ಮಾರವಾಡಿ, ಗುಜ್ಜರ ಹಾಗೂ ಲಂಬಾಣಿಗರು ಮೂಲತಃ ರಾಜಸ್ಥಾನದ ಪರಂಪರೆಯವರೆಂದು ಹೇಳುತ್ತಾರೆ. ನಾಲ್ಕು ಶತಮಾನಗಳ ಹಿಂದೆ ಮಾತೃಭೂಮಿ ರಾಜಸ್ಥಾನವನ್ನು ತೊರೆದು ತಮಗೆ ಅನುಕೂಲವಾದ ಪ್ರದೇಶದಲ್ಲಿ ಈ ಮೂರು ಗುಂಪುಗಳು ಬಂದು ನೆಲೆ ನಿಂತವು.

ಮೂರು ಸಮಾಜಗಳ ಜನರ ವೇಷಭೂಷಣ, ಭಾಷೆ, ಆಚಾರ-ವಿಚಾರಗಳಲ್ಲಿ ಸಾಕಷ್ಟು ಸಾಮ್ಯತೆಯಿರುವುದನ್ನು ಕಾಣಬಹುದು. ಇವರು ಮಾತೃಭೂಮಿಯಾದ ರಾಜಸ್ಥಾನವನ್ನು ತೊರೆದು ಬಂದಿದ್ದರು ಒಂದೇ ಕಡೆಗೆ ನೆಲೆಸಿರುವುದಿಲ್ಲ. ಮಾರವಾಡಿ ಹಾಗೂ ಗುಜ್ಜರು ಲಂಬಾಣಿಗಳಂತೆ ಕಾಡು ಸೇರದೆ, ನಾಡಿಗೆ ಬಂದು ವ್ಯಾಪಾರ ಮಾಡುತ್ತ ಜೀವನ ಸಾಗಿಸಿದರು. ಲಂಬಾಣಿಗಳು ಸಂಚಾರಿ ಜೀವನದಿಂದ ತಪ್ಪಿಸಿಕೊಂಡು ಊರುಗಳಿಂದ ದೂರದ ಕಾಡು ಕಣಿವೆಗಳಲ್ಲಿ ಜಾನುವಾರುಗಳನ್ನು ಸಾಕಿಕೊಂಡು ಅಲೆಮಾರಿ ಜೀವನ ಶೈಲಿಯನ್ನು ಅಳವಡಿಸಿಕೊಂಡರು. ಇದು ಈ ಗುಂಪಿನವರು ನಡೆದುಬಂದ ಹಿನ್ನೋಟ.

ಒಂದು ಐತಿಹ್ಯದ ಪ್ರಕಾರ “ಲಂಬಾಣಿ” ಮತ್ತು “ಮಾರವಾಡಿ” ಇಬ್ಬರು ತಪಸ್ಸಿಗೆ ಕುಳಿತುಕೊಂಡರು. ಶಿವನು ಯಾವ ಕಾರಣಕ್ಕೆ ತಪಸ್ಸಿಗೆ ಕುಳಿತಿರುವಿರೆಂದು ಕೇಳಿದನಂತೆ. ಆಗ ಮಾರವಾಡಿ ತನ್ನ ಸಂತಾನ ಇರುವವರೆಗೆ ಅನ್ನದ ಕೊರತೆ ಆಗಬಾರದೆಂದು ತಪಸ್ಸಿಗೆ ಕುಳಿತಿದ್ದೇನೆ ಎಂದು ಹೇಳಿದನಂತೆ. ಆಮೇಲೆ ಲಂಬಾಣಿಗೆ ಕೇಳಲಾಗಿ, ತನಗೆ “ಬಾಟಿ(ರೊಟ್ಟಿ) ಕೊಡಬೇಕೆಂದು ಕೇಳಿದನಂತೆ. ಆಗ ಶಿವನು ಇಬ್ಬರಿಗೂ “ವರ” ಕೊಟ್ಟು ಆಶೀರ್ವದಿಸಿ ಮಾಯವಾದನು. “ಮಾರವಾಡಿ” ಮತ್ತು “ಲಂಬಾಣಿ” ತಮಗೆ “ಶಿವ” ವರ ಕೊಟ್ಟನೆಂದು ತಪಸ್ಸನ್ನು ಅಲ್ಲಿಗೆ ನಿಲ್ಲಿಸಿ, ತಮ್ಮ ದಿನನಿತ್ಯದ ಕಾಯಕದಲ್ಲಿ ತೊಡಗಿಕೊಂಡರು.

