ಭೂಮಿಯ ಮೇಲ್ಭಾಗದಲ್ಲಿರುವ ಹೊಂಡ, ಕೆರೆ, ಸರೋವರ, ಹಳ್ಳ, ನದಿ, ಸಮುದ್ರ ಮುಂತಾದ ಜಲಾಶಯಗಳಿಗೆ ಮಳೆಯ ನೀರು ಹರಿದು ಸೇರುತ್ತದೆಯಲ್ಲದೇ ಭೂಮಿಯ ಆಳದಲ್ಲಿ ಅಂತರ್ಜಲದ ರೂಪದಲ್ಲಿಯೂ ಸಂಗ್ರಹಗೊಳ್ಳುತ್ತದೆ. ಈ ಅಂತರ್ಜಲವನ್ನು ತೆರೆದ ಬಾವಿ ಇಲ್ಲವೆ ಕೊಳವೆ ಬಾವಿಗಳ ಮೂಲಕ ಹೊರ ತೆಗೆದು ಮಾನವನು ಕೃಷಿಗೆ ಮತ್ತು ತನ್ನ ಹಲವು ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾನೆ. ಅಂತರ್ಜಲಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ.

ಭಾರತದಲ್ಲಿ ಅಂತರ್ಜಲ ಸಂಗ್ರಹ

ಅಂತರ್ಜಲದ ಬಹು ದೊಡ್ಡ ಸಂಗ್ರಹ ಭಾರತದಲ್ಲಿದೆ ಎಂಬುದು ಸಂತಸದ ಸಂಗತಿಯೆನ್ನಬಹುದು. ಆದರೆ, ಅಂತರ್ಜಲದ ಪ್ರಮಾಣವು ದೇಶದ ಎಲ್ಲ ಪ್ರದೇಶಗಳಲ್ಲಿ ಒಂದೇ ರೀತಿಯಲ್ಲಿ ಹಂಚಿ ಹೋಗಿಲ್ಲ ಎಂಬುದು ಗಮನಾರ್ಹ. ಇದಲ್ಲದೇ ಈ ಜಲ ಮೂಲದ ಅಸಮರ್ಪಕ ಬಳಕೆಯಿಂದ ನೀರಿನ ಸಂಗ್ರಹವು ಕ್ಷೀಣಿಸುತ್ತಿರುವುದು ಕಳವಳಕಾರಿಯಾದ ಸಂಗತಿಯೆನ್ನಬಹುದು.

ಭೂಗರ್ಭ ಶಾಸ್ತ್ರದ ಆಧಾರದ ಮೇಲಿಂದ ನಮ್ಮ ದೇಶದಲ್ಲಿರುವ ಅಂತರ್ಜಲದ ಪ್ರದೇಶಗಳನ್ನು ಮೂರು ಗುಂಪುಗಳಲ್ಲಿ ವರ್ಗೀಕರಿಸಬಹುದು.

. ಗಟ್ಟಿ ಶಿಲೆಗಳಿರುವ ಪ್ರದೇಶಗಳು: ಈ ಬಗೆಯ ಪ್ರದೇಶದ ಮೇರೆಯನ್ನು ಅಷ್ಟು ನಿಖರವಾಗಿ ಗುರುತಿಸಲ್ಲವಾದರೂ ಉತ್ತರದಲ್ಲಿ ನರ್ಮದಾ ಮತ್ತು ತಾಪಿ ನದಿಗಳಿಂದ ಆರಂಭವಾಗಿ ದಕ್ಷಿಣದ ಕನ್ಯಾಕುಮಾರಿಯವರೆಗೆ ಕೊನೆಗೊಳ್ಳುವ ದಖ್ಖನ್‌ಪ್ರಸ್ಥ ಭೂಮಿಯು ಈ ಭಾಗದಲ್ಲಿ ಅಡಕವಾಗಿದೆ. ದೇಶದ ಸುಮಾರು ೨/೩ ನೇ ಭಾಗ ಪ್ರದೇಶವನ್ನಾವರಿಸಿರುವ ಈ ಪ್ರದೇಶವು ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಓರಿಸ್ಸಾ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಸೇರಿದೆ. ತೆರೆದ ಬಾವಿಗಳನ್ನು ನಿರ್ಮಿಸಿ, ಅಂತರ್ಜಲವನ್ನು ಹೊರ ತೆಗೆದು, ಬಳಸುವ ಪದ್ಧತಿಯು ಈ ರಾಜ್ಯಗಳಲ್ಲಿಯ ಸಾಮಾನ್ಯ ದೃಶ್ಯವೆನ್ನಬಹುದು. ಕೊಳವೆ ಬಾವಿಗಳು ಇತ್ತೀಚಿನ ವರ್ಷಗಳಲ್ಲಿ ಪ್ರಚಲಿತಗೊಳ್ಳುತ್ತಿವೆ.

ಗ್ರಾನೈಟ್‌, ಬೆಸ್ಟೆಲ್‌, ನಿಶ್‌, ಶಿಸ್ಟ್‌ಮತ್ತು ಕ್ವಾರ್ಝಾಯ್ಟ್‌ಶಿಲೆಗಳ ಪ್ರಾಬಲ್ಯವು ಇಲ್ಲಿ ಕಂಡುಬರುತ್ತದೆ. ಇವು ಕಠಿಣ ಶಿಲೆಗಳಾಗಿರುವುದರಿಂದ ಜಲ ಸಂಗ್ರಹಕ್ಕೆ ಹೆಚ್ಚು ಆಸ್ಪದವನ್ನು ನೀಡುವುದಿಲ್ಲ. ಶಿಲೆಗಳ ಮೇಲ್ಭಾಗದಲ್ಲಿ ಮಾತ್ರ ನೀರು ನಿಲ್ಲಲು ಸಾಧ್ಯವಾಗುವುದರಿಂದ ಅಂತರ್ಜಲ ಸಂಗ್ರಹವನ್ನು ಮಿತಿಗೊಳಿಸಿದಂತಾಗುತ್ತದೆ. ಆದರೆ, ಶಿಲೆಗಳು ಶಿಥಿಲಗೊಳ್ಳತೊಡಗಿದವೆಂದರೆ ತುಲನಾತ್ಮಕವಾಗಿ ಹೆಚ್ಚು ನೀರು ಸಂಗ್ರಹವಾಗುತ್ತದಲ್ಲದೇ ಬೆಸ್ಟಾಲ್‌ಶಿಲೆಯಲ್ಲಿ ಮೂಲತಃ ಇರುವ ಕೆಲವು ರಂಧ್ರಗಳ ಮೂಲಕ ಮತ್ತು ಇತರ ಶಿಲೆಗಳಲ್ಲಿಯ ಬಿರುಕು, ಸಂಧಿ ಇತ್ಯಾಧಿಗಳ ಮೂಲಕ ನೀರು ಅತ್ತಿತ್ತ ಚಲಿಸುತ್ತದೆ. ದೊಡ್ಡ ಪ್ರಮಾಣದ ನೀರಿನ ಸಂಗ್ರಹಕ್ಕೆ ಈ ಪ್ರದೇಶದಲ್ಲಿ ನೈಸರ್ಗಿಕ ಅನುಕೂಲತೆಗಳು ಇಲ್ಲದಿರುವುದರಿಂದ ಇಲ್ಲಿ ಅಂತರ್ಜಲ ಅಭಿವೃದ್ಧಿಗೆ ವಿಸ್ತ್ರುತ ಅವಕಾಶವು ಇಲ್ಲವೆನ್ನಬಹುದು.

ಈ ಪ್ರದೇಶದಲ್ಲಿ ಸಾಮಾನ್ಯ ಪರಿಸ್ಥಿತಿಯು ಮೇಲಿನಂತಿದ್ದರೂ ಸಹ ನೈಸರ್ಗಿಕವಾಗಿ ಕಠಿಣವಾದ ಕಲ್ಲುಗಳು ಇರದಿರುವ ಸ್ಥಳಗಳಲ್ಲಿ ಮತ್ತು ತಗ್ಗಿನ ಪ್ರದೇಶಗಳಲ್ಲಿ ಬಸಿದು ಬಂದ ನೀರು ನಿಲ್ಲುವಲ್ಲಿ ಮತ್ತು ಇಂತಹ ಪರಿಸ್ಥಿತಿಗಳಿರುವಲ್ಲಿ ನೀರು ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗಬಲ್ಲದು. ಈ ಸ್ಥಳಗಳಲ್ಲಿ ಅಂತರ್ಜಲದ ಅಭಿವೃದ್ಧಿಯೂ ಸಾಧ್ಯವಿದೆ.

