ಭಾರತೀಯ ಸಂಗೀತದ ಎರಡು ಪ್ರಮುಖ ವಾಹಿನಿಗಳೆಂದರೆ, ಕರ್ನಾಟಕೀ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತ. ವೇದಗಳ ಕಾಲದಿಂದಲೂ ಪರಂಪರಾಗತವಾಗಿ ಸಾಗಿ ಬಂದದ್ದು ಕರ್ನಾಟಕೀ ಸಂಗೀತ, ಪರ್ಶಿಯನ್ ಹಾಗೂ ಭಾರತೀಯ ಸಂಗೀತಗಳ ಮಿಲನದಿಂದ ಅವಿರ್ಭವಿಸಿರುವುದು ಹಿಂದುಸ್ತಾನಿ ಸಂಗೀತ. ಭಾರತದ ಉತ್ತರ ಭಾಗದಲ್ಲಿ ಹೆಚ್ಚು ಪ್ರಚಲಿತವಿರುವ ಹಿಂದುಸ್ತಾನೀ ಸಂಗೀತವನ್ನು ಉತ್ತರಾದಿ ಸಂಗೀತವೆಂದೂ, ದಕ್ಷಿಣ ಭಾಗದಲ್ಲಿ ಹೆಚ್ಚು ಪ್ರಚಲಿತವಿರುವ ಕರ್ನಾಟಕೀ ಸಂಗೀತವನ್ನು ದಕ್ಷಿಣಾದಿ ಸಂಗೀತವೆಂದೂ ಗುರುತಿಸುವ ರೂಢಿಯುಂಟು.

ಭಾರತದಲ್ಲಿ ಉಂಟಾದ ರಾಜಕೀಯ ಪರವರ್ತನೆಗಳಿಗೆ ಅನುಗುಣವಾಗಿ ಲಲಿತ ಕಲೆಗಳ ಕ್ಷೇತ್ರದಲ್ಲೂ ಏರುಪೇರುಗಳು ಆಗಿದ್ದು ಸಹಜವೇ ಆಗಿದೆ. ತತ್ಪರಿಣಾಮವಾಗಿ ಉತ್ತರ ಭಾರತದಲ್ಲಿ ಮುಸ್ಲಿಂ ಹಾಗೂ ಮುಸ್ಲಿಮೇತರ ಅರಸರ ರಾಜಾಶ್ರಯದಲ್ಲಿ ಹಿಂದುಸ್ತಾನಿ ಸಂಗೀತವು ಬೆಳೆದು ಬಂದಿತು. ಅದೇ ರೀತಿ ದಕ್ಷಿಣದಲ್ಲಿ ವಿಜಯನಗರದ, ತಂಜಾವೂರು, ಮೈಸೂರು ಅರಸರ ರಾಜಾಶ್ರಯದಲ್ಲಿ ಕರ್ನಾಟಕೀ ಸಂಗೀತವು ಉಳಿದುಕೊಂಡು ಬಂದಿತು. ಹೀಗಾಗಿ ಇಂದಿನ ಸಂಪೂರ್ಣ ಕರ್ನಾಟಕ ಪ್ರದೇಶವೆಲ್ಲವೂ ಕೇವಲ ನೂರೈವತ್ತು ವರ್ಷಗಳ ಹಿಂದೆ ಕರ್ನಾಟಕೀ ಸಂಗೀತದ ತಾಣವಾಗಿತ್ತು. ಕೆಲವು ನಿದರ್ಶನಗಳಿಂದ ಈ ಮಾತು ವೇದ್ಯವಾಗುತ್ತದೆ. ೧೮೯೨ರಲ್ಲಿ ಜನಿಸಿದ ಗದುಗಿನ ಪಂಚಾಕ್ಷರಿ ಗವಾಯಿಗಳು ಮೊದಲು ಕಲಿತದ್ದು ಕರ್ನಾಟಕೀ ಸಂಗೀತವನ್ನು. ಹೆಚ್ಚು ಕಡಿಮೆ ಇದೇ ಅವಧಿಯಲ್ಲಿ ಆಗಿಹೋದ, ಉತ್ತರ ಕರ್ನಾಟಕದಲ್ಲಿದ್ದ ಅನೇಕ ಹರಿದಾಸರ ಕೀರ್ತನೆಗಳು ಕರ್ನಾಟಕೀ ಸಂಗೀತ ನಿಬದ್ಧವಾಗಿದೆ. ಜನಪದ ಸಂಗೀತದ ಬಯಲಾಟ, ಸಣ್ಣಾಟ, ದೊಡ್ಡಾಟಗಳಲ್ಲಿನ ಹಾಡುಗಳ ಮೂಲವು ಕರ್ನಾಟಕೀ ಸಂಗೀತವಾಗಿದೆ. ಅಷ್ಟೀ ಏಕೆ? ಗಾಯನಗಂಗೆ ಡಾ.