ಮತ್ತೇಭವಿಕ್ರೀಡಿತ

ಘನವಾಲ್ಮೀಕಿಮುನೀಂದ್ರಪಾದಯುಗಕಂ ಬೀಳುತ್ತಲಾ ಬಾಲರೂ
ಮನಸಂತೋಷದಿ ಸೇತುಬಂಧನಗಳಂ ಪ್ರಾರಂಭ ಸಂಪೂರ್ಣಮಂ |
ವನಸಂಚಾರಿಗಳೆಂತು ದಾಂಟಿದರದಂ ಶ್ರೀರಾಮಚಾರಿತ್ರಮಂ
ಇನಿತಾನಂದದಿ ಕೇಳ್ವೆವೆಂಬ ಸುತರಂ ಕೊಂಡಾಡುತಿಂತೆಂದನು || ||೧||

ಸಾಂಗತ್ಯ (ಚರಿತೆ) ರಾಗ ತೋಡಿ ರೂಪಕತಾಳ

ತನಯರು ಕೇಳಿ ರಾಘವನು ಕೈಯಲಿ ಚೂಡಾ |
ಮಣಿಯನು ಕೊಂಡು ದುಃಖಿಸುತ ||
ವನಿತೆಯ ಮೇಲಿದ್ದ ಮಮಕಾರದಿಂದಲಾ |
ದಿನಕರ ತನುಜಗಿಂತೆಂದ || ||೨||

ರಾಗ ಭೈರವಿ ಝಂಪೆತಾಳ

ಅತಿಶಯದ ಸಾಗರದ | ಮಥನದೊಳು ಜನಿಸಿ ಸುರ |
ಪತಿಯಿಂದ ಬಂತು ಮಣಿ | ಜನಕ ಭೂವರಗೆ || ||೩||

ಮಗಳ ವೈವಾಹದಲಿ | ವಶವಾಯಿತೆಮ್ಮೊಡನೆ |
ತೆಗೆದು ಸಲೆ ಮೋಹದಲಿ | ಕೊಟ್ಟೆ ನಾ ಸತಿಗೆ || ||೪||

ಏನುಪಾಯದೊಳಿದನು | ಉಳುಹಿಕೊಂಡಳೊ ಕಾಣೆ |
ಮಾನಿನೀಮಣಿಯು ಸಲೆ | ಜಾಣೆಯಹುದಹುದು || ||೫||

ಎಂದಿಗಾದರು ಸತಿಗೆ | ಭೋಗಿಸುವ ಫಲವಿರಲು |
ಅಂದು ಪರಿಯಂತ ತೆಗೆ | ದಿರಿಸೊ ನೀ ತಮ್ಮ || ||೬||

ಮರುತಸುತ ನಮಗಾಗಿ | ಮಾಡಿದತಿಸಾಹಸಕೆ |
ಮರೆಯದುಪಕಾರವಿದ | ಕೇನಿತ್ತರಹುದು || ||೭||

ಧರ್ಮಶಾಶ್ವತವಾಗಿ | ಧಾರೆಯೆರೆದೆವು ಬರುವ |
ಬ್ರಹ್ಮಪದವಿಯ ಭಾಗ್ಯ | ಹನುಮಂತಗಿಂದು || ||೮||

ವಾರ್ಧಕ

ಮರುತನಂದನಗಾಯಿತಜನ ಸಂಪದವೆಂದು
ಸುರಪಾಲ ಮುಂತಾದ ಸುರರೆಲ್ಲ ಜಯವೆನುತ
ಸುರಿದರಂಬರದಿಂದ ಪೂಮಳೆಯ ದೇವದುಂದುಭಿ ಮೊಳಗಿತಾಕಾಶದಿ |
ಕರಿ ತುರಗ ರಥ ಪಾದಚಾರಿಗಳು ತಾವೆ ವಾ
ನರರೊಬ್ಬರೊಬ್ಬರೊಳಗಾಯ್ತು ಚತುರಂಗ ಮಾ
ರ್ಬಲ ಮಾರ್ಗಶಿರ ಶುದ್ಧದಷ್ಟಮಿಯೊಳೆಲ್ಲರುಂ ಹೊರಪಯಣಮಂ ಗೈದರು || ||೯||

