ಉತ್ತರ ಕನ್ನಡದ ನಿಸರ್ಗದ ಮಡಿಲಲ್ಲಿ ಅಲ್ಲಲ್ಲಿ ಕಾರ್ಖಾನೆಗಳಿಂದಾಗಿ ವಿದ್ಯುತ್ ಸ್ಥಾವರಗಳಿಂದಾಗಿ ಹೊಸದಾಗಿ ಅನೇಕ ಊರುಗಳು ೧೯೫೦ ರಿಂದೀಚೆಗೆ ಬೆಳೆದು ಬಂದು ಪಟ್ಟಣಗಳಾಗಿ ಪರಿವರ್ತನಗೊಳ್ಳುತ್ತಲಿವೆ. ಅವುಗಳಲ್ಲಿ ಹಿರಿದಾದ ನಾಲ್ಕಾರನ್ನು ಇಲ್ಲಿ ನಿವೇದಿಸಲಾಗಿದೆ.

ದಾಂಡೇಲಿ : ಕಾಗದ, ಪ್ಲೈವುಡ್, ಫೆರೋಮೆಂಗೆನಿಜ ಕಾರಖಾನೆಗಳಿದ್ದು ಉ. ಕನ್ನಡದ ವಾಣಿಜ್ಯೋದ್ಯಮದ ಕ್ಷೇತ್ರವಾಗಿ ಮಹಾನಗರವಾಗಿ ಬೆಳೆದಿದೆ. ಈ ಕಾರಖಾನೆಗಳ ಸಂದರ್ಶನ ಮಹತ್ವಪೂರ್ಣ. ಈ ಪ್ರದೇಶದ ಅರಣ್ಯದಲ್ಲಿಯ ಬಿದುರಿಗೆ ಭೀಮನ ಬಿದಿರು ಎಂದು ಹೆಸರಿದ್ದು ಶ್ರೇಷ್ಠಮಟ್ಟದ್ದಾಗಿದೆ. ಹಿಂದೆ ಈ ಊರನ್ನು ಬಿದಿರುಹಳ್ಳಿ, ದಂಡೊಳ್ಳಿ ಎನ್ನುತ್ತಿದ್ದರು. ದಂಡಕಾರಣ್ಯ ಇದೆಂದು ನಂಬಲಾಗಿದೆ. ಹತ್ತಿರವೇ ಶೂರ್ಪನಖಿಯ ಸ್ಥಳ ಸೂಪಾ ಇದ್ದುದರಿಂದ ಶ್ರೀರಾಮ ಇಲ್ಲಿ ವಾಸಿಸಿದ್ದನೆಂಬುದಕ್ಕೆ ಪುಷ್ಟಿ ಸಿಗುತ್ತದೆ.

ದಾಂಡೇಲಿಯ ಅರಣ್ಯ ಸಂಗ್ರಹಾಲಯವು (Forest Depot) ಭಾರತದಲ್ಲಿಯೇ ದೊಡ್ಡದಂತೆ. ದಾಂಡೇಲಿಯ ವನ್ಯಮೃಗ ರಕ್ಷಣಾ ಕೇಂದ್ರವೂ ಪ್ರಸಿದ್ಧ. ದಾಂಡೇಲಿಯ ಹತ್ತಿರದಲ್ಲಿಯೇ ಸಿಂತೇರಿ ಬಂಡೆಗಳು, ಸೈಕ್ಸಪೊಯಿಂಟ, ವಿಂಚೊಳ್ಳಿದಭದಭೆ, ಕಾವಳಾಗುಹೆಗಳು, ಕನ್ಹೇರಿ ಸೇತುವೆ, ಕಾಳಿನದಿಯ ಯೋಜನೆ ಮೊದಲಾದ ಪ್ರೇಕ್ಷಣೀಯ ನೆಲೆಗಳಿವೆ.

