ನಮ್ಮ ಮಿದುಳಿನಿಂದ ಒಟ್ಟು ಹನ್ನೆರಡು ಜೊತೆ ಕಪೋಲ ನರಗಳು (Cranial Nerves) ಹೊರಡುತ್ತವೆ. ಅವುಗಳಲ್ಲಿ ಕೆಲವು ಚಲನೆಯನ್ನು ನಿರ್ದೇಶಿಸುವ ನರಗಳಾದರೆ, ಕೆಲವು ಪರಿಧಿಯಿಂದ (ಚರ್ಮದಿಂದ ಅಥವಾ ಇತರ ಇಂದ್ರಿಯಗಳಿಂದ) ಸಂವೇದನೆ (ಸ್ಪರ್ಶ, ಒತ್ತಡ, ಶಾಖ, ನೋವು, ಉರಿ)ಗಳನ್ನು ಮಿದುಳಿಗೆ ಒಯ್ಯುವ ಕೆಲಸ ಮಾಡುತ್ತವೆ. ಮತ್ತೆ ಕೆಲವು ಚಲನೆ ಮತ್ತು ವಂವೇದನೆ ಎರಡನ್ನೂ ಮಾಡುವ ಮಿಶ್ರ ನರಗಳು.

ಒಂದನೇ ಕಪೋಲ ನರ: (Olfactory nerve): ಇದು ವಾಸನೆಯ ಸಂವೇದನೆಯನ್ನು ಮೂಗಿನಿಂದ ಮಿದುಳಿಗೆ ಸಾಗಿಸುವುದಕ್ಕೆ ನೆರವಾಗುತ್ತದೆ. ಮೂಗಿನ ಒಳ ಬಿತ್ತಿಯಲ್ಲಿರುವ ವಾಸನೆಯನ್ನು ಗ್ರಹಿಸುವ ಜೀವಕೋಶಗಳಿಂದ ನರತಂತುಗಳು ಹೊರಟು ವಾಸನಾ ಬುಡ್ಡೆಯನ್ನು ಸೇರುತ್ತವೆ. ಅಲ್ಲಿಂದ ವಾಸನಾ ಹಳಿಯಾಗಿ ಮಿದುಳಿನ ಮೇಲ್ಮೈಯನ್ನು ತಲುಪುತ್ತವೆ.

ಈ ಕಪೋಲ ನರವು ವಾಸನೆಯನ್ನು ಗ್ರಹಿಸಲು ನಮಗೆ ನೆರವಾಗುವುದಲ್ಲದೆ, ರುಚಿಯನ್ನು ಗ್ರಹಿಸಲೂ ಸಹಾಯ ಮಾಡುತ್ತದೆ. ನೆಗಡಿಯಾದಾಗ ಈ ನರ ಸರಿಯಾಗಿ ಕೆಲಸ ಮಾಡುವುದಿಲ್ಲವಾಗಿ ಆಹಾರ ರುಚಿಯೇ ನಮಗೆ ಗೊತ್ತಾಗದಿರುವುದು ನಮ್ಮೆಲ್ಲರ ಅನುಭವ. ನಮ್ಮ ನಾಲಿಗೆಗೆ ಮೂಲ ರುಚಿಗಳಾದ ಸಿಹಿ, ಕಹಿ, ಉಪ್ಪು, ಆಮ್ಲವಷ್ಟೇ ತಿಳಿಯುತ್ತದೆ. ಉಳಿದ ವಿಶಾಲ ಶ್ರೇಣಿಯ ವಿವಿಧ ರುಚಿಗಳ ಅನುಭವ ನಮಗಾಗಬೇಕಾದರೆ, ಒಂದನೇ ಕಪೋಲ ನರ ಬೇಕೇ ಬೇಕು.

ಅನಾಸ್ಮಿಯ: ತಲೆಗೆ ಪೆಟ್ಟು ಬಿದ್ದಾಗ, ಮೂಗಿನೊಳಗೆ ಸೋಂಕಾದಾಗ, ಒಂದನೇ ಕಪೋಲ ನರ ಹೋಗುವ ಮಾರ್ಗದಲ್ಲಿ ಗೆಡ್ಡೆ ಬೆಳೆದುಕೊಂಡೋ ಅಥವಾ ಇನ್ಯಾವುದೋ ಕಾರಣದಿಂದ ನರಕ್ಕೆ ಹಾನಿಯುಂಟಾದಾಗ, ಮಿದುಳಿನ ತೀವ್ರ ಸೋಂಕುಂಟಾದಾಗ (ಮಿದುಳುರಿತ, ಸಿಫಿಲಿಸ್ ರೋಗ) ವ್ಯಕ್ತಿಗೆ ವಾಸನೆ ಗೊತ್ತಾಗುವುದಿಲ್ಲ. ಈ ತೊಂದರೆ ಹೆಚ್ಚು ಕಡಿಮೆ ಶಾಶ್ವತವಾಗಿ ಉಳಿಯುತ್ತದೆ. ಈ ಸ್ಥಿತಿಯನ್ನು ‘ಅನಾಸ್ಮಿಯ’ ಎಂದು ಕರೆಯುತ್ತಾರೆ.

ಕೆಲವು ಸಲ ಒಂದನೇ ನರದ ಮಾರ್ಗದಲ್ಲಿ ಅಥವಾ ಮಿದುಳಿನ ವಾಸನಾ ಕ್ಷೇತ್ರದಲ್ಲಿರುವ ಜೀವಕೋಶಗಳು ರಾಸಾಯನಿಕ ಏರುಪೇರಿನಿಂದ ಪ್ರಚೋದಿತಗೊಂಡರೆ ವಾಸನಾ ಭ್ರಮೆಯುಂಟಾಗುತ್ತದೆ (Olfactory Hallucinations) ಪರಿಸರದಲ್ಲಿ ವಾಸನೆಯನ್ನು ಸೂಸುವ ಯಾವ ವಸ್ತು ವಿಶೇಷವಿಲ್ಲದಿದ್ದರೂ, ವ್ಯಕ್ತಿ ಒಳ್ಳೆಯ/ ಕೆಟ್ಟ ವಾಸನೆಯನ್ನು ಅನುಭವಿಸುತ್ತಾನೆ ಅಥವಾ ಒಳ್ಳೆಯ ವಾಸನೆಯನ್ನು ಕೆಟ್ಟದೆಂದೂ, ಕೆಟ್ಟದ್ದನ್ನು ಒಳ್ಳೆಯದೆಂದೂ ತಪ್ಪಾಗಿ ಗುರುತಿಸುತ್ತಾನೆ. ಈ ಭ್ರಮಾಸ್ಥಿತಿ ಚಿತ್ತ ವಿಕಲತೆ ಕಾಯಿಲೆಯಾದ ಸ್ಕ್ರಿಜೋಫ್ರೀನಿಯಾದಲ್ಲಿ ಕಪೋಲ ಭಾಗದ ಅಪಸ್ಮಾರ (Temporal lobe epilepsy) ಅಥವಾ ಮಿದುಳು ನಶಿಸುವ ರೋಗಗಳಲ್ಲಿ ಕಂಡುಬರುತ್ತದೆ.

