ಊಟವ ಮಾಡತವ್ರೆ
ಅಂಥ ಸಮಯ ನೋಡಿ
ಕುದುರೆಯಿಂದ ಕೆಳಕ್ಕಿಳಿದರು
ಊಟ ಮಾಡ್ತಿದ್ದೋರು
ದೊರೆಗಳು ಬಂದರು ಎಂದು
ಏಳು ಜನ ಅಣ್ಣದೀರು
ಒಕ್ಕಲು ಮುದ್ದೇಗೌಡ್ನು
ನೀವು ಬಡವರ ಮನೆಗಪ್ಪ
ಭಾಗ್ಯ ಬಂದಿದ್ದಂಗೆ ಬಂದಿದ್ದೀರಪ್ಪ
ಬಂದು ಬಿಟ್ರಿ ಎಂದು ಅವರು
ಅಡ್ಡಬಿದ್ದು ಬೇಡುತಾರೆ
ಕೇಳುಕೇಳೊ ಒಕ್ಕಲು ಮುದ್ದೇಗೌಡ
ನಿಮ್ಮನೆಯ ಪರಪು ಅನ್ನಕೆ
ಬಂದೀವಿ ಗೌಡರೆ
ನಿಮ್ಮ ಮಗಳ ನಮ್ಮಗನಿಗೆ
ಕೊಡಬೇಕು ಅಂತೇಳಿ
ಆ ಮಾತ ಕೇಳುತವ್ರೆ
ಆ ಮಾತ ಕೇಳಿಕೊಂಡು
ಯೋಚನೆಯ ಮಾಡುತವ್ರೆ
ಆರು ಜನ ಅಣ್ಣದೀರು
ಆವಾಗ ಕೂತು ಕಂಡು
ಕಣ್ಣೀರು ಸುರಿಸ್ತವ್ರೆ
ಕೂತುಕಂಡು ಅಳುತಾರೆ
ಕಾಲಿಲ್ದ ಕೈಯಿಲ್ದ
ಹೆಳವನು ಎಂಬುವನು
ಕೇಳಿ ಕೇಳಿ ಅಣ್ಣದೀರ‍್ಯ
ಏಳುತೀನಿ ಕೇಳಿರಪ್ಪ
ಆ ಮಾತು ನನದೇಯ
ಆ ಮಾತು ನಿಮದೇಯ
ಕೇಳು ಕೇಳು ತಮ್ಮನೆ
ಏಳುತೀನಿ ಕೇಳಪ್ಪ
ನಿನಕೈಲಿ ಏನಾದೀತು
ಕೇಳು ಕೇಳು ಅಣ್ಣದೀರ
ನಿಮದೇನು ನಮದೇನು
ಹೋಗಿಯೆ ಬರುತೀನಿ
ಯೋಚನೆಯ ಮಾಡಬೇಡಿ
ಹಜಾಮರ ದಂಡೇಗೆ
ತೆವಕೊಂಡು ಬಂದಾನು
ಹೆಳವಯ್ಯ ಎಂಬುವನು
ಕೈಕಾಲು ಇಲ್ಲದೋನು
ನೀವು ಕೇಳಿ ಕೇಳಿ ದೊರೆಗಳೆ
ಹೆಣ್ಣನೆ ಕೊಡುತೀವಿ
ನಾವು ತಂಗೀಯ ಕೊಡಲಾರೊ
ನಿಜವಾಗ್ಲು ಹೇಳುತೇನೆ
ತಂಗಿಗಿಂತ ಹೆಚ್ಚಾಗಿ
ರೂಪಸ್ತೆ ಸಾಕಿವ್ನಿ
ನನ್ನೂವೆ ಸಾಕುಮಗಳ
ನಿಮಗಾದ್ರೆ ಕೊಡುತೀನಿ
ಆ ಮಾತ ಹೆಳವಾನು
ಹೇಳುತಾನೆ ಅವರಿಗೆ
ತಂಗಿಗಿಂತ ರೂಪಸ್ತೆಯು
ಆಗಲಿ ಎಂದು ಬಿಟ್ಟು
ದೊರೆಗಳು ಒಪ್ಪಿಕೊಂಡ್ರು
ಒಪ್ಪೀಳ್ಯ ಕೊಟ್ಟಾರು