ಕೆಲವು ದಿನಗಳಾದ ಮೇಲೆ ಮತ್ತೆ “ಮಾರವಾಡಿ” ತಪಸ್ಸಿಗೆ ಕುಳಿತುಕೊಂಡನು. ಅವನನ್ನು ನೋಡಿದ ಲಂಬಾಣಿ, ತಾನೂ ತಪಸ್ಸಿಗೆ ಕುಳಿತುಕೊಂಡನು. ಶಿವನು ಇಬ್ಬರ ಬಳಿಗೆ ಬಂದು ಮೊದಲು ಮಾರವಾಡಿಗೆ ಕೇಳಲಾಗಿ, ತನಗೆ ಮೊದಲನೆಯ ಸಲ ತಪಸ್ಸಿಗೆ ಕುಳಿತಾಗ ಅನ್ನ ಕೊಟ್ಟಿದ್ದೀರಿ. ಈ ಸಲ ಧನ(ಸಂಪತ್ತು) ಕೊಡಬೇಕೆಂದು ಕೇಳಿಕೊಂಡನು. ಅದಕ್ಕೆ ಶಿವನು ತಥಾಸ್ತು ಎಂದು ಆಶೀರ್ವದಿಸಿದನು. ಆ ಮೇಲೆ ಲಂಬಾಣಿಗೆ ಕೇಳಲಾಗಿ “ತಾವು ಮೊದಲನೆಯ ವರದಲ್ಲಿ “ಬಾಟಿ” (ರೊಟ್ಟಿ) ಕೊಟ್ಟಿದ್ದೀರಿ, ಈ ಸಲ ಬೋಟಿ (ಮಾಂಸ) ಕೊಡಬೇಕೆಂದು ಕೇಳಿಕೊಂಡನು. ಶಿವನು ಆಗಲಿ ಎಂದು ಆಶೀರ್ವದಿಸಿ ಮಾಯವಾದನು. ಇಬ್ಬರೂ ತಮ್ಮ ಬೇಡಿಕೆ ಈಡೇರಿತೆಂದು ಶಿವನನ್ನು ಸ್ಮರಿಸುತ್ತ ಅಲ್ಲಿಂದ ಹೊರಟರು.

ಮುಂದೆ “ಮಾರವಾಡಿ” ಮತ್ತು “ಲಂಬಾಣಿ” ತಮ್ಮ ತಮ್ಮ ಕಾಯಕದಲ್ಲಿ ತೊಡಗಿಕೊಂಡರು. ಮಾರವಾಡಿ ಹಗಲು ರಾತ್ರಿಯೆನ್ನದೆ ಕಷ್ಟದಿಂದ ದುಡಿದು ಸಂಪಾದನೆ ಮಾಡಿದನು. ಲಂಬಾಣಿ ಕಾಡಿನಲ್ಲಿ ಅಲೆದು ಬೇಟೆಯಾಡುತ್ತ, “ಬಾಟಿ-ಬೋಟಿ” (ಮಾಂಸಾಹಾರದ) ಊಟ ಮಾಡುತ್ತ ಜೀವನ ಸಾಗಿಸಿದನು. ಕೆಲವೊಮ್ಮೆ ಬೇಟೆ ಸಿಗದಿದ್ದಾಗ ಸಾಲ ಸೋಲ ಮಾಡಿ ಮಾಂಸಾಹಾರ ತಿನ್ನತೊಡಗಿದ. ಮಾಂಸಾಹಾರದ ಊಟವನ್ನೇ ಅವಲಂಬಿಸಿಕೊಂಡು ಬೇಟೆಯ ಜೀವನ ಆರಂಭಿಸಿದ ಲಂಬಾಣಿ, ಬಡತನ ರೇಖೆಯಿಂದ ದಾಟಿ ಹೊರಬರುವುದು ಕಷ್ಟವಾಯಿತು.