ರಾಗ ಕೇದಾರಗೌಳ ಅಷ್ಟತಾಳ

ವರಶ್ರವಣಾದ್ರಿಯಿಂದೆದ್ದು ಬಂದಾಸುರ|
ಗಿರಿಯೊಳು ನೆಲೆಸಿದರು ||
ಮರುದಿನ ಮೇಚಕ ಪರ್ವತದಿಂದೆದ್ದು |
ಬರುತಿರ್ದುದು ಕಟಕ || ||೧೦||

ಅಲ್ಲಿಂದ ಮಲಯಾಚಲಕಾಗಿ ದಿನ ನಾಲ್ಕ |
ರಲ್ಲಿ ಸಾಗರ ತಡಿಗೆ ||
ಎಲ್ಲರೂ ಬಂದುದ ಕಾಣುತೋಡಿದರು ಮ |
ತ್ತಲ್ಲಿದ್ದ ದಾನವರು || ||೧೧||

ವಾರ್ಧಕ

ಧಾಳಿವರಿದೈತಂದು ಗಂಧಮಾದನ ಗಿರಿಯ
ಮೂಲದೆಡೆಯಲಿ ರಾಮ ಸೈನ್ಯಮಂ ಕೆದರೆ, ಕಪಿ
ಪಾಳೆಯವ ಕಂಡಂಜಿ ಕಾವಲಿಹ ರಾಕ್ಷಸರು ಬೀಳುತೇಳುತ ನಡೆದರು |
ಓಲಗದೊಳಿರುವ ದಶಕಂಠನಂಘ್ರಿಗೆ ಮಣಿದು
ನೀಲನಾಯಕನಂಜುತಂಜುತಳುಕುತ ಬೆದರಿ
ದಾಲಿಗಳ ನೀರೊರೆಸಿ ಗದ್ಗದಸ್ವರದಿಂದ ಪೇಳಿದನು ದನುಜೇಂದ್ರಗೆ || ||೧೨||

ರಾಗ ಕಾಂಭೋಜಿ ಅಷ್ಟತಾಳ

ದಂಡು ಬಂತಯ್ಯಾ ರಾಘವನ | ನಾವು |
ಕಂಡೆವು ದಳವಾಯಿ ಸುಗ್ರೀವನ |
ತಂಡತಂಡದೊಳೆಪ್ಪತ್ತೇಳು ಕೋಟಿಯ ಕೈಯ |
ತುಂಡುಮರಗಳ ಗುಂಡುಗಿರಿಗಳ | ಹಿಂಡುಹಿಂಡಿನ ಕಪಿಗಳ || ||೧೩||

ದಿನಕರವಂಶಲಲಾಮ | ರಾಮ |
ನನುಜ ಲಕ್ಷ್ಮಣನು ನಿಸ್ಸೀಮ ||
ಧನುಶರಗಳ ಕೊಂಡು | ದನುಜರ ವಧೆಗೆಂದು |
ಘನಪರಾಕ್ರಮಿ ವೀರಸುಗ್ರೀ | ವನ ಮಹಾಬಲ ಕೂಡಿದ || ||೧೪||

ಕರಿರಥ ತುರಗ ಕಾಲಾಳು | ತಾವೇ |
ಪರಿವಾರಾಗಿಹರಯ್ಯ ಕೇಳು |
ಕರಡಿ ಸಿಂಗಳಿಕ ವಾ | ನರ ಮುಸು ಕೆಂಜಣಿಲ್ |
ಮರಿಗಳೈದವೆ ಕೆಲವು ಬಿಳುಪಾ | ಗಿರುವ ಮುದಿಮುದಿ ಕಪಿಗಳು || ||೧೫||

ಕೇಳಿದ ದಶಕಂಠ ನುಡಿಯ | ರಾಮ |
ಪಾಳ್ಯ ಸಮುದ್ರದ ತಡಿಯ ||
ಓಲಗದೊಳು ಕುಳಿ | ತೆಲ್ಲರ ಕರೆಸಿದ |
ಕಾಳಗಕೆ ಸನ್ನಾಹದಿಂ ಬರ | ಹೇಳಿದನು ಖಳ ಕೋಟಿಯ || ||೧೬||