ಯೀಳ್ಯವ ಕೊಟ್ಟುಬಿಟ್ರು
ಹಜಾಮರ ಪಟ್ಟಣಕೆ
ಮಾತನೆ ಕೊಟ್ಟು ಬಿಟ್ಟು
ಅಣ್ಣದೀರತ್ರ ಬಂದಾನು
ಹೆಳವಾನು ಎಂಬುವನು
ಕೇಳು ಕೇಳು ಅಣ್ಣದೀರ
ತಂಗೀಯ ಕೊಟ್ಟಾರೆ
ಜಾತಿಯು ಕೆಟ್ಟೋಯ್ತು
ನಾವು ಬಂದೂವೆ ಉಪಾಯ
ಹೂಡೀವಿ ಕೇಳಿರಣ್ಣ
ಹಜಾಮರ ಪಟ್ಟಣದ
ಈಶಾನ್ಯ ಮೂಲೇಲಿರುವ
ಅವರ ಬಸವಾನ ಹಿಡಿತಂದು
ಗೌರೀಯ ಬಿಗಿರಣ್ಣ
ನನ ಮಂಡಗೈಗೆ ಜಂಪೆಯ
ಬಿಗಿದಾದರೆ ಕೊಡಿರಯ್ಯ
ಕಡ್ಡಿಯ ಬಿಗಿದಾನು
ಬಸವನ ಮೇಲಕ್ಕೆ
ಹೆಳವನ ಮೇಲಕ್ಕೆತ್ತಿ
ಕೂರಿಸಿ ಮೇಲಕ್ಕೆ
ಕಳಿಸಿದರು ಅಣ್ಣದೀರು
ಹಿತ್ತಲಲ್ಲಿ ಇರುವ
ಇರುದುಂಬಿ ತಂದು
ಕುಂಟೊಂದು ಬಂಡಿಯ
ಕುಡುಗೋಲು ಬಂಡಿಯ
ಅರಕೋಲು ಬಂಡಿಯ
ಮರಕೋಲು ಬಂಡಿಯ
ಏಳುಜೊತೆ ಬಂಡೀಯ
ತಯಾರು ಮಡಿಕೊಂಡು
ಇರಬೇಕು ಅಂದುಬಿಟ್ಟು
ಹೊರಟಾನು ಹೆಳವನು
ಬಸವಾನ ಮೇಲೆ ಕೂತು
ದಯವಾದ ಹೆಳವಾನು
ಹಜಾಮರ ದೊರೆಗೋಳು
ಸಂತೋಷ ಪಡುತವ್ರೆ
ಚಾವುಡಿಯ ನೇರಕ್ಕೆ
ಕೆಳಗಡೆ ಇಳಿಸ್ಕೊಂಡ್ರು
ಹೆಳವನಿಗೆ ಈಬತ್ತಿ
ಯೀಳ್ಯವ ಕೊಟ್ಟಾರು
ಮೇರ‍್ಬಾನ ಮಾಡುತಾವ್ರೆ
ಹಜಾಮರ ದೊರೆಗೊಳು
ಶಾಸ್ತ್ರವ ಕೇಳುತವ್ರೆ
ಶಾಸ್ತ್ರವು ಸರಿಬಂತು
ಹೆಳವಾನು ಗೌಡನು
ಏನಂತ ಕೇಳುತಾನೆ
ಹೆಳವೇಗೌಡ ಎಂಬುವನು
ಏನಂತ ಕೇಳುತಾನೆ
ನಾವು ಬಾಳೋಕೆ ಬದುಕೋಕೆ
ಮದುವೆಯ ಮಾಡುವರು
ನಮ್ಮಮತ ಪದ್ಧತಿಯೊಳಗೆ
ಹೇಳ್ತೀವಿ ಕೇಳ್ರಪ್ಪ
ಕಂಕಣ ಕಟ್ಟಿಸಬೇಕಾದರೆ
ಕೋಳಿಯೆ ಕೂಗಾಕಿಲ್ಲ
ನಾಯಿ ಬೊಗಳಾಕಿಲ್ಲ
ನಿಮ್ಮ ಊರು ಉಂಟಾಗಿ
ನೀವು ಕಂಕಣ ಕಟ್ಟಬೇಕಾದ್ರೆ
ಈ ಮಾತ ಒಪ್ಪಬೇಕು
ಆ ಮಾತಿಗೊಪ್ಪಿಕೊಂಡ್ರು
