ಕಿತ್ತೂರ ನಾಡ ರಕ್ಷಣೆಗೆ, ಬ್ರಿಟೀಶರನ್ನು ನಾಡಿನಿಂದ-ದೇಶದಿಂದ ಹೊರದಬ್ಬುವ ವಿಚಾರಗಳಿಂದ, ರಾಯಣ್ಣನು ಚೆನ್ನಮ್ಮಾಜಿಯ ಬಂಟನಾಗಿ, ವೀರಯೋಧನಾಗಿ ಹೋರಾಡುತ್ತ ಕೊನೆಗೆ ಮೋಸಗಾರರ ಬಂಧನಕ್ಕೊಳಗಾದನು.

ಕಿತ್ತೂರಿನ ಬಂಡಾಯವೆಂದೇ ಕರೆದುಕೊಂಡ ಬ್ರಿಟೀಶರು (೨೩.೧೦.೧೮೨೪) ಆ ದಿನವನ್ನು ದುರ್ಧರದಿನವನ್ನಾಗಿ ಆಚರಿಸಿದಂತಿದೆ. ಧಾರವಾಡದ ಕಿತ್ತೂರ ಚೆನ್ನಮ್ಮನ ಪಾರ್ಕ (ಹೂದೋಟ)ದಲ್ಲಿ ಸೇಂಟ್ ಜಾನ್‌ಥ್ಯಾಕರೆ ಮುಖ್ಯ ಕಲೆಕ್ಟರ ಮತ್ತು ಪೋಲಿಟಿಕಲ್‌ಎಜೆಂಟ ದಕ್ಷಿಣ ಮರಾಠಾ ದೋ ಅಬ ಅವನ ಪಾರ್ಥಿವ ಶರೀರವು ಇಲ್ಲಿ ಹೊಳಲ್ಪಟ್ಟಿದೆ. ಅಂದೇ ಕಿತ್ತೂರಿನ ಬಂಡಾಯವನ್ನು ಅಡಗಿಸಲು ಸಹಾಸಪೂರ್ಣ ಪ್ರಯತ್ನ ಮಾಡುವಾಗ ಮದ್ರಾಸ ಅಶ್ವದಳದ ಕ್ಯಾಪ್ಟನ್‌ಬ್ಲ್ಯಾಕ್‌, ಲೆಪ್ಟನೆಂಟ ಸಿವೆಲ್‌ಮತ್ತು ಡೆಯಟನ್‌ಇವರನ್ನು ಅಲ್ಲಿಯೇ ಹೂಳಲಾಯಿತು. ಇವು ಕಿತ್ತೂರಿನ ಅಚ್ಚಳಿಯದ ಇತಿಹಾಸದ ಕುರುಹುಗಳು. ‘ಕೋಟೆಯಲ್ಲಿದ್ದ ಕಿತ್ತೂರಿನ ಸೈನಿಕರು ಮಿಂಚಿನ ವೇಗದಿಂದ ದಾಳಿಮಾಡಿದರು. ತೋಪುಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ತಮ್ಮ ದಾರಿಯಲ್ಲಿ ಸಿಕ್ಕ ಎಲ್ಲರನ್ನು ಖಡ್ಗದಿಂದ ಇರಿದು ಕೊಂದರು. ಇದೇ ಹೊತ್ತಿಗೆ ದುರದೃಷ್ಟವಶಾತ್‌ಥ್ಯಾಕರೆ ಈ ಸ್ಥಳದಲ್ಲಿ ಕಾಣಿಸಿಕೊಂಡನು. ಅವನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅವನೊಂದಿಗಿದ್ದ ಮೂವರು ಸೇನಾಧಿಕಾರಿಗಳು ಸತ್ತಂತಿದೆ’. ಎಂದು ೨೪.೧೦.೧೮೨೪ ರಂದು ಜೆ.ಎಂ.ಆರ್. ಸ್ಟೀವನ್‌ಸನ್‌ನು ಡಬ್ಲೂ. ಚಾಪ್ಲಿನ್‌ಕಮೀಶನರ್ ಇನ್‌ಡೆಕ್ಕನ್‌ಗೆ ಪತ್ರವನ್ನು ಕಳಿಸಿರುವನು.