ರಾಗ ಭೈರವಿ ತ್ರಿವುಡೆತಾಳ

ನೀಲನಾಯಕನೆಂದವಾರ್ತೆಯ |
ಲಾಲಿಸುತ ನೆರೆ ಕೇಳಿದ ||
ಕಾಲಭೈರವನಂತೆ ರೋಷದ |
ಮೇಲೆ ಧೈರ್ಯವ ತಾಳಿದ ||
ಕಾಲರಕ್ಕಸ ದಿಗುತಟದ ಬೇ |
ತಾಳರನು ಬರಹೇಳಿದ ||
ಸಾಲುಸಾಲೀರೇಳು ಲೋಕಕೆ |
ಓಲೆತಾಳೆಯ ಬರೆಸಿದಾಗಲೆ ||
ಬಂದರಾಗ | ಖಳರೈ | ತಂದರಾಗ || ಪಲ್ಲವಿ || ||೧೭||

ಕೋಟಿ ದಾನವರುಗಳ ಶರಧಿಯ |
ದಾಟದಂದದಿ ನಿಲಿಸಿದ ||
ಕೋಟೆಯದ ಹೊರವಳಯ ಸುತ್ತಲು |
ನೀಟಿನಲಿ ಕಣಿಯಗೆಸಿದ ||
ಪಾಟಿಯಲಿ ರಣಭೂಮಿಗಖಿಲ ಸ |
ಲೂಟಿಯಂಕವ ಸುಳಿಸಿದ ||
ಕಾಟಕತ ಕೈಯಸ್ತ್ರಶಸ್ತ್ರದ |
ಕೋಟಲೆಗೆ ಛಲವೆಳಸಿತಾಗಲೆ ||
ಬಂದರಾಗ | ಖಳರೈ | ತಂದರಾಗ || ||೧೮||

ಕಂದ

ಅಂದಿನ ಓಲಗದೆಡೆಗೈ
ತಂದಗ್ರಜಗೆರಗಲಾ ವಿಭೀಷಣದೇವಂ |
ಬಂದಾರಾಮನ ವಾರ್ತೆಯ
ನಂದರುಹಲು ಕೇಳ್ದು ರಾಜನೀತಿಯ ಪೇಳ್ದಂ || ||೧೯||

ರಾಗ ಬೇಗಡೆ ಅಷ್ಟತಾಳ

ಕೇಳಿದೆಯಾ | ಅಣ್ಣ | ಕೇಳಿದೆಯಾ || ಪಲ್ಲವಿ || ರಾಮ |
ಪಾಳ್ಯ ಗೂಡಿ ನಮ್ಮೊಡನೆ | ಕಾಳಗಕ್ಕೆ ಬಂದ ಪರಿಯ || ಅನುಪಲ್ಲವಿ ||

ಬಾಲವುಳ್ಳ ಕಪಿಗಳೆಪ್ಪ | ತ್ತೇಳು ಕೋಟಿಯಂತೆ ಕೆಲವು |
ನೀಲ ಕೆಂಪು ಬಿಳಿದು ಮತ್ತೆ | ಬಾಲಕರಂತೆ |
ಮೇಲೆ ಸುಗ್ರೀವನೆಂಬಾತ | ಪಾಲಿಸುವನರಸನಂತೆ |
ನೀಲನೆಂಬನಿವರಿಗೆಲ್ಲ | ಪಾಳ್ಯದ ನಾಯಕನಂತೆ | ಕೇಳಿದೆಯಾ || ||೨೦||