ಹಜಾಮರ ದೊರೆಗೊಳು
ಹೆಳವಾನು ಗೌಡನು
ಹೇಳುತೀನಿ ಕೇಳಿಸ್ವಾಮಿ
ನಿಮ್ಮ ನಿಮ್ಮ ಜನಗೋಳು
ನಮ್ಮದು ಚಿಕ್ಕರಮನೆ
ಜಾಗವು ಕಿಷ್ಕಿಂದ
ನೀವು ಪಟ್ಟಣದಲ್ಲಿ
ಏನೇನು ಸುಂಗಾರ
ಮಾಡಬೇಕೊ ಮಾಡಿರಿ
ಏನೇನು ಶಾಸ್ತ್ರಗಳು
ನಡೆಸಬೇಕೊ ನಡೆಸೀರಿ
ಶಾಸ್ತ್ರ ಸುಂಗಾರವ
ನಡೆಸಿದ ಮೇಲಾದರೆ
ಎಲ್ಲೆ ಕಲ್ಗೆ ಬಂದರೆ
ಬಾವನೋರ ಕರಕೊಂಡು
ಎಲ್ಲೆ ಕಲ್ಗೆ ಬಂದರೆ
ಕಂಕಣವ ಕಟ್ಟುತೀವಿ
ನೀವು ಎಲ್ಲೆ ಕಲ್ಲಿಗೆ ಬಂದು
ಬೇರೆ ಶಪಥವ ಮಾಡಿ
ನಾವು ಪಲ್ಲಕ್ಕಿ ತರುತೀವಿ
ಕುಂಡ್ರಿಸಿಕೊಂಡು ಹೋಗುತೀವಿ
ನಾವು ಪಲ್ಲಕ್ಕಿ ತರುತೀವಿ
ಹೋಗುತೀವಿ ಕೇಳಪ್ಪ
ಆ ಮಾತಿಗೆ ಒಪ್ಪಿಕೊಂಡು
ಹಜಾಮರ ದೊರೆಗೊಳು
ಹೆಳವೇಗೌಡನನ್ನು
ಬಸವಾನ ಮೇಲೆ ಕುಂಡ್ರಿಸಿ
ಪಟ್ಟಣಕೆ ತಿರುಗಿಸಿಕೊಟ್ರು

      
ಒಂದೂವೆ ಕಿರುಮನೆಗೆ
ಹೆಳವಾನು ಎಂಬುವನು
ಮೂಗಂಡುಗ ತಿಗಣೆಯ
ಮೂರು ಕಂಡುಗ ಇರವೆಯ
ಆರು ಕಂಡುಗ ಸೊಳ್ಳೆಯು
ಎಲ್ಲವೂ ಸೇರಿಸ್ಬಿಟ್ಟ
ಕಿರು ಮನೆಗೆ ತುಂಬಿ ಬಿಟ್ಟ
ಬಾಕಲವೆ ಹಾಕಿಕಂಡ
ಬಾಕಲವೆ ಹಾಕಿಬಿಟ್ಟು
ಎಳಕಂಡ ನನಗುರುವೆ
ಹಜಾಮರ ಪಟ್ಟಣದಲ್ಲಿ
ಶಾಸ್ತ್ರ ಸೂಸ್ತ್ರ ತೀರಿಸಿ
ಹಜಾಮರ ಗಂಡೀಗೆ
ಶಾಸ್ತ್ರ ಸಂಬಂಧ ಮಾಡಿ
ಬೆಟ್ಟತುಂಬುಂಗುರ
ಬಟ್ಟ ತಂಬೂರಿಗಳು
ಸೊಳೇರ ಮ್ಯಾಳದಲಿ
ವಾದ್ಯವ ಮೆರಿಸಿಕೊಂಡು
ಸೂಳೇರ ಮ್ಯಾಳದಲಿ
ಮೆರವಣಿಗೆ ಮಾಡ್ಕಂಡು
ಎಲ್ಲೆಯ ಕಲ್ಲಿಗೆ ಬಂದ್ರು
ಆ ಮಾತು ಕೇಳಿಕೊಂಡು
ಸೂಳೇರ ಮ್ಯಾಳದಲಿ
ಮೆರವಣಿಗೆ ಮಾಡಿಕಂಡು
ಎಲ್ಲೆ ಕಲ್ಲಿಗೆ ಬಂದ್ರು
ಎಲ್ಲೆ ಕಲ್ಲಿನೊಳಗೆ