ಗಂಗೂಬಾಯಿ ಹಾನಗಲ್‌ರ ತಾಯಿ ಅಂಬಕ್ಕ ಕರ್ನಾಟಕೀ ಸಂಗೀತ ವಿದೂಷಿಯಾಗಿದ್ದರು. ಇವೆಲ್ಲ ಸಂಗತಿಗಳು ಕೇವಲ ನೂರೈವತ್ತು ವರ್ಷಗಳ ಹಿಂದೆ ಈ ನೆಲದಲ್ಲಿ ಕರ್ನಾಟಕೀ ಸಂಗೀತವೊಂದೇ ನೆಲೆಸಿತ್ತು ಎಂಬುದಕ್ಕೆ ನಿದರ್ಶನಗಳಾಗಿವೆ. ಆಗ ಹಿಂದುಸ್ತಾನಿ ಸಂಗೀತ ಮುಂಬೈ-ಪೂಣೆಗಳಾಚೆ ಇದ್ದಿತೆಂದು, ಕೊಲ್ಲಾಪುರದವರೆಗೆ ಸಾಗಿಬಂದಿತ್ತೆಂದು (ಉಸ್ತಾದ ಅಲ್ಲಾದಿಯಾಖಾನರ ಮೂಲಕ) ಹೇಳಬಹುದು. ಪಂ. ವಿಷ್ಣು ನಾರಾಯಣ ಭಾರತಖಂಡೆ ಹಾಗೂ ಪಂ. ವಿಷ್ಣು ದಿಗಂಬರ ಪಲುಸ್ಕರರಂಥ ನಾದರ್ಷಿಗಳು ಹಿಂದುಸ್ತಾನಿ ಸಂಗೀತದ ಪ್ರಚಾರಕ್ಕಾಗಿ, ಶಾಸ್ತ್ರ ರಚನೆಗಾಗಿ ವಿಶೇಷ ಶ್ರಮ ಪಟ್ಟು ಅದಕ್ಕೊಂದು ವ್ಯವಸ್ಥಿತವಾದ ರೂಪವನ್ನು ನೀಡಿದರು. ಹೀಗಾಗಿ ಕರ್ನಾಟಕದ ನೆರೆಯ ರಾಜ್ಯವಾದ ಮಹಾರಾಷ್ಟ್ರದಲ್ಲಿ ನೆಲೆನಿಂತ ಹಿಂದುಸ್ತಾನಿ ಸಂಗೀತಕ್ಕೊಂದು ಭದ್ರವಾದ ನೆಲೆದೊರಕಿತು. ಹೀಗೆ ಮಹಾರಾಷ್ಟ್ರದಲ್ಲಿ ನೆಲೆನಿಂತ ಹಿಂದುಸ್ತಾನಿ ಸಂಗೀತವು ನಿಧಾನವಾಗಿ ಕೊಲ್ಲಾಪುರ-ಮೀರಜ್-ಸಾಂಗಲಿಗಳವರೆಗೂ ಬಂದಿತು. ಅಲ್ಲಾದಿಯಾಖಾನರ ಕಾಲದಲ್ಲಿ ಕೊಲ್ಲಾಪುರವೂ, ಉಸ್ತಾದ ಅಬ್ದುಲ್ ಕರೀಂಖಾನರ ಕಾಲದಲ್ಲಿ ಮೀರಜ್ ಹಿಂದುಸ್ತಾನಿ ಸಂಗೀತದ ನೆಲೆಗಳಾಗಿದ್ದವು.

ಮೈಸೂರಿನ ಒಡೆಯರು ಮುಂಬೈನೊಂದಿಗೆ ನಿಕಟವಾದ ಸಂಪರ್ಕವನ್ನು ಹೊಂದಿದ್ದರು. ಮೈಸೂರು ಬ್ರಿಟೀಷರ ಅಧೀನದಲ್ಲಿತ್ತು. ಹಾಗೂ ಮುಂಬೈ ಬ್ರಿಟೀಷರ ಆಡಳಿತ ಕೇಂದ್ರವಾಗಿದ್ದರಿಂದ ಈ ಸಂಪರ್ಕವು ಒದಗಿ ಬಂದಿರುವ ಸಾಧ್ಯತೆಯಿದೆ. ಮುಂಬೈನೊಂದಿಗೆ ಸಂಪರ್ಕ ಹೊಂದಿದ ಕಲಾ ರಸಿಕರಾದ ಮೈಸೂರಿನ ಒಡೆಯರು ಅಲ್ಲಿನ ಹಿಂದುಸ್ತಾನಿ ಸಂಗೀತದಿಂದ  ಆಕರ್ಷಿತವಾದುದು ಸಹಜವೇ ಸರಿ. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಹಿಂದುಸ್ತಾನಿ ಸಂಗೀತವು ಮೈಸೂರನ್ನು ಪ್ರವೇಶಿಸಿತು. ಇವರ ಆಶ್ರಯದಲ್ಲಿ ಕೊಲ್ಕತ್ತೆಯ ಗೋಹರಜಾನ ಎಂಬ ಪ್ರಸಿದ್ಧ ಠುಮರಿ ಗಾಯಕಿ ಆಸ್ಥಾನ ಗಾಯಕಿಯಾಗಿದ್ದಳು. ಮೈಸೂರಿನ ಅನೇಕ ಹಿರಿಯ ಸಂಗೀತಗಾರರೆಲ್ಲ ಈಕೆಯ ಹಾಡು ಕೇಳಲು ಹಾತೊರೆಯುತ್ತಿದ್ದರು. ನಂತರ ಜಯ ಚಾಮರಾಜ ಒಡೆಯರ ಕಾಲದಲ್ಲಿ ನತ್ಥನ ಖಾನರು ಮೈಸೂರಿನ ಆಸ್ಥಾನ ಗಾಯಕಯೆಂದು ನೇಮಕಗೊಂಡು ಅಲ್ಲಿಯೇ ನೆಲೆನಿಂತರು. ಅನೇಕ ತರುಣರು ಅವರಿಂದ ಹಿಂದುಸ್ತಾನಿ ಸಂಗೀತವನ್ನು ಕಲಿತರು. ನಾಲ್ವಡಿ ಕೃಷ್ಣರಾಜ ಒಡೆಯರು ಅನೇಕ ಹಿಂದುಸ್ತಾನಿ ಸಂಗೀತಗಾರರನ್ನು ತಮ್ಮ ಆಸ್ಥಾನಕ್ಕೆ ಆಹ್ವಾನಿಸಿ ಅವರ ಸಂಗೀತ ಕಚೇರಿಗಳನ್ನು ಏರ್ಪಡಿಸಿದರು. ಕೇಸರಬಾಯಿ ಕೇಳ್ಕರ್, ಉಸ್ತಾದ ಅಬ್ದುಲ್ ಕರೀಂಖಾನ್, ಉಸ್ತಾದ್ ಅಮಾನಲಿ ಖಾನ್ ಭೇಂಡಿಬಜಾರವಾಲೇ, ಪಂ.ಗೋವಿಂದರಾವ್ ಟೇಂಬೆ, ಸಿತಾರಿಯಾ ಉಸ್ತಾದ್ ರೆಹಮತ್ ಖಾನ್, ಪಂ. ಭಾಸ್ಕರಬುವಾ ಬಖಲೆ ಹೀಗೆ ಮೈಸೂರಿನ ಆಸ್ಥಾನದಲ್ಲಿ ಹಿಂದುಸ್ತಾನಿ ಸಂಗೀತವನ್ನು ಪ್ರಸ್ತುತಪಡಿಸಿದ ಕಲಾವಿದರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ವಿಜಯನಗರ ಪತನದ ನಂತರ ನಿರಾಶ್ರಿತವಾಗಿದ್ದ ಲಲಿತ ಕಲೆಗಳಿಗೆ ಮೈಸೂರಿನ ಒಡೆಯರು ಆಶ್ರಯದಾತರೆನಿಸಿದರು. ಇವರ ಆಶ್ರಯದಲ್ಲಿ ಕರ್ನಾಟಕೀ ಸಂಗೀತದೊಂದಿಗೇ ಹಿಂದುಸ್ತಾನಿ ಸಂಗೀತವು ರಾಜಾಶ್ರಯ ಪಡೆದುದರಿಂದ, ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತವು ಪ್ರವೇಶಿಸಲು ಹಾಗೂ ನೆಲನಿಲ್ಲುವುದಕ್ಕೆ ಅನುಕೂಲವಾಯಿತು. ಮೈಸೂರಿನ ದರ್ಬಾರಿನಲ್ಲಿ ಹಾಡಲು ಉತ್ತರ ಭಾರತದಿಂದ ಸಾಗಿಹೋಗುತ್ತಿದ್ದ, ಸಂಗೀತಗಾರರಿಗೆ ಬೆಳಗಾವಿ, ಧಾರವಾಡ ಹಾಗೂ ಹುಬ್ಬಳ್ಳಿಗಳು ತಂಗುದಾಣವಾಗಿದ್ದವು. ಪಂ. ಬಖಲೆಯವರು ೧೯೦೮ರಿಂದ ಎಂಟು ವರ್ಷಗಳ ಕಾಲ ಧಾರವಾಡದ ಗಂಡು ಮಕ್ಕಳ ಟ್ರೈನಿಂಗ್ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಸಿದ್ದಾರೆ. ಪಂ.ಬಖಲೆಯವರು ಸಂಗೀತದ ಘನ ವಿದ್ವಾಂಸರಾಗಿದ್ದರು. ಧಾರವಾಡದಲ್ಲಿ ಅವರಿರುವಷ್ಟು ಕಾಲ ಹಿಂದುಸ್ತಾನಿ ಸಂಗೀತವನ್ನು ಪ್ರಚಾರಗೊಳಿಸಿದರು. ಧಾರವಾಡದ ಅನೇಕ ಶಿಷ್ಯರನ್ನು ತಯಾರು ಮಾಡಿದರು. ಶಂಕರ ದೀಕ್ಷಿತ್ ಜಂತ್ಲಿಯವರೂ ಸಹ ಬಖಲೆಯವರ ಶಿಷ್ಯರು.