ಎರಡನೇ ಕಪೋಲ ನರ: (Optic Nerve) ಇದು ನಮ್ಮ ದೃಷ್ಟಿಗೆ ಸಂಬಂಧಿಸಿದ ನರ. ಕಣ್ಣಿನ ಮೂಲಕ ಒಳಬಂದ ಬಿಂದ ಕಣ್ಣಿನ ಅಕ್ಷಿಪಟಲದ (Retina) ಮೇಲೆ ಬೀಳುತ್ತದೆ. ಆ ದೃಶ್ಯ ಸಂವೇದನೆಯನ್ನು ನರಕೋಶಗಳ ತಂತುಗಳು, ಆಪ್ಟಿಕ್ ಕೈಯಾಸ್ಮಕ್ಕೆ ತಲುಪಿಸುತ್ತವೆ. ಇಲ್ಲಿ ಎರಡೂ ಕಣ್ಣಿನಿಂದ ಬಂದ ನರತಂತುಗಳು ಮಿಶ್ರವಾಗಿ, ಆಯಾ ಕಡೆಯ ದೃಷ್ಟಿ ನರವಾಗಿ ಮೇಲೇರಿ, ಮಿದುಳಿನ ಮೇಲ್ಮೈಯನ್ನು ತಲುಪುತ್ತವೆ. ದೃಷ್ಟಿ ನರ ತನ್ನ ಈ ಮಾರ್ಗದಲ್ಲಿ ಯಾವ ಹಂತದಲ್ಲಿ ಹಾನಿಗೀಡಾಗುತ್ತದೆ ಎನ್ನುವುದರ ಮೇಲೆ ಕಣ್ಣ ಮುಂದಿನ ಕ್ಷೇತ್ರದಲ್ಲಿ ಯಾವ ಭಾಗದಲ್ಲಿರುವ ವಸ್ತುಗಳು ನಮಗೆ ಕಾಣುವುದಿಲ್ಲ ಎನ್ನುವುದು ನಿರ್ಧಾರವಾಗುತ್ತದೆ.

ದೃಷ್ಟಿ ನರ ಸವೆತಹಾನಿ :(Optic Atrophy) ದೃಷ್ಟಿ ನರ ಅನೇಕ ಕಾರಣಗಳಿಂದ ಸವೆದು, ಕ್ಷಯಿಸಿ ಕಡೆಗೆ ಪೂರ್ಣವಾಗಿ ಹಾನಿಗೊಳಗಾಗಬಹುದು. ದೃಷ್ಟಿ ಸ್ವಲ್ಪ ಸ್ವಲ್ಪವಾಗಿ ಮಂಜಾಗುತ್ತಾ ಹೋಗಿ, ಕಡೆಗೆ ಪೂರ್ಣ ಕುರುಡುತನ ಕಾಣಿಸಿಕೊಳ್ಳುತ್ತದೆ. ಈ ಸ್ಥಿತಿಯನ್ನು ‘ಆಪ್ಟಿಕ್ ಅಟ್ರೋಪಿ’ ಎನ್ನುತ್ತಾರೆ. ಇದಕ್ಕೆ ಕಾರಣಗಳು:

. ಅನುವಂಶಿಕಕೌಟುಂಬಿಕ ನ್ಯೂನತೆ: ಕುಟುಂಬದಲ್ಲಿ ಹಲವರಿಗೆ ಮತ್ತು ಅನುವಂಶಿಕವಾಗಿ ತಂದೆ ತಾಯಿಯಿಂದ ಮಕ್ಕಳಿಗೆ ಈ ನ್ಯೂನತೆ ಬರಬಹುದು. ನರಕೋಶಗಳು ನಶಿಸುವುದು, ರೆಟಿನೈಟಿಸ್ ಪಿಗ್ ಮೆಂಟೋಸಾ ಎಂಬ ಕಾಯಿಲೆಯಲ್ಲಿ ಜೇಡನ ಬಲೆಯಂತಹ ಕಪ್ಪು ವರ್ಣದ ವಸ್ತುಗಳು ಅಕ್ಷಿಪಟಲದ ಮೇಲೆ ಕಾಣಿಸಿಕೊಳ್ಳುವುದು ಇದಕ್ಕೆ ಉದಾಹರಣೆಗೆ ರೆಟಿನೈಟಿಸ್ ಪಿಗ್‌ಮೆಂಟೋಸದಲ್ಲಿ ಮೊದಲು ರಾತ್ರಿ ಕುರುಡುತನ ಶುರುವಾಗಿ ಅನಂತರ ದೃಷ್ಟಿ ಪೂರ್ಣವಾಗಿ ಇಲ್ಲವಾಗುತ್ತದೆ. ಈ ಕಾಯಿಲೆಗೆ ಚಿಕಿತ್ಸೆ ಇಲ್ಲ.

. ತಲೆ ಬುರುಡೆಯೊಳಗೆ ಗಡ್ಡೆ (ಕ್ಷಯ, ಕ್ಯಾನ್ಸರ್ ಇತ್ಯಾದಿ) ಬೆಳೆದುಕೊಂಡು ಅಥವಾ ಮಿದುಳು-ಮಿದುಳ ಬಳ್ಳಿ ರಸ ಹೆಚ್ಚಾಗಿ ಅಥವಾ ಇನ್ನಾವುದೇ ಕಾರಣದಿಂದ ಒತ್ತಡ ಹೆಚ್ಚಿ (Intra Cranial Pressure) ದೃಷ್ಟಿ ನರ ಸವೆತ ಉಂಟಾಗಬಹುದು. ದಿನೇ ದಿನೇ ಹೆಚ್ಚುವ ತಲೆನೋವು, ವಾಂತಿ, ದೃಷ್ಟಿ ಮಂಜಾಗುವಿಕೆ, ಪರೀಕ್ಷಿಸಿದಾಗ ಕಣ್ಣಿನೊಳಗೆ ಒತ್ತರ (ಪೆಪಿಲ್ಲೆಡೀಮಾ) ಅಥವಾ ದೃಷ್ಟಿ ನರ ಸವೆತ ಕಂಡು ಬಂದರೆ, ತಲೆಯೊಳಗೆ ಒತ್ತಡವನ್ನುಂಟು ಮಾಡುತ್ತಿರುವ ಗಡ್ಡೆಯೋ ಮತ್ತೊಂದೋ ಇರಬೇಕು ಎಂದು ವೈದ್ಯರು ಊಹಿಸುತ್ತಾರೆ.

