ಗರ್ಭಧರಿಸಿದ ಹಸುವೇ ರೈತನಿಗೆ ಒಂದು ಆಸ್ತಿಯಿದ್ದಂತೆ ಮತ್ತು ಗರ್ಭದಲ್ಲಿರುವ ಕರುವೇ ಮುಂದಿನ ಹೈನುರಾಸು ಎಂಬುದನ್ನು ಹೈನುಗಾರರು ನೆನಪಿನಲ್ಲ ಇಟ್ಟುಕೊಳ್ಳಬೇಕು.

ಗರ್ಭಧರಿಸಿದ ಹಸುವಿನ ಸ್ವಯಂ ಜವಾಬ್ದಾರಿಗಳು ಕೆಳಗಿನಂತಿರುತ್ತವೆ.

೧. ತನ್ನ ದೇಹಕ್ಕೆ ಬೇಕಾದ ಆಹಾರದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದು ಕೂಡ ತನ್ನ ದೇಹದಲ್ಲಿ ಬೆಳೆಯುತ್ತಿರುವ ಕರುವಿಗೆ ಸಾಕಷ್ಟು ಪ್ರಮಾಣದಲ್ಲಿ ಪಿಷ್ಟ ಸಸಾರಜನಕ, ಕೊಬ್ಬು ಮತ್ತು ಲವಣಾಂಶಗಳನ್ನು ಒದಗಿಸುವುದು.

೨. ಕರು ಹಾಕುವುದಕ್ಕೆ ಸಹಾಯವಾಗಲು ಕೆಲವೊಂದು ಪ್ರಮಾಣದ ಶಕ್ತಿಯನ್ನು ದೇಹದಲ್ಲಿ ಕಾಯ್ದಿರಿಸಿಕೊಳ್ಳುವುದು ಮತ್ತು

೩. ಹಾಲಿನ ಇಳುವರಿಗಾಗಿ ತನ್ನನ್ನು ಸಿದ್ಧಪಡಿಸಿಕೊಳ್ಳುವುದು.

ಆದ್ದರಿಂದ ಗರ್ಭಧರಿಸಿದ ಒಂದು ಮಣಕ ಅಥವಾ ಹಸುವನ್ನು ಸಾಧ್ಯವಿದ್ದಷ್ಟು ಹೆಚ್ಚು ವೈಜ್ಞಾನಿಕವಾಗಿ ಸಾಕುವುದು ಬಹಳ ಮುಖ್ಯ. ಈ ಅವಧಿಯಲ್ಲಿ ನಿರ್ಲಕ್ಷ್ಯ ಮಾಡಿದರೆ ನಂತರ ಈ ಕೆಳಗಿನ ಯಾವುದಾದರೂ ತೊಂದರೆಗಳು ಕಾಣಿಸಿಕೊಳ್ಳಬಹುದು.

೧. ಹಸುವು ಅವಧಿಗೆ ಸರಿಯಾಗಿ ಅಥವಾ ಮೊದಲೇ ಕರು ಹಾಕಬಹುದು. ಈ ಕರುವು ಅಶಕ್ತವಿದ್ದು ಸತ್ತು ಹೋಗಬಹುದು ಅಥವಾ ಮುಂದೆ ಸರಿಯಾಗಿ ಬೆಳೆವಣಿಗೆ ಆಗದೇ ಬೆದೆಗೆ ಬದಲು ಮತ್ತು ಗರ್ಭಧರಿಸಲು ತೊಂದರೆಯಾಗಬಹುದು.

೨. ಹಸುವು ಅಶಕ್ತವಾಗಿ ಮಾಸು ಬೀಳದೇ ಇರಬಹುದು ಹಾಗೂ ಮುಂದೆ ಗರ್ಭಕೋಶವು ರೋಗಪೀಡಿತವಾಗಿ ಮತ್ತೆ ಗರ್ಭಧರಿಸುವುದಕ್ಕೆ ತೊಂದರೆಯಾಗಬಹುದು.

೩. ಗರ್ಭಕೋಶ ಹೊರೆಗೆ ಬಂದು ಪೆಟ್ಟಾಗಬಹುದು ಹಾಗೂ ಹಸುವಿನ ಪ್ರಾಣಕ್ಕೂ ಅಪಾಯ ಉಂಟಾಗಬಹುದು.

೪. ಹಸುವು ಅಶಕ್ತವಾಗಿ ಹಾಲಿನ ಇಳುವರಿ ನಿರೀಕ್ಷಿತ ಮಟ್ಟದಲ್ಲಿ ಬರದಿರಬಹುದು

ಈ ತೊಂದರೆಗಳಲ್ಲಿ ಯಾವುದಾದರೂ ಒಂದು ಕಾಣಿಸಿಕೊಂಡರೂ, ಹೈನುಗಾರಿಕೆಯಲ್ಲಿ ಲಾಭವನ್ನು ಗಳಿಸುವುದು ಅಸಾಧ್ಯ. ಆದ್ದರಿಂದ ಗರ್ಭಧರಿಸಿದ ಮಣಕ ಹಸುವನ್ನು ವೈಜ್ಞಾನಿಕವಾಗಿ ಸಾಕುವ ವಿಧಾನವನ್ನ ತಿಳಿದುಕೊಳ್ಳೊಣ

