‘ಸಾಹಿತ್ಯ ಮತ್ತು ಸಾಮಾಜಿಕ ನಿಲುವುಗಳು’ ಎಂಬ ವಿಷಯ, ಒಂದು ಸಮಾಜದ ಘಟಕವಾಗಿರುವ ಸಾಹಿತಿ ಎಂಬ ಸೂಕ್ಷ್ಮ ಸಂವೇದನಾಶೀಲನಾದ ಮನುಷ್ಯ ಎಷ್ಟರಮಟ್ಟಿಗೆ ತನ್ನ ಕಾಲದ ಸಾಮಾಜಿಕ ಮನುಷ್ಯರ ವಾಸ್ತವಗಳನ್ನು ತನ್ನ ಅನುಭವದಲ್ಲಿ ಅರಗಿಸಿಕೊಂಡು ಬರೆಯುತ್ತಿದ್ದಾನೆ ಅನ್ನುವುದನ್ನು ಪರಿಶೀಲಿಸುವ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಎರಡನೆದಾಗಿ, ಒಂದು ಸಮಾಜಕ್ಕೆ ಸೇರಿದ ಜನ ಪಟ್ಟಪಾಡುಗಳಿಗೆ, ಅನುಭವಿಸಿದ ಸಂಘರ್ಷಗಳಿಗೆ, ಅವರು ಎದುರಿಸಬೇಕಾಗಿ ಬಂದ ಸಮಸ್ಯೆ- ಸವಾಲುಗಳಿಗೆ ಅಂದಿನ ಸಮಾಜದ ಕಟ್ಟುಪಾಡುಗಳು ಮತ್ತು ಇತರ ನಿಯಂತ್ರಕ ಶಕ್ತಿಗಳು ಎಷ್ಟರಮಟ್ಟಿಗೆ ಕಾರಣವಾಗಿವೆ ಎಂಬುದನ್ನು ಕುರಿತು ನಮ್ಮನ್ನು ಯೋಚನೆಗೆ ತೊಡಗಿಸುತ್ತದೆ. ಮೂರನೆಯದಾಗಿ, ಅಂದಿನ ಸಮಾಜದ ಆಚಾರ-ವಿಚಾರಗಳು ನಂಬಿಕೆ-ನಡಾವಳಿಗಳು, ನೈತಿಕ-ಧಾರ್ಮಿಕ ನಿಲುವುಗಳು ಎಷ್ಟರಮಟ್ಟಿಗೆ ಅಂದಂದಿನ ಸಮಾಜವನ್ನು ರೂಪಿಸಿವೆ ಎಂಬ ಸಮಾಜ ಶಾಸ್ತ್ರೀಯ ಆಧ್ಯಯನಗಳ ಕಡೆಗೂ ನಮ್ಮನ್ನು ಒಯ್ಯುತ್ತವೆ. ಒಂದು ಕಾಲದ ಸಾಹಿತ್ಯ ನಿರ್ಮಿತಿಯನ್ನು ಕುರಿತು ವಿಚಾರ ಮಾಡುವಾಗ ಈ ಎಲ್ಲ ಸಂಗತಿಗಳೂ ಪರಿಗಣನೆಗೆ ಬರುತ್ತವೆ.

ಸಾಹಿತ್ಯ ಮತ್ತು ಸಾಮಾಜಿಕ ನಿಲುವುಗಳನ್ನು ಪರಿಶೀಲಿಸುವಾಗ, ‘ಪ್ರಭುನಿಷ್ಠ ಸಾಹಿತ್ಯದಲ್ಲಿ ಸಾಮಾಜಿಕ ನಿಲುವುಗಳು’ ‘ಧರ್ಮನಿಷ್ಠ ಸಾಹಿತ್ಯದಲ್ಲಿ ಸಾಮಾಜಿಕ ನಿಲುವುಗಳು’ ಎಂಬ ವಿಭಾಗ ಮಾಡಿಕೊಂಡು ಚರ್ಚೆಯನ್ನು ನಡೆಯಿಸಲಾಗಿದೆ. ಕನ್ನಡ ಸಾಹಿತ್ಯದ ಮಟ್ಟಿಗಂತೂ, ಈ ಪ್ರಭುನಿಷ್ಠ ಹಾಗೂ ಧರ್ಮನಿಷ್ಠ ಎಂಬ ಎರಡು ನಿಲುವುಗಳೂ ಅತ್ಯಂತ ಪ್ರಮುಖ ಶಕ್ತಿಗಳಾಗಿ ಸಾಹಿತ್ಯ ನಿರ್ಮಿತಿಯನ್ನು ನಿಯಂತ್ರಿಸಿವೆ ಎಂಬುದು ಸ್ಪಷ್ಟವಾದ ಸಂಗತಿಯಾಗಿದೆ. ‘ಪ್ರಭುನಿಷ್ಠ ಸಾಹಿತ್ಯ’ದ ಹಂತದಲ್ಲಂತೂ ನಮ್ಮ ಸಾಹಿತ್ಯ ಶ್ರೀಸಾಮಾನ್ಯನ ಬದುಕಿನ ಕಡೆಗೆ, ಕೆಳಗಣ್ಣಿನಿಂದ ನೋಡುತ್ತ, ರಾಜಮಹಾಜರ ವಿಲಾಸ ವೈಭವಗಳ ಕಡೆಗೆ ತನ್ನ ಗಮನವನ್ನು ಕೇಂದ್ರೀಕರಿಸಿದಂತೆ ತೋರುತ್ತದೆ. ನಮ್ಮ ಪ್ರಾಚೀನ ಸಾಹಿತ್ಯದಲ್ಲಂತೂ, ಸಮಾಜದ ಒಂದೆರಡು ಮೇಲಿನ ಸ್ತರಗಳನ್ನು ಹೊರತುಪಡಿಸಿದರೆ, ಉಳಿದವರ ಬದುಕಿನ ಆಸೆ-ಆಕ್ಷಾಂಕ್ಷೆಗಳಿಗಾಗಲೀ, ನೋವು ನಲಿವುಗಳಿಗಾಗಲೀ ಅಷ್ಟಾಗಿ ಆಸ್ಪದವೇ ಇರುವಂತೆ ತೋರುವುದಿಲ್ಲ. ಜತೆಗೆ ಧರ್ಮನಿಷ್ಠೆಯೂ ಸೇರಿಕೊಂಡು, ಸಮಾಜದ ಮೇಲಿನ ಸ್ತರದವರ ಆ ವಿಲಾಸ-ವೈಭವ ಅತ್ಯಂತ ಪ್ರಖರವಾಗುತ್ತ ಕಡೆಗೆ ಪರಮ ವೈರಾಗ್ಯದ ನೆಲೆಯ ಹಂತದಲ್ಲಿ ಸ್ಫೋಟಗೊಳ್ಳುವ ಈ ಬದುಕಿನ ಸುಖ-ಸಂತೋಷಗಳಾಗಲಿ, ರೂಪ-ಧನ- ವೈಭವಗಳಾಗಲೀ, ನಶ್ವರವಾದ ಕಾರಣ ಆ ಪರಮ ಪದವೊಂದೇ ನಿಜವಾದ ಗಮ್ಯಸ್ಥಾನವೆಂಬುದನ್ನು ಉದ್ಘೋಷಿಸುವ, ಬೇರೊಂದು ಮಾತಿನಲ್ಲಿ ಹೇಳುವುದಾದರೆ, ಜೀವನವನ್ನೇ ಬಹು ಮಟ್ಟಿಗೆ ನಿರಾಕರಿಸುವ ಒಂದು ನಿಲುವು ಪ್ರಧಾನವಾಗುತ್ತದೆ. ಸಮಸ್ತ-ಸುಖ-ಸಂತೋಷ, ಭೋಗ-ಭಾಗ್ಯಗಳಿಂದ ಕಟ್ಟರೆಗೊಂಡ ಸಾಮಾಜಿಕ ಸ್ತರದವರಿಗೇನೋ, ಇರುವಷ್ಟು ಕಾಲ ಹಾಯಾಗಿದ್ದು ಕೊನೆಗೆ ಜೀವನದ ನಶ್ವರತೆಯ ಅರಿವಿನಿಂದ ಮೋಕ್ಷಕ್ಕೆ ಹೋಗುವುದೇ ಪರಮ ಮೌಲ್ಯವೆಂಬಂತೆ ತೋರಿದರೂ, ಈ ಭಾಗ್ಯವಂತ ವರ್ಗದ ಕೆಳಗಿನ ನೆಲೆಯ ಬಹು ಸಂಖ್ಯಾತ ಶ್ರೀಸಾಮಾನ್ಯರಿಗೆ ಹೀಗೆ ಅನ್ನಿಸುವುದು ಮುಖ್ಯವಾಗಿತ್ತೆ, ಅವರ ಸಾಮಾಜಿಕ ನೆಲೆಯ ನಿಜವಾದ ವಾಸ್ತವಗಳೇನು ಎಂಬುದಕ್ಕೆ ಯಾರು ಉತ್ತರ ಹೇಳಬೇಕು ?