. ದೃಷ್ಟಿ ನರದ ಉರಿತಸೋಂಕು: ಸಿಫಿಲಿಸ್ ರೋಗಾಣುಗಳು, ವೈರಸ್‌ಗಳು ಇದಕ್ಕೆ ಸಾಮಾನ್ಯ ಕಾರಣ.

. ವಿಷವಸ್ತುಗಳು: ಹೊಗೆ ಸೊಪ್ಪು, ಸೀಸ, ಆರ್ಸೆನಿಕ್, ಮಿಥೈಲ್, ಆಲ್ಕೋಹಾಲ್ (ಕಳ್ಳ ಭಟ್ಟಿ ಮತ್ತು ಇತರ ಕಳಪೆ, ದುರ್ಮಿಶ್ರಣದ ಮದ್ಯಪಾನೀಯಗಳಲ್ಲಿರುವ ಅತ್ಯಪಾಯಕಾರಿ ವಿಷವಸ್ತು) ಕೀಟ ನಾಶಕಗಳನ್ನು ಕಾರ್ಬನ್ ಬೈ ಸಲ್ಫೈಡ್‌ಗಳಿಂದ ದೃಷ್ಟಿ ನರ ಹಾನಿಗೊಳಗಾಗುತ್ತದೆ. ದುರಾಶೆಯ ಜನ ಮಿಥೈಲ್‌ ಆಲ್ಕೋಹಾಲ್ ಮಿಶ್ರಿತ ಸಾರಾಯಿ, ಮದ್ಯ ಪಾನೀಯಗಳನ್ನು ಜನರಿಗೆ ಮಾರಿ, ಜನ ಸಾಯುವುದನ್ನು ಅಥವಾ ಬದುಕಿ ಉಳಿದವರು ದೃಷ್ಟಿಯನ್ನು ಕಳೆದುಕೊಂಡ ಕರುಣಾಜನಕ ದುರಂತಗಳು ಆಗಿಂದಾಗ್ಯೆ ಆಗುತ್ತಲೇ ಇರುತ್ತವೆ. ಈ ವಿಷ ವಸ್ತುಗಳನ್ನು ದೂರವಿಡಿ.

. ಒತ್ತಡ, ಗಾಯ: ಕಣ್ಣಿಗೆ ಬರುವ ಗ್ಲಕೋಮ ಕಾಯಿಲೆಯಿಂದ ಉಂಟಾಗುವ ಕಣ್ಣೊಳಗಿನ ಒತ್ತಡ, ನೇರವಾಗಿ ಕಣ್ಣು ಗುಡ್ಡೆಗೆ ಪೆಟ್ಟು ದೃಷ್ಟಿನರದ ಸವೆತಕ್ಕೆ ದಾರಿಮಾಡಿಕೊಡಬಹುದು.

ಹೀಗೆ ಯಾವುದೇ ಕಾರಣದಿಂದ, ದೃಷ್ಟಿ ನರಕ್ಕೆ ಹಾನಿಯಾಯಿತೆಂದರೆ, ಕಣ್ಣಿನ ದೃಷ್ಟಿ ಶಾಶ್ವತವಾಗಿ ಹೋದಂತೆಯೇ. ಆದ್ದರಿಂದ ಪ್ರಾರಂಭದಲ್ಲಿಯೇ ದೃಷ್ಟಿ ನರ ಸವೆತವನ್ನು ಮತ್ತು ಅದಕ್ಕೆ ಕಾರಣವಾಗುವ ಅಂಶಗಳನ್ನು ಗುರುತಿಸಿ, ಚಿಕಿತ್ಸೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರಿಂದ, ಮುಂದಾಗುವ ಹಾನಿಯನ್ನು ತಡೆಯಬಹುದು. ಯಾವುದೇ ವ್ಯಕ್ತಿಗೆ ದೃಷ್ಟಿ ಮಂಜಾಗುತ್ತಿದ್ದರೆ, ಕಣ್ಣಿನ ತಜ್ಞರನ್ನು ಕಂಡು ಸಲಹೆ ಪಡೆಯುವುದು ಉಚಿತ.

ಮೂರು, ನಾಲ್ಕು ಮತ್ತು ಆರನೇ ಕಪೋಲ ನರಗಳು: ಇವು ನಮ್ಮ ಕಣ್ಣಿನ ಗುಡ್ಡೆಗಳ ಚಲನೆಯನ್ನು ನಿರ್ದೇಶಿಸುವ ನರಗಳು. ಗುಡ್ಡೆಯನ್ನು ಮೇಲೆ ಕೆಳಕ್ಕೆ, ಅಕ್ಕ-ಪಕ್ಕಕ್ಕೆ ಚಲಿಸುವ ಹಾಗೆ ಕಣ್ಣ ಗುಡ್ಡೆಗಳನ್ನು ಬೇಕೆಂದೆಡೆ ಸ್ಥಿರವಾಗಿ ನಿಲ್ಲಿಸುವ ಸ್ನಾಯುಗಳು ಈ ನರಗಳ ಹತೋಟಿಯಲ್ಲಿವೆ. ಈ ನರಗಳಲ್ಲಿ ಯಾವುದಾದರೊಂದು ಹಾನಿಗೀಡಾದರೆ, ಈ ಕೆಳ ಕಾಣುವ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

೧. ಮೆಳ್ಳೆ ಗಣ್ಣು

೨. ಒಂದು ವಸ್ತು ಎರಡರಂತೆ ಕಾಣುವುದು (ಡಿಪ್ಲೋಪಿಯಾ)

೩. ಕಣ್ಣಿನ ರೆಪ್ಪೆ ಮುಚ್ಚಿಕೊಳ್ಳುವುದು (ಟೋಸಿಸ್)

೪. ಕಣ್ಣಿನ ಗುಡ್ಡೆಗಳನ್ನು ಎಲ್ಲ ದಿಕ್ಕಿನಲ್ಲಿ  ಚಲಿಸಲು ಆಗದಿರುವುದು

೫. ಕಣ್ಣಿನ ಗುಡ್ಡೆ ಲೋಲಕದಂತೆ ಅತ್ತಿಂದಿತ್ತ ಚಲಿಸುವ ಸ್ಥಿತಿ (ನಿಸ್ಟಾಗ್ಮಸ್)