ಉತ್ತರ ಭಾರತದಿಂದ ಮೈಸೂರಿಗೆ ಸಾಗಿಹೋಗುತ್ತಿದ್ದ ಹಿಂದುಸ್ತಾನಿ ಸಂಗೀತಗಾರರು ಧಾರವಾಡದಲ್ಲಿ ಭಾಸ್ಕರಬುವಾ ಅವರಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಆಗ ಅವರ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿತ್ತು. ಹಿಂದುಸ್ತಾನಿ ಸಂಗೀತವನ್ನು ಕೇಳಿದ ಜನತೆ ನಿಧಾನವಾಗಿ ಅದರತ್ತ ಆಕರ್ಷಿತರಾದರು. ಹೀಗೆ ಧಾರವಾಡ ಕರ್ನಾಟಕೀ ಸಂಗೀತದಿಂದ ಹಿಂದುಸ್ತಾನಿ ಸಂಗೀತದೆಡೆಗೆ ವಾಲತೊಡಗಿತು. ಬಖಲೆಯವರು ಧಾರವಾಡದಲ್ಲಿ ಮಾಡಿದ ಸಾಂಸ್ಕ್ರತಿಕ ಕಾರ್ಯಕ್ರಮವನ್ನೇ ಬೆಳಗಾವಿಯಲ್ಲಿ ಪಂ. ರಾಮಕೃಷ್ಣಬುವಾ ವಝೆ, ಬಾಗಲಕೋಟೆಯಲ್ಲಿ ನತ್ಥನ ಖಾನರ ಪುತ್ರ ದುಲ್ಲೇಖನವರು ಮಾಡಿದರು. ಕರ್ನಾಟದಲ್ಲಿ ಹಿಂದುಸ್ತಾನಿ ನೆಲೆ ನಿಲ್ಲಲು ಹುಬ್ಬಳ್ಳಿಯ ಸಿದ್ಧಾರೂಢಮಠದ ಕಾಣಿಕೆಯೂ ಗಮನಾರ್ಹವಾಗಿದೆ. ಆಗ ಕರ್ನಾಟಕಕ್ಕೆ ಬರುತ್ತಿದ್ದ ಹಿಂದುಸ್ತಾನಿ ಸಂಗೀತಗಾರರು ಸಿದ್ಧಾರೂಢದ ಮಠದಲ್ಲಿ ಹಾಡಬೇಕು ಎಂದು ಅಪೇಕ್ಷಿಸುತ್ತಿದ್ದರು. ಇದಕ್ಕೆ ಮುಖ್ಯ ಕಾರಣವೆಂದರೆ, ಸಿದ್ಧಾರೂಢದ ಶಿಷ್ಯರಾದ ಕಬೀರದಾಸರು ಸಂತರು, ಜ್ಞಾನಿಯೂ ಆಗಿದ್ದಲ್ಲದೆ, ಹಿಂದುಸ್ತಾನಿ ಸಂಗೀತ ವಿದ್ವಾಂಸರೂ ಆಗಿದ್ದರು. ಅವರು ಭೇಷ್ ಎಂದರೆ ಮುಗಿಯಿತು. ಗಾಯಕ ಪ್ರಬುದ್ಧನಾಗಿದ್ದಾನೆ ಎಂದು ಸಂಗೀತ ಕ್ಷೇತ್ರದಲ್ಲಿ ತಿಳಿಯಲ್ಪಡುತ್ತಿತ್ತು. ಈ ಕಬೀರದಾಸರ ನಿಕಟವರ್ತಿಯಾಗಿ ಭೂಗಂಧರ್ವ ರೆಹಮತ್ ಖಾನರು ಇರುತ್ತಿದ್ದರು. (ಸಿತಾರಿಯಾ ರಎಹಮತ್ ಖಾನ್ ಬೇರೆಯವರು) ಸಿದ್ಧಾರೂಢಮಠ ಭಾವಿಕರಿಗೆ ಭಕ್ತಿಯ ನೆಲೆಯಾಗಿದ್ದಂತೆ, ಸಂಗೀತಗಾರರಿಗೆ ತಮ್ಮ ಸಾಧನೆಯನ್ನು ಒರೆಗೆ ಹಚ್ಚುವ ಪರೀಕ್ಷಾ ತಾಣವೂ ಆಗಿತ್ತು.

ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತವನ್ನು ಜನಪ್ರಿಯಗೊಳಿಸಲು ನಾಟಕಗಳೂ ಪ್ರಮುಖ ಪಾತ್ರವಹಿಸಿವೆ. ಮರಾಠಿಯ ನಾಟಕಗಳೂ ಆಗ ಕರ್ನಾಟಕದಲ್ಲೂ ಪ್ರದರ್ಶನಗೊಳ್ಳುತ್ತಿದ್ದವು. ಬಾಲಗಂಧರ್ವ, ಸವಾಯಿ ಗಂಧರ್ವರು ಅಭಿನಯಿಸಿದ ನಾಟಕಗಳನ್ನು ನೋಡಲು ಹಾಗೂ ಆ ನಾಟಕಗಳಲ್ಲಿನ ಸಂಗೀತವನ್ನು ಕೇಳಿ ಆನಂದಿಸಲು ಜನ ಉತ್ಸುಕತೆಯಿಂದ ಧಾವಿಸುತ್ತಿದ್ದರು. ಸಂಗೀತ ಪ್ರಧಾನವಾದ ಈ ನಾಟಕಗಳಲ್ಲಿ ಗಾಯಕರೇ ಪ್ರಧಾನ ಪಾತ್ರ ವಹಿಸಿದ್ದರು. ಹೀಗಾಗಿ ಪ್ರೌಢ ದರ್ಜೆಯ ಸಂಗೀತ ಆಗಿನ ನಾಟಕಗಳ ಜೀವಾಳವಾಗಿರುತ್ತಿತ್ತು. ಅನೇಕ ಸಂದರ್ಭಗಳಲ್ಲಿ ಗಾಯಕರ ಭೈಠಕಗಳನ್ನು ಕೂಡ ನಾಟಕದ ಮಧ್ಯದಲ್ಲಿ ಏರ್ಪಡಿಸಲಾಗುತ್ತಿತ್ತು. ಈ ನಾಟಕಗಳ ರಂಗಗೀತೆಗಳು (ಮರಾಠಿಯಲ್ಲಿ ನಾಟ್ಯಗೀತೆ ಎನ್ನುತ್ತಾರೆ. ಹಿಂದುಸ್ತಾನಿ  ಸಂಗೀತದಲ್ಲಿ ನಿಬದ್ಧವಾವುಗಳಾಗಿದ್ದವು. ಹೀಗಾಗಿ ಸಾಮಾನ್ಯ ಜನರು ಕೂಡ ಹಿಂದುಸ್ತಾನಿ ಸಂಗೀತದತ್ತ ಹೊರಳುವಂತೆ ಮಾಡುವಲ್ಲಿ ಈ ನಾಟಕಗಳು ಯಶಸ್ವಿಯಾದವು.

