ಅಂಗೈಯಟ ಮುಗಲಾಗ ಲಿಂಗದಟ ಮಾಡಾಗಿ
ಜಂಗಿ ಮಳೆರಾಯ ಸುರದಾನ | ಸೋ | ಭೂತಾಯಿ
ತೊಯ್ದ ಹೊತ್ತಾಳ ಜಲಬಿಂದು ||ಸೋ||
ಮಲ್ಲಾಡಕ ಮಳೆಯಾಗಿ ಒಡ್ಲೊಡೆದು ಹಳ್ಹರಿದು
ನಮ್ಮೂರ ಮುಂದ ಹೊರಸೂಸಿ | ಸೋ | ಮಲಪಾರಿ
ಹೊರಚೆಲ್ಲಿ ಊರ ಹೊಕ್ಕಾಳ ||ಸೋ||
ಗಂಗ್ಯಳದ ಗರತಿಗೆ ಏಳು ಕೊಪ್ಪರಿಗ್ಹೊನ್ನ
ಆನಿ ಅಂಬಾರಿ ವಾಲಗ | ಸೋ | ದಾರೂತಿ
ಊರ ಓಣ್ಯಾಗ ಸಡಗರ ||ಸೋ||
ಊರ ಹಿರಿಯರ ಕೂಡ ಗೌಡ ಸಾರುತ ಬಂದ
ಗರತಿಯಿದ್ದಾಕಿ ಹೊರಬೀಳ | ಸೋ | ಹಡದವ್ವ
ಹೊಳೆಯಳೆದು ಊರ ಉಳಿಸೆಂದ ||ಸೋ||
ಓಣಿ ಓಣಿಯ ತಿರುಗಿ ಊರ ಅಗಸಿಗೆ ಬಂದ
ಅಗಸಿ ಮುಂದಾಡು ಬಾಲಯ್ಯ | ಸೋ | ತಾ ಕೇಳಿ
ಗರತಿ ನಮ್ಮವ್ವ ಮನೆಯಾಗೊ ||ಸೋ||
ಓಡುತೋಡುತ ಬಾಲ ನಡುಮನೆಗೆ ಬಂದಾನ
ಹಡದವ್ವ ಗರತಿ ಜನಬಂದ | ಸೋ | ಕರೆದಾರ
ಗರತಿ ಗಂಗವ್ವ ಹೊರಬೀಳ ||ಸೋ||
ನಮ್ಮೂರ ಹೊಳಿ ಬಂದು ಊರ ಹೊಕ್ಕಳ ತಾಯಿ
ಗರತಿ ಗಂಗವ್ವ ಹೊಳಿ ಅಳಿಯ | ಸೋ | ನಮ್ಮೂರ
ಮುತ್ತೋದಿ ಕಳಸ ಹೊರಬೀಳ ||ಸೋ||
ಅಡಗೀಯ ಮನಿಯಾಗ ಗರತಿ ಬಡವನ ಮಡದಿ
ಅರತೀಲಿ ಕೇಳ ಒಡನುಡಿಯ | ಸೋ | ಹಡದವ್ವ
ಬಾಗೀಣ ಹೊತ್ತು ಹೊರಟಾಳ ||ಸೋ||
ರಂಗ ಪಡಸಾಲ್ಯಾಗ ದಿಂಬದ್ಹಾಸಿಗಿಮ್ಯಾಲೆ
ಇಂಬಿಲೊರಗೀರು ಮಾವಯ್ಯ | ಸೋ | ನಿಮ ಸೊಸಿ
ಗಂಗಿಯಳಿಯಾಕ ಹರಸಯ್ಯ ||ಸೋ||
ಪಗಡಿ ಪಡಸಾಲ್ಯಾಗ ದಗದ ಮಾಡಿಸುವತ್ತಿ
ಮಕ್ಕಳಿಬ್ಬಾರ ಬಲು ಜೋಕೆ | ಸೋ | ಹಡದವ್ವ
ಗಂಗಿಯಳಿಯಾಕ ಹಂಸವ್ವ ||ಸೋ||
ನಡುಮನೆಯ ನಡುಗೀಲ ಒಳಗಿರುವ ನಾದುನಿಯೆ
ಕುಲವಂತಿ ಜೋಕೆ ಒಗತಾನ | ಸೋ | ಗೌರವ್ವ
ಗಂಗಿಯಳಿಯಾಕ ಹರಸವ್ವ ||ಸೋ||
ಎಡಮನೆಯ ಬಾಗಿಲದ ಒಡತಿ ನೀ ನೇಗೆಣ್ಣಿ
ಬಡಿವಾರ ಬ್ಯಾಡ ಮನೆ ಜೋಕೆ | ಸೋ | ಹಡದವ್ವ
ಗಂಗಿಯಳಿಯಾಕ ಹರಸವ್ವ ||ಸೋ||