ವಾಸ್ತವವಾಗಿ ಪ್ರಭುನಿಷ್ಠ ನಿಲುವಿಗೂ, ಧರ್ಮನಿಷ್ಠ ನಿಲುವಿಗೂ ಇರುವ ವ್ಯತ್ಯಾಸ ತೀರಾ ತೆಳುವಾದದ್ದು. ಅವೆರಡೂ  ಒಂದೇ ನಾಣ್ಯದ ಎರಡು ಮುಖಗಳು ಎಂದರೂ ಸಲ್ಲುತ್ತದೆ. ‘ಪ್ರಭು’ ಅಥವಾ ರಾಜತ್ವವೆಂಬುದು ಧರ್ಮಕ್ಕೆ ಅಧೀನವಾದರೂ, ಅದು ಆ ಮೂಲದೈವತದ ಪ್ರತಿನಿಧಿ ಕೂಡಾ.  ಹೀಗಾಗಿ ‘ಪ್ರಭು’ ಬಹುಮಟ್ಟಿಗೆ ಧರ್ಮದ ಪ್ರತೀಕ; ಮತ್ತು ಪ್ರಭುವಿಗೆ  ತೋರುವ ನಿಷ್ಠೆ ಧರ್ಮಕ್ಕೆ ಅಥವಾ ಧರ್ಮದ ಆಧಿದೈವವಾದ ದೇವರಿಗೆ ತೋರುವ ನಿಷ್ಠೆಗೆ ಸಮಾನ. ಕ್ರಮ ಕ್ರಮೇಣ ಪ್ರಭುನಿಷ್ಠೆಯನ್ನು ನಿರಾಕರಿಸುವ ಹಂತಗಳಲ್ಲಿ ಕೂಡಾ, ಧರ್ಮನಿಷ್ಠೆಯ ನಿಲುವುಗಳಲ್ಲಿ ತನ್ನ ಇಷ್ಟ ದೈವಕ್ಕೆ ತೋರುವ ನಿಷ್ಠೆ, ವಾಸ್ತವವಾಗಿ, ಅದಕ್ಕೆ ಹಿಂದಿನ ಪ್ರಭುನಿಷ್ಠೆಯ ಬೇರೊಂದು ರೂಪವೇ ಆಗಿತ್ತೆಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಯಾಕೆಂದರೆ ‘ಪ್ರಭು ಹಾಗೂ ಪ್ರಜೆ’ಯ ಸಂಬಂಧದ ನಿಷ್ಠೆಗಿಂತ, ‘ದೈವ ಹಾಗೂ ಭಕ್ತ’ನ ಸಂಬಂಧದ ನಿಷ್ಠೆ ಸ್ವರೂಪದಲ್ಲಿ ಬೇರೆಯಾದ್ದೇನಲ್ಲ. ಆದರೆ ಪ್ರಭು ನಿಷ್ಠೆಯನ್ನು ನಿರಾಕರಿಸುವ ಧರ್ಮನಿಷ್ಠ ನೆಲೆಯಲ್ಲಿ ನಿಂತ ಸಾಮಾಜಿಕ ಮನುಷ್ಯನಿಗೆ ಬರುವ ಆತ್ಮಸ್ಥೈರ್ಯ, ಮತ್ತು ಸ್ವತಂತ್ರ ಮನೋಧರ್ಮಗಳು ಮಹತ್ವದ್ದೆಂಬುದೇನೋ ನಿಜ. ಆದರೆ ಈ ಎರಡನ್ನೂ, ಅಂದರೆ ಪ್ರಭುನಿಷ್ಠೆ ಹಾಗೂ ಧರ್ಮನಿಷ್ಠೆಗಳೆರಡನ್ನೂ ನಿರಾಕರಿಸಿದಾಗ ಹುಟ್ಟಿಕೊಳ್ಳುವ ಸಾಮಾಜಿಕ ಪ್ರಜ್ಞೆ ಒಂದು ಮಹತ್ವದ ಚಾರಿತ್ರಿಕ ಘಟನೆ ಎಂಬುದರಲ್ಲಿ ಸಂದೇಹವಿಲ್ಲ. ಈ ಹಂತದಲ್ಲಿ ಮನುಷ್ಯ ಮತ್ತೊಬ್ಬ ಮನುಷ್ಯನನ್ನು, ತನ್ನ ಸಾಮಾಜಿಕ ಸಂದರ್ಭದ ಸಂಗಡಿಗನೆಂಬಂತೆಯೂ, ತಾನು ಕಾಣದ ಅಥವಾ ನಂಬಿದ, ಆ ದೈವಕ್ಕಿಂತ ನೇರವಾಗಿ ಕಾಣುವ ಈ ಬದುಕಿಗೆ ಸೇರಿದವನೆಂಬಂತೆಯೂ ಗುರುತಿಸುವ ಮಾನವಕೇಂದ್ರಿತ ಕಾಳಜಿಗಳು ಮುಖ್ಯವಾಗುತ್ತವೆ, ಮತ್ತು ಈ ನಿಲುವಿನಲ್ಲಿ ತನ್ನ ಪರಿಸರವನ್ನು, ತನ್ನ ಪರಂಪರೆಯನ್ನು ಪ್ರಶ್ನಿಸುವ ಮತ್ತು ವಾಸ್ತವವನ್ನು ಬದಲಾಯಿಸುವ ಪ್ರತಿಭಟನೆಯ ಮನೋಧರ್ಮ ರೂಪುಗೊಳ್ಳುತ್ತದೆ. ಕನ್ನಡ ಸಾಹಿತ್ಯ  ಚರಿತ್ರೆಗಳನ್ನು ಗಮನಿಸಿದರೆ, ಪ್ರಭುನಿಷ್ಠೆಯ ಬಗೆಗೆ ಹುಟ್ಟಿಕೊಂಡಷ್ಠು ಪ್ರತಿಭಟನೆ, ಧರ್ಮನಿಷ್ಠೆಯ ಬಗೆಗೆ ಹುಟ್ಟಿಕೊಳ್ಳಲೇ ಇಲ್ಲ. ನಿದರ್ಶನಕ್ಕೆ ಹೇಳುವುದಾದರೆ, ಶಿವಶರಣರು ಹಾಗೂ ಅನಂತರದ ದೇಸೀಕವಿಗಳು ಪ್ರಭುನಿಷ್ಠೆಯನ್ನು ನಿರಾಕರಿಸಿದರೂ, ಅವರು ಧರ್ಮನಿಷ್ಠೆಯನ್ನು ನಿರಾಕರಿಸಲು ಸಾಧ್ಯವಾಗಲಿಲ್ಲ. ಹರಿಹರನಂಥ ಭಕ್ತ ಕವಿ ಪ್ರಭುನಿಷ್ಠೆಯನ್ನು, ಹಾಗೂ ಆ ನಿಲುವಿನ ಕಾವ್ಯ ವಸ್ತುಗಳನ್ನು ನಿರಾಕರಿಸಿ ಸಮಾಜದ, ಅದರಲ್ಲೂ ಕೆಳಗಿನ ಸಾಮಾಜಿಕ ಹಂತಗಳಿಗೆ ಸೇರಿದ ಸಾಮಾನ್ಯ ಮನುಷ್ಯರನ್ನು ತನ್ನ ಖಂಡ ಕಾವ್ಯಗಳ ಕಥಾನಾಯಕರನ್ನಾಗಿ ಮಾಡಿಕೊಂಡವರೂ, ಅವನದು ನಮ್ಮ ಈ ಹೊತ್ತಿನ ಸಾಮಾಜಿಕ ನಿಲುವಿಗಿಂತ ಬೇರೆಯಾಗಿ, ಮೂಲತಃ ಧರ್ಮನಿಷ್ಠ ನಿಲುವೇ ಆಗಿರುವುದನ್ನು ಗುರುತಿಸಬಹುದು. ಯಾಕೆಂದರೆ ಸಮಾಜದ ಕೆಳಗಿನ ಹಂತದ ಒಬ್ಬ ಅಗಸ, ಒಬ್ಬ ಕುಂಬಾರ, ಒಬ್ಬ ಬೆಸ್ತ, ಒಬ್ಬ ಒಕ್ಕಲಿಗ, ಒಬ್ಬ ಕೂಲಿಯವ ಆತನ ಕಾವ್ಯದ ಮುಖ್ಯ ಪಾತ್ರಗಳಾಗುವ ಒಂದು ಅದ್ಭುತ ‘ವಸ್ತು ಬದಲಾವಣೆ’ ಕಾಣಿಸಿಕೊಂಡರೂ, ಅವರು ಯಾರೂ ಅವರವರ ಸಾಮಾಜಿಕ ಸ್ತರದ ‘ವಾಸ್ತವ’ಗಳನ್ನು ಪ್ರತಿನಿಧಿಸದೆ ಅವರು ಮೂಲತಃ ಹರಿಹರನಿಗೆ ಪ್ರಿಯವಾದ ಶಿವನ ಭಕ್ತರೇ ಆಗಿ, ಈ ಲೋಕ ವಾಸ್ತವದಿಂದ ಮೇಲೇರಿ ಆ ಲೋಕದ ಕಡೆಗೆ ನಡೆಯುವ ಪ್ರಯಾಣಿಕರಂತೆ ತೋರುತ್ತಾರೆ. ಹರಿಹರನಂತೆಯೇ ಈ ನಿಲುವನ್ನು ಇತರ ಭಕ್ತ ಕವಿಗಳೂ ಎತ್ತಿ ಹಿಡಿಯುತ್ತಾರೆ.