. ರೇವೆ ಮಣ್ಣಿನ ಪ್ರದೇಶ: ಗಟ್ಟಿ ಶಿಲೆಗಳ ಬದಲು, ನದಿಗಳು ತಂದು ಸಂಗ್ರಹಿಸಿದ ರೇವೆಯಿಂದ ನಿರ್ಮಿತವಾದ ಈ ಪ್ರದೇಶವು ಹಿಮಾಲಯ ಪರ್ವತದ ಅಡಿಯಿಂದ ಪ್ರಾರಂಭವಾಗಿ, ದಕ್ಷಿಣದ ದಖ್ಖನ್‌ಪ್ರಸ್ಥಭೂಮಿಯ ಆರಂಭದವರೆಗೆ ಹಾಗೂ ದೇಶದ ಪಶ್ಚಿಮ ಗಡಿಯಿಂದ ಪೂರ್ವಗಡಿಯವರೆಗೂ ಹಬ್ಬಿದೆ. ಸಿಂಧೂ, ಗಂಗಾ ಹಾಗು  ಬ್ರಹ್ಮಪುತ್ರಾ ನದಿಗಳು ತಂದು ಸಂಗ್ರಹಿಸಿದ ರೇವೆ ಮಣ್ಣಿನ ಈ ಪ್ರದೇಶವು ಅಂತರ್ಜಲ ದೃಷ್ಟಿಯಿಂದ ಅತಿ ಮಹತ್ವದ್ದನಿಸಿದೆ. ಈ ಪ್ರದೇಶಗಳನ್ನು ವಿಭಾಗಗಳನ್ನಾಗಿ ಮಾಡಬಹುದು.

. ಹಿಮಾಲಯದ ಪರ್ವತದ ಪ್ರಷ್ಠ ವಿಭಾಗ: ನದಿಗಳು ತಂದು ಇಲ್ಲಿ ಸಂಗ್ರಹಿಸಿದ ನಿರವಯದ ವಸ್ತುಗಳು ಸರಿಯಾಗಿ ವಿಂಗಡನೆಗೊಂಡಿಲ್ಲ. ಹೀಗಾಗಿ ಕಲ್ಲು ಗುಂಡುಗಳಿಂದ ಆರಂಭವಾಗಿ, ಜಿನುಗು ಮರಳು ಮತ್ತು ರೇವೆಗಳ ವರೆಗಿನ ವಿಭಿನ್ನ ಆಕಾರದ ಕಣಗಳನ್ನು ಇಲ್ಲಿ ಕಾಣಬಹುದು. ಈ ವಿಭಾಗವು ಒಂದು ಕಿರಿದಾದ ಪಟ್ಟಿಯಂತಿದ್ದು, ನೈನಿತಾಲದ ಹತ್ತಿರ ಸುಮಾರು ೨೫ ಕಿ.ಮೀ. ಅಗಲವಾಗಿದೆ. ಇಲ್ಲಿ ಅಧಿಕ ಮಳೆ ಬರುತ್ತದೆ. ಮಳೆಯ ನೀರು ಸುಲಭವಾಗಿ ಭೂಮಿಯಾಳಕ್ಕೆ ಸಂಗ್ರಹಳಗೊಳ್ಳುತ್ತದೆ. ಈ ಭೂ ಭಾಗವು ಎತ್ತರದಲ್ಲಿರುವುದರಿಂದ ಇದಕ್ಕಿಂತ ಕೆಳ ಮಟ್ಟದಲ್ಲಿರುವ ಪ್ರದೇಶಕ್ಕೆ ಇಲ್ಲಿಯ ಜಲ ಸಂಗ್ರಹದಿಂದ ನೀರು ಚಲಿಸುತ್ತದೆ. ಇಲ್ಲಿ ಸಾಕಷ್ಟು ಜಲ ಸಂಗ್ರಹವಾಗುತ್ತದೆಯಾದರೂ ಕೊಳವೆ ಬಾವಿಗಳನ್ನು ನಿರ್ಮಿಸುವ ಕಾರ್ಯ ಅಪಾಯಕಾರಿ ಎನಿಸಿದೆ.

. ತೆರಾಯಿ ವಿಭಾಗ: ಮೇಲೆ ಸೂಚಿಸಿದಂತೆ ಈ ವಿಭಾಗಕ್ಕೆ ಎತ್ತರದ ಸ್ಥಳದಿಂದ ಅಂತರ್ಜಲದ ಪೂರೈಕೆಯಾಗುವುದರಿಂದ ಇಲ್ಲಿ ಕೊಳವೆ ಬಾವಿಗಳನ್ನು ನಿರ್ಮಿಸಿದರೆ ನೀರು ಮೇಲೇರಿ ಬಂದು ಭೂಮಿಯ ಮೇಲೆ ಹೊರ ಚಿಮ್ಮುವಷ್ಟು ಒತ್ತಡವಿರುತ್ತದೆ.

. ಕೇಂದ್ರ ವಿಭಾಗ: ವಿಶಾಲವಾದ ಭೂ ಪ್ರದೇಶವನ್ನು ಆವರಿಸಿದ ಈ ಕೇಂದ್ರ ವಿಭಾಗದಲ್ಲಿ ೨೦೦-೩೦೦ಮೀ. ಆಳದಲ್ಲಿ ಅಂತರ್ಜಲದ ಅಪಾರ ಸಂಗ್ರಹವಿದೆ. ಕೆಲವೆಡೆ ಪ್ರತಿ ಸೆಕೆಂಡಿಗೆ ೧೦೦-೨೦೦ ಲೀ. ನೀರನ್ನು ಪೂರೈಸಬಲ್ಲ ಕೊಳವೆ ಬಾವಿಗಳನ್ನು ನಿರ್ಮಿಸಲು ಸಾಧ್ಯವಿದೆ. ಕೆಲವು ಅಪವಾದಗಳನ್ನು ಬಿಟ್ಟರೆ, ಈ ವಿಭಾಗದಲ್ಲಿ ದೊರೆಯುವ ನೀರಿನ ಗುಣಮಟ್ಟವು ನೀರಾವರಿಗೆ ಸೂಕ್ತವೆನಿಸಿದೆ.

. ದಕ್ಷಿಣದ ವಿಭಾಗ: ದಖ್ಖನ್‌ಪ್ರಸ್ಥ ಭೂಮಿಯ ಉತ್ತರದ ಅಂಚಿನಲ್ಲಿರುವ ಈ ವಿಭಾಗದಲ್ಲಿ, ಕೇಂದ್ರ ವಿಭಾಗದಷ್ಟು ಜಲ ಸಂಗ್ರಹವಿರುವುದಿಲ್ಲ. ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶಗಳು ಈ ವಿಭಾಗದಲ್ಲಿರುವುದರಿಂದ ನೀರು ಕೆಲವೆಡೆ ಲವಣಯುತವಾಗಿರುತ್ತದೆ. ಲವಣರಹಿತ ಜಲವಿರುವ ಸ್ಥಳಗಳನ್ನು ಆರಿಸಿಕೊಂಡರೆ, ಈ ವಿಭಾಗದಲ್ಲಿ ಕೊಳವೆ ಬಾವಿಗಳನ್ನು ನಿರ್ಮಿಸಿ ಪ್ರಯೋಜನಕಾರಿಯಾದ ನೀರನ್ನು ಪಡೆಯಬಹುದು. ಅಂತರ್ಜಲ ಅಭಿವೃದ್ಧಿಗೆ ಈ ವಿಭಾಗದಲ್ಲಿ ಮಧ್ಯಮ ಪ್ರಮಾಣದ ಅವಕಾಶವಿದೆ.

. ನದಿಗಳ ಮುಖಜ ಮತ್ತು ಸಮುದ್ರದ ದಂಡೆಯ ವಿಭಾಗ: ನದಿಗಳ ಮುಖಜ ಪ್ರದೇಶದಲ್ಲಿ ಮತ್ತು ಸಮುದ್ರದ ದಂಡೆಗುಂಡ, ಅದರಲ್ಲಿಯೂ ದೇಶದ, ಪೂರ್ವಭಾಗದ ಸಮುದ್ರದ ದಂಡೆಗುಂಟ ಜಿಗಟು ಎರೆಯ ಪ್ರಾಬಲ್ಯವಿರುವ ಮಣ್ಣಿದೆ. ಇಲ್ಲಿ ಕೊಳವೆ ಬಾವಿಗಳನ್ನು ನಿರ್ಮಿಸುವ ಕೆಲಸವು ಕಷ್ಟದಾಯಕ. ಆದರೆ ಗಂಗಾನದಿಯ ಮುಖಜ ಪ್ರದೇಶದಲ್ಲಿ ವಿಶಿಷ್ಠ ರೀತಿಯ ಪರಿಸ್ಥಿತಿ ಇದೆ. ಭೂಮಿಯ ಮೇಲ್ಭಾಗದಿಂದ ಸುಮಾರು ೧೫೦ ಮೀ. ಆಳದ ಕೊಳವೆ ಬಾವಿ ತೋಡಿದರೆ ಅಲ್ಲಿ ಲವಣಯುತ ನೀರು ದೊರೆಯುತ್ತದೆ. ಆದರೆ, ಅಲ್ಲಿಂದ ಕೆಳಗೆ ಮತ್ತೆ ೧೫೦ ಮೀ. ಆಳಕ್ಕೆ ಇಳಿದರೆ ಅಲ್ಲಿ ನೀರಾವರಿಗೆ ಸೂಕ್ತವೆನಿಸುವ ಉತ್ತಮ ಗುಣಮಟ್ಟದ ನೀರಿನ ಸಂಗ್ರಹವಿದೆಯೆಂದ ವೀಕ್ಷಣೆಯಿಂದ ತಿಳಿದುಬಂದಿದೆ. ಇಂತಹ ಸ್ಥಳಗಳಲ್ಲಿ ಆಳವಾದ ಕೊಳವೆ ಬಾವಿಗಳನ್ನು ನಿರ್ಮಿಸಿ ಅಂತರ್ಜಲ ಅಭಿವೃದ್ಧಿಪಡಿಸಲು ಅವಕಾಶಗಳಿವೆ.