ಭೇರಿ ಶಬ್ದನಾಯ್ತು
ಅವರ ಭೇರಿ ಶಬ್ದವ ಕೇಳಿ
ಕೂತುಕಂಡು ನನಗುರುವೆ
ಹೂವಿನ ಪಲ್ಲಕ್ಕಿ ತಂದು
ಮದುವೆಯ ಗಂಡನಾದರೆ
ಪಲ್ಲಕ್ಕಿ ಮ್ಯಾಲೆ ಕುಂಡ್ರಿಸಿ
ಹಜಾಮರ ದಂಡೂವೆ
ಹಜಾಮರ ಪಟ್ಟಣಕ್ಬಂತು
ಅಲ್ಲೀಗೆ ಕರಕೊಂಡು
ಹೋದಾರು ನನಗುರುವೆ
ಅವರ ಪಾದಾಕೆ ಪನ್ನೀರಕೊಟ್ರು
ಕಿರುಮನೆಗೆ ಬಿಟ್ಟಾರು
ಸೊಳ್ಳೇಯ ಮನೇಗಿಬಿಟ್ರು
ಸೊಳ್ಳೇಯ ಮನೆಯಲ್ಲಿ
ನೆಲ್ಲುವಿನ ಹಾಸಿಗೆಯು
ನೆಲ್ಲುಲಿನ ಹಾಸಿಗೆಮೇಲೆ
ಕೂತುಕಂಡು ನಗುತವನೆ
ಒಳಗಾದರೆ ಬಿಬ್ಟು ಬಿಟ್ರು
ಬೀಗಾವ ಹಾಕ್ಕಂಡ್ರು
ಚಿಲಕ ಬೀಗ ಹಾಕಿ
ಹೆಣ್ಣು ನಾಯಿಗೆ ಸುಂಗಾರ
ವಾಲೆ ಬಂಗಾರ ಸಹಿತ
ಶಾಸ್ತ್ರ ಸೂಸ್ತ್ರ ಮಾಡಿ
ಕಿರುಮನೆಗೆ ಬಿಟ್ಟಾರು
ಮಾಯಕಾರ ನನ ಗುರುವೆ
ತಿಗಣೆ ಸೊಳ್ಳೆಗಳು
ಮುತ್ತಿಕೊಂಡು ಕಡದವೆ
ನಿಮ್ಮ ಹೆಣ್ಣಿನ ಮನೆ ಮಾರತ್ತ
ಬಾಕಲ ತೆಗಿರಪ್ಪ
ನಮ್ಮ ಹುಡುಗಿಗೆ ಕಂಕಣ ಕಟ್ತೀವಿ
ಅಲ್ಲೇಯ ಕೂತುಕಪ್ಪ
ನಾವು ಹುಡುಗೀಯ ಸುಂಗಾರ
ಮಾಡುತ ಇದೀವಪ್ಪ
ನಿನ್ನ ಇರುಗೊಳು ಸೊಳ್ಳೆಗೊಳು
ತಿಗಣೆಗಳು ಎಲ್ಲ ಸೇರಿ
ಅರೆಜೀವನ ಮಾಡ್ಯಾವೆ
ಹಜಾಮರ ಹುಡುಗಾನ
ಈಚೇಗೆ ಎಳಕಂಡ್ರು
ಶಿರಸಾವ ಕಡಿದಾರು
ಹೆಣ್ಣು ನಾಯಿಗು ಅವನೀಗು
ನಿಲ್ಲಿಸಿ ಲಗ್ನಮಾಡಿ
ಶಿರಸಾ ಸೀಳಿಬಿಟ್ರು
ಶಿರಸಾದ ಮೇಲೆ
ದೀಪಾವ ಮಡಗಿದರು
ಹೆಜ್ಜೆರಳು ಮಾಡಿದರು
ಮಾಯಕಾರ ನನಗುರುವೆ
ಏಳು ಜೊತೆ ಬಂಡೀಯು
ಸಿದ್ದಪಡಿಸಿಬಿಟ್ರು
ಬಂಡಿಯ ಮ್ಯಾಲಿನ್ನು
ಸಾಮಾನಾಕಿಕೊಂಡು
ಕರುವನ್ನೆ ಕಟ್ಟಿಕಂಡು
ಕರುವನ್ನೆ ಬಿಟ್ಟುಕೊಂಡು
ಅಲ್ಲಿಂದ ಬಂದರು