ಹೀಗಾಗಲು  ಕಾರಣವೇನೆಂದರೆ, ಸಾಹಿತ್ಯ ಚರಿತ್ರೆಯ ಈ ಹಂತಗಳಲ್ಲಿ ಅವರಿಗೆ ಮುಖ್ಯವಾದದ್ದು ಪ್ರಭುನಿಷ್ಠ, ನೀತಿನಿಷ್ಠ, ಧರ್ಮನಿಷ್ಠ, ಅಧ್ಯಾತ್ಮನಿಷ್ಠ ಮನುಷ್ಯನೇ ಹೊರತು, ನಿಜವಾದ ಅರ್ಥದ ಸಾಮಾಜಿಕ ಮನುಷ್ಯ ಅಲ್ಲ. ಸಾಹಿತ್ಯ ಮೊದಲು ಲಕ್ಷಿಸಬೇಕಾದದ್ದು  ಮೂಲಭೂತವಾಗಿ ಸಾಮಾಜಿಕ ಮನುಷ್ಯನನ್ನು ಎಂಬ ನಿಲುವು ಗಟ್ಟಿಗೊಂಡದ್ದು ಈಚೆಗೆ. ಅಂದರೆ ಸಮಾಜವಾದೀ ನಿಲುವುಗಳು ನಮ್ಮ ಪರಿಸರವನ್ನು ಗಾಢವಾಗಿ ಪ್ರವೇಶಿಸಿದ ನಂತರ, ಆಧುನಿಕ ಶಿಕ್ಷಣದ ಸವಲತ್ತಿನಿಂದಾಗಿ ಸಮಾಜದ ವಿವಿಧಸ್ತರಗಳು ಕ್ರಮೇಣ ಎಚ್ಚರಗೊಳ್ಳುತ್ತಾ, ವಿವಿಧ ಸಾಮಾಜಿಕ ಹಂತಗಳಿಂದ ತಮ್ಮ ಅಭಿವ್ಯಕ್ತಿಯನ್ನು ಕಂಡುಕೊಳ್ಳುವ ಲೇಖಕರು ಹೆಚ್ಚು ಸಂಖ್ಯೆಯಲ್ಲಿ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ ಕಾರಣದಿಂದ. ಹೀಗೆ, ಈ ಸಾಮಾಜಿಕ ಎಚ್ಚರಕ್ಕೂ ಒಂದು ಚರಿತ್ರೆ ಇದೆ ಎಂಬುದನ್ನು ನಾವು ಸಾಹಿತ್ಯದ ಮೂಲಮಾನದಿಂದ ಗುರುತಿಸಬೇಕಾಗಿದೆ. ಹಿಂದೆ ಒಂದು ಕಾಲದಲ್ಲಿ, ಸಾಹಿತಿಯಾದ ಒಬ್ಬ ವ್ಯಕ್ತಿ, ಬಹುಮಟ್ಟಿಗೆ ಸಮಾಜದ ಮೇಲಿನ ಸ್ತರಕ್ಕೆ ಸೇರಿದವನಾಗಿದ್ದು ಅವನೇ ಎಲ್ಲರ ಪರವಾಗಿ ಬರೆಯುವ ಸಂದರ್ಭವಿತ್ತು. ತಾನೇ ಎಲ್ಲರ ಪರವಾಗಿ, ಹಾಗೂ ಎಲ್ಲರ ಅನುಭವದ ಪ್ರತಿನಿಧಿಯಾಗಿ ಬರೆಯುವುದಕ್ಕೂ, ಸಮಾಜದ ಬೇರೆ ಬೇರೆಯ ಸ್ತರದವರು ತಮ್ಮ ತಮ್ಮ ಅನುಭವಗಳನ್ನು ಕುರಿತು ತಾವೇ ಬರೆದುಕೊಳ್ಳುವುದಕ್ಕೂ ಮೌಲಿಕವಾದ ವ್ಯತ್ಯಾಸವಿದೆ. ಇವತ್ತಿನ ದಲಿತ ಬಂಡಾಯ ಸಾಹಿತ್ಯದವರು ಎತ್ತುವ ಪ್ರಶ್ನೆಯೂ ಇದೇ. ಚೋಮನದುಡಿಯಂಥ ಉತ್ಕೃಷ್ಟ ಕಾದಂಬರಿಯನ್ನು ಬರೆದ ಶಿವರಾಮ ಕಾರಂತರು, ಸಮಾಜದ ನಿರ್ಲಕ್ಷಿತ, ಶೋಷಿತ ವರ್ಗದ ಚೋಮನ ಬದುಕನ್ನು ಕುರಿತು, ಬರೆದಿದ್ದಾರೇನೋ ನಿಜ. ಆದರೆ ಅವರು ಚೋಮನ ಸಾಮಾಜಿಕ ಸ್ತರದಿಂದ ಬಂದವರಲ್ಲವಾದ ಕಾರಣ, ಅವರ ಬರಹ ಕೇವಲ ಊಹೆಯ ಹಾಗೂ ಮೇಲ್ಪದರದ ಸ್ವರೂಪದ್ದಾಗಿದೆಯೇ ಹೊರತು, ನಿಜವಾದ ಚೋಮನ ಬದುಕನ್ನು ಪ್ರತಿನಿಧಿಸುವಂತಿಲ್ಲ ಎಂಬ ಅಪಸ್ವರಗಳೂ ಇವತ್ತಿನ ವಿಮರ್ಶೆಯಲ್ಲಿ ಕೇಳಿಬಂದಿವೆ.  ನಿಜ.  ಕಾರಂತರು ಚೋಮನ ವರ್ಗದ ಚರಿತ್ರೆಗೆ ಸೇರಿದವರಲ್ಲ. ಆದರೆ ಒಬ್ಬ ಕಲಾವಿದ ಅವನು ಯಾವುದೇ ನೆಲೆಗೆ ಸೇರಿರಲಿ, ಅವನು ತನ್ನ ಪ್ರತಿಭಾ ಸಾಮರ್ಥ್ಯದಿಂದ ಬದುಕನ್ನು ಸಮಗ್ರವಾಗಿ ಗ್ರಹಿಸಿ ಅಭಿವ್ಯಕ್ತಿಸಲು ಸಾಧ್ಯ ಎಂಬುದನ್ನು ನಾವು ಸಾಹಿತ್ಯ ನಿರ್ಮಿತಿಯ ಸಂದರ್ಭದಲ್ಲಿ ಒಪ್ಪಿಕೊಳ್ಳಬೇಗಾಗುತ್ತದೆ. ಆದರೆ ಚೋಮನ ವರ್ಗದವನೇ ಆದ ಮತ್ತು ತಕ್ಕ ಪ್ರತಿಭಾಶಾಲಿಯಾದ ಬರೆಹಗಾರನೊಬ್ಬ, ಚೋಮನ ಬದುಕನ್ನು ಕುರಿತು ಕಾದಂಬರಿಯನ್ನು ಬರೆಯುವುದಾದರೆ, ಅದು ಖಂಡಿತವಾಗಿಯೂ ಕಾರಂತರ ‘ಚೋಮನದುಡಿ’ಗಿಂತಲೂ ಭಿನ್ನವಾದ ಸಾಮಾಜಿಕ ವಾಸ್ತವಗಳನ್ನೂ, ಸಾಚಾತನಗಳನ್ನೂ ಪ್ರಕಟಿಸುವ ಸ್ವರೂಪದ್ದಾಗಿರುತ್ತದೆ. ಇದರ ಅರ್ಥವೇನೆಂದರೆ, ಸಮಾಜದ ವಿವಿಧ ಸ್ತರಗಳವರು, ತಮ್ಮ ತಮ್ಮ ಅನುಭವಗಳನ್ನು ತಾವೇ ಕಲಾತ್ಮಕವಾಗಿ ಅಭಿವ್ಯಕ್ತ ಪಡಿಸುವ ಸಾಮರ್ಥ್ಯವನ್ನು ಪಡೆದುಕೊಂಡದ್ದಾದರೆ ಆಗ ಸಾಹಿತ್ಯಕ್ಕೆ ಹೊಸ ಆಯಾಮವೊಂದು ಪ್ರಾಪ್ತವಾಗುತ್ತದೆ. ಅಂಥ ಸಂದರ್ಭ, ಗಾಢವಾದ ಸಾಮಾಜಿಕ ಕಳಕಳಿಗಳಿಂದಾಗಿ ಸಾಹಿತ್ಯದಲ್ಲಿ ಕಾಣಿಸಿಕೊಳ್ಳತೊಡಗಿದೆ.