ನಿಸ್ಟಾಗ್ಮಸ್: ಕೆಲವರ ಕಣ್ಣ ಗುಡ್ಡೆಗಳು ಗಡಿಯಾರದ ಲೋಲಕದಂತೆ ಸದಾ ಅತ್ತಿಂದಿತ್ತ ಚಲಿಸುತ್ತಿರುತ್ತವೆ. ಇದು ಅನುವಂಶಿಕವಾಗಿ, ಹುಟ್ಟಿದಂದಿನಿಂದಲೇ ಕಾಣಿಸಿಕೊಳ್ಳಬಹುದು. ಕೆಲವರಿಗೆ ಒಂದು ಪಕ್ಕಕ್ಕೆ ಅಥವಾ ತೀರಾ ಮೇಲಕ್ಕೆ ನೋಡಿದಾಗ ಮಾತ್ರ ಗುಡ್ಡೆ ಅಸ್ಥಿರವಾಗಿ ಚಲಿಸತೊಡಗಬಹುದು. ಈ ನಿಸ್ಟಾಗ್ಮಸ್‌ಗೆ ಹಲವು ಕಾರಣಗಳಿವೆ:

೧. ಬೆಳಕು ಕಡಮೆ ಇರುವ ಗಣಿಗಳಲ್ಲಿ ಕೆಲಸ ಮಾಡುವವರಲ್ಲಿ ಇದು ಕಂಡುಬರಬಹುದು.

೨. ಸದಾ, ವೇಗವಾಗಿ ಚಲಿಸುವ ವಸ್ತುಗಳನ್ನು ನೋಡುವ ವ್ಯಕ್ತಿಗಳಲ್ಲಿ.

೩. ಒಳ ಕಿವಿ ಮತ್ತು ಮಧ್ಯ ಕಿವಿಯ ಕಾಯಿಲೆ ಇರುವವರಲ್ಲಿ

೪. ಕತ್ತಿನ ಮಟ್ಟದಲ್ಲಿ ಮಿದುಳ ಬಳ್ಳಿಗೆ ಹಾನಿಯಾದವರಲ್ಲಿ

೬. ಸ್ನಾಯುಗಳ ವಿಶೇಷ ಕಾಯಿಲೆ (ಮಯಸ್ತೀನಿಯಾ ಗ್ರೇವಿಸ್) ಇರುವವರಲ್ಲಿ.

೭. ಮದ್ಯಪಾನಿಯಗಳಲ್ಲಿ, ನಂಜು ವಸ್ತು ಸೇವಿಸಿದವರಲ್ಲಿ

೯. ಸಿಫಿಲಿಸ್, ಕ್ಷಯದಂತಹ ಸೋಂಕು ರೋಗಗಳು, ಸಿಹಿಮೂತ್ರ ರೋಗ ಇರುವವರಲ್ಲಿ.

೧೦. ನೇರ ಪೆಟ್ಟು ಗಾಯವಾದವರಲ್ಲಿ

ಐದನೇ ಕಪೋಲ ನರ

ಇದೊಂದು ಮಿಶ್ರ ನರ. ಸಂವೇದನೆ-ಚಲನೆ ಎರಡೂ ಕೆಲಸಗಳನ್ನು ನಿರ್ವಹಿಸುತ್ತದೆ. ಮಿದುಳಿನ ನರಸೇತುವಿನಿಂದ ಈ ನರ ಪ್ರಾರಂಭವಾಗುತ್ತದೆ. ಮುಖದ ಮೇಲ್ಮೈಯಿಂದ ಸ್ಪರ್ಶ-ನೋವು ಇತ್ಯಾದಿ ಸಂವೇದನೆಗಳು ಈ ನರದ ಮುಖಾಂತರ, ಮಿದುಳಿನ ಸಂವೇದನಾ ಕ್ಷೇತ್ರವನ್ನು ಸೇರುತ್ತವೆ. ಈ ಸಂವೇದನೆಯನ್ನು ಸಾಗಿಸುವ ಮೂರು ಉಪಶಾಖೆಗಳಿವೆ. ಒಂದು ಉಪಶಾಖೆ ಕಣ್ಣಿನ ಮೇಲಿನ ಭಾಗದಿಂದ, ಇನ್ನೊಂದು ಉಪಶಾಖೆ (ಮ್ಯಾಕ್ಸಿಲರಿ) ಕಣ್ಣಿನ ಕೆಳಭಾಗದಿಂದ, ಮೂರನೇ ಉಪಶಾಖೆ-ದವಡೆಯ ಭಾಗದಿಂದ ಸಂವೇದನೆಯನ್ನು ಸಾಗಿಸುತ್ತವೆ. ಈ ಮೂರು ಉಪಶಾಖೆಗಳನ್ನು ಒಟ್ಟು ಸೇರಿಸಿ ‘ಟ್ರೈಜಮೈನಲ್‌ ನರ’ ಎಂದು ಕರೆಯುತ್ತಾರೆ. ಐದನೇ ನರದ ಒಂದು ಭಾಗ ದವಡೆಯ ಸ್ನಾಯುಗಳ ಚಲನೆಯನ್ನು ನಿರ್ದೇಶಿಸುತ್ತದೆ.

ಟ್ರೈಜಮೈನಲ್ ನ್ಯೂರಾಲ್ಜಿಯ: ಇದೊಂದು ಅತೀವ ನೋವಿನ, ಆಗಿಂದಾಗ್ಯೆ ಬಂದು ಕಾಡುವ ನರಬೇನೆ. ಟ್ರೈಜಮೈನಲ್‌ ನರದ ಉರಿತದಿಂದಾಗಿ, ಆ ನರದ ಉಪಶಾಖೆಗಳಿಂದ ಸಂವೇದನೆ ಪಡೆಯುವ ಮುಖದ ಭಾಗದಲ್ಲಿ ಬಟ್ಟು ಬಿಟ್ಟು ಬರುವ ತೀವ್ರ ನೋವು ರೋಗಿಯನ್ನು ಬಹುವಾಗಿ ಕಾಡುತ್ತದೆ. ಬೆಂಕಿಯಿಂದ ಸುಟ್ಟಂತಹ ನೋವು, ಹರಿತವಾದ ಚಾಕುವಿನಿಂದ ತಿವಿದಂತಹ ನೋವು ರೋಗಿಯನ್ನು ಬಾಧಿಸುತ್ತದೆ. ಚಳಿಗಾಳಿ ಮುಖದ ಆ ಭಾಗವನ್ನು ಮುಟ್ಟುವುದು, ಮುಖ ತೊಳೆದಾಗ ಅಥವಾ ಒರೆಸಿದಾಗ, ಮಾತನಾಡಿದಾಗ, ಆಹಾರವನ್ನು ಜಗಿದಾಗ, ನುಂಗಿದಾಗ ನೋವು ಥಟ್ಟನೆ ಕಾಣಿಸಿಕೊಳ್ಳಬಹುದು. ಹೀಗೆ ಮಿಂಚಿನಂತೆ ಕಾಣಿಸಿಕೊಂಡ ನೋವು ಒಂದೆರಡು ನಿಮಿಷ ಇದ್ದು ಮರೆಯಾಗುವುದು, ಈ ರೋಗದ ವೈಶಿಷ್ಟ್ಯ. ನೋವು/ಉರಿ ಜೊತೆಗೆ ಮುಖ ಕೆಂಪಾಗುವುದು. ಕಣ್ಣಲ್ಲಿ ನೀರು ಸುರಿಯುವುದು, ಜೊಲ್ಲು ನುರಿಯುವುದೂ ಆಗಬಹುದು.

ಟ್ರೈಜಮೈನಲ್‌ ನ್ಯೂರಾಲ್ಜಿಯಾಗೆ ಕಾರಣ ಏನೆಂಬುದು ಸ್ಪಷ್ಟವಿಲ್ಲ. ನೋವಿನ ಕಾರಣ ಮಿದುಳ ಕಾಂಡದಲ್ಲಿರಬಹುದೆನ್ನಲಾಗಿದೆ. ಇದು ಅನುವಂಶೀಯವಾಗಿಯೂ ಬರಬಹುದು. ಸಾಮಾನ್ಯವಾಗಿ ಮಧ್ಯ ವಯಸ್ಸಿನಲ್ಲಿ ನೋವು ಬರುವುದು ಪ್ರಾರಂಭವಾಗುತ್ತದೆ. ಹಲವಾರು ವರ್ಷಗಳ ಕಾಲ ಬಂದು ಕಾಡುವ ಈ ರೋಗಕ್ಕೆ ಚಿಕಿತ್ಸೆ ಅಷ್ಟು ಸುಲಭವಲ್ಲಿ. ಫೆನಿಟಾಯಿನ್, ಕಾರ್ಬಮಜೆಪಿನ್‌ ಮಾತ್ರಗಳನ್ನು ಈ ರೋಗಿಗಳಿಗೆ ಕ್ರಮವಾಗಿ ದಿನವೂ ಸೇವಿಸಲು ಹೇಳಲಾಗುತ್ತದೆ. ಇದರಿಂದ ನೋವು ಕಡಿಮೆಯಾಗದಿದ್ದರೆ, ಮದ್ಯಸಾರವನ್ನು ಸೂಜಿಯ ಮೂಲಕ, ಟ್ರೈಜಮೈನಲ್‌ ನರಕ್ಕೆ ಕೊಟ್ಟು ನೋವಿನ ಸಂವೇದನೆಯನ್ನು ಅದು ಸಾಗಿಸದಂತೆ ‘ಬ್ಲಾಕ್’ ಮಾಡುವ ಈ ಭಾಗದಲ್ಲಿ ಸ್ಪರ್ಶ ಸಂವೇದನೆಯೂ ಇರುವುದಿಲ್ಲ. ಸ್ವಲ್ಪ ಅವಧಿಯ ನಂತರ ನೋವು ಮರುಕಳಿಸಿದರೆ, ಮತ್ತೆ ಮದ್ಯಸಾರದ ಇಂಜೆಕ್ಷನ್‌ ಕೊಡಬೇಕಾಗುತ್ತದೆ.

ಏಳನೇ ಕಪೋಲ ನರ

ಮುಖದ ಸ್ನಾಯುಗಳಿಗೆ ಚಲನೆಯ ನಿರ್ದೇಶನ ನೀಡುವ ಏಳನೇ ಕಪೋಲ ನರವನ್ನು ಮುಖದ ನರ (Facial Nerve) ಎಂದೂ ಕರೆಯುತ್ತಾರೆ. ಕೆಲವು ದೂರದವರೆಗೆ ಈ ನರ (ಚಲನೆ)ದ ಜೊತೆಗೆ, ಜೊಲ್ಲನ್ನು ಉತ್ಪಾದಿಸುವ ಹಾಗೂ ನಾಲಿಗೆಯ ಮುಂಭಾಗದ ರುಚಿಯ ಸಂವೇದನೆಯನ್ನು ಸಾಗಿಸುವ ನರ ತಂತುಗಳೂ ಇರುತ್ತವೆ. ಮುಖ ನರದ ಕೇಂದ್ರ ಬೀಜ Nucleus ಮಿದುಳಿನ ನರಸೇತುವಿನಲ್ಲಿದೆ. ಮುಖ ನರಕ್ಕೆ ಹಾನಿಯುಂಟಾದರೆ ಮುಖದ ಸ್ನಾಯುಗಳು ನಿಷ್ಕ್ರಿಯವಾಗುತ್ತವೆ. ಹಾನಿ ಯಾವ ಮಟ್ಟದಲ್ಲಾದರೂ ಆಗಬಹುದು- ನರಸೇತುವಿನಲ್ಲಿ ನರ ತಲೆ ಬುರುಡೆಯನ್ನು ಬಿಡುವ ಮೊದಲು ಅಥವಾ ಬಿಟ್ಟ ನಂತರ-ಎಲ್ಲಿ ಬೇಕಾದರೂ.

ಬೆಲ್ಸ್ ಪಾಲ್ಸಿ: ಇದ್ದಕ್ಕಿದ್ದಂತೆ ಬೆಳಿಗ್ಗೆ ಏಳುತ್ತಿದ್ದಂತೆ ಹಿಂದಿನ ರಾತ್ರಿ ಚೆನ್ನಾಗಿದ್ದ ವ್ಯಕ್ತಿಯ ಮುಖದ ಒಂದು ಕಡೆಯ ಸ್ನಾಯುಗಳು ನಿಷ್ಕ್ರಿಯವಾಗಿ ಲಕ್ವ ಹೊಡೆದಂತೆ ಮುಖ ವಿಕಾರವಾಗಿರುತ್ತದೆ. ಆ ಕಡೆಯ ಕಣ್ಣ ರೆಪ್ಪೆಯನ್ನು ಮುಚ್ಚಲಾಗುವುದಿಲ್ಲ. ಮೂತಿ ಅದರ ವಿರುದ್ಧದ ಕಡೆಗೆ ತಿರುಗಿಕೊಂಡಿರುತ್ತದೆ. ತುಟಿ ಸೇರಿಸಿ ಉಫ್‌ ಎನ್ನಲು, ಸಿಳ್ಳೆ ಹೊಡೆಯಲು ಹೋದರೆ, ಉಸಿರು ಪುಸ್‌ ಎಂದು ಹೊರ ಹೋಗುತ್ತದೆ. ಒಂದು ಕಡೆಯ ತುಟಿ, ವ್ಯಕ್ತಿಯ ಆಜ್ಞಯನ್ನು ಪಾಲಿಸುವುದಿಲ್ಲ. ಆಹಾರ ತಿನ್ನಲು ಹೋದರೆ ಆಹಾರದ ತುಣುಕುಗಳು, ಒಂದು ಕಡೆಯ ಕೆನ್ನೆ ಮತ್ತು ಹಲ್ಲುಗಳ ನಡುವೆ ಸೇರಿಕೊಳ್ಳುತ್ತದೆ. ನೀರು ಕುಡಿಯಲು ಹೋದರೆ, ಒಂದು ಕಡೆಯಿಂದ ಸೋರಿ ಹೋಗುವುದನ್ನು ಕಂಡು ವ್ಯಕ್ತಿ ಹೌಹಾರುತ್ತಾನೆ.