ಬೆದೆಗೆ ಬಂದ ಮಣಕವನ್ನು ಸೂಕ್ತ ಕಾಲದಲ್ಲಿ (ವಯಸ್ಸಿಗಿಂತ ದೇಹದ ತೂಕ ಮುಖ್ಯ) ಕಟ್ಟಿಸಬೇಕು (ಕೃತಕ ಗರ್ಭಧಾರಣೆ ಮಾಡಿಸಬೇಕು). ಕರು ಹಾಕಿದ ಹಸುವನ್ನು ಸಹ ಕರು ಹಾಕಿದ ೪೫ ದಿನಗಳ ನಂತರ ಬರುವ ಮೊದಲನೇ ಬೆದೆಯಲ್ಲಿಯೇ ಕಟ್ಟಿಸಬೇಕು ಅಂದರೆ ಮಾತ್ರ ಹೈನುಗಾರಿಕೆಯಲ್ಲಿ ೧೨ ರಿಂದ ೧೪ ತಿಂಗಳುಗಳಿಗೆ ಒಂದು ಕರುವನ್ನು ಪಡೆಯುವುದು ಸಾಧ್ಯ. ಕರು ಹಾಕಿದ ನಂತರ ಆಕಳನ್ನು ಬೇಗ ಕಟ್ಟಿಸಿದರೆ ಬೇಗನೆ ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಎಂಬ  ತಪ್ಪು ಅಭಿಪ್ರಾಯವನ್ನು ಕೆಲವು ರೈತರು ಹೊಂದಿದ್ದಾರೆ ಕರು ಹಾಕಿದ ೫೦ ರಿಂದ ೯೦ ದಿನಗಳಲ್ಲಿ ಗರ್ಭಧಾರಣೆಯ ಸಾಧ್ಯತೆ ಹೆಚ್ಚು ಹಾಗೂ ಕರುಗಳ ನಡುವಿನ ಅಂತರವೂ ಸಹ ಕಡಿಮೆಯಾಗಿ ಲಾಭದಾಯಕ ಹೈನುಗಾರಿಕೆ ಸಾಧ್ಯ.

ಕೃತಕ ಗರ್ಭಧಾರಣೆ ಮಾಡಿಸಿದ ೬೦ ದಿನಗಳಿಗೆ ಗರ್ಭಧಾರಣೆಯನ್ನು ಪರೀಕ್ಷೀಸಿ ಖಾತ್ರಿಪಡಿಸಿಕೊಳ್ಳಬೇಕು. ಏಕೆಂದರೆ, ಒಂದು ವೇಳೆ ಗರ್ಭಧರಿಸಿರದಿದ್ದರೆ, ಪುನಃ ಬೆದೆಹೆ ಬರುವಂತೆ ಸೂಕ್ತ ಉಪಚಾರ ಕೈಗೊಳ್ಳಲು ಸಾಧ್ಯವಾಗುತ್ತದೆ. ಗರ್ಭಧಾರಣೆಯನ್ನು ಖಚಿತಪಡಿಸಿಕೊಂಡ ನಂತರ ಅಂತಹ ಮಣಕ/ ಆಕಳನ್ನು ಬಹಳಷ್ಟು ಕಾಳಜಿಪೂರ್ವಕವಾಗಿ ಸಾಕಬೇಕಾಗುತ್ತದೆ. ಏಕೆಂದರೆ, ಗರ್ಭಕೋಶದಲ್ಲಿ ಮುಂದಿನ ಹೈನುರಾಸು ಬೆಳೆಯುತ್ತಿರುತ್ತದೆ ಹಾಗೂ ಆಕಳಾಗಿದ್ದರೆ, ಹಾಲನ್ನೂ ಕೊಡುತ್ತಿರುತ್ತದೆ. ಇದಕ್ಕಾಗಿ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

೧. ಸಮತೋಲನ ಆಹಾರಕರುವಿನ ಬೆಳವಣಿಗೆ, ಹಾಲಿನ ಇಳುವರಿ ಹಾಗೂ ಮಸಾಲೆ ದೇಹವನ್ನು ಕಾಯ್ದುಕೊಳ್ಳುವುದಕ್ಕೆ ಹಸುವಿಗೆ ಉತ್ತಮ ಗುಣಮಟ್ಟದ ಸಮತೋಲನ ಆಹಾರವನ್ನು ಪೂರೈಸುವುದು ಹೈನುಗಾರನ ಪ್ರಥಮ ಜವಾಬ್ದಾರಿ.