ಹಲವಾರು ವರ್ಷಗಳು ಕಳೆದ ಮೇಲೆ ಲಂಬಾಣಿಯ ಮಗಳು ಪ್ರಾಪ್ತ ವಯಸ್ಸಿಗೆ ಬಂದಳು. ದೂರದ ಸಂಬಂಧಿಯ ಮಗನ ಜೊತೆಗೆ ನಿಶ್ಚಯ ಕಾರ್ಯ ಮಾಡಿದನು. ಮದುವೆ ಕಾರ್ಯಕ್ಕೆ ಹಣ ಎಲ್ಲಿಂದ ತರುವುದು ಎಂದು ಲಂಬಾಣಿಗೆ ಚಿಂತೆ ಆಯಿತು. ಆಗ ನೆನಪಿಗೆ ಬಂದವನು “ಮಾರವಾಡಿ” ಸಹೋದರ. ಅವನಿಗೆ ಕೇಳಬೇಕೆಂದು ಅವನ ಬಳಿಗೆ ಬಂದು ವಿಷಯ ಹೇಳಿದನು. ಮಾರವಾಡಿ ಒಂದು ತಿಂಗಳೊಳಗಾಗಿ ಹಣ ಮರಳಿ ಕೊಡಬೇಕೆಂದು ಷರತ್ತಿನ ಮೇಲೆ ಕೊಟ್ಟನು. ಮಾರವಾಡಿಯಿಂದ ಹಣ ತಂದು ಲಂಬಾಣಿ ತನ್ನ ಮಗಳ ಮದುವೆ ಕಾರ್ಯದಲ್ಲಿ ತೊಡಗಿಕೊಂಡನು. ಲಂಬಾಣಿ ತನ್ನ ಮಗಳ ಮದುವೆಯ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಮುಗಿಸುವವರೆಗೆ ಒಂದು ತಿಂಗಳಾಯಿತು. ಮದುವೆಯಾಗಿ “ದಿಬ್ಬಣ” ಕಳಿಸುವ ದಿನ, ಮಾರವಾಡಿ ಬಂದು ಸಾಲದ ಹಣ ಕೊಡುವಂತೆ ಕೇಳಿದನು. ಆಗ ಲಂಬಾಣಿ ಈಗ ತಾನೇ, “ದಿಬ್ಬಣ” ಕಳಿಸುತ್ತಿರುವೆ ಇನ್ನು ಕೆಲವು ದಿನಗಳವರೆಗೆ ತಡೆಯಬೇಕೆಂದು ಕೇಳಿಕೊಂಡನು. ಅದಕ್ಕೆ ಮಾರವಾಡಿ ಒಪ್ಪಲಿಲ್ಲ. ಆಗ ಮದುವಣಗಿತ್ತಿಗೆ ಈ ವಿಷಯ ಗೊತ್ತಾಗಿ, ಮಾರವಾಡಿಯ ಬಳಿ ಬಂದು ಅವನ ಕೊರಳ ತಬ್ಬಿಕೊಂಡು, “ಮಾರವಾಡಿ ವೀರಾ ಅಹಿಯಾ” (ಮಾರವಾಡಿ ಸಹೋದರ) ಎಂದು ಅಳುತ್ತ, ತನ್ನ ಕುಟುಂಬದ ನೋವನ್ನು “ಹವೇಲಿ” (ಅಳುವ ಸಂಪ್ರದಾಯ) ಮುಖಾಂತರ ಹೇಳತೊಡಗಿದಳು. ಅವಳ ಕುಟುಂಬದ ನೋವನ್ನು ಅರ್ಥ ಮಾಡಿಕೊಂಡ ಮಾರವಾಡಿ ಮದುವಣಗಿತ್ತಿಗೆ ಸಮಾಧಾನ ಮಾಡಿ ನೆರೆದ ಲಂಬಾಣಿಗಳಿಗೆ ಒಂದು ಕರಾರು ಹಾಕಿದನು. ಲಂಬಾಣಿ ಸಮಾಜ ಇರುವವರೆಗೆ ಮದುವೆ ಮುಗಿದು “ದಿಬ್ಬಣ” ಕಳಿಸುವ ಸಂದರ್ಭದಲ್ಲಿ ಮದುವಣಗಿತ್ತಿಯ ಬಾಯಲ್ಲಿ ತಮ್ಮ ಮಾರವಾಡಿ ಹೆಸರು ಮಂತ್ರದಂತೆ ಇರಬೇಕು”