. ಮಧ್ಯಮ ದಾರ್ಢ್ಯದ ಕಲ್ಲುಗಳಿರುವ ಪ್ರದೇಶ: ಮರಳು ಕಲ್ಲಿನ ಪ್ರಾಬಲ್ಯವಿರುವ ರಾಜಸ್ಥಾನದ ಹಲವೆಡೆ, ಉತ್ತಮ ಗುಣಮಟ್ಟದ ನೀರಿನ ಸಂಗ್ರಹವಿದೆ. ಇಲ್ಲಿ ಕೊಳವೆ ಬಾವಿಗಳನ್ನು ನಿರ್ಮಿಸಿ ಅಂತರ್ಜಲದ ಪ್ರಯೋಜನವನ್ನು ಪಡೆಯಲು ಸಾಧ್ಯವಿದೆ.

ಆಂಧ್ರಪ್ರದೇಶ, ಮಧ್ಯಪ್ರದೇಶ, ಬಿಹಾರ, ಪಶ್ಚಿಮಬಂಗಾಳ, ಒರಿಸ್ಸಾ ಮತ್ತು ತಮಿಳುನಾಡು ರಾಜ್ಯಗಳಲ್ಲಿ ನೀರನ್ನು ಸುಲಭವಾಗಿ ಬಸಿಯಲು ಬಿಡುವ ಮರಳು ಕಲ್ಲುಗಳಿವೆ. ಆದರೆ ಈ ಕಲ್ಲುಗಳ ಸಂಗಡ ಫೆಲ್‌ಸ್ಟಾರ್ ಖನಿಜವೂ ಇರುವುದರಿಂದ ಬಸಿದು ಕಳೆಗೆ ಸಾಗುವ ನೀರಿಗೆ ಆತಂಕವುಂಟಾಗುತ್ತದೆ. ಆದಾಗ್ಯೂ ಕೊಳವೆ ಬಾವಿಗಳನ್ನು ನಿರ್ಮಿಸಿಕೊಂಡರೆ ಅಂತರ್ಜಲದ ಅಭಿವೃದ್ಧಿಗೆ ಈ ಪ್ರದೇಶದಲ್ಲಿ ಮಧ್ಯಮ ಬಗೆಯ ಅವಕಾಶವಿದೆ.

ಅಂತರ್ಜಲ ಸಂಗ್ರಹ

ಅಂತರ್ಜಲದ ಲಭ್ಯತೆ ಮತ್ತು ಅದರ ಅಭಿವೃದ್ಧಿಗಳನ್ನರಿಯಲು ಮಣ್ಣಿನ ಆಳದಲ್ಲಿರುವ ಭೂರಚನೆಯ ಪರಿಜ್ಞಾನವಿರಬೇಕಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದ ಪ್ರಮುಖ ಸಂಗತಿಗಳು ಕೆಳಗಿನಂತಿವೆ.

ಹವೆಯಿರುವ ವಲಯ (zone of aeration) : ಶಿಲೆಗಳು ಮತ್ತು ಖನಿಜಗಳು ಒಡೆದು ಹೋಳುಗಳಾಗಿ, ಪುಡಿ ಪುಡಿಯಾಗಿ ಹಲವು ಬಗೆಯ ಕ್ರಿಯೆಗಳ ಪರಿಣಾಮಗಳಿಂದ ಮಣ್ಣು ರೂಪಗೊಳ್ಳುತ್ತದೆ. ಮಣ್ಣಿನ ಸ್ತರಗಳು ಸಚ್ಛಿದ್ರವಾಗಿರುತ್ತವೆ. ಮಣ್ಣಿನ ಈ ರಂಧ್ರಗಳು ಪೂರ್ತಿಯಾಗಿ ಹವೆ ಇಲ್ಲವೇ ನೀರಿನಿಂದ ತುಂಬಿರಬಹುದು ಅಥವಾ ಭಾಗಶಃ ನೀರು ಮತ್ತು ಭಾಗಶಃ ಹವೆಯಿಂದ ತುಂಬಿರಬಹುದು. ರಂಧ್ರಗಳ ಮಧ್ಯದಲ್ಲಿ ಕೇವಲ ಹವೆ ಅಥವಾ ಭಾಗಶಃ ಹವೆ ಇದ್ದರೆ ಅದನ್ನು ಹವೆಯಿರುವ ವಲಯವೆಂದು ಕರೆಯುತ್ತಾರೆ. ಈ ವಲಯದಲ್ಲಿ ಮೂರು ಉಪವಲಯಗಳನ್ನು ಗುರುತಿಸಬಹುದು.

೧. ಆರ್ದ್ರ ಮಣ್ಣಿನ ಉಪವಲಯ

೨. ಮಧ್ಯಂತರ ಉಪವಲಯ

೩. ಸೂಕ್ಷ್ಮ ವಾಹಿನಿಗಳಮೂಲಕ ಮೇಲೆಬರುವ ನೀರಿನ ಅಂಚಿನವರೆಗೆ ಪಸರಿಸಿದ ಉಪವಲಯ

ಮೇಲೆ ಹೇಳಿದ ಉಪವಲಯಗಳ ಗಡಿಗಳನ್ನು ಅಷ್ಟು ಸ್ಪಷ್ಟವಾಗಿ ಗುರುತಿಸುವುದು ಕಷ್ಟ.

ಜಲಪೂರಿತ ವಲಯ: (zone of saturation) : ಎಲ್ಲ ರಂಧ್ರಗಳು ನೀರಿನಿಂದ ತುಂಬಿದ ಪ್ರದೇಶಕ್ಕೆ ಜಲಪೂರಿತ ವಲಯ ಎನ್ನುತ್ತಾರೆ. ಭೂಮಿಯ ಆಳದಲ್ಲಿರುವ ಈ ವಲಯದಲ್ಲಿ, ಉಪಯೋಗಕ್ಕೆ ನೀರು ಒದಗಿಸಬಲ್ಲ ಭಾಗಕ್ಕೆ ಆಂತರಿಕ ಜಲ ಸಂಗ್ರಹ ಪ್ರದೇಶ (aquifer) ಎನ್ನುತ್ತಾರೆ. ಈ ಭಾಗದಲ್ಲಿಯ ಭೂ ರಚನೆಯು ಅಂತರ್ಜಲದ ಚಲನೆಗೆ ಅನುಕೂಲವಾಗಿರುತ್ತದೆ. ಹಲವೆಡೆ ಜಲಸಂಗ್ರಹಗಳ ಪ್ರದೇಶಗಳು ವಿಶಾಲವಾದ ಪ್ರದೇಶವನ್ನಾವರಿಸಿರುತ್ತದೆ.ಇವು ಕೆಲವು ಸ್ಥಳಗಳಲ್ಲಿ ಕೆಲವೇ ಮೀ. ಆಳದಲ್ಲಿದ್ದರೆ ಇನ್ನಿತರ ಪ್ರದೇಶದಲ್ಲಿ ನೂರಾರು ಮೀ.ಗಳಷ್ಟು ಆಳವಾಗಿರುತ್ತವೆ.