ಈ ಹೊಸ ಸಾಮಾಜಿಕ ಎಚ್ಚರದ ಬರೆಹಗಾರರಿಗೆ ಅವರ ಕಣ್ಣೆದುರಿನ ಸಮಾಜದ ಘಟಕದಲ್ಲಿರುವ ಮನುಷ್ಯ ಮುಖ್ಯನಾಗುತ್ತಾನೆ. ಹಿಂದಿನ ಧರ್ಮನಿಷ್ಠ ಹಾಗೂ ಪ್ರಭುನಿಷ್ಠ ನೆಲೆಗಳಲ್ಲಿ ಅಂದಿನ ಸಾಹಿತಿಗಳಿಗೆ, ಮನುಷ್ಯನ ನಿಜವಾದ ಸಾಮಾಜಿಕ ವಾಸ್ತವಗಳಾದ ಬಡತನ, ಶೋಷಣೆ, ಇತ್ಯಾದಿಗಳಿಗಿಂತ, ಈ ಎಲ್ಲವನ್ನೂ ಮೀರುವ, ‘ಧಾರ್ಮಿಕ ಮನುಷ್ಯನ’ ‘ಆಧ್ಯಾತ್ಮಿಕ ಮನುಷ್ಯನ’ ಕಲ್ಪನೆಯೇ ಪ್ರಧಾನವಾಗಿತ್ತು ; ಇಹನಿಷ್ಠ ಧೋರಣೆಗಿಂತ, ಪರನಿಷ್ಠ ಧೋರಣೆಯೇ ಹೆಚ್ಚು ಆಕರ್ಷಕವಾಗಿತ್ತು. ಈ ಒಂದು ನಿಲುವಿಗೆ, ಮನುಷ್ಯನ ಕಷ್ಟ-ಸಂಕಟಗಳಾಗಲೀ, ಅವನಿಗೆ ಒದಗುವ ಅನ್ಯಾಯಗಳಾಗಲಿ ಪರಿಗಣನೆಗೆ ಬರುವುದೇ ಇಲ್ಲ. ನಿದರ್ಶನಕ್ಕೆ ‘ಬಡತನ’ದ ವಿಷಯವನ್ನೆ ತೆಗೆದುಕೊಳ್ಳೋಣ. ಬಡತನ ನಮ್ಮ ದೇಶದಲ್ಲಿ ಮನುಷ್ಯನ ಸ್ವಾಭಿಮಾನವನ್ನೂ,  ಸುಖವನ್ನೂ, ಸ್ವಾತಂತ್ರ್ಯವನ್ನೂ ನಾಶಮಾಡಿರುವ ಒಂದು ಪಿಡುಗಾಗಿದೆ. ಮತ್ತು ಮನುಷ್ಯರು ಬಡವರಾಗಿರುವುದಕ್ಕೆ ನಮ್ಮ ಸಾಮಾಜಿಕ ಆರ್ಥಿಕ ವ್ಯವಸ್ಥೆಗಳೇ ಕಾರಣ. ಇದು ಬಡತನವನ್ನು ನಾವು ಇಂದು ವಿಶ್ಲೇಷಿಸುವ ವಿಧಾನ. ಆದರೆ, ಹಿಂದಿನ ಧರ್ಮನಿಷ್ಠ ಸಂದರ್ಭಗಳಲ್ಲಿ ಬಡತನವನ್ನು ಕುರಿತು ಅವರ ನಿಲುವೇ ಬೇರೆಯಾಗಿತ್ತು. ಅವರ ಪ್ರಕಾರ ‘ಬಡತನ’ ಎಂಬುದು ಒಂದು ವರ ; ಪರಮಾತ್ಮನು ಬಡತನದ ಮೂಲಕ ನಮ್ಮನ್ನು ಪರೀಕ್ಷೆಗೆ ಒಳಪಡಿಸುತ್ತಾನೆ ಎನ್ನುವುದು. ಬಡತನವನ್ನು ಕುರಿತು ನಾವು ಎರಡು ದೃಷ್ಟಿಕೋನಗಳನ್ನು ಗುರುತಿಸಬಹುದು ಎಂದಂತಾಯಿತು. ಬಡತನವನ್ನು ಒಂದು ‘ವರ’ ಎಂದು ಪರಿಗಣಿಸುವ ನಿಲುವೊಂದು ಕಡೆ ; ಬಡತನವನ್ನು ಒಂದು ‘ಶಾಪ’ ಎಂದು ಪರಿಗಣಿಸುವ ನಿಲುವು ಇನ್ನೊಂದು ಕಡೆ. ಇವೆರಡರಲ್ಲಿ ಯಾವುದು