[1]

ಈ ಮೇಲಿನ ಘಡನೆಯ ನೆನಪು ಭಾರತದಿಂದ ಬ್ರಿಟೀಷ್ ಸಮ್ರಾಜ್ಯಕ್ಕೆ ಅಂಜಿಕೆಯನ್ನು  ನೀಡಿತು. ಈ ಅಂಜಿಕೆ ಮೂಡಿದ್ದು ಬ್ರೀಟೀಷರಿಗೆ ಭಾರತದಲ್ಲಿಯ ಸ್ವಾತಂತ್ರ್ಯದ ಕ್ರಾಂತಿಯ ಮೊದಲ ದೃಷ್ಟಾಂತ ಎಂಬುದು ಸ್ಪಷ್ಟವಾಗುತ್ತದೆ.

ಕ್ರಾಂತಿಯ ಪ್ರಮುಖ ಶಕ್ತಿ ಸಂಗೊಳ್ಳಿ ರಾಯಣ್ಣ ಎಂಬುದು ಆಂಗ್ಲರಿಗೆಲ್ಲರಿಗೂ ತಿಳಿದಿತ್ತು. ಕೊನೆಗೆ ಅವನನ್ನು ಮೋಸತನದಿಂದ ಹಿಡಿಸಿದರು. ಹುಲಕುಂದದ ಭೀಮೇಶ ಕವಿಯು ರಾಯಣ್ಣನ ಕೊನೆಯನ್ನು ಇಲ್ಲಿ ತಿಳಿಸಿರುವನು. ಮೋಸಗಾರರಾದ ಮೂರು ಜನರು ತಾವೇ ಬಡಬಡೆಸಿದರು.

ಇಷ್ಟ ಮಾತಕೇಳಿ ಮೂವರು ನಿಷ್ಠಾದಿಂದ
ಸಾಹೇಬಗ ಹೇಳ್ಯಾರಾ
ಕಷ್ಟತಂದ ಇಟ್ಟೀರಿ ನಮಗ ಬಹಳಾ
ಸರದಾರನ ಮುಂದ ನಿಂತ ಕರವ ಮುಗಿದು ಹೇಳತಾರಿವರು
,
ನೀವು ತಂದಿರಿ ನಮ್ಮ ಜೀವಕಗೋಳಾ
ರಾಯನಾಯಕನ ಬಿಟ್ರ ನಾವು ನೀವು ಉಳಿಯುವದಿಲ್ಲಾ.
ನಮ್ಮನ್ನ ಕಡದ ಹಾಕತಾನ ಝಳಝಳಾ
||
ಸಾಹೇಬನ ಮುಂದ ನಿಂತ ಅಂತಾರ ಇವರು ನಮಗ
ಮುಂಚೆ ಗಲ್ಲಿಗ್ಹಾಕಿ ಬಿಡರಿ ಅವನ್ನಾ ಪಳ್ಳಾ
ಇದನ್ನ ಕೇಳಿ ಸಾಹೇಬ ಆಗ ಮುಂಬಯಿಕ ಬರದಾ
|
ಚಮತ ಮಾಡಿ ಹಾಕಿದ ರೀಪೋರ್ಟಗಳಾ
||

ಚಾಲ:

ತಳದಾಗ್ಹೋಗಿ ಆಗಿ ಚೌಕಸಿ
ತಿಳದ ವಿಚಾರಿಸಿ
ಕಳವಿದಾರ ತುರತಾ
ಬೆಳದ ಮನುಷ್ಯನ ಕೊಲಬಾರದಂತಾ
ಉತ್ತರ ಬರೂದರೊಳಗ ಒತ್ತರ ಮಾಡ್ಯಾರ
ರಾಯಣ್ಣನ ಒಯ್ಯತಾ ಒಯ್ಯುತಾ