ಮಣ್ಣಿನಲ್ಲಿರುವ ರಂಧ್ರಗಳ ಒಟ್ಟು ಪ್ರಮಾಣ ಮತ್ತು ರಂಧ್ರಗಳ ಆಕಾರ ಇವು ಜಲಪೂರಿತ ವಲಯದಲ್ಲೆಡೆ ಒಂದೇ ಸಮನಾಗಿರುವುದಿಲ್ಲ. ಜಿನುಗು ಕಣಗಳ ಪ್ರಾಬಲ್ಯವಿರುವ ಪ್ರದೇಶಗಳ ರಂಧ್ರಗಳ ಒಟ್ಟು ಪ್ರಮಾಣವು ಅಧಿಕವಾಗಿದ್ದರೂ ರಂಧ್ರಗಳು ಆಕಾರದಲ್ಲಿ ಸಣ್ಣವು. ಕಣಗಳ ಜಲಧಾರಣಾ ಶಕ್ತಿಯೂ ಅಧಿಕ. ಹೀಗಾಗಿ ಜಲಪೂರಿತ ವಲಯದಲ್ಲಿರುವ ಎಲ್ಲ ರಂಧ್ರಗಳು ನೀರಿನಿಂದ ಪೂರ್ತಿಯಾಗಿ ತುಂಬಿದ್ದರೂ ಚಲಿಸಲು ನೀರಿಗೆ ಆಸ್ಪದವಿರುವುದಿಲ್ಲ. ಆದ್ದರಿಂದ ನೀರಿಗೆ ಇದು ಆಂತರಿಕ ಜಲ ಪ್ರದೇಶವೆನಿಸುವುದಿಲ್ಲ. ಇದಕ್ಕೆ ವಿರುದ್ಧವಾಗಿ ಮರಳು ಕಣಗಳ ಪ್ರಾಬಲ್ಯವಿರುವಲ್ಲಿ ದೊಡ್ಡ ಆಕಾರದ ರಂಧ್ರಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇಲ್ಲಿ ಅಂತರ್ಜಲವು ಎಲ್ಲೆಡೆ ಸುಲಭವಾಗಿ ಹರಿಯುವುದರಿಂದ ಮರಳಿರುವ ಜಲಪೂರಿತ ಭಾಗವು ಅಂತರ್ಜಲ ಸಂಗ್ರಹದ ಪ್ರದೇಶವೆನಿಸುತ್ತದೆ.

ಅಂತರ್ಜಲ ಸಂಗ್ರಹ ಪ್ರದೇಶದ ಪ್ರಕಾರಗಳು:

. ಬಂಧನ ರಹಿತ ಜಲ ಸಂಗ್ರಹ ಪ್ರದೇಶ (Unconfined aquifer): ಮಣ್ಣಿನ ಆಳದಲ್ಲಿ ನೀರನ್ನು ಬಸಿಯಲು ಬಿಡದ ಗಟ್ಟಿಯಾದ ಸ್ತರವಿದ್ದು, ಈ ಸ್ತರದ ಮೇಲೆನೀರು ನಿಂತಿರುತ್ತದೆ. ನೀರಿನ ಮೇಲ್ಭಾಗಕ್ಕೆ ಜಲಪಾತಳಿ ಎಂಬ ಹೆಸರಿದೆ. ಜಲಪಾತಳಿಯ ಮೇಲೆ ಇರುವ ಮಣ್ಣಿನ ಸ್ತರವು ಮೇಲಿಂದ ಬರುವ ನೀರನ್ನು ಸುಲಭವಾಗಿ ಬಸಿಯಲು ಆಸ್ಪದವನ್ನೀಯುತ್ತದೆ ಮತ್ತು ಕಣಗಳ ಮಧ್ಯದದಲ್ಲಿರುವ ರಂಧ್ರಗಳು ಭಾಗಶಃ ಮಾತ್ರ ನೀರಿನಿಂದ ತುಂಬಿರುತ್ತವೆ. ಮೇಲಿನ ಪರಿಸ್ಥಿತಿ ಇರುವಲ್ಲಿ ಸಂಗ್ರಹವಾದ ನೀರಿನ ಪ್ರದೇಶಕ್ಕೆ ಬಂಧನರಹಿತ ಅಥವಾ ಅನಿರ್ಬಂಧ ಜಲಸಂಗ್ರಹ ಪ್ರದೇಶವೆನ್ನುತ್ತಾರೆ.

ಜಲ ಪಾತಳಿಯ ಮೇಲೆ ಒಂದು ವಾಯುಭಾರದಷ್ಟು ಮಾತ್ರ ಒತ್ತಡವಿರುವುದರಿಂದ ಈ ಪ್ರದೇಶದಲ್ಲಿ ಬಾವಿಯನ್ನು ತೋಡಿದರೆ ಬಾವಿಯಲ್ಲಿಯ ನೀರು ಜಲಪಾತಳಿಗಿಂತ ಮೇಲೆ ಏರುವುದಿಲ್ಲ. ಜಲ ಸಂಗ್ರಹಕ್ಕೆ ಬಂದು ಸೇರುವ ನೀರಿನ ಪ್ರಮಾಣದ ಮೇಲಿಂದ ಪಾತಳಿಯ ಮೇಲೆ ಇಲ್ಲವೇ ಕೆಳಗೆ ಸರಿಯುತ್ತದೆ. ಆದ್ದರಿಂದಲೇ ಮಳೆಗಾಲದಲ್ಲಿ ಬಾವಿಯ ನೀರು ಮೇಲೆ ಬಂದರೆ ಮಳೆ ಇಲ್ಲದ ಸಮಯದಲ್ಲಿ ಅಥವಾ ಬರಗಾಲದಲ್ಲಿ ನೀರಿನ ಪಾತಳಿಯು ಕೆಳಗೆ ಕುಸಿಯುತ್ತದೆ.

.ಬಂಧಿತ ಜಲ ಸಂಗ್ರಹ ಪ್ರದೇಶ (Confined aquifer): ಭೂಮಿಯಾಳದಲ್ಲಿ ಜಲ ಸಂಗ್ರಹವಿರುವ ಪ್ರದೇಶದ ಮೇಲೆ ಮತ್ತು ಕೆಳಗೆ, ನೀರನ್ನು ಬಸಿಯಗೊಡದ ಗಟ್ಟಿ, ಸ್ತರಗಳಿದ್ದರೆ ಅದು ಬಂಧಿತ ಅಥವಾ ಬಂಧನಯುತ ಜಲಸಂಗ್ರಹ ಪ್ರದೇಶವೆನಿಸುತ್ತದೆ. ಜಲಪಾತಳಿಗಳಿಗೆ ವಾತಾವರಣದ ನೇರ ಸಂಪರ್ಕವಿರುವುದಿಲ್ಲವಾದ್ದರಿಂದ ಅದರ ಮೇಲಿನ ಒತ್ತಡವು ಒಂದು ವಾಯು ಭಾರಕ್ಕಿಂತ ಅಧಿಕವಾಗಿರುತ್ತದೆ. ಈ ಪ್ರದೇಶದಲ್ಲಿ ಬಾವಿಯನ್ನು ಕೊರೆದರೆ ನೀರು ಉಕ್ಕಿ ಹೊರ ಬರುತ್ತದೆ. ಜಲಪಾತಳಿಯ ಮೇಲಿರುವ ಒತ್ತಡದ ಪ್ರಮಾಣದ ಮೇಲೆ ನೀರು ಉಕ್ಕಿ ಬರುವ ಎತ್ತರವು ಅವಲಂಬಿಸಿದೆ. ಒತ್ತಡವು ಅಧಿಕವಾಗಿದ್ದರೆ, ನೀರು ಚಿಮ್ಮಿ ಭೂಮಿಯ ಮೇಲ್ಭಾಗಕ್ಕೆ ಬರಬಹುದು. ಇಂತಹ ಬಾವಿಗೆ ಚಿಲುಮೆ ಬಾವಿ (Artisan well) ಎಂದು ಹೆಸರು.

.ಭಾಗಶಃ ಬಂಧಿತ ಜಲ ಸಂಗ್ರಹ ಪ್ರದೇಶ (Partially confined aquifer): ಈ ಪ್ರದೇಶವು ಸಂಪೂರ್ಣವಾಗಿ ಜಲಪೂರಿತವಾಗಿರುತ್ತದೆ. ನೀರಿನ ಪಾತಳಿಯ ಮೇಲಿರುವ ಸ್ಥರವು ಗಟ್ಟಿಯಾಗಿದ್ದರೂ ನೀರು ಬಸಿದು ಕೆಳಗೆ ಹೋಗಬಹುದಾದ   ರಂಧ್ರಗಳು ಅಥವಾ ದ್ವಾರಗಳು ಅಲ್ಲಲ್ಲಿ ಇರುತ್ತವೆ. ಇದರಂತೆಯೇ, ಜಲ ಸಂಗ್ರಹದ ಕೆಳಭಾಗದ ಸ್ತರವೂ ನೀರನ್ನು ಬಸಿಯಲು ಆಸ್ಪದವನ್ನೀಯಬಹುದು. ಈ ಸ್ತರವು ನೀರನ್ನು ಬಸಿಯಲು ಬಿಡದ ಗಟ್ಟಿಯಾದ ಸ್ತರವೂ ಆಗಿರಬಹುದು.