ಇಲ್ಲಿ ಒಂದು ಸಂಗತಿಯನ್ನು ಉಲ್ಲೇಖಸುವುದು ಅವಶ್ಯಕವೆನಿಸುತ್ತದೆ. ಮರಾಠಿಯ ನಾಟಕಗಳಲ್ಲಿನ ರಂಗಗೀತೆ ಅಥವಾ ನಾಟ್ಯಗೀತೆಗಳಿಗೆ  ಮೂಲ ಪ್ರೇರಣೆ ಕರ್ನಾಟಕೀ  ಸಂಗೀತವೇ ಆಗಿದೆ. ಶ್ರೀ ಅಣ್ಣಾರಾವ್ ಕಿರ್ಲೋಸ್ಕರರು ತಮ್ಮ ಮೊದಲ ನಾಟಕ ಶಾಕುಂತಲಾವನ್ನು ಬರೆದಾಗ, ಅದರಲ್ಲಿನ ಗೀತೆಗಳಿಗೆ ಕರ್ನಾಟಕೀ ಸಂಗೀತದ ಧಾಟಿ (ಮಟ್ಟು) ಗಳೇ ಪ್ರೇರಣೆಯಾಗಿದ್ದವು. ಅಣ್ಣಾರಾವ್ ಕಿರ್ಲೋಸ್ಕರರು ಹುಟ್ಟದ್ದು ಕರ್ನಾಟಕದಲ್ಲಿ (ಬೆಳಗಾವಿ ಜಿಲ್ಲೆಯ ಗುರ್ಲಹೊಸೂರು) ಆದ್ದರಿಂದ ಅವರ ಮೇಲೆ ಕರ್ನಾಟಕೀ ಸಂಗೀತದ ಪ್ರಭಾವವಿರುವುದು ಸ್ವಭಾವಿಕವೇ ಆಗಿದೆ. ಮರಾಠಿಯ ರಂಗಗೀತೆಗಳಿಗೆ ಕರ್ನಾಟಕದ ಹರಿದಾಸರ ಕೀರ್ತನೆಗಳೇ (ಕರ್ನಾಟಕೀ ಸಂಗೀತ) ಮೂಲ ಪ್ರೇರಣೆ ಎಂದು ಮರಾಠಿಯ ರಂಗಗೀತೆಗಳಿಗೆ ಕರ್ನಾಟಕದ ಹರಿದಾಸರ ಕೀರ್ತನೆಗಳೇ (ಕರ್ನಾಟಕೀ ಸಂಗೀತ) ಮೂಲ ಪ್ರೇರಣೆ ಎಂದು ಮರಾಠಿಯ ಸುಪ್ರಸಿದ್ಧ ಗಾಯಕ ಡಾ. ವಸಂತರಾವ್ ದೇಶಪಾಂಡೆ ಹೇಳುತ್ತಾರೆ. ಆಶ್ವರ್ಯವೆಂದರೆ ಅತ್ತ ಮಹಾರಾಷ್ಟ್ರದ ನಾಟಕಗಳಲ್ಲಿ ಕರ್ನಾಟಕ ಸಂಗೀತದಿಂದ ಪ್ರೇರಿತವಾದ ನಾಟ್ಯಗೀತೆಗಳು ಜನಪ್ರಿಯವಾಗತೊಡಗಿದ್ದ ಕಾಲದಲ್ಲಿಯೇ ಮೈಸೂರಿನಲ್ಲಿ ಅಪ್ಪಟ ಹಿಂದುಸ್ತಾನಿ ಸಂಗೀತದ ಜಾಲ (ಧಾಟಿ) ಒಂದನ್ನು ನಾಟಕವೊಂದರಲ್ಲಿ ಬಳಸಿಕೊಳ್ಳಲಾಗಿತ್ತು. ಶ್ರೀಮನ್ಮಹಾರಾಜ ಕೃಪಾಪೋಷಿತ ಶ್ರೀ ಚಾಮರಾಜ ಕರ್ನಾಟಕ ನಾಟಕ ಸಭೆಯ ನಾಟಕವೊಂದರಲ್ಲಿ ಕೋಲ್ಕತ್ತೆಯ ಗೋಹರಜಾನಳ ‘ಆನ ಬಾನ ಜಯಾ ಮಿಲಾಯ’ ಧಾಟಿಯನ್ನು ಯಥಾವತ್ತಾಗಿ ಎತ್ತಿಕೊಂಡು ‘ಕೊಳಲನೂದಿ ಕುಣಿವ ಪ್ರಿಯನೆ ಬಾರೋ’ ಎಂದು ಪ್ರಯೋಗಿಸಲಾಯಿತು. ಈ ಗೀತೆ ತುಂಬ ಜನಪ್ರಿಯವೂ ಆಯಿತು. ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತ ಜನಪ್ರಿಯವಾಗುತ್ತಿರುವ ಮೊದಲ ಸಂಗೀತ ಇದಾಗಿತ್ತು ಎನ್ನಬಹುದು.