ಉತ್ತಮ ಗುಣಮಟ್ಟದ ದ್ವಿದಳ ಧಾನ್ಯ (ಅಲಸಂದಿ, ಅವರೆ, ಕುದುರೆ ಮಸಾಲೆ ಸೆಂಟ್ರೋಸೀಮಾ ಮುಂತಾದುವು) ಹಾಗೂ ಏಕದಳ ಧಾನ್ಯಗಳ (ಜೋಳ, ಮೆಕ್ಕೆಜೋಳದ ಪ್ಯಾರಾ, ಗಿನಿ ಮುಂತಾದುವು) ಹಸಿರು ಮೇವನ್ನು ೧:೨ ಪ್ರಮಾಣದಲ್ಲಿ ಕೊಡಬೇಕು ಇದರೋಂದಿಗೆ ಸ್ವಲ್ಪ ಒಣಮೇವು, ಹಿಂಡಿ ಮಿಶ್ರಣ ಹಾಗೂ ಲವಣಮಿಶ್ರಣವನ್ನೂ ಸಹ ಕೊಡಬೇಕು. ಇವುಗಳ ಮೂಲಕ ಅವಶ್ಯವಿರುವ ಪಿಷ್ಟ ಸಸಾರಜನಕ. ಕೊಬ್ಬು, ಲವಣ ಮತ್ತು ಜೀವಸತ್ವಗಳನ್ನು ಪೂರೈಸಿದಂತಾಗುತ್ತದೆ. ೨ ಭಾಗ ಮೆಕ್ಕೆ ಜೋಳದ ಮೇವು ಮತ್ತು ೧ ಭಾಗ ಅಲಸಂದಿ ಅಥವಾ ಕುದುರೆಮಸಾಲೆ  ಸೊಪ್ಪಿನ ಮಿಶ್ರಣವು ೮ ಲೀಟರ್ ಹಾಲು ಕೊಡುವ ಹಸುವಿಗೆ ಪಶು ಆಹಾರದ ಅವಶ್ಯಕತೆಯನ್ನು ತಪ್ಪಿಸುತ್ತದೆ. ೮ ಲೀಟರ್ ಮೇಲ್ಪಟ್ಟು ಪ್ರತಿ ಲೀಟರ್ ಹಾಲಿಗೆ ೧ ಕಿ. ಗ್ರಾಂ ನಂತೆ ಪಶು ಆಹಾರವನ್ನು ಕೊಟ್ಟರೆ ಸಾಕಾಗುತ್ತದೆ. ಉತ್ತಮ ಗುಣಮಟ್ಟದ ಹಸಿರು ಮೇವನ್ನು ತಿನ್ನಿಸುವುದರಿಂದ ಜೀರ್ಣಕಾರ್ಯ ಸರಿಯಾಗಿ ಆಗಿ ಆರೋಗ್ಯ ಚೆನ್ನಾಗಿರುತ್ತದೆ. ಹಾಲಿನ ಇಳುವರಿ ಹೆಚ್ಚುತ್ತದೆ. ಪಶು ಆಹಾರದ ಖರ್ಚು ಕಡಿಮೆಯಾಗಿ ಲಾಭದ ಪ್ರಮಾಣ ಹೆಚ್ಚಾಗುತ್ತದೆ.

ಬರಡು ಮೇವುಗಳಾದ ಜೋಳದ ದಂಟು, ಬತ್ತದ ಹುಲ್ಲು, ಮೆಕ್ಕೆ ಜೋಳದ ಕಡ್ಡಿ ಮುಂತಾದವುಗಳ ಮೇಲೆ ಅವಲಂಬಿಸಿರುವ ರೈತರು ಇವುಗಳನ್ನು ಯೂರಿಯಾದಿಂದ ಪೌಷ್ಟೀಕೃತಗೊಳಿಸಿ, ಕೊಡಬಹುದು ಅಥವಾ ಇವುಗಳೊಂದಿಗೆ ಕನಿಷ್ಠ ೫-೧೦ ಕಿ. ಗ್ರಾಂ ದ್ವಿದಳ ಧಾನ್ಯಗಳ ಮೇವನ್ನು ತಿನ್ನಿಸಬೇಕು. ಕೇವಲ ಬತ್ತದ ಹುಲ್ಲು ಅಥವಾ ಎನ್. ಬಿ. ೨೧ ಹುಲ್ಲು ಆಧಾರಿತ ಮೇವಿನಿಂದ ದೇಹಕ್ಕೆ ಸುಣ್ಣದ (ಕ್ಯಾಲ್ಸಿಯಂ) ಕೊರತೆ ಆಗುತ್ತದೆ. ಆದ್ದರಿಂದ ಪ್ರತಿದಿನ ೩೦ ಗ್ರಾಂ ಖನಿಜಾಂಶದ ಪುಡಿಯನ್ನು ಪಶು ಆಹಾರದಲ್ಲಿ ಕೊಡಬೇಕು. ಅಥವಾ ಪ್ರತಿ ೫ ಕಿ. ಗ್ರಾಂ ಬತ್ತದ ಹುಲ್ಲಿಗೆ ೧ ಕಿ. ಗ್ರಾಂ ದ್ವಿದಳ ಧಾನ್ಯದ ಮೇವು ಕೊಡಬಹುದು. ಕರಡ, ಒಣಮೇವುಗಳನ್ನು ಸಣ್ಣದಾಗಿ ಕತ್ತರಿಸಿ ಅವುಗಳ ಕೂಡ ದ್ವಿದಳ ಧಾನ್ಯದ ಮೇವನ್ನು ಮಿಶ್ರಣ ಮಾಡಿ ತಿನ್ನಿಸಬೇಕು.