. ಊರ್ದ್ವಸ್ಥಿತ ಜಲಪಾತಳಿ (Perched water table): ಕೆಲವು ಸಂದರ್ಭಗಳಲ್ಲಿ ಕಾರಣಾಂತರಗಳಿಂದ ಹವೆಯಿರುವ ವಲಯದಲ್ಲಿ ನೀರನ್ನು ಬಸಿಯಲು ಬಿಡಿದ ಗಟ್ಟಿಯಾದ ಸ್ತರವು ನಿರ್ಮಾಣವಾಗಬಹುದು. ಮೇಲಿಂದ ಬಸಿದು ಬಂದ ನೀರು ಈ ಸ್ತರದ ಮೇಲ್ಭಾಗದಲ್ಲಿ ಸಂಗ್ರಹಗೊಳ್ಳುತ್ತದೆ. ಈ ರೀತಿ ಸಂಗ್ರಹಗೊಂಡ ನೀರಿನ ಮೇಲ್ಭಾಗಕ್ಕೆ ಊರ್ಧ್ವಸ್ಥಿತ ಜಲಪಾತಳಿ ಎಂಬ ಹೆಸರಿದೆ.

ಅಂತರ್ಜಲದ ಮರು ಪೂರಣ (Recarging underground water): ಮಳೆಯೇ ಅಂತರ್ಜಲದ ಪ್ರಾಥಮಿಕ ಮೂಲ. ಅಂತರ್ಜಲದ ಮರುಪೂರಣವು ಹಲವು ಸಂಗತಿಗಳ ಮೇಲೆ ಅವಲಂಬಿಸಿದೆ. ಅವುಗಳಲ್ಲಿ ಪ್ರಮುಖವಾದವುಗಳು ಕೆಳಗಿನಂತಿವೆ.

  • ಮಳೆಯ ಒಟ್ಟು ಪ್ರಮಾಣ, ತೀವ್ರತೆ, ಹಂಚಿಕೆ ಮೊದಲಾದ ಗುಣಧರ್ಮಗಳು
  • ಹರಿದು ಹೋಗುವ ನೀರಿನ ವೇಗ ಮತ್ತು ಪ್ರಮಾಣ
  • ನೀರನ್ನು ಬಸಿಯಲು ಬಿಡುವ ಮಣ್ಣಿನ ಸಾಮರ್ಥ್ಯ

ಮಳೆಯ ನೀರು ಭೂಮಿಯ ಆಳಕ್ಕೆ ನೇರವಾಗಿ ಬಸಿದು ಹೋಗಿ, ಅಂತರ್ಜಲ ಪೂರಣವಾಗಬಹುದು ಇಲ್ಲವೇ ಹಳ್ಳ, ನದಿ, ನಾಲೆ, ಕೆರೆ, ಸರೋವರ ಮುಂತಾದವುಗಳಿಂದ ಬಸಿದು ಬಂದ ನೀರಿನಿಂದ ಅಂತರ್ಜಲವು ವೃದ್ದಿಗೊಳ್ಳಬಹುದು. ಜಲ ಪೂರಣ ನೈಸರ್ಗಿಕ ಕ್ರಿಯೆಯಿಂದ ನಡೆಯಬಹುದು ಅಥವಾ ಮಾನವರು ತನ್ನ ಪ್ರಯತ್ನದಿಂದ ಅಂತರ್ಜಲ ಪೂರಣೆಯಾಗುವಂತೆ ನೋಡಿಕೊಳ್ಳಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಮುಖ ವಿವರಗಳು ಈ ಕೆಳಗಿನಂತಿವೆ.

ನೈಸರ್ಗಿಕವಾಗಿ ನಡೆಯುವ ಜಲದ ಮರುಪೂರಣ

. ಮಳೆಯ ನೀರು: ಶಿಲೆ- ಖನಿಜಗಳ ಸ್ವಭಾವ ಮತ್ತು ಅವುಗಳಿಂದ ನಿರ್ಮಾಣಗೊಂಡ ಮಣ್ಣಿನ ಗುಣಧರ್ಮಗಳಿಗೂ ಮಳೆನೀರು ಭೂಮಿಯೊಳಗೆ ಪ್ರವೇಶಿಸುವ ಪ್ರಮಾಣಕ್ಕೂ ಸಂಬಂಧವಿದೆ. ಉದಾಹರಣೆಗೆ, ಬಸ್ಟಾಲ್‌, ಗ್ರಾನೈಟ್‌ಗಳಂತಹ ಗಟ್ಟಿ ಶಿಲೆಗಳಿರುವ ಪ್ರದೇಶಗಳಲ್ಲಿ, ಒಟ್ಟು ಮಳೆಯ ನೀರು ಶೇಕಡಾ ೫-೧೦ ರಷ್ಟು ಮಾತ್ರ ಪ್ರವೇಶಿಸಬಲ್ಲದು. ಆದರೆ ನದಿಗಳ ರೇವೆಯಿರುವಲ್ಲಿ ಮತ್ತು ಪರ್ವತಗಳ ಮಧ್ಯದ ಪ್ರದೇಶಗಳಲ್ಲಿ ಶೇಕಡಾ ೧೫-೨೦ ರಷ್ಟು ಮಳೆಯ ನೀರು ಅಂತರ್ಜಲವನ್ನು ಸೇರಬಹುದು.

. ಇತರ ಮೂಲಗಳಿಂದ: ನಾಲೆಗಳು, ಕರೆಗಳು, ಸರೋವರಗಳು,ನೀರನ್ನು ಹರಿಸಲು ಭೂಮಿಯಲ್ಲಿ ನಿರ್ಮಿಸಿದ ಕಾಲುವೆ ಮುಂತಾದವುಗಳಿಂದ ಬಸಿದ ಬಂದ ನೀರು ಭೂಮಿಯನ್ನು ಪ್ರವೇಶಿಸಿ ಅಂತರ್ಜಲ ಸಂಗ್ರಹದ ಪ್ರದೇಶವನ್ನು ತಲುಪಬಹುದು (ಅಧ್ಯಾಯ ೨ರಲ್ಲಿ ವಿವರಿಸಿದಂತೆ). ಕಾಲುವೆಗಳಿಂದ ನೀರು ಒಸರಿ ಹೋಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಬಸಿದ ನೀರು ಮಣ್ಣಿನ ಆಳಕ್ಕೆ ಹೋಗಿ ಅಂತರ್ಜಲ ಪ್ರದೇಶವನ್ನು ಪ್ರವೇಶಿಸಬಹುದು.

ಮಾನವನು ಕೈಗೊಂಡ ಕ್ರಮಗಳಿಂದ ಅಂತರ್ಜಲದ ಮರುಪೂರಣೆ

ನಿರ್ದಿಷ್ಟವಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ, ಮಾನವನು ಉದ್ದೇಶಪೂರ್ವಕವಾಗಿ ಅಂತರ್ಜಲದ ಮರುಪೂರಣವನ್ನು ಅಧಿಕಗೊಳಿಸಬಹುದು. ಈ ದಿಶೆಯಲ್ಲಿ ಕೆಳಗಿನ ಕ್ರಮಗಳು ಪ್ರಯೋಜನಕಾರಿ ಎನಿಸಬಲ್ಲವು.

ಭೂ ಸಂರಕ್ಷಣೆಯ ಕ್ರಮಗಳು: ಅಧ್ಯಾಯ ೧ ರಲ್ಲಿ ವಿವರಿಸಿದ ನೆಲ-ಜಲ ಸಂರಕ್ಷಣೆಯ ಕ್ರಮಗಳೇ ಅಂತರ್ಜಲ ಮರುಪೂರಣೆಗೂ ಪ್ರಯೋಜನಕಾರಿ ಎನಿಸುತ್ತದೆ. ಭೂಮಿಯ ಮೇಲೆ ಬೀಳುವ ಮಳೆ ನೀರನ್ನು ವೇಗವಾಗಿ ಹರಿದು ಹೋಗುವಂತೆ ಮಾಡಿ, ಭೂಮಿಯೊಳಗೆ ನೀರು ಇಂಗಲು ಹೆಚ್ಚು ಸಮಯವು ಸಿಗುವಂತೆ ಮಾಡುವುದೇ ವಿವಿಧ ಕ್ರಮಗಳ ಪ್ರಮುಖ ಉದ್ದೇಶವೆನ್ನಬಹುದು. ಈ ಉದ್ದೇಶವನ್ನು ಸಾಧಿಸಲು, ಬದುಗಳ ನಿರ್ಮಾಣ ಮತ್ತು ಬದುಗಳ ಮಧ್ಯದಲ್ಲಿರುವ ಭೂ ಪ್ರದೇಶದಲ್ಲಿ ಮಡಿಗಳನ್ನು ಇಲ್ಲವೇ ಬಟ್ಟಲಾಕಾರದ ಸಣ್ಣ ಸಣ್ಣ ಗುಂಡಿಗಳನ್ನು ನಿರ್ಮಿಸುವುದು, ಲಂಬ ಆಚ್ಛಾದನೆಯನ್ನು ತಯಾರಿಸುವುದು ಇತ್ಯಾದಿ ಕ್ರಮಗಳನ್ನು ಅನುಸರಿಸಬೇಕು. ಭೂಮಿಯ ಇಳಿಜಾರಿನ ಪ್ರಮಾಣ ಮತ್ತು ಮಳೆ ಬೀಳುವ ಸಮಯದಲ್ಲಿರುವ ಭೂಮಿಯ ಸ್ಥಿತಿಗಳು, ಭೂಮಿಯ ಒಳಗೆ ಪ್ರವೇಶಿಸುವ ನೀರಿನ ಪ್ರಮಾಣದ ಮೇಲೆ ಪರಿಣಾಮವನ್ನುಂಟು ಮಾಡುತ್ತವೆ. ಆದ್ದರಿಂದ ಮುಂದೆ ಸೂಚಿಸಿದ ವಿಧಾನಗಳಿಂದ ಭೂಮಿಯೊಳಗೆ ಇಂಗುವ ನೀರಿನ ಪ್ರಮಾಣವನ್ನು ಅಧಿಕಗೊಳಿಸಬಹುದು.