ಬೆಲ್ಸ್‌ಪಾಲ್ಸಿ ಯಾವ ವಯಸ್ಸಿನವರಲ್ಲಾದರೂ ಕಂಡು ಬರಬಹುದು. ಚಳಿಗಾಳಿ ಬೀಸುತ್ತಿರುವಾಗ, ವಾಹ ಚಾಲನೆ ಮಾಡಿ/ ವಾಹನದ ಕಿಟಕಿಯ ಪಕ್ಕದಲ್ಲಿ ಕುಳಿತಾಗ, ಮನೆಯಲ್ಲಿ ಕಿಟಕಿಯನ್ನು ತೆರೆದು, ಪಕ್ಕದಲ್ಲಿ ಮಲಗಿದಾಗ ಹರ್ಪಿಸ್ ಜೋಸ್ಟರ್ ವೈರಸ್ ಸೋಂಕು ಆದಾಗ, ಬೆಲ್ಸ್‌ಪಾಲ್ಸಿ ಥಟ್ಟನೆ ಕಾಣಿಸಿಕೊಳ್ಳುತ್ತದೆ.

ಮುಖ ನರವು ಸ್ಟೈಲೋಮಾಸ್ಟಾಯ್ಡ್ ರಂಧ್ರದೊಳಗೆ ಹಾಯುವಾಗ ನರದ ಉರಿತ ಉಂಟಾಗುವುದು. ನರಕ್ಕೆ ತಾತ್ಕಾಲಿಕ ಹಾನಿಯುಂಟಾಗುವುದು ಬೆಲ್ಸ್‌ ಪಾಲ್ಸಿಗೆ ಕಾರಣ ಎಂದು ಹೇಳಲಾಗುತ್ತದೆ. ಸರ್ ಚಾರ್ಲ್ಸ್‌ ಬೆಲ್ (೧೭೭೪-೧೮೪೨) ಮೊದಲ ಬಾರಿಗೆ ಈ ಕಾಯಿಲೆ ಲಕ್ಷಣವನ್ನು ವಿವರಿಸಿದ್ದರಿಂದ ಈ ಸ್ಥಿತಿಗೆ ಅವನ ಹೆಸರನ್ನೇ ಇಟ್ಟಿದ್ದಾರೆ.

ಮುಖದ ಪಾರ್ಶ್ವ ನಿಷ್ಕ್ರಿಯತೆ ಕಾಣಿಸಿಕೊಂಡ, ಇಪ್ಪತ್ತು ನಾಲ್ಕು ಗಂಟೆಗಳೊಳಗಾಗಿ ಉರಿತವನ್ನು ಶಮನಗೊಳಿಸುವ ಸ್ಟೀರಾಯಿಡ್‌ ಔಷಧಿಯನ್ನು ಪರಾರಂಭಿಸಬೇಕು. ಇದರಿಂದ ನರದ ಹಾನಿ ಕಡಿಮೆಯಾಗುತ್ತದೆ. ಶಾಶ್ವತ ಹಾನಿಯಾಗುವುದನ್ನು ತಪ್ಪಿಸಬಹುದು. ಆನಂತರ ನಿಷ್ಕ್ರಿಯಗೊಂಡ ಸ್ನಾಯುಗಳಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಬಹುದು. ವಿದ್ಯುತ್ ಪ್ರಚೋದನೆ ನೀಡುವುದು ಇತ್ಯಾದಿ ಅಂಗ ಮರ್ದನ (Physiotheraphy) ಚಿಕಿತ್ಸೆ ಪರಿಣಾಮಕಾರಿ. ಕಣ್ಣನ್ನು ಮುಚ್ಚಲಾಗದಿದ್ದರೆ ಅದರ ರಕ್ಷಣೆಗೆ ವ್ಯವಸ್ಥೆ ಮಾಡಬೇಕಾಗುತ್ತದೆ. ನಾಲ್ಕೆಂಟು ವಾರಗಳಲ್ಲಿ ಸ್ನಾಯುಗಳು ಚೇತರಿಸಿಕೊಳ್ಳಲಿಲ್ಲವೆಂದರೆ ಅವು ಶಾಶ್ವತವಾಗಿ ನಿಷ್ಕ್ರಿಯವಾಗಿ ಉಳಿಯುತ್ತವೆ. ನ್ಯೂನತೆ ಕಂಡು ಬರುತ್ತದೆ.

ಎಂಟನೇ ಕಪೋಲ ನರ: ಇದರಲ್ಲಿ ಎರಡು ಗುಂಪಿನ ನರತಂತುಗಳಿವೆ.ಒಂದು ಗುಂಪು ಒಳ ಕಿವಿಯ ‘ಕಾಕ್ಲಿಯ’ ಅಂಗದಿಂದ ಹೊರಡುವ ಶ್ರವಣ ನರತಂತುಗಳನ್ನು ಹೊಂದಿದೆ. ಶಬ್ದ ಮಾಹಿತಿಯನ್ನು ಮಿದುಳಿಗೆ ಒಯ್ಯುವ ಕೆಲಸ ಮಾಡುತ್ತದೆ. ಇನ್ನೊಂದು ಗುಂಪಿನಲ್ಲಿ ದೇಹದ ಹೊರ ಅಂಗಾಂಗಗಳ ವಿವಿಧ ಭಂಗಿಗಳು ಮತ್ತು ಅವುಗಳ ಸಮತೋಲನದ ಬಗ್ಗೆ ಮಾಹಿತಿಯನ್ನು ಒಯ್ಯುವ ನರತಂತುಗಳಿವೆ. ಈ ಎರಡೂ ಗುಂಪಿನ ನರತಂತುಗಳು ಮೇಲೇರಿ ಮಿದುಳ ಕಾಂಡದ ನರಸೇತುವನ್ನು ಸೇರುತ್ತವೆ.