ಪಶು ಆಹಾರವನ್ನು ನೀರಿನಲ್ಲಿ ಕಲೆಸಿ(೧ ಭಾಗ ಆಹಾರ ಹಾಗೂ ೨ ಭಾಗ ನೀರು) ಹಾಲು ಹಿಂಡುವ ಸಮಯದಲ್ಲಿ ಅಥವಾ ಸ್ವಲ್ಪ ಮೊದಲು ಇಡಬೇಕು. ಖನಿಜ /ಲವಣ ಮಿಶ್ರಣದ ಇಟ್ಟಿಗೆಗಳನ್ನು ಕೊಟ್ಟಿಗೆಯಲ್ಲಿ ಇಡಬಹುದು ಅಥವಾ ತೂಗುಹಾಕಬಹುದು ಅಥವಾ ದಿನವೂ ೨೦-೩೦ ಗ್ರಾಂ ಮಿಶ್ರಣವನ್ನು ಪಶು ಆಹಾರದಲ್ಲಿ ಬೆರೆಸಿ ಕೊಡಬಹುದು.

ರಸಮೇವು ಹಾಗೂ ಇತರ ಕೆಲವು ವಾಸನೆಯುಕ್ತ ಮೇವುಗಳನ್ನು ಹಾಲು ಹಿಂಡುವುದಕ್ಕಿಂತ ೫-೬ ಗಂಟೆಗಳ ಒಳಗೆ ತಿನ್ನಿಸಬಾರದು. ಅಲ್ಲದೆ ಮೂಲಂಗಿ, ಎಲೆಕೋಸು, ಈರುಳ್ಳಿ, ಬೆಳ್ಳುಳ್ಳಿಗಳನ್ನು ತಿಂದ ಹಸುಗಳ ಹಾಲೂ ಸಹ ವಾಸನೆಯಿಂದ ಕೂಡಿರುತ್ತದೆ.

ಒಟ್ಟಿನಲ್ಲಿ ಗರ್ಭಧರಿಸಿದ ಮಣಕ ಹಸುವಿಗೆ ಪ್ರತಿದಿನ ಸಾಮಾನ್ಯವಾಗಿ ಈ ಕೆಳಗಿಂತೆ ಆಹಾರವನ್ನು ಕೊಡಬೇಕು.

೧. ೨೦-೩೦ ಕಿ. ಗ್ರಾಂ ಹಸಿರುಮೇವು (ದ್ವಿದಳ ಹಾಗೂ ಏಕದಳ ೧:೨ ಪ್ರಮಾಣದಲ್ಲಿ)

೨. ೫-೧೦ ಕಿ. ಗ್ರಾಂ ಒಣಮೇವು (ಜೋಳದ ದಂಟು, ಬತ್ತದ ಹುಲ್ಲು ಮುಂತಾದುವು)

೩. ೧-೨ ಕಿ. ಗ್ರಾಂ ಪಶು ಆಹಾರ(ಪೋಷಣೆಗೆ ಮಾತ್ರ) ಹಾಲು ಹಿಂಡುತ್ತಿದ್ದರೆ, ಪ್ರತಿ ೩ ಲೀಟರ್ ಹಾಲಿಗೆ ಒಂದು ಕಿ. ಗ್ರಾಂ ಆಹಾರ ಹೆಚ್ಚು ಕೊಡಬೇಕು.

೪. ೨೦-೩೦ ಗ್ರಾಂ ಖನಿಜ -ಲವಣ ಮಿಶ್ರಣ.

೫. ಸಾಕಷ್ಟು ಶುದ್ಧ, ಸ್ವಚ್ಛವಾದ ತಣ್ಣಗಿನ ಕುಡಿಯುವ ನೀರು.

ಈ ರೀತಿ ಉತ್ತಮ ಗುಣಮಟ್ಟದ ಸಮತೋಲನ ಆಹಾರವನ್ನು ಕೊಡದಿದ್ದರೆ, ಹಿಂದೆ ಹೇಳಿದಂತೆ ಹಲವು ತೊಂದರೆಗಳು ಕಾಣಿಸಿಕೊಳ್ಳಬಹುದು. ಹಸುಗಳ ಶಾರೀರಿಕ ಅವಶ್ಯಕತೆಗಿಂತ ಹೆಚ್ಚು ಆಹಾರವನ್ನು ಪೂರೈಸಿದರೆ ಮಾತ್ರ ಅವು ಸರಿಯಾಗಿ ಬೆದೆಗೆ ಬಂದು ಸಂತಾನೋತ್ಪತ್ತಿಯು ಸಾಧ್ಯ. ಏಕೆಂದರೆ, ಹಸುಗಳಿಗೆ ಸಂತಾನೋತ್ಪತ್ತಿ ಸಂತೋಷದಾಯಕವಾಗಿದ್ದರೂ ಸಹ ಶರೀರಕ್ಕೆ ಭಾರವಾಗಿರುತ್ತದೆ.

೨. ಮುಂಜಾಗ್ರತಾ ಲಸಿಕೆ ಹಾಕಿಸುವುದು: ಗರ್ಭದರಿಸಿದ ೫ ರಿಂದ ೭ ತಿಂಗಳುಗಳೊಳಗಾಗಿ ಮಣಕಗಳಿಗೆ /ಹಸುಗಳಿಗೆ ಗಳಲೆರೋಗ, ಚಪ್ಪೆರೋಗ, ಕಾಲು ಬಾಯಿಜ್ವರ, ಥೈಲೇರಿಯಾ ಮುಂತಾದ ರೋಗಗಳ ಪ್ರತಿಬಂಧಕ ಲಸಿಕೆಗಳನ್ನು ಹಾಕಿಸಬೇಕು.