[1] ತಮಗೆ ಕೊಟ್ಟಿರುವ ಸಾಲದ ಹಣ ಬೇಡವೆಂದು ಹೇಳಿದನಂತೆ. ಅದಕ್ಕೆ ಲಂಬಾಣಿಗಳು ಒಪ್ಪಿಕೊಂಡರು.”[2] ಅಂದಿನಿಂದ….. ಲಂಬಾಣಿಗಳಲ್ಲಿ ಮದುವೆ ಮುಗಿದು “ದಿಬ್ಬಣ” ಕಳಿಸುವ ಸಂದರ್ಭದಲ್ಲಿ “ಹವೇಲಿ ಗೀತೆ” ಹಾಡುವಾಗ ಮದುವಣಗಿತ್ತಿ ಮೊದಲಿಗೆ ಈ ರೀತಿ ಹಾಡುತ್ತಾಳೆ.

“ಮಾರವಾಡಿ ವೀರಾ ಅಹಿಯಾ”
ಹೋಟೋ ಫರ ಆಂವುತೋ
ಮಾರೇ ನಾಯಕ ಬಾಪುರಿ ನಂಗರಿ
ಹರಿರೇಸ ಹರಿಯಾಳಿ ರೇಸ
ಘುಲರಾಸು ವದೇಸ, ವಡಲಾಸು ಫೇಲೇಸ
ಹವೇಲಿ ಯಾ ಅಹಿಯಾಕss”

ಅರ್ಥ: “ಓ ನನ್ನ ಮಾರವಾಡಿ ಸಹೋದರನೇ, ಹಿಂದಿರುಗಿ ಬಂದರೂ ನನ್ನ ನಾಯಕ ತಂದೆಯ ತಾಂಡೆ ಹಸಿರು ಹುಲ್ಲಿನಂತೆ ನಿತ್ಯ ಹಸಿರಾಗಿರಲಿ. ಅತ್ತಿಯ ಗಿಡದಂತೆ ಬೆಳೆದು ಆಲದ ಮರದಂತೆ ಪಸರಿಸಲಿ ಓ ನನ್ನ ಹಡೆದ ತಾಯಿ.”

ಇಲ್ಲಿ ಮದುಮಗಳು ತಾನು ಹುಟ್ಟಿ ಬೆಳೆದ ತಾಂಡಾ ಪರಿಸರ, ತಾಂಡಾದ ನಾಯಕ, ತಾಯಿ, ತಂದೆ, ಸಹೋದರ, ಸಹೋದರಿ ಕುರಿತು ಹಾಡಿನ ರೂಪದಲ್ಲಿ ಮನಮಿಡಿಯುವಂತೆ ಗುಣಗಾನ ಮಾಡುತ್ತ ಕಣ್ಣೀರು ಹಾಕುತ್ತಾಳೆ. ಹೀಗೆ ಹಾಡುತ್ತ ತಾಂಡೆ, ನಾಯಕ, ಗೆಳತಿ, ತಾಯಿ-ತಂದೆ, ಸಹೋದರ ಮುಂತಾದವರ ಗುಣಗಾನ ಮಾಡುತ್ತಾಳೆ.

ಹವೇಲಿ ಸಂಪ್ರದಾಯ ಇಂದಿಗೂ ಲಂಬಾಣಿಗಳಲ್ಲಿ ರೂಢಿಯಲ್ಲಿವೆ. ಮೊದಮೊದಲು ಲಂಬಾಣಿಗಳಲ್ಲಿ ಮದುವೆ ಕಾರ್ಯಕ್ರಮಗಳು ಒಂದೊಂದು ತಿಂಗಳವರೆಗೆ ನಡೆಯುತ್ತಿತ್ತು. ಉದಾ: ವಧುವಿನ ನಿಶ್ಚಯ ಕಾರ್ಯ, ಬೆಲ್ಲದ ಕಾರ್ಯ, ಮದುವೆ ಸಮಾರಂಭ, ವದಾಯಿ ಕಾರ್ಯ, ಸಾಡಿತಾಣೆರೋ, ಮದುಮಗನಿಗೆ ಹೊರ ತೆಗೆಯುವುದು, ಮದುಮಗಳಿಗೆ ಬೀಳ್ಕೊಡುವುದು, ತಿಲಕ ಕಾರ್ಯ, ವಿವಾಹ ಬಂಧನ ಇತ್ಯಾದಿ.”[3]