ಶ್ರವಣ ಸಂವೇದನೆಗೆ ಸಂಬಂಧಿಸಿದ ನರ ಭಾಗವನ್ನು  ಕಾಕ್ಲಿಯರ್ ಭಾಗವೆಂದೂ ದೇಹದ ಭಂಗಿ-ಸಮತೋಲನಕ್ಕೆ ಸಂಬಂಧಿಸಿದ ಭಾಗವನ್ನು ವೆಸ್ಟಿಬ್ಯೂಲರ್ ಭಾಗವೆಂದೂ ಕರೆಯಲಾಗುತ್ತದೆ. ಕಾಕ್ಲಿಯರ್ ಭಾಗಕ್ಕೆ ಹಾನಿಯುಂಟಾದರೆ ಕಿವುಡುತನ ಬಂದರೆ ವೆಸ್ಟಿಬ್ಯೂಲರ್ ಭಾಗಕ್ಕೆ ಹಾನಿಯುಂಟಾದರೆ ತಲೆ ಸುತ್ತು, ತನ್ನ ಸುತ್ತ ಮುತ್ತಲಿನ ವಸ್ತುಗಳು ತಿರುಗಿದಂತೆ ಹಾಗೂ ತನ್ನ ಕೈಕಾಲುಗಳು ಎಲ್ಲಿ ಯಾವ ಭಂಗಿಯಲ್ಲಿವೆ ಎಂಬುದರ ಅರಿವಿಲ್ಲದಿರುವುದು ಆಗುತ್ತದೆ.

ಒಳ ಕಿವಿಗೆ ಜೋರು ಪೆಟ್ಟು ಬೀಳುವುದು, ದೀರ್ಘ ಕಾಲ ಕಿವಿ ಸೋರುವಿಕೆ, ಮಿದುಳ ಪೊರೆ ಉರಿತ, ಗೌತಲಮ್ಮ, ಕ್ಷಯ ರೋಗಕ್ಕೆ ದೀರ್ಘಕಾಲ ಕೊಡುವ ಸ್ಟ್ರೇಪ್ಟೋಮೈಸಿನ್ ಇಂಜೆಕ್ಷನ್‌ಗಳು, ಸಿಫಿಲಿಸ್ ರೋಗಾಣುಗಳು, ಶ್ರವಣ ನರದ ಮೇಲು ಪೊರೆಯಿಂದ ಹುಟ್ಟುವ ಗಂತಿಯಿಂದಾಗಿ ಕಾಕ್ಲಿಯರ್ ನರಭಾಗ ಅಥವಾ ನರಸೇತುವಿಲ್ಲಿರುವ ಶ್ರವಣ ಕೇಂದ್ರಕ್ಕೂ ಹಾನಿಯಾಗಿ, ಕಿವುಡುತನ ಬರುತ್ತದೆ. ಹೀಗಾಗಿ ಕಿವುಡುತನ ಪ್ರಾರಂಭವಾಗುತ್ತಿದ್ದಂತೆ ಈ ಕಾರಣಗಳಲ್ಲಿ ಯಾವುದು ಇದೆ ಎಂದು ಗುರುತಿಸಿ, ಚಿಕಿತ್ಸೆ ಪ್ರಾರಂಭಿಸುವುದರಿಂದ ನರಕ್ಕೆ ಮತ್ತಷ್ಟು ಹಾನಿಯಾಗುವುದನ್ನು ತಪ್ಪಿಸಬಹುದು. ನರ ಹಾನಿಯಿಂದುಂಟಾದ ಕಿವುಡುತನಕ್ಕೆ ಶ್ರವಣಯಂತ್ರದಿಂದ (ಹಿಯರಿಂಗ್ ಏಯ್ಡ್‌) ಯಾವ ಪ್ರಯೋಜನವೂ ಇಲ್ಲ.

ಕಿವಿ ಗುಂಯ್ ಗುಟ್ಟುವಿಕೆ: ಕಿವಿಯೊಳಗೆ ಗುಂಯ್‌ ಶಬ್ದ ಸದಾ ಇರುತ್ತಾ ಅಥವಾ ಬಿಟ್ಟು ಬಿಟ್ಟು ಬರುತ್ತಾ ವ್ಯಕ್ತಿಗೆ ಕಿರಿಕಿರಿಯುಂಟಾಗ ತೊಡಗುತ್ತದೆ. ಇದು ಒಂದು ಕಡೆ ಮಾತ್ರ ಇರಬಹುದು. ಅಥವಾ ಎರಡೂ ಕಡೆ ಇರಬಹುದು ಸದಾ ಸಿಳ್ಳು ಹಾಕಿದಂತೆ, ಮೆಶಿನ್ ಅಥವಾ ಇಂಜಿನ್ ಶಬ್ದದಂತೆ ಕೇಳುವ ಈ ರೋಗಲಕ್ಷಣ ರೋಗಿಗೆ ಸಾಕಷ್ಟು ಹಿಂಸೆಯನ್ನುಂಟು ಮಾಡುತ್ತದೆ. ಇದರ ಜೊತೆಗೆ ಕಿವಿ ಸರಿಯಾಗಿ ಕೇಳಿಸದಿರುವುದು ಅಥವಾ ಪೂರ್ಣ ಕಿವುಡುತನ ಇರಬಹುದು. ಇದು ಮನಸ್ಸಿನ ಮೇಲೆ ಪರಿಣಾಮವನ್ನುಂಟು ಮಾಡಿ ರೋಗಿ ಖಿನ್ನತೆಗೆ ಒಳಗಾಗುತ್ತಾನೆ. ಆತನ ದೈನಂದಿನ ಚಟುವಟಿಕೆ ಅಸ್ತವ್ಯಸ್ತಗೊಳ್ಳುತ್ತದೆ. ಈ ಸ್ಥಿತಿಯನ್ನು ಟಿನಿಟಸ್ ಎಂದು ಕರೆಯುತ್ತಾರೆ. ಇದಕ್ಕೆ ಕಾರಣಗಳು ಹಲವಾರು. ಹೊರಕಿವಿಯಲ್ಲಿ ಸಂಗ್ರಹವಾಗಿರುವ ಗುಗ್ಗೆಯಿಂದ ಹಿಡಿದು, ರಕ್ತನಾಳಗಳು ಪೆಡೆಸುಗೊಳ್ಳುವ ಸ್ಥಿತಿ, ತೀವ್ರ ರಕ್ತಕೊರೆ, ಕೆಲವು ಔಷಧಿಗಳು (ಸ್ಟ್ರೆಪ್ಟೋಮೈಸಿಸ್) ಸಿಫಿಲಿಸ್, ಗಂತಿಯವರೆಗೆ ಯಾವುದಾದರೂ ಆಗಬಹುದು.