೩. ಜಂತುಹುಳುಗಳಿಗೆ ಚಿಕಿತ್ಸೆ:   ಆಕಳಿನಲ್ಲಿ ಹಾಗೂ ಮುಂದೆ ಹುಟ್ಟುವ ಕರುವಿನಲ್ಲಿ ಜಂತುಹುಳುಗಳನ್ನು ನಾಶಮಾಡಲು ಗರ್ಭಧರಿಸಿದ ೬ ನೇ ತಿಂಗಳಿನಲ್ಲಿ ಜಂತುನಾಶಕ ಔಷಧಿಯನ್ನು ಹಾಕಿಸಬೇಕು ಹಾಗೂ ಹೊರಪರೋಪಜೀವಿಗಳ ವಿರುದ್ದ ಸೂಕ್ತ ಉಪಚಾರ ಮಾಡಬೇಕು. ಈ ಕ್ರಮ ಕೈಗೊಳ್ಳದಿದ್ದರೆ, ತಿಂದ ಆಹಾರವೆಲ್ಲಾ ಜಂತುಹುಳು ಹಾಗೂ ಹೊರ ಪರೋಪಜೀವಿಗಳ ಪಾಲಾಗಿ ಆಕಳುಗಳು ಅಶಕ್ತವಾಗಿ, ರಕ್ತಹೀನತೆಯಿಂದ ಬಳಲಿ ಸಾಯಲೂಬಹುದು.

೪. ಸಾಮಾನ್ಯ ಮುಂಜಾಗ್ರತೆಗರ್ಭಧರಿಸಿದ ದನಗಳನ್ನು ಹಾಯುವ/ಒದೆಯುವ ದನಗಳ ಕೂಡ ಕಟ್ಟಬಾರದು ಹಾಗೂ ದಿನದ ೨೪ ಗಂಟೆಗಳೂ ಕಟ್ಟಿದಲ್ಲಿಯೇ ಕಟ್ಟಬಾರದು ದಿನವೂ ೨-೩ ಕಿ. ಮೀಟರಿನಷ್ಟು ಅಡ್ಡಾಡಿಸಬೇಕು. ಹಾಲು ಹಿಂಡುವ ಆಕಳುಗಳನ್ನು ಸಾಧ್ಯವಿದ್ದಷ್ಟು ೧೨ ತಾಸುಗಳ ಅಂತರದಲ್ಲಿಯೇ ಹಿಂಡಬೇಕು. ಹಿಂಡುವುದಕ್ಕಿಂತ ಮೊದಲು ಕೈಗಳನ್ನು ಹಾಗೂ ಕೆಚ್ಚಲನ್ನು ಸ್ವಚ್ಛ ನೀರಿನಿಂದ ತೊಳೆಯಬೇಕು. ಕೈಗಳಲ್ಲಿ ಉಗುರುಗಳಿದ್ದರೆ ಹಿಂಡುವಾಗ ಕೆಚ್ಚಲಿಗೆ /ಮೊಲೆ ತೊಟ್ಟುಗಳಿಗೆ ಗಾಯವಾಗಬಹುದು. ಹಿಂಡುವಾಗ ಆಕಳುಗಳಿಗೆ ಬಡಿಯುವುದು/ ಹೊಡೆಯುವುದನ್ನು ಪೂರ್ಣಗೊಳಿಸಬೇಕು. ಕೆಲವು ಆಕಳುಗಳಲ್ಲಿ ಕೆಚ್ಚಲಿನ ಮುಂಭಾಗದಿಂದ ಎದೆಗೂಡಿನವರೆಗೆ ನೀರು ಸೇರಿಕೊಂಡು ಊದಿಕೊಂಡಿರುತ್ತದೆ. ಇದಕ್ಕೆ ಕೆಲವರು “ಹಾಲು ಇಳಿದಿದೆ” ಎನ್ನುತ್ತಾರೆ. ಅದು ತಪ್ಪು ಆಕಳಿನ ಆಹಾರದಲ್ಲಿನ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಬೇಕು. ಸೂಕ್ತ ಉಪಚಾರ ಮಾಡಿಸಬೇಕು.

೫. ಹಾಲನ್ನು ಇಂಗಿಸುವಿಕೆ(ಬತ್ತಿಸುವಿಕೆ) :   ಗರ್ಭಧರಿಸಿದ ಹಸುಗಳನ್ನು ಗರ್ಭಧರಿಸಿದ ೭ ತಿಂಗಳುಗಳವರೆಗೆ ಅಥವಾ ಕರು ಹಾಕುವುದಕ್ಕಿಂತ ೬೦ ರಿಂದ ೭೦ ದಿನಗಳು ಹಿಂದಿನವರೆಗೆ ಹಾಲು ಹಿಂಡಬಹುದು. ನಂತರ ಹಾಲನ್ನು ಬತ್ತಿಸಬೇಕು. ಕೆಚ್ಚಲಿನಿಂದ ಹಾಲನ್ನು ಹಿಂಡುವುದನ್ನು ಕ್ರಮೇಣ ಬಿಟ್ಟು ೨-೩ ದಿನಗಳಲ್ಲಿ ಹಾಲು ಶೇಖರಣೆ ನಿಂತು ಕೆಚ್ಚಲು ಬತ್ತಿಹೋಗುತ್ತದೆ. ನಂತರ ಮೊಲೆ ತೊಟ್ಟುಗಳಲ್ಲಿ ಔಷಧಿ ಹಾಕಬೇಕು.