ಇಂದು ಲಂಬಾಣಿಗಳ ಮದುವೆಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿವೆ. ತಿಂಗಳುಗಟ್ಟಲೆ ನಡೆಯುತ್ತಿದ್ದ ಮದುವೆ ಕಾರ್ಯಗಳು ಒಂದೇ ದಿನದಲ್ಲಿ ಮುಗಿಯುತ್ತಿದೆ. ಹಲವಾರು ವ್ಯತ್ಯಾಸಗಳು ಆಗಿದ್ದರೂ, ಮೂಲದ ಕೆಲವು ರೂಢಿ-ಸಂಪ್ರದಾಯಗಳನ್ನು ಮಾತ್ರ ಅವರು ಬಲು ಕಟ್ಟುನಿಟ್ಟಾಗಿ ಪಾಲಿಸಿಕೊಂಡಿರುವುದು ಅವರ ಸಂಸ್ಕೃತಿ ಪೋಷಣೆಗೆ ಒಂದು ಉತ್ತಮ ನಿದರ್ಶನವೆಂದು ಹೇಳಬಹುದು. ಲಂಬಾಣಿಗರಲ್ಲಿ ಮದುವಣಗಿತ್ತಿಯನ್ನು ಕಳಿಸುವ ಸಂದರ್ಭದಲ್ಲಿ ಅವಳು ಹವೇಲಿ ಹಾಡುತ್ತಾಳೆ. ಆಗ “ಮಾರವಾಡಿ ವೀರಾ”[4] ಎಂದು ತನ್ನ ಸಹೋದರರ ಕೊರಳು ತಬ್ಬಿಕೊಂಡು ಅಳುವ ಪದ್ಧತಿ ಅವರಲ್ಲಿ ಇಂದಿಗೂ ರೂಢಿಯಲ್ಲಿರುವುದನ್ನು ಕಾಣಬಹುದು.

* * *


*     “ಕರ್ನಾಟಕ ಭಾರತಿ” : ಸಂಪುಟ ೩೧, ಸಂಚಿಕೆ ೧-೨, ಸಂಪಾದಕರು ಡಾ. ಎ. ಮುರಿಗೆಪ್ಪ, ಪ್ರಸಾರಾಂಗ ಕ.ವಿ.ವಿ. ಧಾರವಾಡ, ಜನೇವರಿ ಹಾಗೂ ಜುಲೈ, ೧೯೯೯ರ ನಿಯತ ಕಾಲಿಕೆಯಲ್ಲಿ ಪ್ರಕಟವಾದ ಲೇಖನದ ಪರಿಷ್ಕೃತ ರೂಪ.

[1]     “ಪಾನಜ ಖಾವತೋ ಬತಿಸಿ ಬಲವೀರಾ
ಉಮಕಿ ಝೂಮಕಿ ಕಡಭರಿ ಕಣದೋರಿ
ಮಾರವಾಡಿ ವಿರೇಣಾ
ಮಂತ್ರೇರಿ ಛಡಿ ಕರನ ಹಾತೆ ಮಾ ಝಲಲರೆ
ಮಾರವಾಡಿ ವೀರೇಣಾ
ಕಾಗದೇರಿ ಪೂಡಿ ಕರಲೇನ ಕೀಸೇಮಾ ಘಾಲಲರೆ
ಮಾರವಾಡಿ ವೀರೇಣಾ”

ಅರ್ಥ: ಕಿವಿಯಲ್ಲಿ ಬಂಗಾರದ ಆಭರಣ, ಟೊಂಕಿನಲ್ಲಿ ಬೆಳ್ಳಿಯ ಉಡದಾರವನ್ನು ಹೊಂದಿರುವ ಮಾರವಾಡಿ ಅಣ್ಣನೇ ನನ್ನನ್ನು ಮಂತ್ರದ ಬಡಿಗೆಯನ್ನಾಗಿ ಮಾಡಿಕೊಂಡು ಕೈಯಲ್ಲಿ ಇರಿಸಿಕೊಳ್ಳಬಾರದೇ? ಕಾಗದದ ಪೊಟ್ಟಣವನ್ನಾಗಿ ಮಾಡಿ ಕಿಸೆಯಲ್ಲಿ ಹಾಕಿಕೊಳ್ಳಬಾರದೆ?