ಸೈಕ್ಸ ಪಾಯಿಂಟ : ಬ್ರಿಟೀಶ್ ಅಧಿಕಾರಿ ಸೈಕ್ಸನ ಹೆಸರನ್ನಿಟ್ಟ ಈ ಸ್ಥಳದಿಂದ ಕಾಳಿನದಿಯ ಕೊಳ್ಳದ ದೃಶ್ಯವನ್ನು ಸವಿಯಬಹುದು. ಹಸಿರು ವನಶ್ರೀ ಮಧ್ಯದಲ್ಲಿ ಹರಿಯುತ್ತಿರುವ ನದಿಯ ದೃಶ್ಯವರ್ಣನಾತೀತ. ಕೆಳಗಡೆಗೆ ವಿದ್ಯುದಾಗರವಿದೆ. ಕಣಿವೆಯ ಇನ್ನೊಂದು ಪಕ್ಕದಲ್ಲಿದ್ದ ಕವಳೆ ಗುಹೆಯ ಪ್ರವೇಶದ್ವಾರ ಕಾಣುತ್ತದೆ.

ಕವಳೆಗುಹೆಗಳು : ನಾಗಜರಿ ವಿದ್ಯುತ್ ಕೇಂದ್ರದ ವಿರುದ್ಧ ದಿಕ್ಕಿನಲ್ಲಿ ದಟ್ಟಾರಣ್ಯದಲ್ಲಿ ಕಡಿದಾದ ಬಂಡೆಗಳ ಮಧ್ಯೆ ೪ ಮೀಟರ ದ್ವಾರವಿರುವ ಒಳಗೆ ೯ ಮೀಟರನಷ್ಟು ಉದ್ದಗಲದ ಗವಿಯಲ್ಲಿ ನಡುವೆ ಒಂದು ಮೀಟರಿಗು ಎತ್ತರವುಳ್ಳ ಶಿವಲಿಂಗವಿದ್ದು ಮೇಲ್ಛಾವಣಿಯಿಂದ ಖನಿಜಾಂಶಗಳು ಒಸರುವದರಿಂದ ಬಿಳಲಿನಾಕಾರಗಳು ರಚನೆಯಾಗಿ ರಮ್ಯವಾಗಿವೆ. ಸ್ವಲ್ಪೆ ಅಂತರದಲ್ಲಿ ಇನ್ನೊಂದು ಗುಹೆಯಿದೆ.

ಸಿಂಥೇರಿ ಕಲ್ಲು ಬಂಡೆಗಳು : ದಟ್ಟಡವಿಯಲ್ಲಿ ಕಾನೇರಿನದಿಯ ಕೊಳ್ಳದಲ್ಲಿ ಆಯತಾಕಾರದ ಬಂಡೆಗಳು ೬೦ ಮೀಟರದಷ್ಟು ಎತ್ತರವಾಗಿದ್ದು ನೂರಾರು ಜೇನು ಹುಟ್ಟುಗಳಿಗೆ ನೆಲೆಯಾಗಿವೆ. ನದಿಯ ತಿರುವಿಕೆಯ ಕೊಳ್ಳ ರಮ್ಯ. ಅತ್ಯಂತ ಸುಂದರ ವಿಹಾರಸ್ಥಾನ.

ಅಂಬಿಕಾನಗರ : ದಾಂಡೇಲಿಯಿಂದ ಕೆಲ ಕಿಲೋಮೀಟರ ಅಂತರದಲ್ಲಿ ಬೆಳೆಯುತ್ತಿರುವ “ಅಮಗಾ” ಎಂಬ ಸಣ್ಣ ಹಳ್ಳಿ ಅಂಬಿಕಾನಗರವಾಗಿ ಬೃಹದಾಕಾರ ತಾಳಿದೆ. ನಾಗಜರಿ ವಿದ್ಯುದಾಗರ, ಬೊಮ್ಮನಹಳ್ಳಿ ಆಣೆಕಟ್ಟಿನ ಸಿಬ್ಬಂದಿಗಳಿಗೆ ವಸತಿ ಏರ್ಪಡಿಸಲಾಗಿದೆ. ಸುಂದರವಾದ ಪ್ರವಾಸಿ ಮಂದಿರಗಳು, ರಂಗಮಂದಿರ, ದೇವಾಲಯ ಮೊದಲಾದವುಗಳಿಂದ ಸುತ್ತಲಿನ ನಿಸರ್ಗದಿಂದ ಸುಂದರ ಪಟ್ಟಣವಾಗಿದೆ.