ಈ ರೀತಿ ಹಾಲನ್ನು ಇಂಗಿಸುವಿಕೆಯು ಮುಂದಿನ ಸೂಲಿನ ಹಾಲಿನ ಉತ್ಪಾದನೆಯ ದೃಷ್ಟಿಯಿಂದ ಹಾಗೂ ಕರುವಿನ ಬೆಳವಣಿಗೆಯ ದೃಷ್ಟಿಯಿಂದ ಬಹಳ ಮುಖ್ಯ. ಏಕೆಂದರೆ, ಕರುವಿನ ಬೆಳವಣಿಗೆಯ ಕೊನೆಯ ೨ ತಿಂಗಳುಗಳಲ್ಲಿ ಮೊದಲಿನ ೭ ತಿಂಗಳಿಗಿಂತ ೨ ಪಟ್ಟು ಜಾಸ್ತಿ ಇರುತ್ತದೆ. ಆದ್ದರಿಂದ ಹಾಲನ್ನು ಬತ್ತಿಸಿದ ಮೇಲೆ ಸಹ ಆಕಳುಗಳಿಗೆ ಈ ಮುಂದಿನ ಪ್ರಮಾಣದಲ್ಲಿ ಸಮತೋಲನ ಆಹಾರವನ್ನು ಕೊಡುವುದು ಅವಶ್ಯ:(೧) ೨೦-೨೫ ಕಿ. ಗ್ರಾಂ ಹಸಿರು ಮೇವು (೨) ೩-೫ ಕಿ. ಗ್ರಾಂ ಒಣಮೇವು ಹಾಗೂ (೩) ೮ ನೇ ತಿಂಗಳಿನಲ್ಲಿ ೧. ೫ ಕಿ. ಗ್ರಾಂ, ೯ ನೇ ತಿಂಗಳಿನಲ್ಲಿ ೨. ೦ ಕಿ. ಗ್ರಾಂ ಹಾಗೂ ಕೊನೆಯ ವಾರದಲ್ಲಿ ೨. ೫ ಕಿ. ಗ್ರಾಂ ಹಿಂಡಿ ಮಿಶ್ರಣ ಮತ್ತು ೩೦ ಗ್ರಾಂ ಖನಿಜ ಮಿಶ್ರಣ (ಹಿಂಡಿ ಮಿಶ್ರಣದಲ್ಲಿ ಕಲಸಿ) ಕೆಲವರು “ಹಸು ಹಾಲು ಕೊಡದಿದ್ದಾಗ ಹಿಂಡಿ ಮಿಶ್ರಣದ ಅವಶ್ಯಕತೆ ಇಲ್ಲ” ಎಂದು ತಿಳಿಯುವುದು ತಪ್ಪು.

೬. ಕರುಹಾಕುವ ಸ್ವಲ್ಪ ಮುಂಚಿನ ಮುಂಜಾಗ್ರತೆಕರು ಹಾಕಲು ಇನ್ನೂ ೧೦-೧೫ ದಿನಗಳಿವೆ ಎನ್ನುವಾಗ, ಆಕಳನ್ನು ಸ್ವಚ್ಛವಾದ, ವಿಶಾಲವಾದ ಜಾಗಕ್ಕೆ ಸ್ಥಳಾಂತರಿಸಬೇಕು. ಇದಕ್ಕೂ ಮೊದಲು, ಈ ಜಾಗದಲ್ಲಿನ ನೆಲಕ್ಕೆ, ಮೇವಿನ ತೊಟ್ಟಿಗೆ ಹಾಗೂ ಗೋಡೆಗಳಿಗೆ ಸುಣ್ಣ ಬಳಿದಿರಬೇಕು. ಅಂದರೆ ಸೋಂಕು ತರುವ ಕ್ರಿಮಿಗಳನ್ನು ನಾಶಪಡಿಸಬಹುದು. ಈ ಜಾಗದಲ್ಲಿ ನೆಲ ಜಾರುವ ಹಾಗೆ ಇರಬಾರದು. ನೆಲದ ಮೇಲೆ ಯಾವಾಗಲೂ ಒಣಹುಲ್ಲು ಇರುವಂತೆ ನೋಡಿಕೊಳ್ಳಬೇಕು.

ಕರು ಹಾಕುವ ೧೫ ದಿನಗಳ ಮೊದಲೇ ಆಕಳಿನ ಹೊರಜನನಾಂಗವು ದಪ್ಪವಾಗಿರುತ್ತದೆ. ಅದರ ಮೇಲೆ ಗೀರುಗಳಿದ್ದರೆ ಯೋನಿನಾಳವಾಗಲೀ ಅಥವಾ ಗರ್ಭಕೋಶವಾಗಲೀ ಸುರುಳಿ ಸುತ್ತಿಕೊಂಡಿರಬಹುದಾಗಿರುತ್ತದೆ. ಹೀಗಿದ್ದರೆ, ಕರು ಹಾಕಲು ತೊಂದರೆಯಾಗಬಹುದು. ಆದ್ದರಿಂದ ಪಶುವೈದ್ಯರಿಂದ ಪರೀಕ್ಷಿಸಿಕೊಳ್ಳಬೇಕು.