ಮರಾಠಿ ನಾಟಕಗಳ ಪ್ರಭಾವದಿಂದಲೂ ಮೈಸೂರಿಗೆ ಆಗಮಿಸುತ್ತಿದ್ದ ಖ್ಯಾತ ಹಿಂದುಸ್ತಾನಿ ಸಂಗೀತಗಾರರ ಬೈಠಕಗಳಿಂದಲೂ, ಹಿಂದುಸ್ತಾನಿ ಸಂಗೀತ ಕರ್ನಾಟಕದಲ್ಲಿ ತನ್ನ ಪ್ರಭಾವ ಬೀರತೊಡಗಿತು. ಸಿತಾರಿಯಾ ರೆಹಮತ್ ಖಾನ್ ರು ಧಾರವಾಡದಲ್ಲಿ ನೆಲೆ ನಿಂತಿದ್ದು, ಉಸ್ತಾದ್ ಅಬ್ದುಲ್ ಕರೀಂಖಾನ್ ಸಾಹೇಬರು ಕುಂದಗೋಳದ ಸವಾಯಿ ಗಂಧರ್ವರಿಗೆ ಸಂಗೀತ ಕಲಿಸಿದ್ದು ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತವು ನೆಲೆನಿಲ್ಲುವಂತೆ ಮಾಡಿದವು. ಮುಂದೆ, ಸ್ವತಃ ಕರ್ನಾಟಕ ಸಂಗೀತ ವಿದೂಷಿಯಾದ ಅಂಬಕ್ಕ ತನ್ನ ಮಗಳು (ಡಾ. ಗಂಗೂಬಾಯಿ ಹಾನಗಲ್ಲರು) ಹಿಂದುಸ್ತಾನಿ ಸಂಗೀತ ಕಲಿಯಲಿ ಎಂದು ಅಪೇಕ್ಷೆ ಪಡುವಷ್ಟು ಹಿಂದುಸ್ತಾನಿ ಇಲ್ಲಿ ಬೇರೂರಿತು. ಗದುಗಿನ ಪಂಚಾಕ್ಷರಿ ಗವಾಯಿಗಳು ಹಿಂದುಸ್ತಾನಿ ಸಂಗೀತವನ್ನು ಕಲಿತು ಉಭಯಗಾನ ವಿಶಾರದರೆನಿಸಿಕೊಂಡಿದ್ದು, ಉತ್ತರ ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತ ಗಟ್ಟಿಗೊಂಡ ಸಂಕೇತವಾಗಿದೆ.

ಉತ್ತರ ಕರ್ನಾಟಕದ ಮಣ್ಣು ಅತ್ಯಂತ ಸತ್ವಶಾಲಿಯಾದುದ್ದು. ಈ ಮಣ್ಣಿನಿಂದ ಹಿಂದುಸ್ತಾನಿ ಸಂಗೀತವೇ ಬೆರಗಾಗಿ ನೋಡುವಂಥ ಪ್ರತಿಭಾವಂತರು ಜನ್ಮತಾಳಿದರು. ಕುಂದಗೋಳದ ರಾಮಭಾವು ಸಂಶಿ (ಪಂ. ಸವಾಯಿ ಗಂಧರ್ವ) ಉಸ್ತಾದ ಅಬ್ದುಲ್ ಕರೀಂಖಾನ್ ರಲ್ಲಿ ಶಿಷ್ಯತ್ವ ವಹಿಸಿ, ತಮ್ಮ ಅವಿರತ ಶ್ರಮಸಾಧನೆಗಳಿಂದ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದರು. ನಂತರದ ತಲೇಮಾರಿನ ಗಾಯಕರು ಇನ್ನೂ ಎತ್ತರಕ್ಕೇರಿದರು. ಕುಮಾರ ಗಂಧರ್ವ, ಪಂ. ಭೀಮಸೇನ ಜೋಶಿ, ಪಂ. ಬಸವರಾಜ ರಾಜಗುರು, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದರು. ಕರ್ನಾಟಕದ ಮಟ್ಟಗೆ ಈ ಕಾಲವನ್ನು ಹಿಂದುಸ್ತಾನಿ ಸಂಗೀತದ ಸುವರ್ಣ ಕಾಲವೆಂದು ಕರೆಯಬಹುದು. ಈ ಕಲಾವಿದರಿಂದಾಗಿ ಹಿಂದುಸ್ತಾನಿ ಸಂಗೀತದ ನಕ್ಷೆಯಲ್ಲಿ ಕರ್ನಾಟಕದ ಹೆಸರು ಚಿರಸ್ಥಾಯಿಯಾಗಿ ಉಳಿಯಿತು. ಇದೇ ಸಮಯಕ್ಕೆ ಅತ್ತ ದಕ್ಷಿಣದ ಬೆಂಗಳೂರಿನಲ್ಲಿ ಪಂ. ರಾಮರಾವ ನಾಯಕ ಹಿಂದುಸ್ತಾನಿ ಸಂಗೀತವನ್ನು ಪ್ರಚಾರಗೊಳಿಸಿದರು.