ರಾಮನಗರ : ಕರ್ನಾಟಕ ಪಾವರ ಕಾರ್ಪೊರೇಶನ್ ಕೆಲಸಗಾರರ ವಸತಿ ನಿರ್ಮಿಸಿ ಸುಪಾ ಮುಳುಗಡೆಯಾದಾಗ ಜನರ ಪುನರ್ವಸತಿಗಾಗಿ ಬೆಳಗಾಂವ ಜಿಲ್ಲೆಯಿಂದ ೩೬ ಚದುರ ಕಿ.ಮೀ. ಸ್ಥಳವನ್ನು ಉತ್ತರ ಕನ್ನಡಕ್ಕೆ ವರ್ಗಾಯಿಸಲ್ಪಟ್ಟಾಗ ಬೆಳೆದ ಊರು ಇದು. ರಾಮಲಿಂಗ ದೇವಾಲಯದಲ್ಲಿ ಸುಪಾದಿಂದ ತರಲ್ಪಟ್ಟ ಗುಡಿಯ ಅವಶೇಷಗಳನ್ನು ಕಾಣಬಹುದು. ಗಣಪತಿ, ಶಿವಲಿಂಗ, ವಿಠೋಬ, ಆಂಜನೇಯ ಮೂರ್ತಿಗಳೆಲ್ಲವನ್ನು ಸೂಪಾದಿಂದ ತಂದು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಸೂಪಾದ ಪುನರ್ ನಿರ್ಮಾಣವೇ ರಾಮನಗರ ಎನ್ನಬಹುದು.

ಕೈಗಾ : ಯಲ್ಲಾಪುರ ತಾಲೂಕಿನ ಕೈಗಾ ಕಾರವಾರದಿಂದ ೩೪ ಕಿ.ಮೀ. ದೂರದಲ್ಲಿ ದಟ್ಟಡವಿ ನಡುವೆ ಅಣುವಿದ್ಯುತ್ ಕೇಂದ್ರದ ಸ್ಥಾಪನೆಯಿಂದಾಗಿ ಮಹಾನಗರವಾಗಿ ಬೆಳೆಯುತ್ತಿದೆ. ಕಾಳಿನದಿಯ ದಕ್ಷಿಣದಂಡೆಯಲ್ಲಿದ್ದು ನೀರಿನ ಸಮೃದ್ಧಿಯಿದ್ದು ಅಣುಶಕ್ತಿ ಉತ್ಪಾದನೆಗೆ ಬೇಕಾಗುವ ಖನಿಜ ಯುರೇನಿಯಂ ಅರಬೈಲ ಮತ್ತು ಮಂಜಗುಣಿ ಘಟ್ಟಗಳಲ್ಲಿ ದೊರೆಯುವದರಿಂದ ಇಲ್ಲಿ ಅಣುಸ್ಥಾವರವನ್ನು ರೂಪಿಸಲಾಗಿದೆ. ಕೈಗಾ ಯೋಜನೆಯಿಂದಾಗಿ ಮನೆಗಳು, ಅಂಗಡಿ, ಶಾಲೆ, ಇತ್ಯಾದಿ ಪಟ್ಟಣದ ಸಕಲ ಸೌಲಭ್ಯವೂ ಇಲ್ಲಿ ಆಗಿದೆ. ಹತ್ತಿರವೇ ಇದ್ದ ಮಲ್ಲಾಪುರ ಎಂಬಲ್ಲಿ ಪಂಚತಾರಾ ಹೊಟೇಲು ಇದ್ದು ಪ್ರವಾಸಿಗಳಿಗೆ ಸಕಲ ಸೌಲಭ್ಯವನ್ನು ಒದಗಿಸಲಾಗುವದು.