೭. ಕರು ಹಾಕುವ ಸಮಯ:   ಕರು ಹಾಕುವ ಮೊದಲನೇ ಹಂತದ ಅವಧಿ ೪ ರಿಂದ ೮ ಗಂಟೆಗಳು (ಮಣಕಗಳಲ್ಲಿ ಇನ್ನೂ ಹೆಚ್ಚು) . ಈ ಅವದಿಯಲ್ಲಿ ಆಕಳು ಪದೇ ಪದೇ ಮಲಗುವುದು, ಏಳುವುದು, ಹೊಟ್ಟೆಯ ಕಡೆ  ನೋಡುವುದು, ಹೊಟ್ಟೆಯನ್ನು ಕುಗ್ಗಿಸುವುದು, ಕಾಲುಗಳಿಂದ ನೆಲವನ್ನು ಕೆರೆಯುವುದು ಮಾಡುತ್ತವೆ. ಈ ಸಮಯದಲ್ಲಿ ಕರುವಿನ ಮಾಸುಚೀಲದ ಹೊರಗಿನ ನೀರು ತುಂಬಿಕೊಂಡಿರುವ ನೀಲಿ ಬಣ್ಣದ ಚೀಲವು ಹೊರಜನನಾಂಗದ ತುಟಿಗಳ ಒಳಗೆ ಕಾಣುತ್ತದೆ. ಇದು ಕಾಣದಿದ್ದರೆ, ಗರ್ಭಕೋಶ ಸುರುಳಿ ಸುತ್ತಿರಬಹುದು ಅಥವಾ ಗರ್ಭಕೋಶದ ಕಂಠ ಅಗಲವಾಗಿಲ್ಲ ಎಂದು ತಿಳಿದು ಪಶುವೈದ್ಯರ ನೆರವು ಪಡೆಯಬೇಕು.

ಎರಡನೇ ಹಂತದ ಅವಧಿ ಅರ್ಧ ಗಂಟೆಯಿಂದ ೨ ಗಂಟೆಗಳು. ಈ ಅವಧಿಯಲ್ಲಿ ನೀಲಿ ಚೀಲ ಹಾಗೂ ಹಳದಿ ಚೀಲಗಳು ಒಡೆದು ಕರುವಿನ ಮುಂಗಾಲುಗಳು ಹಾಗೂ ತಲೆ ಹೊರಗೆಬಂದು, ಸ್ವಲ್ಪ ಹೊತ್ತಿನಲ್ಲಿ ಕರು ಪೂರ್ಣ ಹೊರಗೆ ಬರುತ್ತದೆ. ಕೆಲವು ಅಪರೂಪದ ಸಂದರ್ಭಗಳಲ್ಲಿ ಕರುವಿನ ಹಿಂಗಾಲುಗಳು ಮೊದಲು ಹೊರಗೆ ಬಂದು ಹಿಂದಿನಿಂದ ಪ್ರಸವವಾಗುತ್ತದೆ. ಈ ಎರಡೂ ಸಂದರ್ಭಗಳಲ್ಲಿ ಕರುವಿನ ಯಾವುದಾದರೂ ಒಂದು ಅಥವಾ ಎರಡು ಕಾಲುಗಳು ಸ್ವಲ್ಪ ಮಡಿಚಿದ್ದರೆ ಅಥವಾ ತಲೆಯು ಪಕ್ಕಕ್ಕೆ ಅಥವಾ ಕೆಳಗೆ ವಾಲಿದ್ದರೆ, ಕರುವು ತಾನಾಗಿ ಹೊರಬರಲು ಸಾಧ್ಯವಾಗುವುದಿಲ್ಲ. ಆಗ ಮನುಷ್ಯರ ಸಹಾಯ ಅತ್ಯಗತ್ಯ. ಹಿಂದಿನ ಕಾಲು ಮುಂದಾಗಿರುವ ಪ್ರಸವದ ಸಂದರ್ಭದಲ್ಲಿ ವಿಶೇಷವಾಗಿ ಜೀವಂತವಾಗಿ ಕರುವನ್ನು ಹೊರಗೆ ತೆಗೆಯಲು ತಜ್ಞ ಸಿಬ್ಬಂದಿಯ ಸಹಾಯ ಅವಶ್ಯ.