. ಮಡಿ ಪದ್ಧತಿ: ಭೂಮಿಯ ಎತ್ತರ ಭಾಗದಿಂದ ಆರಂಭಿಸಿ, ತಗ್ಗಿನ ದಿಕ್ಕಿನಲ್ಲಿ ಹಲವಾರು ಮಡಿಗಳನ್ನು ನಿರ್ಮಿಸಬೇಕು.ಮಡಿಗಳನ್ನು ಬೇರ್ಪಡಿಸಲು ಕಲ್ಲು ಗುಂಡುಗಳ ಸಹಾಯದಿಂದ ಸಣ್ಣ ಸಣ್ಣ ಒಡ್ಡುಗಳನ್ನು ನಿರ್ಮಿಸಬೇಕು. ಮೇಲಿನ ಮಡಿಯಲ್ಲಿ ಇಂಗದೇ ಉಳಿದ ನೀರು ಕೆಳಗಿನ ಮಡಿಗೆ ಹರಿಯುವಾಗ ಉಂಟಾಗುವ ಒತ್ತಡವನ್ನು ತಡೆದುಕೊಳ್ಳುವ ಶಕ್ತಿಯು ಈ ಒಡ್ಡುಗಳಿಗೆ ಇರುವಂತೆ ನೋಡಿಕೊಳ್ಳಬೇಕು. ಈ ವ್ಯವಸ್ಥೆಯಿಂದ ಪ್ರತಿ ಮಡಿಯಲ್ಲಿ ನೀರು ಹೆಚ್ಚು ಸಮಯದವರೆಗೆ ನಿಂತಿರಲು ಆಸ್ಪದವು ದೊರೆಯುವುದರಿಂದ ನೀರು ಕೆಳಗೆ ಇಂಗಲು ಸಾಧ್ಯವಾಗುತ್ತದೆ.

. ಕಾಲುವೆ ಬೋದುಗಳು: ಹಲವು ಕಾಲುವೆ ಬೋದುಗಳನ್ನು ಒಂದಕ್ಕೊಂದು ಸಮಾನಾಂತರದಲ್ಲಿರುವಂತೆ ಭೂಮಿಯಲ್ಲಿ ನಿರ್ಮಿಸಬೇಕು. ಮೂಲ ಸಂಗ್ರಹದಿಂದ, ಈ ಕಾಲುವೆಗಳಿಗೆ ನೀರನ್ನು ಬಿಡಬೇಕು. ನೀರು ಭೂಮಿಯಾಳಕ್ಕೆ ಚಲಿಸಿ, ಅಂತರ್ಜಲ ಸಂಗ್ರಹದ ಪ್ರದೇಶವನ್ನು ಮುಟ್ಟಲು ಸಾಧ್ಯವಾಗುತ್ತದೆ. ಅಂತರ್ಜಲದ ಮರುಪೂರಣೆಗೆಂದು ನಿರ್ಮಿಸುವ ಕಾಲುವೆಗಳು ನೀರಾವರಿ ಕಾಲುವೆಗಳನ್ನು ಹೋಲುತ್ತವೆಯಾದರೂ ಇವು ತಳದಲ್ಲಿ ಹೆಚ್ಚು ಅಗಲವಾಗಿರಬೇಕು; ಹೆಚ್ಚು ಆಳವಾಗಿರಬೇಕಿಲ್ಲ. ಈ ರೀತಿಯ ಬದಲಾವಣೆಗಳಿಂದ ಭೂಮಿಯ ಹೆಚ್ಚು ಪ್ರದೇಶಕ್ಕೆ ನೀರಿನ ಸಂಪರ್ಕವು ಬಂದು ಅಧಿಕ ಪ್ರಮಾಣದಲ್ಲಿ ಕೆಳಗೆ ಬಸಿಯಲು ನೀರಿಗೆ ಆಸ್ಪದವುಂಟಾಗುತ್ತದೆ.

ಅಂತರ್ಜಲ ಮರು ಪೂರಣವು ಸಮರ್ಥವಾಗಿ ಸಾಗಬೇಕಾದರೆ, ಇರುವ ಪರಿಸ್ಥಿತಿಯನ್ನು ಸರಿಯಾಗಿ ಅಧ್ಯಯನ ಮಾಡಿ, ಸೂಕ್ತವಾದ ವಿಧಾನಗಳನ್ನೇ ಅನುಸರಿಸಬೇಕು. ಭೂ ರಚನೆ, ಇಳಿಜಾರಿನ ಉದ್ದ ಮತ್ತು ಪ್ರಮಾಣ, ಮಣ್ಣಿನ ಗುಣಧರ್ಮ, ಆಳುಗಳ ಲಭ್ಯತೆ, ತಗಲುವ ಖರ್ಚು ಇತ್ಯಾದಿ ಹಲವು ಸಂಗತಿಗಳನ್ನು ಈ ಸಂದರ್ಭದಲ್ಲಿ ಪರಿಗಣಿಸಬೇಕಾಗುತ್ತದೆ.

ಅಂತರ್ಜಲ ಮರು ಪೂರಣಕ್ಕೆ ಬಾವಿ ಮತ್ತು ಹೊಂಡಗಳ ಬಳಕೆ: ಅಂತರ್ಜಲ ಸಂಗ್ರಹವಿರುವ ಪ್ರದೇಶಕ್ಕಿಂತ ಮೇಲ್ಗಡೆ ನೀರನ್ನು ಬಸಿಯಗೊಡದ ಗಟ್ಟಿಸ್ತರವಿದ್ದರೆ ಮಣ್ಣನ್ನು ಪ್ರವೇಶಿಸಿದ ನೀರು ಅಂತರ್ಜಲದ ಸಂಗ್ರಹದ ಪ್ರದೇಶವನ್ನು ತಲುಪಲಾಗದೇ, ದಿಕ್ಕನ್ನು ಬದಲಿಸಿ ಪಕ್ಕಕ್ಕೆ ಹರಿದು ಹೋಗುವಂತಾಗುತ್ತದೆ. ಇಂತಹ ಸಂದರ್ಭಗಳಿರುವಲ್ಲಿ ಸೂಕ್ತ ಸ್ಥಳಗಳನ್ನು ಆರಿಸಿಕೊಂಡು ಆಳವಾದ ತಗ್ಗು ಇಲ್ಲವೇ ಬಾವಿಗಳನ್ನು ತೋಡಬೇಕು. ಇದರಿಂದ ಈ ಸ್ಥಳಗಳಲ್ಲಿ ಗಟ್ಟಿ ಸ್ತರವನ್ನು ಛೇದಿಸದಂತಾಗುವುದರಿಂದ ಈ ಬಗೆಯ ತಗ್ಗು ಅಥವಾ ಬಾವಿಗಳ ಮೂಲಕ ನೀರು ಕೆಳಗಿಳಿದು ಅಂತರ್ಜಲ ಸಂಗ್ರಹವನ್ನು ಸೇರಿಕೊಳ್ಳುತ್ತದೆ.