ಬಿಣಗೆ : ಕಾರವಾರದಿಂದ ೬ ಕಿ.ಮೀ. ದೂರದಲ್ಲಿ ಕಾಸ್ಚಿಕ್ ಸೋಡಾ ಕಾರ್ಖಾನೆ ಸ್ಥಾಪಸಿಲ್ಪಟ್ಟು ಈಗ ಮಹತ್ವ ಪಡೆದಿದೆ. ಸೋಮನಾಥ, ಮ್ಹಾಳಸಾ, ಭೂದೇವಿ ಹಾಗೂ ಗುಡ್ಡದ ಮೇಲೆ ಹೆದ್ದೇವರುಗಳು ದೇವಾಲಯಗಳಿವೆ. ಅಂಜದೀವ ನಡುಗಡ್ಡೆ ಕೇವಲ ನಾಲ್ಕು ಕಿ.ಮೀ. ದೂರದಲ್ಲಿದೆ.

ಪ್ರಾಣಿಪಕ್ಷಿಧಾಮಗಳು : ಸಹ್ಯಾದ್ರಿ ಶೃಂಗಮಾಲೆಯು ಜಿಲ್ಲೆಯ ೮೦% ಭಾಗ ಆವರಿಸಿರುವದರಿಂದ ಪಕ್ಷಿ ಪ್ರಾಣಿ ಸಂಕುಲಗಳಿಗೆ ಎಣೆಯಿಲ್ಲ. ಸಾರಂಗ, ಚಿಗರೆ, ಕಾಡುಕೋಣ, ಹಂದಿ, ಹುಲಿ, ಚಿರ್ಚು, ಆನೆಗಳಾದಿ ಪ್ರಾಣಿಗಳು ನವಿಲು, ಗೊರವಂಕ, ಕಾಜಾಣ, ಗಿಳಿ, ಕೋಗಿಲೆ, ಬೆಳ್ಳಕ್ಕಿ ಕಾಡುಕೋಳಿ ಮೊದಲಾದ ಪಕ್ಷಿಗಳು ನೂರಾರು ಜಾತಿಯ ವೃಕ್ಷಗಳು ಸಂಶೋಧಕರ ಹಾಗು ವಿಹಾರಾರ್ಥಿಗಳ ಮನಸೆಳೆಯುವವು. ಗಣೇಶಗುಡಿ, ರಾಮನಗುಳಿ, ದಾಂಡೇಲಿ, ಕುಳಗಿ, ಕರ್ದಾ, ಅಣಶಿ ಮೊದಲಾದ ಎಡೆಗಳಲ್ಲಿರುವ ಅಭಯಾರಣ್ಯಗಳು ವೀಕ್ಷಣೆಗೆ ಯೋಗ್ಯವಾಗಿವೆ. ಅಣಶಿಯಲ್ಲಿ ವೈವಿಧ್ಯಮಯವಾದ ಕಾಡಿನ ಉದ್ಯಾನವಿದ್ದು ೧೯೮೭ರಲ್ಲಿ ಇದನ್ನು ರಾಷ್ಟ್ರೀಯ ಉದ್ಯಾನವೆಂದು ಘೋಷಿಸಲಾಯಿತು. ಇದಕ್ಕೆ ಹೊಂದಿಯೇ ಅಭಯಾರಣ್ಯ ಪ್ರದೇಶವಿದೆ. ಸೂರ್ಯನ ಕಿರಣವು ನೆಲಮುಟ್ಟಿದಷ್ಟು ದಟ್ಟ ಕಾಡು; ವೈವಿಧ್ಯಮಯ ಸಸ್ಯರಾಶಿ! ೧೯೭ ಕ್ಕೂ ಹೆಚ್ಚು ಪಕ್ಷಿ ಪ್ರಬೇಧಗಳಿರುವ ಪಕ್ಷಿಕಾಶಿ! ಹಲವು ಬಗೆಯ ಕಾಡುಪ್ರಾಣಿಗಳು ಸುರಕ್ಷಿತವಾಗಿ ಓಡಾಡಿಕೊಂದಿರುವ ತಾಣ! ಈ ಕಾಡು ನಿಸರ್ಗವೇ ಸ್ವರ್ಗವಾದಂತೆ ಇದೆ.