ಈಗ ಈ ಐವರು ಕಲಾವಿದರ ಶಿಷ್ಯ ಪರಂಪರೆಯೇ ಹಿಂದುಸ್ತಾನಿ ಸಂಗೀತದ ಮುಂದೂಣಿಯಲ್ಲಿದೆ, ಪಂ. ಕುಮಾರ ಗಂಧರ್ವರ ಶಿಷ್ಯರಾದ ವಸುಂಧರಾ ಕೋಮಕಾಳಿ, ಕಲಾಪಿನಿ,(ಕುಮಾರ ಗಂಧರ್ವರ ಮಗಳು) ಸತ್ಯಶೀಲ ದೇಶಪಾಂಡೆ, ಮುಕುಲ (ಕುಮಾರ ಗಂಧರ್ವರ ಮಗ) ಮೊದಲಾದವರು ಹಿಂದುಸ್ತಾನಿ ಸಂಗೀತದಲ್ಲಿ ಕುಮಾರರ ಪರಂಪರೆಯನ್ನು ಮುಂದುವರೆಸಿದ್ದಾರೆ. ಪಂ. ರಾಜಶೇಖರ ಮನ್ಸೂರ, ಪಂ. ಪಂಚಾಕ್ಷರಿ ಸ್ವಾಮಿ ಮತಿಗಟ್ಟಿ ಶ್ರೀಮತಿ ನೀಲಾ ಎಂ. ಕೊಡ್ಲಿ ಮೊದಲಾದವರು ಪಂ. ಮಲ್ಲಿಕಾರ್ಜುನ ಮನ್ಸೂರರ ಪರಂಪರೆಯನ್ನು ಮುಂದುವರೆಸಿದ್ದಾರೆ. ಪಂ. ಭೀಮಸೇನ ಜೋಶಿಯವರು, ಪಂ. ಮಾಧವಗುಡಿ, ನಾರಾಯಣ ದೇಶಪಾಂಡೆ, ರಾಮಕೃಷ್ಣ ಪಟವರ್ಧನ, ಅರವಿಂದ ಹಿಯಿಲಗೋಳ, ಮೊದಲಾದ ಶಿಷ್ಯರನ್ನು ತಯಾರು ಮಾಡಿ ತಮ್ಮ ಪರಂಪರೆಗೆ ಮುಂದಿನ ದಾರಿ ತೋರಿಸಿದ್ದಾರೆ. ಅದೇ ರೀತಿ ಡಾ. ಗಂಗೂಬಾಯಿ ಹಾನಗಲ್‌ರವರು ಪಂ.ನಾಗನಾಥ ಒಡೆಯರ್, ಕೃಷ್ಣ ಹಾನಗಲ್, ಸುಲಭಾದತ್ತ ನೀರಲಗಿಯವರಂಥ ಶಿಷ್ಯ ಪರಂಪರೆಯನ್ನು ಹೊಂದಿದ್ದಾರೆ. ಪಂ. ಬಸವರಾಜ ರಾಜಗುರು ಇವರ ಶಿಷ್ಯ ಪರಂಪರೆ ಇನ್ನು ದೊಡ್ಡದು. ಪಂ. ಗಣಪತಿ ಭಟ್ ಹಾಸಣಗಿ, ಪಂ. ಸೋಮನಾಥ ಮರಡೂರ, ಪಂ. ಶ್ರೀಪಾದ ಹೆಗಡೆ, ಪಂ. ಪರಮೇಶ್ವರ ಹೆಗಡೆ, ಸಂಗೀತಾ ಕಟ್ಟಿ, ರೋಹಿಣಿ ದೇಶಪಾಂಡೆ, ಷಣ್ಮುಖ ಗೋಜನೂರ, ಹೀಗೆ ಪಟ್ಟಿ ಬೆಳೇಯುತ್ತಸಾಗುತ್ತದೆ. ಇದೇ ಕಾಲಕ್ಕೆ ದಿ. ಅರ್ಜುನ ಸಾ ನಾಕೋಡ ಸಹ ಹಿಂದುಸ್ತಾನಿ ಸಂಗೀತಕ್ಕೆ ಗಣನೀಯ ಸೇವೆಯನ್ನು ಸಲ್ಲಿಸಿ ತಾವೂ ಒಂದು ಪರಂಪರೆಯನ್ನು ಹುಟ್ಟುಹಾಕಿದರು. ಈ ಪರಂಪರೆಯಲ್ಲಿ ಪಂ.ಭಾಲಚಂದ್ರ ನಾಕೋಡ, ಪಂ. ರಘುನಾಥ ನಾಕೋಡರು ಗಾಯನ ತಬಲಾ ವಾದನಗಳಲ್ಲಿ ಗಮನಾರ್ಹ ಸಾಧನೆಯನ್ನು ಗೈದಿದ್ದಾರೆ. ಪಂ. ಗಣಪತರಾವ ಗುರವ ಮನೆತನದಲ್ಲಿ ಪಂ. ಸಂಗಮೇಶ್ವರ ಗುರವ, ಕೈವಲ್ಯಕುಮಾರ ಗುರವ ಮೊದಲಾದವರು ಉಲ್ಲೇಖಾರ್ಹರೆನಿಸುತ್ತಾರೆ. ಪಂ. ಮೃತ್ಯುಂಜಯ ಬುವಾ ಪುರಾಣಿಕ ಮಠ, ಪಂ. ನಾರಾಯಣರಾವ್ ಮಜುಮದಾರ ಕಲಾವಿದರು ಸಹ ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿ ಶ್ರಮಿಸುವ ಮೂಲಕ ಕರ್ನಾಟಕದಲ್ಲಿ ಅದು ಗಟ್ಟಿಯಾಗಿ ನೆಲೆಗೊಳ್ಳಲು ಕಾರಣರಾಗಿದ್ದಾರೆ.