ಕಾವೇರಿ ಹೊಳಗೆ ಬಂದ್ರು
ಮುಂದೇನು ಗತಿಯೆಂದು
ಹೊಳೆಹತ್ರ ನಿಂತು ಕಂಡ್ರು
ಸಾಲೀಗೆ ಯೋಚನೆಯ
ಮಾಡಿಕಂಡು ನಿಂತುಕಂಡ್ರು
ಹೆಳವಾನು ಎಂಬುವನು
ಕೇಳು ಕೇಳು ತಂಗ್ಯಮ್ಮ
ನಿನ್ನ ದೆಸೆಯಿಂದ
ಇಷ್ಟೊಂದು ಕಷ್ಟವು
ನಿನು ಸತ್ಯಶೀಲೆಯಾದರೆ
ಬಂಡೋಗೊ ಹೊತ್ತಿಗೆ
ಸ್ಥಳನೀನು ಕೊಡಿಸಬೇಕು
ಒಬ್ಬ ತಾಯಿಗೆ ಒಬ್ಬ ತಂದೆಗೆ
ಹುಟ್ಟಿದ್ರೆ ತಂಗ್ಯಮ್ಮ
ಗಂಗಮ್ನ ಬೇಡಿಕೊಂಡು
ಮೇಲನೀರು ಮೇಲೆ ಮಾಡು
ಕರ್ಪೂರ ಹಚ್ಚಿಕೊಂಡು
ಕೈಲಾದರೆ ಹಿಡಕೊಂಡು
ನನ್ನ ಬಂಡಿಹೋಗುವಂತೆ
ಹಾದೀಯ ನೀನು ಕೊಟ್ರೆ
ನನ್ನ ಕಾರ್ಯದ ದಿವಸ
ನಡೆಮುಡಿ ಸೈವಾಗಿ
ಒಡ್ಡುವಾಲಗ ಸೈವಾಗಿ
ನಡುಮಲ್ಲಿ ಪೂಜೆಮಾಡಿ
ಹೊಂಬಾಳೆ ಸೈವಾಗಿ
ವಾಲಾಡಿ ಬಂದೇವು
ಹೊನ್ನರಳಿಗೆ ಧಾರೆ
ಎರಿತೀನಿ ಗಂಗವ್ವ
ಆ ಮಾತ ಕೇಳಿಕಂಡು
ಬಂಡೋಗುವಂತೆಯು
ಗಂಗಾಭವಾನಿ ಹಾದಿಕೊಟ್ಟು
ಆರು ಜೊತೆ ಬಂಡೀಯು
ಆಚೆ ಕಡೆಗೆ ಹೋದವು
ಕುಂಟುಬಂಡಿ ಒಂಡಿನ್ನು
ತಿರುಗೀಯೆ ನೋಡುತಾರೆ
ಅಯ್ಯಯ್ಯೊ ತಮ್ಮನ
ಬಂಡೀಯೆ ಬರಲಿಲ್ಲ
ನಮಗೆ ಮುಂದ್ಯಾರು ದಿಕ್ಕ್ಯಾರು
ಗೋಳುಗೋಳನೆ ಶೋಕಮಾಡಿ
ಕೇಳು ಕೇಳು ಅಣ್ಣದೀರ‍್ಯೊ
ಪೀಡೇಯೆ ಹೋಯ್ತಂದು
ಸುಖವಾಗಿ ಬದುಕ್ರಪ್ಪ
ಅಲ್ಲೇಯೆ ನಿಂತುಕಂಡು
ಬಂದು ಬಳಗ ಎಲ್ಲ
ಶೋಕವ ಮಾಡ್ತಾರೆ
ಬಂಡಿಗೆರೆ ನೋಡ್ಕೊಂಡು
ಹಜಾಮರ ದಂಡುಬಂತು
ಎಳವೇಗೌಡ್ನ ಹಿಡಕೊಂಡು
ಕೇಳುತಾರೆ ಅವರಾಗ
ಅಯ್ಯಯ್ಯೊ ನಿಮಪಾದ
ಹೇಳುತೀನಿ ಕೇಳ್ರಪ್ಪ
ನಾವು ಸುಖವಾಗಿ
ತಂಗೇಯ ಕೊಟ್ಟು ಬಾಳಬೇಕು
ಅಂತ ನಾನೇಳಿದ
ಮಾತಾನೆ ಕೇಳಿಕೊಂಡು