ರಾಗ ಕಾಪಿ ಅಷ್ಟತಾಳ

ಇನ್ನಾದರು ಬಿಡು ಬಿಡು ನಿನ್ನ ಛಲವ |
ಮೊನ್ನೆ ಹೇಳಿದ ಮಾತು ನಿಜವಾಯಿತಲ್ಲ || ಪಲ್ಲವಿ ||

ಮೊದಲು ಪಟ್ಟಣವನಗ್ನಿಗೆ ಕೊಟ್ಟ ಕಪಿಯಂಥ |
ಅದುಭುತ ವೀರ ವಾನರಸೈನ್ಯವೈತಂದು |
ಕೆದರಿತು ಪಾಳ್ಯವಂತೆ | ಈಚೆಗೆ ದಾಟು |
ವುದಕಲ್ಪ ವೇಳ್ಯವಂತೆ | ಎಚ್ಚರಿತುಕೊಂ |
ಬುದಕೀಗ ಸಮಯ ಬಂದಿದೆ ಮುನ್ನಿನಂತೆ || ||೨೧||

ಅಣ್ಣ ಕೇಳೀ ರಾಮಚಂದ್ರನೀ ಭೂಮಿಯ |
ತಿಣ್ಣವಿಳುಹಲಾಗಿ ಅವತರಿಸಿದನೊಂದು |
ಹೆಣ್ಣ ನೆವನ ಹಿಡಿದು | ನಮ್ಮೆಲ್ಲರ |
ಮಣ್ಣಿಗಿಕ್ಕುವ ಬಡಿದು | ಈ ಕಾರ್ಯದೊ |
ಳುಣ್ಣದುರಿವುದುಚಿತಗಳಲ್ಲ ತಿಳಿದು || ||೨೨||

ಜಾರೆಯೆ ಜಾನಕಿ ಸಾಕ್ಷಾಲ್ಲಕ್ಷುಮಿದೇವಿ |
ನಾರಾಯಣ ರಾಮಚಂದ್ರ ಮಾಶೇಷಾವ |
ತಾರಿ ಲಕ್ಷ್ಮಣರು ಬಂದು | ದೇವತೆಗಳ |
ದೂರಿಗೋಸ್ಕರದೊಳಿಂದು | ನಮ್ಮಂತಕ |
ನೂರಿಗಟ್ಟದೆ ಬಿಡರರಿತುಕೊ ಮುಂದು || ||೨೩||

ರಾಗ ತೋಡಿ ಅಷ್ಟತಾಳ

ಏನೆಂದೇ | ತಮ್ಮ | ಏನೆಂದೆ || ಪಲ್ಲವಿ ||
ಏನೆಂದೇ ತಮ್ಮ ಏತಕೆ ಮರುಳಾದೆ |
ದಾನವರುಗಳ ಶಕ್ತಿಯನು ನೀನರಿಯದೆ || ಅನುಪಲ್ಲವಿ ||

ದನುಜರ ಸೈನ್ಯ ಲಂಕಾದುರ್ಗವೆಮಗೆ |
ಅನುಜಗೆ ಸರಿ ಯಾರು ಕುಂಭಕರ್ಣನಿಗೆ |
ಧನಪತಿ ಜ್ಯೇಷ್ಠ ತಾನೈಶ್ವರ್ಯದೊಳಗೆ |
ಘನಪರಾಕ್ರಮಿ ಶಕ್ರಜಿತು ಕಂದನೆನಗೆ || ಏನೆಂದೇ || ||೨೪||

ಈರೇಳು ಜಗದೊಡೆತನ ನಮಗುಂಟು |
ಮಾರವೈರಿಯ ಭಕ್ತಿ ಮನದಿ ಬೇರುಂಟು |
ಸೇರಿಪ್ಪ ದಿಕ್ಪಾಲರೊಳೆ ನಮ್ಮ ನಂಟು |
ಬೇರಿನ್ನು ಯೋಚಿಸಲಿದರೊಳೇನುಂಟು | ಏನೆಂದೇ || ||೨೫||

ಸೀತೆಯ ನಾ ಬಿಟ್ಟುಕೊಟ್ಟರೆ ಹಿಂದೆ |
ಪೇತುಗನೆಂದೆಂಬ ಪೆಸರಿಡು ಮುಂದೆ |
ಮಾತಿಲಿ ಬೆದರಿಸಿ ಬಿಡಿಸಲು ನಮ್ಮ |
ತಾತನಿಂದಾಗದು ಛೀ ಹೋಗೋ ತಮ್ಮ || ಏನೆಂದೇ || ||೨೬||

ಆತನಿಗುಪಕಾರವೆಂಬಡೆ ನಿನ್ನ |
ತಾತನೊ ತಮ್ಮನೊ ಮಗನೊ ಮೈದುನನೊ |
ಕೋತಿಗಳರಸನ ಕೊಂಡಾಡುವುದಕೆ |
ಸೀತೆಯ ನೆಂಟನೋ ಬಳಿಯ ದಾಯಾದಿಯೋ || ಏನೆಂದೇ || ||೨೭||

ರಾಗ ಕಾಪಿ ಅಷ್ಟತಾಳ

ನೀನೇಕೆ ಮರುಳಪ್ಪುದಣ್ಣ | ಇನ್ನು |
ಜಾನಕಿಯನು ಬಿಟ್ಟುಕೊಡುವುದೆ ಬಣ್ಣ || ಪಲ್ಲವಿ ||

ಕೊಬ್ಬಿದುನ್ಮದವೆಲ್ಲ ಬಿಡುಗು | ಕಪಿ |
ಮಾರ್ಬಲಗಳು ಬಂದು ಮಂಡೆಯ ಬಡಿಗು ||
ಪರ್ಬಿ ಪಟ್ಟಣವೆಲ್ಲ ಸುಡುಗು | ಜಗ |
ದಬ್ಬೆ ಜಾನಕಿಯಿಂದ ಸೌಭಾಗ್ಯ ಕೆಡುಗು || ನೀನೇಕೆ || ||೨೮||

ಸೀತಾದೇವಿಯ ಕರಕೊಣಕು | ಒಳ್ಳೆ |
ಜಾತಿಮಾಣಿಕ್ಯ ಮುತ್ತುಗಳ ತೆಕ್ಕೊಣಕು ||
ಈ ತಪ್ಪ ಪಾಲಿಸೆಂದೆನಕು | ರಘು |
ನಾಥಸ್ವಾಮಿಯ ಪಾದಗಳ ಕಟ್ಟಿಕೊಣಕು || ನೀನೇಕೆ || ||೨೯||

ರಾಮಚಂದ್ರಗೆ ಪೊಡಮಡುವೊ | ನಮ್ಮ |
ಸೀಮೆಯ ಒಡೆಯಂಗೆ ಕಪ್ಪವ ಕೊಡುವೊ ||
ಕಾಮುಕತನವೆಲ್ಲ ಬಿಡುವೊ | ರಾಮ |
ಸ್ವಾಮಿಯ ಮನದೊಲವಿದ್ದಂತೆ ನಡವೊ || ನೀನೇಕೆ || ||೩೦||

ರಾಗ ಘಂಟಾರವ ಝಂಪೆತಾಳ

ತಮ್ಮನ ಸ್ವರೂಪಕ್ಕೆ | ತಕ್ಕ ಮಾತಾಡಿದನು |
ಅಮ್ಮ ಕೈಕಸೆಗಾಗಿ | ಒಮ್ಮೆ ಸೈರಿಸಿದೆ || ||೩೧||

ಅಮಮ ಸಗರಾನ್ವಯನ | ಮಮಕಾರವುಳ್ಳಾತ |
ನಮಗೆ ಬುದ್ಧಿಯ ಸಾರ | ಲಿವನೆಷ್ಟರವನು || ||೩೨||

ಜೋಡಾಗಿ ಜನಿಸಿರ್ದ | ಜಾಣ್ಮೆಗಳ ಬಗೆ ಬೇರೆ |
ಹೇಡಿತನದುದಯ ಕೈ | ಗೂಡಿತನುಜನಿಗೆ || ||೩೩||

ಆ ಕಪಿಗಳುಗ್ರಭಯ | ಸೋಕಿತೀ ಪಿಸುಣನಿಗೆ |
ಈ ಕುಟಿಲತನ ಬೇಡ | ಸಾಕು ನಡೆ ಗಾಢ || ||೩೪||

ಗಂಡುಸಲ್ಲವರ ಭಯ | ಗೊಂಡೆಯಾದರೆ ನಿನ್ನ |
ಹೆಂಡತಿಯ ಕೊಟ್ಟು ಬೀ | ಳ್ಕೊಂಡು ಬಾ ಮನೆಗೆ || ||೩೫||