ಸರಿ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಬಡತನವನ್ನು ಒಂದು ‘ಶಾಪ’ ಎಂದು ಪರಿಗಣಿಸುವ ಸಾಮಾಜಿಕ ನಿಲುವು ನಿಜವಾಗಿಯೂ ಪ್ರಗತಿಪರವಾದದ್ದು ಮತ್ತು ಮನುಷ್ಯನ ಶ್ರೇಯಸ್ಸನ್ನು ಸಾಧಿಸುವ ಸಾರ್ವಜನಿಕ ಕಳಕಳಿಯಿಂದಾಗಿ, ನಿಜವಾದ ಅರ್ಥದಲ್ಲಿ ‘ಧಾರ್ಮಿಕ’ವಾದದ್ದು ಕೂಡ. ಆದರೆ, ಬಡತನವನ್ನು ಒಂದು ‘ವರ’ ಎಂದು ಪರಿಗಣಿಸುವ ಸಾಮಾಜಿಕ ನಿಲುವು, ಅದೆಷ್ಟೇ ಧರ್ಮ ಶ್ರದ್ಧೆಯಿಂದ ಬಂದಿರಲಿ, ಮೂಲತಃ ಪ್ರತಿಗಾಮಿಯಾದದ್ದು, ಮತ್ತು ನಿಜವಾದ ಅರ್ಥದಲ್ಲಿ ‘ಅಧಾರ್ಮಿಕ’- ವಾದದ್ದು. ಯಾಕೆಂದರೆ ಈ ನಿಲುವು ಯಾವುದೇ ಪ್ರಶ್ನೆಗೆ, ಅಥವಾ ಪ್ರತಿಭಟನೆಗೆ ವಿರೋಧಿಯಾಗುತ್ತ, ಯಥಾಸ್ಥಿತಿವಾದವನ್ನೆ ಬೆಂಬಲಿಸುತ್ತ, ಸಮಾಜದ ಶೋಷಕ ಶಕ್ತಿಗಳಿಗೆ ಪಟ್ಟಭದ್ರ ನೆಲೆಯೊಂದನ್ನು ಕಟ್ಟಿಕೊಡುತ್ತದೆ. ಆದರೆ ಇಂಥ ಕೆಲವು ಕಾರಣಗಳಿಂದ ನಾವು ಸಾರಾಸಗಟಾಗಿ, ಹಿಂದಿನ ಸಾಹಿತ್ಯದ ‘ಧಾರ್ಮಿಕ ನಿಲುವು’ಗಳನ್ನು ತಿರಸ್ಕಾರ ಮಾಡಬೇಕಾಗಿಲ್ಲ. ಯಾಕೆಂದರೆ ಧರ್ಮನಿಷ್ಠ ನಿಲುವಿನಲ್ಲಿ ನಮ್ಮ ಸಾಹಿತ್ಯ ನಡೆಸಿರುವ ಮನುಷ್ಯತ್ವದ ಶೋಧನೆ ಮತ್ತು ಆದರಿಂದ ಸಾಹಿತ್ಯಕ್ಕೆ ಒದಗಿರುವ ಆಯಾಮಗಳನ್ನು ನಿರ್ಲಕ್ಷಿಸಬಾರದು. ಮನುಷ್ಯನ ಸಾಮಾಜಿಕ ವಾಸ್ತವ ಎಷ್ಟು ಮುಖ್ಯವೋ, ಅವನು ಆಂತರಿಕವಾಗಿ ಏರಬೇಕಾದ ಎತ್ತರಗಳು ಇನ್ನೂ ಮುಖ್ಯವಾದದ್ದೆಂಬುದನ್ನು ನಾವು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗಿದೆ. ಆದಕಾರಣ ಸಾಹಿತ್ಯವನ್ನು ಕುರಿತ ಸಾಮಾಜಿಕ ನಿಲುವುಗಳನ್ನು ನಾವು ಪರಿಶೀಲಿಸುವಾಗ, ನಮಗೆ ‘ಸಾಮಾಜಿಕ ಮನುಷ್ಯ’ ಮುಖ್ಯನಾದರೂ, ಆತನನ್ನು ಇನ್ನಿತರ ಸಾಧ್ಯತೆಗಳ ಚೌಕಟ್ಟಿನಲ್ಲಿಯೂ ಇರಿಸಿಕೊಂಡು ನೋಡುವುದನ್ನು ಕಲಿಯಬೇಕಾಗಿದೆ.

ಬೆಡಗು-೧೯೮೯