ಅತ್ತಿವೇರಿ, ದಾಂಡೇಲಿ ಬಳಿಯಲ್ಲಿ, ಮಾಸೂರಕೂರ್ವೆ ಮೊದಲಾದಲ್ಲಿ ಈಗೀಗ ಅಣೆಕಟ್ಟು ಕಟ್ಟಿ ನೀರು ನಿಲ್ಲಿಸಿದ ಎಡೆಗಳಲ್ಲಿ ಹೊಸಹೊಸ ಪಕ್ಷಿಧಾಮಗಳು ಈ ಜಿಲ್ಲೆಯಲ್ಲಿ ನಿರ್ಮಾಣಗೊಳ್ಳುತ್ತಿದ್ದು ಜಿಲ್ಲೆಗೊಂದು ಶೋಭೆಯ ಸಂಗತಿಯಾಗಿದೆ. ಭಾರತದಲ್ಲಿ ಸುಮಾರು ೧೭೦೦ ಪಕ್ಷಿ ಪ್ರಭೇದಗಳಿದ್ದು ಅವುಗಳಲ್ಲಿ ಸುಮಾರು ೪೨೫ ಪ್ರಭೇದಗಳನ್ನು ಕರ್ನಾಟಕದಲ್ಲಿ ಕಾಣಬಹುದು. ಇವುಗಳಲ್ಲಿ ಹೆಚ್ಚಿನವು ಉತ್ತರಕನ್ನಡದಲ್ಲಿ ಕಾಣಬಹುದು.

ಲೇಲಾಲಿಲೇಸೋ ಲೇಲಾಲಿಲೋ : ನೌಕಾವಿಹಾರಕ್ಕೆ, ಜಲಕ್ರೀಡೆಗೆ ಸಾಗರತೀರದ ಆಟಗಳಿಗೆ ಉತ್ತರ ಕನ್ನಡ ಜಿಲ್ಲೆ ಉತ್ಸಾಹದ ಸೀಮೆಯಾಗಿದೆ. ಕಾಳಿ ಗಂಗಾವಳಿ, ಅಘನಾಶಿನಿ, ಶರಾವತಿ, ವೆಂಕಟಾಪುರ, ವರದಾ ಮೊದಲಾದ ಹಿರಿ ಹೊಳೆಗಳ ಜೊತೆಗೆ ಬೇಲೆಕೇರಿ ನದಿ, ಅಂಕೋಲೆ ಹೊಳೆ, ಕುಮಟೆ ಹೊಳೆ, ಬಡಗಣಿ ನದಿ, ಶರಾಬಿ, ಗೊರೆಗದ್ದೆ ಹಳ್ಳ (ಬೆಳಸೆಹತ್ತಿರ) ಮೊದಲಾದ ಹಲವು ಕಿರಿಹೊಳೆಗಳು ಈ ಜಿಲ್ಲೆಯಲ್ಲಿ ಹರಿದಿವೆ. ಹಿರಿಹೊಳೆಗಳು ಸಾಗರ ಸೇರುವ ಹಿನ್ನೆಲೆಯಲ್ಲಿ ವಿಸ್ತಾರವಾಗಿ ಹರಡಿಕೊಂಡಿವೆ. ಈ ನದಿಗಳ ನಡುವೆ ಕೂರ್ವೆಗಳು (ನಡುಗಡ್ಡೆಗಳು) ಆಕರ್ಷಣೀಯವಾಗಿವೆ. ಗಂಗಾವಳಿ ನದಿಯಲ್ಲಿ ಹಿಚ್ಕಡ ಮತ್ತು ಮೋಟನ ಕೂರ್ವೆಗಳು, ಅಘನಾಶಿನಿ ನದಿಯಲ್ಲಿ ಮಾಸೂರ, ಮಲ್ಲ, ಹಳಕಾರ, ಐಗಳ ಕೂರ್ವೆಗಳು, ಶರಾವತಿನದಿಯಲ್ಲಿ ಮಾವಿನ, ಮಾಳ್ಕೋಡ, ಹೈಗುಂದ, ಉಪ್ಪಿನ ಕೂರ್ವೆಗಳೆಲ್ಲ ಸುಂದರ ವಿಹಾರತಾಣಗಳೇ ಎನ್ನಬೇಕು. ಇವಲ್ಲದೆ ಸಮುದ್ರ ದಂಡೆಯಲ್ಲಿ ಅಂಜದೀವ, ದೇವಗಡ, ಮಧ್ಯಂಗಡ ಕೂರ್ವಗಡ, ಕಾಂಗಗಡ, ಬಸವರಾಜದುರ್ಗ, ನೇತ್ರಾಣಿ, ಜಾಲಿದ್ವೀಪಗಳು ನೀಲ ಜಲಧಿಯಲ್ಲಿ ಶೋಭಿಸುವ ಇಂದ್ರಬನಗಳಾಗಿವೆ. ಇಲ್ಲಿ ನೌಕಾ ವಿಹಾರ, ಈಜಾಟ, ಮತ್ಸ್ಯಬೇಟೆ ಮುಂತಾದವುಗಳಿಂದ. ನಲಿಯಬಹುದು. ಆಣೆಕಟ್ಟನ್ನು ಕಟ್ಟ ನಿರ್ಮಿಸಿದ ಜಲಾಶಯಗಳಲ್ಲಿ ನೌಕಾವಿಹಾರದ ವ್ಯವಸ್ಥೆ ಮಾಡಬಹುದು. ಒಟ್ಟಿನಲ್ಲಿ ಎಲ್ಲ ದೃಷ್ಟಿಯಿಂದಲೂ ಉತ್ತರ ಕನ್ನಡ ಪ್ರವಾಸಿಗಳಿಗೆ ನಂದನವನ.