ನಿಷ್ಠೂರಗಳ ಮಾತ | ನೀನೊಂದನಾಡಿದರೆ |
ಪೆಟ್ಟಾಗದಿರದಿನ್ನು | ಒಡೆದಪುದು ಬೆನ್ನು || ||೩೬||

ಬಂಟತನ ಮರ್ಯಾದೆ | ಜಾಣ್ಮೆಗಳ ಬಗೆ ಬೇರೆ |
ಶುಂಠರಿಗೆ ದೊರಕುವುದೆ | ಶೂರತನದೊಸಗೆ || ||೩೭||

ಇಂದ್ರಜಿತು ನಿನ್ನ ಕಿರಿ | ತಂದೆಯಾಡಿದ ಮಾತು |
ಬಂದುದೇ ಮನಕೆ ಪೇ | ಳೆಂದು ಬೆಸಗೊಂಡ || ||೩೮||

ರಾಗ ಪಂತುವರಾಳಿ ರೂಪಕತಾಳ

ತಂದೆ ಕೇಳೈ ಪರಸತಿಯರ ವಂಚಿಸಿ |
ತಂದುದನ್ಯಾಯ ರಾಜಸಕೆ ||
ಮುಂದಿನ್ನು ಬೆದರುತ್ತ ಬಿಟ್ಟೆವಾದರೆ ನಮ್ಮ |
ನಿಂದಿಸುವರು ಲೋಕದೊಳಗೆ || ||೩೯||

ಸಿಂಧುವನುತ್ತರಿಸುವಡೆ ಕೂಡದು ಬಲ |
ಬಂದರೆ ಬರಲಿ ರಾಘವನ ||
ತಂದೆಯ ತಂದೆಗಸಾಧ್ಯ ಜಾನಕಿಯನ್ನು |
ಹಿಂದಕ್ಕೆ ಒಯ್ವುದಂತಿರಲಿ || ||೪೦||

ಹಿರಿದಾದ ವನವ ಸಂಚರಿಸುವ ಕಪಿಗಳ |
ಕರಕೊಂಡು ಬಂದು ರಾಕ್ಷಸರ ||
ಧುರದೊಳೆಚ್ಚಾಡಿ ಸೋಲಿಸುವನೆಂಬಾ ಮಾತಂ |
ತಿರಲಿ ಏ ಚಿಕ್ಕಯ್ಯನವರೆ || ||೪೧||

ಎಂದಾ ಪೌರುಷದ ಮಾತನು ಕೇಳಿ ಭುಗಿ ಭುಗಿ |
ಲೆಂದು ಕೋಪಿಸಿ ವಿಭೀಷಣನು ||
ಹಿಂದೊಂದು ಕಪಿ ನಡೆತಂದಾಗೋಡಿಸಿದಂಥ |
ಕಂದ ನೀನಲ್ಲದಿನ್ನಾರು || ||೪೨||

ಅಣ್ಣ ಕೇಳೀತಗಳೆಂದ ಮಾತಿನ ಮೇಲೆ |
ಮಣ್ಣ ಕೂಡುವ ಪಂತಿ ನಮಗೆ ||
ಹೆಣ್ಣು ಸಿಕ್ಕುವಡಲ್ಲ ಬಯಲಭ್ರಾಂತುಗಳಿಂದ |
ಉಣ್ಣದುರಿಯಬೇಡ ಬರಿದೆ || ||೪೩||

ಜನಕನ ನಗರದೊಳಾದವಮಾನವ ||
ಮನಸಿಲಿಕ್ಕದೆಹೋದೆ ಹಿಂದೆ ||
ಘನ ಕುಂಭಕುಚ ಮೂಗ ಕೊಯ್ಸಿಕೊಂಡಂಥ ಶೂ |
ರ್ಪಣಖೆ ಏನಾದಳೆಂದರಿಯ || ||೪೪||