ದಕ್ಷಿಣ ಕರ್ನಾಟಕ ಭಾಗದಲ್ಲಿ ಕೂಡ ಪಂ. ರಾಮರಾವ್ ನಾಯಕರಂಥ ಕಲಾವಿದರು ಹಿಂದುಸ್ತಾನಿ ಸಂಗೀತಕ್ಕಾಗಿ ಶ್ರಮಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿನಾಯಕ ತೊರವಿ, ನಾಗರಾಜ ಹವಾಲ್ದಾರ, ರವೀಂದ್ರ ಯಾವಗಲ್, ರವೀಂದ್ರ ಕಾತೋಟಿ, ಶ್ರೀಮತಿ ಕುಶಲಾ ಜಗನ್ನಾಥ್ ಮೊದಲಾದವರಿಂದಾಗಿ ಬೆಂಗಳೂರಿನಲ್ಲೂ ಹಿಂದುಸ್ತಾನಿ ಸಂಗೀತದ ಕಚೇರಿಗಳು ಜರುಗುತ್ತಿವೆ.

ಮುಂಬರುವ ದಿನಗಳತ್ತ ಒಂದು ನೋಟ ಬೀರಿದಾಗ, ಸಮಕಾಲೀನ ಸಮಷ್ಟಿಯಲ್ಲಿ ಅರಳುತ್ತಿರುವ ಯುವ ಪ್ರತಿಭೆಗಳು ಆಶಾದಾಯಕ ವಾತಾವರಣವನ್ನು ನಿರ್ಮಿಸಿವೆ. ಇವರಲ್ಲಿ ಪ್ರಮುಖರಾಗಿ ಶ್ರೀಧರ ಕುಲಕರ್ಣಿ, ರವೀಂದ್ರ ಸೋರಗಾವಿ, ಜೆ. ನಿರಂಜನ, ಪ್ರೊ. ಸಿದ್ರಾಮಯ್ಯ ಪಠಪತಿ, ಸ್ಮಿತಾ ಬೆಳ್ಳೂರ, ಮಹೇಶ ಕುಲಕರ್ಣಿ, ರೋಹಿಣಿ ದೇಶಪಾಂಡೆ, ಮಂಜುಳಾ ಜೋಶಿ, ಉಪೇಂದ್ರ ಭಟ್, ರಾಜಪ್ರಭು ಧೋತ್ರೆ ಮೊದಲಾದವರನ್ನು ಉಲ್ಲೇಖಿಸಬಹುದು.

ಸುಮಾರು ನೂರೈವತ್ತು ವರ್ಷಗಳ ಹಿಂದೆ ಹಿಂದುಸ್ತಾನಿ ಸಂಗೀತವೆಂದರೇನೆಂದು ಕೇಳುತ್ತಿದ್ದ ಕರ್ನಾಟಕ, ಈ ಹಿಂದುಸ್ತಾನಿ ಶತಕದಲ್ಲಿ ಭಾರತೀಯ ಸಂಗೀತಕ್ಕೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿರುವುದು ಹೆಮ್ಮೆಯ ಸಂಗತಿ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಲೇ, ಅದನ್ನು ಇನ್ನೂ ಉಚ್ಛ್ರಯಸ್ಥಿತಿಗೆ ಕೊಂಡೊಯ್ಯುವ ಜವಾಬ್ದಾರಿ ಇಂದಿನ ಯುವ ಗಾಯಕರ ಮೇಲಿದೆ. ನಿರಂತರ ಸಾಧನೆ ಮಾತ್ರ ಈ ಜವಾಬ್ದಾರಿಗೆ ಏಕಮೇವ ಮಾರ್ಗವಾಗಿದೆ.