ಸಾಹಿತ್ಯ ಸಂಸ್ಕೃತಿ ದೃಷ್ಟಿಯಿಂದಲೂ ಉತ್ತರಕನ್ನಡ ವೈಶಿಷ್ಟ್ಯ-ಪೂರ್ಣವಾಗಿದೆ. ಆದಿಕವಿ ಪಂಪ, ಆಂಡಯ್ಯ, ಭಟ್ಟಾಕಳಂಕ, ಬತ್ತಲೇಶ್ವರ, ವರದವಿಠ್ಠಲ, ಅಭಿನಂದ, ಗೇರಸೊಪ್ಪೆಯ ಸಾಂತಪ್ಪಯ್ಯ, ವಿಷ್ಣು ಸಭಾಹಿತ ಮೊದಲಾದವರ ಸಾಹಿತ್ಯ ಪರಂಪರೆಯನ್ನು ಮುನ್ನಡಿಸಿಕೊಂಡು ಕಾವ್ಯ, ಕಾದಂಬರಿ, ನಾಟಕ, ಕತೆ, ವಿಮರ್ಶೆ ಕ್ಷೇತ್ರಗಳಲ್ಲಿ ಹೆಸರುಗಳಿಸಿದ, ಹಿರಿ ಕಿರಿ ಸಾಹಿತಿಗಳಿದ್ದಾರೆ. ಇಲ್ಲಿಯ ಯಕ್ಷಗಾನದ ಆಟದ ಪರಂಪರೆ ಶ್ರೀಮಂತವಾಗಿದೆ. ಜನಪದ ಕಲೆಗಳಾದ ಸುಗ್ಗಿಯ ಕುಣಿತ, ಗುಮಟೆಪಾಂಗು, ಬಿಂಗಿಪದ, ಡಮಾಮಿಕುಣಿತ, ಬೇಡರ ಕುಣಿತ, ಡೊಳ್ಳುಕುಣಿತ, ಇತ್ಯಾದಿ ಇತ್ಯಾದಿ ಹಲವಾರು ಕಲೆಗಳು ಶ್ರೀಮಂತವಾಗಿವೆ. “ಕನ್ನಡ ಸಂಸ್ಕೃತಿಯ ತೊಟ್ಟಿಲು” ಎಂದು ಈ ಜಿಲ್ಲೆಯನ್ನು ಕರೆಯಲಾಗಿದೆ. ಅತಿಥಿ ಅಭ್ಯಾಗತರ ಸತ್ಕಾರದಲ್ಲಿ ಎತ್ತಿದ ಕೈ ಇಲ್ಲಿಯ ಜನ. ಹಲವು ಜಾತಿ, ಹಲವು ಬಗೆಯ ಭಾಷೆ ಉಡಿಗೆ-ತೊಡಿಗೆ, ಅಡಿಕೆ-ಯಾಲಕ್ಕಿ-ತೆಂಗಿನ ತೋಟಗಳು, ಹಲಸು, ಮಾವು, ಗೋಡಂಬೆಗಳ ಬೆಳೆ, ಎಳೆನೀರು ಕಷಾಯಗಳ ಪೇಯ, ಜಾತ್ರೆ-ಬಂಡಿ ಹಬ್ಬ, ಹಗರಣ, ಫೆಸ್ತುಗಳು ಬಂದ ಜನರಿಗೆ ರಂಜನೆ ನೀಡುವಾಗ ಇನ್ನೇನು ಬೇಕು. ಪ್ರವಾಸೋದ್ಯಮದ ಬೆಳವಣಿಗೆಗೆ ಪ್ರಯತ್ನಬೇಕು.