ಅಂತರ್ಜಲದ ಮರು ಪೂರಣಕ್ಕೆ ಇತರ ಮಾರ್ಗಗಳು: ಮಳೆಗಾಲವು ಆರಂಭವಾಯಿತೆಂದರೆ ಮಲೆನಾಡಿನಲ್ಲಿ ಅವಶ್ಯಕ್ಕಿಂತ ಹೆಚ್ಚು ಮಳೆಯು ಸಾಮಾನ್ಯವಾಗಿ ಬರುತ್ತದೆ. ಆದರೆ, ಚಳಿಗಾಲ ಮತ್ತು ಬೇಸಿಗೆಯಲ್ಲಿ ಬೆಳೆಗಳು ನೀರಿನ ಕೊರತೆ ಎದುರಿಸಬೇಕಾಗುತ್ತದೆ. ಈ ಸಮಸ್ಯೆಯನ್ನು ಬಗೆ ಹರಿಸಲು ದೀಕ್ಷಿತ ಮತ್ತು ಹೆಗಡೆ ಇವರು ಕೆಳಗಿನ ಎರಡು ಸಾಧ್ಯತೆಗಳನ್ನು ಸೂಚಿಸಿದ್ದಾರೆ:

ಹಳ್ಳದ ನೀರಿಗೆ ತಡೆ: ಅಡಿಕೆ ತೋಟದ ಪಕ್ಕದಲ್ಲಿರುವ ಹಳ್ಳದಲ್ಲಿ, ಮಳೆಗಾಲವು ಕೊನೆಗೊಂಡ ನಂತರವೂ ನೀರು ಕೆಲ ತಿಂಗಳುಗಳವರೆಗೆ ಹರಿಯುತ್ತಿರುವುದು ಸಾಮಾನ್ಯ. ಈ ಹಳ್ಳದಲ್ಲಿ ಹರಿಯುತ್ತಿರುವ ನೀರಿಗೆ ಸುಲಭವಾದ ವಿಧಾನವನ್ನನುಸರಿಸಿ ತಡೆಯನ್ನುಂಟು ಮಾಡಬಹುದು. ಬಳಸಿ ಬಿಟ್ಟ ಪಾಲಿಥೀನ್‌ಅಥವಾ ನೈಲಾನ್‌ಚೀಲಗಳಲ್ಲಿ, ಸಮೀಪದಲ್ಲಿ ಸಿಗುವ ಮಣ್ಣನ್ನು ತುಂಬಿ ಚೀಲದ ಬಾಯಿಯನ್ನು ಬಿಗಿಯಾಗಿ ಕಟ್ಟಬೇಕು. ಜನವರಿ ತಿಂಗಳಲ್ಲಿ ಮಣ್ಣು ತುಂಬಿದ ಚೀಲಗಳನ್ನು ಹಳ್ಳಕ್ಕೆ ಅಡ್ಡಲಾಗಿ ೧/೨-೧ ಮೀ. ಎತ್ತರದವರೆಗೆ ಒಂದರ ಮೇಲೊಂದರಂತೆ ಸರಿಯಾಗಿ ಹೊಂದಿಸಿ ಇಡಬೇಕು. ಸೂಕ್ತ ಅಂತರಗಳಲ್ಲಿ ಹಳ್ಳಕ್ಕೆ ಅಲ್ಲಲ್ಲಿ ತಡೆಗಳನ್ನು ನಿರ್ಮಿಸಬೇಕು. ಈ ವಿಧಾನದಿಂದ ತಡೆದು ನಿಂತ ನೀರು ಕೆಳಗೆ ಬಸಿದು ಹೋಗಿ ಅಂತರ್ಜಲ ಸಂಗ್ರಹದ ಪ್ರದೇಶವನ್ನು ಮುಟ್ಟಲು ಸಾಧ್ಯವಾಗುತ್ತದೆ.

ಸಮಪಾತಳಿ ಕಾಲುವೆಗಳ ನಿರ್ಮಾಣ (Contour trenching): ಜಲಾನಯನ ಪ್ರದೇಶದಲ್ಲಿ, ಭೂಮಿಗೆ ಅಡ್ಡವಾಗಿ ಸಮಪಾತಳಿಯೊಂದಿಗೆ ಕಾಲುವೆಗಳನ್ನು (Trenches) ಅಗೆಯಬೇಕು. ಅವುಗಳ ದಂಡೆಯ ಮೇಲೆ ಸಸ್ಯಗಳನ್ನು ಬೆಳೆಸಬಹುದು. ಈ ಸಸ್ಯಗಳು, ಬೇಳೆಕಾಳು ವರ್ಗಕ್ಕೆ ಸೇರಿದ ಗಿಡಗಳಾದರೆ ಹೆಚ್ಚು ಪ್ರಯೋಜನಕಾರಿಯೆನಿಸುತ್ತದೆ. ಈ ಕಾಲುವೆಗಳಲ್ಲಿ ಕೆಲ ಸಮಯದವರೆಗೆ ನೀರು ನಿಂತಿರುವುದರಿಂದ ಅದು ಭೂಮಿಯಾಳಕ್ಕೆ ಬಸಿದು ಹೋಗಿ ಆಂತರಿಕ ಜಲ ಸಂಗ್ರಹವನ್ನು ಸೇರಿಕೊಳ್ಳುವ ಸಾಧ್ಯತೆಯು ಅಧಿಕಗೊಳ್ಳುತ್ತದೆ. ಇಳಿಜಾರಿನೊಡನೆ ವೇಗದಿಂದ ಹರಿಯುವ ನೀರಿಗೆ ತಡೆಗಳನ್ನು ಒಡ್ಡಿದಂತಾಗಿ ಭೂ ಸವಕಳಿಯೂ ಕಡಿಮೆಯಾಗುತ್ತದೆ.

ಅಂತರ್ಜಲದ ಸದುಪಯೋಗ: ಅಂತರ್ಜಲದ ಮರು ಪೂರಣೆಯೇ ಮಾನವನ ಏಕಮೇವ ಉದ್ದೇಶ ಅಥವಾ ಗುರಿಯಾಗಲಾರದು. ಅಂತರ್ಜಲದ ಸರಿಯಾದ ಬಳಕೆಯನ್ನು ಮಾಡಿಕೊಳ್ಳುವುದು ಜಾಣತನವೆನಿಸೀತು. ಆದರೆ ಅಂತರ ಜಲದ ಮರು ಪೂರಣ ಮತ್ತು ಅದರ ಬಳಕೆ ಇವೆರಡರಲ್ಲಿ ಸಮತೋಲನವಿರುವಂತೆ ನೋಡಿಕೊಳ್ಳಬೇಕು. ಅಂತರ್ಜಲದ ಅತಿಯಾದ ಬಳಕೆಯಿಂದ, ಅಪಾಯವು ತಪ್ಪಿದ್ದಲ್ಲವೆಂಬುದನ್ನು ಸದಾ ನೆನಪಿನಲ್ಲಿಡಬೇಕು.

ಅಂತರ್ಜಲದ ಬಗ್ಗೆ ಒಂದು ಸಂಗತಿಯನ್ನು ಲಕ್ಷದಲ್ಲಿಡಬೇಕು. ಒಬ್ಬ ವ್ಯಕ್ತಿಗೆ, ಸಂಸ್ಥೆಗೆ ಅಥವಾ ಸರಕಾರಕ್ಕೆ ಸೇರಿದ ಭೂಮಿಯ ನಿರ್ಧಿಷ್ಟ ಮೇರೆಯನ್ನು ಗುರುತಿಸುವುದು ಸುಲಭ. ಆ ಭೂಮಿಯ ಬಳಕೆಯನ್ನು ಯಾವ ರೀತಿಯಾಗಿ ಮಾಡಬೇಕೆಂಬುದನ್ನು ಒಡೆಯನ ನಿರ್ಧಾರಕ್ಕೆ ಬಿಟ್ಟ ವಿಷಯ. ಆದ್ದರಿಂದ ಆ ಭೂಮಿಯ ಸದ್ಬಳಕೆಯನ್ನು ಮಾಡಿಕೊಂಡು ಅದರಿಂದ ದೊರೆಯುವ ಲಾಭಕ್ಕಾಗಲೀ ದುರ್ಬಳಕೆಯಿಂದ ಉಂಟಾಗುವ ನಷ್ಟಕ್ಕಾಗಲಿ ಭೂ ಒಡೆಯನೇ ಹೊಣೆಗಾರನಾಗುತ್ತಾನೆ. ಆದರೆ, ಅಂತರ್ಜಲ ಸಂಗ್ರಹದ ವಿಷಯವೇ ಭಿನ್ನವಾಗಿದೆ. ಒಬ್ಬನು ತನಗೆ ಸೇರಿದ ಭೂಮಿಯಲ್ಲಿ ತೆರೆದ ಅಥವಾ ಕೊಳವೆ ಬಾವಿಯನ್ನು ನಿರ್ಮಿಸಿಕೊಂಡು, ನೀರನ್ನು ಬಳಸಿಕೊಂಡರೆ ಬಾವಿಯು ಮಾತ್ರ ಅವನ ವೈಯಕ್ತಿಕ ಸ್ವತ್ತಾದೀತೇ ಹೊರತು ಅದರಿಂದ ಹೊರ ತೆಗೆದು ನೀರು ಆ ಭಾಗದ ಸಾಮೂಹಿಕ ಅಂತರ್ಜಲ ಸಂಗ್ರಹದಿಂದ ಬಂದಿರುತ್ತದೆ ಎಂಬುದನ್ನು ಮರೆಯಬಾರದು. ಅಂತರ್ಜಲದ ಸಂಗ್ರಹವನ್ನು ವಿಭಾಗ ಮಾಡಿ, ಪ್ರತಿ ವ್ಯಕ್ತಿಗೆ ಸೇರಿದ ನೀರಿನ ಮೇರೆಗಳನ್ನು ಗುರುತಿಸಲು ಸಾಧ್ಯವೇ ಇಲ್ಲ. ಒಬ್ಬ ವ್ಯಕ್ತಿಯು ತನ್ನ ಕ್ಷೇತ್ರದಲ್ಲಿರುವ ಕೊಳವೆ ಬಾವಿಯಿಂದ ಮಿತಿ ಮೀರಿ ನೀರನ್ನು ಹೊರ ತೆಗೆದರೆ, ಅಕ್ಕಪಕ್ಕದಲ್ಲಿರುವ ಇತರರ ಬಾವಿಗಳಲ್ಲಿರುವ ನೀರಿನ ಮಟ್ಟದ ಮೇಲೆ ದುಷ್ಪರಿಣಾಮವಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿ ಪ್ರದೇಶದಲ್ಲಿರುವ ಜನರು ಒಂದೆಡೆ ಸೇರಿ, ಆ ಭಾಗದಲ್ಲಿರುವ ಅಂತರ್ಜಲ ಸಂಗ್ರಹದ ಬಗ್ಗೆ ತಜ್ಞರಿಂದ ಅರಿತು, ಅಂತರ್ಜಲ ಮರು ಪೂರಣ ಮತ್ತು ಅದರ ಸದ್ಬಳಕೆಯ ಬಗ್ಗೆ ಸರಿಯಾದ ಒಂದು ಯೋಜನೆಯನ್ನು ಸಿದ್ಧಪಡಿಸಿ ಅದನ್ನು ಕಾರ್ಯಗತ ಮಾಡಿದರೆ ನೀರಿನ ಕ್ಷಾಮವನ್ನು ಎದುರಿಸುವ ಪ್ರಸಂಗವು ಬರಲಾರದು.