ಅಲ್ಪದಾನವರೆ ದೂಷಣ ಖರ ತ್ರಿಶಿರರು |
ಸ್ವಲ್ಪನೆ ಮಾವ ಮಾರೀಚ ||
ಅಪ್ರಯೋಜಕನಾಗಿ ಕೆಡಬೇಡ ಸೀತೆಯ |
ನೊಪ್ಪಿಸಿಕೊಡು ಬಾ ರಾಮನಿಗೆ || ||೪೫||

ಒಟ್ಟಾದ ಕಪಿಗಳು ಮೃಗವೆಂದು ನಂಬಿ ನೀ |
ಕೆಟ್ಟೆ ನಾ ಸಾರಿ ಹೇಳಿದೆನು ||
ಕಟ್ಟಾಳುತನವಿದು ಸಮಯ ಜಾನಕಿಯನ್ನು |
ಕೊಟ್ಟು ಬಾ ರಾಮಚಂದ್ರನಿಗೆ || ||೪೬||

ಸ್ವಲ್ಪಕಾರ್ಯಕ್ಕಾಗಿ ಸುಮ್ಮನೆ ತ್ರೈಜಗ |
ದಪ್ಪ ರಾಮನೊಳೇಕೆ ಕಲಹ ||
ತಪ್ಪಾಯಿತೆಂದರೆ ತರಣಿವಂಶಜರಿಗೆ |
ಒಪ್ಪುಕೊಂಬುದು ವಂಶ ಬಿರುದು || ||೪೭||

ಪರನಾರಿಗಳುಪಿದ ಪಾತಕಿಗಳ ಭೂಮಿ |
ಹೊರದು ಎಂಬುದು ವೇದ ಸಿದ್ಧ ||
ನರಕದೊಳಿಳುಹುವರಲ್ಲಿ ಎಂಬುದನು ನೀ |
ನರಿತು ಜಾನಕಿಯನ್ನು ಕಳುಹೋ || ||೪೮||

ನಿನಗೆ ನಾಚಿಕೆಯಾದರೆನಗಾದರರುಹಯ್ಯ |
ವನದೊಳಿದ್ದವಳ ಕೊಂಡೊಯ್ದು ||
ಇನಕುಲಾಧಿಪಗಿತ್ತು ಈಗ ನಮ್ಮೊಳು ಮನ |
ಮುನಿಸಿಲ್ಲದಂತೆ ಮಾಡುವೆನು || ||೪೯||

ಭಾಮಿನಿ

ಸಾಕು ಸಾಕೀ ಸಭೆಯೊಳಗೆ ಕುಳಿ |
ತೀ ಕುಟಿಲತನವೆಂಬ ಕಪಿಗ್ರಹ
ಸೋಕಿದೀ ಚಂಡಾಲಹೇಡಿಯ ನೂಕಿರೆಂದೆನಲು ||
ನೂಕಲೇತಕೆ ಚರರು ನಾವೇ |
ನೂಕಿಕೊಂಬೆವೆನುತ್ತ ಕಂಗಳ |
ಲೌಕಿದುದಕದ ಶರಣ ಬಂದನು ಮಾತೆಯಿದ್ದಡೆಗೆ || ||೫೦||

ರಾಗ ತೋಡಿ (ಸಾಂಗತ್ಯ) ರೂಪಕತಾಳ

ಅಮ್ಮ ಕೇಳಣ್ಣನ ದೆಸೆಯಿಂದ ಖಳವಂಶ |
ನಿರ್ಮೂಲವಹ ದಿನ ಬಂತು ||
ಸುಮ್ಮನೆ ಮಧುಬಿಂದು ಕಲಹ ಬೇಡೆಂದರೆ |
ಧರ್ಮಕ್ಕೆ ಮನಸೊಡಂಬಡದು || ||೫೧||

ಸಾಕ್ಷಾತ್ ಹರಿ ರಾಮಚಂದ್ರ ಜಾನಕಿ ಮಹಾ |
ಲಕ್ಷ್ಮೀ ದೇವಿಯೆಂಬುದರಿತು ||
ರಾಕ್ಷಸಾರಿಯ ಕೂಡೆ ಕಲಹ ಬೇಡೆಂದರು |
ಪೇಕ್ಷಿಸಿ ಕಳೆದ ವಾಕ್ಯಗಳ || ||೫೨||