ರಾಯಣ್ಣನನ್ನು ನಂದಗಡದಲ್ಲಿ ಗಲ್ಲಿನ ಶಿಕ್ಷೆ ಕೊಡಬೇಕೆಂದು ಗೊತ್ತು ಮಾಡಿದರು. ಅಲ್ಲಿ ಯಾರೂ ದಂಗೆ ಮಾಡಲಿಕ್ಕಿಲ್ಲವೆಂದು ಆಂಗ್ಲರ ಯೋಜನೆಯಾಗಿತ್ತು(೧೬.೧೨.೧೮೩೦). ನ್ಯಾಯಾಧೀಶನ (ಕಮಿಶನರ್ ಎಂಡರಸನ್‌)ನ ಮುಂದೆ ವಿಚಾರಣೆ ನಡೆಯಿತು. ಫಾಶಿ ಶಿಕ್ಷೆಯನ್ನು ಅವನೇ ವಿಧಿಸಿದನು. ಕೆಲದಿವಸಗಳು ಸೆರೆಮನೆಯಲ್ಲಿ ಇಟ್ಟರು. ನಂದಗಡದಲ್ಲಿ ಫಾಸಿ ಶಿಕ್ಷೆಯ ಕಾರ್ಯಚಾರಣೆ ಗೊತ್ತಾಗಬಾರದೆಂದು ದಿನಗಳನ್ನು ಕಳೆದರು. ಸೆರೆಯವಾಸದಲ್ಲಿದ್ದಾಗ ಲಿಂಗನಗೌಡ-ವೆಂಕಟಗೌಡ ಇವರು ಉಪ್ಪು, ಗೊಬ್ಬರ, ಗೋವು ಮುಟ್ಟಿ ನಿಷ್ಠೆ ತೋರಿ, ಭಾಷೆ ನೀಡಿ, ಮೋಸ ಮಾಡಿದವರನ್ನು ನೋಡಿ ಏನೋ ಹೇಳಬೇಕೆಂದು ಸಂಗೊಳ್ಳಿ ಶೂರ, ಕರೆಯಿಸಲು ತಿಳಿಸಿದನು. ಸೆರೆಯಲ್ಲಿದ್ದರೂ ತಮ್ಮನ್ನು ಕೊಲ್ಲುಬಹುದೆಂದು ಅಂಜಿಕೆ ಅವರಿಗಾದರೂ, ಅವರು ಇನ್ನೊಂದೆಡೆ ಆಂಗ್ಲರ ಜೇಲಿನಲ್ಲಿಯೇ ಇದ್ದರು.

ರಾಯಣ್ಣನನ್ನು ಪಾಶಿಕೊಡುವ ದಿನ (೨೬.೧.೧೮೩೧) ೧೮೩೧ ಜನೇವರಿ ೨೬ ರಂದು ಕೈಕಾಲಿಗೆ ಬೇಡಿ ಹಾಕಿ ನಂದಗಡದ ಊರಿನ ಸುತ್ತ ಮೆರವಣಿಗೆ ಮಾಡುತ್ತಿದ್ದರು. ದೂರದ ಮಾಳಿಗೆಯ ಮೇಲೆ, ಓಣಿಯಲ್ಲಿಯ ಸಂದರಿ, ಮನೆಯ ಕಿಡಿಕಿಗಳಲ್ಲಿ ಹೆಂಗಳೆಯರ-ಪುರುಷರ ಮುಖಗಳು ರಾಯಣ್ಣನನ್ನು ಕಣ್ತುಂಬ ನೋಡಿ, ನೀರಗರೆದರು. ಎಂತಹ ತೇಜಸ್ಸು! ಏನು ಶೌರ್ಯ! ಏನು ಗಾಂಭಿರ್ಯ! ಎಂತಹ ಶ್ರೇಷ್ಠ ವೀರ, ಕ್ರಾಂತಿಕಾರಿ, ಕೆಂಚಮ್ಮನ ಮಗ, ಚೆನ್ನಮ್ಮನ ಶೂರ ಪುತ್ರ, ಇತ್ಯಾದಿ ಕೂಗುಗಳು ಕೇಳಿ ಬರುತ್ತಿದ್ದವು.

ರಾಯಣ್ಣ ಊರ ಹೊರಗೆ ಬಂದು ಒಂದು ಸ್ಥಳವನ್ನು ತೋರಿಸಿದನು. ‘ಇಲ್ಲಿ ನನ್ನ ಸಮಾಧಿ ಮಾಡಿ, ಅದರ ಮೇಲೆ ಆಲದ ಸಸಿಯೊಂದನ್ನು ನೆಡಿರಿ’.