ಕೊಳವೆ ಬಾವಿಗಳು: ನಮ್ಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊಳವೆ ಬಾವಿಗಳು ಕಂಡು ಬರುತ್ತವೆ. ಈ ಬಾವಿಗಳಿಂದ ದೊರೆಯುವ ನೀರಿನ ಪ್ರಮಾಣವು ಒಂದೇ ರೀತಿಯಾಗಿಲ್ಲ. ಉದಾಹರಣೆಗೆ ಬೆಳಗಾವಿ, ರಾಯಚೂರು, ಗುಲ್ಬರ್ಗಾ ಜಿಲ್ಲೆಗಳ ಹಲವೆಡೆ ಪ್ರತಿ ಸೆಕೆಂಡಿಗೆ ೫ ರಿಂದ ೧೦ ಲೀಟರು ನೀರು ದೊರೆತರೆ, ಬಳ್ಳಾರಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಪ್ರತಿ ಸೆಕೆಂಡಿಗೆ ೧೦ ಲೀಟುರುಗಳಿಗಿಂತ ಅಧಿಕ ನೀರು ಹೊರ ಬರುತ್ತದೆ. ರಾಜ್ಯದ ಸರಾಸರಿಯನ್ನು ಪರಿಗಣಿಸಿದರೆ, ಪ್ರತಿ ಸೆಕೆಂಡಿಗೆ ೧ ರಿಂದ ೫ ಲೀಟರು ನೀರು ಕೊಳವೆ ಬಾವಿಗಳಿಂದ ದೊರೆಯುತ್ತದೆ ಎನ್ನಬಹುದು.

ಪ್ರತಿ ಕೊಳವೆ ಬಾವಿಯಿಂದ ಎಷ್ಟು ಪ್ರದೇಶಕ್ಕೆ ನೀರನ್ನು ಒದಗಿಸಬಹುದೆಂಬುದನ್ನು ನಿಖರವಾಗಿ ಹೇಳಲಾಗದು.ಬೆಳೆಯ ಅವಶ್ಯಕತೆ, ಮಣ್ಣಿನ ಗುಣಧರ್ಮ, ಹವಾಮಾನ ಮುಂತಾದ ಹಲವು ವಿಷಯವನ್ನು ಪರಿಗಣಿಸಬೇಕಾಗುತ್ತದೆ. ಸಾಮಾನ್ಯವಾಗಿ ೧ ರಿಂದ ೩ ಲೀಟರು ನೀರು ಪ್ರತಿ ಸೆಕೆಂಡಿಗೆ ಪೂರೈಸಬಲ್ಲ ಕೊಳವೆ ಬಾವಿಯಿಂದ, ಒಂದರಿಂದ ಎರಡು ಹೆಕ್ಟೇರು ಪ್ರದೇಶಕ್ಕೆ ನೀರನ್ನೊದಿಗಸಬಹುದು. ಅದರಂತೆಯೇ, ಪ್ರತಿ ಸೆಕೆಂಡಿಗೆ ೩ ರಿಂದ ೫ ಲೀಟರು ನೀರು ಸಿಗುವ ಬಾವಿಯಿಂದ ೨- ೪ ಹೆಕ್ಟೇರು ಪ್ರದೇಶವನ್ನು ಮತ್ತು ಪ್ರತಿ ಸೆಕೆಂಡಿಗೆ ೫-೧೦ ಲೀಟರು ನೀರು ಪೂರೈಸಬಲ್ಲ ಬಾವಿಯಿಂದ ೪-೯ ಹೆಕ್ಟೇರು ಪ್ರದೇಶಕ್ಕೆ ನೀರನ್ನೊದಗಿಸಬಹುದೆಂದು ಅಂದಾಜು ಮಾಡಲಾಗಿದೆ.

ಕೊಳವೆ ಬಾವಿಗಳ ಉಪಯೋಗ

  • ಮೇಲೆ ಸೂಚಿಸಿದಂತೆ ಕೊಳವೆ ಬಾವಿಗಳು ನಮ್ಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಂಡು ಬರುತ್ತವೆಯಾದರೂ ಬೆಂಗಳೂರು, ಬೆಳಗಾವಿ, ಚಿತ್ರದುರ್ಗ, ಧಾರವಾಡ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿವೆ. ಕೊಳವೆ ಬಾವಿಗಳು ಈ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಒದಗಿಸುವ ಏಕಮೇವ ಮೂಲವಾಗಿವೆಯಲ್ಲದೇ ರಾಜ್ಯದ ಸುಮಾರು ೭ ಲಕ್ಷಕ್ಕಿಂತ ಅಧಿಕ ಹೆಕ್ಟೇರು ಪ್ರದೇಶಕ್ಕೆ ನೀರಾವರಿಯನ್ನು ಒದಗಿಸುತ್ತವೆ.
  • ಈ ಭಾಗದಲ್ಲಿ ನಾಲೆ ನೀರಾವರಿಯೊಡನೆ ಕೊಳವೆ ಬಾವಿಗಳಿಂದ ದೊರೆಯುವ ನೀರನ್ನೂ ಸಂಯೋಜಿತ ರೀತಿಯಲ್ಲಿ ಬಳಸಿದರೆ ನೀರಾವರಿ ಪ್ರದೇಶವನ್ನು ಗಣನೀಯವಾಗಿ ಅಧಿಕಗೊಳಿಸಬಹುದು.
  • ಕೊಳವೆ ಬಾವಿಗಳ ಸಂಖ್ಯೆಯು ಅಧಿಕಗೊಂಡು, ಅಂತರ್ಜಲದ ಮರು ಪೂರಣದ ಬಗ್ಗೆ ಅವಶ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ, ಪೂರೈಕೆಗಿಂತ ಬಳಕೆ ಪ್ರಮಾಣವೇ ಅಧಿಕಗೊಂಡು, ಕೊಳವೆ ಬಾವಿಯಿಂದ ಹೊರ ಬರುವ ನೀರಿನ ಪ್ರಮಾಣವು ಕಡಿಮೆಯಾಗಬಹುದು ಇಲ್ಲವೇ ನಿಂತು ಹೋಗಲೂಬಹುದು. ಕೊಳವೆ ಬಾವಿಗಳ ಸಂಖ್ಯೆಯು ಮಿತಿಯನ್ನು ಮೀರಿದ ಪ್ರದೇಶಗಳಲ್ಲಿ ತೆರೆದ ಬಾವಿಗಳಲ್ಲಿಯ ನೀರು ಬತ್ತಿ ಹೋಗಿರುವ ಉದಾಹರಣೆಗಳಿವೆ ಎಂಬುದನ್ನು ನೆನಪಿನಲ್ಲಿಡಬೇಕು.