ನಗರವ ಸುಟ್ಟಂಥ ಮೊಗವುಳ್ಳ ಕಪಿಗಳು |
ಅಗಣಿತವಾಗಿ ಕೂಡಿಹವು ||
ಜಗದ ದೈವದಕೂಡೆ ಕಲಹ ಬೇಡೆಂದರೆ |
ಜಗಳಕ್ಕೊಡ್ಡಿಹನು ಮಾರ್ಬಲವ || ||೫೩||

ಇದಿರಾಗಿ ರಾಮಬಾಣದಲಿ ಸಾವುದರಿಂದ |
ಮೊದಲಾಗಿ ಪೋಪೆ ರಾಘವನ ||
ಪದಕಮಲವ ಸೇರಿ ಪಡೆದು ಕಾರುಣ್ಯವ |
ಬದುಕುವೆ ಪಾಲಿಸಪ್ಪಣೆಯ || ||೫೪||

ಇಂತೆಂಬ ಮಗನ ಮಾತಿಗೆ ಕೈಕಸಾದೇವಿ |
ಸಂತಾಪ ಒಡಲೊಳುಪ್ಪಿರಿದು ||
ಅಂತರಂಗದಿ ಬಂದು ದಶಕಂಠನಿದಿರಲಿ |
ನಿಂತುಕೊಂಡಬಲೆ ಪೇಳಿದಳು || ||೫೫||

ರಾಗ ಶಂಕರಾಭರಣ ತ್ರಿವುಡೆತಾಳ

ಕಂದ ನಿನಗೀ ಕುಟಿಲತನಗಳು |
ಬಂದುದೇಕೆ ಸೀತೆಯ |
ತಂದು ಕುಲಕಪಕೀರ್ತಿ ನಮ್ಮನು | ಹೊಂದಿದುದಕೆ || ||೫೬||

ಬಿಟ್ಟುಕೊಡು ಜಾನಕಿಯನೆಂದರೆ |
ಸಿಟ್ಟು ಮಾಡಿ ತಮ್ಮನ |
ಕಷ್ಟದಲಿ ಕಳುಹುವರೆ ನಾನಿ | ದ್ದಷ್ಟು ದಿನಕೆ || ||೫೭||

ಪರರ ಸತಿಯನು ಬಯಸುವಾತನೆ |
ಭಾಗ್ಯಹೀನನು ದೈವದ |
ಕರುಣೆ ತಪ್ಪದೆ ಮಾಣದನಿತರ | ಹೊರದು ಭೂಮಿ || ||೫೮||

ಬಾಹದಕೆ ಮೊದಲಾಗಿ ಸೀತೆಯ |
ಕಳುಹಿಕೊಟ್ಟು ರಾಮನ |
ಸ್ನೇಹದಲಿ ಸುಖ ಬಾಳು ತಮ್ಮನ | ಕೂಡಿಕೊಂಡು || ||೫೯||

ವಾರ್ಧಕ

ಕ್ಷಿತಿಜೆಯನು ಬಿಡಹೇಳ್ದ ಜನನಿಯಾ ನುಡಿಗೆ ಖಳ
ಖತಿಗೊಳಲು, ತನ್ನ ಪೂರ್ವದ ಮಂತ್ರಿಗಳು ಸಹಿತ
ರಥವೇರಿ ಮುಂದಪ್ಪ ಕಾರಣಂಗಳ ತಿಳಿದು ವರವಿಭೀಷಣದೇವನು ||
ರಥವಿಡಿದು ಭಾನುಮಾರ್ಗವನಡರುತಗ್ರಜನ |
ಜೊತೆಯ ಬಿಡಲಾರದಣ್ಣನ ದೂರದಿಂ ಕರೆದು
ಅತಿವಿವೇಕದ ಮಾತ ಕಡೆಗೊಂದನೆಂಬೆ ಕೋಪಿತನಾದಡಾಗಲೆಂದ || ||೬೦||