ನಂದಗಡದ ಈಶಾನ್ಯ ದಿಕ್ಕಿಗೆ ದೊಡ್ಡದೊಂದು ಆಲದ ಮರ ಅಲ್ಲಿ ನೇಣ ಕುಣಿಕೆ ತೂಗಾಡುತ್ತಿತ್ತು.

ಶಾಂತಾನಂದ ಗುರುಗಳು ಸಾಮಾನ್ಯವೇಷ ಧರಿಸಿ, ಹಲವು ಬಾರಿ ರಾಯಣ್ಣನನ್ನು ಸೆರೆಮನೆಯಿಂದ ಹೊರ ತೆಗೆಯಬೇಕೆಂದು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.

ಶಾಂತನಂದರಿಗೆ ರಾಯಣ್ಣನ ಚಿಂತೆ ಮತ್ತು ಕನಸುಗಳು ರಾಯಣ್ಣನಿಗೆ ಶಾಂತಾನಂದರ ಭೆಟ್ಟಿಯ ಕನಸು. ಇವರಿಬ್ಬರೂ ತಮ್ಮದೇ ಆದ ಕನಸುಗಳನ್ನು ಕಾಣುತ್ತಲೇ ಇದ್ದರು. ರಾಯಣ್ಣನಿಗೆ ಎಲ್ಲಿಲ್ಲದ ವಿಚಾರಗಳ ತಾಕಲಾಟವೇ ತಾಕಲಾಟ ದಿನನಿತ್ಯ! ಆದರೇನು? ಅದರೇನು? ಕ್ರಾಂತಿಯ ಬೀಜ ಜನರಲ್ಲಿ ಬಿತ್ತಿಯಾಗಿದೆ ಹೇಳುವುದನ್ನು ಕೂಡಿದ ಜನರಿಗೆ ಹೇಳಿದರಾಯಿತು ಎಂಬ ಗಾಂಭೀರ್ಯ ಮುಖದಲ್ಲಿತ್ತು.

ಕನ್ನಡ ಕೇಸರಿಯಾದ ಸಂಗೊಳ್ಳಿ ರಾಯಣ್ಣನಿಗೆ ಆತನ ತಾಯಿ ಕೆಂಚಮ್ಮನನ್ನು ಕರೆದು ಭೆಟ್ಟಿ ಮಾಡಿಸುತ್ತಾರೆ. ತಾಯಿ ಕರುಳು ಶೂರತನದಿಂದ ಭೂರ್ಗರೆಯುತ್ತದೆ. ಶಿವಲಿಂಗ (ಸವಾಯಿ ಮಲ್ಲಸರ್ಜ) ಬಂದು ಭೆಟ್ಟಿ ಕೊಡುತ್ತಾನೆ. ತನಗೆ ಗಲ್ಲು ನೀಡಿ ಎಂದು ಗಲಾಟೆ ಮಾಡುತ್ತಾನೆ.

ರಾಯಣ್ಣನು ನುಡಿಯುತ್ತಾನೆ ಕೇಳಿರಿ, ನಾನು ಹೇಳುವ ಮಾತು ಲಕ್ಷಗೊಟ್ಟು ಕೇಳಿರಿ ! ನಿಮ್ಮ ನಿಮ್ಮ ಎದೆ ಹಲಗಿಯ ಮೇಲೆ ಕೊರೆದು ಇಡಿರಿ. ಬಾಂಧವರೆ, ಭಗಿನೀಯರೆ, ಬಾಲಕರೆ, ತರುಣರೆ, ನಾನು ಸತ್ತೆನೆಮದು ಅಳದಿರಿ. ಹಾಡಿ ಹಾಡಿ ಅಳುತ್ತ ಕೂಡಬೇಡಿರಿ. ಹೇಡಿಗಳಾಗಬೇಡಿರಿ. ಸಾವಿಗೆ ಅಂಜಬೇಡಿರಿ, ಗುಂಡಿಗೆ ಎದೆ ನೀಡಿರಿ. ಒಬ್ಬ ರಾಯಣ್ಣ ಹೋದರೆ, ಮನೆ ಮನೆಗೆ ರಾಯಣ್ಣ ಹುಟ್ಟಲಿ! ನಿಮ್ಮ ನಿಮ್ಮಲ್ಲಿ ಜಗಳಾಡಬೇಡಿರಿ. ಕನ್ನಡಿಗರ ಮಾನ ಉಳಿಸಿಕೊಳ್ಳಿ….![2]