ಜೀವಂತ ಕರುವಿನ ತಲೆ ಮತ್ತು ಮುಂಗಾಲುಗಳು ಹೊರಗೆ ಬಂದು ಕರು ಹುಟ್ಟಿದ ತಕ್ಷಣ ಕರುವಿನ ಮೂಗನ್ನು ಸ್ವಚ್ಛ ಕೈಗಳಿಂದ ಹಿಂಡಿ, ಅದರಲ್ಲಿರುವ ಲೋಳೆಯನ್ನು ತೆಗೆದು, ಕರು ಸರಾಗವಾಗಿ ಉಸಿರಾಡಲು ಅವಕಾಶ ಮಾಡಿಕೊಡಬೇಕು. ಕರು ಹಿಂಗಾಲುಗಳಿಂದ ಹೊರಗೆ ಬರುತ್ತಿದ್ದರೆ, ಹೊಕ್ಕಳಿನ ಬಳ್ಳಿ (ರಕ್ತನಾಳಗಳು) ತುಂಡಾಗದಂತೆ ಜಾಗರೂಕತೆಯಿಂದ ಸಾಧ್ಯವಾದಷ್ಟು ಬೇಗನೆ ಕರುವನ್ನು ಹೊರಗೆ ಎಳೆಯಬೇಕು ಪ್ರಯತ್ನಿಸಿ ಮಾಸು ಚೀಲದಲ್ಲಿನ ನೀರನ್ನು ಶ್ವಾಸಕೋಶಗಳ ಒಳಗೆ ಎಳೆದುಕೊಳ್ಳವುದರಿಂದ ಅದು ಸತ್ತು ಹೋಗುವ ಸಾಧ್ಯತೆಗಳೇ ಹೆಚ್ಚು.

೮. ಹುಟ್ಟಿದ ಕರುಗಳ ನಿರ್ವಹಣೆ: ಕರುವನ್ನು ಸ್ವಚ್ಛ ಬಟ್ಟೆಯ ಮೇಲೆ ಮಲಗಿಸಬೇಕು ಹಿಂಗಾಲುಗಳನ್ನು ಹಿಡಿದು ಮೇಲೆತ್ತಿ ಕರುವಿನ ಮೂಗು  ಹಾಗೂ ಶ್ವಾಸಕೋಶದಲ್ಲಿರಬಹುದಾದ ಲೋಳೆಯನ್ನು ಸ್ವಚ್ಛಗೊಳಿಸಬೇಕು. ಸ್ವಚ್ಛ ಬಟ್ಟೆಯಿಂದ ಕರುವಿನ ಪೂರ್ಣದೇಹವನ್ನು ಒರೆಸಬೇಕು ಅಥವಾ ತಾಯಿಯು ಕರುವನ್ನು ನೆಕ್ಕಲುಅವಕಾಶ ಮಾಡಿಕೊಡಬೇಕು. ಕರುವಿನ ದೇಹದಿಂದ ೪-೫ ಸೆಂ. ಮೀ. ಬಿಟ್ಟು ಹೊಕ್ಕಳು ಬಳ್ಳಿಯನ್ನು ಕತ್ತರಿಸಿ ದಾರಕ್ಕೆ ಟಿಂಚರ್ ಅಯೊಡಿನ್ ಹಚ್ಚಬೇಕು. ೫-೬ ದಿನಗಳವರೆಗೆ ದಿನವೂ ೨-೩ ಸಲ ಈ ತರಹ ಔಷಧಿಯನ್ನು ಹಚ್ಚುತ್ತಿರಬೇಕು. ಆಗ ಹೊಕ್ಕಳು ಬಳ್ಳಿಯು ಒಣಗಿ ತನ್ನಿಂದ ತಾನೇ ಬಿದ್ದು ಹೋಗುತ್ತದೆ. ಕರು ಹುಟ್ಟಿ೧೫-೩೦ ನಿಮಿಷಗಳಲ್ಲಿ ಸುಮಾರು ೫೦೦ ಮಿ. ಲೀ. ಗಿಣ್ಣದ ಹಾಲನ್ನು ಕುಡಿಸಬೇಕು. ಮಾಸು ಬೀಳುವವರೆಗೆ ಹಾಲನ್ನು ಹಿಂಡದೆ ಇರುವ ತಪ್ಪು ಕಲ್ಪನೆ ಕೆಲವರಲ್ಲದೆ. ಮೊದ; ೨-೩ ದಿಗಳಲ್ಲಿ ಸಾಧ್ಯವಿದ್ದಷ್ಟು ಹೆಚ್ಚು ಅಲ ಗಿಣ್ಣದ ಹಾಲನ್ನು ಕುಡಿಯಲು ಬಿಡಬೇಕು. ಹುಟ್ಟಿದ ಕರುವಿಗೆ ಇರುವ ಚೂಪಾದ ಹಳದಿ ಗೊರಸಗಳನ್ನು ಕೈಯಿಂದ ಚಿವುಟದೆ ಬ್ಲೇಡಿನಿಂದ ಸರಿಯಾಗಿ ಕತ್ತರಿಸಬೇಕು ಕರುವಿಗೆ ಕಣ್ಣು ಕಾಣಿಸುವ ಬಗ್ಗೆ ಹಾಗು ಮಲದ್ವಾರ ಇರುವುದನ್ನು ಖಾತ್ರಪಡಿಸಿಕೊಳ್ಳಬೇಕು ಹೊಕ್ಕಳ ಭಾಗದಲ್ಲಿ ಅಥವಾ ತೊಡೆಗಳ ಸಂದಿಯಲ್ಲಿ ಹರ್ನಿಯಾ ಇದ್ದರೆ, ಅಂತಹ ಕರುಗಳನ್ನು ಮುಂದಕ್ಕೆ ಸಾಕುವುದರಿಂದ ಪ್ರಯೋಜನವಿಲ್ಲ.