ನೀನೂವೆ ಅವರಂತೆ
ಅವರಂತೆ ಆದೀಯ
ಅನತೇಳಿ ಹಿಡಕಂಡು
ಸೊಂಟಸೊಂಟಕೆ ಒದ್ದು
ಕೀಲು ಕೀಲಿಗೆ ಒದ್ದು
ಬುಗು ಬುಗುನೆ ತಿರುಗಿಸಿ
ಬೀಸಾಕಿ ಹೋದಾರು
ಬಟ್ಟೆಯ ಕಳೆದಾರು
ಬಳಸ್ಕೊಂಡು ಹೊಡೆದಾರು
ಕೇಳಿಕೇಳಿ ನಿಮಪಾದ
ಅವರನ್ನ ವಂಶವು
ನಿರ್ವಂಶ ಮಾಡಬೇಕು
ವಂಶವ ಮಡಗಬೇಡಿ
ನಿರ್ಮೂಲ ಮಾಡಬೇಕು
ಕೇಳು ಕೇಳು ಹೆಳವನೆ
ನಮ್ಮಂತೆ ನೀನಿದ್ದೀಯ
ನಿನಸತ್ಯ ಮೆಚ್ಚಿಕೊಂಡೊ
ಭಕ್ತಿಯ ಮೆಚ್ಚಿಕೊಂಡೊ
ನೀರೂವೆ ಹೆಚ್ಚಿದುವು
ಕೇಳಿ ಕೇಳಿ ನಿಮಪಾದ
ಬಂಡಿಗಳೆಲ್ಲ ಹೋದಾವು
ನೀವೂನೆ ಹೋಗಿನ್ನು
ಒಡದಾಕಿ ಬನ್ನೀರಿ
ಸಾಯಿಸಿ ಬನ್ನೀರಿ
ಒಬ್ಬರೊಬ್ಬರ ಕೈಯ
ಕಟ್ಟಿಕೊಂಡು ಹೊಳೆಗಿನ್ನು
ಬಿದ್ದೀತು ದಂಡೆಲ್ಲ
ಮಂಡಿ ಉದ್ದಲ ನೀರು
ಬಂತಲ್ಲ ಹೆಳವಯ್ಯ
ಏನೇನು ಹೆಳವನೆ
ಎಲ್ಲಿಗಂಟ ಬರುತದೆ
ಅ ಮಾತ ಕೇಳುತವ್ನೆ
ಅಯ್ಯಯ್ಯೊ ಆಚೆಗೆ
ಮಳ್ಳೊವೆ ಒತ್ಲುಸೈತೆ
ಮುಂದಕೆ ಹೆಜ್ಜೆಯಿಟ್ರು
ಒಂದು ಮಂಡಲ ಹೊಡೆದಾರು
ಹೊಳೆ ಒಳಗೆ ಕೊಚ್ಚಿಕೊಂಡು
ನಿರ್ಮೂಲವಾಗಿ ಹೋದವು
ಮುಂದಕೆ ನನಗುರುವೆ
ಬಂದೂವೆ ಹೆಣ್ಣೊಂದು
ಗಂಡೊಂದು ಉಳಕಂತು
ಕೇಳು ಕೇಳೊ ಒಕ್ಕಲಗೌಡ
ಸಾಯದೆ ಬದುಕ್ರಿ
ನಿನ್ನ ಜುಟ್ಟು ಹಿಡಿದು
ಮೂರು ತಟ್ಟು ತಟ್ಟಿ
ಮೂರು ಪಟ್ಟೆ ತೆಗೀದೆ ಹೋದ್ರೆ
ನಾನ್ಹಜಾಮರ ಹುಡುಗನಲ್ಲ
ನೋಡು ಈ ಹುಡುಗನ ಮೀಸೆಯ
ನೀ ಮೂರು ತಟ್ಟು ತಟ್ಟಿದರೆ
ವರ್ಷಕೊಂದಾವರ್ತಿ
ಹಡದೆ ಬಿಸಾಕ್ತಿವಿ
ನನಗೇನು ಮಾಡ್ತಿಯ
ಆ ಮಾತ ಆಡಿದನೆ
ಹೆಳವೇಗೌಡನು
      
ಆರು ಜೊತೆ ಬಂಡೀಯು
ಹೊರಟಾವು ಮುಂದಕೆ
ಒಕ್ಕಲು ಮುದ್ದೇಗೌಡ್ನು