ಊರಿನವರೆಲ್ಲ ಕೂಡಿ, ರಾಯಣ್ಣನ ಶವ ಒಯ್ದು ರಾಯಣ್ಣ ಹೇಳಿದ ಸ್ಥಳದಲ್ಲಿ ಸಮಾಧಿ ಮಾಡಿದರು.

ಬಿಚ್ಚುಗತ್ತಿ ಚನಬಸಪ್ಪ ಆಲದ ಟೊಂಗೆಯೊಂದನ್ನು ತಂದು, ರಾಯಣ್ಣನ ಸಮಾಧಿಯ ಮೇಲೆ ನೆಟ್ಟನು. ಗಿಡಬೆಳೆಯುವುದನ್ನು ನೋಡುತ್ತ, ಸನ್ಯಾಸಿಯಾಗಿ ತಿರುಗುತ್ತ ಕೆಲವರುಷದ ನಂತರ ಕಾಲದಲ್ಲಿ ಲೀನನಾದನು.

ಆಲದ ಮರಕ್ಕೆ ಜನ ಭಕ್ತಿಯಿಂದ ಬೇಡಿಕೊಳ್ಳುತ್ತಿದ್ದಾರೆ.

ತೂಗತಾವ ತೊಟ್ಟಿಲ ಸುತ್ತ – ಮುತ್ತಾ
ಸತ್ಯವಂತ ರಾಯನಾಯಕನಿಗೆ
ಮತ್ತ ಜನರ ನಡಕೊಂಡವರಿಗೆ
ಪುತ್ರ ಸಂತಾನ ಕೊಟ್ಟಾನ ಮಸ್ತಾ
|

ಏರು:    ಕ್ಷತಿ ಮೇಲೆ ಹುಲಕುಂದವಾಸ ಮತಿವಂತ ಬಲ ಭೀಮೇಶಾ ಇತಿಹಾಸ ಪದ ಮಾಡಿದ ಕುತಗೊಂಡಾ |[3]

ಸಂಗೊಳ್ಳಿ ರಾಯಣ್ಣನ ಕೊನೆಯು ಇದಾದರೂ ಸಂಪೂರ್ಣ ಭಾರತದ ಬಿಡುಗಡೆಗೆ ಅವನ ಚಳುವಳಿಯೇ ಮೊದಲನೆಯದಾಗಿದೆ. ಅವನ ಹುಟ್ಟು ಅಗಷ್ಟ ಹದಿನೈದು – ಅವನ ಸಾವು ಸಂಪೂರ್ಣ ಸ್ವಾತಂತ್ಯ್ರ ಜಾನೇವರಿ ಇಪ್ಪತ್ತಾರು. ಇವು ನಮ್ಮ ರಾಷ್ಟ್ರೀಯ ಹಬ್ಬಗಳು. ಹಾಗೇ ರಾಯಣ್ಣ![1]    ರಾಣಿ ಚೆನ್ನಮ್ಮ (ಪುಟ.೬೫-೬೬) ಸದಾಶಿವ ಒಡೆಯರ್, ನ್ಯಾಶನಲ್‌ಬುಕ್‌ಟ್ರಸ್ಟ್‌ಆಫ್‌ಇಂಡಿಯಾ, ಹೊಸ ದೆಹಲಿ-೧೬.

[2]    ಬಿ.ಕಲ್ಯಾಣ ಶರ್ಮ, ಸಂಗೊಳ್ಳಿ ರಾಯಣ್ಣ-ನಾಟಕ ಕೊನೆದೃಶ್ಯ. ಕಥಾಕುಂಜ ಗ್ರಂಥ ಭಾಂಡಾರ, ಬೆಳಗಾವಿ.

[3]     ನಿಂಗಣ್ಣ ಸಣ್ಣಕ್ಕಿ, ಲಾವಣಿ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ್ಣ.