ಸಂತೇಲೀ ಕಂಡೇನು ಕೆಂಪೀನೀ ಕಂದಾನಾ
ಸಂಪೀಗೇ ಹೂವಾ ಮುಡಿಯೋಳಾ
ಸಂಪೀಗೇ ಹೂವಾ ಮುಡಿಯೋ ಕಂದಮ್ಮಾನಾ
ಸಂತಿಟ್ಟೂ ನಾನು ಕಳುವೇನೂ

ಹರಗೀದ್ಹೊಲಾದಲ್ಲಿ ಮರುಗಾವ ಕುಯ್ಯೋಳೆ
ಹರಳಿಕ್ಕಿದ್ವಾಲೇ ಕಿವಿಯೋಳೇ – ಕಂದಮ್ಮ
ಮರುಗಾ ಕೂದಾಳೇ ಶಿವನಿಗೇ

ಉತ್ತಾ ಹೊಲಾದಲ್ಲಿ ಪತ್ತಾರೆ ಕುಯ್ಯೋಳೆ
ಮುತ್ತಿಕ್ಕಿದ್ವಾಲೇ ಕಿವಿಯೋಳೇ – ಕಂದಮ್ಮ
ಪತ್ರೇಕೊಯ್ದ್ಯವ್ವಾ ಶಿವನಿಗೇ

ಹೊಳೆಯಿಂದಾಚ್ಯೋಳೆ ಹೊಂಗೇ ತೋಪ್ನೋಳೇ
ಆಲಾಜಾಲಾದಾ ಮರದಾಡೀಯಾ – ಹೊನ್ನಾಲೂ
ವಾಲಾಡೀ ಮಗ್ಗಾ ಮುಡಿದಾಳೂ

ಒಪ್ಪತ್ತೀನೂಟಾ ಚುಚ್ಚೀದ ಬಾಯ್ಬೀಗ
ಉಕ್ಕೊ ಹೊಳೆಯಲ್ಲಿ ಬರಲಾರೆ – ಹೊನ್ನಾಲು
ಒಪ್ಪಿಸಿಕೋತಾಯೀ ಹರಕೇಯಾ

ಒಪ್ಪಿಸಿಕೊಳ್ಳೋದಕ್ಕೆ ಚಿಕ್ಕವ್ನ ಮಗಳೇನೇ
ಸುತ್ತೀಬಾ ಕಂದಾ ಪವಳೀಯಾ
ಸುತ್ತಿಬಾ ಕಂದಾ ಪವಳೀ ಬಾಗಿಲ ಮುಂದೆ
ಬಾಳೇಚಿಪ್ಪು ಸಹಿವಾಗಿ ಗುಡಿಗ್ಹೋಗೂ

ಕಾಕಂಬಿ ಸೀರೇ ಕಣಕಾಲೀಗುರಸಾಣಾ
ಕೆಣಕಿದರೆ ಅವಳೂ ಕಿಡಗಣ್ಣೀ – ಹೊನ್ನಾಲೂ
ಮಲೆತಾರೆ ಮನೆಯಾ ಮುರಿದಾಳೂ

ಬಂಡೀಕಾಣೇ ಬಂಡಿ ಕೊಂಡೀ ಕಾಣೆ ಕಬ್ಣ
ಬಂಡೀಯಾಮೇಲೆ ಬರುವಾಳೇ
ಬಂಡೀಯಾ ಮೇಲೆ ಬರುವಾ ಹೊನ್ನಾಲ್ದಮ್ನ
ಬಂಡೀ ಹೊಳೆದಾವೂ ಬಿಸಿಲೀಗೇ

ಗಾಲೀ ಕಾಣೇ ಗಾಲೀ ಕೀಲೂ ಕಾಣೇ ಕಬ್ಣ
ಗಾಲೀಯಾ ಮೇಲೇ ಬರುವೋಳೇ
ಗಾಲೀ ಮೇಲ್ಬರ‍್ವೊ ತಾಯಿ ಹೊನ್ನಾಲ್ದಮ್ಮ
ವಾಲೇ ಹೊಳೆದಾವೂ ಬಿಸಲೀಗೇ