ಆರು ಜೊತೆ ಬಂಡೀಯು
ತೆಂಕಲ ರಾಜ್ಯದಿಂದ
ಬಡಗಲ ರಾಜ್ಯಕೊರಟ್ರು
ಗೌರಮ್ಮ ನೆಂಬುವಳು
ಕೇಳಿ ಕೇಳಿ ಅಣ್ಣದೀರ
ನನ್ನಿಂದ ತೊಂದ್ರಿ ಬಂತು
ನನ್ನಿಂದ ತೊಂದ್ರಿ ಬಂತು
ಸಿರಿಗಂಧವ ಕೊಂಡಾವ
ಕಾರಾಜಿ ಕೊರಡಾಕಿ
ಹೋಮಗೊಂಡ ಹೋಗುತೀನಿ
ನನ್ನನ್ನು ನೀವಾದರೆ
ಮನೆದೇವರ ಮಾಡಿಕೊಳ್ಳಿ
ಎಂದೂವೆ ಹೇಳಿಬಿಟ್ಟು
ಹೋಮಗೊಂಡ ವಾದಾಳು
ಹೆಳವಯ್ನ ಬಿಟ್ಟಲ್ಲಿ
ಆರು ಬಂಡಿ ಬರುವಾಗ
ಕೇಳು ಕೇಳು ತಮ್ಮನೆ
ಬದುಕಿದ್ದು ಬಂದರೆ
ಗುರುತೇನು ಕೊಡಬೇಕು
ತಾಯಿ ಹಾಸ್ಕೊಳು ಚಾಪೆ
ಜೋಳುಗೆಯ ಮಾಡ್ಕೊಂಡು
ಮುಂದ್ಲೇರೆತ್ತಿನ ಗಂಟೆ
ಎಳವಾರಿ ಮಾಡಿಕೊಂಡು
ಕೈಗಾದರೆ ತೆಗುದ್ಕೊಂಡು
ಬಂದಾರ ನಮತಮ್ಮ
ನಿನಗುರುತ ಹಿಡಿದೇವು
ಹೆಳವಾನು ಎಂಬುವನು
ಏನು ಕೆಲಸ ಮಾಡುತಾನೆ
ಹೊಟ್ಟೆಯ ಹಸಿವನ್ನು
ತಾಳಲಾರದೆ ಆವಾಗ
ಹರಳೂರ ಬೇಲದಮರ
ಹಣ್ಣಿಲ್ಲ ಮರತ್ತಾವು
ಶಿವ ಶಿವ ಅಂದಾರೆ
ಕೈಯನೆ ಎತ್ತಿದರೆ
ಒಂದೂವೆ ಬ್ಯಾಲದಹಣ್ಣು
ಅವನ ಕೈಗೆ ಬೀಳ್ತವೆ
ಆವಾಗ ಹೆಳವಯ್ಯ
ಒಂದಾನ ಒಂದು ದಿವಸ
ಅಣ್ಣದೀರ ಸೇರಿಕೊಂಡು
ಏಳು ಜನ ಅಣ್ಣ ತಮ್ಮದೀರು
ಪಾಲಾಗುತ್ತಲವ್ರೆ
ಏಳುಪಾಲುಮಾಡಿಬಿಟ್ಟು
ಆರುಜನ ಹಂಚಿಕೊಂಡ್ರು
ಹೆಳವಾನೆ ಗೌಡಾನು
ಏನಂತ ಹೇಳುತವ್ನೆ
ಕೇಳು ಕೇಳು ಅಣ್ಣದೀರ‍್ಯ
ನಾ ಹೆಳವಾನು ಕೇಳ್ರಪ್ಪ
ನಿಜವಾಗೇಳುತೀನಿ
ಕೈಯಿಲ್ಲದ ಕಾಲಿಲ್ಲದ
ಹೆಳವಾನು ನಾನಾದರೆ
ಚಿಕ್ಕಣ್ಣ ದೊಡ್ಡಣ್ಣ
ಆರುಜನ ಅಣ್ಣದೀರ
ಮನೆ ಒಳಗೆ ಊಟವ
ಮಾಡಿಕೊಂಡಿರುತೀನಿ
ಆರು ಜನ ಅಣ್ಣದೀರ
ಭಾಗವ ಹಂಚಿಕೊಳ್ಳಿ
