ಡಕ್ಕಲಿಗರಲ್ಲಿ ಮದುವೆ ಕಾರ್ಯಗಳು ನಡೆಯಬೇಕಾದರೆ ಕುಲ-ಗೋತ್ರಗಳ ಆಧಾರದ ಮೇಲೆ ನಡೆಯುತ್ತವೆ. ಉದಾ: ಪಟ್ಟೇಟ, ಟಗರಸಿ, ಗೌಡರು, ಗಾಯಕವಾಡ, ಕೆನಕುಂಟ, ಚಾರಕೊಂಡ, ಮ್ಯಾಕುಲ, ಅಲ್ಲಪೊಳು, ನಲ್ಲಪೊಗಲು, ಐದೇಳಿ, ಬಾಣಾರ, ಮನ್ನೇಲ, ಕಂಬಳಿ, ಜಡಗೋಲು, ಚಿನ್ನಪೆದ್ದ, ಕಸ್ತೂರೆಡು, ಕಬ್ಬರಕಿ, ಡವಾಣಿರು, ಡಾಕೂರರು ಹೀಗೆ ಇನ್ನುಳಿದ ಗೋತ್ರಗಳು ಕಂಡು ಬರುತ್ತವೆ.
ಕಂಬಳಿ, ಐದೇಳಿ, ಚಾರಕೊಂಡ, ಟಗರಸಿ, ಜಡಗೋಲು, ಕಬ್ಬರಕಿ ಗೋತ್ರದವರು ಪರಸ್ಪರ ಸಹೋದರರೆಂದು ಭಾವನೆ? ಅಲ್ಲಪೊಳು, ಚಿನ್ನಪೆದ್ದ, ಬಾಣಾರ, ಡಾಕೂರರು, ಗಾಯಕವಾಡ ಸಹೋದರೆಂದು ವಕ್ತೃಗಳ ಹೇಳಿಕೆ. ಹೆಣ್ಣು ಗಂಡಿನ ಕೊಡು-ಕೊಳೆಯ ವ್ಯವಹಾರ ಹೀಗೆ ಮಾಡುತ್ತಾರೆ.
ವರ್ಗ–೧ | ವರ್ಗ–೨ |
ಐದೇಳಿ | ಗಾಯಕವಾಡ |
ಟಗರಸಿ | ಡಾಕೂರರು |
ಚಾರಕೊಂಡ | ಅಲ್ಲಪೊಳು |
ಕಂಬಳಿ | ಡವಾಣಿರು |
ಜಡಗೋಲು | ಚಿನ್ನಪೆದ್ದ |
ಕಬ್ಬರಕಿ | ಬಾಣಾರ |
ಮನ್ನೆಲ | ಕರ್ನಕುಂಟೆ |
ಕಸ್ತೂರೆಡು | ಗೌಡರು |
ಹೀಗೆ ಹೆಣ್ಣು ಗಂಡಿನ ಕೊಡು-ಕೊಳೆ ಮಾಡಲಿಕ್ಕೆ ಮೇಲಿನಂತೆ ವರ್ಗೀಕರಣ ಮಾಡಲಾಗಿದೆ. ವರ್ಗ-೧ ದವರು ವರ್ಗ-೨ ರ ಗೋತ್ರದವರು ಕನ್ಯೆಯನ್ನು ತೆಗೆದುಕೊಳ್ಳಲು ಬರುತ್ತದೆಂಧು ವಕ್ತೃಗಳ ಹೇಳಿಕೆ.
ಕುಲ ಎನ್ನುವುದು ಜನಪದ ಬದುಕಿನ ಒಂದು ವಿಶಿಷ್ಟ ಸಂಗತಿ. ಪ್ರಾದಿಮಕಾಲ ಕಳೆದು ಶಿಲಾಪೂರ್ವ ನವಶಿಲಾಯುಗಗಳು ಮೊದಲುಗೊಂಡು ಮಾನವ ಗುಂಪುಗಳು ವಿವಿಧ ಭೂ-ಭೌಗೋಳಿಕ ಪ್ರದೇಶಗಳಿಗೆ ಚೆದುರಿ ವಿಭಿನ್ನ ವೃತ್ತಿ ಕೈಕೊಂಡಾಗ ತಮ್ಮ ತಮ್ಮ ಗುಂಪನ್ನು ಒಂದೊಂದು ಸಂಕೇತದ ಮೂಲಕ ಗುರುತಿಸಿಕೊಳ್ಳುತ್ತ ಬಂದರು. ಆಗ ಒಂದು ಮರ, ಒಂದು ಪಕ್ಷಿ, ಒಂದು ಬಂಡೆ, ಒಂದು ಪಶು, ಪ್ರಾಣಿ ಅವರವರ ಗುಂಪಿನ ವಿಶಿಷ್ಟ ಗುರುತು, ಸಂಕೇತ. ಆ ಸಂಕೇತ ಅವರ ರಕ್ಷಣೆ ಪೋಷಣೆಗೆ ಆಧಾರವಾಗಿ ಕಾಲಾನಂತರ ಅದು ಅವರ ಕುಲಸಂಕೇತವಾಗಿ ರೂಪುಗೊಂಡಿತು. ಕುಲಸಂಕೇತ ಅವರ ಕೇವಲ ಗುರುತಿನ ಕುರುಹಾಗಿ ಉಳಿಯದೆ ಅದೊಂದು ಅವರ ಪಾಲಿಗೆ ಪವಿತ್ರ ವಸ್ತು ಎನ್ನುವ ನಂಬಿಕೆ ಬೆಳೆದು ಅದನ್ನೇ ಆ ಜನಪದ ವೃಂದವು ಆರಾಧಿಸಲು ತೊಡಗಿತು. ಇದು ಜಾನಪದದ ದೃಷ್ಟಿಯಿಂದ ತುಂಬ ವಿಶಿಷ್ಟ ಪ್ರಕ್ರಿಯೆಯಾಗಿದ್ದು ಇದನ್ನೇ ಕುಲಸಂಕೇತಾರಾಧನೆ ಎಂದು ಗುರುತಿಸಬಹುದಾಗಿದೆ.
Leave A Comment