ಈ ಜಿಲ್ಲೆಯಲ್ಲಿ ಕಾರವಾರ, ಕುಮಟೆ, ಶಿರಸಿ, ಯಲ್ಲಾಪುರ, ದಾಂಡೇಲಿಗಳಲ್ಲಿ ಪ್ರವಾಸಿಕೇಂದ್ರಗಳನ್ನು ಸ್ಥಾಪಿಸಬೇಕು. ಕಡಲ ತೀರದ ಬಂದರುಗಳಿಗೆ ಹಡಗು ಸಾರಿಗೆಯ ವ್ಯವಸ್ಥೆಯಾಗಬೇಕು. ಕೊಂಕಣರೇಲ್ವೆ ಪ್ರವಾಸೋದ್ಯಮಕ್ಕೆ ವರದಾನವಾಗಿದೆ. ಪ್ರೇಕ್ಷಣೀಯ ಸ್ಥಳಗಳಿಗೆ ಕೇಂದ್ರ ಪ್ರದೇಶಗಳಿಂದ ಹೋಗಿ ಬರಲು ಉತ್ತಮ ರಸ್ತೆ-ಸಾರಿಗೆ ವ್ಯವಸ್ಥೆ, ಸರ್ವರ ರುಚಿಗೆ ಕಿಸೆಗೆ ಒಗ್ಗುವ ಶುಚಿಯಾದ ಹೊಟೇಲ್ಲುಗಳು, ಸರಿಯಾದ ವಸತಿಗೃಹಗಳು, ಸಂದರ್ಶಿಸುವ ಸ್ಥಳದ ವಿವರಣಾ ಪುಸ್ತಕಗಳು, ಚಿತ್ರಗಳು, ಪ್ರಚಾರ ಪ್ರಕಟಣೆಗಳು, ಸರಿಯಾದ ಮಾರ್ಗದರ್ಶಕರು, ಸಂದರ್ಶಿಸಿದ ಸ್ಥಳದ ನೆನಪಿಗಾಗಿ ಕೊಂಡೊಯ್ಯಲು ಯೋಗ್ಯವಾದ ಪ್ರತಿಕೃತಿಗಳು ಇಲ್ಲವೆ ವಿಶಿಷ್ಟ ವಸ್ತುಗಳು, ಮನರಂಜನಾ ಮಂದಿರಗಳು, ವಂಚಿಸದ ವರ್ತಕರು, ಭಯರಹಿತ ವಾತಾವರಣ ಇವೆಲ್ಲ ಪ್ರವಾಸೋದ್ಯಮ ಬೆಳೆದು ಬರಲು ಬೇಕಾದ ಅನುಕೂಲತೆಗಳು. ಇವೆಲ್ಲ ದೊರೆತಲ್ಲಿ ಉತ್ತರಕನ್ನಡದಲ್ಲಿದ್ದ ನೂರಾರು ಪ್ರೇಕ್ಷಣೀಯ ಸ್ಥಳಗಳಿಗೆ ಚಿನ್ನಕ್ಕೆ ಪುಟವಿಟ್ಟಂತಾಗುವದು. ಜಗತ್ತಿನ ಪ್ರೇಕ್ಷಣೀಯ ಜಿಲ್ಲೆಗಳಲ್ಲಿ ಉತ್ತರ ಕನ್ನಡ ಒಂದೆಂಬುದಕ್ಕೆ ಸಂದೇಹವೇ ಇಲ್ಲ.