ಭಾವ ಮೈದುನರಯ್ಯ ನಡು ಹೊಲದ ರೈತಾರ
ಬಿಡುದಿನ ಬ್ಯಾಡ ದರುಮಕ | ಸೋ | ಮನಿಸೊಸಿಗೆ
ಗಂಗಿಯಳಿಯಾಕ ಹರಸರಿ ||ಸೋ||
ಕಡಗೋಲ ಕಂಬದ ನಡುಮನಿಯ ಪಡಿಯಾಗ
ಪಡಿಹೊನ್ನು ಉಂಟು ಎನ್ನರಸ | ಸೋ | ನಾ ಮರಳಿ
ಬರದಿರಕ ನಿಮಗೆ ಬಾಸಿಂಗ ||ಸೋ||
ಚಂದ್ರ ಪಡಸಾಲ್ಯಾಗ ಚಂದ್ರ ಮಂಚದ ಮ್ಯಾಲೆ
ಚಂದ್ರ ನನ ದೊರೆಯೆ ನನ ಮಾತ | ಸೋ | ನಡೆಸರಿ
ಗಂಗಿಯಳಿಯಾಕ ಹರಸರಿ ||ಸೋ||
ಅತ್ತಿಮಾವಗ ಶರಣು ಭಾವ ಮೈದುನ ಶರಣು
ಸುತ್ತಿರುವ ಬಳಗ ನನ ಶರಣ | ಸೋ | ನಮ್ಮೂರ
ಗಂಗಿಯಳಿಯಾಕ ಹರಸರಿ ||ಸೋ||
ಲಿಂಗವಂತರ ಗೆಳತಿ ಶಿವಶರಣಿ ನಾಗಮ್ಮ
ಲಿಂಗದ ಬೆಳಕ ನೀನೀಡ | ಸೋ | ಹಡದವ್ವ
ಗಂಗಿಯಳಿಯಾರ ಚರದವ್ವ ||ಸೋ||
ಹಾದೀಯ ಗೆಳತೇರ ಬೀದೀಯ ಕೆಳದೇರ
ಜಾದಮಲ್ಲೀಗೆ ಮುಡಿಯಾವ | ಸೋ | ಐದೇರ
ಗಂಗಿಯಳಿಯಾಕ ಪರಸರ ||ಸೋ||
ಭೂತನಾಥಗ ಶರುಣ ಪಂಚಲಿಂಗಗ ಶರಣು
ದೈವ-ದೇವರಿಗೆ ನನ ಶರಣು | ಸೋ | ನಮ್ಮೂರ
ಗಂಗಿಯಳಿಯಾಕ ಹರಸರಿ ||ಸೋ||
ಊರ ದೈನರ ಕೂಡ ಊರ ಗೌಡನಕೂಡ
ಗರತಿ ಗಂಗವ್ವ ನಡೆದಾಳ | ಸೋ | ಹೊಳೆದಂಡೆ
ಮಲಪಾರಿ ಚೆಲ್ಲಿ ಹರಿಯೂಳ ||ಸೋ||
ಹೊಳೆ ತಾಯಿ ಗಂಗವ್ವ ಕಿರಿಯಾಗಿ ಹರಿಯವ್ವ
ಮುತ್ತೋದಿ ಬಾಗೀಣ ನಿನಗೀವೆ | ಹೋ | ಮಲಪಾರಿ
ನನ್ನೂರ ಸಲುಹ ಸಿರಿಯಾಳ ||ಸೋ||
ಅಂಗದ ಮೇಲಿರುವ ಲಿಂಗಯ್ಯ ನಿನ ನೆನೆದು
ಗಂಗಿಯಳೆಯೂವೆ ಐಮೊರವ | ಸೋ | ಹೊಳೆಗಂಗಾ
ಸಂಗ ಬಗೆಸೀನೆ ಕಡೆತನಕ ||ಸೋ||
ಉರ್ಹೊಕ್ಕ ಹೊಳೆಗಂಗಾ ಗರತೀಯ ಕೊಚಗೊಂಡು
ಒದ್ದಲಕ ಬಿದ್ದು ಹರಿದಾಳ | ಸೋ | ದೇಶಕ
ಗರತಿ ಗಂಗವ್ನ ಹೆಸರಾತ ||ಸೋ||
* ಗರತಿ ಗಂಗವ್ವ, ಗದ್ದಗಿಮಠ ಬಿ.ಎಸ್. ಜನತಾಗೀತೆಗಳು ಕರ್ನಾಟಕ ಸಹಕಾರಿ ಸಾಹಿತ್ಯ ಸಂಘ, ಧಾರವಾಡ ೧೯೫೬, ಪು.ಸಂ.೮೦-೮೩
Leave A Comment