ಪ್ರಸ್ತುತ ಗೀತೆಯಲ್ಲಿ ಬರುವ “ಮಾರವಾಡಿ” ಪದವು ವಿಶೇಷವಾಗಿದೆ. ರಾಜಸ್ಥಾನದ ಮಾರವಾಡ ಪ್ರದೇಶವು ಲಂಬಾಣಿಗರ ಮೂಲವಾಗಿರಬಹುದೆಂಬುದಕ್ಕೆ ಈ ಸಂಬೋಧಿತ ಪದವು ಸಾಕ್ಷಿಯಾಗಿ ನಿಲ್ಲುತ್ತದೆ. ಒಂದರ್ಥದಲ್ಲಿ ಮಾರವಾಡಿಗಳ ಮೂಲಸ್ಥಾನವಾಗಿರುವ ರಾಜಸ್ಥಾನವು ಲಂಬಾಣಿಗಳ ಮೂಲಸ್ಥಾನವೂ ಆಗಿದೆ. (ಡಾ. ಡಿ.ಬಿ.ನಾಯಕ, ೨೦೦೦, ಪುಟ ೧೫೨-೧೫೩)

[2]     ಈ ಹಂತದಲ್ಲಿ ಗಮನಿಸಬೇಕಾದ ಅಂಶವೆಂದರೆ, ಮೌಖಿಕ ಪರಂಪರೆ ಅಲೆಮಾರಿ ಇತ್ಯಾದಿ ಜನಪದ ಸಮುದಾಯಗಳ ಚರಿತ್ರೆಯಾಗಿರುವುದು. ಯಾಕೆಂದರೆ       ಯಾವುದೇ ವಿಷಯದಲ್ಲಿ ಈ ಮೇಲಿನ ವಿಷಯಗಳು ಬರುವುದಿಲ್ಲ. ಅಲ್ಲದೆ ದುಡಿದು ತಿನ್ನುವ ಜನರ ಚರಿತ್ರೆಯನ್ನು ಯಾರು ಬರೆದಿದ್ದಾರೆ? ಇಂಥ ಅರಸು ಇಂಥ       ಇಸ್ವಿಯಲ್ಲಿ ಇಂಥ ಅರಸನನ್ನು ಸೋಲಿಸಿದ ಎಂದು ದಾಖಲಾಗುತ್ತದೆಯೇ ಹೊರತು, ಅರಸನ ವಿಜಯಕ್ಕೆ ಕಾರಣರಾದ ಸೈನಿಕರ ಚರಿತ್ರೆಯನ್ನು ಯಾರೂ ಬರೆಯುವುದಿಲ್ಲ. ಆದ್ದರಿಂದ ಜನಪದ ದಂತಕಥೆಗಳು ಇತ್ಯಾದಿಗಳೆಂದರೆ ಅವೇ ಆ ಜನರ ಇತಿಹಾಸವೆಂದು ಭಾವಿಸಬೇಕಾಗುತ್ತದೆ.

[3]     ವಿವರಣೆಗೆ ನೋಡಿ : ಲಂಬಾಣಿಗರಲ್ಲಿ ಮದುವೆ ಸಂಪ್ರದಾಯಗಳು : ಡಾ. ಹರಿಲಾಲ ಪವಾರ, ೧೯೬೬

[4]     ಲಂಬಾಣಿ ಭಾಷೆಯಲ್ಲಿ ವೀರೇಣಾ ಎಂದರೆ ಸಹೋದರ “ವೀರೇಣಾ” ಪದದ ಪರ್ಯಾಯ ಪದವೇ “ವೀರಾ”.