ಟಿನಿಟಸ್‌ಗೆ ಚಿಕಿತ್ಸೆ ತುಸು ಕಷ್ಟವೇ. ಅದಕ್ಕೆ ಕಾರಣವಾಗುವ ಅಂಶವನ್ನು ಪತ್ತೆ ಮಾಡಿ, ಅದನ್ನು ಸರಿಪಡಿಸಿದರೂ, ಟಿನಿಟಸ್ ಗುಣವಾಗದಿರಬಹುದು. ಶಮನಕಾರಿ ಔಷಧಿಗಳನ್ನು ಕೊಡಲಾಗುತ್ತದೆಯಾದರೂ, ಟಿನಿಟಸ್ ಪೂರ್ಣವಾಗಿ ಕಡಿಮೆಯಾಗದಿರಬಹುದು. ಅದೊಂದು ಪೀಡೆಯಾಗಿ, ರೋಗಿಗೆ ಹಿಂಸೆ ಹೆಚ್ಚಿದರೆ, ಶಸ್ತ್ರಕ್ರಿಯೆ ಮಾಡಿ, ಕಾಕ್ಲಿಯರ್ ನರವನ್ನು ನಾಶಮಾಡಬೇಕಾಗುತ್ತದೆ. ಆಗ ಕಿವುಡುತನ ಬಂದು ಅದನ್ನು ರೋಗಿ ಒಪ್ಪಿಸಿಕೊಳ್ಳಬೇಕಾಗುತ್ತದೆ.

ಒಂಬತ್ತನೆಯ ನರ: (ಗ್ಲಾಸೋಫೆರಂಜಿಯಲ್ ನರ್ವ್)

ಇದು ಸಂವೇದನೆ ಮತ್ತು ಚಲನೆ ಎರಡೂ ಕೆಲಸವನ್ನು ನಿರ್ವಹಿಸುತ್ತದೆ. ಜೊಲ್ಲು ರಸ ಗ್ರಂಥಿಗಳನ್ನು ಪ್ರಚೋದಿಸುವುದು, ಗಂಟಲು, ಅಂಗಳು, ನಾಲಿಗೆಯ ಸ್ಪರ್ಶ ಸಂವೇದನೆಗೆ ಇದು ಜವಾಬ್ದಾರಿ. ನಾಲಿಗೆಯ ಹಿಂಭಾಗದಿಂದ ರುಚಿಯ ಸಂವೇದನೆ ಈ ನರದ ಮೂಲಕವೇ ಮಿದುಳನ್ನು ಮುಟ್ಟುತ್ತದೆ.

ಈ ನರ ಉರಿತಕ್ಕೆ ಒಳಗಾದಾಗ ‘ಗ್ಲಾಸೋಫೆರಿಂಜಿಯಲ್ ನ್ಯೂರಾಲ್ಜಿಯ’ ರೋಗ ಸ್ಥಿತಿಯುಂಟಾಗುತ್ತದೆ. ಇಲ್ಲಿ ನೋವು ಗಂಟಲಿನಿಂದ ಪ್ರಾರಂಭವಾಗಿ, ಕಿವಿಯ ಮುಂದೆ ಸಾಗಿ, ಕತ್ತಿನಲ್ಲಿ ಇಳಿದು, ಕೆಳದವಡೆಯ ಹಿಂದಕ್ಕೆ ಸಾಗುತ್ತದೆ. ನೋವು ಒಳಕಿವಿಯಲ್ಲಿ ಪ್ರಾರಂಭವಾಗಬಹುದು. ನುಂಗುವಾಗ, ನಾಲಿಗೆಯನ್ನು ಹೊರಚಾಚಿದಾಗ ನೋವಿನ ಸೆಳಕು ಪ್ರಾರಂಭವಾಗುತ್ತದೆ. ಕಿವಿಯನ್ನು ಮುಟ್ಟಲಾಗದಷ್ಟು ನೋವು ಇರುತ್ತದೆ.

ಹತ್ತನೇ ನರ (ವೇಗಸ್ ನರ್ವ್)

ಇದೂ ಕೂಡ ಸಂವೇದನೆ ಮತ್ತು ಚಲನೆ ಎರಡೂ ಕೆಲಸವನ್ನು ನಿರ್ವಹಿಸುತ್ತದೆ. ಇದು ಬಹು ಉದ್ದನೆಯ ನರ. ಗಂಟಲು, ಅಂಗಗಳು, ಧ್ವನಿಪೆಟ್ಟಿಗೆ, ಶ್ವಾಸಕೋಶಗಳು, ಜೀರ್ಣಾಂಗಗಳು, ವಪೆ, ಹೊಟ್ಟೆ ಹೀಗೆ ಅನೇಕ ಒಳ ಅಂಗಾಂಗಗಳಿಗೆ ನರತಂತುಗಳನ್ನು ಕೊಟ್ಟದೆ. ಈ ನರಕ್ಕೆ ಹಾನಿಯಾದಾಗ, ಅಂಗಳು, ಧ್ವನಿಪೆಟ್ಟಿಗೆ ನಿಷ್ಟ್ರಿಯಗೊಳ್ಳುತ್ತವೆ. ಉಸಿರಾಟ ಕಷ್ಟವಾಗುತ್ತದೆ. ನುಂಗುವ ಪ್ರಕ್ರಿಯೆ ಕಷ್ಟವಾಗುತ್ತದೆ. ಈ ನರಕ್ಕೆ ಹಠಾತ್ ಹಾನಿ/ ಒತ್ತಡ ಬಿದ್ದರೆ ಸಾವೂ ಸಂಭವಿಸಬಹುದು.

ಹನ್ನೊಂದನೇ ನರ (ಅಕ್ಸೆಸರಿ ನರ್ವ್)

ಇದು ಚಲನೆಯ ನರ, ಕತ್ತಿನ ಸ್ನಾಯುಗಳ ಚಲನೆಯನ್ನು ನಿಯಂತ್ರಿಸುತ್ತದೆ. ಹಾನಿಗೀಡಾದಾಗ ಕತ್ತಿನ ಚಲನೆ ದುರ್ಬಲವಾಗುತ್ತದೆ. ಭುಜದ ಚಲನೆಯೂ ಕಷ್ಟವಾಗುತ್ತದೆ.

ಹನ್ನೆರಡನೇ ನರ (ಹೈಪೋಗಾಸ್ಲಲ್ ನರ್ವ್)

ಇದು ನಾಲಿಗೆಯನ್ನು ಚಲಿಸುವ ನರ. ನದಕ್ಕೆ ಹಾನಿಯಾದರೆ ನಾಲಿಗೆಯ ಚಲನೆ ದುರ್ಬಲವಾಗುತ್ತದೆ ಹಾಗೂ ನಾಲಿಗೆಯು ನಶಿಸಿ ಸಣ್ಣಗಾಗುತ್ತದೆ.