ವಾಸಾಕೆ ಹುಲ್ಲುಮನೆ
ಅಷ್ಟಗಲ ಕಟ್ಟಿಕೊಟ್ರು
ಊಟವ ಮಾಡಿ ಬಿಟ್ಟು
ಆ ಮನೆಗೆ ಬರುತಾನೆ
ಹುಲ್ಲು ಜೋಪಡಿಯಲ್ಲಿ
ಹೋಗೋಗಿ ಮನಗ್ತಿದ್ದ
ಒಂದಾನ ಒಂದು ದಿವಸ
ಕಣ್ಣಿಲ್ಲದ ಕಂಗಾಲ
ತೆಲುಗು ಬಣಜಾರವ್ವ
ಕುಂಟಾನಾಗಲಿ ಕುರುಡುನಾಗಲಿ
ಪುರುಷ ಅಂದರೆ ನನಗೆ
ಸಿಕ್ಕಿದರೆ ಸಾಕಪ್ಪ
ಅಂದುಕೊಂಡು ಇದ್ದಾಳು
ಹೆಳವಪ್ಪ ಎಂಬುವನು
ಕೈಯಿಲ್ಲ ಕಾಲಿಲ್ಲ
ನಾನೂವೆ ಅಂಥವನೆ
ಅಂತೇಳಿ ಅವರಿಬ್ರು
ಅನುಮತಿ ಪಡಕೊಂಡ್ರು
ಮದುವ್ಯಾದ್ರು ನಮಗುರುವೆ
ನವನಾರು ಒಂಬತ್ತು ತಿಂಗಳು
ಗರ್ಭವತಿ ಆದಾಳು
ಇಬ್ಬರು ಮಕ್ಕಳುಟ್ದೊ
ಇಬ್ಬಾರು ಗಂಡುಮಕ್ಳು
ಒಂದನ ಒಂದು ದಿವಸ
ಮಕ್ಕಳಿಗೆ ಬುದ್ಧಿ ಬಂತು
ತಾಯಿಗಾದರೆ ಕಣ್ಣಿಲ್ಲ
ತಂದೆಗಾದರೆ ಕೈಯಿಲ್ಲ
ಅಂಗಂತ ಹೇಳ್ತವ್ರೆ
ಗಂಡುಮಕ್ಕಳು ಕೇಳ್ತವ್ರೆ
ಮುಂದೇನು ಗತಿ ನಮಗೆ
ನಮಗೆ ಭಾಗವು ಎಲ್ಲಿದೆ
ಎಂದರು ಆ ಮಾತ
ಅಯ್ಯಯ್ಯೊ ಗಂಡುಮಕ್ಕಳೆ
ನನಗೆ ಕೊಟ್ಟಿರುವ ಭಾಗ
ಗಂಟೆಯು ಚಾಪೆಯು
ತಕ್ಕೊಂಡು ಹೋಗಿ ನೀವು
ನಿಮ್ಮ ದೊಡ್ಡಪ್ಪದೀರ
ಕೇಳೋಗಿ ಮಕ್ಕಳೆ
ಹಾಗಂತ ಕೇಳಿಕೊಂಡು
ಅವರು ಹೊರಟಾರು ನಮಗುರುವೆ
ಕೇಳಿ ಕೇಳಿ ದೊಡ್ಡಪ್ಪದೀರೆ
ನಮ್ಮ ಬದುಕೂವೆ ಎಲ್ಲಿದೆ
ನಮ್ಮ ಅಪ್ಪನ ಪಾಲೆಲ್ಲಿ
ನಮಗೆ ನೀವು ಕೊಡಲೆಬೇಕು
ಕೇಳಿ ಕೇಳಿ ಕಂದ ಮಕ್ಕಳೆ
ಹೇಳುತೀವಿ ಕೇಳ್ರಪ್ಪ
ನಿಮ್ಮ ಅಪ್ಪನ ಪಾಲು
ಬರಲಾರು ಕಂದಗಳೆ
ವರ್ಷಕ್ಕೆ ಒಂದು ಸಲ
ನಿಮ್ಮ ಹೊಟ್ಟೆ ತಣ್ಣಗ್ ಮಾಡಿ
ಸಂತೋಷದಿಂದ ಕಳುಸ್ತಿವಿ
ನಾವು ಮಾಡತಕ್ಕ ಮರ್ಯಾದಿಯ
ಮಾಡೀಯೆ ಕಳುಸ್ತೀವಿ